ಕಂಡವರು ಕಣ್ಣಲ್ಲಿ ಕಂಡಂತೆ
”ನಿಜಕ್ಕೂ ಪ್ರಕೃತಿ ಮನಮೋಹಕ ಹಸಿರಿನ ಗಿಡಮರಗಳು ಬಣ್ಣ ಬಣ್ಣದ ಹೂಗಳು ಮೇಲಿನ ನೀಲಿಯ ಆಕಾಶ , ಹಸಿರನ್ನು ಹೊದ್ದ ನೆಲ ಬೆಟ್ಟಗುಡ್ಡಗಳು ಎಲ್ಲವೂ ಇಲ್ಲಿ ಬರುವರನ್ನು ಮರುಳು ಮಾಡುತ್ತವೆ"
ನನಗೆ ನಾನೇ ಎಂಬಂತೆ ನುಡಿದೆ.
ನನಗೆ ನಾನೇ ಎಂಬಂತೆ ನುಡಿದೆ.
"ಹೌದು ಹಾಗೆ ಇಂತಹ ವರ್ಣಪ್ರಪಂಚವನ್ನು ನೋಡಲು ಮನುಷ್ಯನ ಕಣ್ಣುಗಳಿಗೆ ಮಾತ್ರ ಶಕ್ತಿ ಕೊಟ್ಟಿರುವ ಆ ಪ್ರಕೃತಿಗೂ ವಂದಿಸಬೇಕು"
ನಾನು ಅವನನ್ನು ವಿಚಿತ್ರವಾಗಿ ನೋಡಿದೆ ಎದುರಿಗೆ ಕುಳಿತ ವ್ಯಕ್ತಿಯನ್ನು.
"ಅಲ್ಲ ಮನುಷ್ಯನು ಮಾತ್ರ ನೋಡುವದೇನು , ಎಲ್ಲ ಪ್ರಾಣಿಗಳು ಸಹ ಪ್ರಕೃತಿಯನ್ನು ನೋಡುತ್ತಲೇ ಇರುತ್ತವೆ ಅಲ್ಲವೆ ?. ಮನುಷ್ಯ ಅದನ್ನು ಅಸ್ವಾದಿಸಬಲ್ಲ, ವರ್ಣಿಸಬಲ್ಲ ಅಷ್ಟೇ ವ್ಯೆತ್ಯಾಸ". ನನ್ನ ಮನದಲ್ಲಿ ಮೂಡಿದ ಭಾವ
ನನ್ನ ಮನಸ್ಸಿನ ಮಾತು ಅರಿತವನಂತೆ ಅವನು ಪುನಃ ನುಡಿದ.
’ಹಾಗೆ ಸುಮ್ಮನೆ ಅಂದೆ ಅಷ್ಟೆ. ಎಷ್ಟಾದರು ಮನುಷ್ಯನ ಕಣ್ಣುಗಳು ಮಾತ್ರ ಎದುರಿನ ಬಣ್ಣಗಳನ್ನು ಗುರುತಿಸಬಲ್ಲವು, ಎರಡು ಬಣ್ಣಗಳ ನಡುವಿನ ವ್ಯತ್ಯಾಸವನ್ನು ಸೂಕ್ಷ್ಮವಾಗಿ ಗ್ರಹಿಸಬಲ್ಲವು, ಅಸ್ವಾದಿಸಬಲ್ಲವು. ಆದರೆ ಪ್ರಾಣಿಗಳು ಹಾಗಿಲ್ಲ ಅವಕ್ಕೆ ಪ್ರಪಂಚ ಕೇವಲ ಕಪ್ಪು ಬಿಳುಪು ಅಷ್ಟೆ ಅಲ್ಲವೇ ಅದಕ್ಕಾಗಿ ಹಾಗೆಂದೆ"
"ಅಂದರೇನು ಬೇರೆ ಯಾವ ಪ್ರಾಣಿಯು ಬಣ್ಣಗಳನ್ನು ಗುರುತಿಸಲಾಗದೆ" ನಾನು ಕೇಳಿದೆ
’ಹೌದು ಬಹುತೇಕ ಪ್ರಾಣಿ ಪ್ರಪಂಚದ ಕಣ್ಣಿನ ದೃಷ್ಟಿಗು ಮನುಷ್ಯನ ಕಣ್ಣಿನ ದೃಷ್ಟಿಗೂ ವ್ಯೆತ್ಯಾಸವಿದೆ ಅಲ್ಲವೆ. ಉದಾಹರಣೆ ನಾಯಿ , ಹಸು ಎತ್ತುಗಳನ್ನು ನೋಡಿ ಅವಕ್ಕೆಲ್ಲ ಎಲ್ಲವು ಕಪ್ಪು ಬಿಳುಪು ಅಷ್ಟೆ ಅಲ್ಲವೆ. ಇನ್ನು ಭಾವಲಿ, ಹಲ್ಲಿಯಂತ ಜೀವಿಗಳಂತೂ ಪ್ರಪಂಚವನ್ನು ತಲೆಕೆಳಗಾಗಿ ಸಹ ನೋಡುತ್ತಿರುತ್ತವೆ’
ಎನ್ನುತ್ತ ಜೋರಾಗಿ ನಕ್ಕ.
ಎನ್ನುತ್ತ ಜೋರಾಗಿ ನಕ್ಕ.
"ನಿಜ ನಾಯಿಯಂತ ಪ್ರಾಣಿಗಳಿಗೆ ಈ ಗಿಡ ಮರ ಇತ್ಯಾದಿಗಳೆಲ್ಲವು ಬಣ್ಣವಿಲ್ಲದ ವಸ್ತುಗಳೇ ಬಿಡಿ. ಹಾಗೆನ್ನುವಾಗಲೆ ಒಂದು ಜಿಜ್ಝಾಸೆಯೂ ಮೂಡುವದಲ್ಲವೆ, ನಿಜವಾಗಿಯೂ ಈ ಬಣ್ಣ ಅನ್ನುವದೆಲ್ಲಿದೆ?. ವಿಜ್ಞಾನಿಗಳೇನೊ ಸಸ್ಯಗಳಲ್ಲಿರುವ ಕ್ಲೋರೋಫಿಲ್ ಗಳೊ ಎಂತವೋ ಸಸ್ಯಗಳಲ್ಲಿ ಹಸಿರನ್ನು ಉತ್ಪಾದಿಸುತ್ತವೆ ಎನ್ನುತ್ತಾರೆ ಆದರೆ ಅದೇ ಹಸಿರು ಬೇರೆ ಪ್ರಾಣಿಗಳಿಗೆ ಕಾಣಿಸದು" ನಾನೆಂದೆ.
"ನಿಮ್ಮ ಮಾತು ನಿಜ ನೋಡಿ, ನೋಡುವ ನೋಟ ಎನ್ನುವ ಮಾತಿನಲ್ಲಿ ಎಷ್ಟು ಸತ್ಯವಿದೆ. ಅದೇ ಸಸ್ಯ ಅದೇ ಹಸಿರುಬಣ್ಣ ಅದೇ ಸೂರ್ಯನ ಬಿಸಿಲಿನಲ್ಲಿ ಕಾಣುವ ಸತ್ಯ. ವಿಜ್ಞಾನಿಗಳು ಹೇಳುವದೇನು?. ಹಸಿರು ಬಣ್ಣ ಎಂದರೆ ಯಾವುದೇ ವಸ್ತುವು ತನ್ನ ಮೇಲೆ ಬೀಳುವ ಬೆಳಕಿನ ಎಲ್ಲ ತರಂಗ ಅಥವ ವರ್ಣಗಳನ್ನು ಹೀರಿಕೊಂಡು ಹಸಿರು ವರ್ಣವನ್ನು ಮಾತ್ರ ಪ್ರತಿಫಲಿಸುತ್ತದೆ ಎನ್ನುವರಲ್ಲವೆ. ಬಣ್ಣ ಅನ್ನುವುದು ಸೂರ್ಯನ ಬಿಸಿಲಿನದೋ, ಸಸ್ಯದ್ದೊ ಅಥವ ಅದನ್ನು ಗುರುತಿಸುವ ನಮ್ಮ ಕಣ್ಣಿನದೋ" ಅವನು ತನ್ನ ಮಾತನ್ನು ಸ್ವಲ್ಪ ನಿಲ್ಲಿಸಿ ಮತ್ತೆ ಹೇಳಿದ
’ತರ್ಕವನ್ನು ಆದರಿಸಿ ಹೇಳುವದಾದರೆ ಗಿಡದಲ್ಲಿ ಕಾಣುವ ಹಸಿರು ಎನ್ನುವ ವರ್ಣ ಇರುವುದು ನೋಡುವ ಗುರುತಿಸುವ ಕಣ್ಣಿನಲ್ಲಿ ಮಾತ್ರ , ಇಲ್ಲದಿದ್ದಲ್ಲಿ ಅದು ಕೇವಲ ಕಪ್ಪು ಬಿಳುಪು. ಅದನ್ನು ವಿಜ್ಞಾನಿಗಳು ನಂಬುತ್ತಾರೆ ಒಪ್ಪುತ್ತಾರೆ. ಆದರೂ ಅದೇ ವಿಜ್ಞಾನಿಗಳು ಕಣ್ಣಿನ ಕುರಿತಾಗಿ ಮತ್ತೊಂದು ಮಾತು ಒಪ್ಪುವದಿಲ್ಲ ಅನ್ನುವುದು ಆಶ್ಚರ್ಯ’ .
’ಯಾವ ಮಾತು ಕಣ್ಣಿನ ಕುರಿತಾಗಿ ಅದರ ನೋಟವನ್ನು ಕುರಿತಾಗಿ ನಂಬುವದಿಲ್ಲ ಎಂದು ನೀವು ಹೇಳುವುದು’ ನನಗೆ ಆಶ್ಚರ್ಯ.
’ನೋಡಿ ಕಣ್ಣಿನ ವ್ಯೆತ್ಯಾಸ ಮಾತ್ರದಿಂದ ತಾನೆ ಮನುಷ್ಯನು ಹಾಗು ನಾಯಿ ಒಂದು ವಸ್ತುವನ್ನು ವರ್ಣವನ್ನು ಭಿನ್ನವಾಗಿ ಕಾಣುವುದು, ಹಾಗಿರುವಾಗ ಕೆಲವರು ಹೇಳುತ್ತಾರಲ್ಲ ನಾಯಿಗಳಿಗೆ ದೆವ್ವ ಭೂತಗಳು ಪ್ರೇತಾತ್ಮಗಳು ಕಾಣುತ್ತವೆ ಎಂದು ಅದನ್ನು ವಿಜ್ಞಾನಿಗಳು ಹಾಗು ನಿಮ್ಮಂತಹ ಓದಿದವರು ಏಕೆ ನಂಬುವದಿಲ್ಲ’
ನನಗೆ ಮುಜುಗರ, ಹಾಗು ಗಲಿಬಿಲಿಯಾಯಿತು. ಇವರು ತಮ್ಮ ಮಾತನ್ನು ಎಲ್ಲಿಗೆ ಹೋಲಿಸುತ್ತಿದ್ದಾರೆ.
ನಾನು ಹೇಳಿದೆ
’ಏನು ನೀವು ಹೇಳುತ್ತಿರುವುದು , ಎಲ್ಲಿಂದ ಎಲ್ಲಿಗೆ ಹೋಲಿಕೆ, ಬಣ್ಣಗಳನ್ನು ನಾವು ನೋಡುವದಕ್ಕು , ದೆವ್ವಗಳನ್ನು ನಾಯಿಗಳು ಮಾತ್ರ ಕಾಣುತ್ತವೆ ಅನ್ನುವದಕ್ಕೂ ಹೇಗೆ ಹೋಲಿಸುತ್ತೀರಿ’
ಅವನು ನಗುತ್ತ ಹೇಳಿದ.
’ನೋಡಿದಿರ ನಿಮ್ಮ ಮನಸನ್ನು. ಈಗ ತಾನೆ ಒಪ್ಪಿದಿರಿ, ಮನುಷ್ಯ ಹಾಗು ನಾಯಿಗಳ ಕಣ್ಣು ಹಾಗು ಅವುಗಳಿಗಿರುವ ಶಕ್ತಿ ಬೇರೆ ಬೇರೆ ಎಂದು. ಪ್ರಕೃತಿಯಲ್ಲಿನ ವರ್ಣಗಳನ್ನು ಗುರುತಿಸುವ ಶಕ್ತಿ ಮನುಷ್ಯನಿಗೆ ಮಾತ್ರವಿದೆ ನಾಯಿಗಳಿಗಿಲ್ಲ ಎಂದು ನಂಬುವಿರಿ. ಅದಕ್ಕೆ ಕಾರಣ ಬೆಳಕಿನಲ್ಲಿಯ ಕೆಲವು ವಕ್ರತೆಗಳು ತರಂಗವ್ಯೆತ್ಯಾಸಗಳು ಮನುಷ್ಯನ ಕಣ್ಣಿಗೆ ಮಾತ್ರ ಗೋಚರಿಸುತ್ತವೆ ಹಾಗಿದ್ದಲ್ಲಿ ಮನುಷ್ಯನಿಗೆ ಗೋಚರಿಸದ ವರ್ಣಗಳು , ಆಕಾರಗಳು , ವಸ್ತುಗಳು ನಾಯಿಗೆ ಏಕೆ ಕಾಣಬಾರದು. ಮನುಷ್ಯನ ಕಣ್ಣಿಗೆ ಇಲ್ಲದ ಅಂತಹ ಗುರುತಿಸುವ ಶಕ್ತಿ ನಾಯಿಗಳಿಗೆ ಏಕೆ ಇರಬಾರದು?’
ಅವನ ತರ್ಕಕ್ಕೆ ಉತ್ತರಿಸಲು ನನ್ನ ಬಳಿ ಸರಿಯಾದ ಕಾರಣಗಳಿರಲಿಲ್ಲ. ಒಂದು ಕ್ಷಣ ಅವನು ಹೇಳುತ್ತಿರುವ ಮಾತಿನಲ್ಲಿ ಸತ್ಯ ಇರಬಹುದೆಂದು ಅನ್ನಿಸಿತು. ಹೌದು ನಾಯಿಗಳು ನಮಗೆ ಕಾಣದ ಶಕ್ತಿಗಳನ್ನು ಕಾಣುತ್ತವೆ ಅಂದಾಗ ನಮಗೆ ಏಕೆ ನಂಬಿಕೆ ಬರುವದಿಲ್ಲ. ಏಕೆಂದರೆ ನಾಯಿಗೆ ಮಾತನಾಡುವ ಶಕ್ತಿ ಇಲ್ಲ, ಅವು ಕಂಡಿದ್ದನ್ನು ಮನಷ್ಯ ಬಳಿ ವರ್ಣಿಸಲಾರವು. ನಿಜಕ್ಕೂ ಪ್ರಕೃತಿಯ ನಿಯಮಗಳು ನಿಗೂಡ ಅನ್ನಿಸಿತು.
ನನಗೆ ಈಗ ನೆನಪಿಗೆ ಬಂದಿತು. ಹಾಗು ತುಸು ನಾಚಿಕೆ ಅನ್ನಿಸಿತು.
ಇಷ್ಟು ಕಾಲ ನಾನು ಅಪರಿಚಿತ ವ್ಯಕ್ತಿ ಒಬ್ಬರೊಡನೆ ಗಹನವಾದ ವಿಷಯ ಚರ್ಚಿಸಲು ಪ್ರಾರಂಭಿಸಿದ್ದೆ. ಅವರ ಪರಿಚಯ ಸಹ ಮಾಡಿಕೊಳ್ಳದೆ ಅವರೊಡನೆ ಬಹಳ ಕಾಲದ ಗೆಳೆಯನೊಡನೆ ಚರ್ಚಿಸುವಂತೆ ಮಾತನಾಡಿದ್ದೆ. ಹಾಗಾಗಿ ನುಡಿದೆ.
