Sunday, September 22, 2013

ಕೃಷ್ಣ..ಕೃಷ್ಣ..ಕೃಷ್ಣ.. - ಕೃಷ್ಣ - ಪೂತನಿ

ಕೃಷ್ಣ..ಕೃಷ್ಣ..ಕೃಷ್ಣ.. (7) -      ಕೃಷ್ಣ - ಪೂತನಿ
ಇಲ್ಲಿಯವರೆಗೂ...
ಗಣೇಶ
"ಬಹುಶಃ ನೀನು ಗೋಕುಲದಲ್ಲಿ ಇದ್ದದ್ದು ಕಂಸನಿಗೆ ತಿಳಿಯಿತು ಅನ್ನಿಸುತ್ತೆ, ಹಾಗಾಗಿ ನಿನ್ನ ಮೇಲೆ ಆಕ್ರಮಣ ಪ್ರಾರಂಭವಾಗಿರಬಹುದು,   ಆ ಪೂತನಿ ಮುಂತಾದವರೆಲ್ಲ ನಿನ್ನನ್ನು ಕೊಲ್ಲಲು ಬರುವಾಗ ನಿನಗೆ ಭಯ  ಅನ್ನಿಸಲಿಲ್ಲವೆ?  . ನೀನು ಅವಳನ್ನು ರಕ್ತ ಹೀರಿಯೆ ಕೊಂದುಬಿಟ್ಟೆಯಂತೆ!"  


ಗಣಪನ ದ್ವನಿಯಲ್ಲಿ ಆಶ್ಚರ್ಯ.
----------------


ಮುಂದುವರೆಯುವುದು…..


ಕೃಷ್ಣ ಸಹ ಆಶ್ಚರ್ಯದಿಂದಲೆ ಕೇಳಿದ
"ಭಯವೆ, ನನಗೆ ಭಯ ಆಗುವ ವಯಸ್ಸೆ   ಗಣೇಶ, ನಾನು ಆಗಿನ್ನು ಹಾಲು ಕುಡಿಯುವ ಕೂಸು, ಮೂರು ಅಥವ ಆರು ತಿಂಗಳಿರಬಹುದು ಅನ್ನಿಸುತ್ತೆ. ನಾನು  ಆ  ಘಟನೆ ಬಗ್ಗೆ ಅಮ್ಮ  ಯಶೋದೆಯಿಂದ ಕೇಳಿರುವೆ. ನನ್ನನ್ನು ಕೊಲ್ಲಲೆಂದೆ ಕಂಸನಿಂದ ನಿಯೋಜನೆ ಗೊಂಡವಳಂತೆ. ತನ್ನ ಎದೆಗೆ ಅತಿ ಘೋರವಾದ ವಿಷವನ್ನು ಹಚ್ಚಿ ನನಗೆ ಹಾಲು ಕುಡಿಸಲು ಬಂದವಳು ಅವಳು. ನನ್ನನ್ನು ತೊಟ್ಟಿಲಿನಿಂದ ಎತ್ತಿಕೊಂಡು  ಯಾವುದೋ ಮರೆಯಲ್ಲಿ ಕುಳಿತಳು ಎಲ್ಲರಿಂದ ಮರೆಯಾಗಿ. ...
ಪ್ರಾಯಶಃ  ನಾನು ಆ ಹಾಲು ಕುಡಿಯಲೆ ಇಲ್ಲ,  ಆಕೆಯ ಎದೆಗೆ ಬಾಯನ್ನು ಸೋಕಿಸಲೆ ಇಲ್ಲ ಅನ್ನಿಸುತ್ತೆ, ಆ ವಿಷ ಎಂತಹ ಘೋರವೆಂದರೆ ಆದು ಅವಳ ದೇಹವನ್ನೆ ಪ್ರವೇಶಿಸಿ ಜೀವ ತೆಗೆದಿದೆ . ನಾನು ಯಾವ ಅರಿವು ಇಲ್ಲದೆ ಆಕೆಯ ದೇಹದ ಮೇಲೆ ಆಡುತ್ತಿರುವಾಗ ಅಮ್ಮನೊ ಯಾರೊ ನೋಡಿರಬಹುದು.  ಆ ಪೂತನಿ ಎಂಬಾಕೆಗೆ  ವಿಷವನ್ನು ಪ್ರಯೋಗಿಸುವ ಕಲೆ ಬಹುಶಃ  ತಿಳಿದಿರಲಿಲ್ಲವೇನೊ ಹಾಗಾಗಿ ಅವಳು ತಂದ ವಿಷಕ್ಕೆ ಅವಳೆ ಬಲಿಯಾಗಿ ಹೋದಳೇನೊ, ಅದೃಷ್ಟ ನನ್ನನ್ನು ಕಾಪಾಡಿದೆ"


ಗಣೇಶ ಕೃಷ್ಣನ ಮಾತುಗಳನ್ನು ಕೇಳಿ ಯೋಚಿಸುತ್ತ ಇದ್ದ.


ಕೃಷ್ಣ ತನ್ನ ಮಾತನ್ನು ಮುಂದುವರೆಸಿದ


"ಈ ಹೆಣ್ಣು ಮಕ್ಕಳ ಮನಸ್ಸು ಯೋಚಿಸುವ ದಾರಿಯೆ ವಿಚಿತ್ರ ಅಲ್ಲವೆ ಗಣೇಶ. ಪೂತನಿ ಅಷ್ಟು ಕಷ್ಟ ಪಡುವ ಬದಲಿಗೆ ತಾನು ತಂದಿದ್ದ ವಿಷವನ್ನು ಸ್ವಲ್ಪ ಮಾತ್ರ ತನ್ನ ಕೈಯಿಂದಲೆ ತೊಟ್ಟಿಲಲ್ಲಿಯೆ  ಮಲಗಿದ್ದ ನನ್ನ ಬಾಯಿಗೆ ಹಾಕಿ ಹೊರಟು ಹೋಗಬಹುದಿತ್ತು. ಆದರೆ ಆಕೆ ಅಂತಹ ವಿಷವನ್ನು ತನ್ನ ಎದೆಗೆ ಹಚ್ಚಿ ಅದನ್ನು ನನ್ನ ಬಾಯಿಗಿಡುವ ಕೆಲಸಕ್ಕೆ ಏಕೆ ಹೊರಟಳು ನನಗೆ ಅರ್ಥವಾಗುವದಿಲ್ಲ. ಕೊಲೆ ಮಾಡಲು ಬಂದಿರುವಾಗಲು ಆಕೆಯ ತಾಯ ಹೃದಯ ಕೆಲಸ ಮಾಡುತ್ತಿತ್ತಾ??"  
ಕೃಷ್ಣನ ದ್ವನಿಯಲ್ಲಿ ಎಂತದೊ ಆರ್ದ್ರತೆ.


ಗಣೇಶನ ಕಣ್ಣು ಸಹ  ಒದ್ದೆ ಒದ್ದೆ. ಇಬ್ಬರ  ಮನದಲ್ಲು ಪೂತನಿಯ ಬಗ್ಗೆ ಎಂತದೊ ಒಂದು ಅನುಕಂಪ. ಪಾಪ ಆಕೆ ತನ್ನ ಒಡೆಯ ಕಂಸನ ಬಲವಂತಕ್ಕೊ ಅಥವ  ಮತ್ತೇನು ಆಸೆಗೊ , ಹಣಕ್ಕೊ ಕೆಲಸ ಮಾಡಲು ಬಂದವಳು ತನ್ನ ಜೀವವನ್ನೆ ತೊರೆದಳು.


ಗಣೇಶ ಕೃಷ್ಣರ ನಡುವೆ ಸ್ವಲ್ಪ ಕಾಲ ಮೌನ ನೆಲೆಸಿತು

ಗಣೇಶ ಮತ್ತೆ ಹೇಳಿದ
"ಬಹುಶಃ ಈ ಘಟನೆಯಿಂದ ನಿನ್ನ ಹೆಸರು ಎಲ್ಲಡೆ ಪ್ರಸಿದ್ದವಾಯಿತು ಅನ್ನಿಸುತ್ತೆ, ಅಲ್ಲವೆ? ಹಾಗೆ ಕಂಸನ ಮನದಲ್ಲು ಒಮ್ಮೆ ನಿನ್ನ ಬಗ್ಗೆ ಭಯ ಬಂದಿರಲು ಸಾಕು, ನಂತರ ಅವನು ನಿನ್ನನ್ನು ಕೊಲ್ಲಲ್ಲು ಹೇಗೆಲ್ಲ ಪ್ರಯತ್ನಿಸಿದ?"


