Monday, January 7, 2013

ಕಥೆ : ಡಾ||ಸುರೇಶ್ ಗೌಡ


ಡಾ||ಸುರೇಶ್ ಗೌಡ
ನಗರದ ವೈಧ್ಯಕೀಯ ವಲಯದಲ್ಲಿ ಅತಿ ಪರಿಚಿತ ಹೆಸರು. ಹಾಗಾದರು ಅವರ ಹೆಸರು ರೋಗಿಗಳಿಗೆ ಹೆಚ್ಚು ಪರಿಚಯವಿಲ್ಲ ಎನ್ನಲು ಕಾರಣ,ಡಾ||ಸುರೇಶ್ ಗೌಡ ಇರುವ ವಿಭಾಗ .  ಅನಸ್ತೇಷಿಯ ಅಂದರೆ ಅರಿವಳಿಕೆ ವಿಭಾಗ. ರೋಗಿಯ ರೋಗ ನಿರ್ಧಾರ ವಾಗಲಿ, ಅಥವ ಅವರಿಗೆ ಮಾಡಬೇಕಾದ ಅಪರೇಷನ್ ಆಗಲಿ ಸುರೇಶ್ ನಿರ್ಧರಿಸಬೇಕಾದ ಅಗತ್ಯವೇನಿಲ್ಲ. ಆದರೆ ಒಮ್ಮೆ  ರೋಗಿಗೆ  ಅಪರೇಷನ್ ಮಾಡಬೇಕೆಂದು ಡಾಕ್ಟರ್ ನಿರ್ಧರಿಸಿದಲ್ಲಿ ನಂತರ  ಡಾ||ಸುರೇಶ್ ಗೌಡರ ಅಗತ್ಯ ಖಂಡೀತ ಇರುತ್ತಿತ್ತು.
ರೋಗಿಯ ಪೂರ್ವಾಪರ,   ವಯಸ್ಸು, ತೂಕ, ಲಿಂಗ,  ಕಾಯಿಲೆಯ ಇತಿಹಾಸ,  ದೇಹಸ್ಥಿಥಿ,  ಈ ರೀತಿ ಹಲವು ವಿಷಯಗಳು ಅವರ ಕೆಲಸಕ್ಕೆ ಮುಖ್ಯವೆನಿಸುತ್ತಿತ್ತು. ಅಪರೇಷನ್ನಿಗೆ  ಮುಂಚೆ ಹಾಗು  ನಂತರ ರೋಗಿ ಸಹಜ ಸ್ಥಿಥಿಗೆ ಬರುವವರೆಗು,  ಐ.ಸಿ.ಯೂ ನಲ್ಲಿಯ ಹೊಣೆಗಾರಿಕೆ ಎಲ್ಲವು  ಇವರ ಮೇಲೆ ಇದ್ದು, ಇವರ ಕೆಲಸಕ್ಕೆ  ಪ್ರಾಮುಖ್ಯತೆ ಇರುತ್ತಿತ್ತು. ಆದರು ಇವರ ಹೆಸರು ರೋಗಿಗಳ ಬಾಯಲ್ಲಿ ಬರುವುದು ಕಡಿಮೆಯೆ. ಅಪರೇಷನ್ ನೆರವೇರಿಸುವ ಸರ್ಜನ್ ಹೆಸರೆ ಎಲ್ಲರಿಗು ಪರಿಚಿತ.

 ಸಾಮಾನ್ಯವಾಗಿ ಅರಿವಳಿಕೆ ವಿಭಾಗದ ಡಾಕ್ಟರ್ ಗಳನ್ನು  ಹಾಸ್ಪೆಟಲ್ ಗಳಲ್ಲಿ  ಪೂರ್ಣಕಾಲಕ್ಕೆ ನೇಮಿಸಿಕೊಳ್ಳುವುದು ಕಡೆಮೆಯೆ,  ಅವರೆಲ್ಲ ತತ್ಕಾಲಕ್ಕೆ ವಿಸಿಟಿಂಗ್ ಡಾಕ್ಟರ್ ರೀತಿಯಲ್ಲಿಯೆ ಕೆಲಸ ನಿರ್ವಹಣೆ ಮಾಡುವರು. ಆದರೆ ದೊಡ್ಡ ದೊಡ್ಡ  ಹಾಸ್ಪಿಟಲ್ ಗಳಲ್ಲಿ ಅರಿವಳಿಕೆ ತಜ್ಞರು ಕಾರ್ಯ ನಿರ್ವಹಿಸುವರು.

ಡಾ||ಸುರೇಶ್ ಗೌಡ   ಹಾಸ್ಪಿಟಲ್ ನಲ್ಲಿ ಕೆಲಸಕ್ಕೆ ಸೇರಿ ಅಲ್ಲಿ ಪ್ರಭಾವಿಯಾಗಲು ಮೊದಲಿಗೆ ಅವನ ಸ್ನೇಹಿತ ಮುರಳಿಯ ಸಹಾಯವು ಇತ್ತು ,

ಡಾ||ಸುರೇಶ್ ಗೌಡ ಡಾಕ್ಟರಿ ಡಿಗ್ರಿ ಮುಗಿಸಿ  ಸ್ಪಷಲೈಷನ್ ಗೆ ಆರಿಸಿಕೊಂಡಿದ್ದು, ಅರಿವಳಿಕೆ ವಿಭಾಗವನ್ನು. ಅದು ಅತಿ ಕಷ್ಟ ಹಾಗು ಅತಿ ಸೂಕ್ಷವಾದ ವೈದ್ಯಕೀಯ ವಿಭಾಗವಾಗಿತ್ತು. ಅವರು ತೆಗೆದ ಅಂಕಗಳಿಗೆ ಅಲ್ಲಿ ಸೀಟು ಸಿಗುವುದು ಕಷ್ಟವೆ, ಆದರೆ ಮಾನೇಜ್ ಮೆಂಟ್ ಕೋಟದಲ್ಲಿ ಮಂಗಳೂರಿನಲ್ಲಿ  ಎಂ.ಡಿ ಮಾಡಲು ಸೀಟು ಸಿಕ್ಕಾಗ  ಇಷ್ಟದಿಂದಲೊ ಅಥವ ತಂದೆಯ ಬಲವಂತವೊ ಮಂಗಳೂರಿಗೆ ಹೋಗಿದ್ದರು. ಹೇಗೋ ಮೂರು ವರ್ಷದ ಕೋರ್ಸನ್ನು  ಮುಗಿಸಿ ಮತ್ತೆ ಬೆಂಗಳೂರಿಗೆ ಬಂದು,  ಇಲ್ಲಿ ದೊಡ್ಡ ದೊಡ್ಡ  ಆಸ್ಪತ್ರೆಗಳಲ್ಲಿ  ತಮಗೆ ತಕ್ಕ ಅವಕಾಶಗಳಿಗಾಗಿ ಹುಡುಕಾಡುತ್ತಿದ್ದರು. ವೈದ್ಯಕೀಯ ರಂಗದಲ್ಲಿ ಅರಿವಳಿಕೆ ತಜ್ಞರ ಅವಕಾಶ ಯಾವಾಗಲು ಜಾಸ್ತಿ, ತುಂಬ ಕಡಿಮೆ ಡಾಕ್ಟರ್ ಗಳು ಆ ಕ್ಷೇತ್ರವನ್ನು ಆಯ್ದುಕೊಳ್ಳುವರು. ಹಾಗಾಗಿ    ಬೇಡಿಕೆ ಇರುವ ವಿಬಾಗ ಅದು. ಹಾಗಿದ್ದರು ಸುರೇಶ್ ಗೌಡರಿಗೆ ಕೆಲಸ ಹುಡುಕುವುದು ಕಷ್ಟವಾಗಿಯೆ ಇದ್ದಿತು.

ಆಗ ಅವರಿಗೆ ಸಹಾಯಕ್ಕೆ ಬಂದವನು ಅವರ ಸ್ನೇಹಿತ ಮುರಳಿ. ವೃತ್ತಿಯಲ್ಲಿ ಅವನು ಇಂಜಿನೀಯರ್.  ಪದವಿ ಪೂರ್ವದವರೆಗು ಮುರಳಿ ಮತ್ತು  ಡಾ||ಸುರೇಶ್ ಗೌಡ ಸಹಪಾಠಿಗಳು. ನಂತರ ಡಾ||ಸುರೇಶ್ ಗೌಡ ತನ್ನ ಓದು ಮುಂದುವರೆಸಿ ಇಂಟರ್ನ್ ಶಿಪ್ , ಅದು ಇದು ಎಂದು ಓಡಾಡುತ್ತಿದ್ದರೆ,  ನಾಲಕ್ಕು ವರ್ಷಕ್ಕೆ ತನ್ನ ಇಂಜಿನೀಯರ್ ಪದವಿ ಮುಗಿಸಿದ ಮುರಳಿ, ಜೀವನದಲ್ಲಿ ಬೇಗನೆ ಸೆಟಲ್ ಆಗಿಬಿಟ್ಟಿದ್ದ. ಡಾ||ಸುರೇಶ್ ಗೌಡ ಮುರಳಿಯಲ್ಲಿ ತನ್ನ ಕಷ್ಟ ಹೇಳಿಕೊಂಡಾಗ,ಮುರಳಿ ,
" ತಡಿ ನಮ್ಮ ದೊಡ್ಡಪ್ಪ  ಒಬ್ಬರಿದ್ದಾರೆ, ಅವರು ಏನಾದರು ಸಹಾಯ ಮಾಡಬಹುದು "  ಎಂದನು
"ನಿಮ್ಮ  ದೊಡ್ಡಪ್ಪನೆ ಅವರು ಏನಾಗಿದ್ದಾರೆ?" ಎಂದು ಕೇಳಿದರು ಡಾ||ಸುರೇಶ್ ಗೌಡ
"ಆವರು ಮಾಡುವ ಕೆಲಸವೇನೊ ಆಡಿಟಿಂಗ್ , ಬೇರೆ ಬೇರೆ ಕಂಪನಿಗಳಲ್ಲಿ ಆಡಿಟ್ ಗೆ ಹೋಗುತ್ತಾರೆ, ಆದರೆ ಅವರಿಗೆ ಸಕ್ಕತ್  ಪ್ರಭಾವ ಇದೆ, ನಿನೆಗೆ ಏನಾದರು ಸಹಾಯಮಾಡಬಹುದು " ಎಂದನು.