’ಕ್ಷಮಿಸಿ, ನಿಮ್ಮಪರಿಚಯ ಮಾಡಿಕೊಳ್ಳಲೇ ಇಲ್ಲ ನೋಡಿ’ ಎನ್ನುತ್ತ
ನನ್ನ ಹೆಸರು, ಊರು ತಿಳಿಸಿ
’ಹೀಗೆ ನಾನು ಬೆಂಗಳೂರಿನಿಂದ ಬಂದವನು. ನೀವು ಎಲ್ಲಿಯವರು ತಿಳಿಯಲಿಲ್ಲ’ ಎಂದೆ.
ಅವನು ಒಂದು ಕ್ಷಣ ಮಾತು ನಿಲ್ಲಿಸಿದ. ನಾವು ಆಡುತ್ತಿದ್ದ ಮಾತಿನ ಓಘಕ್ಕೆ ತಡೆ ಬಂದಿದ್ದರಿಂದ ಅವನಿಗೆ ಸ್ವಲ್ಪ ಇರುಸುಮುರುಸಾಯಿತು ಅನ್ನಿಸುತ್ತೆ. ಒಂದು ಕ್ಷಣ ಬಿಟ್ಟು ನುಡಿದ
’ನಮ್ಮ ಜ್ಞಾನ ಅನುಭವ ಹಂಚಿಕೊಳ್ಳಲು ಪರಿಚಯದ ಅವಶ್ಯಕತೆ ಬರುವದಿಲ್ಲ ಅಲ್ಲವೆ? . ನೋಡಿ ನಾವಿಬ್ಬರು ಎಷ್ಟೊತ್ತು ಮಾತನಾಡಿದ ಮೇಲೆ ನಮ್ಮ ಪರಿಚಯದ ಮಾತುಗಳತ್ತ ಬರುತ್ತಿದ್ದೇವೆ. ನನ್ನ ಹೆಸರು ವೆಂಕಟಾದ್ರಿ ಎಂದು. ಇಲ್ಲಿಯೆ ಪಕ್ಕದ ಹಳ್ಳಿ ಮರಸಳ್ಳಿಯವನು. ನಾನು ನಿಮ್ಮಂತೆ ಈ ಜಾಗಕ್ಕೆ ಟೂರಿಷ್ಟ್ ಅಲ್ಲ. ಹೀಗೆ ತಿಂಗಳಿಗೆ ಒಮ್ಮೆ ಅಥವ ಎರಡು ಸಾರಿ ಎಂದು ಇಲ್ಲಿಗೆ ಬರುವವನು, ನಮಗೆ ಬೇಕಾದ ಮನೆ ಸಾಮಾನು ಇತರ ಸಾಮಾಗ್ರಿಗಳನ್ನು ಕೊಳ್ಳುವದಕ್ಕೆ. ಅಂಗಡಿಯ ಹತ್ತಿರ ಸ್ವಲ್ಪ ಕಾಯುವದಿತ್ತು, ಅದಕ್ಕೆ ಹೀಗೆ ಇಲ್ಲಿ ಬಂದು ಕುಳಿತಿದ್ದೆ ನೀವು ಸಿಕ್ಕಿದಿರಿ. ನಿಮ್ಮ ಪರಿಚಯವಾಗಿದ್ದು ಸಂತಸವಾಯಿತು ’
ಎಂದು ಕೈ ಮುಗಿದರು.
ಎಂದು ಕೈ ಮುಗಿದರು.
ಎಷ್ಟೋ ವರ್ಷಗಳ ಕೆಳಗೆ ಒಮ್ಮೆ ಎಲ್ಲರೊಡನೆ ಸಾಗರಕ್ಕೆ ಬಂದಿದ್ದು ನೆನಪಿತ್ತು. ಅದೇಕೊ ಮತ್ತೆ ಹೋಗಬೇಕೆನ್ನುವ ಇಚ್ಚೆ ಮೂಡಿತು. ಹಾಗಾಗಿ ಪತ್ನಿಯ ಜೊತೆ ಬೆಂಗಳೂರಿನಿಂದ ಸಾಗರಕ್ಕೆ ಬಂದು ಅಲ್ಲಿಯ ಊರ ಹೊರಬಾಗದಲ್ಲಿರುವ ಹೋಟೆಲ್ ಒಂದರಲ್ಲಿ ನೆಲೆಸಿದ್ದೆ.
ಏಕೊ ಸುತ್ತಮುತ್ತಲ ಸ್ಥಳ ನೋಡಲು ಹೋಗಬೇಕೆನ್ನುವ ಉತ್ಸಾಹ ಇನ್ನು ಬಂದಿರಲಿಲ್ಲ. ನಾಳೆ ಅಥವ ನಾಡಿದ್ದು ಹೋದರಾಯಿತು ಎನ್ನುವ ಮನಸ್ಸು. ಸಾಗರ ಹಾಗು ಅಲ್ಲಿಯ ಹಸಿರು ಸಿರಿ ನನಗೆ ಇಷ್ಟವಾಗಿತ್ತು. ರೂಮಿನಲ್ಲಿ ಕಾಲ ಕಳೆಯುವುದು ಬೇಕೆನಿಸಿದಾಗ ಹತ್ತಿರವೆ ಇರುವ ಕೆರೆ, ಸುತ್ತಲಿನ ಪ್ರದೇಶ ಸುತ್ತುತ್ತ ಎಲ್ಲಿಯಾದರು ಕುಳಿತು ಹಸಿರು ಗಾಳಿಯನ್ನು ಸೇವಿಸುವುದು ನನಗೆ ಇಷ್ಟವಾಗಿತ್ತು. ಹಾಗೆ ಸಂಜೆ ಬಂದು ಕುಳಿತಾಗ , ಎಲ್ಲಿಂದಲೋ ಬಂದ ಈ ವ್ಯಕ್ತಿ ಸಹ ಸ್ವಲ್ಪ ದೂರ ಅನ್ನುವಂತೆ ಕುಳಿತಿದ್ದ. ಮಾತು ಪ್ರಾರಂಭವಾದ ನಂತರ ಸ್ವಲ್ಪ ಹತ್ತಿರ ಬಂದು ಹಸಿರು ಹುಲ್ಲಿನ ಹಾಸಿನ ಮೇಲೆ ಕುಳಿತಿದ್ದ.
’ನಾನು ನಿಮ್ಮ ಹಾಗೆ ಇಲ್ಲಿ ಪದೆ ಪದೆ ಬರುವನಲ್ಲ, ಹೀಗೆ ಪತ್ನಿ ಜೊತೆ ಒಂದಿಷ್ಟು ಸುತ್ತೋಣ ಎಂದು ಬಂದೆ. ಇಲ್ಲಿಯೆ ರೂಮು ಮಾಡಿರುವೆ. ಆಕೆ ರೂಮಿನಲ್ಲಿಯೆ ಇದ್ದಾಳೆ ಅರಾಮ್ ಮಾಡುತ್ತ. ನನಗೆ ಒಂದು ಕಡೆ ಕುಳಿತಿದ್ದಾರಾಗದು ನೋಡಿ ಹೀಗೆ, ಸುತ್ತುತ್ತ ಇಲ್ಲಿ ಬಂದು ಕುಳಿತೆ. ನಿಮ್ಮಂತಹವರ ಪರಿಚಯವಾಯಿತು’ ಎಂದು ನುಡಿದೆ.
’ಒಳ್ಳೆಯದಾಯಿತು ಬಿಡಿ ಹೇಗೊ ನಾವಿಬ್ಬರು ಪರಸ್ಪರ ಬೇಟಿಯಾಗುವಂತಾಯಿತು ಅನ್ನುವುದೆ ಸಂತಸ. ನೀವು ತಪ್ಪು ತಿಳಿಯುವದಿಲ್ಲ ಎಂದರೆ ನೆನಪಿಸುವೆ , ನನ್ನ ಮಾತಿಗೆ ನೀವು ಉತ್ತರಿಸಿಲಿಲ್ಲ’ ಎಂದರು ವೆಂಕಟಾದ್ರಿ.
ನನಗೆ ನೆನಪಾಯಿತು, ಅವರ ತರ್ಕಕ್ಕೆ ನಾನು ಸರಿಯಾದ ಉತ್ತರವನ್ನು ಕೊಟ್ಟಿರಲಿಲ್ಲ. ಯೋಚಿಸುತ್ತ ನುಡಿದೆ ,
’ನಿಮ್ಮ ಮಾತು ತರ್ಕಬದ್ದವಾಗಿದೆ ಸರ್. ನಾಯಿಯ ಕಣ್ಣಿಗೆ ಕಾಣದ ವರ್ಣ ಮನುಷ್ಯನಿಗೆ ಕಾಣುತ್ತದೆ ಅನ್ನುವಾಗ ಮನುಷ್ಯನ ಕಣ್ಣಿಗೆ ಕಾಣದ ಆಕಾರ, ವರ್ಣ ಅಥವ ಮತ್ತೇನೊ ನಾಯಿಯ ಕಣ್ಣಿಗೆ ಕಾಣುವ ಸಾದ್ಯತೆ ತಳ್ಳಿಹಾಕಲಾಗುವದಿಲ್ಲ. ಆದರೆ ಮನುಷ್ಯ ಚಿಂತನಾ ಶೀಲ ನೋಡಿ. ತನ್ನ ಅನುಭವಕ್ಕೆ ಬರದ ಯಾವುದೇ ಸಂಗತಿಯನ್ನು ಅವನು ನಂಬುವದಿಲ್ಲ ಅಲ್ಲವೆ . ಹಾಗಿರುವಾಗ ಎಂದಿಗೂ ತಾನು ಕಾಣದ, ಕೇಳದ ಸಂಗತಿಗಳನ್ನು ಅಸಾಮಾನ್ಯ ಅಲೌಕಿಕ ಎನ್ನುವಾಗ ಅದನ್ನು ನಾವು ಮೂಡನಂಬಿಕೆ ಎಂದು ಬಿಡುವುದು ಸಹಜ. ಅಲ್ಲವೇ. ನಮ್ಮ ಭಾರತದಲ್ಲಂತೂ ಇಂತಹ ಘಟನೆಗಳು , ಜನಗಳು ಬೇಕಷ್ಟು ಸಿಗುತ್ತವೆ. ಯಾರೊ ಹೇಳಿದ್ದನ್ನು ನಂಬಿ ಅದಕ್ಕಿಷ್ಟು ಬಣ್ಣ ಹಚ್ಚಿ , ದೆವ್ವ ಭೂತ ಎಂದೆಲ್ಲ ಪುಕಾರು ಹಬ್ಬಿಸಿಬಿಡುತ್ತಾರೆ. ಅಷ್ಟಕ್ಕೂ ಅದನ್ನು ಕಂಡವರು ಯಾರು ಇಲ್ಲ ಅನ್ನುವುದು ಅಷ್ಟೇ ಸತ್ಯ ಅಲ್ಲವೇ"
ವೆಂಕಟಾದ್ರಿ ನಗುತ್ತ ನುಡಿದರು,
’ಭಾರತೀಯರೇ ಏಕೆ, ಎಲ್ಲ ದೇಶಗಳನ್ನು ಇಂತಹ ನಂಬಿಕೆಗಳು, ಹಾಸುಹೊಕ್ಕಾಗಿವೆ, ಅಮೇರಿಕ ದೇಶದ ಅಧ್ಯಕ್ಷರ ಮನೆಯಲ್ಲಿಯೆ ನಾಲಕ್ಕು ನಾಲಕ್ಕು ದೆವ್ವಗಳು ಮೊಕ್ಕಾಂ ಹೂಡಿವೆ ಎಂದು ನೀವು ಸಹ ಓದಿರುತ್ತೀರಿ ಅಲ್ಲವೆ. ಅವು ಅಧ್ಯಕ್ಷರ ಪತ್ನಿಯ ಕಣ್ಣಿಗೆ ಮಾತ್ರ ಗೋಚರವಂತೆ. ಹಾಗೆ ಇಂಗ್ಲೇಂಡ್ ನಂತಹ ದೇಶದಲ್ಲು ದೆವ್ವ ಭೂತಗಳು ಆತ್ಮಗಳು, ಮಂತ್ರವಾದಿಗಳು , ಹಂಟೆಡ್ ಹೌಸ್ ಇಂತಹುದೆಲ್ಲ ಸಾಮಾನ್ಯ. ಅಲ್ಲಿ ಕರಿಬೆಕ್ಕನ್ನು ಕಂಡರೆ ಇಂದಿಗೂ ದೆವ್ವವೆಂದೆ ನಂಬುವರಲ್ಲವೆ"
’ನಿಜ, ಇಂತಹ ಮೂಡ ನಂಬಿಕೆಗೆ ದೇಶಗಳ ವ್ಯೆತ್ಯಾಸವೇನಿಲ್ಲ, ಎಲ್ಲ ದೇಶದಲ್ಲಿಯೂ ಇರುವುದೆ. ಹಾಗೆ ಓದಿಕೊಂಡವರು , ವಿದ್ಯಾವಂತರು ಅಂದುಕೊಳ್ಳುವವರು ಸಹ ಬಲಿಯಾಗಿಬಿಡುವರು. ನಮ್ಮ ದೇಶದಲ್ಲಿಯಂತು ಅಂತಹ ಹಂಟೆಡ್ ಹೌಸ್ ಅಂದರೆ ದೆವ್ವದ ಮನೆಗಳನ್ನು ನಾನು ಎಲ್ಲಿಯೂ ಕಾಣಲಿಲ್ಲ’ ನಾನು ನುಡಿದೆ.
ಆತ ಆಶ್ಚರ್ಯದಿಂದ ಎಂಬಂತೆ ನುಡಿದರು
’ಏಕೆ ಭಾರತದಲ್ಲಿ ನೀವು ಎಲ್ಲಿಯೂ ದೆವ್ವದ ಮನೆಗಳನ್ನು ಕಾಣಲಿಲ್ಲವೆ?"
"ನೋಡಿರುವೆ, ಈಚೆಗೆ ಬಂದಿತ್ತಲ್ಲ ಸಿನಿಮಾ ಆಪ್ತಮಿತ್ರ ದ ಮನೆ ಅಂತಹ ಸಿನಿಮಾಗಳಲ್ಲಿ ಮಾತ್ರ ’
ನಾನು ಜೋರಾಗಿ ನಗುತ್ತ ಹೇಳಿದೆ, ಮತ್ತೆ ಕೇಳಿದೆ
ನಾನು ಜೋರಾಗಿ ನಗುತ್ತ ಹೇಳಿದೆ, ಮತ್ತೆ ಕೇಳಿದೆ
’ಅಂದ ಹಾಗೆ ನೀವು ಯಾವುದಾದರು ದೆವ್ವದ ಮನೆಗಳ ಬಗ್ಗೆ ಕೇಳಿರುವಿರಾ, ನೋಡಿದ್ದೀರಾ"
'ನೋಡದೆ ಏನು , ನಮ್ಮ ಹಳ್ಳಿಯಲ್ಲಿಯೆ ಇದೆಯಲ್ಲ , ದಿನವೂ ಅದರ ಎದುರಿಗೆ ಓಡಾಡುತ್ತಿರುತ್ತೇವೆ" ಅವರು ನುಡಿದರು
’ಏನು ನಿಮ್ಮ ಊರಿನಲ್ಲಿ ದೆವ್ವದ ಮನೆ ಎಂಬುವುದು ಇದೆಯ ಅದರಲ್ಲಿ ದೆವ್ವ ಎನ್ನುವದನ್ನು ಎಂದಾದರು ಕಂಡಿರುವಿರಾ, ನಾನು ಒಮ್ಮೆ ನೋಡಬೇಕು ಅಂತಹ ಮನೆಯನ್ನು’
ನಾನು ಉತ್ಸಾಹದಲ್ಲಿ ನುಡಿದೆ . ಅವರು ನನ್ನ ಮುಖವನ್ನೆ ನೋಡಿದರು.
