Friday, November 25, 2011

ಫಲಜೋತಿಷ್ಯ


ಫಲಜೋತಿಷ್ಯ
  ದೆಹಲಿಯ ಹಜರತ್ ನಿಜಾಮುದ್ದೀನ್ ರೈಲುನಿಲ್ದಾಣ ,ಸಾಯಂಕಾಲದ ಕಾಲ ದಾಟಿ ರಾತ್ರಿ  ಆಗುತ್ತಿತ್ತು. ಬೆಂಗಳೂರಿನತ್ತ ಹೋಗುವ ರಾಜದಾನಿ ಎಕ್ಸ್ ಪ್ರೆಸ್ ಬಂದು ನಿಲ್ಲುತ್ತಿರುವಂತೆ ಜನ ಆತುರಾತುರವಾಗಿ ನುಗ್ಗಿದರು, ಮೊದಲೆ ಟಿಕೆಟ್ ಕಾದಿರಿಸಿದ್ದರು ಸಹ ಎಂತದೊ ಕಾತುರ ಆತುರ ಎಲ್ಲರಿಗು, ಅಲ್ಲದೆ ಹೊರಡುವ ಸಮಯಕ್ಕೆ ಕೇವಲ ಐದು ನಿಮಿಷ ಮುಂಚಿತವಾಗಿ ಪ್ಲಾಟ್ ಫಾರ್ಮ್ ಪ್ರವೇಶಿಸಿದ ರೈಲನ್ನು ಹತ್ತುವಾಗ ಸಹಜವಾಗಿ ಎಲ್ಲರಿಗು ಆತಂಕ. ನನಗು ಸಹ ಹಾಗೆಯೆ ಅನ್ನಿ, ನನ್ನ ಗೆಳೆಯ ಶ್ರೀದರ್ ಜೊತೆ ಆತುರದಲ್ಲಿ ರೈಲನ್ನು ಹತ್ತಿ , ಲಗೇಜ್ ಜೊತೆ ತಡಕಾಡುತ್ತ ಹೇಗೊ ನಮ್ಮ ಸೀಟನ್ನು ತಲುಪಿ, ಕೈಲಿದ್ದ ಲಗೇಜನ್ನು ಮೇಲಿನ ಸೀಟಿನಲ್ಲಿಟ್ಟು, ಸೀಟಿನ ಕೆಳಗೆ ಸ್ವಲ್ಪ ತುರುಕಿ ಹೇಗೊ ಉಸ್ಸಪ್ಪ ಅಂತ ಇಬ್ಬರು ನಮ್ಮ ಸೀಟಿನಲ್ಲಿ ಕುಳಿತೆವು.
   ಟೂಟೈರ್ ಎ.ಸಿ. ಯ ಬೋಗಿ ಅದು, ಮೇಲೆ ಹಾಗು ಕೆಳಗೆ ಎರಡು ಸೀಟುಗಳು. ಹೊರಗಿನ ಧಗೆ,ಸೆಕೆಯಲ್ಲಿ ಬಳಲಿ ಹತ್ತಿ ಒಳಗೆ ಕುಳಿತ ನನಗೆ, ಒಳಗಿನ ತಂಪು ಹವೆಯಿಂದ ದೇಹ ತಣ್ಣಗಾಗುತ್ತಿರುವಂತೆ ಹಾಯ್ ಅನ್ನಿಸಿತು. ಆಯಾಸ ಕಳೆಯಲು, ಕಾಲುಗಳನ್ನು ಸ್ವಲ್ಪ ಚಾಚಿದೆ. ನಾವು ಕುಳಿತ ಒಂದೆರಡು ನಿಮಿಷಗಳಲ್ಲಿಯೆ ರೈಲು ಹೊರಟಿತ್ತು, ಹೊರಟಿದ್ದು ತಕ್ಷಣಕ್ಕೆ ತಿಳಿಯಲೆ ಇಲ್ಲ , ಸ್ವಲ್ಪ ಚಲಿಸಿದ ನಂತರವೆ ಅನುಭವಕ್ಕೆ ಬಂದಿತು. ವಿಧ್ಯುತ್ ಚಾಲಿತ ಎಂಜಿನ್ ಗಳಾದ್ದರಿಂದ ನಾವು ಮುಂದಿನ ಬೋಗಿಯಲ್ಲಿದ್ದರು, ಅಂತಹ ಶಬ್ದವೇನಿರಲಿಲ್ಲ. ನಮ್ಮ ಮುಂದಿನ ಸೀಟನ್ನು ಗಮನಿಸಿದೆ, ಯಾರು ಇರಲಿಲ್ಲ,
'ಇದೇನು ಶ್ರೀಧರ್, ಖಾಲಿ ಇರುವಂತಿದೆ' ಎಂದೆ.
'ಇಲ್ಲ ಶಿವು, ಅದು ರಿಸರ್ವ್ ಆಗಿದೆ, ನಾನು ಹೊರಗೆ ಹಾಕಿದ್ದ ಲಿಸ್ಟ್ ನೋಡಿದೆ, ಯಾರೊ ರಾಮಮೂರ್ತಿ, ಮತ್ತು ಶೀಲರಾಮಮೂರ್ತಿ ಅಂತಿದೆ, ನಮ್ಮ ಮುಂದಿನ ಸೀಟುಗಳು' ಎಂದರು.
'ನೀವು ಬಿಡಿ ತುಂಬ ಚುರುಕು ಎಲ್ಲವನ್ನು ಬೇಗ ಗಮನಿಸಿಬಿಡುತ್ತೀರಿ' ಎಂದೆ ನಗುತ್ತ.
..
ಶ್ರೀದರ್ ಹಾಗು ನಾನು ಅಂದರೆ ಶಿವರಾಮಭಟ್ಟ ಇಬ್ಬರು ಬೆಂಗಳೂರಿನವರೆ, ಇಲಾಖೆಯ ತಾಂತ್ರಿಕ ತರಬೇತಿಯೊಂದಕ್ಕಾಗಿ ನಮ್ಮಿಬ್ಬರನ್ನು ದೆಹಲಿಗೆ ಕಳಿಸಿದ್ದರು. ದೆಹಲಿಯ ಗಝಿಯಾಭಾದ್ ನಲ್ಲಿಯ ತರಬೇತಿ ಕೇಂದ್ರದಲ್ಲಿ ತರಬೇತಿ ಹಾಗು ಅಲ್ಲಿಯೆ ಇದ್ದ ಹಾಸ್ಟೆಲ್ ನಲ್ಲಿ ವಾಸ. ಇಬ್ಬರಿಗು ಒಂದೆ ರೂಮು ಸಹ ಸಿಕ್ಕಿತ್ತು. ಬೆಂಗಳೂರಿನಲ್ಲಿ ಅನ್ನ ಸಂಬಾರ್ ಇಡ್ಲಿಗೆ ಹೊಂದಿಕೊಂಡಿರುವ ನಾನು ಅಲ್ಲಿ ಹಾಸ್ಟೆಲಿನಲ್ಲಿನ ರೋಟಿ, ದಾಲ್. ಸಬ್ಜಿ, ರುಕ್ಮಾ  ... ಮುಂತಾದ ಅಹಾರ ಕ್ರಮಗಳಿಗೆ ಒಗ್ಗಿಕೊಳ್ಳದೆ ಸುಸ್ತಾಗಿ ಹೋಗಿದ್ದೆವು, ಹೊರಗೆ ಹೋಟಲಿಗೆ ಹೋದರೆ ಅದಕ್ಕಿಂತ ಅಧ್ವಾನ ಹಾಗಾಗಿ ಹಾಸ್ಟೆಲ್ ಊಟವೆ ಕ್ಷೇಮವೆನಿಸಿತ್ತು. ಶನಿವಾರ ಬಾನುವಾರ ರಜಾಕಾಲದಲ್ಲಿ ದೆಹಲಿಯ ಸುತ್ತಮುತ್ತಲಿನ ಉತ್ತರಭಾರತದ ಎಲ್ಲ ಸ್ಥಳಗಳಿಗು ಹೋಗಿಬಂದೆವು, ಅಂತು ಹೇಗೊ ತರಬೇತಿ ಮುಗಿಸಿದಾಗ, ಸದ್ಯ ಮುಗಿಯಿತಲ್ಲಪ್ಪ, ಇನ್ನು ಎರಡುದಿನ ರೈಲಿನಲ್ಲಿ ಕುಳಿತರೆ ಬೆಂಗಳೂರು ಕಾಣುವೆವು ಎಂಬ ಭಾವ ಮನಸನ್ನು ತುಂಬಿ, ಮನ ಹಗುರವಾಗಿ ಉಲ್ಲಾಸ ತುಂಬಿತ್ತು.
..
ರೈಲು ಹೊರಟ ನಂತರ ಐದು ಹತ್ತು ನಿಮಿಷವಾಗಿರಬಹುದು ಸ್ವಲ್ಪ ವಯಸ್ಸಾದ ದಂಪತಿಗಳಿಬ್ಬರು ತಮ್ಮ ಬ್ಯಾಗುಗಳು ಜೊತೆ ಬಂದು, ನಮ್ಮ ಮುಂದಿನ ಸೀಟಿನ ಮೇಲಿಟ್ಟು, ತಮ್ಮ ಜೇಬಿನಿಂದ ರಿಸರ್ವ್ ಆಗಿದ್ದ ಟಿಕೆಟೆ ತೆಗೆದು ನೋಡಿ ಸೀಟಿನ ಮೇಲಿದ್ದ ನಂಬರನ್ನು ನೋಡಿ, ತಮ್ಮದೆ ಸೀಟು ಎಂದು ಖಾತರಿ ಮಾಡಿಕೊಳ್ಳುತ್ತ
"ಇದೆ ನಂಬರು ಸರಿ ಇದೆ ಕಣೆ' ಎನ್ನುತ್ತ ಇಬ್ಬರು ಕುಳಿತರು.
ಅವರನ್ನು ದಿಟ್ಟಿಸಿದೆ, ಆತನ ಮುಖ ನೋಡಿದೆ ಸ್ವಲ್ಪ ಪರಿಚಿತ ಮುಖ ಅನ್ನಿಸಿತು, ಆದರೆ ಪರಿಚಯವಿದಯೊ ಇಲ್ಲವೊ ತಿಳಿಯಲಿಲ್ಲ, ಸುಮ್ಮನಾದೆ.
ಸ್ವಲ್ಪ ಸಮಯದಲ್ಲಿಯೆ ಅವರು ಎದ್ದು ನಿಂತು, ತಮ್ಮ ಬ್ಯಾಗು ಮುಂತಾದವುಗಳನ್ನು ತಕ್ಕ ಸ್ಥಳ ನೋಡಿ ಜೋಡಿಸಲು ಪ್ರಾರಂಬಿಸಿದರು, ಬ್ಯಾಗಿನಿಂದ ಕಬ್ಬಿಣದ ಸರಪಳಿ ಮತ್ತು ಬೀಗ ತೆಗೆದು ಅದನ್ನು ಸೂಟೆಕೇಸಿಗೆ ಹಾಕಿ ಅದನ್ನು ಕೆಳಗೆ ಸೀಟಿಗೆ ಸೇರಿಸಿ ಬೀಗ ಹಾಕಿ ಕೆಳಗೆ ತಳ್ಳಿದರು, ನಂತರ ಕೆಲವು ಬ್ಯಾಗನ್ನು ಮೇಲಿನ ಸೀಟಿನಲ್ಲಿಟ್ಟರು. ಈ ಅವಸರದಲ್ಲಿ ನಾವು ಸ್ವಲ್ಪ ನಿಲ್ಲ ಬೇಕಾಯಿತು. ಆತ
"ನಿಮಗೆ ತೊಂದರೆ ಕೊಡುತ್ತಿದ್ದೇವೆ" ಅಂದರು ನನ್ನ ಕಡೆ ತಿರುಗಿ.
ನಾನು "ಅದೇನು ಇಲ್ಲ ಇನ್ನು ಎರಡು ರಾತ್ರಿ ಇಲ್ಲೆ ಕಳೆಯಬೇಕಲ್ಲ ಹಾಗಾಗಿ ಎಲ್ಲ ಸರಿಪಡಿಸಲೆ ಬೇಕಲ್ಲವೆ" ಎಂದೆ.
 ಅವರು ಎಲ್ಲ ಸೇರಿಸುತ್ತಿದ್ದಂತೆ, ನಾನು ಮತ್ತು ಶ್ರೀದರ್ ಸಹ ಎದ್ದು ಲಗೇಜ ಎಲ್ಲವನ್ನು ಸರಿಮಾಡಿ ಟವೆಲ್, ತೆಳುವಾದ ಹೊದಿಕೆಯೊಂದನ್ನು ಸೀಟಿನ ಮೇಲಿಟ್ಟು, ಶೂಗಳನ್ನು ಕಳಚಿ, ಕೆಳಗೆ ತಳ್ಳಿ , ಬ್ಯಾಗಿನಿಂದ ರಬ್ಬರ್ ಚಪ್ಪಲಿ ತೆಗೆದು ಕೆಳಗೆ ನೆಲದಮೇಲೆ ಹಾಕಿದೆವು, ಅಷ್ಟರಲ್ಲಿ ರೈಲಿನ ಸಿಧ್ಬಂದಿ ಎಲ್ಲರಿಗು ರಗ್ಗು ಮುಂತಾದವುಗಳನ್ನು ಕೊಡುತ್ತ ಹೋದ, ಶ್ರೀದರ್
"ಇದೆ ನೋಡಿ ತಮಾಷಿ, ಚಳಿ ಬೇಕು ಅಂತ ಎ.ಸಿ. ಟೈರ್ ನಲ್ಲಿ ಸೀಟು ಬುಕ್ಕ್ ಮಾಡುವುದು, ನಂತರ ಚಳಿಗೆ ಬೇಕು ಎಂದು ರಗ್ಗನ್ನು ಹೊದೆಯುವುದು ' ಅಂತ ನಕ್ಕರು,
ಮುಂದಿದ್ದವರನ್ನು ವಿಚಾರಿಸಿದೆ  ನೀವು ಎಲ್ಲಿಯವರೆಗು ಬೆಂಗಳೂರಿಗ ಎಂದು, ಅವರು ನಮ್ಮ ವಿವರಗಳನ್ನೆಲ್ಲ ಪಡೆದರು. ನಾನು ಅವರಿಗೆ ಪರಿಚಯಿಸಿಕೊಂಡೆ
"ನನ್ನ ಹೆಸರು ಶಿವರಾಮ ಭಟ್ಟನೆಂದು ಹಾಗು ಇವರು ನನ್ನ ಗೆಳೆಯ ಶ್ರೀಧರ" ಎನ್ನುತ್ತ.
 ಅವರು ತಮ್ಮ ಹೆಸರು ಹಾಗು ಪತ್ನಿಯ ಹೆಸರು ತಿಳಿಸಿದರು, ನಾವು ಅದನ್ನು ಆಗಲೆ ಅರಿತಿದ್ದೆವು ಎಂದು ನಾನು ತಿಳಿಸಲಿಲ್ಲ.  ಹಾಗು ಹೀಗು ಸಮಯ ಕಳೆದಂತೆ ಊಟವು ಬಂದಿತ್ತು. ರಾತ್ರಿ ಹತ್ತುವರೆ ಕಳೆದಂತೆ, ನಿದಾನವಾಗಿ ಎಲ್ಲರು ಮಲಗಲು ಅಣಿಯಾದರು, ಮಂದವಾದ ಕೆಂಪು ನೀಲಿ ಬೆಳಕು ಒಳಗೆಲ್ಲ ತುಂಬಿದಂತೆ, ಒಳಗೆ ಮಾತೆಲ್ಲ ನಿಂತು ನಿಶ್ಯಬ್ದ ಆವರಿಸಿತು.