ಮುರುಳಿಯ ನಿರೀಕ್ಷೆ ಸುಳ್ಳಾಗಲಿಲ್ಲ.  ಮುರಳಿಯ ದೊಡ್ಡಪ್ಪ ಸತ್ಯನಾರಯಣರ ಪ್ರಭಾವ,  ಹಾಗು ಶ್ರಮದಿಂದ ಡಾ||ಸುರೇಶ್ ಗೌಡ ಅವರಿಗೆ ನಗರದ ಪ್ರಖ್ಯಾತ  ಹಾಸ್ಪಿಟಲ್ ನಲ್ಲಿ ಅರಿವಳಿಕೆ ತಜ್ಞರ ನೇಮಕಾತಿ ದೊರೆಯಿತು.

ಡಾ||ಸುರೇಶ್ ಗೌಡ ತನ್ನ ಗೆಳೆಯ ಮುರಳಿಯ ಸಹಾಯಕ್ಕೆ ಕೃತಜ್ಞನಾಗಿದ್ದರು. ಅವನಿಗೆ ತನಗೆ ಸಹಾಯ ಮಾಡಿದ ಮುರಳಿಯ ದೊಡ್ಡಪ್ಪನನ್ನು ಒಮ್ಮೆ ನೇರ ಬೇಟಿಮಾಡಿ ಅವರಿಗೆ ತನ್ನ ಕೃತಜ್ಞತೆ ಅರ್ಪಿಸಬೇಕೆಂಬ ಇಷ್ಟ.

ಆದರೆ ಸತ್ಯನಾರಯಣರವರು ಅದನ್ನೆಲ್ಲ ನಿರೀಕ್ಷಿಸಲೆ ಇಲ್ಲ, ಅವರು ನಿರಾಡಂಬರವಾಗಿ
"ಅವರು ತಮ್ಮ ಕೆಲಸವನ್ನು ದಕ್ಷತೆಯಿಂದ ನಿರ್ವಹಿಸಿ, ಉತ್ತಮ ಹೆಸರು ಗಳಿಸಿ , ಜನರಿಗೆ ಉಪಕಾರಿಯಾಗಿದ್ದರೆ ಸಾಕು, ನನಗೇನು ಕೃತಜ್ಞತೆ ಅರ್ಪಿಸುವ ಅಗತ್ಯವಿಲ್ಲ " ಎಂದು ಬಿಟ್ಟರು.

ಅಲ್ಲದೆ ಮುರುಳಿಯು ಅದೆ ಸಮಯಕ್ಕೆ ವಿದೇಶಕ್ಕೆ ಹೊರಟುಹೋದ. ಹಾಗಾಗಿ ಡಾ||ಸುರೇಶ್ ಗೌಡರಿಗೆ ಸತ್ಯನಾರಯಣರನ್ನು ಬೇಟಿಮಾಡುವ ಅವಕಾಶವೆ ಇಲ್ಲದಾಗಿ ಹೋಯಿತು.   ಡಾ||ಸುರೇಶ್ ಗೌಡರ ಮನದಲ್ಲಿ ತನಗೆ ಸಹಾಯ ಮಾಡಿದ ಸತ್ಯನಾರಯಣರ ಬಗ್ಗೆ ಒಂದು ಮಧುರವಾದ ಭಾವ ಇದ್ದೆ ಇತ್ತು. ಒಮ್ಮೆಯಾದರು ಅವರನ್ನು ಬೇಟಿ ಮಾಡಿ , ಅವರ ಜೊತೆ ಮಾತನಾಡಬೇಕೆಂಬ, ಕೃತಜ್ಞತಾ ಭಾವ, ಏನು ಅಲ್ಲದ ತನಗೆ ಯಾವ ಪ್ರತಿಫಲದ ಅಪೇಕ್ಷೆಯು ಇಲ್ಲದೆ ಸಹಾಯ ಮಾಡಿದ ಅವರ ಬಗ್ಗೆ ಅವನಿಗೆ ಒಂದು ರೀತಿ ಪೂಜ್ಯ ಭಾವನೆಯೆ ಇತ್ತು ಅನ್ನಬಹುದು.  ಒಮ್ಮೆ ಒಳಗೆಪ್ರವೇಶ ಪಡೆದ ನಂತರ  ಬೆಳೆಯುತ್ತಿರುವ ಡಾಕ್ಟರ್ ಆಗಿ ಹೆಸರು ಮಾಡಿದರು  ಡಾ||ಸುರೇಶ್ ಗೌಡ.    ಕೆಲಸಕ್ಕೆ ಸೇರಿದ ನಂತರ , ಅದೆ ಅಸ್ಪತ್ರೆಯ ಮ್ಯಾನೆಜಿಂಗ್ ಡೈರಕ್ಟರ್  ಕೇಶವ್ ಜೊತೆ ಮೈತ್ರಿ ಬೆಳೆಯಿತು. ಅವರಿಬ್ಬರು ಆತ್ಮೀಯರಾದರು, ಹಾಗೆ  ಅವರು ಒಮ್ಮೆ  ಎಂ,ಡಿ ಯ ಜೊತೆ ತನ್ನ  ಬಾಂದವ್ಯ ಸ್ಥಾಪಿಸಿದ ನಂತರ ಹಾಸ್ಪಿಟಲ್ ನಲ್ಲಿ ಅವರ ಪ್ರಭಾವ  ಹೆಚ್ಚುತ್ತ ಹೋಗಿತ್ತು.  ಬೇರೆ ಬೇರೆ  ಡಾಕ್ಟರ್ ಗಳು ಸಹ ಅವರ ಜೊತೆ ಹೆಚ್ಚಾಗಿ  ಮಾತಿಗೆ ಹೋಗುತ್ತಿರಲಿಲ್ಲ.  ಅಲ್ಲದೆ ಅವರ ಜೊತೆ ಸಂಬಂದ ಕೆಡಸಿಕೊಳ್ಲಲು ಇಷ್ಟ ಪಡುತ್ತಿರಲಿಲ್ಲ. ಹಾಗಾಗಿ ಡಾ||ಸುರೇಶ್ ಗೌಡ ಮಾಡುತ್ತಿದ್ದ ಸಣ್ಣ ತಪ್ಪು ಗಳು ಮುಚ್ಚಿಹೋಗಿ, ಅವರಿಗೆ ಉತ್ತಮ ಹೆಸರೆ ಇತ್ತು.
 ಡಾ||ಸುರೇಶ್ ಗೌಡ ಹಾಸ್ಪಿಟಲ್ ನಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿರಲು ಅವರ  ಅರಿವಳಿಕೆ ತಜ್ಞ ಕೆಲಸವೊಂದೆ ಕಾರಣವಾಗಿರಲಿಲ್ಲ , ಬದಲಿಗೆ ಹಾಸ್ಪಿಟಲ್ ನ ಎಂ.ಡಿ, ಕೇಶವ್ ಅವರೊಂದಿಗೆ ಇದ್ದ ಅವರ ಸಂಭಂದವು ,ಕಾರಣವಾಗಿತ್ತು. ಕೇಶವ್ ರವರ ರಕ್ಷಣೆ ಇಲ್ಲವಾಗಿದ್ದರೆ,ಡಾ||ಸುರೇಶ್ ಗೌಡ ಒಂದೆರಡು ಪ್ರಕರಣಗಳಲ್ಲಿ ಪಾರಾಗುವುದು ಕಷ್ಟವಾಗಿತ್ತೆಂದು ಹಲವರ ಅಭಿಮತ. ಹಾಗೆ ಭಾವಿಸುವದಕ್ಕು  ತಕ್ಕ ಪ್ರಸಂಗವಿತ್ತು.

