Monday, March 19, 2012

ಬಾನುವಾರದ ವಾಕಿಂಗ್

ಬಾನುವಾರದ ವಾಕಿಂಗ್  
ವಾರ ಪೂರ್ತ ಬೆಳಗಿನ ವಾಕಿಂಗ್ ಆಗಲ್ಲ. ಬೆಳಗ್ಗೆ ಆಫೀಸ್ಗೆ ಹೊರಡೊ ಆತುರ , ಮಾರ್ಚಿಯಾದ್ದರಿಂದ ಮಗಳ ಪರೀಕ್ಷೆ ಹೀಗೆ ಏನೇನೊ ಕಾರಣಗಳು. ಬಾನುವಾರ ಸಾಮಾನ್ಯವಾಗಿ ತಪ್ಪಿಸಲ್ಲ. ಅಲ್ಲದೆ ಆದಿನ ಒಂದಿಬ್ಬರು ಗೆಳೆಯರು ಬರುವುದು ನಿಶ್ಚಿತ ಅಲ್ಲದೆ ಉದ್ದಕ್ಕು ಮನಕ್ಕೆ ಚೆತೋಹಾರಿ ಮಾತುಗಳು ಹಾಗಾಗಿ ಸುಮಾರು ವರ್ಷಗಳಿಂದ ನಡೆದು ಬಂದಿದೆ.ಮನೆಯಿಂದ ಹೊರಟರೆ ನೈಸ್ ರಸ್ತೆ ಕೆಳಗಿನ ಬ್ರಿಡ್ಜ್ ದಾಟಿ ಬಲಕ್ಕೆ ತಿರುಗಿ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ ಕಾಲೋನಿ ದಾಟಿ ಬೆಮೆಲ್ ನಗರ ಹಾದು ಅದೆಂತದೊ ಆರ್ಮುಗಂ ಸರ್ಕಲ್ ಅಂತೆ ಅಲ್ಲಿ ಎಡಕ್ಕೆ ತಿರುಗು ಬಾಳೆಲೆ ನರಸಿಂಹನ ದೇವಾಲಯದ ಮುಂದಿನಿಂದ ಪುನಃ ಹೊಸಕೆರೆಹಳ್ಳಿ ಮನೆಗೆ ತಲುಪಲು ಸುಮಾರು ಎರಡು ಘಂಟೆ ಬೇಕು.ಬೆಂಗಳೂರಾದರು ಸುಮಾರು ಹಳ್ಳಿಯ ವಾತವರಣವೆ ಉದ್ದಕ್ಕೂ,  ಈ ದಿನವು ಬೆಳಗ್ಗೆ ಆರಕ್ಕೆ ರಾವ್ ಹಾಗು ಶಿವಕುಮಾರ್ ಬಂದರು. 
   ಮನೆಯಿಂದ ಹೊರಡುವಾಗಲೆ ಶಿವಕುಮಾರ್ ಮಾತು ತೆಗೆದರು " ರಾವ್ ನಿಮ್ಮ ಮನೆಯಲ್ಲಿ ಮಗಳು ಒಂದು ನಾಯಿ ಮರಿ ತಂದಿದಳಲ್ಲ ಹೇಗಿದೆ ?' ಅಂತ. 
ಅದಕ್ಕವರು 'ಹೌದು , ಲಾಬ್ರಡಾರ್ ಜಾತಿಯ ಮರಿ ಅಂತ ಅವಳಿಗೆ ಯಾರೊ ಸ್ನೇಹಿತರು ಕೊಟ್ಟಿದ್ರು, ಅದನ್ನು ಒಂದು ವಾರ ನೋಡಿ ಕೊಳ್ಳುವದರಲ್ಲಿ ಸುಸ್ತಾಗಿ ಹೋಯ್ತು ಕಡೆಗೆ ಇನ್ನೊಬ್ಬರಿಗೆ ಕೊಟ್ಟುಬಿಟ್ವಿ" ಅಂದರು.
