Tuesday, February 24, 2015

ಕತೆ : ಇದುವೇ ಜೀವನ‌

ಕತೆ : ಇದುವೇ ಜೀವನ‌ 

ಬೀ ಪ್ರಾಕ್ಟಿಕಲ್ ಮ್ಯಾನ್,
ನೋಡಿ ಇದಕ್ಕಿಂತ ಬೇರೆ ನಿರ್ದಾರ ತೆಗೆದುಕೊಳ್ಳುವುದು ಸಾದ್ಯವಿಲ್ಲ, ಯೋಚಿಸಿ
ಡಾ!!ಜೋಷಿ ಹೇಳುತ್ತಿರುವಾಗ , ಮಧು ಗರಬಡಿದವನಂತೆ ಕುಳಿತಿದ್ದ,
ಏನಾಯಿತು ?
ತನ್ನ ಹಾಗು ಕೀರ್ತಿಯ ಕನಸುಗಳೆಲ್ಲ ಕರಗಿ ಹೀಗೆ ವಿಕಾರವಾಗುವದೆಂಬ ನಿರೀಕ್ಷೆಯು ಅವನಿಗಿರಲಿಲ್ಲ.
ಅಪ್ಪ ಅಮ್ಮ ನೋಡಿ ತಾನು ಮೆಚ್ಚಿ ಮದುವೆಯಾದ ಪ್ರೀತಿಯ ಪತ್ನಿ ಕೀರ್ತಿ. ಮದುವೆಯಾಗಿ ಆರು ವರ್ಷಗಳ ನಂತರ ತಾನು ತಂದೆಯಾಗುತ್ತಿರುವ ಸಮಾಚಾರ ತಿಳಿದಾಗ ಕುಣಿದಾಡಿಬಿಟ್ಟಿದ್ದ. ಮದುವೆಯಾದ ಮೊದಲು ಮೂರುವರ್ಷ ಮಕ್ಕಳು ಬೇಡವೆಂದು ಮುಂದೆ ಹಾಕಿದ್ದಾಗಿತ್ತು, ನಂತರ ಮೂರು ವರ್ಷ ಮಕ್ಕಳಾಗುವುದೊ ಇಲ್ಲವೋ ಎನ್ನುವ ಆತಂಕ ಕಾಡಿತ್ತು. ಹತ್ತು ಹಲವು ಡಾಕ್ಟರ್ ಗಳನ್ನು ಬೇಟಿ ಮಾಡಿದ್ದರು ಇಬ್ಬರು. ಕಡೆಗೆ ಡಾಕ್ಟರಗಳ ಚಿಕಿತ್ಸೆಯ ಪ್ರಭಾವವೊ ಅಥವ ತನ್ನ ಅಮ್ಮ ಹಾಗು ಪತ್ನಿ ದೇವರಲ್ಲಿ ಮಾಡಿದ ಪ್ರಾರ್ಥನೆಗಳ ಪೂಜೆಗಳ ವರವೋ ಎಂಬಂತೆ ಪತ್ನಿ ಕೀರ್ತಿ ಮಗುವಿನ ತಾಯಿಯಾಗುವದಕ್ಕೆ ಅಣಿಯಾಗಿದ್ದಳು.
ತನ್ನ ಅಮ್ಮನಂತು ಅವಳನ್ನು ಎಲ್ಲಿಯೂ ಕೂಡಿಸಳು ಅಷ್ಟು ಉಪಚಾರ.
ಕೀರ್ತಿಗೆ ಒಂದಡೆ ಸಂತಸ ಮತ್ತೊಂದು ಕಡೆ ನಾಚಿಕೆ ತಾನು ತಾಯಿಯಾಗುತ್ತಿರುವದಕ್ಕೆ. 
’ತೃಪ್ತಿ’
ಬೆಂಗಳೂರಿನಲ್ಲಿಯೆ ಪ್ರಸಿದ್ದ ನರ್ಸಿಂಗ್ ಹೊಂ ಅದು
ತನ್ನ ಪತ್ನಿಗೆ ಅತ್ಯುತ್ತಮ ಡಾಕ್ಟರಗಳ ಸೇವೆ ಸಿಗಬೇಕೆಂದು, ಮೊದಲಿನಿಂದಲು ಅಲ್ಲಿಯೇ ತೋರಿಸಲು ಹೇಳಿದ್ದ ಮಧು. ಕೀರ್ತಿಗೂ ಸಹ ಭಯ ಕುತೂಹಲ, ತನ್ನ ಪತಿಯ ಮಾತಿನಂತೆ ತಪ್ಪದೆ ಪ್ರತಿ ಹದಿನೈದು ದಿನ, ತಿಂಗಳಿಗೊಮ್ಮೆ ನರ್ಸಿಂಗ್ ಹೋಮಿನಲ್ಲಿ ಬಂದು ಎಲ್ಲ ರೀತಿಯ ಚೆಕ್ ಅಪ್ ಗಳನ್ನು ಮಾಡಿಸುತ್ತಿದ್ದಳು, ಅವರು ಹೇಳಿದ ಟಾನಿಕ್ ಆಗಲಿ ಮಾತ್ರೆಗಳಾಗಲಿ ಒಂದು ಸಹ ಹೊತ್ತು ತಪ್ಪದಂತೆ ನೋಡಿಕೊಂಡಳು ಮಧುವಿನ ಅಮ್ಮ. ಪತ್ನಿಯನ್ನು ಮೊದಲ ಹೆರಿಗೆಗೆ ತವರಿಗೆ ಕಳಿಸಬೇಕಾದ್ದು ಸಂಪ್ರದಾಯ ಆದರೆ ಇಲ್ಲಿ ಸಿಗುವ ವೈದ್ಯಕೀಯ ಸೌಲಭ್ಯ ದೂರದ ಅ ಊರಿನಲ್ಲಿ ಸಿಗುವದಿಲ್ಲ ಎನ್ನುವ ಕಾರಣಕ್ಕೆ ಪತ್ನಿಯನ್ನು ಆಕೆಯ ತವರು ಶಿವಮೊಗ್ಗಕ್ಕೆ ಕಳಿಸಿರಲಿಲ್ಲ. ಬೇಕಿದ್ದರೆ ಮಗುವಿಗೆ ಮೂರು ತಿಂಗಳಾದ ನಂತರ ಹೋಗಿ ಸ್ವಲ್ಪ ಕಾಲ ಇದ್ದು ಬರಲಿ ಎಂದು ಅಮ್ಮ ಮಗ ಒಮ್ಮತದಿಂದ ತೀರ್ಮಾನಿಸಿದ್ದರು.
