Sunday, October 14, 2012

ಬಾಹುಬಲಿ

ಕಲ್ಕಟ್ಟೆ ಎಂಬ ಹಳ್ಳಿಯ   ಬಸ್  ನಿಲ್ದಾಣದಲ್ಲಿ  ತಲೆಕೆಟ್ಟು ಕುಳಿತಿದ್ದ ಲಕ್ಕೆಗೌಡ. ಅವನ ಹೆಸರು ಮೊದಲಿಗೆ ಲಕ್ಷ್ಮಣಗೌಡನೆಂದೆ ಇತ್ತು, ಶಾಲೆಗೆ ಸೇರುವಾಗ ಹಳ್ಳಿಯ ಮಾಸ್ತರು ಲಕ್ಕೆಗೌಡ ಎಂದು ರಿಜಿಸ್ಟ್ರಿನಲ್ಲಿ ಬರೆದರು ನಂತರ ಅದೆ ಹೆಸರು ಸ್ಥಿರವಾಯಿತು. ಅವನು ಊರಿಗೆ ಹೋಗಲು ಬಸ್ಸು ಕಾಯುತ್ತ ಕುಳಿತಿದ್ದ. ಇನ್ನು ತಿಪಟೂರಿಗೆ ಹೋಗುವ ಬಸ್ಸು ಬಂದಿರಲಿಲ್ಲ. ಅವನಿಗೆ ಎಲ್ಲಿ ಹೋಗಬೇಕೆಂದೆ ಸ್ವಷ್ಟ ನಿರ್ದಾರವಿರಲಿಲ್ಲ. ಮೊದಲು ಹಾಳು ಹಳ್ಳಿಯಿಂದ ಹೊರಹೋಗಬೇಕು ಅಂತ ಅವನ ಯೋಚನೆ.

ಅದೇಕೊ ಅವನಿಗೆ ಮನೆಯಲ್ಲಿ ಅಮ್ಮ, ಹೆಂಡತಿ, ಕಡೆಗೆ ಮಕ್ಕಳು ಸಹ , ಎಲ್ಲ ತನ್ನ ವಿರೋದಿಗಳು ಅನ್ನಿಸಿಬಿಟ್ಟಿತ್ತು. ಅವನು ಯೋಚಿಸುತ್ತಿದ್ದ
‘ಅಲ್ಲ ನಾನು ಕೇಳುವದರಲ್ಲಿ ಅನ್ಯಾಯ ಏನಿದೆ. ಬಾಯಿ ಬಿಟ್ಟು ಕೇಳದೆ , ಆ ದರಿದ್ರ ರಾಮ ನನಗೆ ಹಾಗೆ ಬಿಟ್ಟು ಕೊಡಲು ಇದೇನು ರಾಮಾಯಣದ  ಕಾಲವೆ. ಇರುವ ತೆಂಗಿನ ತೋಟ ಬಾಗಕ್ಕೆ ಎಲ್ಲ ಒಪ್ಪಿದ್ದಾಗಿದೆ, ಕೆರೆಯ ಕಡೆಯ ಬಾಗ ನನಗೆ ಬೇಕು ಅಂತ ಅಷ್ಟೆ ತಾನು ಕೇಳಿದ್ದು, ಆದರೆ ಅಣ್ಣನಾದವನು ಅದಕ್ಕು ಒಪ್ಪುತ್ತಿಲ್ಲ, ಎಲ್ಲವು ಅವನು ಹೇಳಿದ್ದೆ  ಮಾತು ಅನ್ನುವಂತೆ ನಡೆಯಬೇಕು. ಥುತ್ ದರಿದ್ರ, ಅವ್ವ, ಹೋಗಲಿ ಕಡೆಗೆ ತನ್ನ ಹೆಂಡತಿಯೆ ತನಗೆ ಬಾಯಿ ಬಡಿಯುತ್ತಿದ್ದಾಳೆ,  ಹೊರಗೆ ಎಲ್ಲರ ಮುಂದೆ ನನ್ನ ಮರ್ಯಾದೆ ಎಕ್ಕುಟ್ಟಿ ಹೋಗಿದೆ, ಇಲ್ಲಿರುವದಕ್ಕಿಂತ ಊರು ಬಿಟ್ಟು ಹೊರಗೆ ಹೊರಟು ಹೋಗುವುದೆ ವಾಸಿ ‘, ಅಂದು ಕೊಂಡು ಪಕ್ಕಕ್ಕೆ ಉಗಿದ. ಕೋಪದಲ್ಲಿ ಏನು ತಿನ್ನದೆ ಹೊರಟಿದ್ದು ಹೊಟ್ಟೆಯಲ್ಲಿ ಚುರುಗುಟ್ಟುತ್ತಿತ್ತು.

ರಾಮೇಗೌಡ ಹಾಗು ಲಕ್ಕೆಗೌಡ ಅಣ್ಣತಮ್ಮಂದಿರು, ಚಿಕ್ಕ ವಯಸಿನಲ್ಲಿ ತಂದೆಯನ್ನು ಕಳೆದುಕೊಂಡ ಅವರನ್ನು ತಾಯಿ ಹನುಮವ್ವ  ಅಕ್ಕರೆಯಿಂದ ಬೆಳೆಸಿದ್ದಳು. ಊರಿಗೆ ಮಾದರಿ ತನ್ನ ಮಕ್ಕಳು ರಾಮ ಹಾಗು ಲಕ್ಕ ಅನ್ನುವ ಅವಳ ಭ್ರಮೆ ಅವರು ದೊಡ್ಡವರಾಗುತ್ತಲೆ ನೀರ ಗುಳ್ಳೆಯಂತೆ ಒಡೆದುಹೋಗಿತ್ತು. ಚಿಕ್ಕವಯಸಿನಿಂದಲು ಅಣ್ಣನ ಕೈಹಿಡಿದೆ ತಿರುಗುತ್ತಿದ್ದ ಲಕ್ಕೆಗೌಡ ವಯಸಿಗೆ ಬರುವಾಗ ಅದೇನು ಆಯಿತೊ ಅಣ್ಣನನ್ನು ಕಾಣುವಾಗ ಹಾವನ್ನು ಕಂಡ ಮುಂಗುಸಿಯಂತೆ ಆಡುತ್ತಿದ್ದ. ‘ಎಲ್ಲ ದರಿದ್ರ  ಊರಿನ ಪಾರ್ಟಿ ರಾಜಕೀಯದಿಂದ’ ಎಂದು ಹನುಮವ್ವ  ಬೆರಳು ಮುರಿಯುವಳು.  ಗ್ರಾಮಪಂಚಾಯಿತಿ, ಜಿಲ್ಲಾ ಪಂಚಾಯಿತು ಚುನಾವಣೆ ಎನ್ನುವ ಭೂತ ಹಳ್ಳಿ ಹಳ್ಳಿಗಳನ್ನು ಹೊಕ್ಕು ಮನೆಗಳನ್ನು ಒಡೆದಿತ್ತು. ಒಂದೆ ಮನೆಯಲ್ಲಿ ಎರಡು ಪಕ್ಷಗಳು ಉದಯಿಸಿ ಹಳ್ಳಿಯ ಮನೆಗಳನ್ನು ನರಕ ಮಾಡಿತ್ತು.

  ಅಣ್ಣ ತಮ್ಮ ಇಬ್ಬರು ಬೇರೆ ಬೇರೆ ರಾಜಕೀಯ ಪಕ್ಷಕ್ಕೆ ಸೇರಿದವರು.  ಆದರೆ ಅದರ ಪರಿಣಾಮ ಮನೆಯ ಒಳಗು ಆಗಿದ್ದು ಮಾತ್ರ ಬೇಸರದ ಸಂಗತಿ,  ಅಣ್ಣ ತಮ್ಮಂದಿರ ನಡುವೆ ಸಣ್ಣ ಸಂಗತಿಗು ವಾದ ವಿವಾದ ಏರ್ಪಡುತ್ತಿತ್ತು.  ಅಣ್ಣ ಏರಿಗೆ ಎಳೆದರೆ ತಮ್ಮ ನೀರಿಗೆ ಅನ್ನುವನು. ಹೊರಗಿನ ರಾಜಕೀಯವನ್ನು ಮನೆಯ ಒಳಗೆ ತರಬೇಡಿ ಎನ್ನುವ ಹೆಂಗಸರ ಮಾತಂತು ಕೇಳುವ ಹಾಗೆ ಇರಲಿಲ್ಲ. ಮೊದಲಾದರೆ ತನ್ನ ಅತ್ತಿಗೆ ಮಾದೇವಿಯನ್ನು ಕಂಡಾಗಲೆಲ್ಲ , ‘ಅತ್ತಿಗೆ ನೀವು ಸಂಪತಿಗೆ ಸವಾಲ್ ನಲ್ಲಿ ರಾಜಕುಮಾರನಿಗೆ ಇದ್ದರಲ್ಲ ಅಂತ ಅತ್ತಿಗೆ, ತಾಯಿಗೆ ಸಮಾನ ‘ ಎಂದು ಅವಳನ್ನು ಹೊಗಳುತ್ತ ನಗುತ್ತ ಹೊಂದಿಕೊಂಡು ಇದ್ದವನು ಅದೇನು ಆಯಿತೊ, ಅವಳ ಕೈಲು ಮಾತೆ ನಿಲ್ಲಿಸಿದ.  

