Wednesday, March 21, 2012

ಕಥೆ: ಮೇಲೊಂದು ಗರುಡ ಹಾರುತಿದೆ


                                                         

ಮನದಲ್ಲಿ ಸಂತೋಷ ತುಂಬಿಬರುತ್ತಿತ್ತು.ನನ್ನ ಸಾದನೆ ನನಗೆ ಹೆಮ್ಮೆ ಎನಿಸುತ್ತಿತ್ತು. ನಿಜ ನನಗೆ ಸಾದ್ಯವಾಗಿತ್ತು! ಗಾಳಿಯಲ್ಲಿ ತೇಲುವುದು ನನಗೆ ಸಾದ್ಯವಾಗಿತ್ತು! ನಿದಾನಕ್ಕೆ ಎರಡು ಕೈಗಳನ್ನು ಅಗಲಿಸಿ ಪಕ್ಷಿಯರೆಕ್ಕೆಯಂತೆ ಮಾಡಿಕೊಂಡು ನಿಂತೆ.ಉಸಿರನ್ನು ದೀರ್ಘವಾಗಿ ತೆಗೆದುಕೊಳ್ಳುತ್ತಹೋದೆ, ನನ್ನ ಕಾಲುಗಳು ನಿದಾನವಾಗಿ ನೆಲವನ್ನು ಬಿಟ್ಟು ಗಾಳಿಯಲ್ಲಿರುವುದು ನನ್ನ ಅನುಭವಕ್ಕೆ ಬರುತ್ತಿದೆ. ಅದೇ ರೀತಿ ಉಸಿರಾಟ ನನ್ನ ಹಿಡಿತಕ್ಕೆ ಸಿಗುತ್ತಿರುವಂತೆ ನನ್ನ ದೇಹ ಸಂಪೂರ್ಣವಾಗಿ ನೆಲವನ್ನು ಬಿಟ್ಟು ಗಾಳಿಯಲ್ಲಿ ಎದ್ದಿತ್ತು, ಇನ್ನು ಸ್ವಲ್ಪ ಮೇಲೆ ಮೇಲೆ, ರಸ್ತೆಯ ಪಕ್ಕದಲ್ಲಿದ್ದ ವಿಧ್ಯುತ್ ತಂತಿಗಳು ತಡೆಯದಂತೆ ಎಚ್ಚರವಹಿಸಿದೆ. ಈಗ ಕಣ್ಣುಗಳನ್ನು ಭೂಮಿಯಕಡೆ ತಿರುಗಿಸಿದೆ.ಮನೆಗಳು ಮತ್ತು ರಸ್ತೆಗಳು ಎಲ್ಲ ಕೆಳಗೆ ಕಾಣುತ್ತಿದ್ದವು, ಸುಮಾರು ಇನ್ನೂರು ಆಡಿಗಳಿಗಿಂತಲು ಮೇಲಿರುವಂತೆ ಅನ್ನಿಸಿತು. ರಸ್ತೆದೀಪದ ಬೆಳಕು ಮನೆಯ ದೀಪದ ಬೆಳಕು ಎಲ್ಲವು ಸೇರಿ ಬೆಳಕು ನೆರಳಿನ ಚಿತ್ತಾರ ಮೂಡಿ ಕಣ್ಣಿಗೆ ಎಂತದೊ ಭ್ರಮೆಯುಂಟುಮಾಡುತ್ತಿದ್ದವು. ಈಗ ಸ್ವಲ್ಪ ಪ್ರಯತ್ನಪಟ್ಟೆ ದೇಹ ಗಾಳಿಯಲ್ಲಿ ಮುಂದೆ ಚಲಿಸುತ್ತಿತ್ತು. ದೇಹವನ್ನು ನೆಲಕ್ಕೆ ಸಮಾನಂತರವಾಗಿಸಿದೆ, ರಸ್ತೆಹರಿಯುತ್ತಿರುವ ದಿಕ್ಕಿನಲ್ಲಿಯೆ ಚಲಿಸತೊಡಗಿದೆ,ದಿನವು ನಾನು ಆಫೀಸಿಗೆ ಹೋಗುವ ರಸ್ತೆಯೆ.ಮನದಲ್ಲಿ ಅಡಿಗರೋ ಏನೊ ಬರೆದಿದ್ದ ಕವನದ ಗುನುಗು..
              "ಮೇಲೊಂದು ಗರುಡ ಹಾರುತಿದೆ ಕೆಳಗದರ ನೆರಳು ಓಡುತಿದೆ