ಆಗಿನ್ನು ಏಳನೇ ತಿಂಗಳು ನಡೆಯುತ್ತಿದ್ದ ಕಾಲ, ಮಧು ಬೆಳಗ್ಗೆ ತನ್ನ  ಕೆಲಸಕ್ಕೆ ಅವನು ಹೊರಡುವಾಗಲೆ ಕೀರ್ತಿ ಸಪ್ಪಗಿದ್ದಳು, ಏಕೆ ಎಂದು ಕಕ್ಕುಲತೆಯಿಂದ ಕೇಳಿದ.
’ಏನಿಲ್ಲ, ಅಂತ ಸಮಸ್ಯೆ ಏನಿಲ್ಲ ರಾತ್ರಿ ಸರಿಯಾಗಿ ನಿದ್ದೆ ಬರಲಿಲ್ಲ ಅಷ್ಟ”  ಅಂದಿದ್ದಳು ಕೀರ್ತಿ.
’ಸರಿ ಈಗ ತಿಂಡಿ ತಿಂದು ಮಲಗಿಬಿಡು’ ಎಂದು ಅವಳಿಗೆ ಹೇಳಿ ಹೊರಟ ಮಧು.
ಹನ್ನೆರಡರ ಸಮಯಕ್ಕೆ  ಅವನ ಆಫೀಸಿಗೆ ಅಮ್ಮನಿಂದ ಕಾಲ್ ಬಂದಿತ್ತು , ಕೀರ್ತಿಗೆ ನೋವು ಕಾಣಿಸಿದೆಯಾದ ಕಾರಣ ನರ್ಸಿಂಗ್ ಹೋಮಿಗೆ ಬಂದಿದ್ದೇವೆ, ತಕ್ಷಣ ಬಾ ಎಂದು.
ಗಾಭರಿಯಿಂದ ಅಲ್ಲಿ ಹೋದವನು , ವಿಷಯ ಪೂರ ಅರಿವಿಗೆ ಬರುತ್ತಿದ್ದಂತೆ ಕುಸಿದು ಹೋದ. ಕೀರ್ತಿಗೆ ಎಂತದೋ ತೊಂದರೆ ಕಾಣಿಸಿಕೊಂಡಿತ್ತು, ಅವಳ ಕನಸಿನ ಗರ್ಭ ಕರಗಿಹೋಗುತ್ತಿತ್ತು. ವೈದ್ಯರು ಅಪರೇಷನ್ ಮಾಡಿ ಮಗುವನ್ನು ಹೊರತೆಗೆಯದೇ ಬೇರೆ ದಾರಿಯಿಲ್ಲ, ಹಾಗೆ ಬಿಟ್ಟರೆ ತಾಯಿ ಮಗು ಇಬ್ಬರಿಗೂ ಅಪಾಯ ಎಂದು ಸಾರಿ ಬಿಟ್ಟರು.
ಇನ್ನು ಏಳು ತಿಂಗಳು ತುಂಬುತ್ತಿದ್ದ ಗರ್ಭಿಣಿ ಕೀರ್ತಿಯ ಮನದಲ್ಲಿ ಒಂದು ನೋವಿನ ಶೂನ್ಯ. ಹೊಸ ಪರಿಸ್ಥಿಥಿಯ ಕ್ರೂರತೆಗೆ ಮಧುವಿನ ನಿರುತ್ತರ. 
ಪೂರ್ಣವಾಗಿ ಬೆಳೆಯದ ಏಳುತಿಂಗಳ ಭ್ರೂಣ , ಹೊಸಜಗತ್ತಿಗೆ ಕಾಲಿಟ್ಟಿತು, ಇಲ್ಲಿಯ ಬೆಳಕು ಗಾಳಿಗೆ ಹೊಂದಿಕೊಳ್ಳಲಾರದ ನಿಶ್ಯಕ್ತಿ, ಡಾಕ್ಟರ್ ಗಳು ಅರೆಬೆಳೆದ ಮಗುವನ್ನು ಬಿಸಿಪೆಟ್ಟಿಗೆಯಲ್ಲಿರಿಸಿದರು, ಮಗು ಪೂರ್ಣ ಬೆಳೆಯುವವರೆಗೂ, ಹೊರಗಿನ ಗಾಳಿ ತಾನಾಗೆ ಉಸಿರಾಡುವ ಶಕ್ತಿ ಬರುವವರೆಗೂ , ಇನ್ ಕ್ಯೂಬೇಟರ್ ನಲ್ಲಿಯೆ ಇರಬೇಕು, ತಾಯಿ ಬೇಕಿದ್ದರೆ ಎರಡು ದಿನ ಕಳೆದು ಮನೆಗೆ ಹೋಗಬಹುದು ಎಂದರು. 
