Tuesday, December 18, 2012

ತಿಂಗಳಿಗೊಂದು ದೆವ್ವದ ಕಥೆ : ಬುರುಡೆಯ ನಾಟಿ


ತಿಂಗಳಿಗೊಂದು ದೆವ್ವದ ಕಥೆ : ಬುರುಡೆಯ ನಾಟಿ

--------------------------------------
ಈಚೆಗೆ ಎಂತದೊ ಗಡಿಬಿಡಿ, ಆಫೀಸು ಮನೆ, ಮನೆ ಅಫೀಸೆ ಆಗಿಹೋಗಿತ್ತು. ಬರವಣಿಗೆಯ ಕೆಲಸ ನಿಂತುಹೋಗಿತ್ತು, ಏನಾದರು ಬರೆಯೋಣ ಅಂತ ಮನಸಿಗೆ  ವಿಷಯಗಳು ಕತೆಗೆ ಚೌಕಟ್ಟುಗಳು ಹೊಳೆಯುತ್ತಿದ್ದವು, ಕುಳಿತು ಬರೆಯೋಣ ಅಂದರೆ ಸಾದ್ಯವಾಗದ ಗಡಿಬಿಡಿ. ಮನು ಮನೆಗೆ ಹೋಗಿ ಅಜ್ಜಿಯನ್ನ ನೋಡಿ ಬರೋಣ ಅಂದುಕೊಂಡು ಅವನಿಗೆ ಪೋನ್ ಮಾಡಿದೆ. ಅವನು ಎಂದಿನ ಕುಶಾಲಿನಲ್ಲಿ, ಎಲ್ಲ ಮಾತನಾಡಿ
 " ಎಲ್ಲಪ್ಪ ನೀನು ಪುನಃ ಯಾವುದು ಕಥೆ ಬರೆಯಲೆ ಇಲ್ಲ, ನಮ್ಮ ಅಜ್ಜಿಯನ್ನು ನೋಡಲು ಬರಲೆ ಇಲ್ಲ" ಎಂದ,
ನಗುವುದು ಕೇಳಿಸಿತು.
"ಈಡಿಯೆಟ್" ಅಂದುಕೊಂಡೆ,
"ಲೋ ನೀನು ನಗಬೇಡ" ಅಂದವನು ಮತ್ತೆ ಹೇಳಿದೆ, 
"ನೋಡೊ ಏನಾದರು ಬರೆಯಲು ಹೊಳೆಯುತ್ತೆ, ಆದರೇನು ಕುಳಿತು ಬರೆಯಲು ಆಗುತ್ತಿಲ್ಲ , ಬೆಂಗಳೂರಿನ ಗಡಿಬಿಡಿ ಬೇಸರ" ಅಂದೆ.
ಅದಕ್ಕವನು "ಒಂದು ಕೆಲಸ ಮಾಡಬಹುದಲ್ಲ, ಬೆಂಗಳೂರು ಬಿಟ್ಟು ದೂರದ ಯಾವುದಾದರು, ಜಾಗಕ್ಕೆ ಹೋಗಿ ಕುಳಿತು, ಅದೇನು ಬರಿತೀಯೊ ಬರಿ , ಸ್ವಲ್ಪ ದಿನ ರಜಾ ಹಾಕಿಬಿಡು" 
ಅವನ ಸಲಹೆ ಏನೊ ಆಕರ್ಷಕವಾಗಿಯೆ ಕಾಣಿಸಿತು, ಆದರೆ ಎಲ್ಲಿಗೆ ಅಂತ ಹೋಗೋದು, ಎಲ್ಲಿ ಹೋದರು ಇಷ್ಟೆ ಅನ್ನಿಸಿ ಅದನ್ನೆ ಹೇಳಿದೆ.

ಅದಕ್ಕವನು
" ನೋಡಪ್ಪ ನಿನಗೆ ಒಂದು ಜಾಗ ಹೇಳ್ತೀನಿ, ಕಡೂರಿನ ಆಚೆ ಮಲೆನಾಡಿನ ಹಳ್ಳೀಲಿ ನಮ್ಮ ಸೋದರ ಮಾವರೊಬ್ಬರಿದ್ದಾರೆ, ವಯಸಾದವರು, ಮನೇಲಿ, ಗಂಡ ಹೆಂಡತಿ ಇಬ್ಬರೆ, ನೀವು ಒಪ್ಪುವದಾದರೆ ನಾನು ಅವರಿಗೆ ಹೇಳ್ತೀನಿ, ಹೋಗಿ ಸ್ವಲ್ಪ ದಿನವಿದ್ದು, ಅದೇನು ಸಾದಿಸುತ್ತಿಯೊ ಸಾದಿಸು" ಅಂದ.
 ನನಗೆ ತಕ್ಷಣಕ್ಕೆ ತುಂಬಾ ಸರಿ ಅನ್ನಿಸಿತು .
ನಾನು
" ಸರಿಯಪ್ಪ ನಿನ್ನ ಸಲಹೆ ಒಪ್ಪುತ್ತೀನಿ, ನಿಮ್ಮ ಸೋದರಮಾವ ಅಂದೆಯಲ್ಲ ಅವರು ಒಪ್ಪುತ್ತಾರ ಕೇಳು ಅವರಿಗೆ ತೊಂದರೆಯಾಗಬಾರದಲ್ಲ ಅಂದ ಹಾಗೆ ಯಾವ ಊರದು?" ಎಂದೆ.
ಮನು
" ಅವರಿಗೆಂತ ತೊಂದರೆ, ಸಂತೋಷ ಪಡುತ್ತಾರೆ, ಅದು ಅಣ್ಣಿಗೇರಿ ಎಂದು, ನೀನು ಕಡೂರಿಗೆ ರೈಲಿನಲ್ಲಿ ಹೋಗಿ ಅಲ್ಲಿಂದ ಹೋಗುವೆಯಂತೆ, ನಾನು ಅವರಿಗೆ ಸಂಜೆ ಯಾ ನಾಳೆ ಮಾತನಾಡಿ ನಿನಗೆ ತಿಳಿಸುತ್ತೇನೆ, ನೀನು ನಾಳೆ ಶನಿವಾರ ಸಿದ್ದನಾಗಿರು" ಎಂದು ಮೊಬೈಲ್ ಕಟ್ ಮಾಡಿದ.

ಆಫೀಸಿನಲ್ಲಿ ನಾನು ಹತ್ತು ದಿನಗಳ ರಜಾಹಾಕಿದೆ, ಏನೊ ಊರಿನಲ್ಲಿ ಕೆಲಸವಿದೆ ಅಂತ ಕಾರಣ ನೀಡಿದೆ.ಶುಕ್ರವಾರವಾದರು ಮನುವಿನ ಪೋನ್ ಇಲ್ಲ. ನಾನೆ ಕಾಲ್ ಮಾಡಿದರೆ ಉತ್ತರವಿಲ್ಲ. ಮತ್ತೆ ಏನು ಅನ್ನುತ್ತಿರುವಾಗ ಅವನೆ ಶನಿವಾರ ಬೆಳಗ್ಗೆ ಕಾಲ್ ಮಾಡಿದ.
"ನಾನು ಎಲ್ಲವನ್ನು ಸೋದರಮಾವನ ಜೊತೆ ಮಾತಾನಾಡಿದ್ದೇನೆ, ನೀನು ಬರುವದನ್ನು ಅವರು ಕಾಯುತ್ತಿರುತ್ತಾರೆ, ನೀನು ಈದಿನ ಹೊರಡು, ಕಡೂರು ತಲುಪಿದರೆ ಅಲ್ಲಿಂದ ಹದಿನೈದು ಇಪ್ಪತ್ತು ಕಿ.ಮಿ ಇರಬೇಕಷ್ಟೆ, ಅಣ್ಣಿಗೇರಿ ಅಂತ, ಅವರ ಮೊಬೈಲ್ ಕೊಟ್ಟಿರುತ್ತೇನೆ,ಹುಡುಕುವುದು ತುಂಬಾ ಸಲೀಸು , ತುಂಬಾ ಚಿಕ್ಕ ಊರು,
ಇಳಿದು ಯಾರನ್ನು ಕೇಳಿದರು,  ರಾಮಚಂದ್ರಮೇಷ್ಟು ಮನೆ ಅಂತ ತೋರಿಸುತ್ತಾರೆ......"
   ಮತ್ತೇನೊ ಹೇಳುತ್ತಿದ್ದ ಅಷ್ಟರಲ್ಲಿ ಕಾಲ್ ಕಟ್ ಆಯಿತು. ನಾನು ಅವನ ನಂಬರ್ ಎಷ್ಟೆ ಪ್ರಯತ್ನಿಸಿದೆ , ಆದರೆ ನಂಬರ್ ಕವರೇಜ್ ಏರಿಯದಲ್ಲಿಲ್ಲ ಅಂತ ಬರುತ್ತಿತ್ತು, ಮನೆಗೆ ಕಾಲ್ ಮಾಡಿದೆ, ಅವರ ಮನೆಯವರು ಸುಮ ಪೋನ್ ತೆಗೆದು, ಮನು ಬೆಳೆಗ್ಗೆಯೆ ನೆಲವಂಗಲ ಹೋಗಿರುವನೆಂದು, ಸಂಜೆ ಬರುವನೆಂದು ತಿಳಿಸಿದರು. ನಾನು ಸರಿ ಮತ್ತೆ ಮಾರ್ಗ ಮದ್ಯದಿಂದ ಕಾಲ್ ಮಾಡಿದರಾಯ್ತು, ಕಡೂರೇನು  ಅಮೇರಿಕವೆ ? , ಕನ್ನಡ ನೆಲವೆ ಅಲ್ಲವೆ ಅಂತ ಹೊರಟೆಬಿಟ್ಟೆ.