               ಅದಕೋ ಅದರಿಚ್ಚೆ ಹಾದಿ ಇದಕೋ ಹರಿದತ್ತ ಬೀದಿ..."
ದೇಹದಲ್ಲಿ ಎಂತದೊ ಬದಲಾವಣೆ ಗೋಚರಿಸಿತು. ಇದ್ದಕಿದ್ದಂತೆ ದೇಹ ಬಾರವೆನಿಸತೊಡಗಿ ಭೂಮಿಯಕಡೆ ಇಳಿಯತೊಡಗಿದೆ,ಮತ್ತೆ ಮತ್ತೆ ದೇಹದಲ್ಲಿ ಮೊದಲಿನಂತೆ ಉಸಿರು ತುಂಬಲು ಪ್ರಯತ್ನಿಸಿದೆ. ಕೆಳಗಿಳಿಯುವ ವೇಗ ಕಡಿಮೆಯಾಯಿತೆ ಹೊರತು ನಿಲ್ಲಲಿಲ್ಲ.ಪುನಃ ಕಾಲು ಕೆಳಗೆ ಬರುವಂತೆ ದೇಹ ಹೊಂದಿಸಿದೆ. ಕೆಳಗೆ ಬರುವ ವೇಗವನ್ನು ನನ್ನ ಉಸಿರಾಟದಿಂದ ನಿಯಂತ್ರಿಸುತ್ತಿರುವಂತೆಯೆ ನಿದಾವವಾಗಿ ನೆಲದ ಹತ್ತಿರಬಂದುಬಿಟ್ಟೆ, ಒಂದೆರಡು ಅಡಿ ಇರಬಹುದೇನೊ ಎನ್ನುವಾಗ ಕಾಲು ದಡ್ ಎಂದು ನೆಲವನ್ನು ಘರ್ಷಿಸಿತು. ಕಾಲಿನ ಘಾತಕ್ಕೆ ದೇಹವೆಲ್ಲ ಒಮ್ಮೆ ಅದುರಿತು.
  .....................                                        
  ಥಟ್ ಎಂದು ಎದ್ದು ಕುಳಿತೆ. ಮುಖವೆಲ್ಲ ಸೆಕೆಗೆ ಬೆವರುತ್ತಿತ್ತು. ಯಾವಾಗ ವಿಧ್ಯುತ್ ಕೈಕೊಟ್ಟಿತೊ ತಿಳಿಯದು ಫ್ಯಾನ್ ತಿರುಗುವುದು ನಿಲ್ಲಿಸಿತ್ತು. ಏನಾಯಿತು ಎಂದು ಚಿಂತಿಸುವಾಗ ಹೊಳೆಯಿತು ಕನಸು!. ಎಂತ ಭ್ರಮೆ ಎನ್ನುತ್ತ ಎದ್ದು ಕುಳಿತೆ. ಎದ್ದು ಹಿಂದೆ ಹೋಗಿಬಂದೆ , ಸಮಯ ಎಷ್ಟಾಯಿತು ಎಂದು ಹಾಲಿನ ಲೈಟ್ ಬೆಳಗಿಸಿ ನೋಡಿದೆ, ಬೆಳಗಿನ ನಾಲಕ್ಕು ಮುಕ್ಕಾಲು.ಮತ್ತೆ ರೂಮಿಗೆ ಹೋಗದೆ ಹಾಲಿನಲ್ಲಿಯೆ ಸೋಫಮೇಲೆ ಕುಳಿತೆ. ಐದಕ್ಕೆ ಏಳಲೇ ಬೇಕು ಮತ್ತೇಕೆ ಮಲಗುವುದು ಎಂದು.ಏಕೆ ಈ ರೀತಿ ವಿಲಕ್ಷಣ ಕನಸುಗಳು ಬೀಳುತ್ತವೆ, ಬೆಳಗಿನ ಕನಸು ನಿಜವಾಗುತ್ತೆ ಅಂತಾರೆ ಆದರೆ ಈ ಕನಸಿಗೆ ಅರ್ಥವೆ ಇಲ್ಲ ಅನ್ನಿಸಿತು.ಪಕ್ಕದಲ್ಲಿದ್ದ ಅಲರಾಮ್ ಇದ್ದಕಿದ್ದಂತೆ ಬಾರಿಸಿದಾಗ ಬೆಚ್ಚಿಬಿದ್ದು ಎದ್ದು ಅಲರಾಮ್ ನಿಲ್ಲಿಸಿದೆ.

