Thursday, November 7, 2013

ದೀಕ್ಷೆ

ದೀಕ್ಷೆ 
====

ಬೆಳಗಿನ ಬಿಸಿಲು ಮನೆಯ ಮಾಡಿನ ಮೇಲೆ ಬೀಳುತ್ತಿತ್ತು. ಮುದಿ ಬೆಕ್ಕೊಂದು ಬಿಸಿಲಿಗೆ ಮೈ ಒಡ್ಡಿ ನಿದ್ದೆಗೆ ಶರಣಾಗಿದ್ದರೆ ಅದರ ನಿದ್ದೆ ಕೆಡಿಸಲು ಎನ್ನುವಂತೆ ಸುತ್ತಲು ನಾಲ್ಕೈದು ಬೆಕ್ಕುಗಳು ಸೇರಿ ಮಾತಿಗೆ ತೊಡಗಿದ್ದವು , ರಾತ್ರಿ ತಾನು ಆಡಿದ ಇಲಿಯ ಬೇಟೆಯನ್ನು ಒಂದು ಬೆಕ್ಕು ವರ್ಣಿಸುತ್ತಿತ್ತು. ದೂರದಲ್ಲಿ ಈ ಮಾತನ್ನು ಕೇಳುತ್ತ ಕುಳಿತಿದ್ದ ಹಿರಿ ಬೆಕ್ಕಿಗೆ ಇವರ ಮಾತು ಕೇಳಿ ಕೋಪಬಂದಿತು. ಇವಕ್ಕೆ ಒಂದು ಶಿಸ್ತು ಇಲ್ಲ , ಇಲಿ ಬೇಟೆ ಅಂದರೆ ಅದೇನು ಸುಲುಭದ ಕೆಲಸವೇ ತಾನು ಇವರಿಗೆ ಇಲಿ ಬೇಟೆಯ ಮರ್ಮ ತಿಳಿಸಿಕೊಡಬೇಕೆಂದು ನಿರ್ಧರಿಸಿ ಜೋರಾಗಿ ಹೇಳಿತು
"ನಾನೀಗ ನಿಮಗೆ ಇಲಿ ಬೇಟೆಯ ದೀಕ್ಷೆ ಕೊಡುವನಿದ್ದೇನೆ, ಯಾರಿಗೆ ಬೇಕು ತಿಳಿಸಿ?"
ಪಕ್ಕದಲ್ಲಿ ಆಡಿಕೊಂಡಿದ್ದ ಒಂದೆರಡು ಬೆಕ್ಕಿನ ಮರಿಗಳು ಕುತೂಹಲದಿಂದ ಬಂದು ನಿಂತವು ಅದೇನು ಇಲಿ ಬೇಟೆಯ ದೀಕ್ಷೆ ಎಂದರೆ ಏನು ಎಂದು ಯೋಚಿಸುತ್ತ. ಬೇರೆ ಬೆಕ್ಕುಗಳು ಆಸಕ್ತಿ ತೋರಿಸುತ್ತಿರುವುದು ಕಂಡು. ಮತ್ತೊಂದು ಗಡವ ಬೆಕ್ಕಿಗೆ ರೇಗಿ ಹೋಯಿತು, ಈ ಹಿರಿಬೆಕ್ಕಿಗೆ ತನ್ನ ದೊಡ್ಡಸ್ತಿಕೆ ತೋರಿಸುವುದೆ ಸದಾ ಕೆಲಸ. ಹೇಗೋ ಮಾಡಿ ತಾನೆ ಶ್ರೇಷ್ಠ ಎಂದು ಪುಕಾರು ಹಬ್ಬಿಸಲು ಪ್ರಯತ್ನಪಡುತ್ತೆ ಅದನ್ನು ತಪ್ಪಿಸಬೇಕು ಎಂದು ನಿರ್ಧರಿಸಿತು.

