Monday, September 16, 2013

ಕೃಷ್ಣ..ಕೃಷ್ಣ..ಕೃಷ್ಣ.. - ಕೃಷ್ಣ ದ್ವೇಷ

ಕೃಷ್ಣ..ಕೃಷ್ಣ..ಕೃಷ್ಣ.. (4)-   ಕೃಷ್ಣ ದ್ವೇಷ     



ಗಣೇಶ

‘ನಿನ್ನ ಮಾತು ನಿಜ ಕೃಷ್ಣ.   ಭೂಮಿಯ ಜನರ ಮನಸ್ಸು ಬಹಳ ಸೂಕ್ಷ್ಮ , ಸಣ್ಣ ಕಾರಣವೊಂದು ಸಾಕು ಅವರ ಮೆಚ್ಚುವ ದೈವವನ್ನು ಅವರೇ  ದ್ವೇಷಿಸಲು ‘
ಎನ್ನುತ್ತ ಮತ್ತೆ ಕೇಳಿದ  
"ನಿನ್ನ ಮಾತು ಸರಿ ಕೃಷ್ಣ, ಆದರೆ ಎಲ್ಲಿ ಧರ್ಮಕ್ಕೆ ಕುಂದು ಬರುವುದು, ಆಗ ನಾನು ಮತ್ತೆ ಮತ್ತೆ ಜನ್ಮವೆತ್ತಿ ಅಧರ್ಮವನ್ನು ನಾಶಪಡಿಸಿ ಧರ್ಮವನ್ನು  ಸ್ಥಾಪನೆ ಮಾಡುವೆ ಎನ್ನುವ ನಿನ್ನ ಮಾತಿನ ಕತೆ ಏನು?"
ಕೃಷ್ಣ  
"ಸರಿ ಗಣಪ ನಿನ್ನ ಉದ್ದೇಶ ಅರ್ಥವಾಯಿತು, ಹೇಗೊ ನನ್ನನ್ನು ಮಾತಿನಲ್ಲಿ ಕಟ್ಟಿಹಾಕಲು ಪ್ರಯತ್ನಿಸುತ್ತಿದ್ದಿ, ಇರಲಿ, ಧರ್ಮಕ್ಕೆ ಕುಂದು ಬರುವುದು ಎಂದರೇನು ಗಣೇಶ? ಧರ್ಮವೆಂದರೆ ಯಾವ ಧರ್ಮ ಬರಿ ಹಿಂದೂ ಧರ್ಮವೆ, ಪ್ರಪಂಚದಲ್ಲಿ ದೇವರಡೆಗೆ ನಮ್ಮನ್ನು ನಡೆಸುವ ಹಲವಾರು ಧರ್ಮಗಳಿವೆ ಅಲ್ಲವೆ, ಎಲ್ಲವು ಆ ದಿವ್ಯಶಕ್ತಿಗೆ ಸೇರಿರುವುದೆ ಅಲ್ಲವೆ, ಹಾಗಾದಾಗ ಯಾವುದೆ ಧರ್ಮಕ್ಕೆ ಕುಂದು ಬಂದರು ನಾನು ಅವತಾರವೆತ್ತಲೆ ಬೇಕಲ್ಲವೆ. ಮತ್ತೆ  ಅವತಾರವೆನ್ನುವುದು ಭಾರತಕ್ಕೆ ಮಾತ್ರ ಸೀಮಿತವಾಗಬೇಕೆ, ಇಲ್ಲಿ ಮಾತ್ರ ಅಧರ್ಮ ತಾಂಡವ ಆಡುತ್ತಿದೆಯೆ, ಅಧರ್ಮ ಎನ್ನುವುದು ಭೂಮಿಯಲ್ಲಿ ಎಲ್ಲಿಯೆ ಹೆಚ್ಚಿದ್ದರು , ಅವತಾರವಾಗಬೇಕಲ್ಲವೆ.
 ಈ ಎಲ್ಲ ಮಾತುಗಳನ್ನು ಯೋಚಿಸಿದಾಗ, ಹೊಳೆಯುವುದು ಏನು? ಅಧರ್ಮವನ್ನು ಎದುರಿಸಲು, ಪ್ರತಿ ಮನುಷ್ಯನು ಸಜ್ಜಾಗಬೇಕಲ್ಲವೆ, ಹಾಗೆ ಸಿದ್ದವಾಗುವಾಗ, ಅವನು ತಾನು ಸಹ  ಧರ್ಮವನ್ನು ಪಾಲಿಸಬೇಕಲ್ಲವೆ, ಹಾಗೆ ಮಾಡಿದರೆ ಅವನು ಅವತಾರಪುರುಷನೆ ಆಗುವನು. ಆದರೆ ಹಾಗೆ ಆಗುವದಿಲ್ಲ, ಹೀಗೆ ಕೆಲವು ಅವಧೂತರೊ, ಅಂಶಪುರುಷರೊ ತಾವು  ಮನುಷ್ಯನ ಅವನತಿಯನ್ನು ಎದುರಿಸಿ ಅವನನ್ನು ಮೇಲೆತ್ತಲು ಪ್ರಯತ್ನಪಡುವರು, ಆಗ ಅವರು ದೈವಿಪುರುಷರಾಗುವರು. ಎಲ್ಲರ ಜವಾಬ್ದಾರಿಯನ್ನು ತಲೆಯಮೇಲೆ ಹೊತ್ತು, ಕಡೆಯಲ್ಲಿ ತಮ್ಮ ಕೆಲಸದಲ್ಲಿ ಅರ್ಧ ಸಫಲತೆಯನ್ನೊ ವಿಫಲತೆಯನ್ನೊ ಕಾಣುತ್ತ ಎಲ್ಲರಿಂದಲು ನಿಂದನಗೆ ಒಳಗಾಗುವರು. ನನ್ನ ವಿಷಯದಲ್ಲಿ ಆಗುತ್ತಿರುವುದು ಇದೆ ಅಲ್ಲವೆ, ನನ್ನ ಕ್ರಿಯೆಗಳಿಗೆಲ್ಲ ನಿರಂತರ ನಿಂದನೆಯನ್ನು ದ್ವೇಷವನ್ನು ಎದುರಿಸಬೇಕಾಗಿದೆಯಲ್ಲವೆ"