========================================================   2
   ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಪಡೆಯುವುದು ಅಂದರೆ ತುಂಬಾ ಕಷ್ಟ, ಒಳಹೋಗಿ ನಾನು ಹೊರಡಬೇಕಾದ ರೈಲನ್ನು ಹಿಡಿದು, ಕುಳಿತು ನಿಟ್ಟುಸಿರು ಬಿಟ್ಟೆ. ಪಕ್ಕದಲ್ಲಿದ್ದಾತನನ್ನು ವಿಚಾರಿಸಿದೆ, ಕಡೂರು ತಲುಪಲು ಎಷ್ಟು ಸಮಯ ಬೇಕು ಎಂದು , ಅವನು ಸಂಜೆ ಏಳಾಗಬಹುದೆಂದ. ಅಯ್ಯೊ ಅಷ್ಟು ಹೊತ್ತೆ ನಾನು ಅಲ್ಲಿಂದ ಬೇರೆ ರೈಲು ಹಿಡಿಯಬೇಕೆನೊ, ಎಂತದು ತಿಳಿಯದು ಈ ಹಾಳು ಮನು ಯಾವಾಗಲು ಹೀಗೆ ಯಾವಕೆಲಸವನ್ನು ಸರಿಯಾಗಿ ಮಾಡುವದಿಲ್ಲ. ಮತ್ತೆ ಅವನ ನಂಬರ್ ಪ್ರಯತ್ನಿಸಿದೆ,
ಯಥಾ ಪ್ರಕಾರ ಅದೆ ಘೋಷಣೆ
" ಈ ನಂಬರ್ ವ್ಯಾಪ್ತಿಪ್ರದೇಶದಲ್ಲಿಲ್ಲ ...".
ಹೇಗೊ ಅತ್ತ ಇತ್ತ ನೋಡುತ್ತ ಕುಳಿತೆ, ತುಮಕೂರು ದಾಟಿ ಗುಬ್ಬಿ ಹತ್ತಿರ ಹತ್ತಿರ ಬರುವಾಗ ಅದೇನು ಆಯ್ತೊ ತಿಳಿಯಲಿಲ್ಲ, ರೈಲು ಯಾವುದೊ ಸಿಗ್ನಲ್ ನಲ್ಲಿ ನಿಂತು, ಸುಮಾರು ಒಂದು ಗಂಟೆಯಾದರು ಕದಲಲಿಲ್ಲ, ತಡವಾಗುತ್ತಲೆ ಹೋಯ್ತು. ಹೊಟ್ಟೆಯಲ್ಲಿ ತಾಳ. ಅರಸಿಕೆರೆಯಲ್ಲಿ ಬೇಗ ಇಳಿದು, ಇಡ್ಲಿ ಪಡೆದು ತಿಂದು ಮತ್ತೆ ರೈಲು ಹತ್ತಿ ಕುಳಿತೆ.

ಹಾಗು ಹೀಗು ಕಡೂರು ಎಂಬ ಸ್ಥಳ ತಲುಪಿ ಕೆಳಗೆ ಇಳಿದು, ಸಮಯ ನೋಡಿ ಕೊಂಡೆ ಸಮಯ ರಾತ್ರಿ ಹತ್ತು ಆಗಿಹೋಗಿದೆ, ಅಯ್ಯೊ ದೇವರೆ ಈಗೇನು, ಸುತ್ತ ನೋಡಿದೆ. ನನಗೆ ತಿಳಿದಂತೆ ಕಡೂರು, ರೈಲು ನಿಲ್ದಾಣ ತುಂಬಾ ದೊಡ್ಡದು ಅಂತ ಮನಸಿನಲ್ಲಿತ್ತು, ಇದೇನು ಜನರೆ ಇಲ್ಲವೆ. ನಾನೇನಾದರು ಸ್ಟೇಷನ ಕಡೆ ಇಳಿಯದೆ, ಮತ್ತೊಂದು ಬದಿಗೇನಾದರು ಇಳಿದೆನಾ!!!.
ರೈಲು ಮುಂದು ಹೊರಟು ಹೋಯಿತು, ನಾನು ಸುತ್ತಲು ನೋಡಿದೆ, ಸಂಪೂರ್ಣ ನಿರ್ಜನ, ದೂರದಲ್ಲಿ ನಿಲ್ದಾಣದ ಕೊಟಡಿ ಕಾಣುತ್ತಿತ್ತು. ನಿದಾನಕ್ಕೆ ನಡೆಯುತ್ತ, ಹತ್ತಿರ ಹೋದೆ, ಕೌಂಟರಿನ ಕಿಟಕಿಯಲ್ಲಿ ಬಗ್ಗಿ ನೋಡಿದರೆ, ಬಿಳಿಯ ಹೋತದ ಗಡ್ಡ ಬಿಟ್ಟವನೊಬ್ಬ, ಕುಳಿತ್ತಿದ್ದ, ಹೆಚ್ಚು ಕಡಿಮೆ ತೂಕಡಿಸುತ್ತಿದ್ದ ಅನ್ನಿಸುತ್ತೆ,
"ಸಾರ್ ಈಗ ಅಣ್ಣಿಗೇರಿಗೆ ಯಾವುದಾದರು ರೈಲು ಇದೆಯ?"
"ಎಲ್ಲಿಗೆ ಅಣ್ಣಿಗೇರಿಗ?" ಅಂದ ಗೊಗ್ಗರು ದ್ವನಿಯಲ್ಲಿ,
ಹಾಳಾದೋನೆ!!  ನಾನು ಬೆಚ್ಚಿ ಬಿದ್ದೆ ಅವನ ದ್ವನಿಗೆ!! ,
"ಹೌದು, ಇದೆಯಾ, ಅಲ್ಲಿಗೆ ಹೋಗಬೇಕು " ಅಂದೆ ,
ಅವನು
"ಈಗ ಹನ್ನಂದಕ್ಕೆ ಒಂದು ರೈಲು ಬರುತ್ತೆ, ಇಪ್ಪತ್ತು ರುಪಾಯಿ ಕೊಡಿ" ಅಂದ,

ಕೊಟ್ಟು ಟಿಕೆಟ್ ಪಡೆದೆ, ಕತ್ತಲು ತುಂಬಿದ ಪ್ಲಾಟ್ ಫಾರ್ಮನಲ್ಲಿದ್ದ ಬೆಂಚಿನಲ್ಲಿ ಕುಳಿತೆ, ಅದೇನು ಕರ್ಮವೊ ಯಾವ ಅಂಗಡಿಗಳು ತೆಗೆದಿಲ್ಲ, ಸ್ವಲ್ಪ ಹೊತ್ತಾಯ್ತೇನೊ, ಟ್ರೈನ್ ಬರುತ್ತಿರವ ಶಬ್ದ ಕೇಳಿಸಿತು, ಅತ್ತ ಇತ್ತ ನೋಡಿದೆ,

ವಿಚಿತ್ರ ಅಂದರೆ ರೈಲು ಹತ್ತಲು ಕಾಯುತ್ತಿದ್ದವನು ನಾನೊಬ್ಬನೆ!!,

  "ಕೂಊಊಊಊ" ಎಂದು ಕೂಗುತ್ತ ನಿಲ್ದಾಣ ಪ್ರವೇಶಿಸಿದ ರೈಲು ವೇಗವನ್ನು ಕಡಿಮೆ ಮಾಡದೆ ಹೋಗಿ, ಕಡೆಗೆ ನಿಂತಿತು, ನಾನು ಓಡುತ್ತ ಹೋಗಿ ಕಡೆಯ ಬೋಗಿಯನ್ನು ಹತ್ತುವದರಲ್ಲಿ ರೈಲು ಪುನಃ ಹೊರಟೆ ಬಿಟ್ಟಿತು,