’ಹೌದೇ ನೋಡುವ ಆಸಕ್ತಿ ಇದ್ದಲ್ಲಿ ಬನ್ನಿ ತೋರಿಸುವೆ, ಈಗ ನನ್ನ ಜೊತೆಯೆ ಬರಬಹುದಲ್ಲ’ ಅವರು ಅಹ್ವಾನ ನೀಡಿದರು.
ನನ್ನ ಮನ ಉತ್ಸಾಹ ತಾಳಿತಾದರು, ಸಮಯ ಸಂದರ್ಭ ಅನ್ನುವುದು ತಡೆಯುತ್ತಿತ್ತು. ಮೊದಲೆನೆಯದಾಗಿ ಅವರೊಬ್ಬರು ಅಪರಿಚಿತ ವ್ಯಕ್ತಿ. ಜೀವನದಲ್ಲಿ ಮೊದಲ ಬಾರಿಗೆ ನೋಡುತ್ತಿರುವುದು. ಎರಡನೆಯದಾಗಿ ನಾನು ಒಬ್ಬನೆ ಬಂದಿಲ್ಲ. ಹೀಗೆ ಟೂರ್ ಅಂತ ಹೇಳಿ ಪತ್ನಿಯ ಜೊತೆ ಬಂದಿರುವುದು. ಆಕೆ ಹೋಟೆಲಿನ ರೂಮಿನಲ್ಲಿ ರೆಸ್ಟ್ ಮಾಡುತ್ತಿದ್ದಾಳೆ. ಅಲ್ಲದೆ ಇವರ ಹಳ್ಳಿ ಎಲ್ಲಿದೆಯೋ ನನಗೆ ತಿಳಿದಿಲ್ಲ. ಆಗಲೆ ಸಂಜೆಗೆ ಹತ್ತಿರದ ಸಮಯ ಈಗ ಇವರ ಜೊತೆ ಹೋಗಿ ಮತ್ತೆ ಹಿಂದೆ ಬರುವುದು ಹೇಗೆ?
ಹಾಗಾಗಿ ನಾನು ಸಂಕೋಚದಿಂದ ನುಡಿದೆ.
’ಇಲ್ಲ ಈಗ ಸರಿಯಾಗದು. ಹೋಟೆಲಿನಲ್ಲಿ ನನ್ನ ಪತ್ನಿ ಇದ್ದಾಳೆ, ಆಗಲೇ ಸಂಜೆಯಾಗುತ್ತಿದೆ, ನಿಮ್ಮ ಹಳ್ಳಿಗೆ ಬಂದು ಮತ್ತೆ ವಾಪಸ್ ಬರುವುದು ಅಂದರೆ ರಾತ್ರಿಯಾಗಿಬಿಡುತ್ತೆ ಅನ್ನಿಸುತ್ತೆ. ಅಷ್ಟಕ್ಕು ಬಸ್ ಎಲ್ಲ ಸಿಗಬೇಕಲ್ಲ’
’ಅಯ್ಯೋ ಬಸ್ ಎಂತದು ಸಾರ್, ನಾನು ಕಾರಿನಲ್ಲಿ ಬಂದಿರುವೆ. ನಿಮ್ಮ ಪತ್ನಿಯನ್ನು ಜೊತೆಗೆ ಕರೆದುಕೊಳ್ಳಿ ಒಬ್ಬರನ್ನೆ ಏಕೆ ಬಿಟ್ಟುಬರುವಿರಿ. ಇನ್ನು ಸಂಜೆ ವಾಪಸ್ ಬರುವ ಚಿಂತೆಯೇ ಬೇಡ. ರಾತ್ರಿ ಅಲ್ಲಿಯೆ ನಮ್ಮ ಮನೆಯಲ್ಲಿ ತಂಗಿರಿ, ಬೆಳೆಗ್ಗೆ ಎದ್ದು ತಿಂಡಿ ಊಟ ಮುಗಿಸಿ ವಾಪಸ್ ಇಲ್ಲಿಯ ಹೋಟೆಲಿಗೆ ಬಂದರಾಯಿತು’
ಅವರು ನಿರಾಳವಾಗಿ ನುಡಿದರು.
’ಛೇ ಛೇ ಅದೆಲ್ಲ ಸರಿಹೋಗುವದಿಲ್ಲ. ನಿಮಗೆ ಹೇಗೆ ತೊಂದರೆ ಕೊಡುವುದು. ನಿಮ್ಮ ಮನೆಯಲ್ಲಿ ಯಾರೆಲ್ಲ ಇರುತ್ತಾರೆ ಅವರು ನಮ್ಮ ಬಗ್ಗೆ ಏನೆಂದು ತಿಳಿಯುವದಿಲ್ಲ. ಬೇಡ ಬಿಡಿ ಏನೊ ಸುಮ್ಮನೆ ಕುತೂಹಲಕ್ಕೆ ಹಾಗೆಂದೆ ಅಷ್ಟೆ ದೆವ್ವದ ಮನೆ ನೋಡಬೇಕು ಎಂದು’
ನಾನು ಸಂಕೋಚದಿಂದ ನುಡಿದೆ.
’ಅಯ್ಯೋ ನಿಮ್ಮದೊಳ್ಳೆ ಸಂಕೋಚವಾಯಿತಲ್ಲ. ನಿಮ್ಮ ಬೆಂಗಳೂರಿನವರಂತಲ್ಲ ಇಲ್ಲಿಯವರು, ನಮಗೆ ಯಾರಾದರು ಬಂದುಗಳು ಬರುವರು ಅಂದರೆ ಸಂತಸ. ಅಷ್ಟಕ್ಕೂ ಮನೆಯಲ್ಲಿ ಯಾರಿದ್ದಾರೆ ನಾನು ಹಾಗು ನನ್ನ ಪತ್ನಿ ಅಷ್ಟೆ. ಅವಳಿಗು ಯಾರಾದರು ಮಾತಿಗೆ ಅಂತ ಜನ ಸಿಕ್ಕಿ ತುಂಬಾ ದಿನವಾಯಿತು. ನಿಮ್ಮ ಪತ್ನಿಯೂ ಜೊತೆಗೆ ಬಂದರೆ ತುಂಬಾ ಖುಷಿ ಪಡುತ್ತಾಳೆ, ನೀವು ಇಲ್ಲ ಅನ್ನಲಾಗದು’
ಆ ಮನುಷ್ಯ ಜಿಗಣೆಯಂತೆ ಹಿಡಿದುಬಿಟ್ಟರು. ಹೇಗೆ ಅಂದರೆ ಕಡೆಗೊಮ್ಮೆ ನನ್ನ ಬಾಯಲ್ಲಿ ಆಗಲಿ ಅನ್ನಿಸಿಬಿಟ್ಟರು.
ತಕ್ಷಣ ನುಡಿದರು
’ಈಗ ನೀವೊಂದು ಕೆಲಸ ಮಾಡಿ. ಸೀದಾ ನಿಮ್ಮ ಹೋಟೆಲಿಗೆ ಹೋಗಿಬಿಡಿ. ನಾನು ಊರೊಳಗೆ ಹೋಗಿ, ಅಂಗಡಿಯಲ್ಲಿ ಸಿದ್ದಪಡಿಸಿರುವ ಕೆಲವು ಸಾಮಾಗ್ರಿಗಳು, ದಿನಸಿಗಳು ಎಲ್ಲವನ್ನು ಕಾರಿಗೆ ಹಾಕಿಕೊಂಡು ಬಂದುಬಿಡುತ್ತೇನೆ. ನಾನು ನನ್ನ ಮರಸಳ್ಳಿಗೆ ಹೋಗಲು ಹೇಗೂ ನಿಮ್ಮ ಹೋಟೆಲಿನ ಮುಂದೆಯೆ ಹೋಗಬೇಕು. ಈಗ ಸಮಯ ಐದಲ್ಲವೆ? ನೀವು ಸರಿಸುಮಾರು ಐದು ಮುಕ್ಕಾಲರ ಹೊತ್ತಿಗೆ , ನಿಮ್ಮ ಪತ್ನಿ ಜೊತೆಗೂಡಿ ಕೆಳಗೆ ಬಂದು ಹೋಟೆಲಿನ ಮುಂದೆ ರಸ್ತೆಯಲ್ಲಿ ನಿಂತಿರಿ. ನಾನು ಬಂದು ನಿಮ್ಮನ್ನು ಕರೆದೊಯ್ಯುವೆ. ನನ್ನ ಕಾರಿನ ನಂಬರ್ ನೆನಪಿಡಿ KA 51 ME5291. ಎಲ್ಲ ತೀರ್ಮಾನವಾಯಿತಲ್ಲ ಹೊರಡಿ’ ಎಂದು ಅವರೇ ತೀರ್ಮಾನಿಸಿ ಹೊರಟು ಬಿಟ್ಟರು
ಈಗ ನನಗೆ ವಿದಿಯಿಲ್ಲ ಅನ್ನುವಂತೆ ಆಯಿತು.
ನಾನು ಐದು ನಿಮಿಷದಲ್ಲಿ ಅಲ್ಲಿಂದ ಹೊರಟು ಹೋಟೆಲಿನ ರೂಮು ತಲುಪಿದೆ. ನಿದ್ದೆ ಮುಗಿಸಿ ಎದ್ದಿದ್ದ ಪತ್ನಿ ಕನ್ನಡಿಯ ಎದುರಿಗೆ ಕುಳಿತು ತಲೆ ಬಾಚುತ್ತ ಇದ್ದಳು.
’ಆಯಿತ ನಿಮ್ಮ ಸುತ್ತಾಟ, ಮದ್ಯಾನ್ಹವಾದರು ಒಂದು ಕ್ಷಣ ವಿಶ್ರಾಂತಿ ಪಡೆಯಬಾರದ ಅದೇನು ಹುಚ್ಚೋ ’ ಎಂದಳು.
ನಾನು ಇವಳಿಗೆ ಹೇಗೆ ತಿಳಿಸುವುದು.ಇನ್ನು ಅಪರಿಚಿತರು ಅಂದರೆ ಇವಳು ಏನೆಲ್ಲ ಮಾತನಾಡುವಳೊ ಎಂದು ಯೋಚಿಸುತ್ತ,
’ಇಲ್ಲವೇ , ಹೊರಗೆ ಸುಮ್ಮನೆ ಸುತ್ತಾಡಲು ಹೋಗಿದ್ದೆ. ನೋಡು ಹೋಗಿದ್ದು ಒಳ್ಳೆಯದಾಯಿತು. ಅಲ್ಲಿ ಪಾರ್ಕಿನ ಸಮೀಪ ನನ್ನ ಹಳೆಯ ಗೆಳೆಯನೊಬ್ಬ ಸಿಕ್ಕಿದ ವೆಂಕಟಾದ್ರಿ ಎಂದು. ಹೀಗೆ ದಿಡೀರ್ ಅಂತ ಸಿಕ್ಕಿದು ಅವನಿಗು ಖುಷಿ. ಈಗ ನನ್ನನ್ನು ಅವನ ಜೊತೆ ಬಾ ಅಂತಿದ್ದಾನೆ, ನೀನು ಬರಬೇಕೆಂದು ತುಂಬಾನೆ ಬಲವಂತ. ನಾನು ಒಪ್ಪಿದ್ದೇನೆ. ಇನ್ನು ಅರ್ದ ಮುಕ್ಕಾಲು ಗಂಟೆಯಲ್ಲಿ ಅವನು ಕೆಳಗೆ ಕಾರು ತರುತ್ತಾನೆ ನೀನು ಸಿದ್ದವಾಗು’ ಎಂದೆ
ಅವಳಿಗೆ ಎಂತದೋ ಅನುಮಾನ,
’ವೆಂಕಟಾದ್ರಿ ಎಂದೆ , ನಿಮ್ಮ ಸ್ನೇಹಿತನೆ ? , ಇಷ್ಟು ವರ್ಷಗಳಲ್ಲಿ ನಿಮ್ಮ ಬಾಯಲ್ಲಿ ಒಮ್ಮೆಯೂ ಅವರ ಹೆಸರು ಕೇಳಲಿಲ್ಲ , ಈಗ ಇದ್ದಕ್ಕಿದಂತೆ ಎಲ್ಲಿಂದ ಬಂದರು ?’
ಹೀಗೆ ಹಲವಾರು ಪ್ರಶ್ನೆ ಕೇಳಿದಳು. ನಾನು ಎಲ್ಲಕ್ಕು ಒಂದು ಸುಳ್ಳು ಉತ್ತರ ಕೊಡುತ್ತ, ಹೇಗೋ ಒಪ್ಪಿಸಿ ಕೆಳಗೆ ಬರುವಾಗ ಐದೂವರೆ. ಹೋಟೆಲಿನ ರಿಸೆಪ್ಷನ್ನಿನಲ್ಲಿ ರಾತ್ರಿ ನಾವಿರುವದಿಲ್ಲ ಬೆಳಗ್ಗೆ ಬರುತ್ತೇವೆ ಎಂದು ತಿಳಿಸಿ , ಹೊರಗೆ ಬಂದು ರಸ್ತೆಯಲ್ಲಿ ನಿಲ್ಲುವಂತಿಲ್ಲ, ಆಗಲೆ ರಸ್ತೆಯ ಕೊನೆಯಲ್ಲಿ ಕಾರು ಕಾಣಿಸಿತು,ಹತ್ತಿರ ಬರುವಾಗಲೆ ಗಮನಿಸಿದೆ ಅದೇ ನಂಬರ್ . ಕಾರು ನಮ್ಮ ಮುಂದೆ ನಿಂತಿತು. ಡ್ರೈವರ್ ಸೀಟಿನಲ್ಲಿ ವೆಂಕಟಾದ್ರಿ ಕುಳಿತಿದ್ದರು.
ಮುಂದಿನ ಬಾಗಿಲು ತೆರೆಯುತ್ತ
’ಹತ್ತಿ ಹತ್ತಿ ಬಹಳ ಕಾಲ ನಿಲ್ಲುವಂತಿಲ್ಲ. ಹಿಂದೆ ಬಸ್ಸು ಬಂದರೆ ಕಷ್ಟ ಎನ್ನುತ್ತ, ಹಿಂದಿನ ಬಾಗಿಲ ಲಾಕ್ ತೆಗೆಯುತ್ತ, ಬನ್ನಿ ಅಮ್ಮ ನಮಸ್ಕಾರ , ಹತ್ತಿ ’ ಎಂದು ನಮ್ಮಿಬ್ಬರನ್ನು ಹತ್ತಿಸಿಕೊಳ್ಳುತ್ತ ಕಾರ್ ಮುಂದೆ ಹೊರಟೆ ಬಿಟ್ಟಿತು.