"ಆಗಲೆ ಹೊತ್ತಾಯ್ತಾ?" ಅಂತ ರೂಮಿನಿಂದ ಕೇಳಿದಳು ಪತ್ನಿ. ನಿಶ್ಯಬ್ದದಲ್ಲಿ ಎಲ್ಲ ಶಬ್ದವು ಕರ್ಕಶವೇನೊ.ಉತ್ತರಿಸಲು ಮನಸಾಗಲಿಲ್ಲ, ನನ್ನ ದ್ವನಿ ನನಗೆ ಕಿರಿಕಿರಿ ಮಾಡಬಾರದು ಎಂದು. ಹೊರಗೆ ಎದ್ದು ಬಂದು ನನ್ನತ್ತ ನೋಡುತ್ತ "ಆಗಲೆ ಎದ್ದು ಬಿಟ್ಟಿದ್ದೀರಿ" ಎಂದಳು ಪತ್ನಿ. "ಎಚ್ಚರವಾಗಿ ಬಿಟ್ಟಿತ್ತು" ಎಂದೆ.

ಒಳಗೆ ಹೋದಳು, ಮುಖತೊಳೆದು ಅಡಿಗೆಮನೆಗೆ ಹೋದದ್ದು ತಿಳಿಯುತ್ತಿತ್ತು. ಎನೇನೊ ಶಬ್ದಗಳು,ಸ್ವಲ್ಪಕಾಲದಲ್ಲೆ  ಕಾಫಿಯೊಡನೆ ಹೊರಬಂದು ನನಗೊಂದು ಲೋಟ ಕೊಟ್ಟು, ಸೋಫದಲ್ಲಿ ಕುಳಿತು ತಾನು ಕಾಫಿ ಕುಡಿಯತೊಡಗಿದಳು.

  ಸ್ವಲ್ಪಕಾಲ ಕುಳಿತಿದ್ದು ನಂತರ ಎದ್ದು ತಯಾರಿನಡೆಸಿದೆ ಆಫೀಸಿಗೆ ಹೊರಡಲು. ಸಿದ್ದನಾಗಿ ಬೆಳಗಿನ ಉಪಹಾರ ಮುಗಿಸಿ, ಕಾರನ್ನು ಡ್ರೈವ್ ಮಾಡುತ್ತ ಆಫೀಸಿಗೆ ಹೊರಟಾಗ ದಾರಿಯಲ್ಲು ಅದೇ ಕನಸಿನ ನೆನಪು.ಯಾರಾದರು ಮನೋವೈದ್ಯರನ್ನು ಕಾಣುವುದಾ? ಅನ್ನಿಸಿತು. ಎಲ್ಲರಿಗಿಂತ ಕೊಂಚ ಮುಂಚೆಯೆ ಆಫೀಸನ್ನು ತಲುಪಿದ್ದೆ. ವಾಚಮನ್ ಬಾಗಿಲಲ್ಲಿಗೆ ಸಲ್ಯೂಟ್ ಮಾಡಿ ಸ್ವಾಗತಿಸಿದ. ಕಾರು ನಿಲ್ಲಿಸಿ, ಹಾಜರಿಯಲ್ಲಿ ತೋರು ಬೆರಳು ತೋರಿಸಿ,ನನ್ನ ಛೇಂಬರ್ ಸೇರಿ ಕಂಪೂಟರ್ ಸ್ವಿಚ್ ಅದುಮಿ ಹೊಸಮೇಲ್ ಗಳನ್ನು ಪರಿಶೀಲಿಸುತ್ತಿದ್ದೆ.ಹೊರಗೆ ಒಬ್ಬೊಬ್ಬರೆ ಬಂದುಅವರ ಜಾಗಕ್ಕೆ ಹೋಗುತ್ತಿರುವುದು ಗಾಜಿನಗೋಡೆಯಲ್ಲಿ ಕಾಣಿಸುತ್ತಿತ್ತು.

  ಸುಮಾರು ಹತ್ತುವರೆಯಾಗುತ್ತ ಬಂದಿತು.ಬಾಗಿಲು ತೆರೆದು ಸರಸ್ವತಿ ಒಳಬಂದಳು, ನಾನು ಏನು ಎನ್ನುತ್ತ ಆಕೆಯತ್ತ ನೋಡಿದೆ, ನನ್ನ ಕೆಲಸಗಳಿಗೆ ಸಹಾಯಕಿ ಆಕೆ "ಸರ್ ಗೌತಮ್ ಸರ್ ಮಾತಾಡಿದರು, ನೀವು ಒಂದು ನಿಮಿಷ ಅವರ ಛೇಂಬರಿಗೆ ಬರುತ್ತೀರ ಅಂತ ಕೇಳುತ್ತಿದ್ದಾರೆ. ನೀವು ಆಗಲ್ಲ ಅಂದರೆ ಅವರೆ ಬರುತ್ತಾರಂತೆ" ಎಂದಳು

  ಆಶ್ಚರ್ಯ! ಗೌತಮ್ ನನ್ನ ಮೇಲಾದಿಕಾರಿ, ಆದರೆ ನಮ್ಮಿಬ್ಬರ ಸ್ತರದಲ್ಲಿ ಹೆಚ್ಚು ವೆತ್ಯಾಸವೇನು ಇಲ್ಲ, ಸರಿಸಮನಾದ ಅಧಿಕಾರಿ. ಬೇಕಾದಾಗ ಕರೆಯುತ್ತಾನೆ ಅಥವ ಇಂಟರ್‌ಕಾಮ್ ನಲ್ಲಿ ಮಾತಾಡುತ್ತಾನೆ. ಆದರೆ ಈರೀತಿ ವಿನಯಪೂರಿತ ಕರೆ ಅಪರೂಪ, ಆಶ್ಚರ್ಯದಾಯಕ. "ಸರಿ ನಾನೆ ಬರುತ್ತಿದ್ದೀನಿ ಅಂತ ತಿಳಿಸಿ" ಎಂದು ಎದ್ದು ಹೊರಟೆ. ಏಕಿರಬಹುದು ಬೆಳಗ್ಗೆಯೆ ಕರೆಯುತ್ತಿದ್ದಾನೆ ಎಂಬ ಕುತೂಹಲ. ಲಿಫ್ಟ್ ನಲ್ಲಿ ಮೇಲಿನ ಅಂತಸ್ತಿಗೆ ಬಂದು ಬಲಕ್ಕೆ ತಿರುಗಿ ನಡೆದಾಗ ಗೌತಮ್ ಅವನ ಜಾಗದಲ್ಲಿ ಕುಳಿತಿರುವುದು ಕಾಣಿಸಿತು.