  ಒಳಗೆ ಕತ್ತಲು ಕತ್ತಲು, ದೀಪವೆ ಸರಿಯಾಗಿಲ್ಲ, ತಡವರಿಸುತ್ತ ಒಳಗೆ ಓಡಾಡಿ ಹೇಗೊ ಸ್ವಿಚ್ ಹುಡುಕಿ ಅದುಮಿದೆ,
ಮಿಟಿ ಮಿಟಿ ಅಂತ ಮಿಣುಕುವ, ದೀಪ
ಹೇಗೊ ಹತ್ತಿತಲ್ಲ, ಎಂತದೊ ವಿಚಿತ್ರ, ಇಡಿ ಬೋಗಿಯಲ್ಲಿ ಯಾವ ಜನವು ಇಲ್ಲ , ಆ ತುದಿಯಿಂದ ಈ ತುದಿಯ ತನಕ ಓಡಾಡಿದೆ ನಿಜ ಬೋಗಿಗೆಲ್ಲ ನಾನೊಬ್ಬನೆ, ಹಾಳಾಗಲಿ ಅಂತ ಒಂದು ಕಡೆ ಕುಳಿತೆ, ರೈಲೇನೊ ವಿಶಲ್ ಹಾಕುತ್ತ ದಡ ದಡ ಶಬ್ದ ಮಾಡುತ್ತ ಓಡುತ್ತಲೆ ಇತ್ತು, ಹದಿನೈದು ಇಪ್ಪತ್ತು ಕಿ.ಮಿ. ಅಂದಿದ್ದ ಅಬ್ಬಬ್ಬ ಅಂದರೆ ಇಪ್ಪತ್ತು ನಿಮಿಶವಾಗಬಹುದಾ ಅಂತ ಕಾಯುತ್ತಿದ್ದೆ. ಅದೇನು ವಿಚಿತ್ರ ಅರ್ದ ಗಂಟೆದಾಟಿ ಮುಕ್ಕಾಲು ಗಂಟೆಯಾಗುತ್ತ ಬಂದಿತು, ಆದರೆ ರೈಲು ನಿಲ್ಲುತ್ತಿಲ್ಲ, ಹೋಗಲಿ ಕಡೆಗೆ ಮದ್ಯ ಯಾವ ನಿಲ್ದಾಣವು ಇಲ್ಲವೆ. ಸೋತು ಕುಳಿತೆ, ಎಷ್ಟು ಹೊತ್ತೊ, ಒಂದೆರಡು ಗಂಟೆ ಕಳೆದಿರಬಹುದು ಅನ್ನಿಸುತ್ತೆ, ಸಮಯ ನೋಡಿದೆ
ರಾತ್ರಿ ಹನ್ನೆರಡು ಗಂಟೆ !

=======================================================  3
  ಕಡೆಗು ರೈಲು ನಿಂತಿತು, ನನಗೆ ಸಮಾದಾನ ಹಾಳಾದ್ದು ಕಡೆಗೆ ಪ್ರಯಾಣ ಮುಗಿಯಿತಲ್ಲ ಅಂತ, ಕೇಂದ್ರದ ರೈಲ್ವೆ ಸಚಿವರಿಂದ ಪ್ರಾರಂಬಿಸಿ, ನಾನು ಪ್ರಯಾಣ ಮಾಡಿದ ರೈಲಿನ ಕಡೆಯದಬ್ಬಿಯಲ್ಲಿರಬಹುದಾದ ಗಾರ್ಡನಿವರೆಗು ಎಲ್ಲರನ್ನು ಶಪಿಸುತ್ತ, ನಿಲ್ದಾಣದಿಂದ ಹೊರಗೆ ಹೊರಟೆ,

  ಈ ಸರಿ ರಾತ್ರೀಲಿ ಹೇಗಪ್ಪಾ ಆ ರಾಮಚಂದ್ರ ಮೇಷ್ಟರ ಮನೆ ಹುಡುಕೋದು, ಯಾರನ್ನು ಕೇಳಲಿ, ಯಾರಾದರು ಕಾಣಿಸಿದರೆ ತಾನೆ, ಕಡೆಗೆ ಬಾಗಿಲಲ್ಲಿ ನಿಂತಿದ್ದ, ಸ್ಟೇಶನ್ ಮಾಸ್ಟರನ್ನು ಕಂಡು,

 "ಏನ್ಸಾರ,ಇಲ್ಲಿ ರಾಮಚಂದ್ರ ಮೇಷ್ಟುಂತಾ ಇದ್ದಾರಲ್ಲ ಅವರ ಮನೆ ಹೇಗೆ ಹೋಗೋದು ಗೊತ್ತಾ" ಎಂದೆ,

ಆತ ನೋಡಲು ವಿಚಿತ್ರವಾಗಿದ್ದ, ಕರಿಯ ಸೂಟು ದರಿಸಿದ್ದರು ಸಹ ಅವನ ಮುಖದಲ್ಲಿ ಎಂತದೊ
"ನೋಡಿದ ತಕ್ಷಣ ಮಕ್ಕಳು ಬಿಚ್ಚಿಬೀಳ್ತಾರೆ" ಅಂತಾರಲ್ಲ ಆ ಕಳೆಯಿತ್ತು,
ಅವನು " ರಾಮಚಂದ್ರ ಮೇಷ್ಟರಾ?" ಎಂದ,
ಅಯ್ಯೊ ಇದೇನು, ಅದೇ ಗೊಗ್ಗುರು ದ್ವನಿ, ಕಡೂರು ನಿಲ್ದಾಣದ ಕಿಟಕಿಯಲ್ಲಿ ಕೇಳಿದೆನಲ್ಲ, ಹಾಗೆಯೆ ಬೆಚ್ಚಿ ಬೀಳಿಸಿತು.

ಮತ್ತೆ ಅವನೆ
" ಹೊರಗೆ ಹೋಗ್ತೀರಲ್ಲ, ಹಾಗೆ ಎಡಗಡೆ ಒಂದು ರಸ್ತೆ ಹೋಗುತ್ತೆ, ಹಾಗೆ ಹೋಗಿ, ಆ ರಸ್ತೆ ಮುಗಿಯುವವರೆಗು, ಅ ರಸ್ತೆಯ ತುದಿ ಸರಿಯಾಗಿ ಮೇಷ್ಟ ಮನೆಗೆ ಮುಟ್ಟುತ್ತದೆ, ಅವರು ಯಾರೊ ಬರ್ತಾರೆ ಅಂತ ಕಾಯ್ತ ಇದ್ದರು, ಅದು ನೀವೇನ?" ಅಂದ.

ಸರಿ ರಾತ್ರಿಯಲ್ಲಿ ಆ ದ್ವನಿಗೆ ನಾನು ಬೆವೆತು ಹೋದೆ. ದರಿದ್ರದವನು ಅಂತ ಮನಸಿನಲ್ಲಿಯೆ ಶಪಿಸಿ, ಹೊರಗೆ ಬಂದರೆ "ಗೌ....ಔ" ಅನ್ನುವ ಕತ್ತಲು.

 ಕರೆಂಟ್ ಹೋಗಿದೆಯೊ ಅಥವ ಈ ಊರಿನಲ್ಲಿ ಕರೆಂಟ್ ಇಲ್ಲವೊ ಯಾರಿಗೆ ಗೊತ್ತು, ನಡೆಯುತ್ತ ಹೊರಟೆ, ಅತ್ತ ಇತ್ತ ನೋಡಿದರೆ ಕತ್ತಲೆ ಹೊರತಾಗಿ ಏನು ಇಲ್ಲ, ಮನೆಗಳೆ ಕಾಣುತ್ತಿಲ್ಲ,  ನಕ್ಷತ್ರದ ಮಬ್ಬು ಬೆಳಕಲ್ಲಿ, ಹತ್ತು ನಿಮಿಶ ನಡೆದಾಗ, ಎದುರಿಗೆ, ದೀಪವೊಂದು ಕಾಣಿಸಿತು, ಹತ್ತಿರ ಬರುವಾಗಲೆ ಗೊತ್ತಾಗಿದ್ದು, ಅದು ಮನೆಯ ಒಳಗಿನಿಂದ ಬರುತ್ತಿರುವ, ಸೀಮೆ ಎಣ್ಣೆ ಬುಡ್ಡಿಯ ದೀಪದ ಬೆಳಕು ಅಂತ. ನಾನು ಅಲ್ಲಿಗೆ ಹೋಗುವ ಹೊತ್ತಿಗೆ ಮನೆಯಿಂದ ಯಾರೊ ಹೊರಬಂದರು, ಪಾಪ ನನಗಾಗಿ ಕಾದಿರಬೇಕು, ಅವರಿಗೆ ನನ್ನಿಂದ ತೊಂದರೆ ಆಯಿತಲ್ಲ ಅಂತ ಸಂಕೋಚವಾಯಿತು.
ನನಗೆ ಇದೆಲ್ಲ ಬೇಕಿತ್ತ!.
"ರಾಮಚಂದ್ರ ಮೇಷ್ಟರ ಮನೆ ಇದೇನ?" ಅಂದೆ,
ಅರ್ದ ರಾತ್ರಿಲಿ ಬಂದು ಅಡ್ರೆಸ್ ಕೇಳುತ್ತಿರುವ ನನ್ನ ಕಂಡು ಅವರಿಗೇನು ಅನಿಸಿರಬೇಡ.
"ನೀವು ಯಾರು ಎಲ್ಲಿಂದ ಬರ್ತಿದ್ದೀರಿ" ಅಂದರು, ಅದಕ್ಕೆ ನಾನು,
"ನಾನು ಪಾರ್ಥ ಅಂತ, ಬೆಂಗಳೂರಿನಿಂದ ಬರ್ತಿದ್ದೇನೆ, ನೀವು ಮನುವಿನ ಸೋದರಮಾವನ? , ಮನು ಕಳಿಸಿದ" ಅಂದೆ, ಅವರು ನಕ್ಕರು, ನಗುವಾಗ ಮುಖ ಎಂತದೊ ವಿಚಿತ್ರವಾಗಿ ಕಾಣುತ್ತಿತ್ತು,
"ಮನು ಕಳಿಸಿದವರ, ಸರಿ ನಾನೆ ರಾಮಚಂದ್ರ ಅನ್ನುವವನು, ಒಳಗೆ ಬನ್ನಿ" ಎಂದು ಕರೆದೋಯ್ದರು.
ಹೆಂಚಿನ ಮನೆ ತುಂಬಾ ಹಳೆಯದರಂತೆ, ಕಾಣುತ್ತಿತ್ತು, ಒಂದು ರೂಮನ್ನು ತೋರಿಸಿ, ನೀವು ಈ ಕೊಟಡಿಯಲ್ಲಿ ಇಳಿದುಕೊಳ್ಳಿ ಆಗಬಹುದೆ " ಎಂದರು.
ನಾನು ಏಕಾಗಬಾರದು ಆಗಲಿ ಎನ್ನುತ್ತ ರೂಮಿನ ಒಳಗೆ ಹೋದೆ, ಗೋಡೆಯ ಪಕ್ಕ ಮಂಚ, ಬ್ಯಾಗನ್ನು ಟೇಬಲಿನ ಮೇಲಿಟ್ಟೆ, ಉಳಿದಿದ್ದನ್ನು ಬೆಳಗ್ಗೆ ನೋಡಿಕೊಂಡರಾಯಿತು,  ಬ್ಯಾಗಿನಿಂದ ಲುಂಗಿ ತೆಗೆದು ಧರಿಸಿ, ಟವೆಲ್ ಹಿಡಿದು, ಕಾಲು ತೊಳೆದು ಮಲಗೋಣ ಅಂತ ಹೊರಗೆ ಬಂದೆ.
ಆತ "ಬೇಗ ಕಾಲು ತೊಳೆದು ಬನ್ನಿ ಊಟ ಮಾಡುವಿರಂತೆ " ಎಂದರು,
"ಊಟ" ಅನ್ನುವ ಶಬ್ದವೆ ನನಗೆ ಅಪ್ಯಾಯಮಾನವಾಯಿತು,
 "ಅಲ್ಲ ಈ ಸರಿರಾತ್ರಿಯಲ್ಲಿ ನಿಮಗೆ ತೊಂದರೆ" ಅನ್ನಲು ಹೋದವನು ಬಾಯಿಮುಚ್ಚಿ, ಬಚ್ಚಲು ಮನೆಯತ್ತ ಹೊರಟೆ,

