Sunday, April 8, 2012

ರುಚಿ: ಕೋಡುಬಳೆ ಮಾಡುವ ವಿಧಾನ (ಗಂಡಸರಿಗೆ ಮಾತ್ರ)


ರುಚಿ: ಕೋಡುಬಳೆ ಮಾಡುವ ವಿಧಾನ (ಗಂಡಸರಿಗೆ ಮಾತ್ರ)

ರುಚಿ:  ಕೋಡುಬಳೆ ಮಾಡುವ ವಿಧಾನ (ಗಂಡಸರಿಗೆ ಮಾತ್ರ)
ಕೋಡುಬಳೆ ಮಾಡುವ ವಿಧಾನ (ಗಂಡಸರಿಗೆ ಮಾತ್ರ)
ಪ್ರೇರಣೆ: ಗಣೇಶರ ಇಡ್ಲಿಮಂಚೂರಿ
ಬೇಕಾಗುವ ವಸ್ತುಗಳು: ಅಕ್ಕಿಹಿಟ್ಟು, ಸ್ವಲ್ಪ ಚಿರೋಟಿ ರವೆ, ಸಾದ್ಯವಾದಲ್ಲಿ ಸ್ವಲ್ಪ ತುಪ್ಪ, ತೆಂಗಿನ ತುರಿ, ಅಚ್ಚಕಾರದ ಪುಡಿ
, ಇಂಗು, ಉಪ್ಪು, ಓಮ್ ಕಾಳುಗಳು, ಸ್ವಲ್ಪ ಜೀರಿಗೆ, ಮೆಣಸು, ಕರೆಯಲು ಎಣ್ಣೆ ಸಿದ್ದಪಡಿಸಿಟ್ಟುಕೊಳ್ಳಿ
ಮಾಡಬಹುದಾದ ಸಮಯ: ಮನೆಯಲ್ಲಿ ಹೆಂಡತಿ, ಹಾಗು ಮಕ್ಕಳು(ಗಳು) ಇಲ್ಲದ ಸಮಯ - ಕಡಿಮೆ ಅಂದರೆ ಎರಡು ತಾಸು ಅವರುಗಳು ಬರದ ಸಮಯ ಆರಿಸಿಕೊಳ್ಳುವುದು ಉತ್ತಮ.
ತಯಾರಿಸುವ ವಿದಾನ : ಮೊದಲಿಗೆ ಮನೆಯಲ್ಲಿರುವ ಮೊಬೈಲ್ ಸ್ವಿಚ್ ಆಫ್ ಮಾಡಿ, ನಂತರ ಲ್ಯಾಂಡ್ ಲೈನ್ ಡಿಸ್ಕನೆಕ್ಟ್ ಮಾಡಿ ಸಿದ್ದರಾಗಿ.
ಒಂದು (ತಲೆ ಒಡೆದು) ಲೋಟದಷ್ಟು ಅಕ್ಕಿಹಿಟ್ಟನ್ನು ದಪ್ಪ ತಳದ ಬಾಂಡಲೆಯಲ್ಲಿ ಒಲೆಯ ಮೇಲಿಟ್ಟು ಹದವಾಗಿ ಬಿಸಿಮಾಡಿ ಒಂದು ಬೌಲ್ ಗೆ ಹಾಕಿಕೊಳ್ಳಿ, ಹಾಗೆ ನಾಲ್ಕು ದೊಡ್ಡ ಚಮಚದಷ್ಟು ಚಿರೋಟಿ ರವೆಯನ್ನು ತುಪ್ಪದಲ್ಲಿ ಹುರಿದು ಅಕ್ಕಿ ಹಿಟ್ಟಿನ ಜೊತೆ ಹಾಕಿ.
ತುರಿದ ಕಾಯತುರಿಯನ್ನು ಅದೆ ಬಾಂಡಲೆಯಲ್ಲಿ ಹಾಕಿ ಸ್ವಲ್ಪ ಕೆಂಪು ಬರುವವರೆಗು ಹುರಿಯಿರಿ, ಅದನ್ನು ಅಕ್ಕಿ ಹಿಟ್ಟಿನ ಬೌಲ್ ಒಳಗೆ ಹಾಕಿ. ಈಗ ಒಂದು ಅಥವ ಒಂದುವರೆ ಚಮಚದಷ್ಟು ಅಚ್ಚಕಾರದ‌ ಪುಡಿಯನ್ನು , ಅರ್ದದಿಂದ ಒಂದು ಚಮಚದಷ್ಟು ಪುಡಿ ಉಪ್ಪನ್ನು ಆ ಹಿಟ್ಟಿಗೆ ಬೆರೆಸಿ , ಸ್ಟೀಲ್ ಚಮಚದಲ್ಲಿ ಮಿಕ್ಸ್ ಮಾಡಿ.