  ಬಾಗಿಲನ್ನು ತೆರೆಯುತ್ತಿರುವಾಗಲೆ, ನಗುತ್ತ ಅವನೇ ಎದ್ದು ಬಂದವನು "ಬನ್ನಿ ಬನ್ನಿ " ಅಂತ ಸ್ವಾಗತಿಸಿದ. ನಾನು ನಗುತ್ತ "ಗುಡ್ ಮಾರ್ನಿಂಗ್ ಗೌತಮ್ ಸರ್ ,ಬೆಳಗ್ಗೆಯೆ ಕರೆದಿರಿ ಆಶ್ಚರ್ಯ" ಎಂದೆ. ಅದಕ್ಕುತ್ತರವಾಗಿ ಅವನು " ಹೋ! ದತ್ತಾ ಅವರೆ ಮೊದಲು ನನ್ನ ಅಭಿನಂದನೆ ಸ್ವೀಕರಿಸಿ. ನಂತರ ಉಳಿದ ವಿಷಯ" ಎನ್ನುತ್ತ ಕೈಚಾಚಿ ನನಗೆ ಹಸ್ತಲಾಘಾವ ನೀಡಿದನು. ಅದಕ್ಕೆ ನಾನು "ವಂದನೆಗಳು ಗೌತಮ್ ಆದರೆ ವಿಷಯ ತಿಳಿಸಬಹುದಲ್ವ?" ಎಂದೆ.

ಅದಕ್ಕೆ ಗೌತಮ್ "ನಿಮಗೆ ತಿಳಿಯದೇನು ಎಲ್ಲ ತಿಳಿದಿರುತ್ತೀರಿ, ಮುಂಬೈ ಹೆಡ್ ಆಫೀಸಿನಲ್ಲಿ ಡಿಪಿಸಿ ಕಮಿಟಿ ಅಂತಿಮವಾಗಿ ನಿಮ್ಮ ಹೆಸರನ್ನು ಪ್ರೊಪೋಸ್ ಮಾಡಿದೆ. ಅವರ ರೆಕಮಂಡೇಷನ್ ಛೇರ್ಮನ್ ರವರ ಟೇಬಲ್ ಮೇಲಿದೆಯಂತೆ ಅಂತಿಮ ಅಂಕಿತಕ್ಕಾಗಿ. ಇನ್ನೇನು ನೀವು ರೀಜನಲ್ ಮಾನೇಜರ್ ಆಗಿ ಹೊರಟುಬಿಡುತ್ತೀರಿ, ಮುಂದೆ ನಿಮಗೆ ಒಳ್ಳೆ ಭವಿಷ್ಯವಿದೆ.ಮತ್ತೊಮ್ಮೆ ನನ್ನ ಅಭಿನಂದನೆ ಸ್ವೀಕರಿಸಿ" ಎಂದನು.

  ಹೌದೇ!? ಒಳಗೆ ನನ್ನ ಸಂತೋಷ ಬುಗಿಲ್ ಎಂದಿತು. ಕಮಿಟಿ ಮುಂದೆ ನನ್ನದೊಬ್ಬನದೆ ಅಲ್ಲದೆ ಚೆನೈನ ಒಬ್ಬರು ಹೈದರಾಬಾದಿನಿಂದ ಒಬ್ಬರ ಹೆಸರು ಇದ್ದು ಸಂದರ್ಶನ ಮುಂತಾದ ಎಲ್ಲ ಕ್ರಮಗಳು ಪೂರ್ತಿಯಾಗಿ ಮುಗಿದಿತ್ತು. ಮೂರನೆಯವನಾಗಿ ಬೆಂಗಳೂರಿನಿಂದ ಇದ್ದ ನನ್ನ ಹೆಸರು ಅವರು ಪರಿಗಣಿಸಿ ನನ್ನ ಹೆಸರೆ ರೆಕಮಂಡ್ ಮಾಡಬಹುದು ಎನ್ನುವ ಆಸೆ ಪ್ರಬಲವಾಗಿದ್ದು ನನ್ನ ಸೇವಾ ಹಿನ್ನಲೆ ಕೂಡ ಅದಕ್ಕೆ ಪೂರಕವಾಗಿತ್ತು.

