Sunday, May 5, 2013

ನನಗೆ ಮತಹಾಕಬೇಡಿ..ಪ್ಲೀಸ್..(ಹಾಸ್ಯ ಬರಹ)

ನನಗೆ ಮತಹಾಕಬೇಡಿ..ಪ್ಲೀಸ್..(ಹಾಸ್ಯ ಬರಹ)


ಚುನಾವಣೆ ಹಾಗು ಈ ದಿನ ಬಾನುವಾರ ಒಟ್ಟೊಟ್ಟಿಗೆ ಬಂದಿವೆ. ಸಾಮಾನ್ಯ ಬಾನುವಾರ ಚುನಾವಣೆ ನಡೆದಿದ್ದು ನೋಡಿಲ್ಲ ಕೇಳಿಲ್ಲ. ಬೆಳಗ್ಗೆ ಏಳಕ್ಕೆ ಹೋಗಿ ಮತವನ್ನು ಒಗೆದು ಬಂದರೆ ಸರಿ ನಂತರ ಎಲ್ಲಿ ಬೇಕಾದರು ಹೋಗಬಹುದು ಅಥವ ಮನೆಗೆ ಅತಿಥಿಗಳು ಬಂದರು ಸರಿ ಹೋಗುತ್ತೆ,  ಮತ ಹಾಕಲಿಲ್ಲ ಎಂಬ ಆತಂಕವಿರಲ್ಲ. ಎಂದು ಬೆಳಗ್ಗೆ ಆರಕ್ಕೆ ಎದ್ದು ಸಿದ್ದನಾದೆ. ಬಾಗಿಲು ತೆರೆಯ ಬೇಕು, ಅಷ್ಟರಲ್ಲಿ ಹೊರಗೆ ಬಾಗಿಲು ತಟ್ಟುತ್ತಿರುವ ಶಬ್ದ, ಯಾರಿರಬಹುದು ಎಂದು ಬಾಗಿಲು ತೆರೆದರೆ, ನಮ್ಮ ಕ್ಷೇತ್ರದ ಬೀಜೇಪಿ ಅಭ್ಯರ್ಥಿ  ಅಲೋಕ್ ರವರು, ಸ್ವಲ್ಪ ಆಶ್ಚರ್ಯವೆ ಆಯಿತು.
"ಬನ್ನಿ ಬನ್ನಿ ಒಳಗೆ, ನಾನು ಮತ ಹಾಕಲೆ ಹೊರಟಿದ್ದೆ, ಬಾಗಿಲಿಗೆ ಬಂದಿರುವಿರಿ ,ಬಿಡಿ ನಿಮಗೆ ಹಾಕುವೆ ನನ್ನ ಮತ " ಎನ್ನುತ್ತ ಸ್ವಾಗತಿಸಿದೆ, ಅವರ ಮುಖದಲ್ಲಿ ಗಾಭರಿ,
"ಅಯ್ಯಯ್ಯೊ ದಯಮಾಡಿ ಹಾಗೆ ಮಾಡಬೇಡಿ ಸಾರ್, ಅದನ್ನು ಹೇಳಲೆ ಬಂದಿರುವುದು, ಈ ಬಾರಿ ದಯಮಾಡಿ ಕಾಂಗ್ರೆಸ್ ಗೆ ನಿಮ್ಮ ಮತ ಹಾಕಿಬಿಡಿ, ನನಗೆ ಹಾಕಬೇಡಿ ,ಆಮೇಲೆ ನೀವು ನಿಮ್ಮ ಕೆಲಸ ಏನಿದ್ದರು ಮಾಡಿಕೊಡ್ತೀನಿ " ಎನ್ನುತ್ತ ಕೈ ಮುಗಿದರು,
ನನಗೆ ಪಿಚ್ಚೆನಿಸಿತು, ಇದೇನು ಇಲ್ಲಿ ಬಂದು ನಿಮ್ಮ ಮತ ನನಗೆ ಹಾಕಬೇಡಿ ಎನ್ನುತ್ತಿರುವರಲ್ಲ, ಎಂತಹ ಅಹಂಕಾರ ಎನ್ನುತ್ತ ಕೋಪವು ಬಂದಿತು.
"ಆಗಲಿ ಬಿಡಿ ನೀವೆ ಬೇಡ ಅಂದಮೇಲೆ ನಿಮಗೆ ಏಕೆ ಹಾಕಲಿ ಬೇರೆ ಯಾರಾದರು ಅಭ್ಯರ್ಥಿಗೆ ಹಾಕುವೆ " ಎಂದೆ