"ಇಲಿ ಹಿಡಿಯಲು ದೀಕ್ಷೆ ಎಂದರೆ ಅರ್ಥವೇನು ಅದನ್ನು ನೀನು ಕೊಡುವುದು ಎಂದರೇನು ಅರ್ಥ. ಬೆಕ್ಕಾಗಿ ಹುಟ್ಟಿದ ಮೇಲೆ ಇಲಿ ಬೇಟೆ ನಮ್ಮ ಧರ್ಮ ಅದನ್ನು ಅವರವರಿಗೆ ತಿಳಿದಂತೆ ಅವರು ನಡೆಸುವರು, ಒಟ್ಟಿನಲ್ಲಿ ಇಲಿ ಹಿಡಿಯುವುದು ಮುಖ್ಯವೇ ಹೊರತಾಗಿ, ನಮಗೆ ದೀಕ್ಷೆ ಕೊಡುವೆ ಎನ್ನುತ್ತ ನಿನ್ನ ದೊಡ್ಡಸ್ತಿಕೆ ತೋರಿಸುವುದು ಬೇಡ. ಅಷ್ಟಕ್ಕು ನಿನಗೆ ದೀಕ್ಷೆ ಕೊಡು ಎಂದು ಕೇಳಿದವರಾರು " ಎನ್ನುತ್ತ ಗಲಭೆ ಎಬ್ಬಿಸಿತು.
ಹಿರಿಬೆಕ್ಕಿನ ಪರ ಕೆಲವು ಬೆಕ್ಕುಗಳು, ಗಡವಬೆಕ್ಕಿನ ಪರ ಕೆಲ ಬೆಕ್ಕು ನಿಂತು ಜಗಳ ಪ್ರಾರಂಭಿಸಿದವು. ಇವುಗಳ ಕಿತ್ತಾಟದಿಂದ ನಿದ್ದೆಯಲ್ಲಿದ್ದ ಮುದಿಬೆಕ್ಕು ಕಣ್ಣು ಬಿಟ್ಟು ನುಡಿಯಿತು
"ಸುಮ್ಮನೆ ಏಕೆ ಸದಾ ಕಿತ್ತಾಡುವಿರಿ, ಹೇಗೋ ಒಟ್ಟಿಗೆ ಇರಬಾರದೆ?"
ಯಾವ ಬೆಕ್ಕಿಗೂ ಅದರ ಮಾತು ಕಿವಿಗೆ ಬೀಳಲಿಲ್ಲ. ಗದ್ದಲ ಮುಂದುವರೆಸಿದವು. ನಾವೇನು ನಿಮ್ಮ ದೀಕ್ಷೆ ಬೇಡುತ್ತಿಲ್ಲ ನೀವೆ ಇಟ್ಟುಕೊಳ್ಳಿ ಎಂದು ಗಡವ ಬೆಕ್ಕಿನ ಗುಂಪೂ,
ನಾವು ಬಲವಂತ ಮಾಡುತ್ತಿಲ್ಲ, ಯಾರು ಕೇಳುವರೋ ಅವರಿಗೆ ಮಾತ್ರ 'ಇಲಿಬೇಟೆಯ' ದೀಕ್ಷೆ ಕೊಡುವೆ ಎಂದು ನಾವು ಹೇಳಿದ್ದೇವು ನೀವು ಅನವಶ್ಯಕ ಗಲಾಟೆ ಮಾಡುತ್ತಿರುವಿರಿ ಎಂದು ಹಿರಿಬೆಕ್ಕಿನ ಗುಂಪು.
ಇವುಗಳ ನಡುವೆ ಗಲಾಟೆ ನಡೆದಿರುವಂತೆ, ಕೆಳಗೆ ಗೋಡೆಯ ಸಂದಿಯಿಂದ 'ಇಲಿಯೊಂದು' ಹೊರಬಂದಿತು. ಬೆಕ್ಕುಗಳ ನಡುವೆ ಇಂತಹ ಜಗಳ ನಡೆದಾಗಲೆಲ್ಲ ಈ 'ಇಲಿ' ಹೊರಬರುತ್ತಿತ್ತು ತನ್ನ ಬೇಳೆ ಬೇಯಿಸಿಕೊಳ್ಳಲು.
ಅದು ಎರಡು ಕಾಲ ಮೇಲೆ ನಿಂತು ಜೋರಾಗಿ ನುಡಿಯಿತು ಗಂಭೀರವಾಗಿ
"ಮನುಸ್ಮೃತಿಯನ್ನು ಸುಡಬೇಕು, ಸುಡಬೇಕು, ಸುಡಬೇಕು"