ಒಮ್ಮೆ ಹಾಸ್ಪಿಟಲ್ ಗೆ  ಆರು ವರ್ಷದ ಮಗು ಒಂದನ್ನು  ಸೇರಿಸಿದ್ದರು ,  ಅದಕ್ಕೆ ಆಗಬೇಕಿದ್ದಿದ್ದು  ಸಾಮಾನ್ಯ ಟಾನ್ಸಿಲ್ ಆಪರೇಷನ್, ಮರುದಿನ ಬೆಳಗ್ಗೆ  ಏಳಕ್ಕೆ  ಅಪರೇಷನ್ ಎಂದು ನಿಗದಿಯಾಗಿದ್ದು, ಹಿಂದಿನ ದಿನವೆ ತಂದೆ ತಾಯಿ ಮಗುವನ್ನು ತಂದು ಸೇರಿಸಿದ್ದರು. ಅದೇನು ಅಂತ ದೊಡ್ಡ ಅಪರೇಷನ್ ಅಲ್ಲ.  ಮಗುವು ಆರೋಗ್ಯವಾಗಿದ್ದು ಒಂದೆಡೆ ಮಲಗದೆ,  ಎಲ್ಲ ಕಡೆಯು ಓಡಾಡುತ್ತ ನರ್ಸಗಳು,  ಡ್ಯೂಟಿ ಡಾಕ್ಟರ್ ಗಳು ಎಲ್ಲರ ಗಮನ ಸೆಳೆದಿತ್ತು. ಮಗುವಿನ ಜೊತೆ ತಾಯಿಯು ವಾರ್ಡಿನಲ್ಲಿದ್ದು ಅಕ್ಕ ಪಕ್ಕದವರ ಜೊತೆ ಮಾತನಾಡುತ್ತ ಕುಳಿತಿದ್ದರು.  ಪ್ರಖ್ಯಾತ ಸರ್ಜನ್ ಡಾ||ಸುನಿಲ್ ಅಪರೇಷನ್ ಮಾಡುವರಿದ್ದು ಯಾವುದೆ ತೊಂದರೆ ಇರಲಿಲ್ಲ.  ಮಗುವಂತು ಒಂದು ರಾತ್ರಿಯಲ್ಲೆ ಹಾಸ್ಪಿಟಲ್ ಒಳಗೆ ಎಲ್ಲರ ಮನಸ್ಸು ಗೆದ್ದಿತ್ತು.

 ಮರುದಿನ ಬೆಳಗ್ಗೆ  ಅಪರೇಷನ್ ಎಂದು ಮಗುವನ್ನು ಸಿದ್ದಗೊಳಿಸಿ ಅಪರೇಷನ್ ಥಿಯೇಟರ್ ಗೆ ಕರೆದೋಯ್ದರು, ಸರ್ಜನ್ ಡಾ||ಸುನಿಲ್ ಸಹ  ಬಂದರು, ಆದರೆ ಅವರಿಗೆ ಅಪರೇಷನ್ ಮಾಡುವ ಪ್ರಮೇಯವೆ ಬರಲಿಲ್ಲ, ಅಪರೇಷನಿಗೆ ಮುಂಚೆ ಮಗುವನ್ನು ಸಿದ್ದಗೊಳಿಸಿ  ಅರಿವಳಿಕೆ ಕೊಡಲಾಯಿತು, ಆದರೆ ಮಗುವಿನೆ ದೇಹ ಹಾಸ್ಪಿಟಲ್ ನಲ್ಲಿ ಕೊಟ್ಟ ಅರಿವಳಿಕೆಗೆ ಅತಿಯಾಗಿ ಸ್ಪಂದಿಸಿತ್ತು, ಮಗುವಿನ ನಾಡಿ ಕ್ಷಣ ಕ್ಷಣಕ್ಕು ಕ್ಷೀಣಿಸುತ್ತ ಹೋಯಿತು. ಹೃದಯ ಬಡಿತ ಯಾವುದೆ ಡಾಕ್ಟರ್ ಗಳ ಹಿಡಿತಕ್ಕು ಸಿಗಲಿಲ್ಲ. ಮಗುವಿನ  ಜ್ಞಾನ ತಪ್ಪಿದ್ದು, ನಂತರ ಏನೆ ಪ್ರಯತ್ನಪಟ್ಟರು ಬರಲಿಲ್ಲ.  ಎಲ್ಲ ಡಾಕ್ಟರಗಳ ಪ್ರಯತ್ನದ ನಡುವೆಯು ಮಗು ಕೆಲವೆ ಕ್ಷಣದಲ್ಲಿ ಕೊನೆ ಉಸಿರು ಎಳೆದಿತ್ತು.  ಆಗ ಅರಿವಳಿಕೆ ತಜ್ಞರಾಗಿ ಕಾರ್ಯ ನಿರ್ವಹಿಸಿದವರು ಡಾ|| ಸುರೇಶ್ ಗೌಡ.  ಅಪರೇಷನ್ ಥಿಯೇಟರಿನಲ್ಲಿ ನೆರೆದಿದ್ದ ಎಲ್ಲ ಡಾಕ್ಟರ್ ಗಳಿಗು ನರ್ಸ್ ಗಳಿಗು ಅರಿವಾಗಿತ್ತು, ಅದು ಡಾ||ಸುರೇಶ್ ಗೌಡ  ಅವರು ನಿರ್ದರಿಸಿದ ಅರಿವಳಿಯಲ್ಲಿನ ದೋಷ ಎಂದು.

ಹೊರಗೆ ಗಂಡನೊಡನೆ ಮಾತನಾಡುತ್ತ ಮುಗ್ದವಾಗಿ ಕುಳಿತಿದ್ದ ತಾಯಿಗೆ ಅಪರೇಷನ್ ಥಿಯೇಟರ್ ಒಳಗೆ ಕಣ್ಮುಚ್ಚಿದ ಮಗುವಿನ ವಿಷಯ ತಿಳಿಸಲಾಯಿತು. ವಿಷಯ ಹಾಸ್ಪಿಟಲ್ ಎಂ ಡಿ ಕೇಶವ್ ವರೆಗು ಹೋಯಿತು.   ತಂದೆ ತಾಯಿಯನ್ನು ಅವರ ಬಳಿಗೆ ಕರೆದೊಯ್ಯಲಾಯಿತು. ನಂತರ ಏನಾಯಿತು ಎಂದು ಆಸ್ಪತ್ರೆ ಸಿಧ್ಬಂದಿಗೆ ಗೊತ್ತಾಗಲೆ ಇಲ್ಲ. ಮಗುವಿನ ಶವವನ್ನು ಸಾಗಿಸುವಾಗ ವಾರ್ಡನಲ್ಲಿದ್ದ  ನರ್ಸ್ ಸಹ ಕಣ್ಣೀರು ಹಾಕಿದಳು. ಇಂತಹ ಘಟನೆಗಳಿಂದ ಡಾ||ಸುರೇಶ್ ಗೌಡ ಪಾಠ ಕಲಿಯಬೇಕಿತ್ತು, ಆದರೆ ಹಾಗೆಆಗಲಿಲ್ಲ ಬದಲಾಗಿ ಅವರು ತಮ್ಮ ಕಾರ್ಯವೈಖರಿಯಲ್ಲಿ ಅದೇ ಆಲಸಿಕೆ. ನಿರ್ಲಕ್ಷ ತೋರುತ್ತಲೆ ಇದ್ದರು. ಮೇಲಿನವರು ತನ್ನ ರಕ್ಷಣೆಗೆ ಇರುವಾಗ ತನ್ನನ್ನು ಯಾರು ಏನು ಮಾಡಲಾಗದು ಎಂಬ ಭಾವ.  ಆಗೊಮ್ಮೆ ಈಗೊಮ್ಮೆ ಕೆಲವು ರೋಗಿಗಳಿಗೆ ತೊಂದರೆಯಾದರು ಅದು ಹೇಗೊ  ಮುಚ್ಚಿ ಹೋಗುತ್ತಿತ್ತು. ಡಾಕ್ಟರ್ ಗಳು ಅಷ್ಟೆ ಸುರೇಶ್ ಗೌಡರ ವಿಷಯ ಅರಿವಿದ್ದು, ಅವರಿಗೆ ಇರುವ ಪ್ರಭಾವದ ಅರಿವು ಇದ್ದು, ತಮ್ಮ ಎಚ್ಚರಿಕೆಯಲ್ಲಿ ತಾವಿರುತ್ತಿದ್ದರು.

ಆದರು ಕೆಲವು ಹಿರಿಯ ಡಾಕ್ಟರ್ ಗಳು ಡಾ||ಸುರೇಶ್ ಗೌಡ ಎಂದರೆ ಇಷ್ಟಪಡುತ್ತಿರಲಿಲ್ಲ.  ಅದರಲ್ಲು  ಹೊರಗಿನಿಂದ ಬರುವ ಕೆಲವು ಡಾಕ್ಟರ್ ಗಳು ಡಾ||ಸುರೇಶ್ ಗೌಡ ದ್ಯೂಟಿಯಲ್ಲಿ ಇರುವನೆಂದರೆ ಸ್ವಲ್ಪ ಹಿಂಜರಿಯುತ್ತಿದ್ದರು ಅದಕ್ಕೆ ಕಾರಣ ಅವನಿಂದ ತಮ್ಮ ಹೆಸರು ಸಹ ಹಾಳಾಗಬಹುದೆಂದು.