’ಏ ಇಲ್ಲಿಂದ ಅರ್ದ ಮುಕ್ಕಾಲು ಗಂಟೆ ಅಷ್ಟೆ. ಏಳೂವರೆವಳಗೆ ಮನೆಯಲ್ಲಿರಬಹುದು. ನಿಮ್ಮ ಮನೆಯವರ ಕಾಫಿ ,ತಿಂಡಿ ಆಗಿಲ್ಲ ಅಂದರೆ ತಿಳಿಸಿ, ಯಾವುದಾದರು ಹೊಟೆಲ್ ಮುಂದೆ ನಿಲ್ಲಿಸುತ್ತೇನೆ, ಇಲ್ಲ ಸೀದಾ ಮನೆಗೆ’ ಎಂದರು.
ಅದಕ್ಕೆ ನಾನು
’ಇಲ್ಲ ಎಲ್ಲ ಆಗಿದೆ, ಇನ್ನು ಕಾಫಿ ತಿಂಡಿಯ ಮಾತೆ ಇಲ್ಲ , ಏನಿದ್ದರು ರಾತ್ರಿಯ ಊಟವೇ’ ಎಂದೆ ನಗುತ್ತ.
ಸರಿ ಕಾರು ತನ್ನ ವೇಗವನ್ನು ಪಡೆದುಕೊಂಡಿತು. ಅಕ್ಕ ಪಕ್ಕದ ಹಸಿರನ್ನು ದಾಟುತ್ತ ಕಾರು ಸ್ವಲ್ಪ ಕಾಲದಲ್ಲಿಯೆ ಮುಖ್ಯರಸ್ತೆ ಬಿಟ್ಟು, ಒಳ ರಸ್ತೆಯನ್ನು ಸೇರುತ್ತಿರುವಂತೆ ಕಾರಿನ ವೇಗ ಸ್ವಲ್ಪ ತಗ್ಗಿತು.
’ನಿಮ್ಮ ಮನೆಯಲ್ಲಿ ಯಾರಾರೆಲ್ಲ ಇದ್ದಾರೆ’ ನನ್ನ ಪತ್ನಿ ,
ಈಗ ವೆಂಕಟಾದ್ರಿಯನ್ನು ಕೇಳಿದಳು
’ಯಾರೇನಮ್ಮ, ಇರೋದು ಇಬ್ಬರು, ನಾನು ಹಾಗು ನನ್ನ ಪತ್ನಿ ಅಷ್ಟೆ. ನೀವು ಬಂದರೆ ನಾಲಕ್ಕಾಯಿತು ಅಷ್ಟೆ ’
ಅನ್ನುತ್ತ ಜೋರಾಗಿ ನಕ್ಕು.
’ನೀವು ಬರುತ್ತಿರುವುದು ನಮ್ಮವಳಿಗೆ ಒಳ್ಳೆಯ ಖುಷಿಯಾಗುತ್ತೆ ಬಿಡಿ’ ಎಂದರು.
’ಮತ್ತೆ ಮಕ್ಕಳು’ ನನ್ನಾಕೆ ಪ್ರಶ್ನಿಸಿದಳು.
ಕಾರಿನಲ್ಲಿ ದೀರ್ಘ ಮೌನ ಆವರಿಸಿತು.
’ಇಲ್ಲಮ್ಮ ಮಕ್ಕಳಿಬ್ಬರೂ ನಮ್ಮ ಜೊತೆ ಇಲ್ಲ, ಹೀಗೆ ಬೆಳೆದು ದೊಡ್ದವರಾದ ನಂತರ ಅವರು ಸ್ವತಂತ್ರರಲ್ಲವೆ, ಓದು ಎಂದು ವಿದೇಶಕ್ಕೆ ಹೋದರು, ಮದುವೆಯಾಗಿ ಅಲ್ಲಿಯೆ ನೆಲಸಿದರು, ಹಿಂದೆ ಬರಲಿಲ್ಲ, ಆದರೆ ನಿಮ್ಮಲ್ಲಿ ಒಂದು ಬೇಡಿಕೆ ಇದೆ. ನೀವು ನನ್ನ ಪತ್ನಿಯ ಎದುರಿಗೆ ಹೀಗೆ ಮಕ್ಕಳ ವಿಷಯ ಎತ್ತ ಬೇಡಿ, ಬಹಳ ಬೇಗ ಡಿಸ್ಟರ್ಬ್ ಆಗ್ತಾಳೆ. ಇದು ನನ್ನ ಬೇಡಿಕೆ’ ಎಂದ.
ನಾನು ಹಾಗು ನನ್ನ ಪತ್ನಿ ಮಾತನಾಡಲಿಲ್ಲ.
ಕಾರಿನ ಶಬ್ದ ಒಂದೇ ಸಮ ಬೇಸರ ಅನ್ನಿಸುತ್ತಿತ್ತು. ಆಗಲೆ ಹೊರಗೆ ಕತ್ತಲಾವರಿಸಿತ್ತು. ಹಾಗಿರುವಾಗ ಚಲಿಸುತ್ತಿದ್ದ ಕಾರು ನಿಂತಿತು. ಆದರೆ ಅದರ ಇಂಜಿನ್ ಬಂದ್ ಮಾಡಿಲಿಲ್ಲ ಆತ.
’ಬನ್ನಿ ಕೆಳಗೆ ಇಳಿಯೋಣ ಒಂದು ಕ್ಷಣದ ಅರ್ಜೆಂಟ್ ಕೆಲಸ’ ಎಂದರು ನಗುತ್ತ.
ನನಗೆ ಅರ್ಥವಾಯಿತು. ಪ್ರಕೃತಿಯ ಕರೆ ಆತನಿಗೆ. ಪತ್ನಿಯತ್ತ ತಿರುಗಿನೊಡಿದೆ, ಕಾರಿನ ಬೆಳಕಲ್ಲಿ ಆಕೆ ಮುಖ ಸಿಂಡರಿಸಿದಳು. ನಾನು ನಗುತ್ತ ಕೆಳಗಿಳಿದೆ.
ಕಾರಿನ ಹಿಂಬಾಗಕ್ಕೆ ಬಂದೆವು ಮರದ ಕೆಳಗೆ ನಿಂತಿರುವಂತೆ ಆತ ಸಣ್ಣ ದ್ವನಿಯಲ್ಲಿ ಹೇಳಿದ.
’ನೋಡಿ ನೀವು ಕೇಳುತ್ತ ಇದ್ದಿರಲ್ಲ ದೆವ್ವದ ಮನೆ, ಕಾಣಿಸುತ್ತಿದೆಯ ?"
ನನ್ನಗೆ ಬೆನ್ನಲ್ಲಿ ಸಣ್ಣಗೆ ಚಳಿ ಹುಟ್ಟಿತು!
ಅಲ್ಲ ಈಗ ರಸ್ತೆಯ ಪಕ್ಕ ಮೂತ್ರಕ್ಕೆ ಅಂತ ಕಾರು ನಿಲ್ಲಿಸಿ, ಇದ್ದಕ್ಕಿದ್ದಂತೆ , ದೆವ್ವದ ಮನೆ ನೋಡು ಅಂದರೆ !!
ಕತ್ತಲಲ್ಲಿಯೆ ದೃಷ್ಟಿ ಇಟ್ಟು ನೋಡಿದೆ. ರಸ್ತೆಯ ಒಳಬಾಗಕ್ಕೆ ಇದ್ದ ದೊಡ್ಡ ಮನೆ ಕೆಂಪು ಹೆಂಚಿನದು. ಮನೆಯ ಮುಂಬಾಗದಲ್ಲಿ ಕಾಂಪೋಡ್ ಇತ್ತು. ಆದರೆ ಮನೆಯ ಒಳಗೆ ಯಾವುದೇ ದೀಪವಾಗಲಿ ಯಾವುದೇ ಚಟುವಟಿಕೆಯಾಗಲಿ ಇಲ್ಲ .
ಕತ್ತಲೆ ಹೊರತುಪಡಿಸಿ ಮತ್ತೇನು ಇಲ್ಲ.
ಆದಾಗ್ಯೂ ಮನದಲ್ಲಿ , ಎದೆಯಲ್ಲಿ ಎಂತದೋ ತಳಮಳ, ಎದೆಯಲ್ಲಿ ಬಡಿತದಲ್ಲಿ ಏರಿಕೆಯಾದ ಅನುಭವ.
’ಈಗ ಒಳಗೆ ಹೋಗಿ ಬರೋಣವೆ?" ಕೇಳಿದೆ.
ನಾವಿಬ್ಬರು ಮೆತ್ತಗೆ ಮಾತನಾಡುತ್ತ ಇದ್ದುದ್ದರಿಂದ ಕಾರಿನ ಒಳಗಿದ್ದ ನನ್ನವಳಿಗೆ ಕೇಳಿಸುವ ಸಂಭವವಿರಲಿಲ್ಲ. ಅಲ್ಲದೆ ಕಾರಿನ ಇಂಜಿನ್ ಶಬ್ದ ಬೇರೆ.
’ಈಗ? , ಬೇಡ ಈಗ ಮನೆಯ ಒಳಗೆ ಬೇಡ, ನಾಳೆ ನಾವಿಬ್ಬರೆ ಬರೋಣ, ಈಗ ಜೊತೆಗೆ ನಿಮ್ಮವರು ಬೇರೆ ಇದ್ದಾರೆ , ಅಲ್ಲದೆ ಊರಿನವರೆಲ್ಲ, ಮನೆಯೋಳಗೆ ಯಾರು ಹೋಗದಂತೆ ದಿಗ್ಭಂದನ ವಿಧಿಸಿ, ಕಟ್ಟಲೆಮಾಡಿದ್ದಾರೆ, ಯಾರು ಹೋಗಬಾರದು ಎಂದು, ಇನ್ನು ಈ ಸಮಯದಲ್ಲಿ ಹೋದರೆ ಎಲ್ಲರಿಗೂ ಗೊತ್ತಾದರೆ ಊರಲ್ಲಿ ವಿರೋದ ಎದುರಿಸಬೇಕಾಗುತ್ತೆ’
ಆತ ಸಣ್ಣ ದ್ವನಿಯಲ್ಲಿ ಹೇಳಿದರು
ನನಗೂ ಅಂತಹುದೇ ಉತ್ತರ ಬೇಕಿತ್ತು!
ಪತ್ನಿ ಇಲ್ಲಿರುವಾಗ ಸಾಹಸ ಮಾಡುವ ಮನಸ್ಸು ನನಗಿರಲಿಲ್ಲ. ಸರಿ ಎನ್ನುತ್ತ, ಸ್ವಲ್ಪ ಮುಂದೆ ಹೋಗಿ ಮನೆಯನ್ನು ಕತ್ತಲೆಯ ಮುಸುಕುಬೆಳಕಿನಲ್ಲಿ ಕಣ್ಣು ತುಂಬಿಕೊಂಡೆ, ಸಾದಾರಣ ಹಳ್ಳಿಯಲ್ಲಿ ಇರುವಂತ ಮನೆ. ಆದರೆ ವೆಂಕಟಾದ್ರಿಯವರು ಹೇಳಿದ ವಿಷಯದ ಹಿನ್ನಲೆಯಲ್ಲಿ ಮನೆ ನಿಗೂಡವಾಗಿ ಕಾಣಿಸುತ್ತಿತ್ತು.
ಮತ್ತೆ ಕಾರಿನಲ್ಲಿ ಬಂದು ಕುಳಿತೆವು ಕಾರು ಮುಂದೆ ಓಡಿತು. ಅಗೋ ಇಗೋ ಅನ್ನುವದರಲ್ಲಿ ಆತನ ಮನೆ ಬಂದೆ ಬಿಟ್ಟಿತು.
ಮನೆಯ ಗೇಟಿನ ಹತ್ತಿರ ನಿಂತು ಹಾರ್ನ್ ಮಾಡಿದರು ಆತ. ಒಳಗಿನಿಂದ ಆತನ ಪತ್ನಿ ಬಂದು ಹೊರಬಾಗಿಲು ತೆರೆದು,
ಗೇಟ್ ತೆಗೆಯುತ್ತ
’ಎಷ್ಟು ಹೊತ್ತಿಗೆ ರೀ ಬರೋದು, ನಿಮಗೆ ಸಾಗರಕ್ಕೆ ಹೋದರೆ ಇಲ್ಲಿಯದು ಮರೆತೇ ಹೋಗುತ್ತೆ….. ’
ಎನ್ನುತ್ತ ಮುಂದೆ ಏನೊ ಅನ್ನಲು ಹೋದವರು, ಕಾರಿನಲ್ಲಿ ನಾವಿಬ್ಬರು ಇರುವದನ್ನು ನೋಡಿ ಮಾತು ನಿಲ್ಲಿಸಿದರು. ಕಾರು ಮನೆಯ ಕಾಂಪೋಂಡ್ ಆವರಣದಲ್ಲಿ ಪ್ರವೇಶಿಸಿತು. ಮನೆಯ ಮುಂದೆ ಕಾಂಪೋಂಡ್ ಒಳಗೆ ಸಾಕಷ್ಟು ಜಾಗವಿದ್ದು ಗಿಡ ಮರಗಳನ್ನು ಬೆಳೆಸಲಾಗಿತ್ತು. ಕತ್ತಲಿನಲ್ಲಿ ಯಾವ ಯಾವ ಗಿಡ ಎಂದು ಗುರುತಿಸುವುದು ಕಷ್ಟವೆ. ಮನೆಯ ಮುಂದೆ ರಸ್ತೆಯ ದೀಪವಿರಲಿಲ್ಲ.
ಕಾರ್ ಇಂಜಿನ್ ಆಫ್ ಮಾಡಿ ಕೆಳಗಿಳಿದ ಆತ, ನೋಡೆ ಇವರು ನನ್ನ ಹಳೆಯ ಗೆಳೆಯರು. ಕಾಲೇಜಿನಲ್ಲಿ ಜೊತೆಗೆ ಓದುತ್ತಿದ್ದವರು, ಇವರು ಅವರ ಪತ್ನಿ ಎನ್ನುತ್ತ ನಮ್ಮಿಬ್ಬರನ್ನು ಪರಿಚಯ ಮಾಡಿಸುತ್ತಿರುವಂತೆ ಆಕೆ,
’ಕಾಲೇಜಿನಲ್ಲಿಯೆ ಯಾವಾಗ? ಓದಿದ್ದು ’ ಎಂದು ಪ್ರಶ್ನಿಸಿದರು,
ನಾನು ನನ್ನ ಪತ್ನಿಗೆ ಹೇಳಿದಂತೆ ಆತನೂ ತನ್ನ ಪತ್ನಿಗೆ ನನ್ನ ಬಗ್ಗೆ ಹಳೆಯ ಗೆಳೆತನ ಎಂದು ಸುಳ್ಳು ಹೇಳುತ್ತಿರುವುದು ನನಗೆ ಆಶ್ಚರ್ಯದ ಜೊತೆ ಜೊತೆಗೆ ನಗುವನ್ನು ತರಿಸುತ್ತಿತ್ತು.
ಇನ್ನು ಆತ ಸಿಕ್ಕಿ ಹಾಕಿಕೊಳ್ಳುವ ಸಂಭವ ಜಾಸ್ತಿ, ನಾನು ಅವರು ಒಂದೇ ಕಾಲೇಜಿನಲ್ಲಿ ಓದಿರಲಿಲ್ಲ, ಆತ ಕಾಲೇಜಿನ ಹೆಸರು ಹೇಳಿದ್ದಲ್ಲಿ, ನನ್ನ ಪತ್ನಿ ಹಾಗು ಅವರ ಪತ್ನಿ ಇಬ್ಬರಿಗು ಒಟ್ಟಿಗೆ ಅನುಮಾನ ಬರುತ್ತಿತ್ತು.