ಕೃಷ್ಣ
"ನಿನ್ನ ಮಾತು ನಿಜ ಗಣೇಶ, ಒಮ್ಮೆ ಪೂತನಿಯ ಮರಣದ ನಂತರ ಅದು ಹೇಗೊ ನಾನು ಅವಳನ್ನು ಕೊಂದೆ ಎನ್ನುವ ಸುದ್ದಿ ಎಲ್ಲಡೆಯು ಪ್ರಸಾರವಾಯಿತು. ಎಲ್ಲರಿಗೂ ನನ್ನನ್ನು ಕಂಡರೆ ಭಯ ಮಿಶ್ರಿತ ಪ್ರೀತಿ , ಚಿಕ್ಕ ಮಗು ಎನ್ನುವ ಮುದ್ದು ಜೊತೆ ಜೊತೆಗೆ ಇವನು ಚಿಕ್ಕ ಮಗುವಲ್ಲ ‘ತನ್ನನ್ನು ತಾನೆ ಕಾಪಾಡಿಕೊಳ್ಳ ಬಲ್ಲ ಪುರುಷ ‘ ಎನ್ನುವ ಭಾವ. ನೀನು ಹೇಳುವಂತೆ ಕಂಸನ ಮನದಲ್ಲಿ ಸಹ ಒಂದು ಭಯ ಮೂಡಿರುತ್ತದೆ ಅನ್ನುವುದು ಸತ್ಯ. ಅವನು ಮತ್ತಷ್ಟು ಗಂಭೀರವಾಗಿ ನನ್ನನ್ನು ಕೊಲ್ಲಲ್ಲು  ಮನಸು ಮಾಡಿದ ಅನ್ನಿಸುತ್ತೆ.
ತಂದೆಗೆ ನಂದಗೋಪನಿಗೆ  ನನ್ನನ್ನು ಕಂಡರೆ ಪ್ರೀತಿ   ಜೊತೆಗೆ ಒಂದು ಭಯವು ಇತ್ತು ಅನ್ನಿಸುತ್ತೆ,  ನಾನು ಅವತಾರ ಪುರುಷ ಎಂದು ಆಗಲೆ ಪ್ರಚಾರವಾಗಿತ್ತು, ಆದ್ದರಿಂದ ನನ್ನನ್ನು ಎಚ್ಚರಿಕೆಯಿಂದಲೆ ಗಮನಿಸುತ್ತಿದ್ದರು. ಆದರೆ ಆ ಎಲ್ಲ ಭಾವಗಳ ನಡುವೆ ಅಮ್ಮ ಯಶೋದೆ ಮಾತ್ರ ನಿರಾಳವಾಗಿದ್ದಳು, ಅವಳು ಯಾರು ಹೇಳುವದನ್ನು ನಂಬಲೆ ಇಲ್ಲ, ತನ್ನ ಮಗುವಿನ ಮೇಲೆ ಏನೇನೊ ಕತೆ ಕಟ್ಟಿ ಹೇಳುತ್ತಿದ್ದಾರೆ ಅದರಿಂದ ಆ ಮಗುವಿಗೆ ಏನು ತೊಂದರೆಯೊ ಎಂದು ಅಂದುಕೊಳ್ಳುತ್ತಿದ್ದಿದ್ದೆ ಜಾಸ್ತಿ ಅನ್ನಿಸುತ್ತೆ, ಅದಾದರೆ ಶುದ್ದ ತಾಯಿಯ ಹೃದಯ"  
ಎಂದು ನುಡಿದು ನಕ್ಕ.


ಗಣೇಶ ಹೇಳಿದ


"ಅಲ್ಲಿಗೆ ಕಂಸನಿಗೆ ದೇವಕಿಯ ಮಗು ಅಂದರೆ ನೀನು ಗೋಕುಲದಲ್ಲಿ ಬೆಳೆಯುತ್ತಿದ್ದೀಯ ಎಂದು ತಿಳಿದಿತ್ತಾ ? ಹಾಗಾಗಿ ನಿನ್ನನ್ನು ಕೊಲ್ಲಲ್ಲು ಪ್ರಯತ್ನಿಸಿದನ? ಹಾಗೆ ಪೂತನಿಯ ನಂತರ ನಿನ್ನನ್ನು ಕೊಲ್ಲಲು ಯಾರು ಯಾರು ಬಂದರು ?"