ಅಂದು ಬೆಳಗ್ಗೆ ಬೆಳಗ್ಗೆಯೆ ಡಾ||ಸುರೇಶ್ ಗೌಡರಿಗೆ ಒಂದು ಕೇಸ್ ಕೊಡಲಾಗಿತ್ತು. ಎಮೆರ್ಜೆನ್ಸಿ ಕೇಸ್ ಅದು. ಸ್ವಲ್ಪ ಕಷ್ಟಕರವು ಹೌದು. ಐಸಿಯು ಗೆ ಹೃದಯ ಸಂಭಂದಿ ಕಾಯಿಲೆಯಿಂದ ವ್ಯಕ್ತಿ ಒಬ್ಬರು ಅಡ್ಮಿಟ್ ಆಗಿದ್ದರು. ವಯಸ್ಸು ಸುಮಾರು ಅರವತ್ತು ಆಗಿತ್ತು. ಅವರ ತೂಕ, ವಯಸ್ಸು , ಕಾಯಿಲೆಗಳ ಪೂರ್ವ ಇತಿಹಾಸ ಎಲ್ಲವನ್ನು ಗಮನಿಸಿದರೆ ದೇಹ ಸ್ಥಿಥಿ ಉತ್ತಮವಾಗಿಯೆ ಇದ್ದಿತು. ಹೃದಯದ ರಕ್ತನಾಳದಲ್ಲಿ ಇರುವ ತೊಂದರೆ ನಿವಾರಿಸಲು ಸ್ಟಂಟ್ ಅಳವಡಿಸಬೇಕಾಗಿದ್ದಿತು.  ಹಾರ್ಟ್ ಸರ್ಜನ್ ಡಾ| ವಿಕಾಸ್ ನೇತೃತ್ವದಲ್ಲಿ ಅಪರೇಷನ್ . ರೋಗಿಯ ಜೊತೆಗೆ ಯಾರು ಜನರಿರಲಿಲ್ಲ. ಆತನ ಹೆಂಡತಿ ಯಾವುದೆ ನಿರ್ಧಾರ ತೆಗೆದುಕೊಳ್ಳಲು ಆಗದೆ ಹೆದರುತ್ತಿದ್ದರು. ಜೊತೆಯಲ್ಲಿ ಪಕ್ಕದ ಮನೆಯವರು ಇಬ್ಬರು ಮಾತ್ರವಿದ್ದು. ಅವರ ಮಕ್ಕಳು ವಿದೇಶದಲ್ಲಿದ್ದ ಕಾರಣ ಆಕೆಯೊಬ್ಬರೆ ನಿರ್ಧರಿಸಬೇಕಾದ ಅನಿವಾರ್ಯತೆ. ರೋಗಿ ಹೆಚ್ಚು ಮಾತನಾಡುವ ಸ್ಥಿಥಿಯಲ್ಲಿರಲಿಲ್ಲ. ಆದರು ದೇಹದ ಸ್ಥಿಥಿ ಮಾತ್ರ ಸ್ಥಿರವಾಗಿತ್ತು.

ಡಾ| ವಿಕಾಸ್  , ಹೃದಯ ತಜ್ಞ  , ಅವರ ಅನುಭವ ಅಪಾರ. ಆತನಿಗೆ ಡಾ|ಸುರೇಶ್ ಗೌಡ ಎಂದರೆ ಅಷ್ಟಕಷ್ಟೆ. ಡಾ||ಸುರೇಶ್ ಗೌಡರ     ಕಾರ್ಯವೈಖರಿಯನ್ನು ಡಾ|ವಿಕಾಸ್ ಮೆಚ್ಚುತ್ತಿರಲಿಲ್ಲ. ಆದರೆ ಹೊಂದಿಕೊಳ್ಳುವುದು ಅನಿವಾರ್ಯ. ಅರಿವಳಿಕೆ ತಜ್ಞರ ಕೆಲಸದ ನಂತರ ಡಾ|ವಿಕಾಸ್ ತಮ್ಮ ಕೆಲಸ ಪ್ರಾರಂಬಿಸಿದರು, ಯಶಸ್ವಿಯಾಗಿ ಅಪರೇಶನ್ ಮುಗಿಯಿತು.  ನಂತರ ಸಮಸ್ಯೆ ಪ್ರಾರಂಬವಾಯಿತು. ಅಪರೇಶನ ಆದರೆ ಕೆಲವೆ ಗಂಟೆಗಳಲ್ಲಿ  ರೋಗಿಯ  ಅರಿವು ಹಿಂದೆ ಬರಬೇಕಿತ್ತು. ಆದರೆ ಎಷ್ಟು ಸಮಯವಾದರು ರೋಗಿಯ ಪರಿಸ್ಥಿಥಿ ಸುದಾರಿಸಲಿಲ್ಲ.  ಮತ್ತೆ ಡಾ||ವಿಕಾಸ್ ಸಹ ಓಡಿಬಂದರು. ರೋಗಿಯನ್ನು ಪರೀಕ್ಷಿಸಲಾಯಿತು. ಹೃದಯಕ್ಕೆ ಸಂಭಂದಿಸಿದಂತೆ ಯಾವುದೆ ತೊಂದರೆ ಇರಲಿಲ್ಲ, ಆದರೆ ರೋಗಿಗೆ ಕೊಟ್ಟಿರುವ ಅರಿವಳಿಯ ಪರಿಣಾಮ ರೋಗಿಯ ಮೇಲಾಗಿತ್ತು.  ಡಾ||ಸುರೇಶ್ ಗೌಡ ಅರಿವಳಿಕೆ ನೀಡುವಾಗ, ಅವರ ವಯಸನ್ನು ಸರಿಯಾಗಿ ಪರಿಗಣಿಸಿರಲಿಲ್ಲ, ಎಂತದೋ ಹೆಚ್ಚು ಕಡಿಮೆ. ರೋಗಿಯ ಸ್ಥಿಥಿಯನ್ನು ಗಮನಿಸಿದಲ್ಲಿ ಅವರು ಹೆಚ್ಚು ಕಡಿಮೆ  ಕೋಮಾಗೆ ಹೋಗಿರುವ ಲಕ್ಷಣಗಳಿದ್ದವು. ಮತ್ತೆ ಅವರಿಗೆ ಸ್ಮೃತಿ ಯಾವಾಗ ಹಿಂದೆ ಬರುವುದು ಎಂದು  ನಿಶ್ಚಯಿಸಲು ಆಗದ ಸಂಕಟ.

  ಹೊರಗೆ ರೋಗಿಯ ಪತ್ನಿ  ಶಾಂತ, ಮತ್ತು ಇಬ್ಬರು ಗಂಡಸರು ಕಾಯುತ್ತಲೆ ಕುಳಿತ್ತಿದ್ದಾರೆ, ಅವರಿಗೆ ಒಳಗಿನ ಯಾವುದೆ ಸುದ್ದಿ ತಿಳಿಯದೆ ಅವರ ಅತಂಕ ಕ್ಷಣ ಕ್ಷಣಕ್ಕು ಹೆಚ್ಚುತ್ತಿತ್ತು. ಡಾ||ವಿಕಾಸ್ ಅಪ್ ಸೆಟ್ ಆಗಿದ್ದರು, ಡಾ|ಸುರೇಶ್ ಕಾರಣದಿಂದ ಪದೆ ಪದೆ ಈ ರೀತಿ ಆಗುತ್ತಿದ್ದಲ್ಲಿ,  ಬೇರೆ ಡಾಕ್ಟರ್ ಗಳ ಹೆಸರು ಕೆಡುತ್ತದೆ, ಅಲ್ಲದೆ  ವೈದ್ಯರನ್ನು ನಂಬಿ ಬರುವ ಜನರಿಗೆ ನಾವು ಮಾಡುತ್ತಿರುವ ಮೋಸ, ಅಲಕ್ಷದಿಂದ ಆಗುವ ಈ ರೀತಿಯ ಸಾವುಗಳು ಕೊಲೆಗೆ ಸಮಾನ ಎಂದು ಅವರ ಭಾವನೆ. ಡಾ||ಸುರೇಶ್ ಗೌಡರಿಗು ಆತಂಕ, ಇದೇಕೆ ಈ ರೀತಿ ಆಗುತ್ತಿದೆ . ಪದೆ ಪದೆ ಈ ರೀತಿ ಆಗುವುದು ತಮ್ಮ ವೃತ್ತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅವರ ಚಿಂತೆ.  ತಕ್ಕ ಉಪಚಾರ ಮಾಡಿ ಕಾಯುವುದು ಹೊರತಾಗಿ ಬೇರೆ ಮಾರ್ಗವಿಲ್ಲ. ಸಾಕಷ್ಟು ಆತಂಕದಲ್ಲಿದ್ದರು ಡಾ||ಸುರೇಶ್ ಗೌಡ.  ಹಾಸ್ಪಿಟಲ್ ಮುಖ್ಯಸ್ಥ ಎಂ.ಡಿ ಕೇಶವ್ ವರೆಗು ಸಮಾಚಾರ ಹೋಗಿದ್ದು, ಅವರು ಸಹ ಹೇಗಾದರು ರೋಗಿಯನ್ನು ಸಹಜ ಸ್ಥಿಥಿಗೆ ತರುವಂತೆ ಸೂಚಿಸಿದ್ದರು.

