Sunday, January 26, 2014

ಸಾಗರದ ಪ್ರವಾಸ - ಸಿಗಂದೂರು ಹಾಗು ಕೊಲ್ಲೂರು

 ಸಾಗರದ ಪ್ರವಾಸ - ಸಿಗಂದೂರು ಹಾಗು ಕೊಲ್ಲೂರು

ಮೊದಲ ದಿನ   ಅಂದರೆ ೧೬-ಜನವರಿ-೨೦೧೪ ರಂದು ನಾವು ಬೇಟಿ ನೀಡಲು ನಿರ್ದರಿಸಿ ಹೊರಟ ಸ್ಥಳಗಳು ಸಿಗಂದೂರು, ಕೊಲ್ಲೂರು, ಮುರ್ಡೇಶ್ವರ, ಇಡುಗುಂಜಿ, ಅಪ್ಸರಕೊಂಡ .
ಕೊಲ್ಲೂರು ಬಿಟ್ಟು ಉಳಿದ ಸ್ಥಳಗಳೆಲ್ಲ ನನಗೆ ಮೊದಲ ಬೇಟಿ. 

ಮುಂದುವರೆಯುವುದು...ಸಿಗಂದೂರು: 

ಸಾಗರದಿಂದ ಸುಮಾರು  ನಲವತ್ತು ಕಿ.ಮಿ. ದೂರದಲ್ಲಿರುವ  ಸ್ಥಳ. ಅಲ್ಲಿನ ಸಿಂಗದೂರೇಶ್ವರಿ ಅಥವ ಚೌಡೇಶ್ವರಿಯ ಹೆಸರು ಸಾಕಷ್ಟು ಪ್ರಸಿದ್ದ. ಸಿಗಂದೂರು  ಶರಾವತಿ ನದಿಗೆ ಕಟ್ಟಿರುವ ಲಿಂಗನಮಕ್ಕಿ ಡ್ಯಾಮಿನ ಹಿನ್ನೀರಿನಲ್ಲಿ ನಡುವೆ ಇರುವ ಒಂದು ನಡುಗೆಡ್ಡೆಯಂತಹ ಹಳ್ಳಿ. ನಮ್ಮ ಸ್ವಂತವಾಹನಗಳಲ್ಲಿ ಹೋದರೆ, ನೀರಿನ ಆಚೆ ವಾಹನ ನಿಲ್ಲಿಸಿ, ಲಾಂಚ್ ನಲ್ಲಿ ಮತ್ತೊಂದು ಬದಿ ಕಲಸವಲ್ಲಿ ಎಂಬಲ್ಲಿಗೆ ಹೋಗಿ , ಬಸ್ ಅಥವ ವ್ಯಾನ್ ಹತ್ತಿ ಪುನಃ ದೇವಾಲಯದವರೆಗೂ ಸುಮಾರು ಐದು ಕಿ.ಮಿ. ಹೋಗಬೇಕು. ಆದರೆ ಅಲ್ಲಿಯದೆ ಸ್ಥಳೀಯ ವಾಹನಗಳಾದರೆ ಲಾಂಚನಲ್ಲಿ ವಾಹನವನ್ನೆ ಹಾಕಿ ಹೋಗಬಹುದು !! . 

 ಹೌದು ಕಾರ್ ಗಳೇಕೆ ಪೂರ್ಣ ಬಸ್ ಅನ್ನೆ ಲಾಂಚ್ (ಫೆರ್ರಿ)ಗೆ ಏರಿಸಿ. ಮತ್ತೊಂದು ಬದಿ ತಲುಪಿ ಬಸನ್ನು ಇಳಿಸಿ ಮುಂದೆ ಹೋಗುತ್ತಾರೆ. ಅತ್ಯಂತ ಆಕರ್ಷಕ ಜಾಗ. ನಾವು ಹೋದ ವಾಹನವನ್ನೆ ಅನಾಮತ್  ಲಾಂಚ್‌ಗೆ ಏರಿಸಿ ನಾವು ಹತ್ತಿ ನೀರನ್ನು ದಾಟುವುದು ಹೊಸ ಅನುಭವ. ಅಲ್ಲಿಯವರಿಗೆ ಅದು ಸರ್ವೇಸಾಧಾರಣ ಅನ್ನುವಂತೆ ಇರುತ್ತಾರೆ. 