ಕೃಷ್ಣ ಹೇಳಿದ
"ಇಲ್ಲ ಹಾಗೇನು ಇಲ್ಲ ಕಂಸನಿಗೆ ನಾನು ಗೋಕುಲದಲ್ಲಿ ಇರಬಹುದೆಂಬ ವಿಷಯ ತಿಳಿದಿರಲಿಲ್ಲವೇನೊ ,  ಹಾಗೊಮ್ಮೆ ತಿಳಿದಿದ್ದರು ನೇರವಾಗಿ ಅವನು ನಮ್ಮ ಸಾಕು ತಂದೆ ನಂದಗೋಪನನ್ನು ಎದುರಿಸಲು ಕಷ್ಟವಿತ್ತು.  ಹಾಗೆ ಆದಲ್ಲಿ  ಗೋಪಾಲರೆಲ್ಲ ಕಂಸನಿಗೆ ತಿರುಗಿ ಬೀಳುತ್ತಿದ್ದರು. ಆಗ ಕಂಸನ ರಾಜ್ಯದಲ್ಲಿ ಹಾಲು ಮೊಸರುಗಳದೆ ಮುಖ್ಯ ವ್ಯಾಪಾರ. ಅವನಿಗೆ ಒಂದು ಭಯವಿತ್ತು ದೇವಕಿಯ ಮಗು ಹೇಗೊ ಸೆರೆಯಿಂದ ತಪ್ಪಿಸಿ ಹೊರಹೋಗಿದೆ ಅನ್ನುವ ಅನುಮಾನವಿತ್ತು. ಹಾಗಾಗಿ ಅವನು ಪೂತನಿಯಂತ ಹೆಂಗಸರನ್ನು, ಮತ್ತು ಕೆಲವು ಆಯ್ದ ಸೈನಿಕರನ್ನು ತನ್ನ ದೇಶಾದ್ಯಂತ ಕಳಿಸಿ, ಒಂದು ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳನ್ನೆಲ್ಲ ಹುಡುಕಿ ಕೊಲ್ಲುವಂತೆ ಹೇಳಿ ಕಳಿಸಿದ್ದ.  
   ಕಂಸ ಕಳಿಸಿದ್ದ ಎನ್ನುವ ವಿಷಯ ಎಲ್ಲರೂ ಊಹಿಸಿದ್ದರು, ಆದರೂ  ಅದು ರಹಸ್ಯವೆ ಆಗಿತ್ತು.  ಪೂತನಿಯು ನನ್ನ ಕೈಲಿ ಮರಣಿಸಿದಳು  ಎನ್ನುವ ಸುದ್ದಿ ತಿಳಿದೊಡನೆ ಅವನು ನನ್ನ ಕಡೆ ಗಮನ ಹರಿಸಿದ ಅನ್ನಿಸುತ್ತೆ. ಹಾಗಾಗಿ ಮತ್ತೆ ಶಟಕಾಸುರ, ತ್ರಿನಾವರ್ಥ ಎನ್ನುವ ಹಲವು ಜನರನ್ನು , ನನ್ನನ್ನು ಕೊಲ್ಲಲ್ಲು ನಿಯಮಿಸಿದ. ಆದರೆ ಪ್ರತಿ ಸಾರಿಯು ನಾನು ಅದೃಷ್ಟ ಬಲದಿಂದ ತಪ್ಪಿಸಿಕೊಳ್ಳುತ್ತಲೆ ಹೋದೆ. ಒಮ್ಮೆ ಮನೆಯ ಹೊರಗೆ ಅಮ್ಮನ ಜೊತೆಗಿದ್ದ  ನನ್ನ ಮೇಲೆ ಗಾಡಿಯನ್ನು ಹರಿಸಿ ಕೊಲ್ಲಲು ಶಟಕಾಸುರ   ಪ್ರಯತ್ನಿಸಿದ ಆದರೆ ಅದು ಹೇಗೊ ನಾನು ತಪ್ಪಿಸಿಕೊಂಡು ಅವನೆ ಗಾಡಿ ಉರುಳಿ ತನ್ನ ಪ್ರಾಣ ತೆತ್ತಿದ್ದ. ಹಾಗೆ ತ್ರಿನಾವರ್ಥ ಎನ್ನುವ ಮನುಷ್ಯ ಸಹ ಅಷ್ಟೆ  ನನ್ನನ್ನು ಕೊಲ್ಲಲು ಬಂದು ತಾನೆ ಮರಣಿಸಿದ"


ಗಣೇಶ
"ಕೃಷ್ಣ ನನಗೆ ಇನ್ನು ಒಂದು ಅನುಮಾನ ಎಲ್ಲರು ಹೇಳುವಂತೆ, ಕಂಸ ನಿನ್ನನ್ನು ಕೊಲ್ಲಲು ನೀನು ಚಿಕ್ಕ ಮಗುವಿರುವಾಗ ಹಲವು ಸಾರಿ ಪ್ರಯತ್ನಿಸಿದವನು , ನಂತರ ನೀನು ಬಾಲ್ಯವನ್ನು ಕಳೆದು ದೊಡ್ಡ ಹುಡುಗನಾಗಿ ಮಥುರೆಗೆ ಹೋಗುವವರೆಗು ನಿನ್ನ ತಂಟೆಗೆ ಬರಲಿಲ್ಲ ಏಕೆ ? "