ಕೃಷ್ಣನ ಮುಖದಲ್ಲಿ ಯಾವುದೊ ವಿಷಾದ ಎದ್ದು ಕಾಣುತ್ತಿತ್ತು. ಗಣೇಶ ಎಂದ


"ನಿಜ ಕೃಷ್ಣ. ಯಾರು ಲೋಕೋದ್ದಾರದ, ಪರೋಪಕಾರದ ಕೆಲಸಗಳಿಗೆ ಕೈ ಹಾಕುತ್ತಾರೊ ಅವರು ಕಡೆಯಲ್ಲಿ ನಿಂದನೆ, ದ್ರೋಹದ ಆಪಾದನೆ ಇಂತಹುದನ್ನೆಲ್ಲ ಎದುರಿಸುತ್ತಾರೆ ಅನ್ನುವುದು ಬಹುತೇಕ ಸತ್ಯ. ಅದಕ್ಕೆ ನೀನು ಹೊರತಲ್ಲ . ನಿನ್ನನ್ನು ಹಾಡಿ ಹೊಗಳುವ ಭಾಗವತರು, ಭಕ್ತರು ಹೇಗೆ ಇರುವರೊ, ಹಾಗೆ ನಿನ್ನ ನಡೆ ನುಡಿಗಳನ್ನು ಭೂತಗನ್ನಡಿಯಲ್ಲಿ ನೋಡುತ್ತ , ತಪ್ಪುಗಳನ್ನು ಎತ್ತಿತೋರುತ್ತ, ನಿನ್ನವತಾರವನ್ನೆ ನಿನ್ನ ಕೃತ್ಯಗಳನ್ನೆ ಪ್ರಶ್ನಿಸುವರಿದ್ದಾರೆ ಅನ್ನುವುದು ಸತ್ಯವಲ್ಲವೆ. ಅಷ್ಟೇಕೆ ಇಂದಿಗು ನಿನ್ನನ್ನು ದ್ವೇಷಿಸುವರಿದ್ದಾರೆ ಅನ್ನುವುದು ನನಗೆ ಆಶ್ಚರ್ಯ ತರುತ್ತದೆ ಕೃಷ್ಣ. ಅದೇಕೆ ಹಾಗೆ?"