ಆದರೆ ಅದೇನು ವಿಚಿತ್ರವೊ ಲೋಕಾರೂಡಿಗೆ ವಿರುದ್ದವಾಗಿ ಮನೆಯಲ್ಲಿ  ಹೊರಗಿನಿಂದ ಬಂದ ಇಬ್ಬರು ಹೆಂಗಸರು ಅಕ್ಕತಂಗಿಯರಿಗಿಂತ ಹೆಚ್ಚಾಗಿ  ಹೊಂದಿಕೊಂಡು ಬಿಟ್ಟರು. ತಮ್ಮ ಗಂಡಂದಿರ ಜಗಳದ ಬಗ್ಗೆ ತಲೆ ಕೆಡಸಿಕೊಳ್ಳಲೆ ಇಲ್ಲ. ಹಿರಿಯಳಾದ ಮಾದೇವಿ,  ಲಕ್ಕೆಗೌಡನ ಹೆಂಡತಿ ರಾಜಮ್ಮ  ಒಬ್ಬರಿಗೊಬ್ಬರು ಅನ್ನುವಂತೆ ಇದ್ದರು.  ಅದರ ಪರಿಣಾಮ ವೆಂಬಂತೆ ಅವರ ಮಕ್ಕಳು ಸಹ , ರಾಮೇಗೌಡನ ಮಗ ವಿಕಾಸ್ ಹಾಗು ಲಕ್ಕೆಗೌಡನ ಮಗ ವಿಶಾಲ್ ಸದಾ ಒಬ್ಬರ ಕೈ ಹಿಡಿದು ಒಬ್ಬರು ಸುತ್ತೋರು, ಮನೆಯಲ್ಲು  ಒಬ್ಬರ ಬಿಟ್ಟು ಒಬ್ಬರು ಇರದೆ ಸದಾ ಜೊತೆಯಾಗೆ ಊಟ, ನಿದ್ದೆ , ಸ್ನಾನ ಎಲ್ಲ, ಅವರಿಗೆ ಒಂದೆ ಬೇಸರ ಅದೇಕೆ ನಮ್ಮ ಅಪ್ಪಂದಿರು ಹೀಗೆ ಕೋತಿ ತರ ಆಡ್ತಾರೆ ಎಂದು.

ಕಡೆಗೆ ಅಣ್ಣ ತಮ್ಮಂದಿರ ಜಗಳ ಆಸ್ತಿಯನ್ನು ಪಾಲು ಮಾಡು ಎನ್ನುವಲ್ಲಿಗೆ ಬಂದು ನಿಂತಿತು, ಇವರಿಬ್ಬರ ಜಗಳ ಪರಿಹರಿಸಲಾಗದೆ ಅವರ ತಾಯಿ ಹನುಮವ್ವ ಸಹ ಸೋತು ಏನಾದರು ಮಾಡಿಕೊಳ್ಳಿ ಅಂದುಬಿಟ್ಟಳು. ಹಂಚಿಕೊಳ್ಳಲು ದೊಡ್ಡ ಆಸ್ತಿ ಏನಿರಲಿಲ್ಲ. ಇರುವ ಮನೆ ಬಿಟ್ಟರೆ ಕೆರೆ ಕೆಳಗಿದ್ದ ತೆಂಗಿನ ತೋಟ . ಸುಮಾರು ನೂರು ಫಲಕೊಡುವ ತೆಂಗಿನ ಮರವಿತ್ತು.  ಸರಿ ಇಬ್ಬರು ಮನೆಯನ್ನು ಹಂಚಿಕೊಳ್ಳುವದೆಂದು, ಹಾಗೆಯೆ ತೋಟವನ್ನು ಸಹ ಅರ್ದ ಅರ್ದ ಮಾಡುವದೆಂದು , ಹೊರಗಿನ ಜನರ ಜೊತೆ ಕುಳಿತು ನಿರ್ದರಿಸಿದರು.  

ಎಲ್ಲ ಸರಿ ಹೋಯಿತು ಎನ್ನುವಾಗ , ಲಕ್ಕೆಗೌಡ ತರಲೆ ತೆಗೆದ, ತನಗೆ ಕೆರೆ ಕಡೆಯ ಬಾಗವೆ ಬೇಕು ಎಂದು, ಅಲ್ಲಿ ನೀರಿನ ಪಲವತ್ತು ಇದ್ದು, ಮತ್ತೊಂದು ಬಾಗಕ್ಕೆ ನೀರು ಹೋಗಬೇಕಾದರೆ, ಈ ಬಾಗದ ಮುಖಾಂತರೆ ವೆ ಹೋಗಬೇಕಿತ್ತು ಇದನ್ನೆಲ್ಲ ಯೋಚಿಸಿ ಅವನು ತನಗೆ ಕೆರೆಯ ಪಕ್ಕದ ಪಶ್ಚಿಮ ದಿಕ್ಕನ ಅರ್ದಬಾಗವೆ ಬೇಕೆಂದು ಹಟ ಹಿಡಿದ. ಆದರೆ ರಾಮೇಗೌಡನು ತಿರುಗಿಬಿದ್ದ,    ತಾಯಿ ಸಹ ಬುದ್ದಿ ಹೇಳಿದಳು , ಆದರೆ ರಾಮನು
“ನೀನು ಸುಮ್ಮನೀರವ್ವ , ಅವನು ಚೆಂಗಲು ಗೆಳೆಯರ ಮಾತು ಕೇಳಿ ಹೀಗೆಲ್ಲ ಆಡ್ತಾನೆ, ಅವನು ಹೇಳಿದಂತೆ ಕುಣಿಯಲು ಆಗಲ್ಲ ಬೇಕಾದ್ರೆ ತಗೋ ಇಲ್ಲಂದ್ರೆ ಹಾಳಾಗಿಹೋಗು ಅನ್ನು” ಎಂದು ಬಿಟ್ಟ. ತಮ್ಮನಿಗು ರೇಗಿ ಹೋಯಿತು, ತನ್ನ ಗೆಳೆಯರನ್ನು ಚೆಂಗಲು ಎನ್ನುವುದೆ, ಇವನ ಗೆಳೆಯರೇನು ಸಾಚವೆ ಎಲ್ಲರು ಹೆಂಡ ಕುಡುಕರು ಅಂತ ಕೂಗಿ ಆಡಿದ. ಮಾತಿಗೆ ಮಾತು ಬೆಳೆದು ಅಣ್ಣನಿಗೆ ಹೊಡೆಯಲು ಹೋದ.

ಆದರೆ ಮನೆಯಲ್ಲಿ ಇಬ್ಬರು ಹೆಂಗಸರಿಗು ಆಸ್ತಿ ಬೇರೆ ಆಗುವುದೆ ಬೇಕಿರಲಿಲ್ಲ. ಹಾಗಿರುವಾಗ ಈ ಜಗಳ ಬೇರೆ, ಲಕ್ಕೆಗೌಡನ ಹೆಂಡತಿ ತಿರುಗಿಬಿದ್ದಳು.
“ಹಾಳಾದವನೆ ನಿನೆಗೆ ಏನು ಬಂದಿದೆ, ಸುಮ್ಮನೆ ಹೊರಗಿನವರ ಮಾತು ಕೇಳಿ ಹಾಳಾಗ್ತ ಇದ್ದಿ, ಬಾಗ ಬೇಕೆ ಬೇಕು ಅನ್ನುವಾಗ ಸುಮ್ಮನೆ ಅರ್ದ ತೆಗೆದು ಕೊಳ್ಳದೆ, ಇಲ್ಲದ ತಗಾದೆ ತೆಗಿತೀಯ, ನಿನ್ನಿಂದ ಮನೇನೆ ಹಾಳಾಗಿ ಹೋಯ್ತು” ಅನ್ನುತ್ತ ಬಾಯಿಗೆ ಬಂದಂತೆ ಬೈಯ್ದುಬಿಟ್ಟಳು,

ಸ್ವಂತ ಹೆಂಡತಿಯೆ , ತನಗೆ ಒತ್ತಾಸೆಯಾಗದೆ    ಇರುವುದು ಅವನ ಪಿತ್ತ ನೆತ್ತಿಗೇರಿಸಿತು, ಹೆಂಡತಿಗು ಹಿಡಿದು ನಾಲಕ್ಕು ಬಾರಸಿದ, ನಂತರ ತಲೆಕೆಟ್ಟವನಂತೆ , ಚೀಲ ಹಿಡಿದು, ನಾನಿನ್ನು ಈ ಮನೇಲಿ ಇರಲ್ಲ ನೀವೆ ಇದ್ದು ಹಾಳಾಗಿ ಎಂದು ಕೂಗಾಡಿ ಹೊರಟು ಬಿಟ್ಟ.  ಈಗ ಬಸ್ ಸ್ಟಾಂಡಿಗೆ ಬಂದು ಬರುವ ಎಸ್ ಆರ್ ಎಸ್ ಬಸ್ಸಿಗೆ ಕಾಯುತ್ತ ಕುಳಿತಿದ್ದಾನೆ. ಕೈಯಲ್ಲೊಂದು ಬ್ಯಾಗು, ಜೇಬಿನಲ್ಲಿ ತುಂಬಿರುವ ಹಣ ಅವನಿಗೆ ದೈರ್ಯ ಕೊಡುತ್ತಿದೆ, ಯಾರದೇನು ಅನ್ನುವ ಬಾವನೆ.