 ಅಂತಹ ಪರಿಸ್ಥಿಥಿಯಲ್ಲಿ ಸಾಕಷ್ಟು ಒತ್ತಡದಲ್ಲಿದ್ದಾಗ ಡಾ|ಸುರೇಶ್ ಗೌಡ ಅವರಿಗೆ ಮೊಬೈಲ್ ನಲ್ಲಿ ಕಾಲ್ ಬಂದಿತು, ನೋಡಿದರೆ ಅದು ಅವರ ಹಳೆಯ ಗೆಳೆಯ ಮುರಳಿ.  ಇದೇನು ಮುರಳಿ ಕರೆ ಮಾಡುತ್ತಿದ್ದಾನೆ, ಅವನು ಅಮೇರಿಕಾದ ಕೆನಡದಲ್ಲಿದ್ದನಲ್ಲವೆ ಯಾವುದೊ ಪ್ರೋಜೆಕ್ಟ್ ನಲ್ಲಿ ,  ಯಾವಾಗ ಬಂದ ಅಂದುಕೊಳ್ಳೂತ್ತಲೆ ಕಾಲ್ ರಿಸೀವ್ ಮಾಡಿದರು ಡಾ||ಸುರೇಶ್ ಗೌಡ
"ಹೆಲೊ ಮುರಳಿ, ಯಾವಾಗ ಬಂದೆ ಇಂಡಿಯಾಗೆ, ನಿನ್ನ ಪ್ರೊಜೆಕ್ಟ್ ಮುಗಿಯಿತಾ ಹೇಗೆ" ಎಂದರು
"ಈದಿನ ಬರುತ್ತಿರುವೆ ಸುರೇಶ್, ನಾನು ವಿಮಾನ ನಿಲ್ದಾಣದಲ್ಲಿ ಇಳಿದು, ನೇರ ನಿಮ್ಮ ಹಾಸ್ಪಿಟಲ್ ಗೆ ಬರುತ್ತಿರುವೆ, ನೀನು ಎಲ್ಲಿದ್ದಿ, ನಾನು ಕೆಳಗೆ ರಿಸಿಪ್ಷನ್ ನಲ್ಲಿದ್ದೀನಿ" ಎಂದ  ಮುರಳಿ
"ಅದೇನು ಮುರಳಿ ಅಂತ ಅರ್ಜೆಂಟ್, ನೇರ ನಮ್ಮ ಬಳಿಗೆ, ಏಕೆ, ಏನಾಯಿತು" ಎಂದರು ಡಾ||ಸುರೇಶ್ ಗೌಡ ಆಶ್ಚರ್ಯದಿಂದ
"ಅದೆ ಸುರೇಶ್ ನಮ್ಮ ದೊಡ್ಡಪ್ಪ ನಿಮ್ಮ  ಹಾಸ್ಪಿಟಲ್ ನಲ್ಲಿಯೆ ಇದ್ದಾರೆ, ಅಪರೇಶನ್ ಆಯಿತಂತೆ, ದೊಡ್ಡಮ್ಮ ಎಲ್ಲ ಕಾಯುತ್ತಿದ್ದಾರೆ, ಆದರೆ ದೊಡ್ಡಪ್ಪನ ಪರಿಸ್ಥಿಥಿ ಏನು ಅಂತ ಅವರಿಗೆ ತಿಳಿದಿಲ್ಲ ಆತಂಕದಲ್ಲಿದ್ದಾರೆ, ಹಾಗಾಗಿ ನಿನ್ನ ಬೇಟಿಮಾಡಿದರೆ ತಿಳಿಯಬಹುದು ಎಂದು ಕರೆದೆ." ಎಂದ ಮುರಳಿ
"ನೀವು ಅಲ್ಲಿಯೆ ಇರಿ ನಾನು ಕೆಳಗೆ ಬರುತ್ತಿರುವೆ " ಎಂದ ಡಾ||ಸುರೇಶ್ ಗೌಡರು ,
ಮುರಳಿಯ ದೊಡ್ಡಪ್ಪ ಅಂದರೆ ತಮ್ಮ  ಪ್ರಭಾವದಿಂದ ನನಗೆ ಕೆಲಸ ಕೊಡಿಸಿದವರು. ಅವರನ್ನು ನೋಡಬೇಕೆಂದು ಎಷ್ಟೋ ಸಾರಿ ಅಂದು ಕೊಂಡಾಗಲು ಆಗಿರಲಿಲ್ಲ. ಈಗ ಪಾಪ ನಮ್ಮ ಆಸ್ಪತ್ರೆಯಲ್ಲಿಯೆ ಇದ್ದಾರೆ.  ಹೇಗಾದರು ಸರಿ ಅವರಿಗೆ ನನ್ನಿಂದ ಆಗುವ ಎಲ್ಲ ಸಹಾಯ ಮಾಡಬೇಕು. ಆಗಷ್ಟೆ ನನ್ನ ಕೃತಜ್ಞತೆ ಸಲ್ಲಿಸಿದಂತೆ. ಅವರು ಮಾಡಿರುವ ಉಪಕಾರ ಸ್ಮರಣೇಯಾದೀತು ಎಂದೆಲ್ಲ ಯೋಚಿಸುತ್ತ ಆತುರ ಆತುರವಾಗಿಯೆ ಕೆಳಗೆ ಬಂದರು.

ರಿಸೆಪ್ಫನ್ ನಲ್ಲಿ ತನ್ನನ್ನು ಕಾಯುತ್ತ ನಿಂತಿದ್ದ ಮುರಳಿಯನ್ನು ಕಂಡು ಹತ್ತಿರಬಂದು ಹೆಗಲು ತಡವಿದ ಡಾ|ಸುರೇಶ್ ಗೌಡ
"ಯಾರು ಮುರಳಿ ? ನಿಮ್ಮ ದೊಡ್ಡಪ್ಪ ಅಂದರೆ ನೀನು ಹೇಳುತ್ತಿದ್ದೆಯಲ್ಲ , ಆಡಿಟರ್ ಆಗಿದ್ದವರು ಸತ್ಯನಾರಯಣ ಎಂದು ಅವರೇನ, ಅವರು ಇಲ್ಲಿ ಯಾವಾಗ ಅಡ್ಮಿಟ್ ಆದರು, ನನಗೆ ನೀನೇಕೆ ಫೋನ್ ಮಾಡಿ ತಿಳಿಸಲಿಲ್ಲ" ಎಂದರು.

"ಹೌದು ಸುರೇಶ್ , ನಮ್ಮ ದೊಡ್ಡಪ್ಪ ಎಂದರೆ ಅವರೊಬ್ಬರೆ ಇರುವುದು, ನಾನು ವಿದೇಶದಲ್ಲಿದ್ದೆ ಹಾಗಾಗಿ ನನಗೆ ತಡವಾಗಿ ವಿಷಯ ತಿಳಿಯಿತು, ಅವರಿಗೆ ಸ್ವಂತ ಮಕ್ಕಳು ಇಲ್ಲ, ನನ್ನನ್ನೆ ಮಗನನ್ನಾಗಿ ಭಾವಿಸಿದ್ದಾರೆ. ನನಗು ಅಷ್ಟೆ ದೊಡ್ಡಪ್ಪ, ದೊಡ್ಡಮ್ಮ ಅಂದರೆ ತಂದೆ ತಾಯಿಯಷ್ಟೆ ಪ್ರೀತಿ. ನನಗೆ ವಿಷಯ ತಿಳಿದ ತಕ್ಷಣ ಹೊರಟು ಬಂದೆ. ಇಲ್ಲಿ ಬಂದಾಗ ನೆನಪಾಯಿತು ನೀನು ಇದೇ ಹಾಸ್ಪಿಟಲ್ ನಲ್ಲಿ ಇರುವುದು ಎಂದು, ಏನಾದರು ಹೆಲ್ಪ್ ಮಾಡು ಸುರೇಶ್ , ನೆನ್ನೆಯಿಂದ ದೊಡ್ಡಮ್ಮನನ್ನು ಒಳಗು ಬಿಟ್ಟಿಲ್ಲ.  ಪರಿಸ್ಥಿಥಿಯನ್ನು ಸರಿಯಾಗಿ ತಿಳಿಸುತ್ತಿಲ್ಲ  ಹಾಸ್ಪಿಟಲ್ ನಲ್ಲಿ" ಎಂದ ಅಸಹಾಯಕನಾಗಿ.

ಡಾ||ಸುರೇಶ್ ಗೌಡ ರಿಸಿಪ್ಷನ್ ನಲ್ಲಿ ಕುಳಿತಿದ್ದ ಅಸಿಸ್ಟೆಂಟ್ ಕಡೆ ತಿರುಗಿ  " ಮಿಸ್ | ರಜನಿ, ಇವರು ಹೇಳುತ್ತಿರುವ ಪೇಷೆಂಟ್ ಸತ್ಯನಾರಾಯಣ ಅನ್ನುವರ ಡಿಟೈಲ್ಸ್ ಏನು,  ಯಾರು ಹ್ಯಾಂಡಲ್ ಮಾಡ್ತಿದ್ದಾರೆ ?" ಎಂದು ಕೇಳಿದರು.

ರಿಸಿಪ್ಫನ್ ನಲ್ಲಿ ಕುಳಿತಿದ್ದ ರಜನಿ ಹೆದರುತ್ತಲೆ ಡಾ|ಸುರೇಶ್ ಗೌಡ ಕಡೆ ನೋಡುತ್ತ " ಸಾರ್ , ಅದೇ ಕೇಸು ಸಾರ್, ಡಾ!ವಿಕಾಸ್ ಅಪರೇಟ್ ಮಾಡಿದರಲ್ಲ, ಬೆಳಗ್ಗೆ , ನೀವು ಅವರ ಜೊತೆ ಇದ್ದಿರಲ್ಲ, ಸಾರ್, ಪೇಷೆಂಟ್ ಇನ್ನು ಕಾನ್ ಶಿಯಸ್ ಬಂದಿಲ್ಲ ಹಾಗಾಗಿ ಯಾರನ್ನು ಒಳಗಡೆ ಬಿಡಬೇಡಿ ಅಂತ ಡಾ! ವಿಕಾಸ್ ಇನ್ಸ್ ಟ್ರಕ್ಟ್ ಮಾಡಿದ್ದಾರೆ ಸಾರ್ " ಎಂದಳು.