"ತುಂಬಾ ಉಪಕಾರ ಆಯಿತು ಸಾರ್, ಬರ್ತೀನಿ" ಎಂದು ಕೈಮುಗಿದು ಹೊರಟರು.
ಥೂ ! ಇದೆಂತ ಭಂಗ ಮತ ಹಾಕಲು ಹೊರಡುವಾಗಲೆ ಅಪಶಕುನ, ಅಭ್ಯರ್ಥಿಯೆ ಬಂದು ನಿಮ್ಮ ಮತ ನನಗೆ ಹಾಕಬೇಡಿ ಎನ್ನುವರಲ್ಲ., ನಾನು ಅಂತದೇನು ಮಾಡಿರುವೆ ಇವರಿಗೆ ಎಂದು, ಬೇಸರದಿಂದ ಕುಳಿತಿದ್ದೆ, ಹೊರಗೆ ಮತ್ಯಾರೊ ಬಂದ ಹಾಗೆ ಅನ್ನಿಸಿತು ತಲೆ ಎತ್ತಿ ನೋಡಿದರೆ, ನಮ್ಮ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ  ರಾಮಾರೆಡ್ಡಿಯವರಲ್ಲವೆ, ಸಂತಸ ಅನಿಸಿತು, ಇದೇನು ಈ ರಸ್ತೆಗೆ ಕಾಲಿಡದ ಎಲ್ಲ  ಅಭ್ಯರ್ಥಿಗಳು ನನ್ನ ಮನೆಗೆ ಬರುತ್ತಿರುವರಲ್ಲ
"ಒಳಗೆ ಬನ್ನಿ ರೆಡ್ಡಿ ಸಾರ್, ಮತ ಕೇಳಲು ಬಂದಿರ,  ನಿಮಗೆ ಹಾಕುವೆ ಬಿಡಿ, ಕೆಲ ಜನರಿಗೆ ನೋಡಿ ಎಂತ ಬುದ್ದಿ ಮನೆಗೆ ಬಂದು ನನಗೆ ಮತ ಹಾಕಬೇಡಿ ಅಂತ ಹೇಳಿ, ಕಾಂಗ್ರೆಸ್ ಗೆ ಹಾಕಿ ಅಂತ ಹೇಳಿ ಹೋಗ್ತಾರಲ್ಲ, ಅವರಿಗೆ ಹಣಮಾಡಿ ಸಾಕಾಯ್ತು ಅನ್ನಿಸುತ್ತೆ ಬಿಡಿ ನಿಮಗೆ ಹಾಕುವೆ " ಎಂದೆ , ಸಂಕಟ ತುಂಬಿದ ದ್ವನಿಯಲ್ಲಿ
"ಯಾರು ಸರ್ ಆಲೋಕ್ ಆಗಲೆ ಬಂದು ಹೋದನ, ನನಗೆ ಗೊತ್ತಿತ್ತು ಅವನು ಅಂತವನು ಎಂದು ದ್ರೋಹಿ,  ನಾನು ಅದನ್ನೆ ಕೇಳಕ್ಕೆ ಬಂದ್ದಿದ್ದೀನಿ ಸಾರ್, ದಯಮಾಡಿ ನಿಮ್ಮ ಮತ ನನಗೆ ಹಾಕಬೇಡಿ, ನಿಮಗೆ ಅಷ್ಟು ಬೇಕು ಅಂದರೆ, ಆ ಗೌಡ್ರ ಪಕ್ಷದವನಿದ್ದಾನಲ್ಲ ಎಂತದೋ ಮಹದೇವನಂತೆ ಅವನಿಗೆ ಹಾಕಿ ಬಿಡಿ, ಸ್ವಲ್ಪನಾದರು ಅಹಂಕಾರ ಅಳಿಯಲಿ, ಇದು ನಮ್ಮ ಕಡೆಯಿಂದ ಹಿಡಿಯಿರಿ" ಎನ್ನುತ್ತ  ದೊಡ್ಡದೊಂದು ಗಡಿಯಾರ ಕೊಡುತ್ತ, ಮತ್ತೊಮ್ಮೆ ತನಗೆ ಮತ ನೀಡಬೇಡಿ ಎಂದು ಪ್ರಾರ್ಥಿಸುತ್ತ ಹೊರಟು ಹೋದರು.