"ಹಸಿವಿರುವಾಗ ಎಂತ ಸಂಕೋಚವೊ ಮಗ"  ಅನ್ನುತ್ತಿತ್ತು ಮನ.
 "ಥೂ ನಾಚಿಕೆ ಇಲ್ಲದವೆನೆ" ಎಂದಿತು, ಇನ್ನೊಂದು ಮನ.

ಕಾಲು ತೊಳೆದು ಬಂದು ಊಟಕ್ಕೆ ಸಿದ್ದನಾದೆ. ಪಾಪ ಆತನೆ ಬಡಿಸಿದ, ಅವರ ಪತ್ನಿ ಮಲಗಿರಬಹುದೇನೊ .ಹದವಾದ ಅನ್ನ ಹುಳಿ, ಸಾರು ಪಲ್ಯಗಳು, ಅಕ್ಕಿ ಕಡಲೆ ಬೇಳೆ ಹಾಕಿ ಮಾಡಿದ ಪಾಯಸ, ಎಲ್ಲವು ಬಾಯಲಿ ನೀರು ತರಿಸುತ್ತಿದ್ದವು. ನಾಚಿಕೆ ಬಿಟ್ಟು ಸಾದರಣಕ್ಕಿಂತ ಸ್ವಲ್ಪ ಜಾಸ್ತಿಯೆ ತಿಂದೆ. ಆತನಾದರು ಅಷ್ಟೆ ಪಾಪ ದಾರಳವಾಗಿಯೆ ಬಡಿಸಿದರು, ಎಲ್ಲವು ಬಿಸಿ ಬಿಸಿ ಈಗಿನ್ನು ಮಾಡಿ ಇಳಿಸಿದಂತೆ ರುಚಿ. ಊಟ ಮುಗಿಸಿ, ಹಾಲಿನಲ್ಲಿ ಕುಳಿತೆ. ಅಲ್ಲ ಈ ಸಮಯದಲ್ಲಿ ಇಷ್ಟು ಬಿಸಿ ಅಡಿಗೆ ಹೇಗೆ ಬಡಿಸಿದರು, ಮನೆಯಲ್ಲಿ ಏನಾದರು ಫ್ರೀಜ್ ಇದೆಯ?
ಛೇ! ಹೊಟ್ಟೆಗೆ ಬಿದ್ದರೆ, ಬುದ್ದಿಯು ಮಂಕೆ,
ಬಿಸಿ ಬಿಸಿ ಇರಲು ಫ್ರೀಜ್ ನಲ್ಲಿಟ್ಟರೆ ಆಗಲ್ಲ, ಬಹುಷಃ  ಒವನ್ ಇರಬಹುದೆ,
ಥೂ!  ಕರೆಂಟ್ ಇಲ್ಲವಲ್ಲ, ಇಲ್ಲೆಲ್ಲು,
ಏನಾದರಾಗಲಿ, ಹೊಟ್ಟೆಗೆ ಬಿದ್ದ ಊಟ ಬುದ್ದಿಯನ್ನು ಮಂಕು ಮಾಡುತ್ತಿತ್ತು. ಅವರ ಸಲಹೆಯಂತೆ ರೂಮಿನಲ್ಲಿ ಹೋಗಿ ಮಂಚದ ಮೇಲೆ ಮಲಗಿ ಬಿಟ್ಟೆ. ಎಷ್ಟು ನಿದ್ದೆ ಎಂದರೆ, ಕತ್ತೆಯೊಂದು ಬೂದಿಯ ತಿಪ್ಪೆಯ ಮೇಲೆ ಮಲಗಿದರು ಅಷ್ಟು ಸುಖಪಡಲ್ಲ, ದೇಹಭಾವವೆ ಇಲ್ಲದ ಹೆಣದಂತೆ.