’ಕಾಲೇಜು ಅಂದರೆ ಕಾಲೇಜು, ಅವರು ಕಾಲೇಜ್ ಓದಿದ್ದಾರೆ ನಾನು ಕಾಲೇಜ್ ಓದಿರುವೆ ಅಲ್ಲಿಗೆ ಕಾಲೇಜ್ ಮೇಟ್ಸ್ ಆಯಿತಲ್ಲ, ನಿನ್ನದೊಳ್ಳೆ ಪ್ರಸಂಗ ಆಯಿತಲ್ಲ ಬಂದವರನ್ನು ಬಾಗಿಲಲ್ಲಿ ನಿಲ್ಲಿಸಿ’ ಎಂದರು ಆತ ನಗುತ್ತ .
ಆಕೆ ಎಚ್ಚೆತ್ತರು,
’ಬನ್ನಿ ಒಳಗೆ ’
ಎಂದು ಕರೆಯುತ್ತ ಹೊರಟಂತೆ. ಆತ ಕಾರಿನಲ್ಲಿದ್ದ ಸಾಮಾಗ್ರಿ ಸಾಗಿಸತೊಡಗಿದರು, ನಮ್ಮ ಹತ್ತಿರ ಹೆಚ್ಚಿನ ಲಗೇಜ್ ಏನು ಇರಲಿಲ್ಲ. ನಾಳೆ ಬೆಳಗ್ಗೆ ಇಲ್ಲಿಂದ ಹಿಂದಿರುಗುವ ಇರಾದೆಯಲ್ಲಿದ್ದೆವು.
ಅದೊಂದು ಹಿಂದಿನ ಕಾಲದಲ್ಲಿ ಕಟ್ಟಿದ ಮನೆಯಂತಿತ್ತು. ನಡುವಿನಲ್ಲಿ ಇದ್ದ ಎರಡು ಚೌಕಾಕಾರದ ಮರದ ಕಂಬಗಳು ಮನೆಯ ನಡುವಿನ ಗಾಂಭೀರ್ಯವನ್ನು ಹೆಚ್ಚಿಸಿತ್ತು. ಅಲ್ಲಿಯೆ ಇದ್ದ ದಿವಾನದ ರೀತಿಯ ಆಸನದಲ್ಲಿ ನಾವು ಕುಳಿತಂತೆ. ಉಭಯ ಕುಶಲೋಪರಿ ಮಾತುಗಳಾಯಿತು. ಇಬ್ಬರು ಸ್ನೇಹಿತರಾಗಿದ್ದು, ತಮ್ಮ ಪತ್ನಿಯರಿಗೆ ಇದನ್ನು ತಿಳಿಸದ ಬಗ್ಗೆ ಇಬ್ಬರು ಪತ್ನಿಯರಿಗೂ ಸ್ವಲ್ಪ ಆಶ್ಚರ್ಯವಾಗಿತ್ತು. ಆಕೆ ರಾತ್ರಿಯ ಅಡುಗೆಗೆ ತೊಡಗಿಕೊಂಡರು. ಎಷ್ಟೇ ಬೇಡವೆಂದರು ಕೇಳದೆ ಭಾರಿ ಅಡುಗೆಯನ್ನೆ ಮಾಡಿದ್ದರು. ಎಣ್ಣೆಯಲ್ಲಿ ಕರಿದಿದ್ದ ಹಲಸಿನ ಹಪ್ಪಳ ಹಾಗು ಖಾರದ ಮೆಣಸಿನ ಕಾಯಿ ಊಟದ ರುಚಿಯನ್ನು ಹೆಚ್ಚಿಸಿತು. ಮೊಸರನ್ನ ತಿನ್ನುವ ವೇಳೆಗಾಗಲೆ ಕಣ್ಣು ಎಳೆಯುತ್ತಿತ್ತು. ನಾನು ಹಾಗು ಆತ ಮನೆಯ ಹೊರಗೆ ಬಂದು ನಿಂತೆವು. ನಾನು ಕುತೂಹಲಕ್ಕೆ ಎಂದು ಕೇಳಿದೆ.
’ಆ ಮನೆಗೆ ಯಾವಾಗ ಹೋಗೋಣ, ಅಷ್ಟಕ್ಕೂ ಪ್ರತಿ ದೆವ್ವದ ಮನೆಗೂ ಒಂದು ಕತೆ ಅಂತ ಇರುತ್ತೆ, ಆ ಮನೆಯ ಕತೆಯೇನು?"
"ಈಗ ರಾತ್ರಿ ಆ ಸುದ್ದಿ ಏಕೆ ಬಿಡಿ, ಹೇಗೂ ಬೆಳಗ್ಗೆ ಅಲ್ಲಿಗೆ ಹೋಗುವದಲ್ಲವೇ, ಆಗ ತಿಳಿಸುತ್ತೇನೆ ಆ ಮನೆಯ ಕತೆಯನ್ನ".
ಅನ್ನುತ್ತ
’ಅದಿರಲಿ ನಿಮಗೊಂದು ನೇರ ಪ್ರಶ್ನೆ ಕೇಳುತ್ತೇನೆ , ನೀವು ದೆವ್ವದ ಅಸ್ತಿತ್ವವನ್ನು ನಂಬುವಿರಾ?" ಎಂದರು
ನನಗೆ ನನ್ನೊಳಗೆ ಎಂತದೋ ಅನುಮಾನ.
’ಬಹುಶಃ ಇಲ್ಲ, ನಂಬುವದಿಲ್ಲ’ ಎಂದೆ.
ಆತನ ಮನದಲ್ಲಿ ನಗು
’ಹೋಗಲಿ ಬಿಡಿ , ದೇವರ ಇರುವನ್ನು ನಂಬುವಿರೋ"
ಈಗ ಸ್ವಲ್ಪ ಚಿಂತಿಸಿ,
’ನಂಬುತ್ತೇನೆ ’ ಎಂದೆ.
’ದೇವರನ್ನು ನಂಬುವಿರಿ, ದೆವ್ವವನ್ನು ನಂಬುವದಿಲ್ಲ ಎನ್ನುವಿರಿ, ಎರಡು ಕಣ್ಣಿಗೆ ಕಾಣದ ವಿಷಯಗಳೆ ಅಲ್ಲವೆ?"
ಎಂದರು ನಗುತ್ತ.
’ಹಾಗಲ್ಲ , ದೇವರನ್ನು ನಂಬಲು ನನಗೆ ನನ್ನದೆ ಆದ ಕೆಲವು ತರ್ಕಗಳಿವೆ, ವಿಶಾಲ ವಿಶ್ವವನ್ನು ನೋಡಿ, ಕೋಟಿ ಕೋಟಿ ನಕ್ಷತ್ರಗಳು, ಎರಡು ನಕ್ಷತ್ರಗಳ ನಡುವೆ ಅಗಾದ ಅಂತರ, ವಿಶ್ವದ ಒಂದು ಕೊನೆಯಿಂದ ಮತ್ತೊಂದು ಕೊನೆಗೆ ಇರುವ ಅಳತೆ ಯಾರು ಅರಿಯರು. ಇಂತಹ ವಿಶ್ವದ ಉಗಮ ಯಾವ ಕಾರಣವು ಇಲ್ಲದೆ, ಯಾರು ಕಾರಣರಿಲ್ಲದೆ ತಾನಾಗಿಯೆ ಆಯಿತು ಎಂದು ಹೇಗೆ ನಂಬುವುದು.
ಇನ್ನು ನಮ್ಮ ದೇಹಕ್ಕೆ ಬನ್ನಿ, ನಡೆಯುವ, ಕೆಲಸಕ್ಕೆ ಅನುಕೂಲಕರವಾದ ಕೈ ಕಾಲುಗಳು, ನೋಡಲು ಕಣ್ಣುಗಳು, ದ್ವನಿಯನ್ನು ಕೇಳಲು ಕಿವಿ, ಮಾತನಾಡಲು ನಾಲಿಗೆ. ಹುಟ್ಟಿನಿಂದ ಸಾಯುವವರೆಗೂ ನಿರಂತರವಾಗಿ ರಕ್ತವನ್ನು ಪಂಪ್ ಮಾಡುವ ಹೃದಯ. ಉಸಿರಾಟದ ವ್ಯವಸ್ಥೆ. ಇಷ್ಟೆಲ್ಲ ವ್ಯವಸ್ಥೆ ಸುಗಮವಾಗಿ ನಡೆಯಲು ಬೇಕಾದ ಶಕ್ತಿಯನ್ನು ತಾನಾಗಿಯೆ ಉತ್ಪಾದಿಸಿಕೊಳ್ಳಲು ಇರುವ ಜೀರ್ಣಾಂಗದ ವ್ಯವಸ್ಥೆ. ಈ ಎಲ್ಲ ವ್ಯವಸ್ಥೆಯ ಮೇಲ್ವಿಚಾರಣೆ ಹಾಗು ವಿಶ್ಲೇಷಣೆ, ಚಿಂತನೆಯಂತ ಕೆಲಸಕ್ಕಾಗಿ ಮೆದುಳು. ಇಂತಹ ಅದ್ಭುತವಾದ ವ್ಯವಸ್ಥೆಯೊಂದು ತನಗೆ ತಾನೆ ರೂಪಗೊಂಡಿತು ಎಂದು ಹೇಗೆ ಭಾವಿಸುವುದು ಇಂತಹ ಕಾರಣಗಳಿಗಾಗಿ ದೇವರ ಇರುವನ್ನು ನಂಬುತ್ತೇನೆ ’ ಎಂದು ಮಾತು ನಿಲ್ಲಿಸಿದೆ.
ಸ್ವಲ್ಪ ಕಾಲದ ಮೌನ , ನಂತರ ನಾನೆ ಪುನಃ ಹೇಳಿದೆ
’ಹಾಗೆ ನೋಡಿದರೆ ದೆವ್ವದ ಇರುವಿನ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ, ಆದರೆ ಅದರ ಅಸ್ತಿತ್ವದ ಬಗ್ಗೆ ಎಂತಹ ಸಾಕ್ಷಿಯೂ ಇಲ್ಲ. ಹಾಗೆ ದೆವ್ವದ ಅಸ್ತಿತ್ವದ ಅಗತ್ಯವೇ ಇಲ್ಲ. ಏತಕ್ಕಾಗಿ ಪ್ರಕೃತಿಯಲ್ಲಿ ದೆವ್ವದ ಅಗತ್ಯವಿದೆ?" ಎಂದೆ
ಅದಕ್ಕೆ ವೆಂಕಟಾದ್ರಿಯವರು
’ದೆವ್ವದ ಅಗತ್ಯವೇ ಇಲ್ಲವೆ ? ಹೇಗೆ ಹೇಳುವಿರಿ, ಪ್ರಕೃತಿಯಲ್ಲಿ ಎಲ್ಲವು ಅಗತ್ಯವಾಗಿರುವುದೇ ಇಲ್ಲ ಅಲ್ಲವೆ. ಕಚ್ಚುವ ಇರುವೆ ಗೊದ್ದಗಳು, ಹತ್ತು ಹಲವು ಪ್ರಾಣಿಗಳು. ಮನುಷ್ಯನಿಗೆ ಅಥವ ಪ್ರಾಣಿಗಳಿಗೆ ತೊಂದರೆ ಕೊಡುವ ಬ್ಯಾಕ್ಟೀರಿಯ ಅಥವ ವೈರಸ್ ಇಂತಹುಗಳೆಲ್ಲದ ಅಗತ್ಯವಾದರು ಏನಿದೆ. ಸಮುದ್ರದಲ್ಲಿ ಸಹ ನಾವು ಉಹಿಸಿಕೊಳ್ಳಲು ಆಗದ ಜೀವಿಗಳಿವೆ ಇವುಗಳೆಲ್ಲದರ ಸೃಷ್ಟಿ ಪ್ರಕೃತಿಯ ಅಗತ್ಯಕ್ಕೆ ಅನುಗುಣವಾಗಿಯೆ ಆಗಿದೆಯೇನು? ಹೋಗಲಿ ಸೃಷ್ಟಿಯಲ್ಲಿ ಮನುಷ್ಯನ ಅಗತ್ಯವಾದರು ಏನು? ಹಾಗಿರುವಾಗ ದೆವ್ವವು ಪ್ರಕೃತಿಯಲ್ಲಿ ಅಗತ್ಯವಿಲ್ಲದೆ ಇರುವಾಗಲು ಇರುವ ಸಾದ್ಯತೆ ಇದೆ ಅಲ್ಲವೆ ?’ ಎಂದರು
ನಾನು ನನ್ನ ಮಾತನ್ನು ಮುಂದುವರೆಸಿದ್ದೆ, ಹೀಗೆ ಉಳಿದಂತೆ ಏನೊ ಮಾತುಕತೆಗಳು ನಡೆದವು. ಸಾಕಷ್ಟು ಹೊತ್ತಾಯಿತು.
ನಂತರ ನನ್ನನ್ನು ಹಾಗು ಪತ್ನಿಯನ್ನು ಒಂದು ರೂಮಿನ ಒಳಗೆ ಕರೆದೋಯ್ದು,
’ನೋಡಿ ಈ ರೂಮಿನಲ್ಲಿ ಸ್ವಸ್ಥವಾಗಿ ರಾತ್ರಿ ಮಲಗಿಬಿಡಿ, ಇಲ್ಲಿ ನಿಮ್ಮ ಊರಿನಂತೆ ಯಾವುದೆ ಗಲಾಟೆಗಳು ಇರಲ್ಲ, ಹೊರಗೆ ತುಂಬಾ ನಿಶ್ಯಬ್ದವಾಗಿರುತ್ತೆ. ಮತ್ತೆ ಎಲ್ಲ ಬೆಳಗ್ಗೆ ನೋಡೋಣ.’ಎನ್ನುತ್ತ ಬಾಗಿಲನ್ನು ಮುಂದು ಬಿಟ್ಟು ಆತ ಹೊರಟರು.
ಅವರು ಹೇಳಿದಂತೆ ಹೊರಗಿನ ಪ್ರಪಂಚ ತೀರ ನಿಶ್ಯಭ್ದವಾಗಿತ್ತು. ನಿದ್ದೆ ಬರುವುದು ಕಷ್ಟ ಎನ್ನುವಂತೆ. ಹೊರಗಿನ ಪ್ರಪಂಚಕ್ಕೂ ನಮಗೂ ಯಾವುದೇ ಸಂಬಂಧವೇ ಇರದಂತ ನಿಶ್ಯಬ್ದ. ಆಗೊಮ್ಮೆ ಈಗೊಮ್ಮೆ ಹೊರಗೆ ವೆಂಕಟಾದ್ರಿಯವರು ತಮ್ಮ ಪತ್ನಿ ಜೊತೆ ಮಾತನಾಡುತ್ತಿದ್ದ ಅಸ್ವಷ್ಟ ದ್ವನಿಯ ಜೊತೆಗೆ ನಿದ್ದೆ ಹತ್ತಿತು.
..
ಎಂತಹ ಸುಖವಾದ ನಿದ್ದೆ. ಬಹಳ ವರ್ಷಗಳೆ ಕಳೆದಿತ್ತೇನೊ ಇಂತಹ ನಿದ್ದೆ ಮಾಡಿ. ಎಚ್ಚರವಾದಾಗ ಸೂರ್ಯನ ಕಿರಣಗಳು ಮುಖವನ್ನು ತಾಕುತ್ತಿದ್ದವು. ಎದ್ದು ಕುಳಿತು ಎಂದಿನಂತೆ ಕಣ್ಣು ಮುಚ್ಚಿ ಕೈಗಳನ್ನು ಮುಖಕ್ಕೆ ಹಿಡಿದು
’ಕರಾಗ್ರೆ ವಸತೇ ಲಕ್ಷ್ಮೀ....’