ನನಗೆ ಹೊಟ್ಟೆಯಲ್ಲಿ ಸಂಕಟ, ಅಲ್ಲ ಎಲ್ಲರು ಬಂದು ನನಗೆ ಓಟುಮಾಡಬೇಡಿ ಎಂದು ಹೇಳಲು ನಾನೇನು ಎಲ್ಲರಿಗು ವಿರೋದಿಯೆ, ಇವರೆಂತ ಜನ, ಇನ್ನು ಆ ಮಹಾದೇವನು ಬಂದು ನನಗೆ ಮತ ಹಾಕಬೇಡಿ ಅಂದರೆ ನನ್ನ ಗತಿ ಏನು ಯಾರಿಗೆ ಹಾಕುವುದು ಅಂದುಕೊಳ್ಳುತ್ತಿರುವಾಗಲೆ ನನ್ನ ನಿರೀಕ್ಷೆ ಸುಳ್ಳಾಗದಂತೆ ಮಹಾದೇವ ನನ್ನ ಮನೆ ಬಾಗಿಲಲ್ಲಿ ಕಾಣಿಸಿದರು, ಸಪ್ಪೆಯಾಗಿ ಬನ್ನಿ ಒಳಗೆ ಅಂದೆ
"ಗೊತ್ತಾಯ್ತು ಸಾರ್, ಇಬ್ಬರು ಬಂದು ಹೋದರಂತಲ್ಲ ಕಳ್ಲರು, ಇಬ್ಬರ್ ಪಾತಕಿಗಳು ಸಾರ್ ಅವರು ಮಾಡಿರುವ ಮೋಸ ವಂಚನೆಯಿಂದ ಎಷ್ಟು ಜನ ನರಳುತ್ತ ಇದ್ದಾರೆ, ಇಬ್ಬರಲ್ಲಿ ದೊಡ್ಡಕಳ್ಲ ಎಂದರೆ ಅ ರೆಡ್ಡಿನೆ ಸಾರ್, ನೀವು ನಿಮ್ಮ ಮತ ಅವನಿಗೆ ಹಾಕಿಬಿಡಿ, ಸಾರ್, ನಾನು ಬಡವ ಮೊದಲ ಸಾರಿ ನಿಲ್ಲುತ್ತಿದ್ದೇನೆ, ನಿಮಗೆ ಏನು ಕೊಡಲು ಆಗಲ್ಲ , ಒಮ್ಮೆ ನಾನು ಗೆದ್ದರೆ ನಿಮಗೆ ಯಾವ ಕೆಲಸವಿದ್ದರು ಹೇಳಿ ಅದನ್ನು ಮಾಡಿಸುವುದು ನನ್ನ ಜವಾಬ್ದಾರಿ" ಎಂದು ಕೈ ಮುಗಿದು ಹೊರಟರು.

ಇದೆಂತಹ ಬೆಳಗ್ಗೆ, ಇದೇನು ಚುನಾವಣೆ ಒಳ್ಳೆ ಹುಚ್ಚಾಟವಾಯಿತಲ್ಲ , ಅನ್ನಿಸಿತು, ಹಾಗೆ ಒಂದಿಬ್ಬರು ಸ್ವತಂತ್ರ್ಯ ಅಭ್ಯರ್ಥಿಗಳು ಬಂದು ಹೋದರು, ಅದರಲ್ಲು ಒಬ್ಬಾಕೆ ಪಾಪ ಹೆಣ್ಣು, ಕಣ್ಣೀರೆ ಕರೆದಳು, ದಯಮಾಡಿ ನನಗೆ ನಿಮ್ಮ ಮತ ಹಾಕಬೇಡಿ ಅಂತ ಪ್ರಾರ್ಥನೆ.