ಮರುದಿನ ಡಾ! ಜೋಷಿ ಮಧುವನ್ನು ಕರೆದರು,
’ನೋಡಿ ಇರುವ ವಿಷಯ ನಿಮಗೆ ತಿಳಿಸಲೇ ಬೇಕಿದೆ, ಇನ್ ಕ್ಯೂಬೇಟರ್ ನಲ್ಲಿರುವ ಮಗುವನ್ನು ನೋಡಿಕೊಳ್ಳುವುದು ನಮಗೇನು ಕಷ್ಟವಲ್ಲ ಆದರೆ ಮುಂದಿನ ಅದರ ಭವಿಷ್ಯ ನಿಮ್ಮ ಗಮನಕ್ಕೆ ತರಲೇ ಬೇಕಾಗಿದೆ, ಶ್ವಾಸಕೋಶ ಹೃದಯಗಳು ನಿಶ್ಯಕ್ತ ಅದನ್ನೇನೊ ಶಕ್ತಗೊಳಿಸುವ ಪ್ರಯತ್ನಪಡಬಹುದು, ಆದರೆ ಮಗುವಿನ ಮೆದುಳಿನಲ್ಲಿ ರಕ್ತ ಸಂಚಾರದ ಕೊರತೆಯಿದೆ, ಕೆಲವು ಬಾಗಗಳಿಗೆ ರಕ್ತಸಂಚಾರ ಸರಿಯಿಲ್ಲ ಎನ್ನಿಸುತ್ತಿದೆ, ಆ ದೃಷ್ಟಿಯಲ್ಲಿ ನಾವು ನಿಶ್ಯಕ್ತರು ಏನು ಮಾಡಲಾಗದು, ಮಗು ಬೆಳೆದ ನಂತರ ಬುದ್ದಿಮಾಂದ್ಯನಾಗುವ ದಟ್ಟ  ಸಾಧ್ಯತೆಗಳಿವೆ, ಅಲ್ಲದೆ ಮಗುವಿನ ಆಯಸ್ಸು ಕೂಡ ಅತ್ಯಲ್ಪವಾಗಿರಬಹುದು. ಇಂತಹ ಮಗುವನ್ನು ಇಟ್ಟುಕೊಳ್ಳುವುದು ಕಷ್ಟ, ಇಲ್ಲಿ ನಮ್ಮ ಅಭಿಪ್ರಾಯವೇನಿಲ್ಲ, ನೀವು ನಿರ್ಧರಿಸಬೇಕು ಇಂತಹ ಮಗು ಬೇಕೆ ಎಂದು, ನಾವು ಸಾಕಷ್ಟು ಶ್ರಮಪಡುತ್ತೇವೆ ಮಗುವಿನ ಆರೋಗ್ಯಕ್ಕಾಗಿ , ನೀವು ಅದಕ್ಕೆ ತಗಲಬಹುದಾದ ಖರ್ಚು ವೆಚ್ಚಕ್ಕೂ ಸಿದ್ದರಿರಬೇಕಿರುತ್ತೆ, ಆದರೆ ಅಷ್ಟು ಶ್ರಮದ ನಂತರವೂ ಮಗುವಿನ ಮೆದುಳಿನ ಬೆಳವಣಿಗೆ ಬಗ್ಗೆ ನಾವು ಏನು ಆಶ್ವಾಸನೆ ಕೊಡಲಾರೆವೂ. ಮಗು ಬೇಕೊ ಬೇಡವೋ ಎಂದು ನಿರ್ಧರಿಸಿ ತಿಳಿಸಿ. ನಮಗೆ ಆದಷ್ಟು ಬೇಗ ತಿಳಿಸಿದರೆ ಅನುಕೂಲ’ 
ಡಾ! ಜೋಷಿಯ ದ್ವನಿ ನಿರ್ವಿಕಾರವಾಗಿತ್ತು, ಪ್ರತಿದಿನವೂ ಇಂತಹ ಕೇಸುಗಳನ್ನು ನೋಡಿರುವ ದಿವ್ಯ ಅನುಭವ ಅವರದು, ಅವರಿಗೆ ಎಲ್ಲವೂ ವ್ಯಾವಹಾರಿಕ
ಮಧುವಿನ ಮನಸ್ಸು ಕೆಲಸಮಾಡುವದನ್ನು ನಿಲ್ಲಿಸಿತ್ತು.
ಇಂತಹ ಕ್ರೂರ ಎನಿಸುವಷ್ಟಿ ನಿರ್ಧಾರ ಅವನು ತೆಗೆದುಕೊಳ್ಳಲಾರ ಅಷ್ಟೆ ಅಲ್ಲ, ಹಾಗೆಂದು ಯಾರು ಸಹ ಅವನಿಗೆ ಇಂತಹ ವಿಷಯಗಳಲ್ಲಿ ಸಲಹೆ ಸಹ ಕೊಡಲಾರರು. ತಾನು ಹುಚ್ಚು ಪ್ರೀತಿಯಿಂದ ನೀರೆರೆದು ಬೆಳೆಸಿದ ಏಳು ತಿಂಗಳು ಚಿಗುರು, ಪೂರ್ಣ ಗಿಡವಾಗುವ ಮೊದಲೆ ಮುರುಟಿ ಹೋಗುತ್ತಿರುವ ಸಂಕಟ ಅವನದು. ಅಷ್ಟೇ ಅಲ್ಲ, ಮಗು ಬೇಡ ಎಂದು ನಿರ್ಧರಿಸಿದರೆ ಏನು?.
ತಾನು ಸ್ವತಂತ್ರವಾಗಿ ಊಸಿರಾಡಲಾರದೆ. ಅಹಾರ ಸೇವಿಸದೆ , ಸೇವಿಸದ ಅಹಾರ ಜೀರ್ಣವಾಗಲು ಸಾದ್ಯವಿಲ್ಲದಂತ ಅಂಗಾಗಗಳ ಬೆಳವಣಿಗೆಯ ತನ್ನ ಕೂಸು, ಡಾಕ್ಟರ ಗಳ ಕೈಲಿ ಮರಣಹೊಂದುವುದೆ ?
ಇದೆಂತಹ ಕ್ರೂರ ವಿಧಿಯ ಅಣಕ, ಚಿಕ್ಕದೊಂದು ಇರುವೆಯನ್ನು ಕೊಲ್ಲಲು ಮರಗುವು ಮನದ ಮಧುವಿಗೆ, ತನ್ನ ಪತ್ನಿಯ ಕರುಳ ಕುಡಿ ಇರಬೇಕೊ ಬೇಡವೋ ಎಂದು ನಿರ್ಧಾರಮಾಡಲೇ ಬೇಕಾದ ಹೊಣೆಗಾರಿಕೆ.
ಬಿಳಿಚಿದ ಮುಖದೊಂದಿಗೆ ಕುಳಿತ ಮಧುವನ್ನು ಡಾ!ಜೋಷಿ ಮತ್ತೆ ಎಚ್ಚರಿಸಿದರು.
’ಮಿ! ಮಧು, ಹೆಚ್ಚು ಯೋಚಿಸಬಾರದು, ಆ ಮಗುವಿನ ಭವಿಷ್ಯ ಯೋಚಿಸಿ, ಇಂದು ನಮ್ಮ ತಪ್ಪು ನಿರ್ಧಾರದಿಂದ ಆ ಮಗು ಬದುಕಿನ ಕಡೆಯವರೆಗೂ ಹಿಂಸೆ ಅನುಭವಿಸಬೇಕೆ. ಮನೋವೈಕಲ್ಯದ ಮಗುವಿನ ತಂದೆ ನೀವಾಗುವಿರಿ, ಅಂತಹ ಮಕ್ಕಳನ್ನು ಬೆಳೆಸುವುದು ಅಷ್ಟು ಸುಲಭವಲ್ಲ, ಜೊತೆಗೆ ಪೂರ್ಣ ಅಂಗಗಳು ಬೆಳೆಯದ ಮಗು, ಪ್ರಾಕ್ಟಿಕಲ್ ಆಗಿ ಯೋಚಿಸಿ’ ಎಂದರು
ಅಂದರೆ ಇವರು ಹೇಳುತ್ತಿರುವದೇನು ?  ತನ್ನ ಮಗುವನ್ನು ಕೊಂದುಬಿಡಿ ಎಂದು ತಾನೆ , ಇದೆಂತಹುದು ತನ್ನ ದೌರ್ಭಾಗ್ಯ. ಎಂತಹ ನಿರ್ಧಾರಕ್ಕು ಬರದೆ, ಅಸಂಬದ್ದ ಪ್ರಶ್ನೆ ಒಂದನ್ನು ಕೇಳಿದ ಮಧು
’ಅಂದರೆ ನಮ್ಮ ಮಗುವನ್ನು ಯಾವಾಗ ಕೊಡುವಿರಿ?"