ಕೃಷ್ಣ


"  ಕಂಸ ನನ್ನನ್ನು ಕೊಲ್ಲಲು ಪ್ರಯತ್ನಿಸಿದ ಎಂದು ಎಲ್ಲರು ಹೇಳುವರು, ನಾನು ತೀರ ಚಿಕ್ಕ ಮಗುವಾಗಿರುವಾಗ ಅಂದರೆ ಒಂದು ವರ್ಷದ ಮಗುವಾಗಿರುವಾಗ ಅಷ್ಟೊಂದು ಪ್ರಯತ್ನ ಪಟ್ಟವನು ಯಾವಾಗ ತಾನು ಕಳಿಸಿದ ಎಲ್ಲರು ತಾವೆ ಮರಣ ಹೊಂದಿದರೊ ಆಗ ತನ್ನ ಪ್ರಯತ್ನ ಕೈಬಿಟ್ಟ. ನಾನು ಉಹಿಸುವಂತೆ ಅವನ ಮನದಲ್ಲಿ ಹೃದಯದಲ್ಲಿ ಎಂತದೊ ಒಂದು ಭಯ ಮೂಡಿರಬೇಕು. ಈ ಬಾಲಕನನ್ನು ನಾನು ಕೊಲ್ಲಲಾರೆ ಎನ್ನುವ ಭಾವನೆ ಅವನಲ್ಲಿ ಗಟ್ಟಿಯಾಗಿರಬೇಕು. ಹಾಗೆಂದು ಅವನೆ ಸ್ವತಃ ಬಂದು ಆಕ್ರಮಣ ನಡೆಸಿ ಎಲ್ಲರನ್ನು ಶಿಕ್ಷಿಸಲು ಅದು ಶತ್ರು ರಾಜ್ಯವಲ್ಲ ಅವನದೆ ರಾಜ್ಯ. ತನ್ನ ಪ್ರಜೆಗಳ ವಿರುದ್ದವೆ ಹೇಗೆ ದಾಳಿ ಹೊರಡಿಸುತ್ತಾನೆ. ಪ್ರತ್ಯಕ್ಷವಾಗಿ ನಾನು ದೇವಕಿಯ ಮಗನೆಂದು ಯಾರಿಗು ತಿಳಿದಿರಲಿಲ್ಲ ಯಶೋದೆಯ ಮಗನೆಂದು ಎಲ್ಲರು ಭಾವಿಸಿದ್ದರು. ಹಾಗಿರಲು ಕಂಸ ಒಮ್ಮೆ ನಂದನ ಮೇಲೆ ಯುದ್ದಕ್ಕೆ ಬಂದರೆ ಅದಕ್ಕೆ ಕಾರಣ ಕೊಡಲಾಗದೆ ಅವನ ಪ್ರಜೆಗಳೆ ಅವನ ವಿರುದ್ದವಾಗುತ್ತಿದ್ದರು. ಅಲ್ಲದೆ ನನ್ನ ಕೊಲ್ಲಲು ಕಳಿಸಿದ್ದು ರಹಸ್ಯ ಕಾರ್ಯಾಚರಣೆಯಾಗಿದ್ದು ಅದು ಕಂಸನೆ ಕಳಿಸಿದ್ದು ಎಂದು ಎಲ್ಲರಿಗು ತಿಳಿಯುತ್ತಿತ್ತು . ಅದು ಅವನಿಗೆ ಇಷ್ಟವಿರಲಿಲ್ಲ. ಕಡೆಗೆ ಒಂದೆ ಉಪಾಯ ಎನ್ನುವಂತೆ ಅವನು ದಂಡಯಾತ್ರೆಯ ನೆಪದಲ್ಲಿ ಜರಾಸಂದನ ಜೊತೆ ಹಿಡಿದು ತನ್ನ ರಾಜ್ಯದಿಂದ ಹೊರಟುಬಿಟ್ಟ. ಹೊರಹೋದರೆ ತಾನು ಸುರಕ್ಷಿತ ಎಂದು ಅವನ ಭಾವನೆ ಆಗಿತ್ತೇನೊ. ಪುನಃ ಅವನು ತನ್ನ ದೇಶಕ್ಕೆ ಹಿಂದಿರುಗಿ ಬರುವಾಗ ನನಗೆ ಬಾಲ್ಯ ಮುಗಿದು ಹೋಗುವ ಸಮಯ   "

ಗಣೇಶ
’ಕೃಷ್ಣ ಹಾಗೆ ನನಗೆ ನಿನ್ನ ಬಾಲ್ಯದ ಸಾಹಸಗಳನ್ನು ಕೇಳುವ ಆಸೆ,  ಅರ್ಜುನ ವೃಕ್ಷಗಳನ್ನು ಕೆಡವಿದೆಯಂತೆ, ಎಲ್ಲರ ಮನೆಗೆ ನುಗ್ಗಿ ಬೆಣ್ಣೆ ಕದಿಯುತ್ತಿದ್ದಿಯಂತೆ, ಬೆಣ್ಣೆ ಕಳ್ಳನೆಂದೆ ನಿನ್ನ ಹೆಸರಲ್ಲವೆ ? , ಹಾಗೆ ಕಾಳಿಂಗ ಎಂಬ ಮಹಾಸರ್ಪವನ್ನು ಮಣಿಸಿದೆಯಂತೆ, ಗೋವರ್ಧನ ಗಿರಿಯನ್ನು ಎತ್ತಿದೆಯಂತೆ ಹೀಗೆ ಪುಂಖಾನುಪುಂಖವಾಗಿ ಸಾರುವ ನಿನ್ನ ಸಾಹಸಗಳನ್ನು ನಿನ್ನ ಬಾಯಲ್ಲಿಯೆ ಕೇಳುವ ಆಸೆ "