========================================================== 4
 
ಬೆಳಗ್ಗೆ ಏಳುವಾಗ ಹೊತ್ತು ಎಷ್ಟಾಗಿತ್ತೊ ಅರ್ಥವಾಗಲಿಲ್ಲ. ಒಳಗೆಲ್ಲ ಬೆಳಕು ತುಂಬಿತು, ಎಚ್ಚರವಾದ ತಕ್ಷಣ ಹೆಂಚಿನ ಮಾಡು ಕಾಣಿಸಿತು. ನೆನಪಿಗೆ ಬಂದಿತು ಮನೆಯಲ್ಲಿಲ್ಲ ಬೇರೆಲ್ಲೊ ಇದ್ದೀನಿ ಅಂತ. ಪಾಪ ಏನೆಂದುಕೊಂಡರೊ, ಮಲಗಿಬಿಟ್ಟೆ ಅಂತ ಎದ್ದು ಬಂದೆ. ಹಾಲಿನಲ್ಲಿ ಮದ್ಯದಲ್ಲಿದ್ದ, ಬೆತ್ತದ ಕುರ್ಚಿಯ ಮೇಲೆ ಸುದ್ದಿ ಪತ್ರಿಕೆ ಹಿಡಿದು ಕುಳಿತ್ತಿದ್ದರು, ನಾನು ಹೊರ ಬಂದರು, ತಲೆ ಎತ್ತಲೆ ಇಲ್ಲ, ನಾನಾಗಿಯೆ
"ಏನು ಪೇಪರ್ ಓದುತ್ತಿದ್ದೀರಿ " ಅಂದೆ,
ನನ್ನ ಮಾತಿನಿಂದ ಅವರು ಬೆಚ್ಚಿ ಬಿದ್ದವರಂತೆ ತಲೆ ಎತ್ತಿ ನನ್ನ ನೋಡಿದರು, ಬಹುಶಃ ನನ್ನ ಇರವನ್ನು ಮರೆತು ಬಿಟ್ಟಿದ್ದರೊ ಏನೊ, ನನ್ನನ್ನು ನೋಡಿ ಸ್ವಲ್ಪ ಆಶ್ಚರ್ಯ ಪಟ್ಟಂತೆ ಕಾಣಿಸಿತು, ಆದರು ನನ್ನತ್ತ ನೋಡಿ
"ಈಗ ಎದ್ದಿರಾ, ಒಟ್ಟಿಗೆ ಸ್ನಾನ ಮುಗಿಸಿಬಿಡಿ, ತಿಂಡಿಗೆ ಏನು ಆದೀತು ಅಂದರು"
ನನಗೆ ಆಶ್ಚರ್ಯ ಏನಿದು ನನ್ನ ಕೇಳಿ ತಿಂಡಿ ಮಾಡ್ತಾರ, ನಾನೀಗ ದೋಸೆ ಬೇಕೆಂದರೆ ಎಲ್ಲಿಂದ ತರ್ತಾರೆ, ದೋಸೆ ಹಿಟ್ಟು ಮಾಡಿಟ್ಟಿರ್ತಾರ,ಅಂದುಕೊಂಡು
"ಇಂತದೆ ಅಂತ ಏನಿಲ್ಲ, ಇಡ್ಲಿ, ಅಥವ ನಿಮಗೆ ಏನು ಅನುಕೂಲವಾದರೆ ಅದು" ಎಂದೆ.
ಆತ "ಹಿಂದೆ ಬಚ್ಚಲು ಮನೆಯಿದೆ ಸ್ನಾನ ಮುಗಿಸಿಬಿಡಿ" ಅಂದರು
ನಾನು ಸರಿ ಅಂತ ಟಾವೆಲ್ ಹಿಡಿದು ಹೊರಟೆ. ಸ್ನಾನ ಮಾಡುವಾಗ ಚಿಂತಿಸಿದೆ ಈ ಮನುಷ್ಯನನ್ನ ನೋಡಿದರೆ ಮೇಷ್ಟ್ರ ತರ ಕಾಣಿಸೋದೆ ಇಲ್ವಲ್ಲ. ಏನೊ ಸ್ವಲ್ಪ ವಿಚಿತ್ರವೆ, ಇನ್ನು ಆಕೆ ಮನುವಿನ ಸೋದರ ಅತ್ತೆ, ಆಕೆ ಹೇಗಿದ್ದಾಳೊ, ಅಂತ ಕುತೂಹಲವಾಯಿತು. ಬಚ್ಚಲು ಮನೆಯಲ್ಲಿ ಹಂಡೆ ತುಂಬಾ ಬಿಸಿನೀರಿತ್ತು, ಆದರೆ ಅದನ್ನು ಕಾಯಿಸಿದ ಯಾವ ಲಕ್ಷಣಗಳು ಕಾಣಿಸಲಿಲ್ಲ, ನೀರೊಲೆ ಅಷ್ಟು ಶುಬ್ರವಾಗಿತ್ತು. ಹೇಗೊ ಸ್ನಾನ ಮುಗಿಸಿ ಹೊರಬಂದ ಮೈಯೆಲ್ಲ ಹಗುರವಾಗಿತ್ತು. ಏಕೊ ತುಂಬಾ ಹಸಿವಾಗುತ್ತಿತ್ತು, ಅಲ್ಲ ರಾತ್ರಿ ನೋಡಿದರೆ, ಅಷ್ಟೆ ಲೇಟಾಗಿ ಊಟ ಮಾಡಿ ಮಲಗಿದ್ದೇನೆ, ಅದು ಒಳ್ಳೆ ಭರ್ಜರಿ ಊಟ, ಈಗ ಏಕೆ ಹಸಿವು ಅಂದುಕೊಂಡೆ. ಹೊರಗೆ ಬಂದೆ ಆತ ಎಲ್ಲೊ ಕಾಣಿಸಲಿಲ್ಲ. ರೂಮಿಗೆ ಹೋಗಿ ಬ್ಯಾಗಿನಿಂದ ಬೇರೆ ಬಟ್ಟೆ ತೆಗೆದು ಧರಿಸಿ , ತಲೆ ಬಾಚಿ ಹೊರಬಂದೆ. ಆತ ಹಾಲಿನಲ್ಲಿ ನನಗೆ ಕಾಯುತ್ತ ನಿಂತಿದ್ದರು,
 ಟೇಬಲ್ ಮೇಲೆ ತಟ್ಟೆ ಹಾಕಿದ್ದರು, "ಬನ್ನಿ ತಿಂಡಿ ಮುಗಿಸಿ ಬಿಡಿ" ಅಂದರು, ಕುಳಿತೆ, ಬಿಸಿ ಬಿಸಿ ಇಡ್ಲಿ!!!! ಚಟ್ನಿ! ಎಂತ ಅಚ್ಚರಿ ನಾನು ಬಾಯಲ್ಲಿ ಹೇಳಿದ ಮಾತ್ರಕ್ಕೆ ಅದೆ ತಿಂಡಿಯನ್ನು ಮಾಡಿಬಿಟ್ಟಿದ್ದಾರೆ ಮನುವಿನ ಸೋದರತ್ತೆ ತುಂಬಾನೆ ಚುರುಕು.
"ನಿಮ್ಮ ಮನೆಯವರು ತುಂಬಾ ಚುರುಕು ಅನ್ನಿಸುತ್ತೆ, ಎಷ್ಟು ಬೇಗ ಇಡ್ಲಿ ಮಾಡಿಬಿಟ್ಟಿದ್ದಾರೆ " ಅಂದೆ. ಆತ ಆಶ್ಚರ್ಯ ಚಕಿತರಾದಂತಿತ್ತು,
"ಮನೆಯವರು!!"
ಅಂದವರು, ಏಕೊ ಸುಮ್ಮನಾದರು. ಆತನೆ ಬಡಿಸಲು ನಿಂತರು.
ನಾನು ಮತ್ತೆ "ನಿಮ್ಮ ಮನೆಯವರೆಲ್ಲಿ ಕಾಣಲಿಲ್ಲ" ಅಂದೆ ಈಗ ಆತ ನಿಸ್ಸಾರ ದ್ವನಿಯಲ್ಲಿ
  "ಈ ಮನೆಯಲ್ಲಿ ನಾನು ಒಬ್ಬನೆ ಇರುವುದು ಯಾರು ಇಲ್ಲ " ಎಂದರು,
ನನಗೆ ಆಶ್ಚರ್ಯವಾಯಿತು, ಮನು ಸೋದರತ್ತೆ ಹಾಗು ಸೋದರಮಾವ ಇಬ್ಬರು ಇದ್ದಾರೆ ಅಂತ ಹೇಳಿದ್ದ ನೆನಪು. ಆಕೆಗೆ ಏನಾಯಿತೊ ಅಥವ ಇನ್ಯಾವ ವಿಷಯವೊ ನಾನು ಕೆದಕಲು ಹೋಗಲಿಲ್ಲ.

 ನಿದಾನಕ್ಕೆ ಇಡ್ಲಿ ಮುಗಿಸಿದೆ, ಎದುರಿಗೆ ವಿದೇಯತೆಯಿಂದ ನಿಂತಿದ್ದ ಮನುವಿನ ಸೋದರಮಾವ,
 "ಕಾಫಿ ತರುತ್ತೇನೆ" ಅಂತ ಒಳಗೆಹೋದರು,
ನನಗೆ ಸಿಗುತ್ತಿರುವ ರಾಜಾತಿತ್ಯದಿಂದ ನನ್ನ ಮನಸ್ಸು ಮುದಗೊಂಡಿತ್ತು, ಹೀಗೆ ಆದರೆ ನಾನು ಕತೆಯನ್ನು ಬರೆದಹಾಗೆ ಇದೆ ಹೊಟ್ಟೆ ತುಂಬಾ ತಿನ್ನುವುದು, ಕತ್ತೆಯಂತೆ ಮಲಗಿ ನಿದ್ದೆ ಮಾಡುವುದು. ಅಂದುಕೊಳ್ಳುತ್ತ  ಪಕ್ಕದಲ್ಲೆಲ್ಲ ಕಣ್ಣು ಆಡಿಸಿದೆ. ಅಲ್ಲಿಯೆ ಆತ ಆಸಕ್ತಿಯಿಂದ ಓದುತ್ತಿದ್ದ ಅಂದಿನ ದಿನಪತ್ರಿಕೆ ಬಿದ್ದಿತ್ತು. ತೆಗೆದು ಕಣ್ಣಾಡಿಸಿದೆ.