   ನಾನು ಕೆಳಗಿನ ಸೀಟಿನಲ್ಲಿ ಮಲಗಿದ್ದೆ, ಕಣ್ಣು ಮುಚ್ಚುತ್ತಿರುವಂತೆ, ಕಂಬಿಯಮೇಲೆ ರೈಲು ಓಡುತ್ತಿರುವ, ಉಜ್ಜುವ ಮುಂತಾದ ಸತತ ಶಬ್ದ. ರೈಲು ತನ್ನ ವೇಗವನ್ನು ಹೆಚ್ಚಿಸಿಕೊಂಡಿತ್ತು ಅನ್ನಿಸುತ್ತೆ. ಮಲಗಿದಂತೆ ಸಮಯ ನೋಡಿದೆ ರಾತ್ರಿ ಹನ್ನೊಂದು ಕಳೆದಿದ್ದು, ರೈಲು ರಾಜಸ್ಥಾನ ಮದ್ಯಪ್ರದೇಶದ ಗಡಿಯ ಹತ್ತಿರದಲ್ಲೆಲ್ಲೊ ಇರಬೇಕು ಅಂದು ಕೊಂಡೆ.  ಯಾವಾಗಲೊ ನಿದ್ದೆ ಹತ್ತಿತ್ತು.
 ...

  ಮರುದಿನ ಏಳೂವಾಗ ಬೆಳಗಿನ ಆರುವರೆ ದಾಟಿತ್ತು, ಎದ್ದು ಏನು ಕೆಲಸ ಮಾಡುವಂತಿಲ್ಲ ಎನ್ನುವ ನಿರಾಳ, ಅಲ್ಲದೆ ದಿನ ಪೂರ್ತಿ ರೈಲಿನ ಪ್ರಯಾಣ ಬಾಕಿಯಿತ್ತು. ಪಕ್ಕದಲ್ಲಿ ಕಾಫಿ ಇಟ್ಟು ಹೋಗಿದ್ದ ರೈಲಿನ ಸಿದ್ಬಂದಿ ಅಂದರೆ ಸ್ವಲ್ಪ ಬಿಸಿನೀರು ಇನ್ಸ್ಟಂಟ್ ಕಾಪಿಪುಡಿ ಹಾಗು ಹಾಲಿನಪುಡಿಸಕ್ಕರೆ ಪುಡಿ ಇತ್ಯಾದಿ, ಎದ್ದು ಹೋಗಿ ಹಲ್ಲು ಬ್ರಷ್ ಮಾಡಿ ಬಂದು, ಕಾಫಿ ತಯಾರಿಸಿ ಕುಡಿದೆ, ಸ್ವಲ್ಪ ತಣ್ಣಗಿತ್ತು. ಎಲ್ಲರು ನಿದಾನಕ್ಕೆ ಏಳುತ್ತಿದ್ದರು. ಹಾಗಾಗಿ ಬಾತ್ರೂಮ್ ಅಂತ ರಷ್ ಇರಲಿಲ್ಲ. ನನ್ನ ಎದುರಿನ ಕೃಷ್ಣಮೂರ್ತಿ ಸಹ ಎದ್ದು ಕುಳಿತು ಕಾಫಿ ಮುಗಿಸಿ ದಿನದ ಪೇಪರ್ ಓದುತ್ತಿದ್ದರು. ನಾನು ಹಾಗೆ ಎದ್ದು ಸ್ವಲ್ಪ ಕಾಲಾಡಿ ಬರೋಣ ಅಂತ ಹೊರಟೆ. ರೈಲು ಇಟಾರ್ಸಿ ನಿಲ್ದಾಣ ದಾಟಿ ನಾಗಪುರದತ್ತ ಹೋಗುತ್ತಿತ್ತು. ಹಾಗೆ ಮುಖತೊಳೆದು ಪ್ರೆಷ್ ಆಗಿಬರುವದರಲ್ಲಿ ಬೆಳಗಿನ ಉಪಹಾರ ಬಂದಿತ್ತು. ನಾನು ಹಾಗು ಶ್ರೀದರ್ ಅದನ್ನು  ಸಂಹಾರ ಮಾಡುತ್ತಿರುವಾಗ. ಎದುರಿನ ದಂಪತಿಗಳು, ಸುಮ್ಮನೆ ಕುಳಿತ್ತಿದ್ದರು. ನಾನು ಅವರನ್ನು
"ಏಕೆ ನೀವು ತೆಗೆದುಕೊಳ್ಳುವದಿಲ್ಲವೆ?" ಎಂದೆ. ಅದಕ್ಕವರು
"ಹಸಿವೇನೊ ಇದೆ, ತಿನ್ನ ಬೇಕು, ಆದರೆ ಇಲ್ಲಿ ಸ್ನಾನವಿಲ್ಲ ಹಾಗೆ ತಿನ್ನಲು ಎ೦ತದೊ ಮುಜುಗರ ನೋಡಿ" ಎಂದರು. ಅದಕ್ಕೆ ನಾನು
"ಹೌದು ನಮಗೂ ಹಾಗೆ ಅನ್ನಿಸುತ್ತೆ ಅದರೇನು ಮಾಡುವುದು ಅನಿವಾರ್ಯ, ಪರಸ್ಥಳ, ದೋಷವಿಲ್ಲ ಅಂತ ತಿಂದುಬಿಡಿ" ಎಂದೆ.
ಅವರು ನಗುತ್ತ
"ನೀವನ್ನುವುದು ಸರಿಯೆ, ದೋಷವಿಲ್ಲ, ಇರಲಿ ಬಿಡಿ, ಸ್ವಲ್ಪ ಹಸಿದಿದ್ದರೆ ಏನಾಗುವುದಿಲ್ಲ, ಒಟ್ಟಿಗೆ ಊಟ ಮಾಡಿದರಾಯಿತು, ಈಗ ಇನ್ನೊಮ್ಮೆ ಕಾಫಿ ಕುಡಿದು ಬಿಡುತ್ತೇವೆ ಇಬ್ಬರು" ಎಂದರು.
ನಾನು ತೀರ ಬಲವಂತ ಮಾಡಲು ಹೋಗಲಿಲ್ಲ , ಎಷ್ಟಾದರು ಪರಿಚಿತರೇನಲ್ಲ ಸಹ ಪ್ರಯಾಣಿಕರು ಎಂಬ ಎಚ್ಚರವಿತ್ತು. ಈಗ ಸಮಯ ಅನ್ನಿಸಿ ಕೇಳಿದೆ
"ಸಾರ್ ನೋಡಿ ತಪ್ಪು ತಿಳಿಯಬೇಡಿ, ನಿನ್ನೆಯಿಂದ ಅಂದುಕೊಳ್ಳುತ್ತಿದ್ದೇನೆ, ನಿಮ್ಮನ್ನು ಎಲ್ಲಿಯೊ ನೋಡಿದ್ದೇನೆ, ತುಂಬಾ ಪರಿಚಿತ ಮುಖ ಅನ್ನಿಸುತ್ತಿದೆ, ಆದರೆ ಎಲ್ಲಿ ಅಂತ ಹೊಳೆಯುತ್ತಿಲ್ಲ" ಅಂದೆ.
"ಹೌದಾ? ಹಾಗೆ ಅನ್ನಿಸುತ್ತ, ಹೋಗಲಿ ನೆನಪಿಸಿಕೊಳ್ಳಿ, ಎಲ್ಲಿ ನನ್ನನ್ನು ನೋಡಿರಬಹುದು ಅಂತ, ಹಾಗಾದರು ಸಂಜೆಯ ವರೆಗೂ ಸಮಯ ಕಳೆಯಬಹುದು, ಹೇಗು ನಾಳೆ ಬೆಳಗ್ಗೆಯಲ್ಲವೆ ನಾವು ಬೆಂಗಳೂರು, ತಲುಪುವುದು "  ಅಂದರು ಸ್ವಲ್ಪ ತಮಾಷಿಯಾಗಿಯೆ.
ನಾನು ತಲೆಗೆ ಮತ್ತೆ ಕೆಲಸಕೊಟ್ಟೆ, ಈತನನ್ನು ಎದುರಿಗೆ ನೋಡಿಲ್ಲ ಅನ್ನಿಸುತ್ತೆ, ಎಲ್ಲಿರಬಹುದು, ಹೌದು, ಇದ್ದಕ್ಕಿದ್ದಂತೆ ಹೋಳೆಯಿತು, ನಿಜ ಟೀವಿಯಲ್ಲಿ ನೋಡಿರುವ ಮುಖ ಎನಿಸುತ್ತಿದ್ದಂತೆ, ಮತ್ತೆ ನೆನಪು ನಿಚ್ಚಳವಾಯಿತು, ನಾನು ಸಂತೋಷ ಆಶ್ಚರ್ಯದಿಂದ
"ಅರೆ ನೀವು  ಉದಯಸೂರ್ಯ ಟೀವಿಯಲ್ಲಿ ದಿನಭವಿಷ್ಯ ಹೇಳುತ್ತಿರಲ್ಲವೆ, ಹೌದು ಗ್ರಹತಾರಲೋಕ ಕಾರ್ಯಕ್ರಮದಲ್ಲಿ ಬರುವ ರಾಮಮೂರ್ತಿಗಳು ನೀವು" ಅನ್ನುವಾಗ , ಆತ
"ಶಿವರಾಮುರವರೆ ನೀವು ಬಿಡಿ, ಚುರುಕಾಗಿದ್ದೀರಿ, ನಿಮ್ಮ ನೆನಪು ಪಕ್ಕಾ ಬಿಡಿ" ಎಂದರು ನಗುತ್ತ.
 ನನ್ನ ಪಕ್ಕ ಕುಳಿತು ಕಾಫಿ ಹೀರುತ್ತಿದ್ದ ಶ್ರೀಧರ್ ಸಹ ಆಶ್ಚರ್ಯದಿಂದ ಅವರ ಮುಖ ದಿಟ್ಟಿಸಿದ. ಅಕ್ಕ ಪಕ್ಕದ ಸೀಟಿನ ಕನ್ನಡ ಬರುವ ಕೆಲವರು ಇತ್ತ ತಿರುಗಿ ಇವರನ್ನೆ ನೋಡುತ್ತಿದ್ದರು, ನಾನು ಅಷ್ಟು ಜೋರಾಗಿ ಹೇಳಿದ್ದೆ.  ಹೀಗೆ ಅವರ ಜೊತೆ ಮಾತು ಸಾಗಿತ್ತು, ಅವರು ಅಗಾಗ್ಯೆ ದೆಹಲಿಗೆ ಈರೀತಿ ಬರುವರಂತೆ, ಕೆಲವರು ಅವರನ್ನು ಕರೆಸಿಕೊಳ್ಳುತ್ತಿದ್ದರು, ತಮ್ಮ ಭವಿಷ್ಯ ಕೇಳಲು. ಅಲ್ಲದೆ ಅವರ ಮಗಳು ಅಳಿಯ ಸಹ ದೆಹಲಿಯಲ್ಲಿಯೆ ವಾಸವಾಗಿದ್ದರು, ಅಳಿಯನಿಗೆ ದೆಹಲಿಯ ಕರ್ನಾಟಕ ಭವನದಲ್ಲಿಯೆ ಕೆಲಸವಂತೆ. ಕೆಲವು ಸಾರಿ ಪ್ಲೇನಿನಲ್ಲಿ ಓಡಾಡುತ್ತಿದ್ದರು, ಈ ಸಾರಿ ಏಕೊ  ಸ್ವಲ್ಪ ನಿದಾನಕ್ಕೆ ರಾಜದಾನಿ ರೈಲಿನಲ್ಲಿ ಹೊರಟಿದ್ದರು, ಹಾಗಾಗಿ ನಾವು ಅವರನ್ನು ಬೇಟಿ ಮಾಡುವ ಅವಕಾಶವಾಗಿತ್ತು.
  ನನಗಂತು ಟೀವಿಯಲ್ಲಿ ಕಾರ್ಯಕ್ರಮ ಕೊಡುವ ಒಬ್ಬರನ್ನು ಬೇಟಿ ಮಾಡಿದ್ದು ಸಂತಸ ತಂದಿತು. ಅವರಿಂದ ಟೀವಿ ಮಾಧ್ಯಮಕ್ಕೆ ಸಂಬಂಧ ಪಟ್ಟ ಹಲವು ವಿಷಯಗಳನ್ನು ಕೆದಕಿ ತಿಳಿದುಕೊಂಡೆ,. ಆದರು ಅದೇನೊ ಭವಿಷ್ಯ ಎಂದರೆ ನನಗೆ ಅದೇನೊ ತಾತ್ಸಾರ ಅದೊಂದೊ ಮೂಡನಂಭಿಕೆ, ಜನರನ್ನು ಮೋಸ ಮಾಡಲು ಇರುವ ಒಂದು ಸಾಧನ ಎಂದೆ ನನ್ನ ಅನಿಸಿಕೆ. ಆದರೆ ನನ್ನ ಭಾವನೆ ಅವರಿಗೆ ನೇರವಾಗಿ ತಿಳಿಸಲು, ನಾಗರೀಕತೆ ಅಡ್ಡ ಬರುತಿತ್ತು ಹಾಗಾಗಿ ಸುಮ್ಮನಾದೆ. ಅವರು ಎದ್ದು ಏಕೊ ಸುಮ್ಮನೆ ಹೊರಹೋದಾಗ,
ಶ್ರೀಧರ್
"ರೀ ಶಿವರಾಮು, ಹೇಗು ಒಳ್ಳೆ ಭವಿಷ್ಯ ಹೇಳುವರೆ ಎದುರಿಗೆ ಸಿಕ್ಕಿದ್ದಾರೆ, ಅಲ್ಲದೆ ಅವರು ಯಾವ ಕೆಲಸವು ಇಲ್ಲದೆ ವಿರಾಮದಲ್ಲಿದ್ದಾರೆ,ಬೆಂಗಳೂರು ತಲುಪುವಲ್ಲಿ ನಾವು ಏಕೆ ಭವಿಷ್ಯ ಕೇಳಿ ತಿಳಿಯಬಾರದು" ಎಂದರು