ಕೃಷ್ಣ
"ಗಣೇಶ , ನಿಜ ಘಟನೆಗಳೆ ಬೇರೆ, ಕವಿ ಕಲ್ಪನೆಗಳೆ ಬೇರೆ ಅಲ್ಲವೆ, ಕವಿಗಳು ಕತೆಯನ್ನು ಬರೆಯುವಾಗ ಅದಕ್ಕೆ ತಮ್ಮ ಕಲ್ಪನೆಗಳನ್ನು ಸೇರಿಸಿಬಿಡುತ್ತಾರೆ ನೋಡು ಕಡೆಗೊಮ್ಮೆ ನಿಜವಾಗಿ ನಡೆದುದ್ದೇನು ಕವಿಯ ಕಲ್ಪನೆ ಏನು ಅನ್ನುವುದು ಸ್ವತಃ ಅನುಭವಿಸಿದವರಿಗೆ ಗೊಂದಲವಾಗಿಬಿಡುತ್ತದೆ"  ಜೋರಾಗಿ ನಕ್ಕ ಕೃಷ್ಣ.


ಗಣೇಶ ಸಹ ನಗುತ್ತ
"ಅಂದರೆ ನೀನು ಹೇಳುವಂತೆ , ಈ ಘಟನೆಗಳಾವುದು ನಡೆಯಲೆ ಇಲ್ಲವೆ ಕೃಷ್ಣ"


ಕೃಷ್ಣ
"ನಡೆಯದೆ ಏನು , ಖಂಡಿತ ನಡೆದಿದೆ ಆದರೆ ಅದನ್ನು ಕಾವ್ಯದ ಬಾಷೆಯಲ್ಲಿ ವರ್ಣಿಸುವಾಗ ಕೆಲವು ಅತಿರೇಖಗಳು ಸೇರಿವೆ ಅಷ್ಟೆ, ಈಗ ನೋಡು ಅರ್ಜುನ ವೃಕ್ಷ ಅನ್ನುವುದು ಆಲದ ಮರದಂತೆ ಬೆಳೆದ ದೊಡ್ಡ ವೃಕ್ಷಗಳೇನಲ್ಲ,   ಹಾಗಿರುವಾಗ ಆ ಗಿಡಗಳು ಸಣ್ಣದಾಗಿರುವಾಗ ಹುಡುಗನೊಬ್ಬ ಅದನ್ನು ಬಲವಂತದಿಂದ ಬುಡಮೇಲು ಮಾಡುವುದು ಕಷ್ಟ ಸಾದ್ಯವೇನಲ್ಲ. ನಾನು ಅಮ್ಮನಿಗೆ ಕೆಲಸ ಮಾಡಲು ಬಿಡುತ್ತಿರಲಿಲ್ಲ, ಯಾವಾಗಲು ತಂಟೆಯೆ ಮಗುವಿನಲ್ಲಿ. ಹಾಗಿದ್ದಾಗ ಅವಳು ಏನು ಮಾಡುತ್ತಾಳೆ, ನನ್ನ ಕಾಲಿಗೆ ಒಂದು ಹಗ್ಗ ಬಿಗಿದು ಅದರ ತುದಿಯನ್ನು ಒರಳ ಮೇಲೆ ಮುಚ್ಚುವ ಮರದ ಪಾತ್ರೆಗೆ ಕಟ್ಟಿ ಬಿಟ್ಟಿದ್ದಳು ನಾನು ಅದು ಹೇಗೆ ಆ ಪಾತ್ರೆಯನ್ನು ಎಳೆಯುತ್ತ ಅಂಗಳದಲ್ಲಿದ್ದ ಗಿಡಗಳ ನಡುವೆ ಅಂಬೆಗಾಲಿಡುತ್ತ ನಡೆಯುವಾಗ, ಅದರ ಬಾರಕ್ಕೆ ಅರ್ಜುನ ವೃಕ್ಷದ ಗಿಡಗಳು ಮುರಿದಿರಲು ಸಾಕು, ನನ್ನ ವಯಸಿಗೆ ಮೀರಿದ ಪ್ರಸಂಗವಾಗಿರಬಹುದು ಅದು ಹಾಗಾಗಿ ಒಂದು ಅದ್ಭುತ ಪರಿಣಾಮ ಬೀರಿರಬಹುದು ಅಮ್ಮ ಅಪ್ಪನ ಮೇಲೆ ,  ಎಲ್ಲರ ಮೇಲೆ "ಗಣೇಶ
"ನಿನ್ನ ತಂದೆ ತಾಯಿಯರಿಗೆ ನಿನ್ನ ಬಗ್ಗೆ ಎಂತಹ ಭಾವವಿತ್ತು. ಅವರು ನಿನ್ನನ್ನು ಶ್ರೀಹರಿಯ ಅವತಾರ ಎಂದು ನಂಬಿದ್ದರ. ಅಥವ ಅವರಿಗೆ ನೀನು ಸಾಮಾನ್ಯ ಬಾಲಕನ?"