ಕೃಷ್ಣನ ದ್ವನಿಯಲ್ಲಿ ನಿರಾಸಕ್ತಿ


"ಗಣೇಶ, ನಿನ್ನ ಮಾತು ನಿಜ ನನ್ನನ್ನು ದ್ವೇಷಿಸುವರು ಇದ್ದಾರೆ ಅನ್ನುವುದು ಸತ್ಯ, ಒಪ್ಪಲೆ ಬೇಕಾದ ಮಾತು.  ಅಷ್ಟೆ ಏಕೆ ಗಣೇಶ, ನಾನು ಹುಟ್ಟುವ ಎಷ್ಟೋ ಕಾಲಕ್ಕೆ ಮೊದಲೆ ನನ್ನ ಮೇಲೆ ದ್ವೇಷಭಾವ ಹುಟ್ಟಿತು. ಕೃಷ್ಣನು ಹುಟ್ಟುವ ಮೊದಲೆ ಕೃಷ್ಣನ ಮೇಲಿನ ದ್ವೇಷ ಹುಟ್ಟಿತು ಅಲ್ಲವೆ ?" ಎಂದ ಜೋರಾಗಿ ನಗುತ್ತ.


ಗಣೇಶನಿಗೆ ಸ್ವಲ ಅನುಮಾನ ಸ್ವಲ್ಪ ಗೊಂದಲ


"ಇದೆಂತಹ ಮಾತು ಕೃಷ್ಣ, ನೀನು ಹುಟ್ಟುವ ಮೊದಲೆ ನಿನ್ನ ಮೇಲೆ ದ್ವೇಷ ಹುಟ್ಟಲು ಹೇಗೆ ಸಾದ್ಯ ಹೇಳು. ನಿನ್ನ ಇರುವಿಕೆಯೆ ಇಲ್ಲದೆ, ಕ್ರಿಯೆಯೆ ಇಲ್ಲದೆ ಪ್ರತಿಕ್ರಿಯೆಯೆ. ಅಸಾದ್ಯವಾದ ಮಾತನ್ನು ನೀನು ಹೇಳುತ್ತಿದ್ದೀಯ"