ನಾನು "ಶ್ರೀದರ್ ನೀವು ಓದಿದವರಾಗಿದ್ದು ಇದನ್ನೆಲ್ಲ ನಂಬುತ್ತೀರ? , ಸುಮ್ಮನಿರಿ, ಏನೊ ಪಾಪ ವಯಸಾದವರು, ಅವರ ಜೀವನಕ್ಕೆ ಈ ವ್ಯಾಪಾರ ಒಂದು ದಾರಿ ಅಂತ ಸುಮ್ಮನಿರಬೇಕಷ್ಟೆ ನನಗಂತು ಈ ಬೂಟಾಟಿಕೆಯಲ್ಲೆಲ್ಲ ನಂಬಿಕೆ ಇಲ್ಲ, ಎಂದೊ ಮುಂದೆ ನಡೆಯುವದನ್ನ ಮನುಷ್ಯ ಮಾತ್ರರಾದ ನಾವು ತಿಳಿಯಲು ಸಾದ್ಯವಾದಲ್ಲಿ ನಾವು ಆಗ ಮನುಷ್ಯರಾಗುವದಿಲ್ಲ, ದೇವರಾಗಿಬಿಡುತ್ತೇವೆ ಅಷ್ಟೆ" ಎಂದೆಲ್ಲ ಹೇಳೂತ್ತಿದ್ದೆ,
 ಅಷ್ಟರಲ್ಲಿ ಆತ ಹಿಂದುರಿಗಿ ಬಂದು ತಮ್ಮ ಜಾಗದಲ್ಲಿ ಕುಳಿತುಕೊಳ್ಳುತ್ತ
 "ಏನೊ ಸ್ನೇಹಿತರಿಬ್ಬರು ಯಾವುದೊ ವಿಷಯ ಚರ್ಚೆ ಮಾಡುತ್ತಿದ್ದೀರಿ " ಅಂದರು, ನಾನು ಮಾತು ಮುಂದುವರೆಸುವ ಇಷ್ಟವಿಲ್ಲದೆ
 "ಏನು ಇಲ್ಲ ಸಾರ್, ಹೀಗೆ ಏನೊ ವಾದವಷ್ಟೆ" ಎಂದು ಸುಮ್ಮನಾದೆ, ಶ್ರೀದರ್ ಸಹ ಏಕೊ ನನ್ನ ಮುಖ ನೋಡುತ್ತ ಆ ಮಾತು ನಿಲ್ಲಿಸಿ ಬಿಟ್ಟರು.

ಹೀಗೆ ಸಮಯ ಕಳೆಯುತ್ತಿತ್ತು, ಬೆಳಗಿನ ಹತ್ತುವರೆ ದಾಟುತ್ತಿತ್ತು ರೈಲು ಸ್ವಲ್ಪ ಕಾಲ ನಿಂತಿತು, ನಾನು ಹಾಗು ಶ್ರೀಧರ್ ಕೆಳಗಿಳಿದೆವು, ಮಹರಾಷ್ಟ್ರದ ನಾಗಪುರ ನಿಲ್ದಾಣ. ನಾವು ಸ್ವಲ್ಪ್ಲ ಕಿತ್ತಳೆ ಹಣ್ಣು ಕೊಂಡೆವು, ರೈಲು ಹತ್ತು ನಿಮಿಷ ಸಹ ನಿಲ್ಲದೆ ಮತ್ತೆ ಹೊರಟಿತು, ನಾವಿಬ್ಬರು ಓಡುತ್ತ ಹೋಗಿ ರೈಲು ಹತ್ತಿದೆವು. ನಮ್ಮ ಜಾಗಕ್ಕೆ ಬಂದು, ಎದುರಿಗಿದ್ದ  ಟೀವಿ ಭವಿಷ್ಯಕಾರರಿಗೆ, ಎರಡು ಹಣ್ಣು ಕೊಟ್ಟು
"ನೀವು ಬೆಳಗಿನ ಉಪಹಾರ ಸಹ ಮಾಡಲಿಲ್ಲ ಇದನ್ನಾದರು ತಿನ್ನಿ " ಎಂದು ಅವರು ಬೇಡ ಅನ್ನುತ್ತಿದ್ದರು ಕೇಳದೆ ಉಪಚಾರ ಮಾಡಿದೆವು. ಶ್ರೀದರ್ ನನಗೆ ಕಿವಿಯಲ್ಲಿ ಕಿಚಾಯಿಸಿದರು
"ಏನಪ್ಪ ಹೇಗೊ ಇವರಿಗೆ, ಬಕೆಟ್ ಹಿಡಿದು, ನೀವು ಸಹ ಟೀವಿಯಲ್ಲಿ ಭವಿಷ್ಯ ಹೇಳಲು ಇವರ ಸಹಾಯಕರಾಗಿ ಹೋಗಬಿಡಿ " ಎಂದು,
 ನಾನು ಸಹ ತಣ್ಣನೆಯ ದ್ವನಿಯಲ್ಲಿ ಎದುರಿಗೆ ಇರುವವರಿಗೆ ಕೇಳದಂತೆ "ನೀವು ಬಾಯಿಮುಚ್ಚಿಕುಳಿತರೆ ಸಾಕು ಉಪಕಾರ" ಅಂತ ತಿಳಿಸಿದೆ.
 ನಾವು ಕೊಟ್ಟ ಕಿತ್ತಲೆ ತಿನ್ನುವದರಲ್ಲಿ ರೈಲಿನ  ಕ್ಯಾಟರಿಂಗ್ ನವರು ಮತ್ತೆ "ಕಿತ್ತಲೆ ಜೂಸ ತಂದು ಎಲ್ಲರಿಗು ಕೊಟ್ಟಾಗ, ನಮ್ಮ ಜೊತೆ ಎದುರಿಗಿದ್ದ ರಾಮಮೂರ್ತಿ ಸಹ ನಗುತ್ತಿದ್ದರು. ಹೀಗೆ ನಡು ಮಧ್ಯಾನವಾಗಲು , ರೈಲಿನ ಊಟ ಬಂದಿತು, ಬೇರೆ ಯಾವ ದಾರಿಯು ಕಾಣದೆ ಅದನ್ನೆ ತಿಂದು, ಮತ್ತೆ ಸೀಟಿನ ಮೇಲೆ ಒರಗಿ ಸ್ವಲ್ಪ ಕಾಲ ನಿದ್ದೆಗೆ ಇಳಿದೆವು.

 ಮತ್ತೆ ಕಾಫಿ ಎಂದು ಎದ್ದಾಗ ಆಂದ್ರದ ಕಾಜಿಪೇಟೆ ಜಂಕ್ಷನ್, ಇನ್ನೇನು ಸ್ವಲ್ಪ ಹೊತ್ತಿನಲ್ಲಿಯೆ, ಸಿಕಾಂದರಭಾದ ಬರುವುದೇನೊ, ಇನ್ನೇನು ಈ ರಾತ್ರಿಕಳೆದರೆ ಬೆಳಗ್ಗೆ ಬೆಂಗಳೂರು ಅನ್ನಿಸಿ ಮನಕ್ಕೆ ಎಂತದೊ ಖುಷಿ.  