ಡಾ||ಸುರೇಶ್ ಗೌಡರಿಗೆ  ದೊಡ್ಡ ಶಾಕ್ ಆಗಿತ್ತು. ಅವರ ಮನಸಿನಲ್ಲಿ ಅಂದೋಲನ ಪ್ರಾರಂಬವಾಗಿತ್ತು. ತನ್ನ ಆತ್ಮೀಯ ಗೆಳೆಯ ಎದುರಿಗೆ ನಿಂತಿರುವ, ಅವನ ದೊಡ್ಡಪ್ಪನಿಗೆ ಅಪರೇಷನ್ ಆಗಿದೆ, ಮತ್ತು ಆಪರೇಷನ್ ನಲ್ಲಿ ತನ್ನ ತಪ್ಪಿನಿಂದಾಗಿ ರೋಗಿ ಅಪಾಯದಲ್ಲಿದ್ದಾರೆ. ಈಗ ಏನು ಮಾತನಾಡುವುದು ತಿಳಿಯಲಿಲ್ಲ
ರಜನಿ ಕಡೆ ತಿರುಗಿ " ಸರಿ , ನಾನು ನೋಡುತ್ತೇನೆ ಬಿಡಿ" ಎಂದರು ಡಾ||ಸುರೇಶ್ ಗೌಡ
"ನನ್ನ ಜೊತೆ ಬಾ ಮುರಳಿ " ಎಂದವರು , ಅವನನ್ನು ಐ.ಸಿ. ಯೂ ಕಡೆ ಕರೆದುಕೊಂಡು ಹೊರಟರು. ಡಾ|ಸುರೇಶ್ ಗೌಡ ಜೊತೆ ಬಂದ ಮುರಳಿಯನ್ನು ಯಾರು ತಡೆಯಲಿಲ್ಲ. ಐ.ಸಿ.ಯು ಹೊರಗೆ ಶೂ ಕಳಚಿ, ಅವರು ಕೊಟ್ಟ ಗೌನನ್ನು ಹೊದ್ದು, ಒಳ ನಡೆದ ಮುರಳಿ.
ಮೌನವಾಗಿ , ಬೆಡ್ ಬಳಿ ನಿಂತು, ತನ್ನ ದೊಡ್ಡಪ್ಪನನ್ನು ದಿಟ್ಟಿಸಿದ. ಮಲಗಿ ಉಸಿರಾಡುತ್ತಿರುವ ಅವರನ್ನು ಕಂಡಾಗ ಸ್ವಲ್ಪ ಸಮಾದಾನ ಎನಿಸಿತು. ಆದರು ಒಂದು ಅನುಮಾನ. ಅಪರೇಷನ್  ಇಷ್ಟು ಸಮಯ ಕಳೆದರು ಏಕೆ ಪ್ರಜ್ಞೆ ಬಂದಿಲ್ಲ. ಆದರೆ ಅಲ್ಲಿ ಮಾತನಾಡುವುದು ಸರಿ ಅಲ್ಲ ಎಂದು ಮೌನವಾಗಿದ್ದ.

ತನ್ನ ಕೋಣೇಗೆ ಮುರಳಿಯನ್ನು ಕರೆದುಕೊಂಡು ಹೋದರು ಡಾ|ಸುರೇಶ್ ಗೌಡ . ಎದುರಿಗೆ ಕೂಡಿಸಿ ಮೌನವಾಗಿದ್ದ ಅವರನ್ನು ಕಾಣುತ್ತ , ಗೊಂದಲಗೊಂಡ , ಮುರಳಿ
"ಯಾಕೆ ಸುರೇಶ್ ಏನು ಮಾತನಾಡುತ್ತಿಲ್ಲ, ದೊಡ್ಡಪ್ಪನಿಗೆ ಇಷ್ಟು ಕಾಲ ಕಳೆದರು ಏಕೆ ಪ್ರಜ್ಞೆ ಬಂದಿಲ್ಲ, ಅಪರೇಷನ್ ನಲ್ಲಿ ಏನಾದರು ಸಮಸ್ಯೆ ಆಯಿತ , ಅಥವ ಹೃದಯದ ಸಮಸ್ಯೆ ಹೊರತಾಗಿ ಮತ್ತೆ ಏನಾದರು ಸಮಸ್ಯೆ ಇದೆಯ" ಕೇಳಿದ ಆತುರದಲ್ಲಿ.

ಡಾ|ಸುರೇಶ್ ಗೌಡ , ತನ್ನೊಳಗೆ ಕೊರಗುತ್ತಿದ್ದರು. ಇದೆಂತ ಪರಿಸ್ಥಿಥಿ. ತಾನು ನಿರೋದ್ಯೋಗಿ ಆಗಿದ್ದಾಗ, ತನಗೆ ಸಹಾಯ ಮಾಡಿದ ಮುರಳಿ ಎದುರಿಗಿದ್ದಾನೆ , ನಾನು ಯಾರು ಎಂದು ಗೊತ್ತಿಲ್ಲದಿದ್ದರು ಸಹ, ಫಲಾಪೇಕ್ಷೆ ಇಲ್ಲದೆ ಸಹಾಯ ಮಾಡಿದ ಅವರ ದೊಡ್ಡಪ್ಪ ನನ್ನ ತಪ್ಪಿನಿಂದಾಗಿ ಪ್ರಜ್ಞೆ ಕಳೆದು ಮಲಗಿದ್ದಾರೆ. ತಾನು ಅವರನ್ನು ಒಮ್ಮೆಯಾದರು ಕಾಣಬೇಕೆಂದು ಹಲವು ಸಾರಿ ಭಾವಿಸಿದ್ದು ಇದೆ. ಆದರೆ ಕೆಲಸದ ಒತ್ತಡ ಅಲ್ಲದೆ ಒಬ್ಬನೆ ಹೋಗಬೇಕಲ್ಲ, ಮುರಳಿಯು ಬರಲಿ ಎನ್ನುವ ಕಾರಣಕ್ಕೆ ಮುಂದೆ ಹಾಕುತ್ತ ಹೋಗಿರುವೆ.  ಅವರಿಗೆ ತನ್ನಿಂದ ಆದ ಯಾವುದೆ ಸಹಾಯ ಮಾಡಬೇಕು ಅನ್ನುವ ಮನಸು ಇರುವಾಗ ಈ ರೀತಿ ತನ್ನಿಂದ ಅಪಕಾರವೆ ಆಗಿಹೋಗಿದೆ. ಈ ಪರಿಸ್ಥಿಥಿಯನ್ನು ಸರಿಪಡಿಸುವುದು ಹೇಗೆ ? . ಹೊರಗೆ ಅಮಾಯಕಳಂತೆ ಕಾಯುತ್ತಿರುವ ಮುರಳಿಯ ದೊಡ್ಡಮ್ಮ ಅವರಿಗೆ ಅನ್ಯಾಯವಾಗದಂತೆ ಏನು ಮಾಡಬಹುದು. ಎನ್ನುವ ಯೋಚನೆ ಅವರನ್ನು ಕಾಡುತ್ತಿತ್ತು.

ತುಸು ಸಮಯ ಕಳೆದು ನಿದಾನವಾಗಿ ಮಾತನಾಡಿದರು ಡಾ|ಸುರೇಶ್ ಗೌಡ
"ಮುರಳಿ, ಹೇಗೆ ಹೇಳಬೇಕು ತಿಳಿಯುತ್ತಿಲ್ಲ, ನಿಮ್ಮ ದೊಡ್ಡಪ್ಪನಿಗೆ ಬೇರೆ ಯಾವ ಸಮಸ್ಯೆಯು ಇಲ್ಲ, ಹೃದಯದ ಸಮಸ್ಯೆಯು ಸಹ ಈಗ ದೂರವಾಗಿದೆ, ಆದರೆ ಬೇರೆ ಸಮಸ್ಯೆ  , ಅಪರೇಷನ್ ಆದಾಗ ಅವರಿಗೆ ಕೊಟ್ಟಿದ್ದ ಅರಿವಳಿಕೆಯಲ್ಲಿ ಏನೊ ಸಮಸ್ಯೆ ಆಗಿದೆ. ಅದಕ್ಕೆ ಅವರ ದೇಹ ಹೇಗೆ ಸ್ಪಂದಿಸಿದೆಯೊ, ಆದರೆ ಅಪರೇಷನ್ ಆದ ನಂತರ ಪ್ರಜ್ಞೆ ಹಿಂದೆ ಬರುತ್ತಿಲ್ಲ, ದೇಹ ಮಾತ್ರ ಸಾಮಾನ್ಯವಾಗಿಯೆ ಇದೆ. ಕೋಮಾಕ್ಕೆ ಹೋಗುತ್ತಿದೆ ಅನ್ನುವ ಅನುಮಾನ, ಅರಿವಳಿಕೆ ನಿರ್ದರಿಸಿದವನು ಕೊಟ್ಟವನು ನಾನು. ನಾನೆ ಈಗ ಅಪರಾದಿ ಸ್ಥಾನದಲ್ಲಿ ನಿಂತಿರುವೆ ,ಮುರಳಿ, ಹೇಗಾದರು ಈ ಪರಿಸ್ಥಿಥಿಯಿಂದ ಹೊರಬರಬೇಕು"

ಅನ್ನುತ್ತ ಮೌನವಾಗಿ ಕಣ್ಮುಚ್ಚಿ ಕುಳಿತರು. ಮುರಳಿ ನಿರುತ್ತರನಾಗಿದ್ದ, ಅವನಿಗೆ ಏನು ಹೇಳಬೇಕೆಂದು ತೋಚುತ್ತಿಲ್ಲ. ತನ್ನ ಆತ್ಮೀಯ ಗೆಳೆಯನನ್ನು ಹೇಗೆ ನಿಂದಿಸುವುದು, ಅವನು ಸಹ ಪರಿತಪಿಸುತ್ತಿದ್ದಾನೆ. ಮುರಳಿ ಮೌನವಾಗಿ ಡಾ|ಸುರೇಶ್ ಗೌಡರನ್ನು ನೋಡುತ್ತ ಕುಳಿತ.