ಓಮ್ ಕಾಳುಗಳನ್ನು, ಸ್ವಲ್ಪ ಜೀರಿಗೆ , ಹಾಗು ಪುಡಿಮಾಡಿದ ಕಾಳುಮೆಣಸು ಪುಡಿಯನ್ನು ಚಿಟಿಕೆಯಷ್ಟು ಸೇರಿಸಿ. ನಾಲಕ್ಕು ಚಮಚದಷ್ಟು ಎಣ್ಣೆಯನ್ನು ಒಲೆಯ ಮೇಲಿಟ್ಟು ಬಿಸಿಮಾಡಿ ಅದಕ್ಕೆ ಇಂಗಿನ ಪುಡಿಯನ್ನು ಸೇರಿಸಿ, ಅದನ್ನು ಅಕ್ಕಿಹಿಟ್ಟಿನ ಮಿಶ್ರಣದ ಮೇಲೆ ಹಾಕಿ, ನಂತರ ಪುನಃ ಸ್ಟೀಲ್ ಚಮಚದಿಂದ ಚೆನ್ನಾಗಿ ಮಿಕ್ಸ್ ಮಾಡಿ.
ಈಗ ಅಕ್ಕಿ ಹಿಟ್ಟಿನ ಮಿಶ್ರಣ ಸ್ವಲ್ಪ ಸಹಜ ಶಾಖಕ್ಕೆ ಬರುವವರೆಗೂ ಕಾದು ನಂತರ ನೀರಿನಲ್ಲಿ ಹದವಾಗಿ ಕಲೆಸಿ ,[ ರೊಟ್ಟಿಗೆ ಕಲಸುವ ಹಿಟ್ಟಿನಂತೆ.}
ನೆನಪಿಡಿ : ಮಿಶ್ರಣ ಬಿಸಿ ಇರುವಾಗಲೆ ನೀರು ಹಾಕಿ ಕಲಸಿದರೆ ಕೋಡುಬಳೆ ನುರುಗಾಗುವದಿಲ್ಲ (crispy) , ಕೆಲವರು ಹೇಳುವಂತೆ ಚಮಚದಷ್ಟು ಮೈದಾ ಹಾಕಿದರು ಸಹ ಆರಿದ ನಂತರ ಕೋಡುಬಳೆ ಮೆತ್ತಗಾಗುವದರಿಂದ ಅದನ್ನು ಹಾಕಬೇಡಿ.
ಈಗ ಸ್ಟೀಲ್ ತಟ್ಟೆಯೊಂದನ್ನು ತೆಗೆದುಕೊಂಡು ಅದನ್ನು ಮೇಲುಕೆಳಗಾಗಿಸಿ ನೆಲದ ಮೇಲಿಟ್ಟು, ಸಿದ್ದವಾದ ಕೋಡುಬಳೆ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ತೆಗೆದುಕೊಂಡು, ತಟ್ಟೆಯ ಮೇಲೆ ಹಾಕಿ , ಕೈಯಿಂದ ಒತ್ತಿ, ನಂತರ ಸುರುಳಿಯಾಕಾರದಲ್ಲಿ ಸುತ್ತಿ ಇಟ್ಟುಕೊಳ್ಳಿ, ಅದೇ ರೀತಿ ಎಲ್ಲ ಹಿಟ್ಟನ್ನು ಕೋಡುಬಳೆಯನ್ನಾಗಿ ಒತ್ತಿಟ್ಟುಕೊಳ್ಳಿ.