   ಶ್ರೀಧರ್ ಎದುರಿಗೆ ಕುಳಿತವರನ್ನು ಉದ್ದೇಶಿಸಿ "ಯಾವುದು ಸಾರ್ ಪುಸ್ತಕ ಓದುತ್ತಿದ್ದೀರಿ" ಎಂದ. ಅವರು ಅದನ್ನು ನಮ್ಮ ಕೈಗೆ ಕೊಟ್ಟರು ಅದೊಂದು ಸಂಖ್ಯಾಶಾಸ್ತ್ರ ಹಾಗು ವಾಸ್ತುವಿಗೆ ಸಂಬಂದಿಸಿದ ಪುಸ್ತಕ, ಯಾವುದೊ ಆಲ್ ಇಂಡಿಯ ಫೇಡರೇಷನ್ ಆಫ್ ಅಷ್ಟ್ರಲಾಜಿಕಲ್ ಸೊಸೈಟಿ ಎಂಬ ಪ್ರಕಾಶನದಲ್ಲಿ ಪ್ರಕಟವಾಗಿರುವುದು. ನನಗೆ ಆಶ್ಚರ್ಯ ಈ ರೀತಿಯ ಸೊಸೈಟಿ ಸಹ ಇದೆಯ ಎಂದು. ಮತ್ತೆ ಮಾತು ಭವಿಷ್ಯದ ಕಡೆಗೆ ಹೊರಳಿತು. ಸ್ವಲ್ಪ  ಹೊತ್ತಾದ ಮೇಲೆ ಈ ನಾಚಿಕೆ ಇಲ್ಲದ ಶ್ರೀದರ್
"ನನ್ನ ಭವಿಷ್ಯವನ್ನು ಹೇಳುತ್ತೀರ" ಎಂದು ಕೇಳೆ ಬಿಟ್ಟರು, ನನಗೆ ಬೇಸರವಾಗಿತ್ತು ಎಂತ ಮೂರ್ಖತನ, ವಿದಿಯಿಲ್ಲದೆ ಸುಮ್ಮನೆ ಕುಳಿತಿದ್ದೆ ಗಂಭೀರವಾಗಿ ಕುಳಿತಿದ್ದ ನನ್ನನ್ನು ಕಂಡ ರಾಮಮೂರ್ತಿಗಳು
"ಏಕೆ ನಿಮಗೆ ಭವಿಷ್ಯ ತಿಳಿಯುವ ಕುತೂಹಲವಿಲ್ಲವೆ " ಎಂದರು. ನಾನು ಸ್ವಲ್ಪ ಅಸಹನೆಯಿಂದ ಕುಳಿತಲ್ಲೆ ಮಿಸುಕಾಡಿದೆ, ಅವರ ಪ್ರಶ್ನೆಗೆ ಉತ್ತರಿಸುವ ಬದಲು ಅವರನ್ನು ಕುರಿತು
"ಸಾರ್ ಹೇಗು ನೀವು ವಿಷಯ ತಿಳಿದವರು ಎದುರಿಗಿದ್ದೀರಿ, ತಪ್ಪು ತಿಳಿಯ ಬೇಡಿ, ಈ ಭವಿಷ್ಯ ಅಥವ ಗ್ರಹಗತಿ ಎನ್ನುವ ಈ ಶಾಸ್ತ್ರಗಳೆಲ್ಲ ಎಷ್ಟರಮಟ್ಟಿಗೆ ನಿಜ, ಇವುಗಳನ್ನೆಲ್ಲ ಹೇಗೆ ನಂಬುವುದು, ಇದಕ್ಕೆಲ್ಲ ಏನಾದರು, ತರ್ಕಬದ್ದ ಆದಾರವಿದೆಯೆ" ಎಂದು ಕೇಳಿದೆ. ಶ್ರೀಧರ್ ಮುಖದಲ್ಲಿ ಬೇಸರ ಕಾಣಿಸಿತು, ಒಂದು ಮೌನ, ನಂತರ ಆತ ನಿದಾನವಾಗಿ ನುಡಿದರು
"ಎಷ್ಟೋ ಸಾವಿರ ವರುಷಗಳ ಇತಿಹಾಸವಿರುವ ಈ ಶಾಸ್ತ್ರವನ್ನು, ಈಗೆ ಕೆಲವರು ಬುದ್ದಿ ಜೀವಿಗಳು ಹೀಗೆಳೆಯುವುದು ಸಾಮಾನ್ಯ, ಆದರೆ ಆರ್ಥಮಾಡಿಕೊಳ್ಳಿ, ವಿದೇಶಿಯರು ಈಗಿನ ಖಗೋಳ ಶಾಸ್ತ್ರವನ್ನು ಪ್ರಚುರಪಡಿಸುವಮೊದಲೆ ನಮ್ಮವರು  ಬರಿ ಲೆಕ್ಕಚಾರವನ್ನು ಅನುಸರಿಸಿ, ಗ್ರಹಣಗಳನ್ನು  ಸೂರ್ಯ ಚಂದ್ರರ ಚಲನೆಯನ್ನು ನಕ್ಷತ್ರಗಳ ಜಾಗವನ್ನು ಕರಾರುವಕ್ಕಾಗಿ ಗುರುತಿಸುತ್ತಿದ್ದರು. ಅವರು ಯಾವ ದೂರದರ್ಶಕಗಳನ್ನು ಕಂಡವರಲ್ಲ. ಪಂಚಾಂಗ ಶಾಸ್ತ್ರದಲ್ಲಿ ಪ್ರತಿ ಲೆಕ್ಕಚಾರವು ಕರಾರುವಾಕ್ಕಾಗಿದೆ, ಆ ಆದಾರದ ಮೇಲೆ ಹೇಳೂವ ಭವಿಷ್ಯವು ಸಹ ಪರಿಪೂರ್ಣವೆ, ಅದನ್ನು ಹೇಳುವ ವ್ಯಕ್ತಿ ತಿಳಿದವನಾಗಿರಬೇಕಷ್ಟೆ"
ನನಗೇಕೊ ಇದ್ದಕ್ಕಿದಂತೆ ವಾದಮಾಡುವ ಹುಮ್ಮಸ್ಸು ಹುಟ್ಟಿದಂತಿತ್ತು, ದ್ವನಿಯಲ್ಲಿದ್ದ ವಿನಯವು ಸ್ವಲ್ಪ ಕಡಿಮೆ ಆಗಿತ್ತು ಅನ್ನಿಸುತ್ತೆ
"ಅದು ಸರಿ ಇವರೆ, ನಾನು ನಿಮ್ಮ ಪಂಚಾಗ ಶಾಸ್ತ್ರವನ್ನು , ಅದರಲ್ಲಿನ ಖಗೋಳ ಜ್ಞಾನವನ್ನು ಅಲ್ಲಗಳೆಯುತ್ತಿಲ್ಲ, ಜ್ಯೋತಿಷ್ಯದಲ್ಲಿ ಲೆಕ್ಕಚಾರಕ್ಕೆ ಸಂಭಂದಪಟ್ಟಂತೆ ಅದು ಪರಿಪೂರ್ಣವೆ ಅದರಲ್ಲಿ ಯಾವುದೆ ಬಿನ್ನಾಭಿಪ್ರಾಯವಿಲ್ಲ, ಆದರೆ ನನ್ನ ತಕರಾರು ಇರುವುದು ... ಅದರ ಮುಂದಿನ ಭಾಗ ಫಲಜೋತಿಷ್ಯದ ಬಗ್ಗೆ , ಅದನ್ನು ಕೇವಲ ವ್ಯಾವಹಾರಿಕ ದೃಷ್ಟಿಯಿಂದ ಕಲ್ಪಿಸಲಾಗಿದೆ ಎಂದು ನನ್ನ ಅನಿಸಿಕೆ" ಎಂದೆ.
"ನೀವು ತಿಳಿದಂತೆ ಫಲಜೋತಿಷ್ಯವು ಕೇವಲ ಕಲ್ಪನೆಯಲ್ಲ, ಅದು ಲೆಕ್ಕಚಾರದ ಖಗೋಳ ಶಾಸ್ತ್ರವನ್ನು , ಗ್ರಹಗಳ ಚಲನೆಯನ್ನು ರಾಶಿ, ನಕ್ಷತ್ರಗಳ ವಿಭಾಗವನ್ನು ಅವಲಂಭಿಸಿದೆ ಹಾಗಾಗಿ ಅಷ್ಟು ನಿಷ್ಟುರವಾಗಿ ಅದನ್ನು ನಿರಾಕರಿಸಲು ಸಾದ್ಯವಿಲ್ಲ" ಎಂದರು.
 ನನಗೆ ಹುರುಪು ಜಾಸ್ತಿಯಾಗಿತ್ತು ದ್ವನಿಯು ಸ್ವಲ್ಪ ಏರಿತ್ತು, ವಾದಕ್ಕೆ ನಿಂತನಂತರ ಹೇಗೊ ಗೆಲ್ಲಲ್ಲೆ ಬೇಕು ಅನ್ನುವುದು ಸಹಜವಲ್ಲವೆ
"ನೋಡಿ ನೀವೆ ಹೇಳುತ್ತೀರಿ ಅದು ಎಲ್ಲೊ ಇರುವ ಗ್ರಹ ನಕ್ಷತ್ರಗಳ ಚಲನೆಯನ್ನು ಅವಲಂಬಿಸಿದ ತರ್ಕವೆಂದು, ನಿಮ್ಮ ವಾದದಲ್ಲಿ ತಪ್ಪಿದೆಯಲ್ಲವೆ ಎಲ್ಲೊ ಇರುವ ಗ್ರಹನಕ್ಷತ್ರಗಳು ಮನುಷ್ಯನ ಭವಿಷ್ಯದ ಮೇಲೆ ನಿಜ ಜೀವನದ ಆಗು ಹೋಗುಗಳ ಮೇಲೆ ಪ್ರಭಾವ ಬೀರುತ್ತವೆ ಅನ್ನುವುದೆ ಹಾಸ್ಯಾಸ್ಪದವಲ್ಲವೆ, ಅಲ್ಲದೆ ರಾಶಿಗಳಿಗು ನಕ್ಷತ್ರಗಳಿಗು ತಳುಕುಹಾಕಿರುವುದೆ ಹೊಂದುತ್ತಿಲ್ಲ, ನನಗೆ ಎಲ್ಲೊ ಓದಿನ ನೆನಪಿನಂತೆ ಈ ಆಕಾಶವನ್ನು ಹನ್ನೆರಡು ರಾಶಿಗಳಾಗಿ ವಿಭಾಗಮಾಡಿರುವುದು ಮೆಡಿಟರೇನಿಯನ್ ಸಮುದ್ರತೀರದಲ್ಲಿದ್ದ ಕುರುಬರ ಕಲ್ಪನೆ, ಅದು ಹೇಗೋ ಭಾರತೀಯ ಖಗೋಳ ವಿಭಾಗದೊಂದಿಗೆ ತಳಕುಹಾಕಿಕೊಂಡಿತು ಹಾಗಾಗಿ ಹನ್ನೆರಡು ರಾಶಿಗಳಲ್ಲಿ ಇಪ್ಪತ್ತೇಳು ನಕ್ಷತ್ರಗಳನ್ನು ಸಮವಾಗಿ ಹಂಚಲು ಕಷ್ಟಪಡಲಾಗಿದೆ ಈ ಚಲನೆಗಳಿಗು ನಮ್ಮ ಭವಿಷ್ಯಕ್ಕು ಯಾವ ಸಂಭಂದವಿರಲು ಸಾದ್ಯ ಇದೆಲ್ಲ ಕಪೋಲಕಲ್ಪಿತ" ಎಂದೆ.
  ಅವರು ಅಷ್ಟಾದರು ಏಕೊ ಸಹನೆಕಳೆದು ಕೊಳ್ಳಲಿಲ್ಲ , ಬಹುಷಃ ಬಹಳಷ್ಟು ಬಾರಿ ಇಂತಹ ವಾದಗಳನ್ನು ಕೇಳಿದ್ದರೊ ಏನೊ. ನನ್ನ ಸ್ನೇಹಿತ ಶ್ರಿಧರ್ ಗೆ ಕೋಪಬಂದಿರುವುದು ಸ್ವಷ್ಟವಾಗಿತ್ತು, ಅವರು ಬೇಸರದಿಂದ ಕುಳಿತ್ತಿದ್ದರು.
"ನೋಡಿ ವಿಷಯವನ್ನು ಪೂರ್ಣ ಅಭ್ಯಾಸ ಮಾಡದೆ ಇರುವಾಗ ನಿಮಗೆ ಹೀಗೆ ಅನ್ನಿಸುವುದು ಸಹಜ, ನಿಮ್ಮ ವಾದಕ್ಕೆ ಕಾರಣಗಳಿರುತ್ತವೆ, ನಾವು ಹೇಳುವ ಭವಿಷ್ಯ ಅಥವ ವಿಷಯಗಳು ನೇರವಾಗಿ ವ್ಯಕ್ತಿ ಒದಗಿಸುವ ವಿವರಗಳನ್ನು ಅವಲಂಬಿಸಿರುತ್ತದೆ, ಹಾಗಾಗಿ ನಾವು ಪರಿಪೂರ್ಣವಾಗಿ ಯಾವುದೆ ವ್ಯಕ್ತಿಯ ಭವಿಷ್ಯವನ್ನು ಹೇಳಲು ಅಸಾದ್ಯ, ಕೆಲವೊಮ್ಮೆ ತಪ್ಪಾಗುತ್ತದೆ, ಹಾಗೆಂದು ಈ ಶಾಸ್ತ್ರವನ್ನೆ ಪೂರ್ಣ ಸರಿಯಿಲ್ಲವೆಂದು ನಿರಾಕರಿಸಲಾಗದು" ಎಂದರು
ನಾನು "ನೋಡಿ ನಿಮ್ಮ ವಾದದಲ್ಲೆ ಪುನಃ ಹುಳುಕಿದೆ, ನೀವೆ ಹೇಳುತ್ತಿದ್ದೀರಿ, ವ್ಯಕ್ತಿ ಒದಗಿಸುವ ವಿವರಗಳಿಂದಲೆ ಭವಿಷ್ಯ ತಪ್ಪಾಗುತ್ತದೆ ಅಂತ, ಆದರೆ ಪೂರ್ಣ ಫಲಜೋತಿಸ್ಯ ನಿಂತಿರುವುದೆ ಈ ವಿವರಗಳನ್ನು ಅವಲಂಬಿಸಿ ಅನ್ನುವಾಗ ಅದರ ವಾಸ್ತವತೆ ಎಷ್ಟು ಸತ್ಯ, ಹಾಗಿರುವಾಗ ನೀವು ಮತ್ತಷ್ಟು ಕರಾರುವಕ್ಕಾಗಿ ಭವಿಷ್ಯ ತಿಳಿಸುವ ವಿಧಾನಗಳನ್ನು ತಿಳಿಸಿದರೆ ನಾನು ಈ ಶಾಸ್ತ್ರವನ್ನು ನಂಬಲು ಪ್ರಯತ್ನಿಸುತ್ತೇನೆ" ಎಂದೆ.