ಕೃಷ್ಣ ಎಂದ ನಗುತ್ತ


"ಗಣೇಶ ನೀನು ಜಾಣತನದ ಮಾತು ಆಡುತ್ತಿರುವೆ, ಮಹಾಭಾರತವನ್ನೆ ಕುಳಿತು ಬರೆದವನು ನೀನು ಅಲ್ಲವೆ, ಹಾಗಿದ್ದರು, ನನ್ನ ಬಾಯಲ್ಲಿ ನುಡಿಸುವ ಚಾತುರ್ಯ ನಿನ್ನದು. ಇರಲಿ ಹೇಳುವೆ. ನನ್ನ ಕತೆ ನಿನಗೆ ತಿಳಿಯದೆನು, ನನ್ನ ತಾಯಿ ದೇವಕಿ ಹಾಗು ತಂದೆ ವಸುದೇವರ ಮದುವೆಯ ಸಮಾರಂಭ ನಡೆದಿತ್ತು, ಮೆರವಣಿಗೆಯ ಸಮಯದಲ್ಲಿ ಒಂದು ಅಶರೀರವಾಣಿಯಾಯಿತಂತೆ, ಅವರ ಎಂಟನೆ ಪುತ್ರನಿಂದ , ನಮ್ಮ ತಾಯಿಯ ದೇವಕಿಯ ಅಣ್ಣ   ಅಂದರೆ ನನಗೆ ಮಾವನಾಗಬೇಕಾದ ಕಂಸನ ವಧೆ ನನ್ನ ಕೈಯಿಂದ ಆಗುವದೆಂದು. ಆ ಕ್ಷಣ ಕಂಸನಿಗೆ ನನ್ನ ಬಗ್ಗೆ ಭಯ, ದ್ವೇಷ ಪ್ರಾರಂಭ . ನಮ್ಮ ತಾಯಿ ತಂದೆಯರನ್ನು ಸೆರೆಮನೆಯಲ್ಲಿ ಬಂದಿಸಿಟ್ಟ. ನನಗೆ ಮುಂಚೆ ಹುಟ್ಟಿದ ಅಮಾಯಕ ಹೆಣ್ಣುಮಕ್ಕಳು ಆಗಷ್ಟೆ ಕಣ್ಣು ಬಿಟ್ಟಿರದ ಅವುಗಳನ್ನು ಕೊಂದು ಹಾಕಿದ, ನನ್ನ ಹುಟ್ಟಿಗಾಗಿ ಕಾದು ಕುಳಿತಿದ್ದ, ನನ್ನ ಕೊಲ್ಲುವ ದ್ವೇಷದಿಂದ, ಈಗ ಹೇಳು ಗಣೇಶ ನಾನು ಹುಟ್ಟುವ ಮೊದಲೆ ನನ್ನ ಮೇಲಿನ ದ್ವೇಷ ಹುಟ್ಟಲಿಲ್ಲವೆ.ನಾನು ಯಾವ ಕ್ರಿಯೆ ಮಾಡುವದಕ್ಕೆ ಮೊದಲೆ ಕಂಸ ನನ್ನನ್ನು ದ್ವೇಷಿಸಲಿಲ್ಲವೆ, ಅಂತಹ ದ್ವೇಷ   ನನ್ನ ಜೀವನದ ಜೊತೆ ಜೊತೆಗೆ ಇರಲಿಲ್ಲವೆ, ಈಗ ನನ್ನ ಅವತಾರದ ನಂತರವು ಈಗಲು ನನ್ನ ದ್ವೇಷಿಸುವರು ಇದ್ದಾರೆ ಅನ್ನುವಾಗ ನನಗೆ ಅಂತಹ ವೇದನೆ ಏನು ಆಗದು ಬಿಡು" ಎಂದ