ಡಾಕ್ಟರ್ ಅವನನ್ನೆ ನೋಡುತ್ತ ಹೇಳಿದರು
’ಇಲ್ಲ ಮಗುವನ್ನೇನು ನಿಮಗೆ ಕೊಡುವದಿಲ್ಲ, ಅಷ್ಟಕ್ಕೂ ಅದು ಪೂರ್ಣ ಬೆಳೆಯದ ಭ್ರೂಣ, ನೀವು ಮಗು ಬೇಡವೆಂದರೆ,  ನಾವೇ  ’ಡಿಸ್ ಪೋಸ್’ ಮಾಡುವೆವು"
ಮಧುವಿಗೆ ಹೊಕ್ಕಳ ಬಳಿ ಎಂತದೋ ನೋವೊಂದು ಎದ್ದು ಕಾಡಿತು.
ನಾವೇ  ’ಡಿಸ್ ಪೋಸ್’ ಮಾಡುವೆವು"
ಎಂತಹ ಕ್ರೌರ್ಯ,
ಇನ್ನು ಬದುಕೇ ಇರುವ ಮಗುವಿನ , ದೇಹದ ಡಿಸ್ ಪೋಸ್ ಬಗ್ಗೆ ಡಾಕ್ಟರ್ ಹೇಳುತ್ತಿದ್ದಾರೆ. ಏನು ಮಾತನಾಡಲು ತೋಚಲಿಲ್ಲ, ಕಣ್ಣಲ್ಲಿ ನೀರು ತುಂಬಿದಂತಾಗಿ ಅಲ್ಲಿಂದ ಎದ್ದು ಹೊರಟ. 
ಎದುರಿಗೆ ಬಂದ ನರ್ಸ್ ಶಾಂತ ಹೊರಗೆ ಹೋಗುತ್ತಿರುವ ಮಧುವನ್ನು ಗಮನಿಸುತ್ತ, ಡಾ! ಜೋಷಿಯನ್ನು ಕೇಳಿದಳು
’ಏನಂತೆ ಸಾರ್ ’
ಮಧು ಹೊರಗೆ ಹೋದನೆಂದೆ ಭಾವಿಸಿದ ಡಾ! ಜೋಷಿ ಶಾಂತಳಿಗೆ ಹೇಳಿದ
’ಸೆಂಟಿಮೆಂಟಲ್ ಪೂಲ್ಸ್, ನಿರ್ಧಾರ ತೆಗೆದುಕೊಳ್ಳಲು ಆಗದೆ ಸುಮ್ಮನೆ ಕಷ್ಟ ಪಡುತ್ತಾರೆ’
ಹಾಗೆಂದವರು ಬಾಗಿಲ ಕಡೆ ನೋಡಿದರು, ಮಧು ಹೊರಹೋಗದೆ ಇನ್ನು ನೂಕುಬಾಗಿಲಿನ ಹತ್ತಿರವಿದ್ದ, ತಾನು ಅವನನ್ನು ಗಮನಿಸದೆ ಮಾತನಾಡಿದ್ದು ಡಾಕ್ಟರ್ ಅರಿವಿಗೆ ಬಂದಿತ್ತು, ಮಧುವಿನ ಕಣ್ಣಿನಲ್ಲಿದ್ದ ದೈನ್ಯವನ್ನು, ದುಃಖವನ್ನು ಗಮನಿಸುತ್ತ  ಡಾ! ಜೋಷಿ ತನ್ನ  ಮುಖ ಪಕ್ಕಕ್ಕೆ ತಿರುಗಿಸಿದರು. 
ನಂತರದ್ದು ಅನಿವಾರ್ಯ ನಿರ್ಧಾರ
ಡಾಕ್ಟರ್ ಗಳು ನಿರ್ಧರಿಸಿ ಮಗುವಿಗೆ ಹೊರಗಿನಿಂದ ಕೊಟ್ಟಿದ್ದ ಆಮ್ಲಜನಕದ ಪೈಪ್ ಅನ್ನು ತೆಗೆದುಬಿಟ್ಟಿದ್ದರು. ಮಗುವಿಗೆ ಸ್ವತಂತ್ರವಾಗಿ ತಾನೆ ಇನ್ನು ಉಸಿರಾಡಲಾಗದ ಸಂಕಟ. ಹಾಗೆ ಎರಡು ಮೂರು ಗಂಟೆಗಳು ಕಳೆದಿತ್ತೇನೊ, ಮಗು ತನ್ನ ಉಸಿರಾಟ ಪೂರ್ಣವಾಗಿ ನಿಲ್ಲಿಸಿತ್ತು
***********************
ಡಾ! ಜೋಷಿ ಮನೆಗೆ ಹೊರಡುವ ಗಡಿಬಿಡಿಯಲ್ಲಿದ್ದರು,
ಈ ನಡುವೆಯಂತು ಅವರಿಗೆ ಮನೆಯ ಕಡೆ ಗಮನವೇ ಕೊಡಲಾರದ ವೃತ್ತಿಯಲ್ಲಿನ್ನ ಒತ್ತಡ. ಸದಾ ರೋಗಿಗಳ ಜೊತೆಗಿನ ಒಡನಾಟ ಅವರಲ್ಲಿನ ಸಂವೇದನೆಯನ್ನೆ  ನಿಷ್ಕ್ರಿಯಗೊಳಿಸಿತ್ತು. ಯಾರಾದರು ಅಳುತ್ತಿರುವದನ್ನು  ನೋಡಿದರೆ ಅವರಿಗೆ ರೇಗುತ್ತಿತ್ತು, ಮನುಷ್ಯನ ದೇಹವೊಂದು ಯಂತ್ರವಷ್ಟೆ ಎಂದು ಅವರ ಅಭಿಮತ. ಅದನ್ನು ಕೆಲಮಟ್ಟಿಗೆ ಸರಿಪಡಿಸಲು ಸಾಧ್ಯ, ತೀರ ಹದಗೆಟ್ಟಾಗ ಡಾಕ್ಟರ್ ಗಳು ಏನು ಮಾಡಲಾಗದು ಎನ್ನುವ ಸತ್ಯದ ಅರಿವು ಅವರ ವ್ಯಕ್ತಿತ್ವವನ್ನು ಗಟ್ಟಿಗೊಳಿಸಿತ್ತು. 