 ರಾಮಮೂರ್ತಿಗಳು ಒಮ್ಮೆ ನಕ್ಕರು  " ನೋಡಿ ನಿಮ್ಮನ್ನು ನಂಬಿಸುವದರಿಂದ ನನಗಾವ ಲಾಭವು ಇಲ್ಲ ಆದರು ನಿಮ್ಮ ಕುತೂಹಲ ತಣಿಸಲು ಪ್ರಯತ್ನಿಸುತ್ತೇನೆ, ಈಗ ನೋಡಿ ನಿಮ್ಮ ಅದುನಿಕ ಕಂಪ್ಯೂಟರ್ ಎಲ್ಲ ವಿದದ ಲೆಕ್ಕಚಾರದಲ್ಲು ಪರಿಪಕ್ವ, ಯಾವುದೆ ಖಗೋಳವೆ ಆಗಲಿ ಮತ್ತೇನೆ ಆಗಲಿ ಅದಕ್ಕೆ ಸಂಭಂದಿಸಿದ ವಿವರಗಳನ್ನು ಸ್ವಲ್ಪವು ತಪ್ಪಿಲ್ಲದಂತೆ ನೀಡಬಲ್ಲದು ಆದರೆ ನಾವು ಅದಕ್ಕೆ ನೀಡುವ ದತ್ತಾಂಶ ಅಂದರೆ ನಿಮ್ಮ ಡೇಟಾದಲ್ಲೆ ತಪ್ಪಿದ್ದರೆ ಆಗ ಅದು ಕೊಡುವ ಉತ್ತರ ಸಹ ತಪ್ಪೆ ಇರುತ್ತದೆ, ಹಾಗೆ ಇಲ್ಲಿ ಕೂಡ ನೀವು ಕೊಡುವ ವಿವರ ತಪ್ಪಿದ್ದರೆ, ನಾವು ಹೇಳುವ ಭವಿಷ್ಯ ನಿಮ್ಮ ಪಾಲಿಗೆ ಪೂರ್ಣ ಸರಿ ಇರದಿರಬಹುದು ಅಲ್ಲವೆ" ಅವರು ನನ್ನನ್ನು ಪ್ರಶ್ನಿಸಿದರು.

  ನನಗೆ ಹೇಗಾದರು ವಾದದಲ್ಲಿ ಇವರನ್ನು ಕಾರ್ನರ್ ಮಾಡಿ ಸೋಲಿಸಲೆ ಬೇಕೆಂಬ ಹುಂಬತನ ಬಂದಿತ್ತು
" ಸರಿ ಸ್ವಾಮಿ ನೀವು ಹೇಳಿದ್ದನ್ನು ಒಂದು ಕ್ಷಣ ಒಪ್ಪಿ ಕೊಳ್ಳೋಣ, ಆದರೆ ನೀವು ಅಂದರೆ ಭವಿಷ್ಯಕಾರರು ನಾವು ನಮ್ಮ ಯಾವುದೆ ವೈಯಕ್ತಿಕ ವಿವರಗಳನ್ನು ನೀಡದೆ ಸಹ ಭವಿಷ್ಯ ಹೇಳಬಲ್ಲಿರಲ್ಲವೆ, ಅಂದರೆ ನಮ್ಮ ಪ್ರಶ್ನೆಯನ್ನು ಕೇಳುವ ಕಾಲವನ್ನು ಅನುಸರಿಸಿ, ಅದರಲ್ಲಿ ನೀವು ಹೇಳುವ ವಿಷಯವು ಕಡೇಪಕ್ಷ ನೂರಕ್ಕೆ ನೂರು ಸರಿ ಇರಬೇಕಲ್ಲವೆ, ಏಕೆಂದರೆ ಅದರಲ್ಲಿ ವ್ಯಕ್ತಿಯ ಯಾವುದೆ ವೈಯಕ್ತಿಕ ವಿವರಗಳಿರುವದಿಲ್ಲವಲ್ಲ" ಎಂದೆ.

 ಅವರು ಒಂದು ಕ್ಷಣ ಸುಮ್ಮನೆ ಕುಳಿತರು, ನನಗೀಗ ಸಂತಸವಾಗುತ್ತಿತ್ತು, ಅವರ ದ್ವನಿಯಲ್ಲಿ ಮುಖದಲ್ಲಿ ಸೋಲು ಕಾಣುತ್ತಿದ್ದೇನೆ ಅನ್ನುವ ಹಮ್ಮಿನ ಭಾವ ಮನದಲ್ಲಿ ನನಗೆ ಮೂಡುತ್ತಿತ್ತು. ನಿದಾನವಾಗಿ ಅವರು ನುಡಿದರು
"ನಿಮ್ಮ ಮಾತು ನಿಜ , ಆದರೆ ಈ ವಿಧಾನದಲ್ಲಿ ಯಾವುದೆ ವ್ಯಕ್ತಿಯ ಪೂರ್ಣ ಭವಿಷ್ಯವನ್ನು ಹೇಳಲು ಸಾದ್ಯವಿಲ್ಲ ಆದರೆ, ಆ ವ್ಯಕ್ತಿ ಕೇಳುವ ಯಾವುದೆ ಒಂದು ಪ್ರಶ್ನೆಯನ್ನು ಅಥವ ಅವನ ಮನದಲ್ಲಿರುವ ಯಾವುದೊ ಒಂದು ಸಮಸ್ಯೆಗೆ ಪರಿಹಾರ ದೊರೆತಿತೊ ಇಲ್ಲವೊ ಅಥವ ಕಳೆದ ವಸ್ತುಗಳ ಬಗ್ಗೆ ಈ ರೀತಿ ಪರಿಹಾರ ಒದಗಿಸಬಹುದು"  
   ಅದೇನು ಮಂಕು ಕವಿದಿತ್ತೊ ನನ್ನ ಮನಸಿಗೆ ನಾನು ನನ್ನ ವಿತಂಡವಾದವನ್ನು ಮುಂದುವರೆಸಿದ್ದೆ,
"ಸರಿ ಈಗ ನಾವು ಅದೆ ವಿಧಾನವನ್ನು ಸಾದ್ಯವಾದಲ್ಲಿ ಪರೀಕ್ಷಿಸೋಣ, ನೀವು ನನ್ನ ಯಾವುದೊ ಒಂದೆ ಒಂದು ಪ್ರಶ್ನೆಗೆ ಉತ್ತರಿಸಿ, ನಾನು ಪ್ರಶ್ನೆಯನ್ನು ಕೇಳಲೆ" ಅಂದೆ.
  ಅವರು ಯಾಕೊ ಸಂಪೂರ್ಣ ವಿಚಲಿತರಾಗಿದ್ದರು, ಅದೇನೊ ಅಸೌಕರ್ಯದಿಂದ ಅಸಹನೆಯಿಂದ ಕುಳಿತಲ್ಲೆ ಮಿಡುಕಾಡುತ್ತಿದ್ದರು ಅಂತ ನನಗೆ ಅನ್ನಿಸಿತು, ಆತ ಪದೆ ಪದೆ ತಮ್ಮ ಗಡಿಯಾರ ಗಮನಿಸಿ ನಂತರ ನನಗೆ ಹೇಳಿದರು.
 "ನೋಡಿ ನಿಮಗೆ ಈ ಶಾಸ್ತ್ರಗಳನ್ನು, ಭವಿಷ್ಯವನ್ನು ಪರೀಕ್ಷಿಸಬೇಕೆಂಬ ಭಾವವನ್ನು ಬಿಟ್ಟುಬಿಡಿ ಅದು ಯಾರಿಗು ಒಳ್ಳೆಯದಲ್ಲ, ಅಲ್ಲದೆಮತ್ತೊಂದು ವಿಷಯ ನಾವಿಬ್ಬರು ಈಗ ಶುದ್ದ ಭಾವದಲ್ಲಿಲ್ಲ, ಅಲ್ಲದೆ ಈಗಿನ ಸಮಯವು ಏಕೊ ಸರಿಯಿಲ್ಲ, ನನ್ನ ಮನ ಸಮಾದಾನದಲ್ಲಿಲ್ಲ, ನೀವು ಬೇರೆ ಸಮಯದಲ್ಲಿ ಯಾವಾಗ ಬೇಕಿದ್ದರು ಬನ್ನಿ ನನ್ನ ವಿಳಾಸ ಕೊಡುತ್ತೇನೆ, ನಿಮ್ಮ ಪ್ರಶ್ನೆಗೆ ಉತ್ತರಿಸುತ್ತೇನೆ" ಎಂದರು.
   "ಅಲ್ಲ ಸ್ವಾಮಿ ಪ್ರಶ್ನೆಯನ್ನು ಯಾವಾಗ ಕೇಳಬೇಕೆಂದು ನನಗೆ ಅನ್ನಿಸಿದೆಯೊ ಅದೆ ಸಂಕಲ್ಪವಲ್ಲವೆ, ಹಾಗಿರುವಾಗ ನಮಗೆ ಅನುಕೂಲವಾದ ಸಮಯದಲ್ಲಿ ಕೇಳಿದರೆ ಮತ್ತೆ ನೀವು ಹೇಳಿದ ದತ್ತಾಂಶ ಅಥವ ಡೇಟಾ ಸರಿಯಿಲ್ಲ ಅಂತ ಅಲ್ವೆ ಆದ್ದರಿಂದ ಈಗ ನಾನು ಪ್ರಶ್ನೆ ಕೇಳುತ್ತಿರುವದರಿಂದ ಈಗಲೆ ಹೇಳುವುದು ಸೂಕ್ತ, ಅಲ್ಲದೆ ನಾನು ನಿಮ್ಮ ವೃತ್ತಿಗೇನು ಮೋಸ ಮಾಡುವದಿಲ್ಲ, ನಾನು ಪರೀಕ್ಷೆ ಅಂತ ಹೇಳಿದ್ದರು, ನಿಮ್ಮ ಫೀಸನ್ನು ಕೊಡಲು ಸಿದ್ದನಿದ್ದೇನೆ" ಎಂದೆ.