ತಿಪಟೂರಿನ ಬಸ್ ನಿಲ್ದಾಣದಲ್ಲಿ ಹಳ್ಳಿಯಿಂದ ಬಂದು ಇಳಿದ ಅವನು   ಚಿಂತಿಸಿದ ತುಮಕೂರಿಗೆ ಹೋಗೋಣವೆ  ಎಂದು ಏಕೊ ಬೇಸರ ಎನಿಸಿತು, ಅಲ್ಲಿ ಎಲ್ಲರು ಪರಿಚಿತರೆ, ಯಾರ ಮುಖವನ್ನು ನೋಡಲು ಅವನಿಗೆ ಇಷ್ಟವಾಗಲಿಲ್ಲ. ಎದುರಿಗೆ ಹಾಸನದ ಬಸ್ ಕಾಣಿಸಿತು.  ಏನಾದರು ಆಗಲಿ ಎಂದು ಬಸ್ ಹತ್ತಿದ, ಸಂಜೆ ಹಾಸನ ತಲುಪಿ, ಹೋಟೆಲ್ ನಲ್ಲಿ ರೂಮು ಮಾಡಿ ಇದ್ದ. ಬೆಳಗ್ಗೆ ಎದ್ದವನಿಗೆ ಏನು ಮಾಡುವುದು ಅನ್ನುವ ಚಿಂತೆ,  ಎಲ್ಲಿಯಾದರು ಹೋಗಿ ಬಂದರಾಗದೆ ಅನ್ನಿಸಿ, ಹೋಟೆಲ್ ಮಾಣಿ ಒಬ್ಬನನ್ನು ಕೇಳಿದ, ಇಲ್ಲಿ ಸುತ್ತ ಮುತ್ತ ಹೋಗಿ ನೋಡುವುದು ಏನಿದೆ ಎನ್ನುತ್ತ.  ಹಾಸನ ಜಿಲ್ಲೆಯಲ್ಲಿ ನೋಡುವ ಸ್ಥಳಕ್ಕೇನು ಕಡಿಮೆ ಅವನು ಬೇಲೂರು ಹಳೆಬೀಡು, ಶ್ರವಣಬೆಳಗೊಳ ಮುಂತಾದ ಸ್ಥಳದ ಹೆಸರು ಹೇಳಿದ.

ಲಕ್ಕೆಗೌಡ ಹಿಂದೊಮ್ಮೆ ಬೇಲುರು ಹಳೆಬೀಡಿಗೆ ಹೋಗಿದ್ದ. ಶ್ರವಣಬೆಳಗೊಳವನ್ನು ನೋಡಿರಲಿಲ್ಲ. ಹಾಗಾಗಿ ಅಲ್ಲಿಗೆ ಹೋಗಿ ಬರುವದೆಂದು ನಿರ್ದರಿಸಿದ, ಅಲ್ಲಿ ನೋಡುವದೆನಿದೆ ಎಂಬ ಪೂರ್ತಿ ಕಲ್ಪನೆಯು ಇಲ್ಲದೆ , ಹೋಟೆಲಿನಲ್ಲಿ ತಿಂಡಿ ಮುಗಿಸಿ, ರೂಮ್ ಖಾಲಿ ಮಾಡಿ . ಬಸ್ ಹತ್ತಿ ಶ್ರವಣಬೆಳಗೊಳ ತಲುಪಿದ.  ಹಾಸನದಿಂದ ಸರಿ ಸುಮಾರು ಐವತ್ತು ಕಿ.ಮಿ ದೂರವೇನೊ.

 ಶ್ರವಣಬೆಳಗೊಳ ಕರ್ನಾಟಕದ ಪ್ರಸಿದ್ದ ಯಾತ್ರಸ್ಥಳ. ನೋಡಲು ಅಲ್ಲಿ ಸಾಕಷ್ಟಿತ್ತು. ವಿವಿದ ಸ್ಥಳಗಳಿಂದ ಬಂದ ಯಾತ್ರಾರ್ತಿಗಳು ತುಂಬಿ ತುಳುಕುತ್ತಿದ್ದರು.  ಶ್ವವಣಬೆಳಗೊಳ ಎಂಬ ಹೆಸರು ಬರಲು ಕಾರಣವಾದ ಊರಮಧ್ಯದಲ್ಲಿರುವ  ಕೊಳ, ಅದನ್ನು ಶ್ವೇತ ಸರೋವರ ಎಂದು ಅನ್ನುವರಂತೆ ,  ಎದುರುಬದುರಾಗಿ ಇರುವ ಚಂದ್ರಗಿರಿ ಹಾಗು ಇಂದ್ರಗಿರಿ ಎಂಬ ಬೆಟ್ಟ. ಚಾವುಂಡರಾಯ ಕಟ್ಟಿಸಿದ ದೇವಾಲಯ. ಸಾಕಷ್ಟು ಜಿನಮಂದಿರಗಳು. ತೀರ್ಥಂಕರರ ದೇಗುಲಗಳು , ಕನ್ನಡ ತಮಿಳು ಹಾಗು ಮರಾಠಿಯಲ್ಲಿನ ಶಿಲಾಲೇಖನಗಳು ಎಲ್ಲವನ್ನು ನೋಡುತ್ತ, ಅವನು ಇಂದ್ರಗಿರಿಯನ್ನು ಹತ್ತುವಷ್ಟರಲ್ಲಿ  ಬಿಸಿಲು ನಡುನೆತ್ತಿಯಲ್ಲಿದ್ದು, ಸುಸ್ತಾಗಿತ್ತು.

ಭೂಮಿಯಿಂದ ಆಕಾಶದುದ್ದಕ್ಕು ನಿಂತ ಬಾಹುಬಲಿಯ ಸುಂದರ ಮೂರ್ತಿಯನ್ನು ನೋಡುತ್ತ ಮುಗ್ದನಾದ “ ಅದ್ಯಾರೊ ತಂದು ಇಲ್ಲಿ ನಿಲ್ಲಿಸಿದನೊ ‘ ಎಂಬ ಉದ್ಗಾರ ಲಕ್ಕೆಗೌಡನಿಗೆ. ಈಗ ಅವನಿಗೆ ಒಬ್ಬನೆ ಬಂದಿದ್ದು ಬೇಸರವೆನಿಸಿತ್ತು. ತನ್ನ ಮಗ ಹಾಗು ಹೆಂಡತಿಯನ್ನು ಕರೆತಂದಿದ್ದರೆ ಅವರು ನೋಡುತ್ತಿದ್ದರಲ್ಲ ಎಂಬ ಭಾವ ತುಂಬಿತು.  ಮಗುವಿನಂತೆ ನಿರ್ವಾಣನಾಗಿ ನಿಂತ ಗೊಮ್ಮಟನನ್ನು ಕಾಣುವಾಗ ಅವನಲ್ಲಿ ಎಂತದೊ ಧಿವ್ಯಭಾವ ತುಂಬಿಕೊಂಡಿತು.  ಸ್ವಲ್ಪ ಕಾಲ ಕುಳಿತು ಕೊಳ್ಳಬೇಕೆಂಬ  ಭಾವ ಅವನಲ್ಲಿ ತುಂಬಿ ಸ್ವಲ್ಪ ಜನ ಸಂಚಾರ ವಿರಳವಿರುವ ಜಾಗನೋಡಿ ಕುಳಿತ.

ಲಕ್ಕೆಗೌಡ  ಗಮನಿಸಿದ, ಅವನಿಂದ ಸ್ವಲ್ಪ ದೂರದಲ್ಲಿ ಶ್ವೇತ ವಸ್ತ್ರ ಧರಿಸಿದ   ವಯಸ್ಸಾದ ಪುರುಷರೊಬ್ಬರು ಕುಳಿತ್ತಿದ್ದರು. ತಲೆ ಸಂಪೂರ್ಣ ಬೋಳಾಗಿದ್ದು ಬಿಸಿಲಿನಲ್ಲಿ ಮಿಂಚುತ್ತಿತ್ತು. ಕನ್ನಡಕ ಧರಿಸಿದ್ದ ಅವರು ಪಕ್ಕದಲ್ಲಿ ಒಂದು ಕೋಲನ್ನು ಇಟ್ಟುಕೊಂಡಿದ್ದರು, ಬಹುಷಃ ನಡೆಯುವಾಗ ಆಸರೆಗಾಗಿ  ಎಂದುಕೊಂಡ . ಆತನು ಸಹ ಲಕ್ಕೆಗೌಡನನ್ನು ನೋಡುತ್ತಿದ್ದವರು , ನಂತರ ನಗುತ್ತ ಪ್ರಶ್ನಿಸಿದರು
“ನೀವು ಎಲ್ಲಿಂದ ಬರುತ್ತಿದ್ದೀರಿ?  ಎಲ್ಲವನ್ನು ನೋಡಿದಿರ , ಎಷ್ಟು ಸುಂದರವಲ್ಲವೆ ?”
ಲಕ್ಕೆಗೌಡ ಹೇಳಿದ
“ನಾನು ತಿಪಟೂರಿನ ಕಡೆಯವನು, ಹೀಗೆ ಬಂದೆ , ನೀವನ್ನುವುದು ನಿಜ, ಎಲ್ಲವು ತುಂಬಾನೆ ಚೆನ್ನಾಗಿದೆ ಇನ್ನೊಮ್ಮೆ ನಿದಾನಕ್ಕೆ ಬರಬೇಕು”
“ಹೌದಲ್ಲವೆ, ಒಮ್ಮೆ ಬಂದರೆ ಮತ್ತೆ ಬರಲೇ ಬೇಕೆನಿಸುವ ಪವಿತ್ರ ಜಾಗವಲ್ಲವೆ, ನೋಡಿದಿರ, ಬಾಹುಬಲಿಸ್ವಾಮಿ ನಿಂತಿರುವ ದೃಷ್ಯವನ್ನು  ನೋಡಿದಿರ ಎಷ್ಟು ಮೋಹಕ” ಎಂದರು ಆ ಬಿಳಿಯ ವಸ್ತ್ರದಾರಿ.
“ಬಾಹುಬಲಿಸ್ವಾಮಿಯೆ ? “ ಎಂದ  ಲಕ್ಕೆಗೌಡ ಸ್ವಲ್ಪ ಅಯೋಮಯನಾಗಿ.
ಅವರು ನಗುತ್ತ,  ಇವನೆ  ನೋಡಿ ಎನ್ನುತ್ತ , ಉದ್ದಕ್ಕು ನಿಂತಿದ್ದ ಗೊಮ್ಮಟನನ್ನು ತೋರಿಸಿದರು.
“ಇದು ಗೊಮ್ಮಟೇಶ್ವರನ ವಿಗ್ರಹವಲ್ಲವೆ ?” ಎಂದು ಪ್ರಶ್ನಿಸಿದ. ಲಕ್ಕೆಗೌಡನಿಗೆ ಇತಿಹಾಸ ಪುರಾಣಗಳ ಜ್ಞಾನ ಅಷ್ಟಕಷ್ಟೆ
ಆತ ನಗುತ್ತ ನುಡಿದರು
“ಹೌದು ಗೋಮಟೇಶ್ವರನೆ ಅವನು, ಬಾಹುಬಲಿ ಸ್ವಾಮಿ ಎಂದರು ಅವನೆ “
ಲಕ್ಕೆಗೌಡನಿಗೆ ಆಶ್ಚರ್ಯ , ಅವನು ನುಡಿದ “ನಿಮಗೆ ಇಲ್ಲಿಯ ಎಲ್ಲ ಕತೆಯು ಗೊತ್ತೆ,  ಈ ವಿಗ್ರಹಕ್ಕೆ ಸೇರಿದ ಕತೆಯನ್ನು ಹೇಳುತ್ತಿರ, ನಿಮಗೆ ಎಲ್ಲಿಯಾದರು ಹೋಗುವ ಕೆಲಸವಿಲ್ಲವಷ್ಟೆ “ ಎಂದು ಕೇಳಿದ, ಅವನಿಗೆ ಸಾಕಷ್ಟು ಪುರುಸತ್ತು ಇತ್ತು.
ಆತ ಕಣ್ಮುಚ್ಚಿದರು. ಭಕ್ತಿಭಾವದಿಂದ ನುಡಿದರು “ ಸ್ವಾಮಿಯ ಪಾದದಲ್ಲಿಯೆ ಕುಳಿತು  ಆ ಮಹನೀಯನ ಕತೆ ಹೇಳುವ ಸೌಭಾಗ್ಯ ದೊರೆತರೆ ಅದಕ್ಕಿಂತ ಮತ್ತೇನು ಕೆಲಸವಿದ್ದೀತು, ಖಂಡೀತ ಹೇಳುವೆ ಕೇಳಿ “ ಎಂದು ಸಿದ್ದರಾದರು. ಲಕ್ಕೆಗೌಡನು ಶ್ರದ್ದೆಯಿಂದ ಕೇಳಲು ಕುಳಿತ.