ಎಷ್ಟೋ ಸಮಯ ಕಳೆದಿತ್ತು, ಕಣ್ಣು ಬಿಟ್ಟ ಡಾ|ಸುರೇಶ್ ಗೌಡ ,  ಟೇಬಲ್ ಮೇಲೆಲ್ಲ ಹುಡುಕಿ ತಮ್ಮ ಮೊಬೈಲ್ ತೆಗೆದುಕೊಂಡರು. ಮುರಳಿ ಮೌನವಾಗಿ ದಿಟ್ಟಿಸುತ್ತಿದ್ದ , ಪೋನಿನ ಮತ್ತೊಂದು ತುದಿಯಲ್ಲಿ ಯಾರಿದ್ದಾರೆ ಅವನಿಗೆ ಗೊತ್ತಿಲ್ಲ.
"ಹೆಲೊ,  ಚಿನ್ಮಯ್ , ನಾನಪ್ಪ, ಬೆಂಗಳೂರಿನಿಂದ ಸುರೇಶ್ ಗೌಡ, ಏನು ತು೦ಬಾ ಬಿಸೀನ"
ಆ ಕಡೆಯಮಾತು ಮುರಳಿಗೆ ಕೇಳಲಿಲ್ಲ
"ಇಲ್ಲ ಚಿನ್ಮಯ್ ನಾನು ಸ್ವಲ್ಪ ಸಮಸ್ಯೆಯಲ್ಲಿ ಸಿಲುಕಿರುವೆ, ನಿನ್ನ ಸಹಾಯಕ್ಕೆ ಫೋನ್ ಮಾಡ್ತಾ ಇದ್ದೀನಪ್ಪ, ಇಲ್ಲಿ ಒಂದು ಸಮಸ್ಯೆ ತಲೆದೋರಿದೆ, ಒಬ್ಬ ಪೇಷೆಂಟ್, ಸುಮಾರು ಅರವತ್ತು ವಯಸ್ಸು, ಅಪರೇಷನ್ ಆಗಿದೆ, ಆದರೆ ನಂತರ ಅವರಿಗೆ ಅರಿವು ಬರುತ್ತಿಲ್ಲ "  
ಸತ್ಯನಾರಾಯಣರ ಎಲ್ಲ ಪರಿಸ್ಥಿಥಿಯನ್ನು ವಿವರಿಸುತ್ತಿದ್ದರು ಡಾ||ಸುರೇಶ್ ಗೌಡ. ಮದ್ಯೆ ಮದ್ಯೆ ಆ ಕಡೆಯಿಂದ ಡಾ||ಚಿನ್ಮಯ್ ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತ. ತಾನು ಕೊಟ್ಟಿರುವ ಸೆಡಿಟೀವ್ ಡಿಟೈಲ್ , ಹೀಗೆ ಹಲವು ವಿಷಯ ವಿವರಿಸಿದರು. ಕಡೆಯಲ್ಲಿ ಹೇಳಿದರು
"ಚಿನ್ಮಯ್ , ನೀನು ತಕ್ಷಣ ಹೊರಟು, ಮದ್ಯಾನ ಇರುವ ವಿಮಾನ ಹಿಡಿದು, ಇಲ್ಲಿ ಬಾ, ನನಗೆ ನಿನ್ನ ಸಹಾಯ ಬೇಕು, ಹಣದ ಚಿಂತೆ ಬೇಡ,  ನೀನು ಈ ದಿನ ಸಂಜೆ ಕಳೆಯುವದೊರಳಗೆ ಇಲ್ಲಿ ಇರಬೇಕು, ಪ್ಲೀಸ್"  

ಪೋನ್ ಡಿಸ್ಕನೆಕ್ಟ್ ಮಾಡುತ್ತ ನುಡಿದರು ಡಾ|ಸುರೇಶ್ ಗೌಡ

"ಡಾ|ಚಿನ್ಮಯ್ ಎಂದು ಹೆಸರು, ಚೆನೈನಲ್ಲಿ  ಪ್ರಖ್ಯಾತ ಅರಿವಳಿಕೆ ತಜ್ಞರು, ಮಂಗಳೂರಿನಲ್ಲಿ ಓದುವಾಗ ನನ್ನ ಸಹಪಾಠಿ, ಒಳ್ಳೆ ಬ್ರಿಲಿಯೆಂಟ್ , ಅವನು ಅಶೂರ್ ಮಾಡ್ತಾ ಇದ್ದಾನೆ, ಮುರಳಿ ವರಿ ಮಾಡಬೇಡ, ನಿಮ್ಮ ದೊಡ್ಡಪ್ಪನನ್ನು ನಿನಗೆ ಪುನಃ ಅರೋಗ್ಯಪೂರ್ಣರನ್ನಾಗಿ ಒಪ್ಪಿಸುವುದು ನನ್ನ ಜವಾಬ್ದಾರಿ" ಎಂದರು.
.
ಸಂಜೆ ಆರು ಘಂಟೆ ಹೊತ್ತಿಗೆ ಡಾ|ಚಿನ್ಮಯ್ ಚನೈನಿಂದ ಬಂದಿಳಿದರು, ಇಪ್ಪಟೆಂಟು ಮೂವತ್ತರ ಸ್ಪುರದ್ರೂಪಿ ತರುಣ. ಮುಖದಲ್ಲಿ ಸದಾ ಇರುವ ಕಿರುನಗೆ.  ಬರುತ್ತಲೆ ಒಂದು ಕಾಫಿ ಮಾತ್ರ ಸ್ವೀಕರಿಸಿ ಡಾ|ಸುರೇಶ್ ಗೌಡರ ಜೊತೆ ತನ್ನ ಕೆಲಸ ಪ್ರಾರಂಬಿಸಿದರು.  ಡಾ|ಸುರೇಶ್ ಗೌಡ ಸತ್ಯನಾರಾಯಣರ ಕೇಸಿಗೆ ಸಂಭಂದಿಸಿದ ಪ್ರತಿ ಸಣ್ಣ ವಿಷಯವನ್ನು ಬಿಡದೆ ಅವರಿಗೆ ನೀಡಿದರು. ರೋಗಿಯನ್ನು ಪರೀಕ್ಷಿಸಿ,  ತನ್ನ ಬ್ಯಾಗಿನಲ್ಲಿದ್ದ  ಐಪಾಡ್ ತೆಗೆದರು ಡಾ||ಚಿನ್ಮಯ್ ಅಲ್ಲಿಂದಲೆ ಅವರು ಅಮೇರಿಕಾದಲ್ಲಿ  ಅನುಭವಿ ಅರಿವಳಿಕೆ ತಜ್ಞ ಹಾಗು ಅವರ ಗೈಡ್ ಡಾ| ಚಂದ್ರಶೇಖರ್ ಜೊತೆ ಸಂಪರ್ಕ ಸಾಧಿಸಿದರು. ಅವರಿಗೆ ಎಲ್ಲ ವಿವರಗಳನ್ನು ನೀಡಿ ಅವರಿಂದ ಕೆಲವು ಸಲಹೆಗಳನ್ನು ಪಡೆದರು. ನಂತರ ತಮ್ಮ ಚಿಕಿತ್ಸೆ ಪ್ರಾರಂಬಿಸಿದರು.

ಡಾ|ಚಿನ್ಮಯ್ ರವರದು  ಒಂದು ರೀತಿ 'ಚಿನ್ನದ ಹಸ್ತ' ಎನ್ನುತ್ತಾರಲ್ಲ ಆ ರೀತಿ, ಅವರ ಪ್ರತಿ ಔಷದಿಗು ಚಿಕಿತ್ಸೆಗು ಪ್ರಜ್ಞೆ ತಪ್ಪಿ ಮಲಗಿದ್ದ ಮುರಳಿಯ ದೊಡ್ಡಪ್ಪ ಸತ್ಯನಾರಯಣರವರು ಸ್ಪಂದಿಸಿದರು. ಮರುದಿನ ಮಧ್ಯಾಹ್ನದ ಹೊತ್ತಿಗೆ ಸತ್ಯನಾರಾಯಣರು ಮುರಳಿಯನ್ನು ಗುರುತುಹಿಡಿದು ಮಾತನಾಡಿದಾಗ , ಮುರಳಿಗಿಂತ ಹೆಚ್ಚು ಸಂಭ್ರಮಪಟ್ಟವರು ಡಾ|ಸುರೇಶ್ ಗೌಡ.  ಅವರ ಮನದಲ್ಲಿ ಎಂತದೊ ಒಂದು ಶಾಂತಿ ನೆಮ್ಮದಿ ನೆಲಸಿತು.  