ಅವರು "ಇದು ನನ್ನ ಫೀಸಿನ ವಿಷಯವಲ್ಲಪ್ಪ, ನೀವು ಪ್ರಶ್ನೆ ಕೇಳುತ್ತಿರುವ ಸಮಯದ್ದು ಅದೇ ಸಮಸ್ಯೆ, ಇದು ಸ್ವಲ್ಪ ಅಶುದ್ದ  ಸಮಯ, ಯಾವುದೆ ಉತ್ತಮ ಕೆಲಸಕ್ಕು ತಕ್ಕುದ್ದಲ್ಲ , ಅದನ್ನು ತಿಳಿಸಿದೆ " ಎಂದರು
  "ನೋಡಿ ಇದನ್ನೆಲ್ಲ ನಾನು ನಂಬುವದಿಲ್ಲ, ನನಗೆ ಈಗ ಕೇಳಬೇಕು ಅನ್ನಿಸಿರುವುದು ನಿಜ, ನೀವು ನಿಮ್ಮ  ಪಂಚಾಂಗ ಮತ್ತು ನೀವು ಓದಿರುವ ಶಾಸ್ತ್ರವನ್ನು ನಂಬಿ, ಹೇಳಿ. ಒಂದುವೇಳೆ ನಿಮ್ಮ ಭವಿಷ್ಯದ ನುಡಿ ನಿಜವಾದ ಪಕ್ಷದಲ್ಲಿ ನಾನು ನಿಮಗೆ ಹತ್ತು ಸಾವಿರ ರೂಪಾಯಿ ಕೊಡಲು ಸಿದ್ದನಿದ್ದೇನೆ, ಆದರೆ ಸುಳ್ಳಾದರೆ ನೀವೇನು ಕೊಡಬೇಕಿಲ್ಲ,  ಸೋತೆ ಅಂತ ಒಪ್ಪಿ  ಫಲಜ್ಯೋತಿಷ್ಯ ಅನ್ನುವದೆಲ್ಲ ಜೊಳ್ಳು ಅಂತ ಒಪ್ಪಿದರೆ ಸಾಕು" ಎಂದೆ

   ಏಕೊ ಅವರ ಮುಖ ಒಂದು ಕ್ಷಣ ಕೆಂಪಾಯಿತು, ಅವಮಾನವೊ ಅಥವ ಕೋಪವೊ ಯಾವುದೋ ಭಾವ ಅವರನ್ನು ಬಾದಿಸಿತ್ತು ಅನ್ನುವುದು ಸ್ವಷ್ಟ, ಒಂದು ಕ್ಷಣ ಕಣ್ಮುಚ್ಚಿ ಕುಳಿತರು. ನಂತರ ಎಂತದೊ ಸಣ್ಣ ನಗುವೊಂದು ಅವರ ಮುಖದ ಮೇಲೆ ಹಾದು ಹೋಯಿತು. ನನ್ನ ಗೆಳೆಯ ಶ್ರೀಧರನ ಕಡೆ ತಿರುಗಿ, "ಇವರೆ ಮೇಲಿನ ಲೆದರ್ ಬ್ಯಾಗಿನಲ್ಲಿ ಪಂಚಾಂಗವಿದೆ ತೆಗೆದು ಕೊಡಲು ಸಾದ್ಯವೆ, ನಿಮ್ಮ ಸ್ನೇಹಿತರು ಏನೊ ಆಸೆ ಪಡುತ್ತಿದ್ದಾರೆ " ಎಂದರು.
ಶ್ರೀದರ್ ನನ್ನತ್ತ ತಿರುಗಿ
 " ಏನಿದು ಶಿವರಾಮ್ ಸುಮ್ಮನಿರಬಾರದೆ ಹಾಗೆಲ್ಲ ಯಾವುದನ್ನು ಪರೀಕ್ಷೆ ಮಾಡಲು ಹೋಗಬಾರದು" ಎಂದರು, ನಾನು ಮೌನವಹಿಸಿದೆ. ಅವರು ಎದ್ದು ಮೇಲಿನ ಸೀಟಿನಲ್ಲಿದ್ದ ಪಂಚಾಂಗ ತೆಗೆದುಕೊಟ್ಟರು. ರಾಮಮೂರ್ತಿ ಪತ್ನಿ ಪಕ್ಕದ ಭೋಗಿಯಲ್ಲೆಲ್ಲೊ ಇದ್ದ ಅವರ ಸ್ನೇಹಿತರನ್ನು ಮಾತನಾಡಿಸಿಬರಲು ಹೋಗಿದ್ದರು ಅನ್ನಿಸುತ್ತೆ.
   ರಾಮಮೂರ್ತಿಗಳು ಕುಳಿತಲ್ಲೆ ಪದ್ಮಾಸನ ಹಾಕಿ ಕುಳಿತು ಒಂದು ಕ್ಷಣ ಏನೋ ಧ್ಯಾನ ಮಾಡಿದರು ನಂತರ
"ಸರಿ ಶಿವರಾಮರವರೆ ಈಗ ನಿಮ್ಮ ಪ್ರಶ್ನೆಯನ್ನು ಅಥವ ಸವಾಲೊ ಎನೊ ಇದೆಯಲ್ಲ ಹೇಳಿ" ಎಂದರು.
 ನಾನು ಸ್ವಲ್ಪ ಮುಖದಲ್ಲಿ ನಗುವನ್ನು ತಂದುಕೊಂಡೆ , ಆ ಸಂದರ್ಭಕ್ಕೆ ಏಕೊ ಅದು ಅಪಹಾಸ್ಯದ ನಗುವಾಗೆ ಕಾಣಿಸುತ್ತಿತ್ತೇನೊ,
"ಏನಿಲ್ಲ ಸ್ವಾಮಿ   ನಾಳೆ ನನಗೆ ಸಂಭಂದಪಟ್ಟಂತೆ ನಡೆಯಲಿರುವ ಯಾವುದಾದರು ಒಂದು ಘಟನೆ ಅಥವ ವಿಷಯ ಏನಾದರು ತಿಳಿಸಿ, ನಾಳೆ ಬೆಳಗಿನಿಂದ ರಾತ್ರಿ ನಾನು ಮಲಗುವದರಲ್ಲಿ ನಡೆಯುಬಹುದಾದ ಸಂಭವವಿರುವಂತದು" ಎಂದೆ.
ಆತ ಕ್ಷಣಕಾಲ ಕಣ್ಮುಚ್ಚಿ ಕುಳಿತರು, ನಂತರ ಸಮಯನೋಡಿಕೊಂಡರು, ಪಂಚಾಂಗದಲ್ಲಿ ಯಾವುದೊ ಪುಟಗಳನ್ನು ತಿರುಗಿಸಿ ತಿರುಗಿಸಿ ನೋಡಿದರು, ನಂತರ ಅದನ್ನು ಮುಚ್ಚಿಟ್ಟು ಪುನಃ ಕಣ್ಮುಚ್ಚಿದರು, ನಂತರ ಕಣ್ಣು ತೆಗೆದು ನನ್ನಮುಖವನ್ನೆ ವಿಲಕ್ಷಣವಾಗಿ ನೋಡುತ್ತಿದ್ದರು. ನನಗೆ ಕುತೂಹಲವೆನಿಸಿತು,
"ತಿಳಿಯಿತೆ ಸ್ವಾಮಿ ಏನಾದರು??" ಎಂದೆ, ಅವರು ತಲೆ ಆಡಿಸುತ್ತ
"ಸಾವು, ಹೌದು ಸಾವಿಗೆ ಸಂಬಂದಪಟ್ಟಂತೆ ನಾಳೆ ನಿಮ್ಮ ದಿನದ ಘಟನೆಗಳು ನಡೆಯಲಿದೆ, ನೀವು ಬೆಳಗ್ಗೆ ಏಳುವಾಗಲೆ ಒಂದು ಸಾವಿನ ಸುದ್ದಿ ಕೇಳುವಿರಿ, ಅಷ್ಟೆ ಅಲ್ಲ ದಿನಪೂರ ಅದೆ ಆತಂಕ, ಪರಿತಾಪದಲ್ಲಿ ಕಳೆಯುವುದು" ಎಂದರು.
 ನನಗೆ ಒಂದು ಕ್ಷಣ ಆತ ಏನು ಹೇಳುತ್ತಿದ್ದಾರೆ ಎಂದು ಮನಸಿನಾಳಕ್ಕೆ ಇಳಿಯಲ್ಲೆ ಇಲ್ಲ, ನಂತರ ಅರ್ಥವಾಗಿ , ಯಾವುದೊ ಭಾವದಲ್ಲಿ ಕೇಳಿದೆ
"ಅಂದರೆ   ನಾಳೆ ನನ್ನ ಸಾವು ಸಂಭವಿಸುವುದೆ"
"ಇಲ್ಲ ನಿಮಗೆ ನಾಳೆ ಸಾವಿಲ್ಲ ಆದರೆ ನೀವು ಸಾವಿನ ಘಟನೆಗೆ ಸಾಕ್ಷಿಯಾಗುವಿರಿ ಅಥವ ಸಾವಿನ ಸುದ್ದಿ ಕೇಳುವಿರಿ, ನೀವು ಪ್ರಶ್ನೆ ಕೇಳುತ್ತಿರುವ ಈ ಸಮಯ ಅದನ್ನೆ ಸೂಚಿಸುತ್ತಿದೆ" ಎಂದರು.
ನನ್ನ ಹೃದಯದ ಯಾವುದೊ ಭಾಗದಲ್ಲಿ ಝಲ್ ಎಂದಿತು, ಇದೇನು ಹೇಳುತ್ತಿದ್ದಾನೆ ಈತ. ಅಥವ ನಾನು ರೇಗಿಸಿದೆ ಎಂದು ಈ ರೀತಿ ಹೆದರಿಸುತ್ತಿದ್ದಾನ ಹೇಗೆ. ಏನಾದರು ಆಗಲಿ ನಾನು ಹೆದರಿದಂತೆ ತೋರಬಾರದು ಎಂದುಕೊಂಡರು, ನನ್ನ ಮುಖಭಾವ ದೇಹಭಾವಗಳು ಹೆದರಿಕೆಯನ್ನೆ ಸೂಚಿಸುತ್ತಿದ್ದವು.
"ಇದೆಂತಹ ಭವಿಷ್ಯ" ನಾನು ಅಂದೆ ಉದ್ವೇಗದಲ್ಲಿ , ಅದಕ್ಕವರು
"ನೀವು ಕೇಳಿದ ಭವಿಷ್ಯ, ಇದರಲ್ಲಿ ನನ್ನ ಪಾತ್ರವೇನು ಇಲ್ಲ, ಲೆಕ್ಕಚಾರದಂತೆ ನನಗೆ ತೋಚಿದ್ದನ್ನು ನಿಮಗೆ ಹೇಳಿರುವೆ ಅಷ್ಟೆ ನಂಬುವುದು ಬಿಡುವುದು ನಿಮ್ಮಗೆ ಬಿಟ್ಟಿದೆ" ಎಂದರು.
 ನನ್ನ ಮನಸಿಗೆ ಎಂತದೊ ದಿಗ್ಭ್ರಾಂತಿ ಕವಿದಿತ್ತು, ಏನೊ ಮಾಡಲು ಹೋಗಿ ಏನೊ ಆಯಿತಲ್ಲ. ಏಕೊ ಎದ್ದು ನನ್ನ ಬ್ಯಾಗಿನಲ್ಲಿದ್ದ ನೂರರ ಕಟ್ಟನ್ನು ಅವರಿಗೆ ಕೊಡಲು ಹೋದೆ, ಅದಕ್ಕವರು
   "ಇಲ್ಲ ಇವರೆ ಈ ಹಣ ಬೇಡ, ಮೊದಲು ಮೊದಲು ನನಗೆ ಹಣದ ಬಗ್ಗೆ ವ್ಯಾಮೋಹ ಇದ್ದಿದ್ದು ನಿಜ, ಈಗ ನನಗೆ ಹಣದ ಅವಶ್ಯಕತೆಯೆ ಇಲ್ಲ, ನನ್ನ ಹತ್ತಿರವಿರುವುದು ನನ್ನ ಜೀವನಕ್ಕೆ ಸಾಕಾಗುವಷ್ಟಿದೆ, ಭವಿಷ್ಯವನ್ನು ತಪ್ಪಿಲ್ಲದಂತೆ ಹೇಳುವನೆಂಬ ಹಮ್ಮು ನನಗಿಲ್ಲ, ನೀವು ಬಲವಂತಪಡಿಸಿದಿರಿ, ದೈವ ನನ್ನ ಬಾಯಲಿ ನುಡಿಸಿತು ಅಂತ ನಾನು ಭಾವಿಸುತ್ತೇನೆ ಅಷ್ಟೆ, ಅಷ್ಟಕ್ಕು ನೀವು ಹೇಳಿರುವುದು, ನನ್ನ ಭವಿಷ್ಯ ನಿಜವಾದಲ್ಲಿ ನಂತರ ಹತ್ತು ಸಾವಿರ ರೂಪಾಯಿ ಕೊಡುತ್ತೇನೆ ಅಂತ ತಾನೆ, ನಾಳೆ ನೋಡೋಣ ಬಿಡಿ" ಎಂದು ಮಾತು ನಿಲ್ಲಿಸಿದರು. ಅಷ್ಟರಲ್ಲಿ ಎಲ್ಲಿಯೊ ಹೋಗಿದ್ದ ಅವರ ಪತ್ನಿಯು ಬಂದರು.
 ಮುಂದೆ ನಮ್ಮ ಕ್ಯಾಬಿನ್ ನಲ್ಲಿ ಬಹುತೇಕ ಮೌನ ಆವರಿಸಿತು. ಶ್ರೀಧರ್ ಸಹ ನನ್ನ ಜೊತೆ ಮಾತನಾಡಲು ಉತ್ಸಾಹ ತೋರಲಿಲ್ಲ, ಅವರು ರಾಮಮೂರ್ತಿಯವರ ಜೊತೆಗಿನ ನನ್ನ ವರ್ತನೆಯಿಂದ ಬಹುಷಃ ಬೇಸರ ಮಾಡಿಕೊಂಡಿದ್ದರು. ರಾತ್ರಿ ಊಟಕ್ಕೆ ಆರ್ಡರ್ ತೆಗೆದುಕೊಳ್ಳಲು ಬಂದರು ರೈಲಿನ ಸಿದ್ಬಂದಿ ,