ಕೃಷ್ಣ
"ನನ್ನ ಸಾಕು ತಂದೆ ನಂದಗೋಪನ ವಿಷಯ ಹೇಳುವುದು ಕಷ್ಟಕರವೆ. ಬಹುಷಃ ಅವರಿಗೆ ನಾನು ದೇವಕಿ ವಸುದೇವರ ಮಗನೆಂದು ಮೊದಲಿನಿಂದಲು ಗೊತ್ತಿತ್ತು. ಹಾಗಾಗಿ ಅನ್ನಿಸುತ್ತೆ ಅವರು ನನ್ನನ್ನು ಎಂದಿಗು ದಂಡಿಸಲು ಬರಲಿಲ್ಲ. ನಾನು ಎಲ್ಲರ ಮನೆಗೆ ಹೋಗಿ ಬೆಣ್ಣೆ ಕದಿಯುತ್ತೇನೆ ಎನ್ನುವಾಗ ಅಥವ ಹುಡುಗರ ಜೊತೆ ಸೇರಿ ತುಂಟಾಟ ಮಾಡುವಾಗ ಅವರು ನಗುತ್ತಿದ್ದರೆ ವಿನಃ ಎಂದಿಗು ಕೋಪಮಾಡಲಿಲ್ಲ. ಅವರ ಮನದಲ್ಲಿ ನಾನು ರಾಜಮನತನಕ್ಕೆ ಸೇರಿದವನು ಎನ್ನುವ ಗೌರವ ಸದಾ ಇದ್ದೆ ಇತ್ತು ಹಾಗಾಗಿ ನನ್ನ ಜೊತೆ ಒಂದು  ಅಂತರವನ್ನು  ಕಾಯ್ದುಕೊಂಡಿದ್ದರು ಅನ್ನಿಸುತ್ತೆ. ಆದರೆ ನನ್ನ ಸಾಕುತಾಯಿ ಯಶೋದೆಗೆ ನಾನು ಎಂದಿಗು ಸ್ವಂತ ಮಗನೆ ಆಗಿದ್ದೆ. ಅಕ್ಕ ಪಕ್ಕದವರ ದೂರುಗಳು ನನ್ನ ಮೇಲೆ ಬಂದಾಗ, ನನ್ನ ತುಂಟಾಟ ಅತಿಯಾದಾಗ ಅವಳು ನನ್ನನ್ನು ದಂಡಿಸುತ್ತಿದ್ದಳು. ಹಾಗೆ ನನಗೆ ಸ್ವಲ್ಪ ನೋವಾದರು ಕಣ್ಣೀರು ಸುರಿಸುತ್ತಿದ್ದಳು. ನಾನು ಎಲ್ಲರ ಮನೆಯಲ್ಲಿ ಬೆಣ್ಣೆ ಕದಿಯಲು ಹೋಗುತ್ತಿರುವೆ ಎಂದು ತಿಳಿದಾಗ, ಕಣ್ಣೀರು ಹಾಕುತ್ತ ಎಲ್ಲರ ಮನೆಗೆ ಏಕೆ ಹೋಗುವೆ ಮನೆಯಲ್ಲಿರುವ ಹಾಲು ಮೊಸರು ಬೆಣ್ಣೆಗಳನ್ನು ತಿನ್ನಬಾರದೆ ಅನ್ನುತ್ತಿದ್ದಳು. ನಾನು ಕಾಳಿಂಗ ಸರ್ಪವನ್ನು ಕೆಣಕಲು ಹೋಗಿದ್ದು ತಿಳಿದ ನಂತರ ಹೆದರಿ ಕುಳಿತುಬಿಟ್ಟಿದ್ದಳು. ನಾನು ದೇವಕಿಯ ಮಗ ಎಂದು ತಿಳಿದ ನಂತರವು ಅವಳ ಪ್ರೀತಿ ನನ್ನ ಮೇಲೆ ಹಾಗೆಯೆ ಇತ್ತು ಎಂದಿಗು ಕರಗದ ಪ್ರೀತಿ ಅದು.ಗಣೇಶ
ತಾಯಿಯ ಪ್ರೀತಿಯೆ ಹಾಗೆ ಕೃಷ್ಣ ಅಲ್ಲಿ ಅಂತಸ್ತಿನ ಪ್ರಶ್ನೆ ಬರುವದಿಲ್ಲ.   
ಕೃಷ್ಣ ಮರೆತೆ ನೀನು ಒಮ್ಮೆ ತಾಯಿಗೆ ಜಗವನ್ನೆ ತೋರಿದೆಯಂತೆ. ಮಣ್ಣು ತಿನ್ನುತ್ತಿದ್ದವನು ಆ ಎಂದು ಬಾಯಿ ತೆರೆದು ?  