=======================================  

ಜೈನದರ್ಮವನ್ನು ಪ್ರಥಮಬಾರಿಗೆ ಉಪದೇಶಿಸಿದವರು ವೃಷಭನಾಥರು. ಮೊದಲಿಗೆ ಮಹಾರಾಜರಾಗಿದ್ದವರು ವೈರಾಗ್ಯಭಾವ ತಾಳಿ ರಾಜ್ಯವನ್ನು ಮಕ್ಕಳಿಗೆ ಹಂಚಿಕೊಟ್ಟು ತಪಸ್ಸಿಗೆ ತೆರಳಿದರು. ಅವರಿಗೆ ಇಬ್ಬರು ಪತ್ನಿಯರು ಸುನಂದ ಮತ್ತು ನಂದಾ. ಸುನಂದಳ ಮಗ ಬಾಹುಬಲಿ. ನೋಡಲು ಆಜಾನುಬಾಹು. ಯುದ್ದಕ್ಕೆ ನಿಂತರೆ ಎದುರಿಲ್ಲ, ಗೆಲುವು ನಿಶ್ಚಿತ. ಆದರೆ ಶಾಂತ ಭಾವ.  

ಹಿರಿಯನಾದ ಭರತನು ತನ್ನ ರಾಜ್ಯದಲ್ಲಿ ಆಡಳಿತ ನಡೆಸಿಕೊಂಡಿದ್ದವನು. ಆದರೆ ತಾನು ದಿಗ್ವಿಜಯಿಯಾಗಿ ಚಕ್ರವರ್ತಿಯಾಗಿ ಮೆರೆಯಬೇಕೆಂಬ ಆಸೆ ಅವನಲ್ಲಿ ತಲೆಯೆತ್ತಿತ್ತು. ಮಹಾರಾಜನು ಮನಸ್ಸು ಮಾಡಿದ ಮೇಲೆ ಇನ್ನೇನು ಆಡ್ಡಿ. ಅವರ ದಿಗ್ವಿಜಯ ಯಾತ್ರೆ ಹೊರಟು ಬಿಟ್ಟಿತ್ತು. ಮುಂದೆ ಕೀರ್ತಿಚಕ್ರ, ಅದನ್ನವನು ದರ್ಮಚಕ್ರವೆಂದು ಕರೆಯುತ್ತಿದ್ದನು. ಹಿಂದೆ ಹಿಂದೆಗೆ ಸಾಗರದಂತ ಸೈನ್ಯ. ಸುತ್ತಮುತ್ತಲ ರಾಜ್ಯದ ಅರಸರೆಲ್ಲ  ತಲೆಬಾಗಿ ಶರಣಾದರು, ಅವನ ಜಯವನ್ನು ಒಪ್ಪಿ ಕಪ್ಪಕಾಣಿಕೆ ಸಲ್ಲಿಸಲು ಒಪ್ಪಿದರು. ಎದುರಿಸಿದವರು ಯುದ್ದದ್ದ ಬಿರುಗಾಳಿಗೆ ಸಿಕ್ಕಿ ನಾಶವಾದರು.

 ಅರಸ ಭರತನ ಮನ ಯುದ್ದೋನ್ಮಾದದಿಂದ ತಣಿಯಿತು. ಎಲ್ಲರನ್ನು ಜಯಿಸಿ, ತಾನು ಅಪ್ರತಿಮ ವೀರನೆಂಬ  ಹಮ್ಮಿನಲ್ಲಿ ತನ್ನ ರಾಜ್ಯಕ್ಕೆ ಹಿಂದಿರುಗಿದ. ಆದರೆ ಅದೇನಾಯಿತು ಕಾಣೆ, ಅವನನ್ನು ದಾರಿ ತೋರಿ ಕರೆದೊಯ್ಯುತ್ತಿದ್ದ ದರ್ಮಚಕ್ರ ಅವರ ರಾಜ್ಯವನ್ನು  ಪ್ರವೇಶಿಸದೆ  ಹೆಬ್ಬಾಗಿಲಲ್ಲಿ ನಿಂತುಹೋಯಿತು. ಎಲ್ಲರಿಗು ಅಚ್ಚರಿ ಏಕೆ ಹೀಗೆ ಆಯಿತೆಂದು. ಕಡೆಗೆ ಹಿರಿಯರನ್ನು ಬಲ್ಲವರನ್ನು ಪ್ರಶ್ನಿಸಿದಾಗ  ಅವರಂದರು
“ನೀನು ಜಗವನ್ನೆ ಜಯಿಸಿರಬಹುದು ಆದರೆ ನಿನ್ನ ತಮ್ಮಂದಿರನ್ನು ಇನ್ನು ಜಯಿಸಿಲ್ಲ, ಅವರು ಪ್ರತ್ಯೇಕವಾಗಿ ಆಡಳಿತ ನಡೆಸುತ್ತಿರುವದರಿಂದ, ಅವರು ಸಹ ನಿನ್ನ ಸಾಮಂತರಾಗುವುದು ಅವಶ್ಯ . ಆಗಲೆ ನಿನ್ನ ಜಯ ಪರಿಪೂರ್ಣ”
ಸರಿ ಇನ್ನೇನು ಭರತ ತನ್ನ ತಮ್ಮಂದಿರಿಗೆ ಕರೆ ಕಳಿಸಿದ. ಎಲ್ಲರು ನನ್ನ ಸಾಮಂತರಾಗಿ ರಾಜ್ಯವನ್ನು ಒಪ್ಪಿಸಿ, ಇಲ್ಲದಿದ್ದರೆ ಯುದ್ದಕ್ಕೆ ಸಿದ್ದರಾಗಿ.  ಉಳಿದ ಸಹೋದರರೆಲ್ಲ ತಮ್ಮ ರಾಜ್ಯವನ್ನು ಭರತನಿಗೆ ಒಪ್ಪಿಸಿ , ರಾಜ್ಯವನ್ನು ತೊರೆದು ತಂದೆ ವೃಷಭನಾಥರಲ್ಲಿಗೆ ಹೊರಟು ಹೋದರು. ಆದರೆ  ಅಪ್ರತಿಮ ವೀರನಾದ ಬಾಹುಬಲಿಗೆ ಸೋಲು ಒಪ್ಪಿಕೊಳ್ಳಲು ಇಷ್ಟವಿರಲಿಲ್ಲ. ತಾನೇನು ಭರತನ ರಾಜ್ಯದ ಮೇಲೆ ದಂಡೆತ್ತಿ ಹೋಗುತ್ತಿಲ್ಲ.  ಆದರೆ ಅಣ್ಣನೆ ತನಗೆ ಯುದ್ದಕ್ಕೆ ಅಹ್ವಾನ ಕಳಿಸಿದಾಗ ಅದನ್ನು ಒಪ್ಪುವುದು ಕ್ಷತ್ರೀಯ ಧರ್ಮ , ತಾನು ತನ್ನ ತಂದೆ ವೃಷಭನಾಥರನ್ನು ಹೊರತು ಪಡಿಸಿ ಯಾರಿಗು ತಲೆ ತಗ್ಗಿಸೆ ಎಂದು ಬಿಟ್ಟ. ಯುದ್ದ ಘೋಷಣೆ ಅನಿವಾರ್ಯವಾಯಿತು.