ನನಗೆಂತೊ ಅವರೋ ಹೇಳಿದ ನಾಯಿಯ ಜಾತಿಯ ಹೆಸರು ಸರಿಯಾಗಿ ಕೇಳಿಸಲಿಲ್ಲ, ಯಾವುದೋ ಹಳೇ ಸ್ಕೂಟರ್ ಇತ್ತಲ್ಲ 'ಲ್ಯಾಂಬ್ರಟ' ನೊ ಯಾವ್ದೋ ಆರೀತಿ ಕೇಳಿಸಿತು. ಅಲ್ಲ ಮನುಷ್ಯನಲ್ಲಾದರೆ ಜಾತಿ ಇರುತ್ತೆ ಬ್ರಾಹ್ಮಣ,ಗೌಡ,ವಕ್ಕಲಿಗ ತರ ಆದರೆ ನಾಯಿಗ್ಯಾವ ಜಾತಿಯಪ್ಪ ಅನ್ನಿಸಿತು. ಅಷ್ಟರಲ್ಲಿ ಅವರೆ ಹೇಳಿದರು, ಮನೆಯಲ್ಲಿ ಯಾರು ಇರುತ್ತಿರಲಿಲ್ಲ ಎಲ್ಲರು ಕೆಲಸಕ್ಕೆ ಹೋಗುವರೆ, ಹಗಲೆಲ್ಲ ಅದನ್ನು ನೋಡಿಕೊಳ್ಳುವುದು ಒಂದು ಸಮಸ್ಯೆಯಾದರೆ , ರಾತ್ರಿಯಾಗುವಾಗ ಅದು ಕೂಗಲು ಪ್ರಾರಂಬ. ಅಲ್ಲದೆ ಅದು ಚಿಕ್ಕ ಮರಿ ಮನೆಯಲ್ಲೆಲ್ಲ ಗಲೀಜು ಮಾಡುತಿತ್ತು, ಏಕೆ ಅದಕ್ಕು ಕಷ್ಟ ನಮಗು ಕಷ್ಟ ಅಂತ , ಕೊಟ್ಟುಬಿಟ್ಟೆವು ಮಗಳು ಹೇಳುತ್ತಿದ್ದಳು ಅದು ಸುಮಾರು ಸುಮಾರು ೪೦೦೦ ರೂಗಿಂತ ಜಾಸ್ತಿ ಅಂತೆ ಕೊಳ್ಳಲು ಹೋದರೆ'
  ಮತ್ತೆ ನಾಯಿ ಡಾಕ್ಟರ್ ಕಡೆ ತಿರುಗಿತು ಮಾತು,ಶಿವಕುಮಾರ್ ಹೇಳಿದರು,   ನಾಯಿಗೆ ಬಾಯಿಗೆ ದಾರ ಕಟ್ಟಿಯೆ ಅಂತೆ ಅದನ್ನು ಪರಿಕ್ಷೆ ಮಾಡೋದು, ಏಕೆಂದರೆ ಕಚ್ಚುವ ಅವಕಾಶವಿದೆ ಅಂತ.ಅಲ್ಲದೆ ಕೆಲವೊಮ್ಮೆ ಅದಕ್ಕೆ ಇಂಜೆಕ್ಷನ್ ಕೊಟ್ಟು ಎಲ್ಲ ಮುಗಿಸಿ ಹೊರಕ್ಕೆ ಕಳಿಸುವಾಗ ಅವರು ಮೈ ಮರೆತಿದ್ದರೆ, ಕೆಲವು ನಾಯಿಗಳು ತನ್ನ ಒಡೆಯನ ಕೈಯಿಂದ ತಪ್ಪಿಸಿಕೊಂಡು ಓಡಿಬಂದು ಅವರನ್ನು ಕಚ್ಚಿಬಿಡುತ್ತವೆ ಆದರಿಂದ ಡಾಕ್ಟರ್ ಸ್ವಲ್ಪ ಹುಷಾರಿನಲ್ಲಿರಬೇಕು ಅಂದರು.
ನಂತರ ಶಿವಕುಮಾರ್ರವರಿಗೆ ಹಳೆಯದೇನೊ ನೆನಪಿಗೆ ಬಂತೇನೊ, ಈಗವರು ರಿಟೈರ್ಡ್ , ತಾವು ಕೆಲಸಕ್ಕೆ ಸೇರಿದ ಹೊಸದರ ಘಟನೆಯೊಂದು ಹೇಳಿದರು.
 'ಕೆಲಸಕ್ಕೆ ಸೇರಿದ ಹೊಸದು, ಸುಬ್ಬರಾಯ ಅಂತ ಮತ್ತೊಬ್ಬರು ತುಂಬ ಆತ್ಮೀಯರಿದ್ದರು, ಅವರಿಗೆ ಮದುವೆ ಸೆಟಲ್ ಆಯಿತು. ನನ್ನ ಹತ್ತಿರ ಹುಡುಗಿ ಡಾಕ್ಟರ್ ಮಗಳು ಅಂತ ಹೇಳಿದ್ದ, ಮದುವೆಯಲ್ಲ ಮುಗಿದು ಸ್ವಲ್ಪ ದಿನವಾದ ನಂತರ ಇದ್ದಕ್ಕಿದ್ದಂತೆ ಹುಷಾರಿಲ್ಲ ಜ್ವರ ಅಂತ ಮೂರು ದಿನ ರಜಾ ಹಾಕಿದ. ನಂತರ ಬಂದಾಗ ನಾನು ಏನಪ್ಪ ಜ್ವರ ಎಲ್ಲ ಬಿಡ್ತ , ಏನು ಮಾವನದೆ treatment ಹೌದ ಅಂತ ಕೇಳಿದೆ. ಅವನಿಗೆ ಏನಾಯಿತೊ ನನ್ನನ್ನೆ ದುರು ದುರು ನೋಡಿದವನು ಎದ್ದು ಹೋದ , ನನ್ನ ಕೈಲಿ ಮಾತೆ ನಿಲ್ಲಿಸಿಬಿಟ್ಟ. ಎರಡು ದಿನವಾಯಿತು ನನಗೆ ಯೋಚನೆ , ಒಳ್ಳೆ ಸ್ನೇಹಿತ , ಏಕೆ ಮಾತುಬಿಟ್ಟ ನಾನು ಆಡಿದ ತಪ್ಪಾದರು ಏನು ಅಂತ, ಸಂಜೆ ಅವರಮನೆಗೆ ಹೋದೆ ಅವರ ಶ್ರೀಮತಿಯವರೆ ಸಿಕ್ಕಿದ್ದರು, ಅವರ ಕೈಲಿ ಮಾತನಾಡುತ್ತ, ನಾನು ಅಂದಿದ್ದನ್ನು ಅವನು ಮಾತು ಬಿಟ್ಟಿದ್ದನ್ನು ತಿಳಿಸಿ ಬೇಸರ ವ್ಯಕ್ತ ಪಡಿಸಿದೆ, ಆಕೆ ಜೋರಾಗಿ ನಗಲು ಪ್ರಾರಂಬಿಸಿದರು,ಏಕೆ ಅಂತ ಅರಿವಾಗಲಿಲ್ಲ ಕಡೆಗೆ ಆಕೆಯೆ ಹೇಳಿದರು, ಅವರ ಅಪ್ಪ ದನಗಳ ಡಾಕ್ಟರ್ ಅಂತ. ಈ ಮಹರಾಯ ನನ್ನ ಕೈಲಿ ಅದನ್ನು ಹೇಳಿರಲಿಲ್ಲ ಹೀಗಾಗಿ ಸ್ವಲ್ಪ ಗಡಿಬಿಡಿಯಾಯಿತು ಆಮೇಲೆ ಹೇಗೊ ಸರಿಹೋದ' ಅಂತ ತಿಳಿಸಿದರು.
 ಇದೆ ರೀತಿ ಮಾತುಗಳು. ನನಗೆ ಎಂತದೊ ಒಂದು ಅನುಮಾನ ಶುರುವಾಯಿತು, ದನಗಳ ಡಾಕ್ಟರ್ ಆದರೆ ಏನಂತೆ ಮನುಷ್ಯರಿಗೆ ಔಷದ ಕೊಡಬಾರದ ಅಂತ ಕೇಳಿದೆ , ಅದಕ್ಕವರು ಕೊಡಬಹುದು ಕೊಡಬಹುದು, ದಾರಳವಾಗಿ ಆದರೆ ಜ್ವರ ಹಾಗೆ ಲೂಸ್ಮೋಶನ್ ಅವರು ನೋಡುವ ಹಾಗಿಲ್ಲ ಅಂತ ಅಂದರು. ನಾನು ಪೆದ್ದನಂತ ಜ್ವರ ಏಕೆ ನೋಡುವಂತಿಲ್ಲ ಅಂದೆ. ಅವರು ಜೋರಾಗಿ ನಗುತ್ತ ಕಾರಣ ತಿಳಿಸಿದರು. ನಾನದನ್ನು ಇಲ್ಲಿ ಬರೆಯಿವಂತಿಲ್ಲ. ಹೀಗೆ ಮಾತು ಸಾಗುತ್ತ ಸಾಗುತ್ತ ಇಲಾಖೆಯಕಡೆಗೆ ತಿರುಗಿತು. 
 ಸ್ವಲ್ಪ ಬಿಸಿಲು ಬಂದು ಸುಸ್ತು ಅನ್ನಿಸಿತು. ಮತ್ತೆ ಅಂದುಕೊಂಡೆವು , ಮುಂದಿನ ವಾರ ಬರುವಾಗ ಸ್ವಲ್ಪ ಬೇಗ ೫.೩೦ ಯಂತೆ ಹೊರಟರೆ ಒಳ್ಳೆಯದೇನೊ, ಸೆಕೆ ಇರಲ್ಲ ಅಂತ. ಅಷ್ಟರಲ್ಲಿ ಮನೆಯ ಹತ್ತಿರ ಬಂದಿದ್ದೆವು,  


[ 27 - mar- 2011 published in sampada] 

No comments:

Post a Comment

enter your comments please