ಎಲ್ಲ ಹೇಳಿ , ಕೈತೆಗೆದೆ.
ಒಂದು ಕ್ಷಣ ಏನು ಅರ್ಥವಾಗಲಿಲ್ಲ!
ಅಷ್ಟಕ್ಕೂ ನಾನಿರುವಾದದರು ಎಲ್ಲಿ ?
ಸುತ್ತಲೂ ನೋಡಿದೆ. ಬೆಳೆದುನಿಂತ ಗಿಡಗಂಟೆಗಳು. ಮುಳ್ಳಿನ ಗಿಡಗಳ ಜಾಗ. ಕಣ್ಣಿಗೆ ಕಾಣುವಂತೆ ಒಂದು ದೊಡ್ಡ ಹುತ್ತವಿತ್ತು. ಸಮೀಪದಲ್ಲಿ ಮೋಟು ಗೋಡೆಯ ಮೇಲೆ ಕಾಗೆಯೊಂದು ಕುಳಿತು ’ಕಾ ಕಾ’ ಎಂದು ನಮ್ಮನ್ನು ಎಚ್ಚರಿಸುತ್ತಿತ್ತು. ಅಷ್ಟಾಗಿ ಅಲ್ಲಿ ಮನೆಯೆ ಇರಲಿಲ್ಲ.
ನಾವು ರಾತ್ರಿ ಮಲಗಿದ್ದು ವೆಂಕಟಾದ್ರಿಯವರ ಮನೆಯಲ್ಲಿ ಅಲ್ಲವೆ?,
ಈಗ ಇದೆಲ್ಲಿ ಬಂದಿರುವೆ. ರಾತ್ರಿ ಅವರ ಮನೆಯಿಂದ ಇಲ್ಲಿಗೆ ಹೇಗೆ ಬಂದೆ?. ನನ್ನ ಜೊತೆಯಲ್ಲಿ ಪತ್ನಿ ಇದ್ದಳಲ್ಲವೆ ?
ಪತ್ನಿಯ ನೆನಪು ಬರುತ್ತಲೆ ಗಾಭರಿಯಾಗಿ ಪಕ್ಕ ನೋಡಿದೆ, ಅವಳಿನ್ನು ನಿದ್ದೆ ಮಾಡುತ್ತಿದ್ದಾಳೆ. ಅವಳು ಮಲಗಿರುವುದು ಸಹ ಕಡಪ್ಪ ಕಲ್ಲಿನಂತ ಕಟ್ಟೆಯ ಮೇಲೆ. ಅವಳನ್ನು ಅಲ್ಲಾಡಿಸಿ ಎಬ್ಬಿಸಿದೆ.
’ಆಗಲೇ ಬೆಳಕು ಆಗಿಹೋಯಿತೆ?"
ಎನ್ನುತ್ತ ಎದ್ದವಳು, ಒಮ್ಮೆ ಸುತ್ತಲೂ ನೋಡಿದಳು. ತಾನು ಮಲಗಿರುವ ಜಾಗ, ಹಾಗು ನಾವಿಬ್ಬರು ಇರುವ ಪರಿಸ್ಥಿತಿ ಕಾಣುವಾಗಲೆ ಅವಳ ಕಣ್ಣುಗಳಲ್ಲಿ ಭಯ ತುಂಬಿ ಹೋಯಿತು. ಅವಳಿಗೆ ಅರಿವಿಲ್ಲದೆ ಅವಳ ಬಾಯಿಂದ
’ಅಯ್ಯೋ.......’
ಎನ್ನುವ ಚಿತ್ಕಾರ ಹೊರಬಿತ್ತು.
ಅವಳು ಎಷ್ಟು ಜೋರಾಗಿ ಕೂಗಿದ್ದಳೆಂದರೆ ಸುತ್ತಲು ಕಡಿಮೆ ಎಂದರು ಒಂದು ಕಿ.ಮೀ ದೂರದವರೆಗೂ ಅವಳ ದ್ವನಿ ಕೇಳಿರಬೇಕು ಅನ್ನಿಸುತ್ತೆ.
ನಾನು ಎಚ್ಚೆತ್ತು ಎದ್ದು ನಿಂತೆ. ಅವಳನ್ನು ಎದ್ದೇಳು ಅನ್ನುವಂತೆ ಕೈಕೊಟ್ಟು ಎಬ್ಬಿಸಿದೆ. ನಮ್ಮ ತಲೆಯ ಬಳಿಯೆ ನಾವು ಸಾಗರದಿಂದ ತಂದ ಬ್ಯಾಗ್ ಬಿದ್ದಿತ್ತು. ಅಷ್ಟರಲ್ಲಿ ದೂರದಲ್ಲಿ ಯಾರದೋ ಮುಖ ಕಾಣಿಸಿತು. ಹತ್ತಿರ ಬಂದ , ಯಾರೋ ಸಮೀಪದ ಹಳ್ಳಿಯವರು ಇರಬಹುದು ಅವನು, ಅವನ ಕೈಯಲ್ಲಿ ಇರುವ ನೀರಿನ ಪಾತ್ರೆ ಕಾಣುವಾಗಲೆ ಅರಿವಾಯಿತು, ಅವನು ಬಹುಶಃ ಬೆಳಗಿನ ತನ್ನ ದೇಹಬಾದೆಗಳನ್ನು ತೀರಿಸಿಕೊಳ್ಳಲು ಬಂದವನಿರಬೇಕು. ನನ್ನ ಪತ್ನಿ ಕೂಗಿಕೊಂಡಿದ್ದು ಕೇಳಿ ಬಂದವನಿರಬೇಕು.
ನಮ್ಮನ್ನು ಕಂಡು ಹತ್ತಿರ ಬರಲು ಭಯ ಎನ್ನುವಂತೆ ದೂರ ನಿಂತ
ನಾನಾಗಿಯೆ ಅವನನ್ನು ಕರೆದೆ
’ಇಲ್ಲಿ ಬಾರಪ್ಪ, ಇದು ಯಾವ ಸ್ಥಳ, ನಾವು ಮೋಸ ಹೋಗಿ ಇಲ್ಲಿ ಬಂದಿದ್ದೇವೆ, ಸ್ವಲ್ಪ ಸಹಾಯ ಮಾಡು’
ಅವನು
’ಯಾವೂರು ಸ್ವಾಮಿ ನಿಮ್ಮದು, ಇಲ್ಲಿ ಏಕೆ ಬಂದಿದ್ದೀರಿ, ಅದೇನು ಇಲ್ಲಿ ಬಂದು ಮಲಗಿದ್ದೀರಿ, ಮೊದಲು ಅಲ್ಲಿಂದ ಎದ್ದು ಹೊರಗೆ ಬನ್ನಿ, ನೀವು ಮಲಗಿರುವುದು ಸಮಾದಿಯ ಮೇಲೆ’ ಎಂದ.
ನಾನು ನನ್ನ ಬ್ಯಾಗನ್ನು ಕೈಲಿ ಹಿಡಿದು , ಪತ್ನಿಯ ಸಮೇತ ವೇಗವಾಗಿ ಹೊರಬಂದೆ.
ಅವನಾದರೋ
’ಬನ್ನಿ ಮೊದಲು ಇಲ್ಲಿಂದ ದೂರ ಹೋಗೋಣ’ ಎನ್ನುತ್ತ ಹೊರಟ.
ಅವನ ಜೊತೆ ಎರಡು ಮೂರು ನಿಮಿಶ ನಡೆಯುತ್ತಿರುವಂತೆಯೆ ಹಳ್ಳಿಯ ಪ್ರಾರಂಭ ಕಾಣಿಸಿತು. ಬಹುಶಃ ನಾವು ಮಲಗಿದ್ದು, ಹಳ್ಳಿಯ ಹೊರಬಾಗದಲ್ಲಿ, ಆದರೆ ರಾತ್ರಿ ಮಲಗಿರುವಾಗ ಅಂತ ಸೊಗಸಾದ ಮನೆಯಿತ್ತು. ನಮ್ಮೆ ಜೊತೆ ವೆಂಕಟಾದ್ರಿ ಎನ್ನುವರಿದ್ದರು, ಅವರ ಪತ್ನಿ ಸಹ ಇದ್ದರು ಅವರಿಬ್ಬರೂ ಎಲ್ಲಿ ಹೋದರು ಎನ್ನುವ ಆತಂಕ
ಅವನೇ ಕೇಳಿದ ’ ಏನು ಸ್ವಾಮಿ ನಿಮ್ಮ ಕತೆ, ಎಲ್ಲಿಂದ ಬಂದಿರಿ, ಅದೇನು ಹೋಗಿ ದೆವ್ವದ ಮನೆಯಲ್ಲಿ ಮಲಗಿದ್ದೀರಿ, ನೀವು ಮಂತ್ರವಾದಿಗಳಾ ?’ ಎಂದ
’ಇಲ್ಲಪ್ಪ, ನಾವು ಮಂತ್ರವಾದಿಗಳಲ್ಲ, ಇಲ್ಲೆ ಸಾಗರಕ್ಕೆ ಟೂರ್ ಎಂದು ಬಂದಿದ್ದಿವಿ, ಅಲ್ಲಿ ನಿಮ್ಮ ಹಳ್ಳಿಯವರೆ ಅಂತೆ ಅದ್ಯಾರೋ ವೆಂಕಟಾದ್ರಿ ಎನ್ನುವವರ ಪರಿಚಯವಾಯಿತು. ರಾತ್ರಿ ಅವರೇ ಕರೆತಂದರು. ನಮ್ಮ ಮನೆಯಲ್ಲಿರಿ ಎಂದು. ರಾತ್ರಿ ಅವರ ಮನೆಯಲ್ಲಿಯೆ ಮಲಗಿದ್ದೆವು. ಈಗ ನೋಡಿದರೆ ಹೇಗೆ ಇಲ್ಲಿ ಬಂದೆವು ತಿಳಿಯುತ್ತಿಲ್ಲ. ಹೋಗಲಿ. ಈ ಹಳ್ಳಿಯಲ್ಲಿ ವೆಂಕಟಾದ್ರಿ ಎನ್ನುವವರ ಮನೆ ಯಾವುದು ತೋರಿಸಿ ಅಲ್ಲಿಗೆ ಹೋಗುವೆವು’ ಎಂದೆ ಆತಂಕದಿಂದ.
ಅಷ್ಟರಲ್ಲಿ ಹಳ್ಳಿಯ ಇನ್ನೂ ಹತ್ತ ಹನ್ನೆರಡು ಜನ ಸೇರಿದ್ದರು. ನನ್ನ ಕತೆ ಕೇಳುತ್ತಿರುವಂತೆ ಅವರ ಮುಖದಲ್ಲಿ ಭಯ ಹಾಗು ಆಶ್ಚರ್ಯ ಕಾಣಿಸಿತು
’ಸ್ವಾಮಿ ನಿಜಾ ಹೇಳ್ತಾ ಇದ್ದೀರಾ ? , ನಿಮ್ಮನ್ನು ಕರೆತಂದಿದ್ದು ವೆಂಕಟಾದ್ರಿನಾ? , ನೋಡಲು ಅವರು ಹೇಗಿದ್ದರು ?’ ಇತ್ಯಾದಿ ಪ್ರಶ್ನೆ ಕೇಳಿದರು.
ನಾನು ಎಲ್ಲವನ್ನು ವಿವರಿಸಿದೆ. ಕಡೆಗೆ ಹಳ್ಳಿಯ ಪ್ರಮುಖ ದೊಡ್ಡಯ್ಯ ಅಂತೆ ಅವನ ಹೆಸರು ಅವನು ಹೇಳಿದ.
’ಸ್ವಾಮಿ ಹೆದರಬೇಡಿ, ನೀವು ಮಲಗಿದ್ದು ದೆವ್ವದ ಮನೆಯಿದ್ದ ಜಾಗ, ಅದೇ ವೆಂಕಟಾದ್ರಿ ಅನ್ನುವವರ ಮನೆ. ಆದರೆ ಅವರು ಹಾಗು ಅವರ ಪತ್ನಿ ತೀರಿಕೊಂಡು ಸುಮಾರು ಹತ್ತು ವರ್ಷಗಳೆ ಕಳೆದಿರಬೇಕು ಅನ್ನಿಸುತ್ತೆ’
ನನಗೆ ಈಗ ನಿಜಕ್ಕೂ ಹೆದರಿಕೆ ಆಗತೊಡಗಿತು.
ಇದೆಲ್ಲ ಹೇಗೆ ಆಯಿತು. ಮತ್ತೆ ದೆವ್ವದ ಮನೆ ಎಂದು, ಊರ ಹೊರಗಿನ ಗೌಡರ ಮನೆಯನ್ನು ರಾತ್ರಿ ತೋರಿಸಿದರಲ್ಲ ವೆಂಕಟಾದ್ರಿಯವರು, ಅದು ಹೇಗೆ ಸಾದ್ಯ? . ಎನೇನೊ ಪ್ರಶ್ನೆಗಳು.
ಅವರಲ್ಲಿ ಎಲ್ಲವನ್ನು ತಿಳಿಸಿದೆ. ನನ್ನ ಪತ್ನಿಯಂತು ಹೆದರಿ ಏನು ಮಾತನಾಡಲು ತೋಚದೆ ಕುಳಿತ್ತಿದ್ದಳು.
ಕಡೆಗೆ ಆ ಹಳ್ಳಿಯ ರೈತ ದೊಡ್ಡಯ್ಯ ಅಲ್ಲಿನ ಮನೆಯ ಕತೆ ತಿಳಿಸಿದ.
ನಾವು ಮಲಗಿದ್ದು ವೆಂಕಟಾದ್ರಿ ಎನ್ನುವವರ ಮನೆಯಿದ್ದ ಜಾಗ. ಆ ಮನೆಯಲ್ಲಿ ಮೊದಲಿಗೆ ವೆಂಕಟಾದ್ರಿ ಹಾಗು ಅವರ ಪತ್ನಿ ವಾಸವಾಗಿದ್ದರು. ಅವರಿಗೆ ಇಬ್ಬರು ಮಕ್ಕಳು ರಘು ಹಾಗು ಭರತ. ಇಬ್ಬರೂ ಓದಲೆಂದು ಹಳ್ಳಿ ಬಿಟ್ಟವರು. ಕಡೆಗೆ ವಿದೇಶ ಸೇರಿದರು. ವೆಂಕಟಾದ್ರಿಯವರಿಗೆ ಅರವತ್ತು ಆಗಿತ್ತು, ಆ ಕಾರಣಕ್ಕಾಗಿ ಅವರ ಮನೆಯಲ್ಲಿ ಒಂದು ಶುಭ ಸಮಾರಂಭ ಏರ್ಪಾಡಾಯಿತು. ಹೊರದೇಶದಲ್ಲಿದ್ದ ಇಬ್ಬರೂ ಮಕ್ಕಳು ತಂದೆಯ ಆಯಸ್ಸು ಹೆಚ್ಚಿಸುವ ಆ ಕಾರ್ಯಕ್ರಮಕ್ಕೆ ಬರುತ್ತೇವೆಂದು ತಿಳಿಸಿದ್ದರು.