ಗಣೇಶ ನಗುತ್ತ ಕೇಳಿದ. ಕೃಷ್ಣ ಸಹ ನಗುತ್ತಲೆ ಹೇಳಿದ


"ಹೌದಂತೆ. ಪ್ರೀತಿಯ ಅಮ್ಮನಿಗೆ ಮಗನ ಬಾಯಲ್ಲಿ ಜಗವೆ ಕಂಡಿದ್ದರೆ ಆಶ್ಚರ್ಯವೇನಿಲ್ಲ ಬಿಡು. ಮಕ್ಕಳು ಮಣ್ಣು ತಿನ್ನುವುದು ಸಾಮಾನ್ಯ ಹಾಗೆ ನಾನು ತಿಂದಿರುತ್ತೇನೆ. ಅವಳು ಕೋಪದಲ್ಲಿ ಬಾಯಿ ತೆರೆ ಎಂದಾಗ "ಆ~~" ಎಂದು ಬಾಯಿ ತೆಗೆದಿರಲು ಸಾಕು. ಅವಳ ಪ್ರೀತಿಯ ಕಣ್ಣಿಗೆ ನನ್ನ ಬಾಯಲ್ಲಿ ಜಗತ್ತೆ ಕಂಡಿದ್ದರೆ ಆಶ್ಚರ್ಯವೇನಿಲ್ಲ."


ಗಣೇಶ
"ನೋಡು ಹೀಗೆ ನೀನು ಎಲ್ಲದಕ್ಕು ನುಣುಚಿಕೊಳ್ಳುವ ಉತ್ತರವನ್ನೆ ಕೊಡುತ್ತಿ. ಅತ್ತ ಹಾಗೆ ಇತ್ತ ಹೀಗೆ ಎನ್ನುವಂತೆ. ಹೋಗಲಿ ಬಿಡು ನೀನು ಕಾಳಿಂಗ ಸರ್ಪವನ್ನು ಮಣಿಸಿದೆಯಂತೆ. ಅದರ ಹೆಡೆಯ ಮೇಲೆ ನಾಟ್ಯವನ್ನೆ ಆಡಿದೆಯಂತೆ. ಭಾಗವತರ ಎಷ್ಟೊಂದು ಪ್ರಸಂಗಗಳಲ್ಲಿ ಅದರ ವರ್ಣನೆಯಿದೆ. ಆ ಪ್ರಸಂಗವನ್ನೆ ಹೇಳು"


ಕೃಷ್ಣ ನಗುತ್ತ ಹೇಳಿದ
"ನಾನು ನುಣುಚಿಕೊಳ್ಳುತ್ತಿಲ್ಲ ಗಣೇಶ , ನನ್ನ ಮನಸಿನ ಸಾಕ್ಷಿಯಂತೆ ಉತ್ತರಿಸುತ್ತಿದ್ದೇನೆ.  ನೀನು ಯೋಚಿಸಿದರೆ ಸರಿಯಾದ ಉತ್ತರವೆ ಹೊಳೆಯುತ್ತದೆ. ಈಗ ನೋಡು ಕಾಳಿಂಗನ ಪ್ರಸಂಗ ಎತ್ತಿದೆ. ಅದು ಸಾಕಷ್ಟು ದೊಡ್ಡದಿದೆ ಕೇಳುವೆಯ ?"


ಗಣೇಶ ನುಡಿದ
"ನಿನ್ನ ಎಲ್ಲ ಪ್ರಸಂಗವನ್ನು ಕೇಳಲೆಂದೆ ನಾನು ಇಲ್ಲಿ ನಿನ್ನ ಜೊತೆ ಕುಳಿತ್ತಿದ್ದೇನೆ ಹೇಳು ಕೃಷ್ಣ . ವಿವರವಾಗಿಯೆ ಹೇಳು”


ಕೃಷ್ಣ ಹಳೆಯದೆಲ್ಲ ನೆನಪಿಸಿಕೊಳ್ಳುತ್ತಿರುವನಂತೆ ಸ್ವಲ್ಪ ಕಾಲ ಕಣ್ಣು ಮುಚ್ಚಿದ್ದ. ಗಣಪತಿ ಕುತೂಹಲದಿಂದ ಅವನತ್ತಲೆ ನೋಡುತ್ತಿರುವಂತೆ ಕೃಷ್ಣ ಪ್ರಾರಂಬಿಸಿದ.


ಮುಂದುವರೆಯುವುದು….

ಬರೆದಿದ್ದು : ೩-೮-೧೩ ರಿಂದ ೭-೮.೧೩
------------------------------------------------------------------------------------------------------

ಕೃಷ್ಣ ಪೂತನಿ ಚಿತ್ರದ ಕೃಪೆ :
http://krsnabook.com/images/Sb10.2Plate1.jpg


ಕೃಷ್ಣ ಅರ್ಜುನ ವೃಕ್ಷ ಚಿತ್ರದ ಕೃಪೆ : http://www.mount-kailash.com/Mustang/damodarkund/arjunatrees1.jpg

No comments:

Post a Comment

enter your comments please