ತನ್ನ ಮಂತ್ರಿಗಳು, ಸೇನಾಧಿಕಾರಿಗಳು ಎಲ್ಲರನ್ನು ಸಭೆ ಸೇರಿಸಿದ ಮಹಾರಾಜ ಬಾಹುಬಲಿ. ಯುದ್ದ ತಂತ್ರದ ಬಗ್ಗೆ ಚರ್ಚಿಸಲು. ಯಾರ ಮುಖದಲ್ಲಿಯು ಗೆಲುವಿಲ್ಲ, ಯುದ್ದೋತ್ಸಾಹವಿಲ್ಲ. ಯುದ್ದ ಎಂದರೆ ವಿಜೃಂಬಿಸುತ್ತಿದ್ದ ತನ್ನ ಸೇನಾದಿಕಾರಿಗಳು ತಲೆತಗ್ಗಿಸಿ ಕುಳಿತಿರುವರು. ಎಲ್ಲವನ್ನು ನೋಡುತ್ತ ಬಾಹುಬಲಿ ತನ್ನ ಮಂತ್ರಿಗಳನ್ನು ಪ್ರಶ್ನಿಸಿದ
“ಮಂತ್ರಿಗಳ ಇದು ನಾವು ಬಯಸಿಬಂದ ಯುದ್ದವಲ್ಲ, ಅನಿವಾರ್ಯವಾಗಿ ಒದಗಿದ ಯುದ್ದ. ಯುದ್ದ ಕ್ಷತ್ರಿಯ ಧರ್ಮ ಆದರೆ ಏಕೆ ಮಂತ್ರಿವರ್ಗ ಹಾಗು ಸೇನಾದಿಕಾರಿಗಳು ಉತ್ಸಾಹ ಕಳೆದುಕೊಂಡಿದ್ದಾರೆ”
ಮಂತ್ರಿಗಳು ಯೋಚನೆ  ಮಾಡುತ್ತ ಅರುಹಿದರು
“ಪ್ರಭು, ಯುದ್ದ ಎಂದರೆ ಕ್ಷತ್ರಿಯರಿಗೆ ಅನಿವಾರ್ಯ ನಿಜ.ಆದರೆ ಇದು ವಿಶಿಷ್ಟ ಸಂದರ್ಭ.  ಎದುರಿಸಬೇಕಾಗಿರುವುದು ಒಮ್ಮೆ ನಮ್ಮದೆ ಆಗಿದ್ದ ಸೈನ್ಯವನ್ನು. ನಿಮ್ಮ ತಂದೆಯವರಿದ್ದ ಕಾಲಕ್ಕೆ ಎಲ್ಲವು ಒಂದೆ ಸೈನ್ಯವಾಗಿತ್ತು. ಈಗ ತಮ್ಮ ಅಣ್ಣ ಭರತ ಮಹಾರಾಜರಿರುವ ಸೈನ್ಯದಲ್ಲಿ   ಇರುವರೆಲ್ಲ   ನಮ್ಮವರೆ.  ನಮ್ಮ ಸೈನಿಕರ, ಸೈನಾದಿಕಾರಿಗಳ, ಅಣ್ಣ ತಮ್ಮ ಮಾವ ಮೈದುನ ಹೀಗೆ ಎಲ್ಲ ಸಂಭಂದಿಕರೆ ಆಗಿದ್ದಾರೆ. ಧರ್ಮದ ಹೆಸರಿನಲ್ಲಿ ತಮ್ಮವರನ್ನೆ ತಾವು ಕೊಲ್ಲಲು ಎಲ್ಲರು ಹಿಂಜರಿಯುತ್ತಿದ್ದಾರೆ,ಹಾಗಾಗಿ ಎಲ್ಲರಲ್ಲು ಉತ್ಸಾಹ ಕುಂದಿದೆ ಮಹಾಪ್ರಭು” ಎಂದರು

ಮಹಾರಾಜ ಬಾಹುಬಲಿ ಯೋಚನೆಗೆ ಬಿದ್ದರು. ಹೌದು ಮಂತ್ರಿಗಳ  ಮಾತಿನಲ್ಲಿ ಸತ್ಯವಿದೆ. ಅಣ್ಣ ಭರತನ ರಾಜ್ಯದಾಹಕ್ಕೆ , ನಾನು ಅವನ ವಿರುದ್ದ ಹೋರಾಡುವುದು ಅನಿವಾರ್ಯ, ಆದರೆ ಸಾವಿರಾರು ಸೈನಿಕರ ಜೀವ , ಬದುಕು ಇದರಿಂದ ನಾಶವಾಗುವುದು ಸತ್ಯ. ಎರಡು ಸೈನ್ಯದವರು ಪರಸ್ಪರ ಸಂಬಂದಿಕರೆ ಆಗಿದ್ದಾರೆ. ಹಾಗಿರಲು ನಮ್ಮ  ನಮ್ಮ ಸ್ವಾರ್ಥಕ್ಕಾಗಿ ಇವರ ಬದುಕು ಬಲಿಕೊಡಬೇಕೇಕೆ. ಬಾಹುಬಲಿಯ ಮುಖದಲ್ಲಿ ಯೋಚನೆಯ ಕಾರ್ಮೋಡ ಕವಿಯಿತು. ಬಹಳ ಕಾಲದ ಮೌನದ ನಂತರ ಚಿಂತಿಸಿ ಅವರು ನುಡಿದರು
“ಮಂತ್ರಿಗಳೆ , ನಿಮ್ಮ ಭಾವನೆ ಸತ್ಯವಾಗಿದೆ, ನನಗೆ ಇದರಿಂದ ಅಸಮಾದಾನವೇನು ಇಲ್ಲ.     ಬಲಾಬಲ ನಿರ್ದಾರವಾಗಬೇಕಿರುವುದು ನಮ್ಮ ಹಾಗು ನಮ್ಮ ಸಹೋದರ ಭರತರ ಮಧ್ಯೆ ಮಾತ್ರ. ಹಾಗಿರಲು ವೃತಾ ಸೈನದ ನಷ್ಟವೇಕೆ. ಅದರಿಂದ ನಮ್ಮಿಬ್ಬರ ನಡುವೆ ನೇರಯುದ್ದ ನಡೆಯಲಿ. ಆ ದರ್ಮಯುದ್ದದಲ್ಲಿ ಗೆಲುವು ಸಾದಿಸಿದವರನ್ನು ವಿಜಯಿ ಎಂದು ಒಪ್ಪಿಕೊಳ್ಳುವುದು.  ಈ ವಿಷಯವನ್ನು ನೀವು ದೂತರ ಮುಖಾಂತರ ನಮ್ಮ ಸಹೋದರರಲ್ಲಿ ನಿರೂಪವನ್ನು ಕಳಿಸಿ ಅವರು ಸಹ ಇದ್ದಕ್ಕೆ ಒಪ್ಪುವರು ಎಂದು ನಮ್ಮ ಅಭಿಮತ. “ ಎಂದರು.

ಕಡೆಗೆ ಭರತ ಹಾಗು ಬಾಹುಬಲಿಯ ನಡುವೆ ದರ್ಮಯುದ್ದವೆಂದು. ನೇರ ಕಾಳಗದಲ್ಲಿ ವಿಜಯಿಯಾದವರು  ಯುದ್ದದಲ್ಲಿ ಗೆದ್ದಂತೆ ಎಂದು ತೀರ್ಮಾನವಾಯಿತು. ದೃಷ್ಟಿಯುದ್ದ ಜಲಯುದ್ದ ಹಾಗು ಕಡೆಯದಾಗಿ ಮಲ್ಲಯುದ್ದ ಎಂದು,  ಮೂರು ವಿಭಾದಗಲ್ಲಿ ಜಯಿಸಿದವರು ವಿಜಯಿಯೆಂದು ನಿರ್ದಾರವಾಯಿತು.

 ಭರತ ಮತ್ತು  ಬಾಹುಬಲಿ ಇಬ್ಬರು ಅಜಾನುಬಾಹು ಸ್ವರೂಪರು. ಯುದ್ದಕ್ಕೆ ನಿಂತರೆ ಮದಗಜಗಳ ನಡುವಿನ ಕಾಳಗವನ್ನು ನೆನಪಿಸುತ್ತಿತ್ತು. ಯುದ್ದವಸ್ತ್ರಗಳನ್ನು ಧರಿಸಿ ಇಬ್ಬರು ಸಿದ್ದರಾದರು. ನಡುವಿನಲ್ಲಿ ನಿರ್ಣಾಯಕರು ಆಸೀನರಾದರು. ಮೊದಲಿಗೆ ದೃಷ್ಟಿಯುದ್ದ. ಇಬ್ಬರು ಎದುರುಬದುರಾಗಿ ನಿಂತು, ಎವೆ ಇಕ್ಕದೆ, ಕದಲದೆ ಒಬ್ಬರನ್ನೊಬ್ಬರು ದೀರ್ಘಕಾಲ ದಿಟ್ಟಿಸುವುದು.   ಕಾಲ ವಿಳಂಬಿಸುತ್ತ ಹೋಯಿತು, ಅಣ್ಣ ಭರತನಿಗೆ ತಮ್ಮನ ದೃಷ್ಟಿಯನ್ನು ಎದುರಿಸಲಾಗಲಿಲ್ಲ, ಸೋತು ಪಕ್ಕಕ್ಕೆ ಮುಖ ತಿರುವಿಬಿಟ್ಟ. ಎಲ್ಲರು ಬಾಹುಬಲಿಗೆ ಉಘೇ ಉಘೇ ಎಂದರು.