 "ಹೌದೆ ನಿಮಗೆ ಹೇಗೆ ತಿಳಿಯಿತು?" ಎಂದೆ. ನನ್ನ ದ್ವನಿಯಲ್ಲಿ ನನಗೆ ತಿಳಿಯದೆ ಎಂತದೊ ಉತ್ಸಾಹ.

"ತಿಳಿಯದೆ ಏನು ದತ್ತಾರವರೆ, ಬೆಳಗ್ಗೆಯೆ ಹೆಡ್ ಆಫೀಸಿನಿಂದ ಹೆಚ್ ಆರ್ ವಿಭಾಗದದಲ್ಲಿ ನನಗೆ ಬೇಕಾದವರು ಕಾಲ್ ಮಾಡಿದ್ದರು. ಅವರು ತಿಳಿಸಿದರು. ನಿಮಗೆ ಹೇಗು ಸಂಜೆಯೊಳಗೆ ತಾನಾಗೆ ತಿಳಿಯುತ್ತದೆ, ನಾನು ಸ್ವಲ್ಪ ಮುಂಚೆ ತಿಳಿಸಿ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದೇನೆ ಅಷ್ಟೆ" ಎಂದನು ಗೌತಮ್

"ವಂದನೆಗಳು ಗೌತಮ್, ನಿಮ್ಮ ವಿಶ್ವಾಸ ನನಗೆ ಸಂತಸ ತಂದಿದೆ. ಇದು ನಿಮ್ಮಲ್ಲರ ವಿಶಸ್ ಅಷ್ಟೆ, ನಾನಿನ್ನು ಬರಲ?" ಎಂದು ಹೇಳುತ್ತ ಎದ್ದು ಹೊರಟೆ.

"ಓಕೆ ದತ್ತ ನಮ್ಮೆಲ್ಲರಿಗು ಪಾರ್ಟಿ ಮರೆಯಬೇಡಿ"  ಎನ್ನುತ್ತ ಗೌತಮ್ ಸಹ ಎದ್ದು ನಿಂತ. ನಾನು "ಶೂರ್ , ಖಂಡೀತ ಕೊಡಿಸ್ತೀನಿ" ಎನ್ನುತ್ತ ಹೊರಬಂದೆ. ಮನದಲ್ಲಿ "ನಿನಗಿಂತ ಎರಡರಷ್ಟು ಸಂಬಳವಾಗುತ್ತೆ ಏಕೆ ಕೊಡಿಸಲ್ಲ?" ಎಂದುಕೊಂಡು ನನ್ನ ಛೇಂಬರ್ ನತ್ತ ಹೊರಟೆ.

ಕೆಳಗೆ ಬರುವಾಗಲೆ ವಿಷಯ ಎಲ್ಲರಿಗು ತಿಳಿದಿತ್ತು. ಈಚೆಯೆ ಎಲ್ಲ ಮುತ್ತಿಕೊಂಡರು, ಎಲ್ಲರು ಕೈಕುಲುಕಿ ಅಭಿನಂದಿಸುವರೆ." ಏನ್ಸಾರ್ ಯಾವಾಗ ಮುಂಬೈಗೆ ಶಿಫ್ಟ್ " ಎನ್ನುವ ಪ್ರಶ್ನೆಗಳು ಬೇರೆ.ನನ್ನ ಸಹಾಯಕಿ ಸರಸ್ವತಿಯಂತು "ಸಾರ್ ಈಗ ನಮಗೆಲ್ಲ ಸ್ವೀಟ್ ಕೊಡಿಸಲೆ ಬೇಕು" ಅಂತ ಹಟ ಹಿಡಿದಳು. ನಾನು "ಮುಖ್ಯ ಕಛೇರಿಯಿಂದ ಆರ್ಡರ್ ಬರಲಿಬಿಡಿ ನಂತರ ಕೊಡಿಸುವೆ" ಎಂದೆಅದಕ್ಕೆ ಆಕೆ "ಸಾರ ಆರ್ಡರ್ ಬಂದಾದಮೇಲೆ ಪಾರ್ಟಿ ಕೊಡಿಸ್ತಿರಂತೆ, ಈಗ ತಕ್ಷಣಕ್ಕೆ ಸ್ವೀಟ್ ತರಿಸಿ " ಅಂದಳು. ನಾನು ಮಾತಾಡದೆ ರಾಮುವನ್ನು ಕರೆದು ಹಣ ಕೊಟ್ಟು ಎಲ್ಲರಿಗು ಸಾಲುವಷ್ಟು ಒಳ್ಳೆ ಸ್ವೀಟ್ ತರಲು ತಿಳಿಸಿ ಛೇಂಬರ್ ಒಳಗೆ ಬಂದೆ.