   ರಾಮಮೂರ್ತಿಯವರು ನನಗೆ ಏಕೊ ಊಟ ಬೇಡ ಅನ್ನಿಸುತ್ತಿದೆ ನಿನಗೆ ಬೇಕಾದಲ್ಲಿ ತೆಗೆದುಕೊ ಅಂದರು ಅವರ ಪತ್ನಿಗೆ , ಆಕೆಯು ಸಹ ತನಗೆ ಬೇಡವೆಂದು ತಿಳಿಸಿದರು. ನಾನು ಮತ್ತು ಶ್ರೀಧರ್ ಮೌನವಾಗಿ ಊಟ ಮುಗಿಸಿದೆವು. ಇನ್ನು ರಾತ್ರಿ ಹತ್ತಾಗುವ ಮುಂಚೆಯೆ ಆತ ಮೇಲಿನ ಬರ್ತ್ ಹತ್ತಿ ಮಲಗಿಬಿಟ್ಟರು. ನಂತರ ಸ್ವಲ್ಪ ಹೊತ್ತಿನಲ್ಲಿಯೆ ಕೆಳಗೆ ಅವರ ಪತ್ನಿ ಸಹಮಲಗಿ ಬಿಟ್ಟರು ಹಾಗಾಗಿ ನಾನು ಸಹ ಶ್ರೀದರ ಸಹ ಬರ್ತ್ ಹತ್ತಿದೆವು.

   ಏಕೊ ರಾಮಮೂರ್ತಿಯವರ ಮುಖ ಮುಂದೆ ಬಂದಂತೆ ನನಗೆ ಗಿಲ್ಟ್ ಕಾಡಲು ಪ್ರಾರಂಭವಾಯಿತು, ನಾನು ಅವರನ್ನು ಮತ್ತು ಪಲಜ್ಯೋತಿಷ್ಯವನ್ನು ಪರೀಕ್ಷೆ ಮಾಡುವ ಕೆಲಸಕ್ಕೆ ಹೋಗಬಾರದಿತ್ತು. ನನಗೆ ಆಸಕ್ತಿ ಇಲ್ಲದಿದ್ದರೆ ನಂಬಿಕೆ ಇಲ್ಲದಿದ್ದಲ್ಲಿ ಅದನ್ನು ನಿರ್ಲಕ್ಷ ಮಾಡಿದರೆ ಸರಿ ಅದನ್ನು ಬಿಟ್ಟು ಇದಾವ ಕೆಲಸಕ್ಕೆ ಹೋದೆ. ಅವರ ಭವಿಷ್ಯ ನೆನಪಿಗೆ ಬಂದಿತು.

"ಸಾವು, ಹೌದು ಸಾವಿಗೆ ಸಂಬಂದಪಟ್ಟಂತೆ ನಾಳೆ ನಿಮ್ಮ ದಿನದ ಘಟನೆಗಳು ನಡೆಯಲಿದೆ, ನೀವು ಬೆಳಗ್ಗೆ ಏಳುವಾಗಲೆ ಒಂದು ಸಾವಿನ ಸುದ್ದಿ ಕೇಳುವಿರಿ, ಅಷ್ಟೆ ಅಲ್ಲ ದಿನ ಪೂರ್ಣ ಅದೆ ಆತಂಕ, ಪರಿತಾಪದಲ್ಲಿ ಕಳೆಯುವುದು"
 ಏಕೊ ನಿದ್ದೆ ಬರುತ್ತಿಲ್ಲ, ಮನಸಿಗೆ ಕಿರಿಕಿರಿ, ನಾಳೆ ಬೆಳಗ್ಗೆ ಏನಾಗಬಹುದು, ಯಾವ ಸಾವಿನ ಸುದ್ದಿ ನನ್ನ ಆತಂಕ ಕದಡಲಿದೆ, ಮನೆಯಲ್ಲಿದ್ದ ಹೆಂಡತಿ ಹಾಗು ಮಗ ನೆನಪಿಗೆ ಬಂದ, ಕೆಟ್ಟ ಯೋಚನೆಗಳ ಮನಸನ್ನು ಆವರಿಸಿದವು. ಯಾರಿಗೆ ಏನಾದರು ಅಪಾಯ ಆಗಿದೆಯ. ಹಳ್ಳಿಯಲ್ಲಿದ್ದ ತಂದೆ ತಾಯಿಯನ್ನು ನೆನೆಯಿತು ಮನಸ್ಸು.
"ದೇವರೆ ಯಾರಿಗು ಏನು ಆಗದಿರಲಿ" ಅಂತ ಮೌನವಾಗಿ ಪ್ರಾರ್ಥಿಸಿತು, ನನ್ನ ಮನ. ಯಾವ ಸುದ್ದಿ, ಬೋಗಿಯಲ್ಲಿ ಯಾವ ಮೊಬೈಲ್ ಶಬ್ದ ಮಾಡಿದರು ಬೆಚ್ಚಿ ಎದ್ದು ಕುಳಿತುಕೊಳ್ಳುತ್ತಿದ್ದೆ. ನನ್ನ ಮೊಬೈಲ್ಗೆ ಕರೆ ಬಂತೇನೊ ಎಂದು. ದೀರ್ಘ ಮೌನದ ನಡುವೆ ಗಡಗಡ ಎಂದು ಶಬ್ದ ಮಾಡುತ್ತ ಕಂಬಿಯ ಮೇಲೆ ಓಡುತ್ತಿರುವ ರೈಲಿನ ಶಬ್ಧ.
   ಪುನಃ ಏಕೊ ಭಯವಾಯಿತು, ಏನಾದರು ರೈಲಿನ ಅಪಘಾತವಾಗಿ   ನನ್ನ ಎದುರಿಗೆ ಸಾವಿನ ನರ್ತನ ನಡೆಯಲಿದೆಯಾ? ಮೇಲಿನ ಬರ್ತ್ ನಲ್ಲಿ ಮಲಗಿದ್ದ ಶ್ರೀಧರ್ ಗೆ ಏನಾದರು ಆಗುತ್ತದ?,ಏನೆನೊ ಆತಂಕ ಮನಸಿನ ಒತ್ತಡ. ರೈಲು ಮಾತ್ರ ಓಡುತ್ತಲೆ ಇತ್ತು. ಯಾವಾಗ ನಿದ್ದೆ ನನ್ನನ್ನು ಆವರಿಸಿತೊ ತಿಳಿಯಲಿಲ್ಲ.
..
..

ಇದ್ದಕಿದ್ದಂತೆ ಎಚ್ಚರವಾಯಿತು. ರೈಲು ಯಾವುದೊ ನಿಲ್ದಾಣದಲ್ಲಿ ನಿಂತಿತು. ಎದ್ದು ಕಿಟಕಿಬಳಿ ಮುಖವಿಟ್ಟು ನೋಡಿದೆ, ಓ ಆಗಲೆ ಹಿಂದುಪುರ ನಿಲ್ದಾಣ. ಕೈಗೆ ಕಟ್ಟಿದ್ದ ವಾಚ್ ಗಮನಿಸಿದೆ, ಬೆಳಗಿನ ಐದುವರೆ ಗಂಟೆ. ಎದ್ದು ಕುಳಿತೆ. ಸರಿ ಇನ್ನೇನು ಕರ್ನಾಟಕದ ಗಡಿಯತ್ತ ತಲುಪಿದ್ದೇವೆ, ಒಂದೆರಡು ಗಂಟೆಗಳಲ್ಲಿ ಬೆಂಗಳೂರು. ಮತ್ತೆ ಮಲಗುವದೇನು ಎಲ್ಲರು ಎದ್ದು ಆಗಲೆ ಹಲ್ಲುಜ್ಜಿ ಮುಖ ತೊಳೆದು ಬರುತ್ತಿದ್ದರು. ನಾನು ಬ್ರಶ್ ಹಿಡಿದು ಹೋಗಿ, ಎಲ್ಲ ಕೆಲಸ ಮುಗಿಸಿ ನನ್ನ ಸೀಟಿಗೆ ವಾಪಸ್ ಬರುವಾಗ ಶ್ರೀಧರ್ ಆಗಲೆ ಪ್ಯಾಂಟ್ ಶರ್ಟ್ ಧರಿಸಿ. ತಮ್ಮ ಲಗೇಜ್ ಎಲ್ಲ ಸಿದ್ದಪಡಿಸಿ ಕುಳಿತುಬಿಟ್ಟಿದ್ದರು. ನಾನು
"ಓ ಆಗಲೆ ನೀವು ಸಿದ್ದ" ಎನ್ನುತ್ತ ನಾನು ಸಹ ಬಟ್ಟೆ ಧರಿಸಿ, ಲಗೇಜ್ ಸಿದ್ದ ಮಾಡುತ್ತಿದ್ದೆ, ಎದುರಿನ ಸೀಟಿನಲ್ಲಿದ್ದ ಆಕೆಯು ಬಾತ್ ರೂಮಿಗೆ ಹೋಗಿಬಂದು, ತಾವು ಮಲಗಿದ್ದ ಬೆಡ್ ಶೀಟ್ ಮಡಿಚಿಡುತ್ತ, ಮೇಲೆ ಕೈಹಾಕಿ ಆಕೆಯ ಪತಿಯನ್ನು ಎಬ್ಬಿಸುತ್ತ
"ಏಳ್ರಿ ಬೆಂಗಳೂರಿನ ಹತ್ತಿರ ಬಂದೆವು, ಸಿದ್ದವಾಗಿ " ಎಂದು ಕೂಗಿದರು. ಆಕೆಯ ಬ್ಯಾಗ್ ಸಿದ್ದವಾದಂತೆ ಇನ್ನು ಏಳದಿದ್ದ ಆತನನ್ನು
"ರೀ ಏಳ್ರಿ , ಏನಿವತ್ತು ಇಷ್ಟೊಂದು ನಿದ್ದೆ, ಯಾವಾಗಲು ನೀವೆ ಎದ್ದು ನನ್ನನ್ನು ಕೂಗುತ್ತಿದ್ದಿರಿ, ಲಗೇಜ್ ಸಿದ್ದಮಾಡಬೇಕು, ಕಡೇಲಿ ಇಳಿಯುವಾಗ ಗಡಿಬಿಡಿಯಾಗುತ್ತೆ" ಅಂತ ಕೂಗಿದರು, ಮೇಲಿನಿಂದ ಯಾವುದೆ ಪ್ರತಿಕ್ರಿಯೆ ಇಲ್ಲ. ಅಸಾಮಿ ಒಳ್ಳೆ ನಿದ್ದೆಗೆ ಇಳಿದುಬಿಟ್ಟಿದ್ದಾರೆ.
ಆಕೆ ಶ್ರೀದರ ಅವರನ್ನು "ನೋಡಿಪ್ಪ ಯಾಕೊ ಏಳ್ತಾನೆ ಇಲ್ಲ ಸ್ವಲ್ಪ ನೀವು ಮೇಲೆ ನಿಂತು ಕೂಗಿ " ಎಂದರು, ಶ್ರೀದರ , ಎರಡು ಸೀಟುಗಳ ಮೇಲೆ ಕಾಲನ್ನು ಅಗಲಿಸಿ ನಿಂತು, ಮೇಲಿದ್ದ ಅವರನ್ನು
"ಸಾರ್ ಎದ್ದೇಳಿ ನಿಮ್ಮ ಮನೆಯವರು ಕೂಗುತ್ತಿದ್ದಾರೆ ನೋಡಿ" ಎನ್ನುತ್ತ , ಅವರ ಹೆಗಲುಮುಟ್ಟಿ ಅಲುಗಿಸಿದರು. ಮತ್ತೆ ಬಗ್ಗಿ ಅವರ ಮುಖ ನೋಡುತ್ತ ಕೂಗುತ್ತಿರುವಂತೆ ಶ್ರೀದರ ಏಕೊ ಗಾಭರಿಯಾದಂತೆ ಕಾಣಿಸಿತು, ಅವರು ಕೆಳಗೆ ನಿಂತಿದ್ದ ಪಕ್ಕದ ಬರ್ತ್ ನವರನ್ನು ಯಾರನ್ನೊ
"ಸಾರ್ ಬನ್ನಿ ನೋಡಿ ಏಕೊ ಎಷ್ಟು ಕೂಗಿದರು ಅಲುಗಾಡುತ್ತಿಲ್ಲ " ಎಂದರು, ಆಗಿನಿಂದ ನೋಡುತ್ತ ನಿಂತಿದ್ದ ಆತನು ಬಂದು ಮೇಲೆ ಹತ್ತಿ ನಿಂತು ನೋಡಿ ಮುಖದತ್ತ ಕೈಯಿಟ್ಟು ಅಲುಗಿಸಿ ಪರೀಕ್ಷಿಸಿದರು, ಅವರು ಸಹ ಶ್ರೀಧರರ ಮುಖನೋಡಿದರು, ಇಬ್ಬರ ಕಣ್ಣಿನಲ್ಲು ಏನೊ ಗೊಂದಲ. ಆತ ಕೆಳಗಿಳಿದು
"ಏಕೊ ಏಳುತ್ತಿಲ್ಲಮ್ಮ, ಸ್ವಲ್ಪ ತಡೆಯಿರಿ ಇದೆ ಭೋಗಿಯಲ್ಲಿ ಒಬ್ಬ ಡಾಕ್ಟರ್ ಇದ್ದಾರೆ ಎನ್ನುತ್ತ ಹೋಗಿ ಎರಡು ನಿಮಿಷದಲ್ಲಿಯೆ ಮತ್ತೊಬ್ಬ ಯುವಕನೊಂದಿಗೆ ಬಂದರು, ಬಂದಾತ ಮತ್ತೆ ಮೇಲೆ ಹತ್ತಿ ರಾಮಮೂರ್ತಿಯವರ ಕೈಯಿನ ನಾಡಿ ಹಿಡಿದು ಪರೀಕ್ಷಿಸಿದ, ನಂತರ ಉಸಿರಾಟವನ್ನು ಪರೀಕ್ಷಿಸಿದ. ನಂತರ ಕೆಳಗಿಳಿದು
"ಇಲ್ಲ ಅವರು ಸತ್ತು ಹೋಗಿದ್ದಾರೆ, ಹೋಗಿ ತುಂಬಾ ಸಮಯವಾಗಿದೆ ಅನ್ನಿಸುತ್ತೆ ಬಹುಷಃ ಹಾರ್ಟ್ ಫೈಲ್ಯೂರ್ ಕೇಸ್" ಎಂದರು
ಅವನ ಮಾತಿನಿಂದ ಎಲ್ಲರು ಗಾಭರಿಯಾದರು, ರಾಮಮೂರ್ತಿಯವರ ಪತ್ನಿಯಂತು ಗೋಳಾಡಲು ಪ್ರಾರಂಭಿಸಿದರು.
ನನಗೆ ಎಂತದೊ ಮೂಕ ವಿಸ್ಮಯ ಮನವನ್ನು ಆಕ್ರಮಿಸಿತು. ಬೆಳಬೆಳಗ್ಗೆಯೆ ಇದೆಂತ ಘಟನೆ, ಏಳುವಾಗಲೆ ಸಾವಿನ ಸುದ್ದಿಯೆ. ಪಾಪ ಆಕೆಯ ಗತಿಯೇನು ಅನ್ನಿಸಿತು. ಶ್ರೀದರ್ ಮತ್ತು ಡಾಕ್ಟರ್ ಆಕೆಯಿಂದ ಮೊಬೈಲ್ ಪಡೆದು ಆಕೆಯ ಮಗನ ನಂಬರನ್ನು ಡಯಲ್ ಮಾಡಿದರು. ರಾಮಮೂರ್ತಿಯವರ ಮಗನು ಡಾಕ್ಟರ್ ಅಂತೆ, ಆತನು ಬೆಂಗಳೂರಿನ ರೈಲುನಿಲ್ದಾಣಕ್ಕೆ ಬರುವದಾಗಿ ತಿಳಿಸಿದನಂತೆ. ಅಷ್ಟರಲ್ಲಿ ಯಾರೊ ಹೋಗಿ ಗಾರ್ಡ್ ಗೆ ವಿಷಯವನ್ನು ತಿಳಿಸಿದರು, ಭೋಗಿಯ ಟಿಕೆಟ್ ಚೆಕೆಂಗ್ ಅಧಿಕಾರಿ ಗಾರ್ಡ ಎಲ್ಲರು ಅಲ್ಲಿಯೆ ಬಂದರು.