ನಂತರ ಜಲಯುದ್ದ, ನೋಡುಗರ ಕಣ್ಣಿಗೆ ಎರಡು ಆನೆಗಳು ನೀರಿಗಿಳಿದು ಕಾಳಗ ನಡೆಸಿದೆ ಎನ್ನುವಂತ ಭ್ರಮೆ. ದೀರ್ಘಕಾಲ ನಡೆದ ಯುದ್ದದ ಕಡೆಯಲ್ಲಿ ನಿರ್ಣಾಯಕರು ಪುನಃ ಬಾಹುಬಲಿಯೆ ವಿಜಯಿ ಎಂದು ನಿರ್ದರಿಸಿದರು.

ಕಡೆಯದಾಗಿ ಮಲ್ಲಯುದ್ದ. ಸುತ್ತಲು ಸೈನ್ಯ ನೆರೆದಿತ್ತು. ಅರಮನೆಯ ಮಹಾರಾಣಿಯಾದಿಯಾಗಿ ಎಲ್ಲ ಸ್ತ್ರೀಯರು ಅರಮನೆಯ ಮೇಲುಪ್ಪರಿಗೆಯಲ್ಲಿ ಆಸೀನರಾಗಿ  ಮಲ್ಲಯುದ್ದವನ್ನು ವೀಕ್ಷಿಸಲು ಕಾಯುತ್ತಿದ್ದರು. ಉಭಯ ಸೈನ್ಯದ ಸೈನಿಕರು ತಮ್ಮ ಮಹಾರಾಜರನ್ನು ಉತ್ಸಾಹಿಸಿ ಪ್ರೋತ್ಸಾಹಿಸಲು ಜಯಕಾರ ಹಾಕುತ್ತಿದ್ದರು. ನಡುವೆ ಮಣ್ಣಿನ ಅಖಾಡದಲ್ಲಿ ಮಲ್ಲಯುದ್ದದ ಉಚಿತ ವಸ್ತ್ರದೊಂದಿಗೆ  ಅಣ್ಣ ತಮ್ಮ ಇಬ್ಬರು  ರಾಜ್ಯಕ್ಕಾಗಿ ಹೋರಾಡಲು ಸಿದ್ದರಾದರು

--

ಜೈನಮುನಿಗಳು ಹೇಳುತ್ತಿರುವ ಕತೆ ಕೇಳುತ್ತ ಕೇಳುತ್ತ ಲಕ್ಕೆಗೌಡನಿಗೆ,  ಹಿಂದೆ ಇತಿಹಾಸದಲ್ಲಿ ನಡೆದಿರಬಹುದಾಗ ಯುದ್ದದ ಕಲ್ಪನೆ ಕಣ್ಣೆದುರು ಬರುತ್ತಿತ್ತು. ಅವನ ಮನ ವಿಹ್ವಲವಾಗುತ್ತಿತ್ತು,  ರಾಜ್ಯದಾಹಕ್ಕಾಗಿ ಒಡಹುಟ್ಟಿದ ಸಹೋದರರೆ ಎದುರು ಬದುರು ನಿಲ್ಲುವಂತಾಯಿತಲ್ಲ ಎಂದು ಅವನ ಮನ ಮರುಗುತ್ತಿತ್ತು .  ಎಂದೊ ನಡೆದಿರಬಹುದಾದ ಮಲ್ಲ ಯುದ್ದದ್ದ ದೃಷ್ಯ ಅವನ ಕಣ್ಣೆದುರು ಕುಣಿಯುತ್ತಿತ್ತು.

---

ಸುತ್ತಲು ನೋಡುತ್ತ ಭರತ ಮತ್ತು ಬಾಹುಬಲಿ ಇಬ್ಬರು ಮಲ್ಲಯುದ್ದದ್ದ ಅಖಾಡಕ್ಕೆ ಇಳಿದರು. ನಡುವಿನಲ್ಲಿ ಇಬ್ಬರನ್ನು ಕೈಮಿಲಾಯಿಸಿ ಹಿಂದಕ್ಕೆ ಸರಿದ  ಇವರಿಬ್ಬರ ಗುರುವಾಗಿ ಮಲ್ಲಯುದ್ದ ಕಲಿಸಿದ ಗುರು. ದೂರದಲ್ಲಿ ಇವರ ಜಯ ಅಪಜಯ ನಿರ್ಣಯಿಸಲು ಸಿದ್ದವಾಗಿದ್ದರು ಮಲ್ಲಯುದ್ದದಲ್ಲಿ ಪಳಗಿದ ನಿರ್ಣಾಯಕರು.

ಅಣ್ಣನ ದೇಹವನ್ನು ತಮ್ಮ ತಬ್ಬುವನು, ಕೆಳೆಗೆ ಎಳೆಯುವನು, ಅಣ್ಣ ತಪ್ಪಿಸಿಕೊಳ್ಳುತ್ತ ಅದಕ್ಕೆ ಪ್ರತಿಪಟ್ಟು ಹಾಕುವನು. ಮತ್ತೆ ಮಣ್ಣನ್ನು ಸವರಿಕೊಳ್ಳುತ ತಮ್ಮ ಕುತ್ತಿಗೆಯ ಸುತ್ತ ತೋಳ ಬಳಸುತ್ತ ಹಾಕಿದ ಪಟ್ಟಿಗೆ ಅಣ್ಣ ನೋವಿನಿಂದ ಚೀರುತ್ತ, ಬಿಡಿಸಿಕೊಂಡು ತಮ್ಮನನ್ನು ಹೊಡೆಯುವನು. ನೋಡ ನೋಡುತ್ತ  ಮಲ್ಲ ಯುದ್ದ ತೀವ್ರ ಸ್ವರೂಪ ಪಡೆಯಿತು. ಸುತ್ತಲಿದ್ದವರು ಪೂರ್ತಿಮೌನವಾಗಿದ್ದರು. ಅವರಿಬ್ಬರು ಮಣ್ಣಿನ ನೆಲದಲ್ಲಿ ಹಾಕುತ್ತಿದ್ದ ಹೆಜ್ಜೆಯ ಶಬ್ದಗಳ ಹೊರತಾಗಿ, ಅವರಿಬ್ಬರ ಶ್ವಾಸೊಚ್ವಾಸದ  ಸದ್ದಿನ ಹೊರತಾಗಿ ಏನು ಕೇಳಿಸುತ್ತಿಲ್ಲ ಅನ್ನುವ ಭ್ರಮೆ ಆವರಿಸಿತು. ಇಬ್ಬರು ಗೆಲುವಿಗಾಗಿ ಹೂಂಕರಿಸುತ್ತಿದ್ದಾರೆ.

ಎರಡು ಮೂರು ಸುತ್ತುಗಗಳಾಗುತ್ತಿರುವಂತೆ , ನೋಡುವರ ಕಣ್ಣಿಗೆ ಎದ್ದು ಕಾಣುವಂತಿತ್ತು, ತಮ್ಮ ಬಾಹುಬಲಿ ಮಲ್ಲಯುದ್ದದಲ್ಲಿ ಸಹ ಮೇಲುಗೈ ಸಾದಿಸಿದ್ದ. ಅವನ ಗೆಲುವು ನಿಶ್ಚಿತ ಎಂದೆ ಎಲ್ಲರು ಭಾವಿಸುತ್ತಿದ್ದಾರೆ. ಭರತನ ರಾಣಿವಾಸದವರಂತು ಅವಮಾನದಿಂದ ಕುದಿಯುತ್ತಿದ್ದಾರೆ.

ಯುದ್ದಕ್ಕೆ ಕೊನೆ ಹಾಡುವ ಕಾಲ ಬಂದು ಬಿಟ್ಟಿತು, ಭರತ ಪೂರ್ಣವಾಗಿ ನಿಶ್ಯಕ್ತನಾದ, ಅವನ ಸೋಲು ಅನಿವಾರ್ಯ ಎನಿಸಿತು. ಅಂತಹ ಸಮಯದಲ್ಲಿ ತಮ್ಮ ಬಾಹುಬಲಿ ಅಣ್ಣ ಭರತನನ್ನು ಎರಡು ಕೈಯಿಂದೆ ಮೇಲೆ ಎತ್ತಿ ಗಿರ ಗಿರನೆ ತಿರುಗಿಸುತ್ತಿದ್ದಾನೆ, ಯುದ್ದದ್ದ ಕಡೆಯ ಕ್ಷಣ ಅವನು ಭರತನನ್ನು ನೆಲಕ್ಕೆ ಒಗೆದರು ಆಯ್ತು, ಭರತನ ಕೀರ್ತಿಪತಾಕೆ ಮಣ್ಣು ಮುಕ್ಕಿದಂತೆ. ಅಟ್ಟಹಾಸದಿಂದ ಸುತ್ತಲು ನೋಡಿದ  ಬಾಹುಬಲಿ, ಆಯಿತು ತನ್ನ ಗೆಲುವು ನಿಶ್ಚಿತ,  ಅಣ್ಣನ ರಾಣಿವಾಸದತ್ತ ದಿಟ್ಟಿಸಿದ, ತಾನು ಗೌರವಿಸುತ್ತಿದ್ದ ಅತ್ತಿಗೆ, ತನ್ನ ಗಂಡನೆ ಸೋಲನ್ನು ನೋಡಲಾರರೆ, ತನ್ನ ಗಂಡನ ಕಿರೀಟ ಮಣ್ಣುಪಾಲುವ ದೃಷ್ಯವಾನು ನೋಡುವ ಶಕ್ತಿ ಇಲ್ಲದೆ ತಲೆ ತಗ್ಗಿಸಿಬಿಟ್ಟಿದ್ದಾಳೆ. ಸೈನಾಧಿಕಾರಿಗಳು, ಮಂತ್ರಿಗಳು ಎಲ್ಲರು ಮೌನವನ್ನು ಧರಿಸಿದ್ದರೆ, ಹಾಗೆ ತನ್ನ ರಾಣಿವಾಸದ ಕಡೆ ದೃಷ್ಟಿ ಹಾಯಿಸಿದ ತನ್ನ ಪತ್ನಿ ಸಹ ತನ್ನ ಗೆಲುವನ್ನು ಕಂಡು ಹರ್ಷಿಸುತ್ತಿಲ್ಲ. ಅವಳ ಮುಖವು ಮೋಡ ಕವಿದ ಹುಣ್ಣಿಮೆ ಚಂದ್ರನಂತೆ ಕಂದಿದೆ.