ಗಣೇಶ


"ಅದು ಹಾಗಲ್ಲ ಕೃಷ್ಣ, ಕಂಸನ ದ್ವೇಷ ಬಿಡು ಅದು ಭಯದ ಮೂಲದಿಂದ ಹುಟ್ಟಿದ್ದು, ನಿನ್ನ ಜೀವಿತಕಾಲದ ದ್ವೇಷ ಬಹುತೇಕ ಆಗಿನ ರಾಜಕೀಯ ಸ್ವರೂಪದ್ದು. ಆದರೆ ಈಗ ನೀನು ಎದುರಿಗೆ ಇಲ್ಲ ಎನ್ನುವಾಗ, ತಮ್ಮೆದಿರು ಬಂದು ನೀನು ಅವರಿಗೆ ಉತ್ತರಿಸಲಾರೆ ಎಂದು ತಿಳಿದಿರುವಾಗಲು ನಿನ್ನ ಬಗ್ಗೆ  ಅನುಚಿತವಾಗಿ ಅತಾರ್ಕಿಕವಾಗಿ ಮಾತನಾಡುವುದು ದ್ವೇಷಿಸುವುದು ತಪ್ಪಲ್ಲವೆ ಕೃಷ್ಣ. ಯಾವ ವ್ಯಕ್ತಿ ಎದುರಿಗೆ ಬಂದು ತನ್ನನ್ನು ತಾನು ಸಮರ್ಥಿಸಿಕೊಳ್ಳಲಾರನೊ ಅವನನ್ನು ದ್ವೇಷಿಸುವುದು ನಿಂದಿಸುವುದು ಸರಿಯೆ. ಅಲ್ಲದೆ ಕೃಷ್ಣ ನಿನ್ನ ಜೀವನದ ಪ್ರತಿ ಘಟನೆಯು ಸಾಮಾನ್ಯ ಜನರಿಗೆ ಒಂದು ಅದ್ಭುತ ಆಶ್ಚರ್ಯ, ಹಾಗಾಗಿ ಪ್ರತಿ ಘಟನೆಯನ್ನು ನಿನ್ನ ಬಾಯಲ್ಲಿಯೆ ಕೇಳಬೇಕು ಅನ್ನುವ ತವಕ ನನಗೆ, ಹಾಗಾಗಿ ಒಂದಿಷ್ಟು ಹೊತ್ತು ನಿನ್ನ ಜೊತೆ ಹರಟೋಣವೆಂದೆ ಗೋಕರ್ಣದಿಂದ ಇಲ್ಲಿ ಬಂದು ಕುಳಿತಿರುವೆ"  


ಕೃಷ್ಣನೆಂದ
"ಸರಿ ಅರ್ಥವಾಯಿತು ಗಣೇಶ ನೀನು ಹೇಳುತ್ತಿರುವುದು. ನಿನ್ನ ಮಾತಿನ ಅರ್ಥವೆಂದರೆ ಇಂದು ನನ್ನ ವಿಚಾರಣೆ. ನನ್ನ ಜೀವನದ ಎಲ್ಲ ಘಟನೆಗಳನ್ನು  ನಿನ್ನ ನ್ಯಾಯಲಯದಲ್ಲಿ ವಿಚಾರಣೆ ನಡೆಸುತ್ತಿರುವೆ ಎಂದು ಅಲ್ಲವೆ"  