 ಎಂತದೊ ಹೊಸತು ಅನ್ನಿಸಿತು. ಎಲ್ಲ ಸುದ್ದಿಗಳೆ ಹೊಸತೆ, ಯಡಿಯೂರಪ್ಪನಾಗಲಿ, ಜನರ್ದಾನ ರೆಡ್ಡಿ ಯಾಗಲಿ ಮತ್ತೆ ಜೈಲು ಸೇರಿರುವ ದರ್ಶನ್ ಆಗಲಿ ಯಾರದೆ ಸುದ್ದಿ ಇರದೆ ಎಂತದೊ ಈಷ್ಟ್ ಇಂಡಿಯ ಕಂಪನಿಯದು, ಸೈನಿಕರ ದಂಗೆಯ ಎಂತದೊ ಕೆಲವು ವಿವರಗಳು ಏನೇನೊ ಕಾಣಿಸಿದವು. ನನಗೆ ಏನೊ ಅನುಮಾನ ಬಂದು ಯಾವತ್ತಿನ ಪತ್ರಿಕೆ ಅಂತ ಮೇಲೆ ನೋಡಿದೆ,

ಮೈ ಗಾಡ್!  
೧೮೫೭ ರ ಆಗಷ್ಟ್ ೧೨ ರ ಟೈಮ್ಸ್ ಆಪ್ ಇಂಡಿಯ  
ಅಂದರೆ ಸರಿಯಾಗಿ ಸುಮಾರು  ೧೬೦ ವರ್ಷಗಳ ಹಿಂದಿನದು, ಎಲಾ ಮುದುಕ ಯಾವುದೊ ಹಳೆಯ ಪತ್ರಿಕೆ ಓದುತ್ತ ನಾನು ಎದುರಿಗೆ ನಿಂತರೆ ಕಾಣದಂತಿದ್ದನಲ್ಲ ಎಂತ ವಿಚಿತ್ರ ಮಂದಿ ಇವರೆಲ್ಲ. ಅಷ್ಟರಲ್ಲಿ ಅವನು ಕಾಫಿ ಹಿಡಿದು ಹೊರಬಂದು ನನ್ನ ಮುಂದಿದ್ದ ಟೇಬಲಿನ ಮೇಲಿಟ್ಟ. ಒಂದು ಗುಟುಕು ಕುಡಿದೆ . ಅಹಾ! ಅದೆಂತ ರುಚಿ! ಜನ್ಮದಲ್ಲಿಯೆ ಕುಡಿದಿರಲಿಲ್ಲ ಅನ್ನಿಸಿತು. ಛೇ! "ಮುದುಕ" ಅಂತ ಅಂದಿದ್ದು ತಪ್ಪಾಯ್ತಪ್ಪ ಅಂತ ಮನಸಿನಲ್ಲಿಯೆ ಕ್ಷಮೆ ಕೇಳಿದೆ.
"ನೀವು ಯಾಕಾಗಿ ಈ ಹಳ್ಳಿಗೆ ಬಂದಿದ್ದು"  ಅವನು ಇದ್ದಕ್ಕಿದಂತೆ ನನಗೆ ಕೇಳಿದ.
ಏನಿದು ಮನು ಇವನಿಗೆ ಸರಿಯಾಗಿ ವಿಷಯ ತಿಳಿಸಿಲ್ಲ ಅನ್ನಿಸುತ್ತೆ, ನಾನು "ಏನಿಲ್ಲ ಕೆಲವು ಕತೆಗಳನ್ನು ಬರಿಯಬೇಕಾಗಿತ್ತು, ವಿರಾಮವಾಗಿರುತ್ತೆ ಅಂತ ಇಲ್ಲಿಗೆ ಬಂದೆ, ಮನು ಏನನ್ನು ಹೇಳಲಿಲ್ಲವೆ?" ಎಂದೆ. ಅವನು ಸ್ವಲ್ಪ ಆಶ್ಚರ್ಯವಾಗಿಯೆ
"ಕತೆ ಬರೆಯುವುದ !" ಅಂದವನು ಮುಂದಕ್ಕೆ ಏನನ್ನು ಕೆದಕಲಿಲ್ಲ ಸುಮ್ಮನಾದ.
 ನಾನು ಮತ್ತೆ ಕೇಳಿದೆ "ನೀವಿಲ್ಲಿ ಏನು ಮಾಡಿಕೊಂಡಿದ್ದೀರಿ, ಒಬ್ಬರೆ ಬೇಸರವಿಲ್ಲವೆ"
ಅದಕ್ಕವನು "ನಾನು ಇಲ್ಲಿ ಬೇಸಾಯ ಮಾಡ್ತೀನಿ, ಈವತ್ತು ಬುರುಡೆಗಳ ನಾಟಿ ಮಾಡಬೇಕಿತ್ತು, ಆಗಲೆ ಸಮಯವಾಯ್ತು, ನಾನು ಹೋಗಿರುತ್ತೇನೆ, ನೀವು ಇಲ್ಲೆಲ್ಲ ಹೊರಗೆ ಸುತ್ತಾಡುತ್ತಿರಿ " ಅಂದವನು ಹೊರಗೆಲ್ಲೊ ಹೊರಟು ಹೋದ.
 ಏನವನು ಹೇಳಿದ್ದು ಬುರುಡೆ ನಾಟಿಯೆ, ನಾಟಿ ಎಂದರೆ ಸಸಿಗಳನ್ನು ನೆಡುವುದು, ಓ ಎಲ್ಲೊ ತೆಂಗಿನ ಬುರುಡೆಗಳನ್ನು ನಾಟಿ ಮಾಡುವ ನರ್ಸರಿ ನಡಸುತ್ತಾನೊ ಏನೊ " ಅಂದು ಕೊಂಡು. ಸರಿ ಈಗ ಬರೆಯಲು ಕುಳಿತರೆ ನಿದ್ದೆ ಎಳೆಯುತ್ತದೆ ಅಷ್ಟೆ ಹೊರಗೆಲ್ಲ ಊರಿನಲ್ಲಿ ಒಂದು ಸುತ್ತು ಬಂದರೆ ದೇಹ ಮನಗಳು ಫ್ರೆಶ್ ಆಗುತ್ತವೆ, ಅಂದುಕೊಂಡು ಪ್ಯಾಂಟ್ ಧರಿಸಿ ಹೊರಹೊರಟೆ.

========================================================== 5

 ಮನೆಯಿಂದ ಹೊರಗೆ ಬಂದು ಯಾವ ಕಡೆ ಹೋಗುವುದು ಅಂತ ಸುತ್ತ ನೋಡಿದೆ,

 ಎದುರಿಗೆ ನಾನು ಬಂದ ಮಣ್ಣಿನ ರಸ್ತೆ ಇತ್ತು ಅದಂತು ರೈಲ್ವೆ ನಿಲ್ದಾಣಕ್ಕೆ ಹೋಗುತ್ತದೆ, ಅದು ಬೇಡ ಬೇರೆ ಕಡೆ ಹೋಗೋಣ ಅಂತ ಸುತ್ತಲು ನೋಡುತ್ತ ಹೋದೆ. ನನ್ನ ಕರ್ಮ ಎಂತದು ಯಾವ ಊರದು, ಕಣ್ಣಿಗೆ ಕಾಣಿಸಲು ಒಂದು ಮನೆಯು ಇಲ್ಲ ಮಾತನಾಡಿಸಲು ಒಂದು ನರೆಪಿಳ್ಳೆಯ ದರ್ಶನವು ಇಲ್ಲ. ಮನುವಿನ ಸೋದರ ಮಾವ ಎತ್ತ ಹೋದನೊ ತಿಳಿಯಲಿಲ್ಲ. ಸುತ್ತಲು ಸುಮ್ಮನೆ ಅಡ್ಡಾಡುತ್ತ ಹೊರಟೆ.

 ಸುತ್ತಲು ಬರಿ ಬೆಳೆದುಕೊಂಡ ಹಾಳುಗಿಡಗಳು, ಕುರುಚಲು ಹುಲ್ಲು. ಸ್ವಲ್ಪ ಹೊತ್ತಾದ ಮೇಲೆ ಗಮನಿಸಿದೆ, ಇವು ಬರಿ ಕುರ್ಚಲು ಹುಲ್ಲಿನ ಜಮೀನಲ್ಲ, ನಡುವೆ ಮನುಷ್ಯನ ಸಮಾದಿಗಳಿರುವ ಹಾಗಿದೆ. ನೋಡುತ್ತ ನೋಡುತ್ತ ತಿಳಿಯಿತು,, ಇದು ಖಂಡೀತ ಊರಲ್ಲ, ಯಾವುದೊ ದೊಡ್ಡ ಸ್ಮಶಾನವಿರಬೇಕು. ಇದರ ನಡುವೆ ಬಂದು ಈ ಮುದುಕ ಮನುವಿನ ಸೋದರಮಾವ ಏಕೆ ಮನೆ ಮಾಡಿಕೊಂಡಿದ್ದಾನೆ. ಏನಾದರು ತಲೆ ಕೆಟ್ಟಿದೆಯ. ಅಲ್ಲ ಪ್ರಶಾಂತವಾದ ಜಾಗ ಅಂದರೆ ಇಂತ ಜಾಗಕ್ಕೆ ಕಳಿಸಿದ ಮನು ಎಂತವನು ಎದುರಿಗೆ ಕಂಡರೆ ಅವನ "ಹೊಟ್ಟೆ ಸೀಳುವಷ್ಟು" ಕೋಪ ಬಂದಿತು. ಇಲ್ಲಿ ನಾನು ಇನ್ನಾವ ಕತೆ ಬರೆಯಲಿ ಎಂತ ಸ್ಪೂರ್ತಿ ಬಂದೀತು. ಛೆ! ಅಂತ ಅಡ್ಡಾಡುತ್ತ ಹೊರಟೆ.