 ಫೋನ್ ತೆಗೆದುಕೊಂಡು ಮುಂಬೈನ ಹೆಡ್ ಅಫೀಸಿನ ಆಡಳಿತ ವಿಭಾಗದ ನನ್ನ ಸ್ನೇಹಿತನಿಗೆ ಕರೆ ಮಾಡಿದೆ.ಅವನಿಂದ ವಿಷಯ ದೃಡ ಪಡಿಸಬೇಕಾಗಿತ್ತು, ಏಕೊ ಅವನ ನಂಬರಿನಿಂದ ಉತ್ತರವೆ ಇಲ್ಲ. ನಂತರ ಹೆಚ್ ಆರ್ ವಿಭಾಗಕ್ಕೆ ಕರೆ ಮಾಡಿದೆ. ಅತ್ತಲಿಂದ ಯಾರೊ ಫೋನೆತ್ತಿದ್ದರು. ನಾನು "ಹಲೋ ಬೆಂಗಳೂರಿನಿಂದ ದತ್ತ ಕರೆ ಮಾಡ್ತಿದ್ದೀನಿ, ಅಡ್ಮೀನ್ ವಿಭಾಗದಲ್ಲಿ ಶ್ರೀದರ್ ಬಂದಿಲ್ವ" ಅಂತ ಪ್ರಶ್ನಿಸಿದೆ. ಆ ಕಡೆಯಿಂದ "ಸಾರ್ ನೀವಾ? ನಾನು ಸಾರ್  ಶ್ರೀವತ್ಸ, ಅಭಿನಂದನೆಗಳು ಸಾರ್, ಸಂಜೆ ಒಳಗೆ ಆರ್ಡರ್ ಆಗಬಹುದು, ಛೇರ್ಮನ್ ರಿಂದ ನಿಮಗೆ ಕರೆ ಬರಲು ಸಾಕು" ಅಂದರು
ನಾನು 'ಶ್ರೀವತ್ಸ ಇದು ದೃಡವಾದ ಸುದ್ದೀನ? ಮತ್ತೇನು ಬದಲಾವಣೆ ಇರದ?" ಎಂದೆ
ಅದಕ್ಕವರು "ಏನ್ಸಾರ್ ಹೀಗಂತಿರಿ, ಛೇರ್ಮನ್ ರವರೆ ಮಾಡಿರೊ ಕಮಿಟಿ, ಅದರದೆ ರೆಕಮಂಡೇಶನ್, ನಿಮ್ಮದೆ ಹೆಸರನ್ನು ಆಯ್ಕೆ ಮಾಡಿದೆ. ಇನ್ನೇನು ಮಾಡಲಿಕ್ಕೆ ಸಾದ್ಯ?" ಅಂತ ಪ್ರಶ್ನಿಸಿದರು.

ನಾನು ಸರಿ ಅಂತ ಮಾತು ಮುಗಿಸಿದೆ. ಮನದಲ್ಲಿ ಸಂತೋಷ ಉಬ್ಬುಬ್ಬಿ ಬರುತ್ತಿತ್ತು. ಮತ್ತೆ ಪೋನ್ ತೆಗೆದುಕೊಂಡು ಮನೆಗೆ ಕರೆ ಮಾಡಿದೆ.ಪತ್ನಿಗೆ ವಿಷಯವೆಲ್ಲ ತಿಳಿಸಿದೆ. ಅವಳಿಗೆ ಸಂತೋಷ, ಗಾಳಿಯಲ್ಲಿ ಹಾರಾಡಿದಂತೆ ಸಂತಸ. 'ರೀ ಸಂಜೆ ಬರುವಾಗ ಬೇಗ ಮನೆಗೆ ಬನ್ನಿ ರಾತ್ರಿ ಹೊಟೆಲ್ ಹೋಗಿ ಸೆಲೆಬ್ರೇಟ್ ಮಾಡೋಣ" ಎಂದಳು. ಇವಳು ಅತಿ ಭಾವಜೀವಿ, ನಾನು 'ಈಗ ಹೇಳಲಿಕ್ಕೆ ಸಾದ್ಯವಿಲ್ಲ ಮತ್ತೆ ಸಂಜೆ ಕಾಲ್ ಮಾಡ್ತೀನಿ 'ಅಂತ ಫೋನ್ ಕೆಳಗಿಟ್ಟೆ. ಅಷ್ಟರಲ್ಲಿ ರಾಮು ಸ್ವೀಟ್ ತಂದಿದ್ದ. ಎಲ್ಲರಿಗು ಹಂಚಿ ನಾನು ಸ್ವಲ್ಪ ತಿಂದೆ. ಬೇರೆ ಬೇರೆ ಸ್ಥಳೀಯ ಶಾಖೆಗಳಿಂದ ಕರೆ ಬರುತ್ತಲೆ ಇತ್ತು, ನನ್ನನ್ನು ಅಭಿನಂದಿಸಲು. ನನಗೆ ಸರಿಯಾಗಿ ಕೆಲಸ ಮಾಡಲಾಗಲಿಲ್ಲ. ಊಟದ ಸಮಯದಲ್ಲಿ ಅದೆ ವಿಷಯ. ಮುಂದೇನು ಮಾಡಬೇಕು, ಮುಂಬೈಗೆ ಹೋದ ನಂತರ ಅವರೆ ಪ್ಲಾಟ್ ಕೊಡ್ತಾರೆ ಮುಂತಾದ ಯೋಚನೆಗಳು ಮಾತುಗಳು, ಹೊತ್ತು ಹೋದದ್ದೆ ತಿಳಿಯಲಿಲ್ಲ.