ಈಗ ಒಲೆಯ ಮೇಲೆ ದಪ್ಪ ತಳದ ಬಾಂಡಲೆ ಇಟ್ಟು, ಅದರಲ್ಲಿ ಎಣ್ಣೆ ಹಾಕಿ ಚೆನ್ನಾಗಿ ಕಾದನಂತರ , ನೀವು ಸಿದ್ದ ಮಾಡಿಟ್ಟುಕೊಂಡಿರುವ ಕೋಡುಬಳೆ ಸುರಳಿಗಳನ್ನು ಎಣ್ಣೆಯಲ್ಲಿ ಬಿಟ್ಟು, ಕೆಂಪಾಗಿ ಹದ ಬರುವವರೆಗೂ ಬೇಯಿಸಿ. ನಂತರ ಹೊರಗೆ ತೆಗೆಯಿರಿ.
ಈಗ ಸ್ಟೌ ಆರಿಸಿ ಎಣ್ಣೆ ಆರಿದ ನಂತರ ಒಂದು ಮುಚ್ಚಲವಿರುವ ಪಾತ್ರೆ ಅಥವ ಬಾಟಲಿಗೆ ಎಣ್ಣೆಯನ್ನು ಹಾಕಿಡಿ, ನಂತರ ಅಡಿಗೆ ಮನೆಯಲ್ಲಿ ನೀವು ಮಾಡಿರುವ ಕೊಳಕನ್ನೆಲ್ಲ ತೆಗೆದು ಶುಭ್ರ ಮಾಡಿ.
ನಂತರ
ಒಂದು ಲೋಟ ಕಾಫಿ ಮಾಡಿಕೊಳ್ಳಿ.
ಕೋಡುಬಳೆಯನ್ನು ( ಪ್ಲೇಟ್ ಎಲ್ಲ ಬೇಡ ಚೆನ್ನಾಗಿರಲ್ಲ) ಒಂದು ಕೋಲಿನಂತ ವಸ್ತು ಅಥವ ಮಜ್ಜಿಗೆ ಕಡೆಯುವ ಕೋಲಿಗೆ ಎಂಟು ಹತ್ತು ಕೋಡುಬಳೆಯನ್ನು ಸಿಕ್ಕಿಸಿ, ಹಾಲಿಗೆ ಬಂದು ಟಿ.ವಿ ಆನ್ ಮಾಡಿ, ಸೋಪ ಮೇಲೆ ಕೂತು ಕೋಡುಬಳೆ ಮೆಲ್ಲುತ್ತ ಕಾಫಿ ಕುಡಿಯಿರಿ.
========================================================
ಕಡೆಯ ಸೂಚನೆ : ಒಂದು ವೇಳೆ ನೀವು ಮಾಡಿದ ಕೋಡುಬಳೆ ತುಂಬಾ ಕೆಟ್ಟದಾಗಿದ್ದರೆ ಅಥವ ಮದ್ಯದಲ್ಲಿ ಹದ ಕೆಟ್ಟು ಕೋಡುಬಳೆ ಮಾಡಲು ಬರದಿದ್ದರೆ, ಎಣ್ಣೆ, ಹಿಟ್ಟು ಮುಂತಾದ ವಸ್ತುಗಳನ್ನೆಲ್ಲ ಕಣ್ಣಿಗೆ ಕಾಣದಂತೆ ಆಚೆ ಹಾಕಿ, ಕೋಡುಬಳೆಯನ್ನು ನಿರ್ಲಿಪ್ತರಾಗಿ ಆಚೆ ಎಸೆದು. ಅಡಿಗೆಮನೆಯನ್ನು ಶುದ್ದಗೊಳಿಸಿ ನೀವು ಮಾಡಿದ ಪ್ರಯತ್ನ ಯಾರ ಕಣ್ಣಿಗೂ ಬೀಳದಂತೆ ಎಚ್ಚರವಹಿಸಿ. ನಂತರ ಹೊರಗೆ ಬಂದು ಕಳ್ಳಬೆಕ್ಕಿನಂತೆ ಟಿ.ವಿ. ನೋಡುತ್ತ ಕುಳಿತಿರಿ
ಟಪ್.. ಟಪ್ ಬಾಗಿಲ ತಟ್ಟುವ ಶಬ್ದ ....... ಹೋಗಿ ನೋಡಿ ನಿಮ್ಮವರು ಬಂದ ಹಾಗಿದೆ.

No comments:

Post a Comment

enter your comments please