 ಎಷ್ಟು ಸಮಯ ಸುತ್ತಿದೆನೊ ಒಂದೆರಡು ಗಂಟೆ ಕಳೆದಿರಬಹುದು. ದೂರದಲ್ಲಿ ಯಾರೊ ಒಬ್ಬಾತ ಏನೊ ನಡಿಸಿರುವುದು ಕಾಣಿಸಿತು. ಹತ್ತಿರ ಹೊರಟೆ. ಹತ್ತಿರ ಹೋಗುತ್ತಿದ್ದಂತೆ ಗಮನಿಸಿದೆ. ಜಮೀನಿನ ಪೂರ್ತಿ, ಅರ್ದ ಅಡಿ ವ್ಯಾಸದ ಚಿಕ್ಕ ಚಿಕ್ಕ ಗುಂಡಿಗಳು, ಒಂದರಪಕ್ಕ ಒಂದರಂತೆ ಸಾಲುಗಳು, ಅಡ್ಡ ಉದ್ದಕ್ಕೆ ಇರುವ ಚಿಕ್ಕ ಚಿಕ್ಕ ಗುಂಡಿಗಳು ಸಾವಿರಾರು ಇರಬಹುದೆ , ಇದರಲ್ಲಿಯೆ ಏನು ಮನುವಿನ ಸೋದರಮಾವ ಹೇಳಿದಂತೆ, ತೆಂಗಿನಬುರುಡೆಗಳ ನಾಟಿ ಮಾಡುವುದು. ನೋಡೋಣ ಅಂತ ಹತ್ತಿರ ಹೋದೆ.
    ನನ್ನ ಊಹೆ ನಿಜವಾಗಿತ್ತು, ಅಲ್ಲಿ ಆ ಮುದುಕ ದೊಡ್ಡ ಬಿದುರಿನ ಬುಟ್ಟಿಯಲ್ಲಿ ಸುಲಿಯದ ತೆಂಗಿನ ಕಾಯಿಗಳ ಗಾತ್ರದ ಬುರುಡೆಗಳನ್ನು ತಂದು ರಾಶಿ ಮಾಡುತ್ತಿದ್ದ. ಅನುಮಾನದಿಂದ ಹತ್ತಿರ ಹೋಗಿ ನೋಡಿದೆ, ನನ್ನ ಉಸಿರೆ ನಿಂತತಾಯ್ತು, ಅವು ತೆಂಗಿನ ಬುರುಡೆಗಳಲ್ಲ, ನಿಜವಾದ ಮನುಷ್ಯನ ಬುರುಡೆಗಳು ಆಗತಾನೆ ಕತ್ತರಿಸಿದಂತೆ ಹಸಿಹಸಿಯಾಗಿದ್ದವು, ನೋಡಿದರೆ ಗಂಡಸರದು, ಹೆಂಗಸರ ಮಕ್ಕಳ ಎಲ್ಲ ತಲೆಗಳಿದ್ದವು, ಕೆಲವಂತು, ಕತ್ತರಿಸಿದ ಕುತ್ತಿಗೆಯಿಂದ ರಕ್ತ ತೊಟ್ಟಿಕುತ್ತಿತ್ತು ಅನ್ನಿಸಿತು. ಅವನು ಎಲ್ಲಿಂದಲೊ ಅವುಗಳನ್ನು ತಂದು ಮೊದಲೆ ಇದ್ದ ರಾಶಿಯ ಮೇಲೆ ಸುರಿದ, ಅದರಲ್ಲಿ ಒಂದು ಚಿಕ್ಕ ಮಗುವಿನ ಬುರುಡೆ ಉರುಳುತ್ತ ಬಂದು ನನ್ನ ಕಾಲ ಬಳಿಬಂದು ಬಿದ್ದಿತ್ತು.
  ನನಗೆ ಹೊಟ್ಟೆಯಲ್ಲಿ ಎಂತದೊ ಹಿಂಸೆ ಪ್ರಾರಂಬವಾಯಿತು, ಇನ್ನೇನು ವಾಂತಿ ಬಂದಿತು ಅನ್ನುವ ಹಾಗೆ.

   ಆದರೆ ಆ ಮನುಷ್ಯ ಮಾತ್ರ ಏನು ಆಗಿಲ್ಲ ಅನ್ನುವ ರೀತಿ, "ನಿಮ್ಮ ಸುತ್ತಾಟ ಮುಗಿಯಿತ, ಅದೇನೊ ಕತೆ ಬರೀತಿನಿ ಅಂದ್ರಲ್ಲ ಆಯ್ತಾ, ನಿಂತಿರಿ, ನಾನು ಹೋಗಿ ಇನ್ನೊಂದು ಸ್ವಲ್ಪ ಬುರುಡೆಗಳನ್ನು ತಂದು ಬಿಡ್ತೀನಿ, ಇವತ್ತಿನ ನಾಟಿಗೆ ಸರಿಹೋಗುತ್ತೆ" ಅಂತ ಖಾಲಿಮಾಡಿದ ಬುಟ್ಟಿ ಹಿಡಿದು ಹೊರಟ. ನನಗೆ ಹೃದಯ ಬಾಯಿಗೆ ಬಂದು ಕುಳಿತ್ತಿತ್ತು. ಇಲ್ಲಿ ಏನು ಸರಿಯಿಲ್ಲ ಅದಷ್ಟೆ ಬೇಗ ಜಾಗಬಿಡೋದು ಒಳ್ಳೆಯದು ಅಂತ ಮನಸ್ಸು ಹೇಳಿತು. ಅಲ್ಲಿಂದ ಒಂದೆ ಓಟ ಶುರುಮಾಡಿದೆ, ಹೇಗೊ ಹೇಗೊ ಸುತ್ತಿ ಅದೆ ರೈಲ್ವೆ ನಿಲ್ದಾಣದ ರಸ್ತೆಗೆ ಸೇರಿ ನಾನಿದ್ದ ಮನೆಯ ಒಳಗೆ ಹೋದೆ. ತಕ್ಷಣ ಬಟ್ಟೆಗಳನ್ನೆಲ್ಲ ಬ್ಯಾಗಿನಲ್ಲಿ ತುರುಕಿ ಹೊರಟೆ, ಒಂದು ಲೋಟ ನೀರು ಕುಡಿಯಬೇಕೆನಿಸಿ ಅಡಿಗೆಮನೆಗೆ ಹೋದೆ. ಅಲ್ಲೇನಿದೆ. ಎಲ್ಲವು ಸ್ವಚ್ಚ. ಎಷ್ಟೋ ವರ್ಷದಿಂದ ಒಲೆ ಹಚ್ಚಿದ ಗುರುತೆ ಇಲ್ಲ. ನೀರು ಇಲ್ಲ. ಎಂತದು ಬೇಡ, ಹೊರಟರೆ ಸಾಕು, ಎಂದು ರೈಲ್ವೆ ನಿಲ್ದಾಣದತ್ತ ಓಡುತ್ತ ಹೊರಟೆ.

   ರೈಲ್ವೆ ನಿಲ್ದಾಣ ತಲುಪಿದೆ, ಅದೊಂದು ಚಿಕ್ಕ ನಿಲ್ದಾಣ ಅನ್ನಿಸುತ್ತೆ, ನಿಂತಿದ್ದ ಒಬ್ಬನನ್ನು ಕಡೂರಿಗೆ ಈಗ ಯಾವುದಾದರು ರೈಲು ಇದೆಯ ಅಂತ ವಿಚಾರಿಸಿದೆ, "ಇದೆ ಸಾರ್ ಇನ್ನೇನು ಬರುತ್ತೆ, ಇಲ್ಲಿಗೆ ಬರೋದು ಅದೊಂದೆ ರೈಲು ದಿನಕ್ಕೆರಡು ಸಾರಿ ಬಂದು ಹೋಗುತ್ತೆ" ಅಂದ. ಅಷ್ಟರಲ್ಲಿ ರೈಲು ಬಂದಿತು. ಅವನು "ಇದೆ ಸಾರ್ ಹತ್ತಿ, ಈಗ ಬಿಟ್ಟರೆ ಇನ್ನು ನಾಳೆಯೆ ನಿಮಗೆ ಕಡೂರಿಗೆ ರೈಲು ಇರೋದು" ಅಂದ ನಾನು ಆತುರವಾಗಿ ಹತ್ತಿದೆ. ರೈಲು ಸುಮಾರು ಅರ್ದ ಮುಕ್ಕಾಲು ಗಂಟೆಯಲ್ಲಿ ಕಡೂರು ತಲುಪಿತ್ತು. ಸಮಯ ನೋಡಿದೆ ರಾತ್ರಿ ಹತ್ತು ಗಂಟೆಯಾಗಿತ್ತು.