ದೇವಾಲಯದಲ್ಲೂ ಅಚ್ಚುಕಟ್ಟಾದ ವ್ಯವಸ್ಥೆ ಇದೆ. ಯಾವುದೆ ನೂಕು ನುಗ್ಗಲು ಆಗದಂತೆ ಸಣ್ಣ ಗುಂಪು ಗುಂಪುಗಳನ್ನಾಗಿ ಮಾಡಿ ಹಂತ ಹಂತವಾಗಿ ಕಳಿಸುತ್ತಾರೆ.  ಸಿಗಂದೂರಿಗೆ ಭೂತಸ್ಥಾನದ ರಕ್ಷಣೆಯಿದ್ದು ಭೂತದ ಕಟ್ಟೆಯ ವೀರಭದ್ರ ಸಿಗಂದೂರಿಗೆ ರಕ್ಷಕನಾಗಿರುವನು. ಅಲ್ಲದೆ ಅಲ್ಲಿ ಹಲವು ಜಮೀನಿಗೆ ಸಂಬಂದಿಸಿದ ನ್ಯಾಯವನ್ನು ಮಾಡಲಾಗುವುದು ಅನ್ನುತ್ತಾರೆ. ಅಲ್ಲಿ ಕೊಡುವ ಸಿಗಂದೂರಿನ ಶ್ರೀದೇವಿಯ ರಕ್ಷಣೆ ಇದೆ ಎನ್ನುವ ಭೋರ್ಡನ್ನು ತಮ್ಮ ಜಮೀನಿನಲ್ಲಿ ಇಟ್ಟರೆ ವಿವಾದಗಳು ಪರಿಹಾರವಾಗುವುದು ಎನ್ನುವರು.  ದುಗ್ಗಜ್ಜ ಮತ್ತು ಶೇಷಪ್ಪ ಎನ್ನುವರಿಂದ ಮೂರುನೂರು ವರ್ಷಗಳ ಹಿಂದೆ ಸ್ಥಾಪಿತವಾಗಿದೆಯಂತೆ. ಅಲ್ಲಿಯೆ ಇಳಿದುಕೊಳ್ಳಲು  ವ್ಯವಸ್ಥೆ ಇದ್ದರೂ ಹೆಚ್ಚಾಗಿ ಬರುವರೆಲ್ಲ ಸಾಗರದ ಮೂಲಕ ಅಥವ ಕೊಲ್ಲೂರು, ಸಿದ್ದಾಪುರ ಮೂಲಕ ಬಂದು ಹೋಗುವರು.  ಸಾಗರದಿಂದ ಸಿಗಂದೂರಿಗೆ ಸಾಕಷ್ಟು ಬಸ್ ವ್ಯವಸ್ಥೆ ಇದೆ.