ಆದರೆ ವಿಧಿಯ ನಿಯಮ ಬೇರೆ ಇತ್ತು. ಮಕ್ಕಳಿಬ್ಬರು ಒಟ್ಟಾಗಿ ಬರುತ್ತಿದ್ದ ವಿಮಾನ ಅಪಘಾತಕ್ಕೆ ಒಳಗಾಗಿ ಇಬ್ಬರು ಮಕ್ಕಳು ಒಟ್ಟಿಗೆ ದುರ್ಮರಣ ಹೊಂದಿದ್ದರು. ವೆಂಕಟಾದ್ರಿಯವರ ಪತ್ನಿಗೆ ಮತಿಭ್ರಮಣೆಯಂತೆ ಆಯಿತು. ಪತಿ ಹಾಗು ಪತ್ನಿ ಇಬ್ಬರಿಗು ಅಘಾತವನ್ನು ತಡೆದುಕೊಳ್ಳುವ ಶಕ್ತಿ ಇರಲಿಲ್ಲ. ಇಬ್ಬರು ನೇಣಿಗೆ ಶರಣು ಹೋದರು.
ಅವರಿಬ್ಬರ ಶವವನ್ನು ಅವರದೇ ಮನೆಯ ಕಾಂಪೋಂಡಿನಲ್ಲಿಯೆ ಅವರ ಬಂದುಗಳು ಮಣ್ಣುಮಾಡಿದರು. ವೆಂಕಟಾದ್ರಿಯವರ ಮನೆ ಬೀಗಹಾಕಲ್ಪಟ್ಟಿತು.
ಆ ನಂತರ ಹಳ್ಳಿಯಲ್ಲಿ ತರ ತರದ ಕತೆಗಳು ಹರಡಿದವು.
ವೆಂಕಟಾದ್ರಿಯವರು ಹಾಗು ಅವರ ಪತ್ನಿ ಅದೇ ಮನೆಯಲ್ಲಿ ದೆವ್ವವಾಗಿ ವಾಸವಾಗಿದ್ದಾರೆ ಎಂದು.
ರಾತ್ರಿಯಲ್ಲಿ ಇಬ್ಬರು ಓಡಿಯಾಡುವುದು , ಮಕ್ಕಳಿಗಾಗಿ ಕಾಯುವುದು ಮಾಡುತ್ತಿದ್ದಾರಂತೆ ಅಂತ ಊರೆಲ್ಲ ಪುಕಾರು. ಆದರೆ ಅವರಿಂದ ಹಳ್ಳಿಯ ಯಾರಿಗೆ ಆಗಲಿ ತೊಂದರೆ ಆಗಿರಲಿಲ್ಲ.
ಹಾಗಿರುವಾಗಲು ಊರಿನ ಗೌಡ ಒಬ್ಬನಿದ್ದ ರುದ್ರೇಗೌಡ ಎಂದು ಹೆಸರು, ಅದೇನು ಆಯಿತೋ, ಊರವರೆಲ್ಲ ಮಾತುಗಳು, ಹೆದರಿಕೆ ಇವನ್ನು ನೋಡುತ್ತ ಇದ್ದವನು, ಮನೆಯನ್ನು ಕೆಡವುತ್ತೇನೆಂದು ನಿರ್ಧಾರ ಮಾಡಿದ. ಊರವರೆಲ್ಲ ಬೇಡ ಎಂದು ಬುದ್ದಿ ಹೇಳಿದಾಗಲು ಕೇಳಲಿಲ್ಲ.
ಅವನಿಗೆ ದೆವ್ವ ಭೂತ ಇಂತಹುದರಲೆಲ್ಲ ನಂಭಿಕೆ ಇಲ್ಲ.
ಕೆಲವು ಕೆಲಸಗಾರರನ್ನು ಬಿಟ್ಟು ಮನೆಯನ್ನು ನೆಲಸಮ ಮಾಡಿಸಿಬಿಟ್ಟ. ಅಲ್ಲಿ ಮನೆ ಇದ್ದ ಗುರುತು ಉಳಿಯದಂತೆ ಅಲ್ಲಿನ ಎಲ್ಲ ಕಸವನ್ನು ಹೊರಸಾಗಿಸಿಬಿಟ್ಟ. ವೆಂಕಟಾದ್ರಿಯವರು ಇದ್ದ ಮನೆ ಈಗ ಖಾಲಿ ಜಾಗವಾಗಿ ಕಾಣುತ್ತಿತ್ತು. ಆದರೆ ಅವರಿಬ್ಬರ ಸಮಾದಿಗಳನ್ನು ಮಾತ್ರ ಮುಟ್ಟಿರಲಿಲ್ಲ.
ಅದು ಆಕಸ್ಮಿಕವೋ ಅಥವ ಎಂತದೋ ಯಾರು ತಿಳಿಯರು. ಮನೆಯನ್ನು ಕೆಡವಿದ ಮುಂದಿನ ಅಮಾವಾಸ್ಯೆಯಂದು ಆರೋಗ್ಯವಾಗಿದ್ದ ರುದ್ರೇಗೌಡ ಇದ್ದಕ್ಕಿದಂತೆ ರಾತ್ರಿ ಮರಣಹೊಂದಿದ.
ಸಾಯುವಾಗ ಅವನ ಬಾಯಲ್ಲಿ ಕಿವಿ ಮೂಗುಗಳಲ್ಲಿ ರಕ್ತ. ಊರಿನವರೆಲ್ಲ ಅದು ದೆವ್ವದ ಮನೆಯನ್ನು ಕೆಡವಿದ ಪರಿಣಾಮವೆಂದರು. ಓದಿಕೊಂಡ ಕೆಲವರು ಅದು ಬ್ರೈನ್ ಹ್ಯಾಮರೇಜ್ ಅಂತಾರಲ್ಲ ಹಾಗೆ ಆಗಿ ಸತ್ತಿರಬೇಕೆಂದರು. ಆದರೆ ಗೌಡನ ಮನೆಯವರು ಮಾತ್ರ ಹೆದರಿಹೋದರು. ಅವನು ಸತ್ತ ಮನೆಯಲ್ಲಿರಲು ಅವರು ಹೆದರಿ ಊರ ಹೊರಗಿನ ತೋಟದ ಮನೆಗೆ ತಮ್ಮ ವಾಸ್ತವ್ಯವನ್ನು ಬದಲಿಸಿದರು.
ಈಗ ಮತ್ತೊಂದು ಸುದ್ದಿ ಹಬ್ಬಿತು. ಬೀಗ ಹಾಕಿದ ರುದ್ರೇಗೌಡನ ಮನೆಯಲ್ಲಿ ರುದ್ರೇಗೌಡನು ದೆವ್ವವಾಗಿ ಸೇರಿರುವನೆಂದು ಅಮಾವಾಸ್ಯೆ ಬಂದರೆ ಸಾಕು ವೆಂಕಟಾದ್ರಿಯವರ ದೆವ್ವ ರುದ್ರೇಗೌಡನ ಮನೆಗೆ ಹೋಗುವದೆಂದು ಆಗ ರಾತ್ರಿಯೆಲ್ಲ ಅವುಗಳ ನಡುವೆ ಘನಘೋರ ಕಾಳಗ ನಡೆಯುವದೆಂದು, ನಡುವೆ ಊರ ಮಂದಿ ಯಾರೇ ಹೋದರು ಅವರಿಗೆ ಉಳಿಗಾಲ ಇಲ್ಲವೆಂದು ಕತೆ. ಇದನ್ನು ಯಾರು ಹಬ್ಬಿಸುತ್ತಿದ್ದರೊ ಅಥವ ನಿಜವೋ ಯಾರು ತಿಳಿಯರು. ಎಲ್ಲರ ಮನದಲ್ಲಿ ಬೇರೂರಿರುವ ಭಯ ಗೌಡನ ಮನೆಯತ್ತ ಯಾರು ಸುಳಿಯದಂತೆ ಆಗಿತ್ತು.
ಕಡೆಗೊಮ್ಮೆ ಊರ ಹಿರಿಯರು ಸೇರಿದರು. ಎಲ್ಲರೂ ಸೇರಿ ತೀರ್ಮಾನ ಕೈಗೊಂಡರು. ಪರಊರಿನಿಂದ ಮಂತ್ರವಾದಿಗಳನ್ನು ಕರೆಸಿ ರುದ್ರೇಗೌಡನ ಮನೆಗೆ ದಿಗ್ಬಂದನ ಏರ್ಪಡಿಸಿದರು. ಅವರ ನಂಬಿಕೆಯ ಪ್ರಕಾರ ವೆಂಕಟಾದ್ರಿಯವರ ದೆವ್ವ , ರುದ್ರೇಗೌಡನ ಮನೆಯನ್ನು ಪ್ರವೇಶಿಸುವಂತಿಲ್ಲ, ಹಾಗು ರುದ್ರೇಗೌಡನ ದೆವ್ವ ಆ ಮನೆಯನ್ನು ಬಿಟ್ಟು ಹೊರಬರದಂತೆ ಗಟ್ಟಿಯಾದ ಏರ್ಪಾಡಾಗಿತ್ತು.
ನಂತರ ಊರಿನಲ್ಲಿ ಸ್ವಲ್ಪ ನೆಮ್ಮದಿ ನೆಲೆಸಿತ್ತು. ಯಾವುದೇ ದೆವ್ವದ ಕಾಟವಿಲ್ಲ ಅಂತ ನೆಮ್ಮದಿಯಾಗಿದ್ದರು.ಊರಿನಲ್ಲಿರುವ ಯಾರು ದಿಗ್ಭಂದನ ಹಾಕಿದ ಗೌಡನ ಮನೆಯತ್ತ ಸುಳಿಯುತ್ತಿರಲಿಲ್ಲ. .......
ಈ ಎಲ್ಲ ಕತೆಯನ್ನು ಕೇಳುತ್ತ ನನ್ನ ಮನದಲ್ಲಿ ಗೊಂದಲ ಪ್ರಾರಂಭವಾಯಿತು. ಇದೇನು ಗ್ರಹಚಾರ ನನಗೆ ಸಂಬಂಧವೆ ಇಲ್ಲದ ಈ ಹಳ್ಳಿಯ ಕತೆಗೆ ನಾನು ಬಂದು ಸಿಕ್ಕಿಕೊಂಡನಲ್ಲ ಎಂದು. ರಾತ್ರಿ ವೆಂಕಟಾದ್ರಿಯವರು ನನ್ನ ಜೊತೆ ರುದ್ರೇಗೌಡನ ಮನೆಯ ಒಳಗೆ ಬರದಿರಲು ಈ ದಿಗ್ಬಂದನವೂ ಒಂದು ಕಾರಣವಿರಬಹುದು ಎನ್ನುವ ಕಾರಣ ನನಗೆ ಹೊಳೆದಾಗ, ನನ್ನಲ್ಲಿ ಎಂತಹುದೋ ಒಂದು ಭಾವ. ಒಂದು ವೇಳೆ ನಾನು ಅವರ ಜೊತೆ ಆ ಮನೆಯೊಳಗೆ ಹೋಗಿದ್ದಲ್ಲಿ ಎಂತಹ ಪರಿಸ್ಥಿತಿ ಎದುರಾಗುತ್ತಿತ್ತೊ ಬಲ್ಲವರಾರು. ನಾನು ವೆಂಕಟಾದ್ರಿಯ ಮಿತ್ರನೆಂದು ಬಗೆದು ಆ ರುದ್ರೇಗೌಡನ ದೆವ್ವ ನನ್ನನ್ನು ಸಿಗಿದು ಹಾಕುತ್ತಿತ್ತೋ ಎನೊ ಅನಿಸಿದಾಗ ಬೆನ್ನಿನಲ್ಲಿ ನಡುಕ ಉಂಟಾಯಿತು.
ಇಷ್ಟೆಲ್ಲ ಆಗುವಾಗ ನಾನು ಹೆದರಿ ಕುಳಿತಿದ್ದು ಕಂಡು ಊರ ಜನರೆಲ್ಲ ದೈರ್ಯ ಹೇಳಿದರು. ಅಲ್ಲಿಯ ಹನುಮಂತನ ಗುಡಿ ಪುಜಾರಿ ದೇವರಾಜ ಎನ್ನುವರೊಬ್ಬರಿದ್ದರು. ಅವರು
’ಏನು ಚಿಂತಿಸಬೇಡಿ. ನಮ್ಮ ಮನೆಗೆ ಬನ್ನಿ, ಇಬ್ಬರು ಸ್ನಾನ ಮುಗಿಸಿ. ನಂತರ ದೇವಾಲಯದಲ್ಲಿ ಹನುಮನಿಗೆ ಪೂಜಿಸಿದ ಹಳದಿ ದಾರ ಕೊಡುತ್ತೇನೆ ಇಬ್ಬರು ಕುತ್ತಿಗೆಗೆ ಕಟ್ಟಿಕೊಳ್ಳಿ. ನೀವು ನಮ್ಮ ಮನೆಯಲ್ಲಿ ಬೆಳಗಿನ ತಿಂಡಿ ಮುಗಿಸುವದರಲ್ಲಿ, ಹತ್ತಕ್ಕೆ ಸರ್ಕಾರಿ ಬಸ್ ಒಂದು ಬರುತ್ತದೆ. ನೀವು ಅದನ್ನು ಹತ್ತಿದರೆ ಆಯಿತು. ಒಂದು ಗಂಟೆಯಲ್ಲಿ ಸಾಗರ ಮುಟ್ಟುವಿರಿ’ ಎಂದು ದೈರ್ಯ ಹೇಳಿದರು.
ಅವರು ಹೇಳಿದ್ದನ್ನು ಕೇಳುವ ಹೊರತು ಬೇರೆ ಮಾರ್ಗ ನನಗೆ ಹಾಗು ನನ್ನ ಪತ್ನಿಗೆ ಇರಲಿಲ್ಲ. ಸರಿ ಅಲ್ಲಿ ಸ್ನಾನ ಮುಗಿಸಿ, ಅವರು ದೇವಾಲಯದಲ್ಲಿ ಕೊಟ್ಟ ತೀರ್ಥ ಪ್ರಸಾದ ಸೇವಿಸಿ, ಅವರ ಮನೆಯಲ್ಲಿ ತಿಂಡಿ ಮುಗಿಸಿ, ಕಾಯುತ್ತಿರುವಂತೆ , ಬಸ್ಸು ಕಾಣಿಸಿತು.
’ಅಬ್ಬಾ...’ ಎನ್ನುತ್ತ ಬಸ್ಸು ಹತ್ತಿ ಕುಳಿತೆವು.
ವೆಂಕಟಾದ್ರಿಯವರ ದೆವ್ವದ ಮನೆಯಿಂದ ನಮ್ಮನ್ನು ಕರೆದುಕೊಂಡು ಹೋಗಿದ್ದ ಬಸವ, ಊರ ರೈತ ದೊಡ್ಡಯ್ಯ, ಹನುಮನ ಗುಡಿ ಪುಜಾರಿ ಇತರರು ಬಸ್ ಹೊರಟಂತೆ ನಮಗೆ ಬೈ ಬೀಸಿದರು. ಬಸ್ಸು ಹೊರಟು, ಅದೇ ಮಾರ್ಗದಲ್ಲಿ ಸಾಗುವಾಗ, ರಸ್ತೆಯ ಪಕ್ಕ ರಾತ್ರಿ ನೋಡಿದ ರುದ್ರೇಗೌಡನ ಮನೆ ನೋಡುವಾಗ ನಿಗೂಢವಾಗಿ ಕಾಣಿಸುತ್ತಿತ್ತು.