ಇಂದಾದರು ಮನೆಗೆ ರಾತ್ರಿ ಎಂಟರೊಳಗೆ ತಲುಪಬೇಕು ಅಂದುಕೊಳ್ಳುವಾಗಲೆ , ಅವರ ಮೊಬೈಲ್ ಸದ್ದು ಮಾಡಿತು. 
ಮನೆಯಿಂದ ಅವರ ಪತ್ನಿ ಯಶಸ್ವಿನಿಯ ಕಾಲ್
’ರೀ ನೀವು ಎಲ್ಲಿದ್ದೀರಿ?, ಸೀದಾ ಕೊಲಂಬಿಯ ಆಸ್ಪತ್ರೆಯತ್ತ ಬನ್ನಿ’
’ಏಕೆ ಏನಾಯಿತು?’ ಡಾ!! ಜೋಷಿ ಆತಂಕದಿಂದ ಕೇಳಿದರು
’ಏನಿಲ್ಲ ರೀ, ಸಂಜೆಯಿಂದ ನಿಮ್ಮಮ್ಮನಿಗೆ ಆರೋಗ್ಯ ಹದಗೆಟ್ಟಿದೆ, ಇದ್ದಕ್ಕಿದಂತೆ ಉಸಿರಾಡಲು ಸಹ ಆಗದೆ ಕುಸಿದು ಬಿದ್ದರು,  ಹತ್ತಿರ ಅಂತ ಇಲ್ಲಿಯ ಆಸ್ಪತ್ರೆಗೆ ಬಂದೆ, ಇಲ್ಲಿ ನಿಮ್ಮ ಸ್ನೇಹಿತರು ರಾವ್ ಇದ್ದಾರಲ್ಲ , ಅವರೇ ಇದ್ದಾರೆ ಎಲ್ಲ ನೋಡುತ್ತಿದ್ದಾರೆ, ನೀವ್ನು ಆಸ್ಪತ್ರೆಗೆ ಬಂದುಬಿಡಿ’
ತನ್ನ ಗಂಡನೆ ಡಾಕ್ಟರ್ ಆಗಿರುವುದು, ಹಾಗು ಅವನ ಸ್ನೇಹಿತರ ಆಸ್ಪತ್ರೆಯಲ್ಲಿರುವುದು ಅವಳಿಗೆ ನಿಶ್ಚಿಂತೆ 
ಡಾ!! ಜೋಷಿ ಕಾರನ್ನು ಕೊಲಂಬಿಯಾ ಆಸ್ಪತ್ರೆಯತ್ತ ಓಡಿಸಿದರು.
ಡಾ!! ಗೋಪಾಲ್ ರಾವ್ ರವರನ್ನು ಬೇಟಿಮಾಡಿದಾಗ ತಿಳಿಯಿತು ತನ್ನ ತಾಯಿ ತುಂಬಾನೆ ಸೂಕ್ಷವಾದ ಪರಿಸ್ಥಿಥಿಯಲ್ಲಿದ್ದಾಳೆ. ಸಾದಾರಣ  ಶ್ವಾಸಕೋಶದ ಇನ್ ಫೆಕ್ಷನ್ ಇರಬಹುದು ಎಂದು , ಟ್ರೀಟ್ ಮೆಂಟ್ ತೆಗೆದುಕೊಳ್ಳುತ್ತಿದ್ದ ಅವಳ ಎರಡು ಶ್ವಾಸಕೋಶಗಳು ಕೆಲಸವೇ ಮಾಡದ ಸ್ಥಿತಿ ತಲುಪಿದೆ ಎಂದು ತಿಳಿದಿದ್ದು ಆಗಲೇ. ಶ್ವಾಸಕೋಶದ ಕೆಲಸ ಕೇವಲ ಶೇಕಡ ಐದು ಅಂದುಕೊಂಡರೆ ಹೊರಗಿನಿಂದ ವೆಂಟಿಲೇಟರ್ ಕೊಟ್ಟಿರುವುದು ಉಳಿದ ಶೇಕಡ ೯೫ ರ ಬಾಗವಾಗಿ ಯಂತ್ರ ಕಾರ್ಯ ನಿರ್ವಹಿಸುತ್ತ ಇತ್ತು. 
ಡಾ!!ಜೋಷಿ ತಾಯಿಯನ್ನು ನೋಡಲು ಹೋಗುವಾಗ ಆಕೆ ಸಾಕಷ್ಟು ಸುದಾರಿಸಿಕೊಂಡಿದ್ದಳು,  ಅಲ್ಲಿದ್ದ ವೆಂಟಿಲೇಟರ್ ಮುಂತಾದ ಯಂತ್ರಗಳನ್ನು ಗಮನಿಸುವಾಗಲೇ ಡಾಕ್ಟರ್ ಆದ ಅವರಿಗೆ ತಿಳಿಯುತ್ತ ಇತ್ತು, ಆಕೆ ಉಸಿರಾಡುತ್ತಿರುವುದು ಕೇವಲ ವೆಂಟಿಲೇಟರ್ ಆದಾರದ ಮೇಲೆ. ಇದರ ಮೇಲೆ ರಿಪೋರ್ಟ್ ಗಳು ಏನಿವೆಯು ನೋಡಬೇಕು ಅಂದು ಕೊಂಡರು. 
ರಾತ್ರಿ ತನ್ನ ಪತ್ನಿಯನ್ನು ಮನೆಗೆ ಗಳಿಸಿ, ತಾವೇ ಅರ್ದರಾತ್ರಿಯವರೆಗೂ ಇದ್ದರು ಡಾ!!ಜೋಷಿ.