ತಾನು ಹಾಸ್ಪಿಟಲ್ ತಲುಪಿದ ಸರಿಯಾಗಿ ಇಪ್ಪತ್ತುನಾಲಕ್ಕು ಘಂಟೆಯ ನಂತರ ತಾನು ಒಳಗೆ ಬಂದ ಸಮಯಕ್ಕೆ , ಪುನ: ಚೆನೈಗೆ ಹೊರಟು ನಿಂತಿದ್ದರು ಡಾ|ಚಿನ್ಮಯ್ .  ಡಾ|ಸುರೇಶ್ ಮಾತನಾಡಿ, ತನ್ನ ಕೃತಜ್ಞತೆ ಅರ್ಪಿಸುತ್ತ ಹೇಳಿದರು
"ನೀನು ಬಂದಿದ್ದು ದೊಡ್ಡ ಉಪಕಾರವಾಯಿತು ಚಿನ್ಮಯ್ , ಇದಕ್ಕೆ ಹೇಗೆ ಕೃತಜ್ಞತೆ ಅರ್ಪಿಸುವುದು ತಿಳಿಯದು, ಚೆನೈ ತಲುಪಿ ನಂತರ ನಿನ್ನ  ಫೀ ಎಷ್ಟು ಎಂದು ತಿಳಿಸಿದರೆ ಕಳಿಸಿಕೊಡುವೆ " ಎಂದರು.

ಅದಕ್ಕೆ ನಗುತ್ತಿದ್ದ ಡಾ|ಚಿನ್ಮಯ್ ನುಡಿದರು,

"ನನ್ನ ಫೀ ವಿಷಯ ಅತ್ತ ಇರಲಿ,  ಪೇಷೇಂಟ್ ಸತ್ಯನಾರಾಯಣರವರು ನಿನಗೇನು ಆಗಬೇಕು ಹೇಳು " ಎಂದರು . ಅದಕ್ಕೆ ಡಾ|ಸುರೇಶ್ ಗೌಡ
"ಚಿನ್ಮಯ್ ಅವರು ನನಗೇನು ಅಗಬೇಕು ಅನ್ನುವ ಪ್ರಶ್ನೆಗಿಂತ, ಅವರು  ಹುಷಾರಾಗಿ ಎಚ್ಚರಾಗದೆ ಹೋಗುತ್ತಿದ್ದರೆ ನಾನು ನಾನಾಗಿ ಇರುತ್ತಿರಲಿಲ್ಲ " ಅಂದರು.
ಗಹಗಹಿಸಿ ನಕ್ಕ ಡಾ|ಚಿನ್ಮಯ್
"ಡಾ|ಸುರೇಶ ಗೌಡರೆ , ಡಾಕ್ಟರಿಗೆ ಇಷ್ಟೊಂದು ವೇಧಾಂತ ಒಳ್ಳೆಯದಲ್ಲ, ಇರಲಿ ನಾನಿನ್ನು ಬರುವೆ ಎಂದು ಹೊರಟರು"

....
ಸತ್ಯನಾರಾಯಣರವರು ಸಂಪೂರ್ಣ ಅರೋಗ್ಯವಾಗಿ ಮುರಳಿಯ ಜೊತೆ ಸಂತಸದಿಂದ ಹೊರಟರು, ಅವರೆಲ್ಲ ಹೊರಟ ನಂತರ ಡಾ|ಸುರೇಶ್ ಗೌಡ , ಎಂ.ಡಿ. ಕೇಶವ್ ರವರ ಕೊಠಡಿಯಲ್ಲಿ ತಮ್ಮ ರಾಜಿನಾಮೆ ಹಿಡಿದು ಕುಳಿತಿದ್ದರು. ಕೊಂಚ ಆಶ್ಚರ್ಯದಿಂದ ಕೇಶವ್ ಹೇಳುತ್ತಿದ್ದರು
"ಎಲ್ಲವು ಸುಖಕರವಾಗಿಯೆ ಮುಗಿಯಿತಲ್ಲ , ಸುರೇಶ್, ಮತ್ತೆ ಈಗ ಏಕೆ ರಾಜಿನಾಮೆಯ ಪ್ರಶ್ನೆ. ಡಾಕ್ಟರ ಗಳ ವೃತ್ತಿಯಲ್ಲಿ ಇಂತದೆಲ್ಲ ಕಾಮನ್, ಅದಕ್ಕೆ ಇಷ್ಟೊಂದು ಓವರ್ ರಿಯಾಕ್ಟ್ ಆಗುವ ಅವಶ್ಯಕತೆ ಇಲ್ಲ. ನೀವೇನು ರಾಜಿನಾಮೆ ಕೊಡಬೇಕಿಲ್ಲ" ಎಂದು ಡಾ|ಸುರೇಶ್ ಗೌಡರನ್ನು ಸಮದಾನಪಡಿಸಲು ಪ್ರಯತ್ನಿಸುತ್ತಿದ್ದರು. ಅದಕ್ಕೆ ಡಾ|ಸುರೇಶ್ ಗೌಡ
"ಇಲ್ಲ ಸರ್ ನಾನು ನಿರ್ಧಾರ ಮಾಡಿಯಾಗಿದೆ, ಅದೇಕೊ ಈ ವೃತ್ತಿಗೆ ನಾನು ಫಿಟ್ ಅಲ್ಲ ಅನ್ನಿಸುತ್ತಿದೆ, ಈ ಸ್ಥಿಥಿಯಲ್ಲಿ ನಾನು ಕೆಲಸಮಾಡುವುದು ಸರಿಯಲ್ಲ, ರೋಗಿಗಳ ದೃಷ್ಟಿಯಲ್ಲಿ ಅದು ರಿಸ್ಕ್ ಆಗಿರುತ್ತದೆ.  ನನ್ನ ಮನಸು ಅದೇನೊ ಒಂದು ನಿರ್ಧಾರಕ್ಕೆ ಬಂದು ಆಗಿದೆ. ನಾನೀಗ ರಾಜಿನಾಮೆ ಕೊಡುತ್ತಿರುವುದು ಬರಿ ಈ ಹಾಸ್ಪಿಟಲ್ ಗೆ ಅಲ್ಲ, ನನ್ನ ಡಾಕ್ಟರ್ ವೃತ್ತಿಗೆ ನಾನು ನಿವೃತ್ತಿ ಘೋಷಿಸುತ್ತಿದ್ದೇನೆ" ಎಂದರು ಸಮಾದಾನವಾಗಿಯೆ.
"ಆದರೆ ನಿಮ್ಮ ಜೀವನದ ಗುರಿ ಏನು ಸುರೇಶ್  , ನಿಮ್ಮ ಇಷ್ಟು ವರ್ಷಗಳ ಓದು ಪರಿಶ್ರಮ ಎಲ್ಲವು ವ್ಯರ್ಥವಲ್ಲವೆ, ನೀವು ನಿಮ್ಮ ಓದಿಗಾಗಿ ಮಾಡಿರುವ ಲಕ್ಷ ಲಕ್ಷ ಹಣ ಎಲ್ಲವು ವ್ಯರ್ಥವಲ್ಲವೆ. ಅಲ್ಲದೆ ಈಗ ಮತ್ತೆ ಯಾವ ಹೊಸ ವೃತ್ತಿ ಕೈಗೊಳ್ಳುವಿರಿ, ನೀವೇಕೊ ಅತಿಯಾಗಿ ರಿಯಾಕ್ಟ್ ಆಗುತ್ತಿರುವಿರಿ ಎಂದು ನನಗನ್ನಿಸುತ್ತಿದೆ" ಎಂದರು ಕೇಶವ್

"ಇಲ್ಲ ಸಾರ್, ನನ್ನ ಓದು ಪರಿಶ್ರಮ, ಖರ್ಚು ಮಾಡಿರುವ ಹಣ , ನನ್ನ ವೃತ್ತಿ ಈ ಎಲ್ಲಕ್ಕಿಂತ ಜೀವನ ದೊಡ್ಡದು ಎಂದು ನನಗನ್ನಿಸುತ್ತಿದೆ. ನನ್ನ ನಿರ್ದಾರದಲ್ಲಿ ನನಗೆ ನಂಭಿಕೆ ಇದೆ. ದಯಮಾಡಿ ನನ್ನ ರಾಜಿನಾಮೆ ಸ್ವೀಕರಿಸಿ"
ಡಾ| ಸುರೇಶ್ ಗೌಡರ ದ್ವನಿಯಲ್ಲಿ  ಇದ್ದ   ದೃಡತೆಗೆ ಕೇಶವ್ ಚಕಿತರಾಗಿದ್ದರು.
- ಮುಕ್ತಾಯ.
 

No comments:

Post a Comment

enter your comments please