ಒಮ್ಮೆಲೆ ಬಾಹುಬಲಿಯ ಮನವನ್ನು ವಿಷಾದಭಾವ ಆವರಿಸಿತು. ತಾನು ಗೆಲುವು ಸಾದಿಸಬಹುದು ಆದರೆ ಅದು ಯಾರ ವಿರುದ್ದ , ತನ್ನ ಸ್ವಂತ ಅಣ್ಣನನ್ನು ಎದುರಿಸಿದ ಗಳಿಸಿದ ಅಂತಹ ಗೆಲುವು ತನಗೆ ಸಂತಸ ನೀಡಲು ಸಾದ್ಯವೆ. ಅವನ ಕಣ್ಣ ಮುಂದೆ ಚಿಕ್ಕವಯಸಿನಲ್ಲಿ ತನ್ನ ಜೊತೆ ಆಡುತ್ತಿದ್ದ ಅಣ್ಣನ ಸ್ವರೂಪ ನೆನೆಪಿಗೆ ಬಂದಿತು. ಆಡುವಾಗಲು ಜೊತೆ, ಗುರುಕುಲದಲ್ಲಿ ಒಟ್ಟೆಗೆ ಅಭ್ಯಾಸಮಾಡಿದ್ದು, ಜೊತೆ ಜೊತೆಯಾಗು ಪ್ರವಾಸಹೋಗಿದ್ದು.   ಅಣ್ಣನ ಮದುವೆಯಲ್ಲಿ ತಾನು ಎಷ್ಟೆಲ್ಲ ಗೆಳೆಯರ ಜೊತೆ ಸಂಬ್ರಮಿಸಿದ್ದೇನೆ.   ಇಂತಹ ಅಣ್ಣನ ವಿರುದ್ದ ಗಳಿಸುವ  ಗೆಲುವು ನನಗೆ ಅನಿವಾರ್ಯವೆ ? ಇದು ತನಗೆ ಸಂತಸ ತರಲು ಸಾದ್ಯವೆ ?

ಬಾಹುಬಲಿಯ ಒಳಗಣ್ಣು ತೆರೆದಿತ್ತು, ಇಷ್ಟಕ್ಕು ತಾನು ತನ್ನ ಅಣ್ಣನ ವಿರುದ್ದ  ಸೆಣಿಸುತ್ತಿರುವುದು ಯಾವುದಕ್ಕಾಗಿ,  ಭೂಮಿಗಾಗಿ, ರಾಜ್ಯಕ್ಕಾಗಿ ಅಧಿಕಾರಕ್ಕಾಗಿ, ಸಿಂಹಾಸನಕ್ಕಾಗಿ . ಆದರೆ ಇದೆಲ್ಲ ಎಷ್ಟು ಕಾಲ,  ಅದೇನು ಶಾಶ್ವತವೆ, ತನ್ನ ಆಯಸ್ಸು ಮುಗಿದೊಡನೆ ಎಲ್ಲವನ್ನು ತೊರೆದು ಹೋಗಲೆ ಬೇಕು ಅಲ್ಲವೆ. ರಾಜ್ಯವನ್ನು ತೊರೆದು ವೈರಾಗ್ಯದ ಹಾದಿ ಹಿಡಿದ ತಂದೆ ವೃಷಭನಾಥರು ನೆನಪಾದರು. ಒಮ್ಮೆಲೆ ಅನ್ನಿಸಿತು ಬೇಡ ತನಗೆ ಇಂತ ಗೆಲುವು ಬೇಡ .

ತಾನು ಮಣ್ಣಿಗೆ ಒಗೆಯಲು ಎತ್ತಿ ಹಿಡಿದಿರುವ ಅಣ್ಣ ಭರತನ ಬಗ್ಗೆ ಗೌರವ ಅವನಲ್ಲಿ ಮೂಡಿತು. ತನಗಿಂತ ಹಿರಿಯನಾದ ಅವನಿಗೆ ತಲೆ ತಗ್ಗಿಸುವದರಲ್ಲಿ ತಪ್ಪಾಗಲಿ ಅವಮಾನವಾಗಲಿ ಇಲ್ಲ. ಬದಲಿಗೆ ಅದು ಹೆಮ್ಮೆ ಮತ್ತು ತನ್ನ ಕರ್ತವ್ಯ ಅಲ್ಲವೆ ಅನಿಸಿತು. ಯುದ್ದ ಕ್ಷತ್ರಿಯ ದರ್ಮವಾದರೆ ಹಿರಿಯರನ್ನು ಗೌರವಿಸುವುದು ಅಣ್ಣನಿಗೆ ತಲೆಬಾಗುವುದು ತನ್ನ ಮನುಷ್ಯ ದರ್ಮವಲ್ಲವೆ , ಬಾಹುಬಲಿಯ ದೇಹ ನಿಶ್ಚಲವಾಯಿತು.

ಸುತ್ತಲಿದ್ದವರು ಅಚ್ಚರಿಯಿಂದ ದಿಟ್ಟಿಸುತ್ತಿದ್ದಾರೆ , ಇದೇನು ಅಣ್ಣನನ್ನು ಗಾಳಿಯಲ್ಲಿ ಎತ್ತಿಹಿಡಿದು, ಸುಂಟರಗಾಳಿಯಂತೆ ತಿರುಗುತ್ತಿದ್ದ ಬಾಹುಬಲಿ ಒಮ್ಮೆಲೆ  ಸ್ಥಿರನಾಗಿ ನಿಂತನೇಕೆ, ಅಣ್ಣನನ್ನು ಕೆಳಗೆ ಒಗೆಯದೆ, ಸುಮ್ಮನಾದನೇಕೆ ಎಂದು ಚಿಂತಿಸುತ್ತಿರುವಾಗಲೆ , ಬಾಹುಬಲಿ ನಿದಾನವಾಗಿ ತನ್ನ ಅಣ್ಣ ಭರತನನ್ನು ಕೆಳಗೆ ಇಳಿಸಿದ.  ಅಣ್ಣ ಚೇತರಿಸಿಕೊಳ್ಳುತ್ತಿರುವಂತೆ , ಅಣ್ಣನ ಎದುರಿಗೆ ಮಂಡಿ ಊರಿದ. ಕಣ್ಣಲಿ ನೀರು ತುಂಬಿಕೊಳ್ಳುತ್ತ ನುಡಿದ
“ಅಣ್ಣ ನಿನ್ನ ವಿರುದ್ದ ಯುದ್ದಕ್ಕೆ ನಿಂತ ಉದ್ದಟತನವನ್ನು ಕ್ಷಮಿಸು, ನನ್ನ ಕಣ್ಣಿಗೆ ಕತ್ತಲು ಕವಿದಿತ್ತು. ನಾನು ನಿನ್ನಿಂದಪರಾಜಿತನಾಗಿದ್ದೇನೆ, ನಾನು ಯುದ್ದದಲ್ಲಿ ಸೋತಿರುವೆ ಎಂದು ಒಪ್ಪಿಕೊಳ್ಳುತಿರುವೆ “

ಸುತ್ತಲಿದ್ದವರೆ ಏನು ನಡೆಯುತ್ತಿದೆ ಎಂದು ಅರಿವಾಗುವ ಮೊದಲೆ, ತಮ್ಮ ಬಾಹುಬಲಿ ರಾಜ್ಯವನ್ನು ಅಣ್ಣನಿಗೆ ಒಪ್ಪಿಸಿ , ಹೊರಟುಬಿಟ್ಟ. ಮುಂದೆ ನಡೆದಿದ್ದು ಇತಿಹಾಸ. ಬಾಹುಬಲಿಯ ಮನ ಪೂರ್ಣ ನೊಂದಿತ್ತು. ನಶ್ವರವಾದ ಪ್ರಪಂಚಕ್ಕೆ ಅವನು ಬೆನ್ನು ಮಾಡಿದ್ದ. ನಿಜವಾದ ಜ್ಞಾನವನ್ನು ಅವನು ಅರಿಸಿ ಹೊರಟಿದ್ದ

ಇದೆ ಇಂದ್ರಗಿರಿಯನ್ನು ಹತ್ತಿದ ತನ್ನದೆಲ್ಲವನ್ನು ತೊರೆದ ಭಾವದಿಂದ ನಿಂತು ತಪ್ಪಸಿಗೆ ತೊಡಗಿದ. ವರ್ಷ ವರ್ಷಗಳು ಕಳೆದವು, ಆದರೆ ಬಾಹುಬಲಿ ಮನಸಿಗೇಕೊ ನೆಮ್ಮದಿ ದೊರಕುತ್ತಿಲ್ಲ,  ಜ್ಞಾನದ ಸಾಕ್ಷತ್ಕಾರವಾಗುತ್ತಿಲ್ಲ , ಅವನ ಮನಸಿಗೆ ಹತ್ತಿದೆ ಯಾವುದೊ ಕೊರಗು , ಅವನನ್ನು ಕಾಡುತ್ತಿತ್ತು .  ತಾನು ತನ್ನ ಅಣ್ಣನಿಗೆ ಸೇರಿದ ನೆಲದಲ್ಲಿ ನಿಂತಿರುವೆ ಎಂಬ ಭಾವ ಅವನನ್ನು ಕಾಡಿಸುತ್ತಿತ್ತು. ವಿಷಯ ತಿಳಿದ ಭರತ ಮಹಾರಾಜ ಓಡೋಡಿ ಬಂದ
“ಇದು ನನ್ನ ರಾಜ್ಯವಾದರು, ನೀನು ಗೆದ್ದು ನನಗೆ ಹಿಂದೆ ಕೊಟ್ಟಿರುವ ರಾಜ್ಯ, ಇದು ನಿನ್ನದು ಹೌದು, ನೀನು ಚಿಂತೆಯನ್ನು ಬಿಡು , ನಿನ್ನ ಗುರಿಯನ್ನು ಸಾದಿಸು “ ಎನ್ನುವ ಮಾತನಾಡಿಹೋದ.