ತಾಯಿ ನಿದ್ದೆ ಮಾಡುತ್ತಿದ್ದರು,
ಐಸಿಯೂ ಇನ್ ಚಾರ್ಚ್ಜ್ ಡಾ! ಕಿರಣ್ ಕೂಡ ಜೋಷಿಯವರಿಗೆ ಪರಿಚಿತನೆ
’ಸಾರ್ ಏಕೆ ಯೋಚನೆ ನಾನು ಪರ್ಸನಲ್ಲಾಗಿ ಗಮನವಿಡುತ್ತೇನೆ ನಿಮ್ಮ ತಾಯಿಯ ಬಗ್ಗೆ , ನೀವು ಮನೆಗೆ ಹೋಗಿ ನಾಳೆ ಬನ್ನಿ’ ಎಂದರು.
ಇನ್ನು ತಾನು ಅಲ್ಲಿದ್ದು ಮಾಡುವುದು ಏನಿಲ್ಲ. ಸರಿ ಎಂದು ಕೊಂಡು ಮನೆಗೆ ಬಂದು ಮಲಗಿದರು ಡಾ! ಜೋಷಿ. 
ತನ್ನ ನರ್ಸಿಂಗ್ ಹೋಮಿಗೆ ತಾಯಿಯನ್ನು ಶಿಫ್ಟ್ ಮಾಡುವಂತಿರಲಿಲ್ಲ, ಆಕೆಗೆ ಇರುವ ಸಮಸ್ಯೆಗೆ ಅಲ್ಲಿ ಚಿಕಿತ್ಸೆ ಕಷ್ಟ. ಎಂದು ಅವರಿಗೆ ತಿಳಿದಿತ್ತು ಹಾಗಾಗಿ ಕೊಲಂಬಿಯಾ ಆಸ್ಪತ್ರೆಯಲ್ಲಿಯೆ ಇರಲಿ ಎಂದು ನಿರ್ಧರಿಸಿದ್ದರು.  
ಮೂರನೆ ದಿನ ಮುಂಚಿತವಾಗಿ ಹೊರಟು, ಡಾ! ಗೋಪಾಲ್ ರಾವ್ ರವರನ್ನು ಬೇಟಿಮಾಡಿದರು ಡಾ! ಜೋಷಿ
’ಬನ್ನಿ ಜೋಷಿ, ಹೋಗಿ ನೋಡಿದಿರ ನಿಮ್ಮ ತಾಯಿಯವರನ್ನು ’  ಅವರ ಪ್ರಶ್ನೆ
’ಹೋಗಿದ್ದೆ ಐಸಿಯೂ ಗೆ ಆದರೆ ಯಾವುದೆ ಪಾಸಿಟೀವ್ ಡೆವಲಪ್ ಮೆಂಟ್ ಇಲ್ಲ ಅನ್ನಿಸುತ್ತಿದೆ’
ಅವರು ಅನುಮಾನಿಸುತ್ತ ಅಂದರು ಡಾ!ಜೋಷಿ,
’ಅಂದ ಹಾಗೆ ರಿಪೋರ್ಟ್ ಗಳು ಏನು ಹೇಳ್ತಿವೆ’  ಕೇಳಿದರು
’ಸಾರಿ, ಜೋಷಿ ಸರ್, ರಿಪೋರ್ಟ್  ನೋಡಿದರೆ ಏನು ಅಂತಹ ಉತ್ಸಾಹದಾಯಕವಾಗಿಲ್ಲ, ನಾನು ಅದೇ ಯೋಚಿಸುತ್ತಿರುವೆ, ಆಕೆಯ ಎರಡು ಶ್ವಾಸಕೋಶ ಹೆಚ್ಚು ಕಡಿಮೆ ಕೆಲಸ ನಿಲ್ಲಿಸಿವೆ, ಈಗಿನ ಆಕೆಯ ವಯಸ್ಸಿನಲ್ಲಿ ನಾವು ದೊಡ್ಡ ನಿರ್ಧಾರಗಳನ್ನು ಮಾಡುವಂತಿಲ್ಲ ಅನ್ನಿಸುತ್ತೆ. ಆಕೆ ಕೇವಲ ವೆಂಟಿಲೇಟರ್ ಮೇಲೆ ಬದುಕಿದ್ದಾರೆ ಅಷ್ಟೆ’ 
ಡಾ! ಜೋಷಿ ಬೆಚ್ಚಿಬಿದ್ದರು, ತಾಯಿಗೆ ಅಷ್ಟೊಂದು ಸೀರಿಯಸ್ ಆಗಬಹುದು ಎನ್ನುವ ನಿರೀಕ್ಷೆ ಅವರಿಗೆ ಇರಲಿಲ್ಲ,ಆಕೆ ವೆಂಟಿಲೇಟರ್ ಮೇಲೆ ಇದ್ದಾರೆ ಅಂದರೆ ಅದೇ ಅರ್ಥ , ಒಂದು ವೇಳೆ ವೆಂಟಿಲೇಟರ್ ತೆಗೆದರೆ ಆಕೆಯ ಜೀವ ಹೋಗುತ್ತದೆ, ಮುಂದೆ ಅವರಿಗೆ ಯೋಚಿಸಲಾಗಲಿಲ್ಲ. 
ತನ್ನ ಅಮ್ಮ ಅಂದರೆ ಅವರಿಗೆ ಸರ್ವಸ್ವ. ತಾನು ತಂದೆಯನ್ನು ಚಿಕ್ಕವಯಸಿನಲ್ಲಿಯೆ ಕಳೆದುಕೊಂಡರು, ತಾನು ಡಾಕ್ಟರ್ ಆಗಲು ತನ್ನ ಬೆನ್ನ ಹಿಂದೆ ನಿಂತು ಸಹಾಯ ಮಾಡಿದವಳು ಅಮ್ಮ.  ಆಕೆ ಉದ್ಯೋಗದಲ್ಲಿರುವವರೆಗೂ ಒಂದು ದಿನಕ್ಕು ಕುಳಿತವಳಲ್ಲ, ದಿನದ ಇಪ್ಪತ್ತನಾಲಕ್ಕು ಗಂಟೆಗಳು ಸದಾ ಕೆಲಸಮಾಡುವ ಹುರುಪು ತೋರಿದವಳೆ. ಕೆಲಸದಿಂದ ನಿವೃತ್ತಳಾದ ನಂತರ , ತನಗೆ ಮದುವೆಯಾದ ನಂತರ ನನ್ನ ಹಾಗು ಅಮ್ಮನ ನಡುವೆ ಸಂಪರ್ಕ ಕಡಿಮೆಯಾಗಿಹೋಯಿತು ಎಂದು ಅವರಿಗನ್ನಿಸಿತ್ತು. ಆದರೆ ಹೇಗೋ ಅಮ್ಮ ತನ್ನ ಮನೆಯಲ್ಲಿದ್ದಾರೆ ಎನ್ನುವ ಭಾವದಲ್ಲಿಯೆ ಇಷ್ಟು ವರ್ಷ ಕಳೆದುಹೋಗಿತ್ತು, ಈಗ ಇಂತಹ ಪರಿಸ್ಥಿತಿಯಲ್ಲಿ ಅವಳಿದ್ದಾಳೆ. ಆಕೆಗೂ ತಾನಿರುವ ಪರಿಸ್ಥಿತಿಯ ಅರಿವಿಲ್ಲ. ತನ್ನ ಪತ್ನಿಯಂತು , ನನ್ನ ಗಂಡ ಡಾಕ್ಟರ್ ಬಿಡು ಎಲ್ಲ ನೋಡಿಕೊಳ್ಳುತ್ತಾನೆ ಎನ್ನುವ ನಿರಾಳ ಭಾವದಲ್ಲಿದ್ದಾಳೆ. 