ನಾವು ಸಹ ಸಿಗಂದೂರಿನ ಚೌಡೇಶ್ವರಿಯ ದರ್ಶನ ಪಡೆದು ಅಲ್ಲಿಂದ ಮುಂದುವರೆದೆವು ಕೊಲ್ಲೂರು ಕಡೆಗೆ. ಕೊಲ್ಲೂರು : 
ಕೊಲ್ಲೂರಿನ ಮೂಕಾಂಭಿಕೆಯ ಹೆಸರು ಕರ್ನಾಟಕದಲ್ಲಿ ಕೇಳದವರು ಯಾರು ಇಲ್ಲ. ಶಿವರಾಮಕಾರಂತರ ಮೂಕಜ್ಜಿಯ ಕನಸು ಓದುವಾಗ ಆಗಾಗ್ಯೆ ಬರುವ ಹೆಸರು ಕೊಲ್ಲೂರ ಮೂಕಾಂಭಿಕೆ. ದಟ್ಟಕಾನನದ ನಡುವೆ ಇದ್ದ ದೇವಾಲಯ ಅದು. ಒಂದು ಕಾಲದಲ್ಲಿ ಹುಲಿಯಂತಹ ಕಾಡು ಪ್ರಾಣಿಗಳು ಸಂಚರಿಸುತ್ತಿದ್ದ ಸ್ಥಳ.  ಈಗಲೂ ಕಾನದ ಗಿರಿ ಕಂದರಗಳ ನಡುವೆಯೆ ದಾರಿ ಸವೆಸಬೇಕು ಕೊಲ್ಲೂರು ಸೇರಲು. 
ಸಿಗಂದೂರಿನಿಂದ ಸುಮಾರು ಐವತ್ತು ಕಿ.ಮಿ. ದೂರ ಪ್ರಯಾಣಿಸಿ ಕೊಲ್ಲೂರು ಸೇರುವಾಗ ಊಟದ ಸಮಯ. ಕ್ಯೂನಲ್ಲಿ ನಿಂತು ದೇವರ ದರ್ಶನ ಪಡೆದು ಆಯಿತು. ಪಕ್ಕದಲ್ಲಿ ಹೋಮನಡೆದಿದ್ದ  ಆವರಣದಲ್ಲಿದ್ದ  ಉದ್ದನೆಯ ಕೊಠಡಿಯಲ್ಲಿ  ಊಟಹಾಕುತ್ತಿದ್ದರು. ಸಾಲು ಸಾಲು ಹೋಮಕುಂಡಗಳ, ಪ್ರಜ್ವಲಿಸುವ ಬೆಂಕಿಯ ನಡುವೆ, ಮಂಟಪದಲ್ಲಿ ಕುಳಿತು ಊಟಮಾಡಿದೆವು. ಮಕ್ಕಳಿಗೆಲ್ಲ ಹೊಸ ಅನುಭವ. ಅವರಿಗೆಲ್ಲ ಹೋಟೆಲಿನಲ್ಲಿ ತಿಂದು ಗೊತ್ತೆ ಹೊರತು ಈ ರೀತಿ ಊಟ ಹೊಸದೆ.  
ಕೊಲ್ಲೂರು ಸಾಕಷ್ಟು ಭಕ್ತರು ಸೇರುವ ಜಾಗ. ದೇವಾಲಯದಲ್ಲಿ ವಿವಿದ ಸೇವೆಗಳು ನಡೆಯುತ್ತಲೇ ಇರುತ್ತವೆ. ಮಕ್ಕಳಿಗೆ ಬೆಳೆಯುತ್ತಿರುವಾಗಲು ಎರಡು ಮೂರು ವರುಷ ತುಂಬಿದಾಗಲು ಕೆಲವೊಮ್ಮೆ ಮಾತು ಬರೆದೆ ಹೋದಾಗ,  ಕೊಲ್ಲೂರಿನ ಮೂಕಾಂಬಿಕೆಯನ್ನು ಬಂದು ಸೇವಿಸುವರು. 
ಕೊಲ್ಲೂರಿಗೆ ಬೆಂಗಳೂರಿನಿಂದಲೂ ಸಾಕಷ್ಟು ನೇರ ಬಸ್ ಸೌಕರ್ಯವೂ ಇದೆ. ನೇರ ಸುಮಾರು ನಾಲಕ್ಕು ನೂರು ಕಿ.ಮಿಗಳಾಗುತ್ತವೆ.

ಹೊರಗೆ ಸಾಲು ಸಾಲು ಅಂಗಡಿಗಳು ಎಲ್ಲವನ್ನು ದಾಟಿ ಮತ್ತೆ ಹೊರಟೆವು 

... ಮುಂದೆ ಮುರ್ಡೇಶ್ವರದ ಕಡೆಗೆ

2 comments:

enter your comments please