 ಸಂಜೆ ನಾಲಕ್ಕುವರೆ ದಾಟಿತು. ಮತ್ತೊಮ್ಮೆ ಮುಂಬೈನ ಹೆಡ್ ಅಫೀಸಿನ ಆಡಳಿತ ವಿಭಾಗಕ್ಕೆ ಕರೆ ಮಾಡಿದೆ. ಈಗ ನನ್ನ ಸ್ನೇಹಿತ ಶ್ರೀದರನೆ ತೆಗೆದುಕೊಂಡ. ನಾನು "ಏನಪ್ಪ ಬೆಳಗ್ಗೆ ಬಂದಿರಲಿಲ್ಲ" ಎಂದೆ, ಅದಕ್ಕವನು "ಇರುತ್ತಲ್ಲಪ್ಪ ಸಂಸಾರದ ಕಷ್ಟಗಳು ಹೀಗೆ" ಎಂದ. ಎನೇನೊ ವಿಷಯವಾಡಿದರು ಅವನು ವಿಷಯಕ್ಕೆ ಬರ್ತಿಲ್ಲ. ಕಡೆಗೆ ನಾನಾಗೆ ಕೇಳೀದೆ "ಸರಿ ಛೇರ್ಮನ್ ರವರ ಟೇಬಲ್ ಮೇಲಿತ್ತಲ್ಲ, ಕಮಿಟಿ ರೆಕಮಂಡೇಶನ್, ಆರ್ಡರ್ ಗೆ ಸಹಿ ಆಯಿತಾ?" ಅಂತ ಪ್ರಶ್ನಿಸಿದೆ. ಅದಕ್ಕೆ ಅವನು "ನಿನಗಾರು ತಿಳಿಸಿದರು" ಅಂದವನು " ಈರೀತಿಯೆಲ್ಲ ಆಗುತ್ತಿರುತ್ತೆ, ತಲೆಕೆಡಿಸಿಕೊಳ್ಳಬಾರದು" ಅಂದ,

ನನ್ನ ಎದೆಯಲ್ಲಿ ಎಂತದೊ ಅಪಶೃತಿಯ ಮಿಡಿತ!.

"ಏನಾಯ್ತು ಹೇಳು ನಿಮ್ಮ ಶ್ರೀವತ್ಸ ಬೆಳಗ್ಗೆಯೆ ನನ್ನ ಹೆಸರಿಗೆ ಆರ್ಡರ್ ಆಗುತ್ತೆ ಅಂತ ತಿಳಿಸಿದರಲ್ಲ" ಎಂದೆ. ಅವನು "ಛೇ ಮೂರ್ಖರು, ಹೀಗೆಲ್ಲ ದೃಡಪಡದ ಸುದ್ದಿಗಳನ್ನು ಹರಡಿಬಿಡ್ತಾರೆ. ದತ್ತ ನಿನ್ನ ಹೆಸರು ಇದ್ದದ್ದು ನಿಜ ಆದರೆ ಛೇರ್ಮನ್ ರವರು ಹೈದರಾಬಾದಿನ ನಿರಂಜನ ಹೆಸರನ್ನು ಪೈನಲ್ ಮಾಡಿ ಸಹಿ ಹಾಕಿದ್ದಾರೆ" ಎಂದ.

ನಾನು ಆತಂಕದಿಂದ ಕೂಗಿದೆ "ಹೇಗೆ ಸಾದ್ಯ? ಕಮಿಟಿ ನನ್ನ ಹೆಸರನ್ನೆ ರೆಕಮಂಡ್ ಮಾಡಿದಮೇಲೆ ಹೇಗೆ ಬದಲಾಯಿಸ್ತಾರೆ?"

ಶ್ರೀದರು ಅಂದ  "ಏಕೆ ಎಕ್ಸೈಟ್ ಆಗ್ತಿದ್ದಿ? ದತ್ತ, ನಿನ್ನ ಹೆಸರು ರೆಕಮಂಡ್ ಆಗಿತ್ತು, ನಿರಂಜನನ ಹೆಸರು ಎರಡನೆಯದು. ಆದರೆ ಛೇರ್ಮನ್ ರವರು ತಮ್ಮ ವಿವೇಚನೆ ಅಧಿಕಾರ ಬಳಸಿ ನಿರಂಜನ ಹೆಸರು ಪೈನಲ್ ಮಾಡಿದ್ದಾರೆ ಅಷ್ಟೆ, ಅದಕ್ಕೆ ಅವಕಾಶವಿದೆ, ಯಾವ ತಪ್ಪು ಇಲ್ಲ '  ಅನ್ನುತ್ತ , ದ್ವನಿ ಪೂರ ತಗ್ಗಿಸಿ  " ನಿನಗು ತಿಳಿದಿರಬಹುದು, ನಿರಂಜನ ಛೇರ್ಮನ್ ರವರ ಪತ್ನಿಕಡೆಯಿಂದ ಅವರಿಗೆ ಸಂಭಂದಿ ಅಂತ, ಇಂತವೆಲ್ಲ ಆಗುತ್ತಿರುತ್ತೆ ಟೇಕ್ ಇಟ್ ಈಸಿ, ಮತ್ತೆ ನಾನು ಮನೆಯಿಂದ ಕಾಲ್ ಮಾಡ್ತೀನಿ'  ಅಂತ ಕರೆ ಮುಗಿಸಿದ.