ಮೌನವಾಗಿಯೆ ಕುಳಿತ ಜೋಷಿಯನ್ನು ನೋಡುತ್ತ ಡಾ! ರಾವ್ ಮಾತು ಮುಂದುವರೆಸಿದ್ದರು
’ಬೀ ಕಾಮ್ ಡಾಕ್ಟರ್, ಏನು ಮಾಡುವುದು ಇಂತಹ ಕೇಸುಗಳನ್ನು ನಾವು ನಮ್ಮ ವೃತ್ತಿಯಲ್ಲಿ ನೋಡುತ್ತಲೇ ಇರುತ್ತೇವೆ, ಆದರೆ ಎದುರಿಸುವ ಸಂದರ್ಭ ಬಂದಲ್ಲಿ ಯಾರಿಗಾದರು ಕಷ್ಟವೆ. ನಿಮಗೆ ಬಿಡಿಸಿ ಹೇಳಿಬಿಡುವೆ, ನಿಮ್ಮ ತಾಯಿಯ ಆರೋಗ್ಯ ಚೇತರಿಕೆ ಕಷ್ಟ ಸಾದ್ಯವೇ. ಆಕೆ ಬದುಕಿರುವವರೆಗೂ ನನ್ನ ತಿಳಿವಿನಂತೆ ವೆಂಟಿಲೇಟರ್ ನಲ್ಲಿಯೇ ಬದುಕಿರಬೇಕು. ಅವರು ಸ್ವತಂತ್ರವಾಗಿ ಉಸಿರಾಡುವುದು ಕಷ್ಟವೇ. ಆಕೆಯ ಎರಡು ಶ್ವಾಸಕೋಶಗಳು ಹೆಚ್ಚು ಕಡಿಮೆ ಕೆಲಸ ನಿಲ್ಲಿಸಿವೆ. ನಿಮಗೆ ತಿಳಿಯದ್ದೇನಿದೆ, ಪ್ರತಿದಿನಾ ಕಡಿಮೆ ಅಂದರೂ ಅರವತ್ತು ಸಾವಿರದಿಂದ ಎಪ್ಪತೈದು ಸಾವಿರದವರೆಗೂ ಖರ್ಚು ಬರಬಹುದು, ಖರ್ಚಿನದೇನು ಮುಖ್ಯವಲ್ಲ ಅಂದರೂ ಆಕೆ ಎಷ್ಟು ದಿನ ಈ ರೀತಿ ಇರಲು ಸಾದ್ಯ ಹೇಳಿ. ಐಸಿಯೂ ನಲ್ಲಿ ವರ್ಷಗಟ್ಟಲೆ ಇರಲಾಗುವದಿಲ್ಲ ಅಲ್ಲವೆ , ಹಾಗಾಗಿ ನಿರ್ಧಾರ ಮಾಡಿ. ಬೇಕಿದ್ದರೆ, ನೀವು ಬೇರೆ ಡಾಕ್ಟರ್ ಗಳ ಹತ್ತಿರ ಸೆಕೆಂಡ್ ಒಪಿನಿಯನ್ ತೆಗೆದುಕೊಳ್ಳಬಹುದು, ನಿಮ್ಮ ಇಷ್ಟ’ 
ಡಾ! ಜೋಷಿ ನುಡಿದರು,
’ಛೇ ಇಲ್ಲ ಡಾಕ್ಟರ್ ನನಗೆ ನಿಮ್ಮ ಟ್ರೀಟ್ ಮೆಂಟ್ ಹಾಗು ನಿರ್ಧಾರಗಳಲ್ಲಿ ನಂಬಿಕೆ ಇದೆ, ಎರಡನೆ ಅಭಿಪ್ರಾಯವೇ ಬೇಡ ಅನ್ನಿಸುತ್ತೆ, ಹಾಗಿದ್ದರೆ ಏನು ಮಾಡಬಹುದೆಂದು ನಿಮ್ಮ ಸಲಹೆ’
ಡಾ! ಗೋಪಾಲ್ ರಾವ್ ಕೊಂಚ ಸಂಕೋಚದಲ್ಲಿಯೇ ನುಡಿದರು
’ಹಾಗಲ್ಲ, ಆಕೆಯನ್ನು ಎಷ್ಟು ದಿನ ಅಂತ ಐಸಿಯೂ ನಲ್ಲಿ ಇಟ್ಟಿರಲು ಸಾದ್ಯ, ಚಿಕಿತ್ಸೆಯ ಖರ್ಚು ಅಪಾರವಾಗುತ್ತದೆ, ಅಲ್ಲದೆ ಅದರಿಂದ ಯಾವ ಉಪಯೋಗವೂ ಇಲ್ಲ. ಬೇಕಿದ್ದರೆ ನೀವು ಒಂದು ಕೆಲಸಮಾಡಬಹುದು, ಆಕೆಯನ್ನು ನೇರ ನಿಮ್ಮ ಆಸ್ಪತ್ರೆಗೆ ಶಿಫ್ಟ್ ಮಾಡಬಹುದು, ಅಲ್ಲಿ ಆಕ್ಸಿಜನ್ ಕೊಟ್ಟಿರಬಹುದು, ಅಲ್ಲ ಇದು ಒಂದು ಸಲಹೆ ಅಷ್ಟೆ. ಸ್ವಲ್ಪ ಪ್ರಾಕ್ಟಿಕಲ್ ಆಗಿ ಯೋಚಿಸಿನೋಡಿ, ನೋ ಎಮೋಷನಲ್ ’ ಎಂದು ಆತ ಮಾತು ನಿಲ್ಲಿಸಿದರು