======================================================   6

  ನಿನ್ನೆ ನಿರ್ಜನವಾಗಿದ್ದ ನಿಲ್ದಾಣ ಈ ದಿನ ಜನಬರಿತವಾಗಿದ್ದು, ಎಲ್ಲ ಅಂಗಡಿಗಳು ತೆರೆದಿದ್ದವು, ನಾನು ನಿದಾನಕ್ಕೆ ಕೌಂಟರಿನ ಹತ್ತಿರ ಹೋದೆ
"ಸಾರ್ ಬೆಂಗಳೂರಿಗೆ ಯಾವುದಾದರು ರೈಲು ಸಿಗಬಹುದಾ" ,
ಅವನು "ಈ ಸಮಯಕ್ಕೆ ರೈಲು ಇಲ್ಲ ಆದರೆ ಸಂಜೆ ಬರಬೇಕಾದ ರೈಲು ತುಂಬಾ ತಡವಾಗಿ ಈಗ ಬರುತ್ತಿದೆ," ಅಂತ ತಿಳಿಸಿ ಟಿಕೆಟ್ ಕೊಟ್ಟ. ನನಗೆ ಇನ್ನು ಭಯ ಹೋಗಿರಲಿಲ್ಲ ಅಲ್ಲಿಯ ಅನುಭವದಿಂದ ನಡುಗುತ್ತಿದ್ದೆ.
ಅವನನ್ನು "ಸಾರ್ ಇಲ್ಲಿ ಕುಳಿತುಕೊಳ್ಳಲು ಭಯವಿರದ ಜಾಗವಿದೆಯ " ಅಂದೆ ಪೆದ್ದುಪೆದ್ದಾಗಿ,
ಅವನು ನನ್ನತ್ತ ವಿಚಿತ್ರವಾಗಿ ನೋಡಿದ "ರೀ ಸ್ವಾಮಿ ಭಯ ಎಂತದು, ಅಲ್ಲಿ ಹೋಗಿ ಬೆಂಚಿನಮೇಲೆ ಕುಳಿತುಕೊಳ್ಳಿ, ದೀಪದ ಕೆಳಗೆ" ಎಂದವನು "ವಿಚಿತ್ರ ಜನ" ಅಂತ ನನಗೆ ಕೇಳುವಂತೆ ಗೊಣಗಿಕೊಂಡ.

  ಸರಿ ರೈಲಂತು ಬಂದಿತು, ಹತ್ತಿದೆ, ,ರಾತ್ರಿ ಪೂರ ನಿದ್ದೆ ಮಾಡಲಿಲ್ಲ, ಬೆಂಗಳೂರು ಹತ್ತಿರ, ಹತ್ತಿರ ಬರುತ್ತಿತ್ತು ಮನುವಿನ ನೆನಪು ಬಂದು ಅವನಿಗೆ ಮೊಬೈಲ್ ಮಾಡಿದೆ. ಅವನು ಈಗ ತಾನೆ ಎದ್ದಿದ್ದನೇನೊ
 "ಏನೊ ಈ ಸಮಯದಲ್ಲಿ ಅಂದ"
 ನಾನು ಅವನನ್ನು ನಿಂದಿಸುತ್ತ, ನಿನ್ನಂತ ಮಿತ್ರದ್ರೋಹಿ ಎಲ್ಲಿಯು ಇರಲ್ಲ, ನಿನ್ನನ್ನು ನಂಬಿ ಹೋದ ನಾನು ಎಂತಹ ಪಾಡು ಪಟ್ಟೆ ಅಂತೆಲ್ಲ ಬೈದೆ. ಅವನು "ಏಕೊ ಸಮದಾನ ಮಾಡಿಕೊ ಏನಾಯ್ತೊ " ಅಂದ.
 ನಾನು ಅವನಿಗೆ ಪೋನಿನಲ್ಲಿಯೆ ಎಲ್ಲ ಸಮಚಾರ ತಿಳಿಸಿದೆ. ಅವನು "ಏನೊಪ್ಪ ನೀನು ಹೇಳೂವದನ್ನು ಕೇಳುತ್ತಿದ್ದರೆ ನನಗೆ ಏನು ತೋಚುತ್ತಿಲ್ಲ, ನಮ್ಮ ಸೋದರ ಮಾವ ಅಷ್ಟೊಂದು ವಯಸಾದವರೇನಲ್ಲ, ಮತ್ತು ಅವರ ಜೊತೆ ನಮ್ಮ ಅತ್ತೆ ಸಹ ಇದ್ದಾರೆ, ನೀನು ಹೇಗೆ ಹೋದೆ" ಅಂತ ಕೇಳಿದ. ನಾನು ಅವನಿಗೆ ಕಡೂರಿಗೆ ಹೋಗಿ ಅಲ್ಲಿಂದ ಹೋದ ರೈಲು ಪ್ರಯಾಣದ ಅನುಭವ ತಿಳಿಸಿದೆ,
 ಅವನು ಪೆದ್ದು ಪೆದ್ದಾಗಿ "ಅಲ್ಲವೊ ನೀನು ಏನು ಹೇಳುತ್ತಿದ್ದಿ, ನನಗೆ ತಿಳಿದಂತೆ ನಮ್ಮ ಹಳ್ಳಿಗೆ ರೈಲೆ ಇಲ್ಲ, ಕಡೂರಿನಿಂದ ಬಸ್ಸಿನಲ್ಲಿ, ಅಥವ ಬೇರೆ ವಾಹನದಲ್ಲಿ ಹೋಗಬೇಕೆ ಹೊರತು, ರೈಲು ಎಂತದು" ಅಂದವನು ತುಸು ಬಿಟ್ಟು
"ಏನೋಪ್ಪ ನೀನೇನಾದರು, ದಾರವಾಡದ ಹತ್ತಿರ ಅದೇನೊ ತಲೆಬುರುಡೆಗಳು ನೆಲದಲ್ಲಿ ಸಿಕ್ಕವಲ್ಲ ಆ ಆಣ್ಣಿಗೆರೆಗೆ ಏನಾದರು ಹೋಗಿಬಿಟ್ಟೆಯಾ" ಅಂದ. ನಾನು ಸುಸ್ತಾದೆ, ಇರಬಹುದೇನೊ ಅಂತ ನನಗೆ ಅನುಮಾನವಾಯಿತು.

 ಮತ್ತೆ ನಾನು, ಮತ್ತೇಕೆ ನೀನು ಮೊನ್ನೆ, ಕಾಲ್ ಮಾಡಿದವನು ಮತ್ತೆ ಕಾಲ್ ಮಾಡಲೆ ಇಲ್ಲ ನೀನೆನೊ ನೆಲಮಂಗಲಕ್ಕೆ ಹೋಗಿದ್ದೆಯಂತಲ್ಲ" ಅಂದೆ, ಅವನು

"ಮೊನ್ನೆನಾ??  ಸ್ವಾಮಿ ನಾನು ನೆಲಮಂಗಲಕ್ಕೆ ಹೋಗಿ ಹದಿನೈದು ದಿನದ ಮೇಲಾಯ್ತು, ನೀನು ಹದಿನೈದು ದಿನದ ನಂತರ ಬರುತ್ತಿದ್ದಿ, ಏನೇನೊ ಕತೆ ಬರೆದು ತರುತ್ತಿದ್ದಿ,  ತರಾಸು, ಕುವೆಂಪು, ನಾಡಿಗೇರರ ತರ ಕಾದಂಬರಿಗಳನ್ನು ಬರೆದು ತರುತ್ತಿದ್ದಿ ಎಂದುಕೊಂಡರೆ, ಅದೇನು ಹಳಸಲು ದೆವ್ವದ ಕಥೆ ಹೇಳ್ತಿದ್ದಿ" ಅಂತ ಬೈದ.

 ನಾನು "ಹದಿನೈದು ದಿನವಾ? ಅಯ್ಯೊ ನಾನಲ್ಲಿ ಮಲಗಿದ್ದು ಒಂದೆ ರಾತ್ರಿಯಲ್ಲವ" ಅಂತ ಕೂಗಿದೆ.
ಅವನು ನಗುತ್ತ
" ಸರಿ ಬಿಡು ನೀನು ಅದು ಹಾಕಿದ ಅಕ್ಕಿ ಕಡಲೆಬೇಲೆ ಪಾಯಸ ತಿಂದು, ಹದಿನೈದು ದಿನ ಮಲಗಿಬಿಟ್ಟಿದ್ದಿ, ಸದ್ಯ ಅದೆಲ್ಲೊ ನಿನ್ನ ತಲೆಯನ್ನು ಕಡಿದುಕೊಂಡು ಹೋಗಿ ನಾಟಿ ಮಾಡಲಿಲ್ಲವಲ್ಲ " ಎಂದ.
ನಾನು ಬೆವತುಹೋದೆ.
ಮತ್ತೆ ಅವನೆ "ಲೋ ನಿನ್ನ ಬುದ್ದಿಗಿಷ್ಟು, ಏನೊ ಕತೆ ಬರೆದು ದೊಡ್ಡ ಮನುಷ್ಯನಾಗ್ತಿ ಅಂತ ಸಹಾಯ ಮಾಡಿದರೆ, ಅದೇನೊ ದೆವ್ವದ ಕತೆ ಹೇಳ್ತಿಯ?, ಬುರುಡೆ ನಾಟಿನಂತೆ, ನಾನು ನಂಬಬೇಕಾ? ಬಂದು ನಮ್ಮ ಅಜ್ಜಿ ಹತ್ತಿರ ಹೇಳೂ ನಿನ್ನ ಕತೆನ ಬಾಯಿಬಿಟ್ಟುಕೊಂಡು ಕೇಳ್ತಾರೆ" ಅಂತೆಲ್ಲ ಬಾಯಿಗೆ ಬಂದಂತೆ ನಿಂದಿಸಿದ. ನಾನು ಕೋಪದಿಂದ ಮೆಬೈಲ್ ಡಿಸ್ಕನೆಕ್ಟ್ ಮಾಡಿದೆ.
          =================== ಮುಗಿಯಿತು ==================== 7





No comments:

Post a Comment

enter your comments please