ಕಂಡೆಕ್ಟರ ಹತ್ತಿರ ಬಂದು ನಮ್ಮನ್ನು ಪರೀಕ್ಷಾತ್ಮಕವಾಗಿ ನೋಡುತ್ತ
’ಎಲ್ಲಿಗೆ ಸಾರ್ ’ ಎಂದ
’ಎರಡು ಸಾಗರಕ್ಕೆ ಕೊಡಪ್ಪ’ ಎನ್ನುತ್ತ ಟಿಕೇಟ್ ಪಡೆದೆ.
ಬಸ್ಸು ಸಾಗುತ್ತಿರವಂತೆ ಸೀಟಿಗೆ ತಲೆ ಒರಗಿಸಿದೆ. ಸಾಗರಕ್ಕೆ ಹೋದ ನಂತರ ಪತ್ನಿಯಿಂದ ಇನ್ನು ಏನೇನು ಮಾತು ಅವಹೇಳನ ಕೇಳಬೇಕಲ್ಲಪ್ಪ ಎನ್ನುವ ಚಿಂತನೆ ಮೂಡುತ್ತಿತ್ತು.
...
ಅಂತು ಇಂತು ಸಾಗರ ಸೇರಿಯಾಯಿತು,
ಹೋಟೆಲಿನ ರೂಮು ಸೇರಿ, ಮತ್ತೊಮ್ಮೆ ಸ್ನಾನ ಮುಗಿಸಿ, ಊಟಕ್ಕೆ ಹೋಗಿ ಬಂದೆವು . ನನ್ನ ಪತ್ನಿಯ ಕಡೆಯಿಂದ ಸಾಕಷ್ಟು ಮಾತು ಕೇಳಿ ಆಯಿತು. ಇನ್ನು ಸಾಗರದ ಸುತ್ತಮುತ್ತ ಸುತ್ತವ ಮಾತು ಬೇಡವೆ ಬೇಡ ಹಿಂದಿರುಗಿ ಬೆಂಗಳೂರಿಗೆ ಹೋಗಿ ಬಿಡುವದೆಂದೆ ನಿರ್ಧರಿಸಿದೆವು. ಹೋಟೆಲಿನವರಿಗೆ ಸಂಜೆ ನಾವು ರೂಮು ಖಾಲಿ ಮಾಡುತ್ತಿದ್ದೇವೆಂದು ತಿಳಿಸಿದೆವು.
ನಂತರ ನಮ್ಮ ವಸ್ತುಗಳನ್ನೆಲ್ಲ ಪ್ಯಾಕ್ ಮಾಡಿ. ಅರಾಮವಾಗಿ ಕುಳಿತಿದ್ದೆ. ರೂಮಿನಲ್ಲಿ ಇದ್ದ ಫೋನ್ ರಿಂಗ್ ಆಯಿತು. ಅದೇಕೊ ರಿಸಪ್ಷನ್ ನಿಂದ ಕರೆ ಮಾಡಿದ್ದಾರೆ , ಬಹುಶಃ ಬಿಲ್ ಕ್ಲಿಯರ್ ಮಾಡಲು ಇರಬಹುದು ಎಂದುಕೊಂಡು ಪೋನ್ ತೆಗೆದೆ
’ಸಾರ್ , ನಿಮಗೆ ಕಾಲ್ ಬಂದಿದೆ, ಯಾರೊ ನಿಮ್ಮ ಸ್ನೇಹಿತರಂತೆ ಮಾತಾಡಿ ’ ಎನ್ನುತ್ತ, ನಾನು ಯಾರು ಎಂದು ಕೇಳುವ ಮುಂಚೆಯೆ ಕಾಲ್ ಕನೆಕ್ಟ್ ಮಾಡಿದರು ಹೋಟೆಲಿನವರು.
’ಹಲೋ ’ ಎಂದೆ ಯಾರಿರಬಹುದು ಎನ್ನುವ ಕುತೂಹಲದೊಂದಿಗೆ
’ನಮಸ್ಕಾರ ಹೇಗಿದ್ದೀರಿ, ನಾನು ಗೊತ್ತಾಯಿತಾ" ಎಂದು ನಗು. ನನಗೆ ಅರ್ಥವಾಗಲಿಲ್ಲ.
’ತಾವು ಯಾರು ತಿಳಿಯುತ್ತಿಲ್ಲವಲ್ಲ ’ ಎಂದೆ ಗೊಂದಲದಲ್ಲಿ
’ಇಷ್ಟು ಬೇಗ ಮರೆತುಬಿಟ್ಟಿರಾ, ನಾನು ವೆಂಕಟಾದ್ರಿ’
ಆ ಕಡೆಯಿಂದ ಬಂದ ಮಾತಿಗೆ, ಬೆಚ್ಚಿಬಿದ್ದೆ, ನಾನು ಸ್ತಬ್ಧನಾದೆ. ಏನು ಹೇಳುವುದು ತಿಳಿಯುತ್ತಿಲ್ಲ.
’ಏಕೆ ಮಾತನಾಡುತ್ತಿಲ್ಲ ಸಾರ್ ’ ಆ ಕಡೆಯಿಂದ ಮತ್ತೆ ಮಾತು ನಗು
’ನೀವು ಯಾರು, ವೆಂಕಟಾದ್ರಿಯವರು ಹೇಗೆ ಮಾತನಾಡಲು ಸಾದ್ಯ, ನನ್ನ ನಂಬರ್ ನಿಮಗೆ ಹೇಗೆ ತಿಳಿಯಿತು’
ನಾನು ಅಂದೆ ದ್ವನಿ ಸ್ವಲ್ಪ ನಡುಗತ್ತ ಇತ್ತೇನೊ.
’ಸಾರ್ ನೀವು ಇರುವುದು ಹೋಟೆಲಿನಲ್ಲಿ, ನಂಬರ್ ತಿಳಿಯುವದಿಲ್ಲವೆ. ಅದನ್ನು ಬಿಡಿ. ವೆಂಕಟಾದ್ರಿ ಏಕೆ ಮಾತನಾಡಬಾರದು?"
ಎಂದರು
’ಅದು ಹೇಗೆ ಸಾದ್ಯ, ವೆಂಕಟಾದ್ರಿ ಎನ್ನುವವರು ಸತ್ತು ಹತ್ತು ವರ್ಷದ ಮೇಲಾಗಿದೆ ಎಂದು ಹಳ್ಳಿಯವರು ತಿಳಿಸಿದರು. ನೀವು ನನ್ನನ್ನು ಮೋಸ ಮಾಡಿ ಮರಸಳ್ಳಿಗೆ ಕರೆದೋಯ್ದಿರಿ , ಈಗ ಮತ್ತೆ ಕಾಲ್ ಮಾಡುತ್ತ ಇರುವಿರಿ. ನಾನು ನಿಮ್ಮ ಜೊತೆ ಮಾತು ಮುಂದುವರೆಸಲ್ಲ’
ಎಂದೆ
’ಸಾರ್ ಕೋಪ ಬೇಡ, ನಾನು ನಿಮಗೆ ಏನಾದರು ತೊಂದರೆ ಮಾಡಿರುವೆನಾ ? ಇಲ್ಲವಲ್ಲ , ನೀವು ದೆವ್ವದಮನೆಯ ಬಗ್ಗೆ ಕುತೂಹಲ ತೋರಿಸಿದಿರಿ, ನಾನು ನಿಮ್ಮನ್ನು ಕರೆದೋಯ್ದು ತೋರಿಸಿದೆ ಅಷ್ಟೆ, ಮತ್ತೆ ಯಾವ ಅಪರಾದ ಮಾಡಿಲ್ಲವಲ್ಲ’
’ಇರಬಹುದೇನೊ ಆದರೆ ನೀವು ಮನುಷ್ಯರಂತೆ ನನಗೆ ತೋರುತ್ತಿಲ್ಲ, ಹಾಗಿರುವಾಗ ಮಾತನಾಡುವುದು ಅಪಾಯ ಅನ್ನಿಸುತ್ತಿದೆ’ ಎಂದೆ
’ಅಂತೂ ದೆವ್ವದ ಇರುವಿನ ಬಗ್ಗೆ ನಂಬಿದಿರಿ?" ಆತ ನಗುತ್ತ ಹೇಳಿದರು
’ಮತ್ತೆ ನೀವು ದೆವ್ವ ಅಲ್ಲವೇನು, ಮನುಷ್ಯರೆ ? ಹಾಗಿದ್ದರೆ ಹೀಗೆಲ್ಲ ಏಕೆ ಮಾಡಿದಿರಿ?"
’ಹೇಳಿದೆನಲ್ಲ ನೀವು ಇಷ್ಟಪಟ್ಟ ಕಾರಣಕ್ಕೆ ಕರೆದುಕೊಂಡು ಹೋಗಿ ತೋರಿಸಿದೆ ಅಷ್ಟೆ. ಅಷ್ಟಕ್ಕು ನನ್ನಿಂದ ನಿಮಗೆ ಯಾವ ಅಪಾಯವು ಇಲ್ಲ. ನಾನು ಮನುಷ್ಯನೊ ದೆವ್ವವೋ ನೀವು ನಿರ್ಧರಿಸಿ’ ಎಂದರು ಆತ
“ನನಗೆ ಅನುಭವಕ್ಕೆ ಬಂದಿರುವಂತೆ ನೀವು ದೆವ್ವವೆ ಹೌದು" ನನ್ನ ದ್ವನಿಯಲ್ಲಿ ಸ್ವಲ್ಪ ನಡುಕ.
’ಅದಕ್ಕೆ ಊರವರೆಲ್ಲ ಹೇಳಿದ ಕತೆಯನ್ನು ಕೇಳಿ ಕುತ್ತಿಗೆಗೆ ದಾರ ಕಟ್ಟಿಸಿಕೊಂಡು ಬಂದಿರೋ? ’ ಎಂದರು ನಗುತ್ತ
ನನ್ನ ನನ್ನ ಕುತ್ತಿಗೆ ಮುಟ್ಟಿನೋಡಿಕೊಂಡೆ, ಹೌದು ಅಲ್ಲಿ ಹನುಮನ ಗುಡಿಯಲ್ಲಿ ಕಟ್ಟಿದ ಹಳದಿ ದಾರ ಇನ್ನು ಕುತ್ತಿಗೆಯಲ್ಲಿತ್ತು.
’ನಿಮಗೆ ಅದು ಸಹ ಗೊತ್ತು" ನನ್ನ ದ್ವನಿಯಲ್ಲಿ ಆಶ್ಚರ್ಯ
’ಅದು ಬಿಡಿ, ಮತ್ತೆ ನೀವು ಹೇಳಿದ್ದಿರಿ, ದೆವ್ವಗಳ ಅಸ್ತಿತ್ವದಲ್ಲಿ ನಂಬಿಕೆ ಇಲ್ಲ ಎಂದು. ಅಲ್ಲದೆ ಪ್ರಕೃತಿಯಲ್ಲಿ ದೆವ್ವದ ಅಸ್ತಿತ್ವದ ಅವಶ್ಯಕತೆಯೇ ಇಲ್ಲ ಎಂದವರು, ಈಗ ದೆವ್ವವನ್ನು ನಂಬುತ್ತಿರುವಿರಿ ಅಲ್ಲವೆ ?" ಆತನ ದ್ವನಿಯಲ್ಲಿ ಕುಚೋದ್ಯ.
ನನಗೆ ಈಗ ಗೊಂದಲವಾಯಿತು.
’ಹಾಗಿದ್ದರೆ ಈಗ ನಡೆದಿರುವದೆಲ್ಲ ಏನು, ನಿಜ ಹೇಳಿಬಿಡಿ, ನೀವು ದೆವ್ವವೋ ಅಥವ ನನ್ನ ಹಾಗೆ ಮನುಷ್ಯನೋ?"
ನಾನು ಕೇಳಿದೆ ಅವರನ್ನು. ಒಂದು ಕ್ಷಣದ ಮೌನ ನಂತರ ನುಡಿದರು, ವೆಂಕಟಾದ್ರಿ
’ನಡೆದಿರುವ ಘಟನೆಯನ್ನೆಲ್ಲ ಒಂದು ಕ್ರಮದಲ್ಲಿ ಮೊದಲಿನಿಂದ ತರ್ಕಬದ್ಧವಾಗಿ ಯೋಚಿಸಿ. ಯಾವುದು ನಿಜ ಯಾವುದು ಸುಳ್ಳು ಎನ್ನುವ ಬಗ್ಗೆ ಚಿಂತಿಸಿ. ನಾನು ಮನುಷ್ಯನೋ ಅಥವ ದೆವ್ವವೋ ಎನ್ನುವ ಬಗ್ಗೆ ನೀವೆ ನಿರ್ಧಾರಕ್ಕೆ ಬನ್ನಿ. ಊರಿಗೆ ಹೊರಟಿರುವಿರಿ ಹೋಗಿಬನ್ನಿ ’
ಆ ಕಡೆಯಿಂದ ಪೋನ್ ಡಿಸ್ಕನೆಕ್ಟ್ ಆಯಿತು. ನನ್ನ ಮನವೀಗ ಗೊಂದಲದ ಗೂಡಾಯಿತು. ಯಾವುದು ನಿಜ ಯಾವುದು ಭ್ರಮೆ ?
ಆತನನ್ನು ನೋಡಿದ್ದು, ಮಾತನಾಡಿದ್ದು, ಮರಸಳ್ಳಿಗೆ ಹೋಗಿ ಆತನ ಮನೆಯಲ್ಲಿ ಮಲಗಿದ್ದು , ಬೆಳಗ್ಗೆ ಏಳುವಾಗ ನಾನು ಸಮಾದಿಯ ಮೇಲೆ ಮಲಗಿದ್ದು ಎಲ್ಲವೂ ನಿಜ. ಆದರೆ ಈಗ ಕಾಲ್ ಮಾಡಿದವರು ಯಾರು ಅವರೇನ? .
ಏನು ತೋಚದಾಯಿತು.
ನನ್ನ ಮುಖ ನೋಡುತ್ತಿದ್ದ ಪತ್ನಿಯ ಮುಖದಲ್ಲೂ ಭಯದ ಛಾಯೆ ಕಾಣುತ್ತಿತ್ತು.
ನಿನ್ನೆ ನಡೆದ ಘಟನೆಯ ಪ್ರತಿ ಕ್ಷಣವನ್ನು ಮನ ನೆನೆಯತೊಡಗಿತು.
- ಮುಗಿಯಿತು.
ಎದೆ ಝಲ್ ಎನಿಸಿದ ಕಥನ.
ReplyDeleteನಾಯಕ ಬೆಳಗಾನ ಎದ್ದಾಗ ತೆರೆದು ಕೊಳ್ಳುವ ವಾಸ್ತವ ನಮ್ಮ ಬೆನ್ನ ಹುರಿಯಲ್ಲಿ ಒಂದು ನಡುಕ ಉಂಟುಮಾಡಿದ್ದು ನಿಜ!
ಕಥನದ ಆರಂಭದಲ್ಲು ಬರುವ ಬಣ್ಣಗಳು, ಕಣ್ಣುಗಳ ಗುರುತಿಸುವಿಕೆಯ ತತ್ವ ಮತ್ತು ಬೆಳಕಿನಲ್ಲಡಗಿರುವ ಬಣ್ಣಗಳ ಸಂಯೋಜನೆಯ ಸೂತ್ರದ ವಿಜ್ಞಾನ ಪಾಠಗಳು ಒಬ್ಬ ಛಾಯಾಗ್ರಾಹಕನೂ ಆಗಿರುವ ನನಗೆ ಉಪಯುಕ್ತ ಮಾಹಿತಿ.