ಡಾ! ಜೋಷಿಗೆ ರಾವ್ ಮಾತು ಅರ್ಥವಾಗುತ್ತ ಇತ್ತು, ಅವರು ಅಸ್ಪತ್ರೆಯಿಂದ ಡಿಸ್ ಚಾರ್ಜ್ ಮಾಡಿಸಿಕೊಂಡು ಹೋಗಿ ಎಂದು ಹೇಳುತ್ತಿರುವ ಕಾರಣ ಬೇರೆ, ಇನ್ನು ತನ್ನ ಅಮ್ಮ ಎಂದಿಗೂ ಬದುಕಲಾರಳು. ಆದರೆ ವೆಂಟಿಲೇಟರ್ ಮೇಲೆ ಉಸಿರಾಡಿಕೊಂಡಿರುತ್ತಾಳೆ, ಅದು ಅವಳಿಗೆ ಹಿಂಸೆಯೋ ಅಲ್ಲವೋ ಸಹ ನಮಗೆ ತಿಳಿಯುವದಿಲ್ಲ. ಅವರು ಹೇಳುತ್ತಿರುವ ರೀತಿ ತನ್ನ ನರ್ಸಿಂಗ್ ಹೋಮಿಗೆ ತೆಗೆದುಕೊಂಡು ಹೋಗು ಅಂದರೆ, ಆಕೆ ಬಹುಶ: ಅಂಬ್ಯೂಲೆನ್ಸ್ ನಲ್ಲಿಯೇ ಪ್ರಾಣ ಹೋಗುವ ಸಾದ್ಯತೆಯೂ ಇದೆ, ವೆಂಟಿಲೇಟರ್ ಇಲ್ಲದೆ ಆಕೆ ಜಾಸ್ತಿ ಅಂದರೆ ಐದು ಹತ್ತು ನಿಮಿಶ ಇರಬಲ್ಲಳು ಅಷ್ಟೆ. ಅಂದರೆ ಡಾಕ್ಟರ್ ಹೇಳುತ್ತಿರುವುದು ಹತಾಶ ಸ್ಥಿತಿ. ಅಥವ ಮರ್ಸಿಕಿಲ್ಲಿಂಗ್ . 
ಡಾ! ರಾವ್ ಮಾತಿನಲ್ಲಿ ಹೇಳಿದ , ಬೀ ಪ್ರಾಕ್ಟಿಕಲ್ , ನೋ ಎಮೋಷನಲ್ ಎನ್ನುವ ಮಾತು ಡಾ! ಜೋಷಿಯಲ್ಲಿ ಎಂತದೋ ಹಿಂಸೆ ಮಾಡುತ್ತ ಇತ್ತು. 
ಹೌದು ಅವರಿಗೆಇದ್ದಕ್ಕಿದ್ದಂತೆ ಆದಿನ ಮಧು ತನ್ನನ್ನು ನೋಡಿದ ನೋಟ ನೆನಪಿಗೆ ಬರುತ್ತ ಇತ್ತು
ಆ ದಿನ ನಾನು ಇದೇ ಮಾತು ಹೇಳಿದ್ದೆ
’ಬೀ ಪ್ರಾಕ್ಟಿಕಲ್ ಮ್ಯಾನ್ ’ ಎಂದು ,
ಅವನಿಗೆ ಕೇಳಿಸುವಂತೆ ಹೇಳಿದ್ದೆ
’ಸೆಂಟಿಮೆಂಟಲ್ ಫೂಲ್ಸ್,  ನಿರ್ದಾರ ತೆಗೆದುಕೊಳ್ಳಲು ಆಗದೆ ಸುಮ್ಮನೆ ಕಷ್ಟ ಪಡುತ್ತಾರೆ’
ಡಾ! ಜೋಷಿ  ಈಗ ಗೊಣಗಿಕೊಳ್ಳುತ್ತಿದ್ದರು
’ಸೆಂಟಿಮೆಂಟಲ್ ಫೂಲ್ಸ್, …… ಸೆಂಟಿ ಮೆಂಟಲ್ ಫೂಲ್ಸ್ ’ 
ಈಗ ಅವರು ನಿರ್ಧಾರ ತೆಗೆದುಕೊಳ್ಳಬೇಕಾದ ಸಮಯ ಎದುರಿಗಿತ್ತು. ಹಾಗು ಮಧುವಿನ ಕಣ್ಣಿನ ನೋಟ ಅವರ ಎದೆಯಲ್ಲಿ ಬೆಂಕಿ ಹಾಕಿದಂತೆ ನೆನಪನ್ನು ಕೆದಕುತ್ತಿತ್ತು. 
ಮುಗಿಯಿತು.
 -ಪಾರ್ಥಸಾರಥಿ ಎನ್.

3 comments:

 1. Nice one ...!!!

  could you please once visit ammanahaadugalu.blogspot.com

  and share your suggestions.

  ReplyDelete
 2. ’ಸೆಂಟಿಮೆಂಟಲ್ ಫೂಲ್ಸ್, ನಿರ್ದಾರ ತೆಗೆದುಕೊಳ್ಳಲು ಆಗದೆ ಸುಮ್ಮನೆ ಕಷ್ಟ ಪಡುತ್ತಾರೆ’
  ಎನ್ನುವಾತನ ಬಾಳಿನಲ್ಲೇ ಪರಿಕ್ಷೆಯ ಕಾಲ!

  ಹಲವರ ಬಾಳಲೂ ಇಂತಹ ನಿರ್ಧರಿಸೋ ಗಳಿಗೆಯನ್ನು ನಾನೂ ಕಂಡಿದ್ದೇನೆ.

  ಮನ ಮಿಡಿಯುವ ಕಥನ.

  ReplyDelete
 3. ಹೌದೂ ಸಾರ್ ! ಹಲವರ ಬಾಳಿನಲ್ಲಿ ಅಂತಹ ಸಂದರ್ಭ ಎದುರಾಗುತ್ತೆ, ಬೇರೆಯವರಿಗೆ ಎಂತಹುದೋ ಪರಿಸ್ಥಿತಿ ಬಂದಾಗ ಟೀಕಿಸುವ ನಾವು, ನಮಗೆ ಅದೇ ಪರಿಸ್ಥಿಥಿ ಬಂದಾಗ ನಾವು ಪರಿತಪಿಸುತ್ತೇವೆ
  ವಂದನೆಗಳು ಸಾರ್

  ReplyDelete

enter your comments please