ಕಡೆಗೊಮ್ಮೆ ಬಾಹುಬಲಿ ಆತ್ಮಸಾಕ್ಷತ್ಕಾರ ಸಾದಿಸಿದ್ದ. ಅವನು ಪ್ರಕೃತಿಯಲ್ಲಿ ವಿಲೀನನಾಗಿದ್ದ ಎಲ್ಲರಿಗು ಗೊಮ್ಮಟನಾಗಿದ್ದ. ಕಾಲನಂತರದಲ್ಲಿ  ಗಂಗರ ಮಂತ್ರಿ ಚಾವುಂಡರಾಯ ಅದೆ ಗೊಮ್ಮಟನ ಬೃಹುತ್ ಆಕಾರದ ಕಲ್ಲಿನ ಮೂರ್ತಿಯನ್ನು ನಿಲ್ಲಿಸಿದ.

------------------------------------------

ಇಂದ್ರಗಿರಿಯ ಬೆಟ್ಟದಿಂದ ಒಂದೊಂದೆ ಮೆಟ್ಟಿಲನ್ನು ಇಳಿಯುತ್ತಿರುವಾಗ  ಲಕ್ಕೆಗೌಡನಿಗೆ ತನ್ನ ಅಹಂಕಾರದ ಒಂದೊಂದೆ ಮೆಟ್ಟಿಲು ಇಳಿಯುತ್ತಿರುವ ಅನುಭವವಾಗುತ್ತಿತ್ತು.  ಬಾಹುಬಲಿಸ್ವಾಮಿಯ ಕತೆ ಕೇಳಿದ ಅವನಲ್ಲಿ  ಹುದುಗಿದ್ದ ವಿವೇಕ ಜಾಗೃತವಾಗಿತ್ತು. ಅವನು ಚಿಂತಿಸುತ್ತಿದ್ದ, ಇರುವ ಒಂದು ತುಂಡು ನೆಲಕ್ಕಾಗಿ ಇಬ್ಬರು ಅಣ್ಣ ತಮ್ಮಂದಿರು ಹೊಡೆದಾಡಿ ಸಾಯಬೇಕೆನು?. ತನ್ನನ್ನು ಹೊರತುಪಡಿಸಿ ಮನೆಯಲ್ಲಿ ಎಲ್ಲರು ಒಬ್ಬರಿಗೊಬ್ಬರು ಅನ್ಯೋನ್ಯವಾಗಿದ್ದಾರೆ. ಚಿಕ್ಕವರಿಗೆ ಬುದ್ದಿ ಹೇಳಬೇಕಾದ ನಾನು ಹಾಗು ಅಣ್ಣ ಕಿತ್ತಾಟದಲ್ಲಿ ತೊಡಗಿದ್ದೇವೆ. ಹೆಂಗಸರು ಹಾಗು ಮಕ್ಕಳ ಮುಂದೆ ನಾವಿಬ್ಬರು  ಅಪಹಾಸ್ಯಕ್ಕೆ ಅವಮಾನಕ್ಕೆ ಒಳಗಾಗಿರುವುದು ತಮ್ಮದೆ ತಪ್ಪಿನಿಂದ ಎಂದು ಅವನಿಗೆ ಅರಿವಾಗುತ್ತಿತ್ತು.

ಅವನ ಮನ ತನ್ನ ಚಿಕ್ಕಂದಿನ ದಿನವನ್ನು ನೆನೆಯುತ್ತಿತ್ತು. ಸದಾ ತಾನು ಹಾಗು ಅಣ್ಣ ಕೈ ಕೈ ಹಿಡಿದು ತಿರುಗುತ್ತಿದ್ದೆವು. ಊರ ಜನರೆಲ್ಲ ರಾಮ ಲಕ್ಷ್ಮಣರೆಂದೆ ಕರೆಯುತ್ತಿದ್ದರು.   ತನ್ನ ತಂದೆ ತೀರಿಹೋದಾಗ ಅರಿವಾಗದ ವಯಸ್ಸು ನನ್ನದು . ಅಣ್ಣ ರಾಮೆಗೌಡ ಅಳುತ್ತಿದ್ದ ತನ್ನ ಕಣ್ಣನ್ನು ಒರೆಸಿ ಸಮಾದಾನ ಮಾಡಿದ್ದ.  ನಾನು ನಿನ್ನನ್ನು ಅಪ್ಪನಂತೆ ನೋಡಿಕೊಳ್ಳುವೆ ಎಂದು ಪ್ರೀತಿಯಿಂದ ಹೇಳಿದ್ದ. ಅಣ್ಣ ಮದುವೆಯಾಗಿ  ಬಂದ ನಂತರ ಅತ್ತಿಗೆ ಮಾದೇವಿಯು ತನ್ನನ್ನು ಅದೆ ತಾಯಿ ಪ್ರೀತಿಯಿಂದ ಕಂಡಳು. ‘ಕೋಣನಂತೆ ಬೆಳೆದು ನಿಂತಿದ್ದಾನೆ ಅವನಿಗೆ ಏಕೆ ಉಪಚಾರ” ಎಂದು ಎಲ್ಲರು ಹಾಸ್ಯಮಾಡುತ್ತಿದ್ದರು, ಕೇಳದೆ ತನ್ನನ್ನು ಕೂಡಿಸಿ ತಲೆನೆನೆಯುವಂತೆ ಎಣ್ಣೆ ಹಚ್ಚಿ   ಬಿಸಿನೀರು ಹುಯ್ಯುತ್ತಿದ್ದಳು. ಮನೆಯಲ್ಲಿದ್ದ ಹಾಲು ಮೊಸರು ಎಲ್ಲವನ್ನು ನನಗೆ ಸುರಿಯುತ್ತಿದ್ದಳು ಎಂದು ಅವನ ಮನ ನೆನೆಯಿತು. ಅವನ ಕಣ್ಣು ಏಕೊ ಮಂಜು ಮಂಜಾಗುತ್ತಿತ್ತು.  

ಕೆಳಗೆ ಇಳಿದು, ಸುತ್ತ ಮುತ್ತಲ ಅಂಗಡಿಗಳನ್ನೆಲ್ಲ ಸುತ್ತಿದ್ದ. ಬಟ್ಟೆ ಅಂಗಡಿಯೊಳಗೆ ಹೋಗಿ ತನ್ನ ಹೆಂಡತಿಗೊಂದು ಸೀರೆ ಮಗನಿಗೊಂದು ಶರ್ಟ್ ಕರಿದಿಸಿದ. ನಂತರ ಅವನ ಮನಸಿಗೆ ಬೇರೆ ಯೋಚನೆ ಬಂದಿತು. ಪುನ: ತನ್ನ ಅತ್ತಿಗೆ ಮಾದೇವಿಗೊಂದು ಸೀರೆ. ಅವ್ವನಿಗೊಂದು ಸೀರೆ, ಅಣ್ಣನಿಗೆ ಹಾಗು ಅಣ್ಣನ ಮಗನಿಗೆ ಎಂದು ಒಂದೊಂದು ಶರ್ಟ್ ಖರೀದಿಸಿದ. ಎಲ್ಲವನ್ನು ಕೈಯಲ್ಲಿ ಹಿಡಿದು. ಬಸ್ ನಿಲ್ದಾಣಕ್ಕೆ ಬಂದು, ತಿಪಟೂರಿನ ಕಡೆಗೆ ಹೋಗುವ ಬಸ್ಸನ್ನು ಹುಡುಕಿ ಹತ್ತಿ ಕಿಟಕಿಯ ಪಕ್ಕ ಕುಳಿತಾಗ ಅವನ ಮನಸಿನಲ್ಲಿ ಎಂತದೊ ಒಂದು ಶಾಂತಿ ನೆಲಸಿತ್ತು.

 ಲಕ್ಕೆಗೌಡ ಕುಳಿತಿದ್ದ ಬಸ್ಸು ಶ್ರವಣಗೆಳಗೊಳ ಬಿಟ್ಟು ಹೊರಟಂತೆ,  ಮೇಲೆ ಬೆಟ್ಟದಲ್ಲಿನ ಗೋಮಟೇಶ್ವರನ ಮುಖದಲ್ಲಿ ನಗು ಸ್ಥಾಯಿಯಾಗಿ ನಿಂತಿತು,   ಆ ನಗುವಿನಲ್ಲಿ ಎಂತದೊ ಸಾರ್ಥಕ ಭಾವ ಎದ್ದು ಕಾಣುತ್ತಿತ್ತು.




   ಚಿತ್ರಮೂಲ

No comments:

Post a Comment

enter your comments please