 ಮನಸನ್ನೆಲ್ಲ ಆತಂಕ ತುಂಬಿತ್ತು. ಇದ್ದಕಿದ್ದಂತೆ ರಾತ್ರಿಯ ಘಟನೆ ನೆನಪಿಗೆ ಬಂದಿತು. ಆತ ಏಳುವಾಗಲೆ ಸಾವಿನ ಸುದ್ದಿಯಿಂದ ನಿಮ್ಮ ಮನ ಆತಂಕಗೊಂಡ ಪರಿತಾಪ ಪಡುವನೆಂದು ತಿಳಿಸಿದಾರಾಗಲಿ ಅದು ಅವರ ಸಾವಿನ ಸುದ್ದಿಯೆ ಎಂದು ನಾನು ಮನಸಿನಲ್ಲು ಎಣಿಸಲಿಲ್ಲ. ಬಹುಷಃ ಆತನು ಅದನ್ನು ಅರಿತಿರಲಿಲ್ಲ. ಇದೆಂತ ಚೋದ್ಯ!!.  ಪರೀಕ್ಷೆ ಮಾಡಲು ಹೊರಟವನು ನಾನು ಇದು ಭವಿಷ್ಯ ಹೇಳುವವನ ಬದುಕನ್ನೆ ಮುಗಿಸಿತೆ. ನಾನು ತಪ್ಪು ಮಾಡಿದೆನೆ. ಆವರು ಪ್ರಶ್ನೆ ಕೇಳಲು ಅದು ಸರಿಯಾದ ಸಮಯವಲ್ಲವೆಂದು ಹೇಳಿದರು, ನಾನು ಗಮನಿಸದೆ ಹಟ ಮಾಡಿದೆ. ಅವರಿಗೆ ಹತ್ತು ಸಾವಿರ ಕೊಡುವನೆಂದು ಬೇರೆ ಹೇಳಿದೆ. ಈಗ ಅವರು ಗೆದ್ದಿದ್ದಾರೆ ನಾನು ಭವಿಷ್ಯವನ್ನು ನಂಬುವ ಪ್ರಸಂಗವೆ ಎದುರಿಗೆ ನಡೆದಿದೆ, ಆದರೆ ಹಣವನ್ನು ಅವರಿಗೆ ತಲುಪಿಸುವ ಬಗೆ ಹೇಗೆ. ಏನೇನೊ ಯೋಚನೆಗಳು ನನ್ನನ್ನು ಆಕ್ರಮಿಸಿದವು.

 ಶ್ರೀಧರ್ ಏಕೊ ತುಂಬಾ ಗಂಭೀರವಾಗಿಬಿಟ್ಟರು ಅವರು ರಾತ್ರಿಯ ಯಾವ ವಿಷಯವನ್ನು ನನ್ನ ಬಳಿ ಪ್ರಸ್ತಾಪಮಾಡಲಿಲ್ಲ. ಅವರ ಕಣ್ಣಿನಲ್ಲಿ ನಾನು ಅಪರಾದಿಯೆ. ಬೆಂಗಳೂರು ನಿಲ್ದಾಣ ತಲುಪುವಾಗ ನಮ್ಮ  ಭೋಗಿಯ ತುಂಬಾ ಜನವೆ ಈಚೆ ಬರುವುದು ಸಹ ಕಷ್ಟ. ರಾಮಮೂರ್ತಿಯವರ ಮಗ ಅವನ ಸ್ನೇಹಿತರು ಎಲ್ಲರು ಮೇಲೆ ಹತ್ತಿದರು. ಮತ್ತೊಮ್ಮೆ ಪರೀಕ್ಷೆ ಮಾಡಿದರು. ಎಲ್ಲರ ಮುಖದಲ್ಲು ನಿರಾಸೆ. ಶವವನ್ನು ಕೆಳಗಿನ ಸೀಟಿಗೆ ವರ್ಗಾಯಿಸಿದರು. ನಾನು ಗಮನಿಸಿದೆ ರಾಮಮೂರ್ತಿಯವರ ಲೆದರ್ ಬ್ಯಾಗ್ ಮೇಲೆಯೆ ಇತ್ತು. ಎದ್ದು ಅದನ್ನು ಕೈಗೆ ತೆಗೆದುಕೊಂಡೆ. ಅವರ ರೈಲ್ವೆ ಅದಿಕಾರಿ ಹಾಗು ಪೋಲಿಸರ ಜೊತೆ ಚರ್ಚಿಸಿ ಶವವನ್ನು ಹೊರಗೆ ತೆಗೆದುಕೊಂಡು ಹೊರಟರು. ನಾನು ಇಷ್ಟವಿಲ್ಲದಿದ್ದರು ಒಂದು ಕೆಲಸ ಮಾಡಿದೆ. ನನ್ನ ಹತ್ತಿರವಿದ್ದ ಹತ್ತುಸಾವಿರ ರೂಪಾಯಿಗಳ ಕಟ್ಟನ್ನು , ರಾಮಮೂರ್ತಿಯವರ ಲೆದರ್ ಬ್ಯಾಗಿಗೆ ಸೇರಿಸಿದೆ. ಏಕೆಂದರೆ ಅದು ಅವರು ,ಭವಿಷ್ಯವನ್ನು ಶಾಸ್ತ್ರವನ್ನು ನಿಜವೆಂದು ನಿರೂಪಿಸಿ ಗೆದ್ದಿದ್ದ ಹಣ ಅದು. ಮತ್ತೆ ಹಿಂದಿನಿಂದ ಹೋಗಿ ಅವರ ಪತ್ನಿಯ ಕೈಗೆ ಆ ಬ್ಯಾಗನ್ನು ತಲುಪಿಸಿ
"ಮೇಡಮ್ ಇದು ನಿಮ್ಮದೆ ಬ್ಯಾಗು ಮೇಲೆ ಉಳಿದಿತ್ತು" ಅಂತ ತಿಳಿಸಿದೆ, ಆಕೆ ಆ ಬ್ಯಾಗನ್ನು ಪಡೆದು ಮಗನ ಹಿಂದೆ ಹೊರಟರು. ಶ್ರೀಧರ್ ಸಹ ಅವರ ಜೊತೆ ಹೋಗುತ್ತಿದ್ದರು. ಏಕೊ
"ಹೋಗಿ ಬರುವೆ" ಎಂದು ನನಗೊಂದು ಮಾತು ತಿಳಿಸಲಿಲ್ಲ.
ಎಲ್ಲರು ಹೊರಟರು. ನಾನು ನನ್ನ ಲಗೇಜನ್ನು ಹಿಡಿದು ಹೊರಬಂದೆ, ಆಟೋ ನಿಲ್ದಾಣ ತಲುಪಿದೆ.
ಆಟೊ ಡ್ರೈವರ್ ಎಲ್ಲಿಗೆ ಸಾರ್ ಎನ್ನುತ್ತ ನನ್ನಿಂದ ಲಗೇಜ್ ಪಡೆದು ಆಟೊದಲ್ಲಿಟ್ಟ. ಏತಕ್ಕೊ ನನ್ನ ಮುಖ ಗಮನಿಸಿದವನು
"ಏನು ಸಾರ್ ಕಣ್ಣೀರು, ಅಳುತಿದ್ದೀರ" ಎಂದ. ಹೌದಾ? ನಾನು ಅಳುತ್ತಿರುವೆನಾ?
ಆದರೆ ಅವನಿಗೆ ಏನೆಂದು? ಎಲ್ಲಿಂದ ಪ್ರಾರಂಬಿಸಿ ವಿಷಯ ತಿಳಿಸಲಿ?.
---------------------------------------------------------------------------

No comments:

Post a Comment

enter your comments please