ಅವನ ದ್ವನಿಯಲ್ಲಿ ಗಣೇಶನನ್ನು ಕೆಣಕುವ ನಗು


"ಅದು ಹಾಗಲ್ಲ ಕೃಷ್ಣ. ನಿನ್ನ ಕತೆಯನ್ನು ನಾನು ವ್ಯಾಸಮುನಿಯ ಎದುರು ಕುಳಿತು ಬರೆದೆ, ಆ ಮುನಿ ಸುಮ್ಮನಿದ್ದ ನನ್ನನ್ನು ತಾನು ಹೇಳುವ ಮಹಾಕತೆ ಭಾರತವನ್ನು ಬರೆದುಕೊಡಲು ಕೇಳಿದ. ನನಗೆ ದೀರ್ಘಕಾಲ ಕುಳಿತು ಬರೆದು ಅಭ್ಯಾಸವಿಲ್ಲ, ಅಲ್ಲದೆ ದೇಹದ ಭಾರ ಬೇರೆ. ಹಾಗಾಗಿ ನಾನು ಅವರಿಗೆ ಒಂದು ನಿರ್ಬಂಧ ಹೇಳಿದೆ. ಕತೆಯನ್ನು ಮಧ್ಯೆ ಮಧ್ಯೆ ನಿಲ್ಲಿಸದೆ, ಒಮ್ಮೆಲೆ ಹೇಳಿ ಮುಗಿಸಿಬಿಡಬೇಕು. ಎಂದು ಆ ಮುನಿಯಾದರೊ ನನಗಿಂತ ಕಿಲಾಡಿ, ಅವನು ಒಂದು ಶರತ್ತು ವಿಧಿಸಿದ, ಅವನು ಹೇಳುವ ಪದ್ಯಗಳನ್ನು ನಾನು ಅರ್ಥಮಾಡಿಕೊಂಡೆ ಬರೆಯಬೇಕು ಎಂದು. ಅವನ ಪದ್ಯಗಳನ್ನು ಅರ್ಥೈಸುವ  ಆ ಗಲಾಟೆಯಲ್ಲಿ ನಿನ್ನ ಜೀವನದ ಘಟನೆಗಳನ್ನು ಅರ್ಥಮಾಡಿಕೊಳ್ಳುವುದು ಕಠಿಣವೆನಿಸಿತು. ಆ ಮುನಿಯ ಬಾಷೆ ರಚನೆಗಳೆಲ್ಲ ಹಾಗಿದ್ದವು , ನನಗೆ ಹಾಗಿರಲು ಇನ್ನು ಸಾಮಾನ್ಯ ಜನರು ನಿನ್ನನ್ನು ಎಷ್ಟು ಅರ್ಥಮಾಡಿಕೊಳ್ಳಲು ಸಾದ್ಯ ಹೇಳು. ಅದಕ್ಕಾಗಿಯೆ ನಿನ್ನ ಜೊತೆ ಕುಳಿತು ಮಾತನಾಡುವ ಆಸೆ" ಎಂದ ಗಣೇಶ


"ಇರಲಿ ಗಣೇಶ, ನಾನು ಸುಮ್ಮನೆ ರೇಗಿಸಿದೆ, ನನಗೂ ನನ್ನ ಜೀವನದ ಘಟನೆಗಳನ್ನು , ನನ್ನ ಭಾವನೆಗಳನ್ನು , ಸ್ಪಂದನೆಗಳನ್ನು ಯಾರಾದರೊಬ್ಬರ ಜೊತೆ ಹಂಚಿಕೊಳ್ಳುವ ಆಸೆಯು ಇತ್ತು. ಜೀವಿತಕಾಲದಲ್ಲಿ ಆ ಅರ್ಜುನನೊಬ್ಬನಿದ್ದ, ನಾನು ಸುಮ್ಮನೆ ಕುಳಿತು ನನ್ನ ಭಾವನೆಗಳನ್ನು, ಮನಸನ್ನು ಅವನ ಜೊತೆ ಹೇಳಿಕೊಳ್ಳುತ್ತಿದ್ದೆ, ಆದರೆ ಅವನಿಗೆ ಅದರಲ್ಲಿ ಯಾವುದೆ ಆಸಕ್ತಿ ಇರಲಿಲ್ಲ ಎಂದು ನನಗೆ ಗೊತ್ತು. ಸುಮ್ಮನೆ ಕಾಟಚಾರಕ್ಕೆ ಹೌದು ಹೌದು ಅನ್ನುತ್ತಿದ್ದ ಆದರೆ, ಅವನ ಆಸಕ್ತಿಗಳೆ ಬೇರೆ" ಕೃಷ್ಣನೆಂದ.

ಮುಂದುವರೆಯುವುದು…..

1 comment:

  1. ದೇವತೆ ಎಂದು ಆರಾಧಿಸಿದವ ಭೂತವಾಗಿ ಕಾಡುವುದಿಲ್ಲವೇ? ಅಂತೆಯೇ ದೇವರುಗಳೊಳ ರಕ್ಕಸತನ ಮತ್ತು ರಾಕ್ಷಸರ ನೀನಾ ದೈವತ್ವ ಮನ ಎರಡೂ ಭೂಮಿಯಲಿ ಮಾತ್ರ ಸಾದ್ಯ. ಒಳ್ಳೆಯ ಲೇಖನ ಮಾಲೆ.

    ReplyDelete

enter your comments please