ಛೇ ! ಬೆಳಗಿನಿಂದ ಏನೆಲ್ಲ ಆಗಿಹೋಯ್ತು, ಎಲ್ಲರಿಗು ಸ್ವೀಟ್ ಬೇರೆ ಕೊಡಿಸಿದೆ, ಎಲ್ಲರಿಗು ಈಗ ಮುಖ ತೋರಿಸುವುದು ಹೇಗೆ? ಅನ್ನಿಸಿ ಮೈಯೆಲ್ಲ ಮುಜುಗರ ತುಂಬಿಕೊಂಡಿತು. ಎಷ್ಟು ಬೇಗ ವಿಷಯಗಳು ಎಲ್ಲರಿಗು ತಿಳಿಯುತ್ತೆ ಅನ್ನಿಸಿ ಹೊರಗೆ ನೋಡಿದೆ, ಗಾಜಿನ ಕೋಣೆಯಿಂದ ನೋಡುವಾಗ ಯಾರು ಈ ಕಡೆ ನೋಡದೆ ಮನೆಗಳ ಕಡೆ ಹೊರಡುತ್ತಿದ್ದರು. ಸರಸ್ವತಿ ಮುಖ ಮ್ಲಾನವಾಗಿತ್ತು. ಅಷ್ಟರಲ್ಲಿ ಗೌತಮ್ ಬಾಗಿಲು ತೆರೆದು ಒಳಬಂದ ಮುಖದಲ್ಲಿ ಎಂತದೊ ಕುತ್ಸಿತ ನಗು, ದ್ವನಿಯಲ್ಲಿ ಪೂರ ವಿಷಾದ ಭಾವ

"ಸಾರಿ ದತ್ತ, ನೋಡಿ ಹೇಗೆಲ್ಲ ಆಗಿಹೋಗ್ತದೆ, ನಿಮ್ಮ ಹೆಸರೆ ಇರಬೇಕಾದ್ದು ನ್ಯಾಯ, ನೋಡಿ ಆ ನಿರಂಜನ ಸೋಮಚ್ ಇನ್‌ಫ್ಲೂಯನ್ಷಿಯಲ್ ಯು ನೋ , ಬೆಟರ್ ಲಕ್ ನೆಕ್ಷ್ಟ್ ಟೈಮ್" ಎನ್ನುತ್ತ ಹೊರಟುಹೋದ.

ಸ್ವಲ್ಪ ಹೊತ್ತು ಸುಮ್ಮನೆ ಕುಳಿತ್ತಿದ್ದೆ. ಮನೆಗೆ ವಿಷಯ ತಿಳಿಸಿಬಿಟ್ಟರೆ ಒಳ್ಳೆಯದು ಅಂದುಕೊಳ್ಳುತ್ತ ಕರೆ ಮಾಡಿದೆ, ಫೋನ್ ಎತ್ತಿದ್ದ ನನ್ನಾಕೆಗೆ ಉತ್ಸಾಹ ನನಗೆ ಮಾತಾಡಲು ಬಿಡದೆ  "ರೀ ಬೇಗ ಸ್ವಲ್ಪ ಬಂದುಬಿಡ್ರಿ, ನೋಡಿ ಅಪ್ಪ ಅಮ್ಮಂಗೆ ವಿಷಯ ತಿಳಿಸಿದೆ, ಅವರು ನಿಮಗೆ ವಿಶಸ್ ತಿಳಿಸಬೇಕು ಅಂತ ಮನೆಗೆ ಬಂದು ಇಬ್ಬರು ಕಾಯ್ತ ಕುಳಿತ್ತಿದ್ದಾರೆ, ನನ್ನ ತಂಗಿಯು ಬಂದಿದ್ದಾಳೆ, ಮನೇಲಿ ಸ್ವೀಟ್ ಮಾಡಿದ್ದೀನಿ ನಿಮಗೆ ಕಾಯ್ತ ಇದ್ದೀವಿ ಬನ್ನಿ" ಎಂದಳು.
 ನನಗೆ ಏನು ತೋಚಲಿಲ್ಲ , ನಿದಾನಕ್ಕೆ ಪೋನ್ ಕೆಳಗಿರಿಸಿದೆ!

No comments:

Post a Comment

enter your comments please