ಬೆಕ್ಕುಗಳೆಲ್ಲ ಗಾಭರಿ ಬಿದ್ದವು, ಅವುಗಳಿಗೆ ಈ ಇಲಿಯ ಮಾತು ಅರ್ಥವಾಗುತ್ತಲೆ ಇರಲಿಲ್ಲ, ಇದ್ಯಾವುದೋ ಅತಿ 'ಬುದ್ದಿಜೀವಿ ಇಲಿ' ಎಂದು ಅವುಗಳಿಗೆ ಗಾಭರಿ. ಪುಟ್ಟ ಬೆಕ್ಕೊಂದು ತನ್ನ ಅಮ್ಮನನ್ನು ಕೇಳಿತು
"ಅಮ್ಮ ಈ ಮನುಸ್ಮೃತಿ ಎಂದರೆ ಏನು?"
ಅಮ್ಮ ಬೆಕ್ಕಿಗು ಅದು ತಿಳಿದಿರಲಿಲ್ಲ. ಆದರೆ ಅದು ಮರಿಯಬಳಿ ಅದನ್ನು ಹೇಳದೆ
"ಅದೊಂದು ದೊಡ್ಡ ಗ್ರಂಥ ಮಗು ಅದನ್ನು ಓದಿದರೆ ನೇರ ಸ್ವರ್ಗ" ಎಂದಿತು
"ಸ್ವರ್ಗವೆ ಅಲ್ಲಿ ಏನಿರುತ್ತದೆ?" ಮರಿಬೆಕ್ಕಿನ ಪ್ರಶ್ನೆ
"ಸ್ವರ್ಗವೆಂದರೆ ಏನು ಅಲ್ಲಿ ನಾವು ತಿನ್ನಲು ಸಾಕಾಗುವಷ್ಟು ಇಲಿಗಳಿರುತ್ತದೆ ಅನ್ನಿಸುತ್ತೆ, ಅಲ್ಲದೆ ಸಾಕಷ್ಟು ಕುಡಿಯಲು ಹಾಲು ಸಿಗುತ್ತದೆ, ಮಾಡುವಷ್ಟೆ ನಿದ್ದೆ ಇನ್ನೇನು ಬೇಕು ಹೇಳು" ಮರಿಗೆ ಅರ್ಥವಾಯಿತು, ಈ ಇಲಿ ಅದೇಕೆ ಮನುಸ್ಮೃತಿಯನ್ನು ಸುಡಬೇಕು ಎಂದು ಹೇಳುತ್ತಿದೆ ಎಂದು. ಆ ಮರಿ ಕೂಗಿ ಹೇಳಿತು
"ಇಲಿಯೆ ನೀನು ನಿನ್ನ ಪರಿಷತ್ ಸುಡುವೆಯಾದರೆ ನಾನು ಮನುಗ್ರಂಥವನ್ನು ಸುಡುವೆ"
ಇಲಿಗೆ ಏನು ಉತ್ತರ ಕೊಡಬೇಕೆಂದು ತೋಚಲಿಲ್ಲ. ಅಷ್ಟರಲ್ಲಿ ದೂರದಲ್ಲಿ ಏನೊ ಶಬ್ದ ಕೇಳಿತು
"ಡಾಂ....." ಎನ್ನುವ ಶಬ್ದ. . ದೀಪಾವಳಿ ಎಂದು ಪಟಾಕಿ ಸಿಡಿಯುತ್ತಿರುವುದು ಅವಕ್ಕೆ ಅರ್ಥವಾಗಿರಲಿಲ್ಲ,
ಬೆಕ್ಕುಗಳೆಲ್ಲ ಅಂದವು
"ಓಹೋ ಪುನಃ ಬಾಂಬ್ ಸಿಡಿಯಿತು ಅನ್ನಿಸುತ್ತೆ"
ಇಲಿ ಈಗ ಇಕ್ಕಟ್ಟಿಗೆ ಸಿಕ್ಕಿತು, ಬಾಂಬ್ ಅಂದರೆ ಅದಕ್ಕೊಂದು ಭಯ, ಈಗ ಅದಕ್ಕೆ ಆ ಬಗ್ಗೆ ಮಾತನಾಡಲು ಇಷ್ಟವಿರಲಿಲ್ಲ.ಮತ್ತೊಮ್ಮೆ ಯಾವಗಲಾದರು ಹೊರಬಂದು ಮಾತನಾಡಿದರೆ ಸರಿಹೋಗುವದೆಂದು ಅದು ಬಿಲ ಸೇರಿತು.
ಬೆಕ್ಕುಗಳು ಮತ್ತೆ ಅರಚಲು ಪ್ರಾರಂಭಿಸಿದವು. ನಿದ್ದೆ ಮಾಡುತ್ತಿದ್ದ ಮುದಿಬೆಕ್ಕಿಗೆ ಎಚ್ಚರವಾಯಿತು.
"ಥೂ ಸದಾ ನಿಮ್ಮ ಕಿತ್ತಾಟವೇ ಆಯಿತು. ಹೊರಡಿ ಇಲ್ಲಿಂದ, ಸುಮ್ಮನೆ ನನ್ನ ನಿದ್ದೆಯನ್ನು ಕೆಡಸುವಿರಿ. ಮಾಡಲು ಏನಾದರು ಉತ್ತಮ ಕೆಲಸವಿದ್ದರೆ ನೋಡಿ. ಸೋಮಾರಿಗಳಂತೆ ಕುಳಿತು ಕಿತ್ತಾಡುತ್ತ , ಸಮಯ ವ್ಯರ್ಥಮಾಡಬೇಡಿ" ಎನ್ನುತ್ತ ಜೋರು ಮಾಡಿತು. ಎಲ್ಲ ಬೆಕ್ಕುಗಳು ಮುದಿಬೆಕ್ಕನು ಬೈದುಕೊಳ್ಳುತ್ತ, ತಮ್ಮೊಳಗೆ ಗೊಣಗಿಕೊಳ್ಳುತ್ತ, ಅವರಿವರ ಅಡುಗೆಮನೆಯನ್ನು ಅರಸುತ್ತ ಹೊರಟವು, ಕುಡಿಯಲು ಹಾಲು ಸಿಗಬಹುದೆ ಎಂದು ಹುಡುಕುತ್ತ.

1 comment:

  1. 'ಇಲಿಬೇಟೆಯ' ದೀಕ್ಷೆ ಬರಹ ಸಕಾಲಿಕವಾಗಿದೆ ಸಾರ್. ಯಾರದೋ ರಾಜಕೀಯ ತೆವಲಿಗೆ ಕಿತ್ತಾಡಿಕೊಂಡು ಸಾಯಬೇಕಾದವರು 'ನಂಬಿಕೆ' ಇಟ್ಟವರೇ ಎನಂತೀರಾ?

    ReplyDelete

enter your comments please