ನಾನು ದಿಕ್ಕೆಟ್ಟು ನಿಂತೆ. ಎಲ್ಲರು ಹೋಗುವಾಗ ಆಗಲೆ ಎಂಟುಗಂಟೆ. ಹೊರಗೆ ಬಂದೆ . ಎದುರು ಮನೆ ಚಿದಂಬರಯ್ಯನವರು ನಗುತ್ತ ನಿಂತಿದ್ದಾರೆ
"ಏನು ಸಾರ್ ನಿಮ್ಮ ಮನೆ ವಿದಾನಸೌದದ ತರ ಆಗಿಹೋಗಿದೆ, ಎಲ್ಲ ಪಕ್ಷದವರು ಬರುತ್ತ ಇದ್ದಾರೆ, ಪುಣ್ಯವಂತರು ಬಿಡಿ "  . ದ್ವನಿಯಲ್ಲಿ ವ್ಯಂಗ್ಯ
ನಾನು ಹೇಳಿದೆ
"ಅದೆ ಚಿದಂಬರ್, ನನಗು ಅರ್ಥವಾಗುತ್ತಿಲ್ಲ, ಇಲ್ಲಿಯವರೆಗು ರಸ್ತೆಗೆ ಬರದ ಎಲ್ಲ ಅಭ್ಯರ್ಥಿಗಳು ನನ್ನ ಮನೆಗೆ ಬಂದಿದ್ದಾರೆ, ಆದರೆ ವಿಚಿತ್ರವೆಂದರೆ ಬಂದವರೆಲ್ಲ , ನನಗೆ ಮತಹಾಕಬೇಡಿ ಅಂತ ಹೇಳಿ ಹೋದರು, ನನಗೆ ಇದರ ಮರ್ಮ ಏನು ಅಂತಾನೆ ಅರ್ಥವಾಗುತ್ತಿಲ್ಲ"
ಅಂದೆ ಸಪ್ಪೆಯಾಗಿ, . ಚಿದಂಬರ್ ಜೋರಾಗಿ ನಗುತ್ತಿದ್ದರು.
"ಏಕೆ ಅರ್ಥವಾಗುತ್ತಿಲ್ಲವೆ, ಮೊನ್ನೆ ನೀವು ರಸ್ತೆಯಲ್ಲಿ ಮಾತನಾಡುತ್ತ ನಿಂತಾಗ ಏನು ಹೇಳಿದಿರಿ ನೆನಪಿಸಿಕೊಳ್ಳಿ" ಎಂದರು
ನನಗೆ ನೆನಪೆ ಬರಲೊಲ್ಲದು, ಆಶ್ಚರ್ಯದಿಂದ ಚಿಂತಿಸಿದೆ ಕಡೆಗೆ ಹೇಳಿದೆ
"ಗೊತ್ತಾಗುತ್ತಿಲ್ಲ, ಚಿದಂಬರ್, ನಿಮ್ಮ ಹತ್ತಿರ ನಾನು ಏನು ಹೇಳಿದೆ ಅದಕ್ಕು ಈದಿನದ ಸಂಗತಿಗು ಏನು ಸಂಬಂಧ" ಎಂದೆ
"ಸಂಬಂಧವಿದೆ, ನೀವು ಮೊನ್ನೆ ಗೇಟಿನ ಹತ್ತಿರ ನಿಂತು ಮಾತನಾಡುವಾಗ, ಕೊನೆಮನೆ ಸುಬ್ಬರಾಯರ ಹತ್ತಿರ, ಏನು ಹೇಳಿದಿರಿ, ನಾನು ಇಪ್ಪತ್ತೊಂದು ವರ್ಷಕ್ಕೆ ಮತ ಹಾಕಲು ಪ್ರಾರಂಬಿಸಿದೆ,  ಇಷ್ಟು ವರ್ಷಗಳಲ್ಲಿ ನಾನು ಮತ ಹಾಕಿದ ಯಾರು ಚುನಾವಣೆಯಲ್ಲಿ ಗೆದ್ದಿಲ್ಲ, ಕೆಲವರಂತು ಡಿಪಾಸಿಟ್ ಸಹ ಕಳೆದುಕೊಂಡಿದ್ದಾರೆ  ಎಂದು ಹೇಳಿದಿರೊ ಇಲ್ಲವೊ " ಎಂದರು ಚಿದಂಬರ್

ನನಗೆ ನೆನಪಿಗೆ ಬಂದಿತು, ಹೌದು, ಮೊನ್ನೆ ಹಾಗೆ ಹೇಳಿದ್ದೆ, ಆದರೆ ಅದು ನಿಜ ಸಹ ಹೌದು, ಇಲ್ಲಿಯವರೆಗು ನಾನು ಮತ ನೀಡಿದ ಅಭ್ಯರ್ಥಿ ಗೆದ್ದ ಪ್ರಸಂಗವೆ ಇಲ್ಲ.
"ಹೌದು ಸಾರ್, ಹೇಳಿದ್ದೆ, ಆದರೆ ಇವರೆಲ್ಲ ಹೇಗೆ ಬರುತ್ತಿದ್ದಾರೆ" ಎಂದೆ
"ಅಲ್ಲೆ ಸಾರ್ ಇರುವುದು ಮರ್ಮ, ನೀವು ಹೋಗಿ ಹೋಗಿ ಸುಬ್ಬನ ಹತ್ತಿರ ಹೇಳಿದಿರ, ಅವನು ಮೊದಲೆ ಕಹಳೆ ಇದ್ದ ಹಾಗೆ, ನಿಮ್ಮ ಮಾತು ಕಹಳೆಗೆ ಮುತ್ತಿಕ್ಕಿದ ಹಾಗೆ,  ಒಳ್ಳೆ ಗಾಳಿ ಆಡುವ ಜಾಗದಲ್ಲಿ ಮೀನಿನ ಬುಟ್ಟಿ ತರ ಎಲ್ಲಕಡೆ ನಿಮ್ಮ ಮಾತು ಹರಡಿ ಹೋಯಿತು, ಸುಬ್ಬನ ಸ್ವಭಾವನೆ ಅದು, ಅವನು ತನ್ನ ಮನೆಗೆ ಮತ ಪ್ರಚಾರಕ್ಕೆ ಬರುವರ ಹತ್ತಿರವೆಲ್ಲ ಇದೆ ಸುದ್ದಿ ಪದೆ ಪದೆ ಹೇಳಿ ಎಲ್ಲರಲ್ಲು ಭಯ ಹುಟ್ಟಿಸಿದ್ದಾನೆ, ಹಾಗಾಗೆ, ಎಲ್ಲ  ಅಭ್ಯರ್ಥಿಗಳು, ಎಷ್ಟು ಹೆದರಿದ್ದಾರೆ ಅಂದರೆ ನೀವು ಅವರಿಗೆ ಮತ ಹಾಕದಿದ್ದರೆ ಸಾಕು ಅಂತ ಪ್ರಾರ್ಥಿಸುತ್ತಿದ್ದಾರೆ ದೇವರಲ್ಲಿ" ಎಂದರು ಚಿದಂಬರ್
ಎಲಾ ಸುಬ್ಬ ಎಂತ ಕೈಕೊಟ್ಟೆಯಯ್ಯ, ಎಂದು ನೆನೆಯುತ್ತ, ಆಗಲೆ ಒಂಬತಾಯಿತು ಮತ ಹಾಕೋಣವೆ ಎಂದು ಹೊರಟೆ.
ಮತ ಕಟ್ಟೆಯ ಹತ್ತಿರ ಎಲ್ಲ ನನ್ನ ಕಡೆಯೆ ನೋಡುತ್ತಿದ್ದರು, ಅಲೋಕ್, ಹಾಗು ಮಹಾದೇವ ಅಲ್ಲಿಯೆ ದೂರದಲ್ಲಿ ನಿಂತಿದ್ದರು, ಇಬ್ಬರು ದೂರದಿಂದಲೆ ನನಗೆ ಕೈ ಮುಗಿದು, ದಯಮಾಡಿ ನನಗೆ ಮತ ಹಾಕಬೇಡಿ ಎಂದು ತಲೆ ಅಡ್ಡಡ್ಡ ಹಾಕುತ್ತ ಪ್ರಾರ್ಥಿಸುತ್ತಿರುವಂತೆ , ನಾನು ಮತದಾರ ಪ್ರಭು, ಭೂತ್ ನಂ ಆರರೊಳಗೆ ಪ್ರವೇಶಿಸಿದೆ.
-

No comments:

Post a Comment

enter your comments please