Thursday, May 14, 2015

ಕತೆ : ಅಲೋಕ (1) - ಪಯಣ

ಕತೆ : ಅಲೋಕ

ಅಲೋಕ(1) - ಪಯಣ

ಎದೆಯ ಎಡಬಾಗದಲ್ಲಿ ಸಣ್ಣಗೆ ಕಾಣಿಸಿಕೊಂಡ ನೋವು , ‘ಏನು’ ಎಂದು ಯೋಚನೆ ಮಾಡುವದರಲ್ಲಿ ಬೆನ್ನು ಎದೆಯೆಲ್ಲ ವ್ಯಾಪಿಸಿತು. ಓಹೋ ದೇಹದಲ್ಲಿ ಏನೊ ಬದಲಾವಣೆಯಾಗುತ್ತಿದೆ, ಎಂದು ಅರ್ಥಮಾಡಿಕೊಳ್ಳುವ ಮೊದಲೆ ಹೊರಗಿನ ಸ್ಥೂಲ ಪ್ರಪಂಚವೆ ಮರೆಯುವಂತೆ, ದೇಹವೆಂದರೆ ಬರೀ ನೋವು ಅನ್ನುವಂತೆ, ಆ ನೋವು ದೇಹ ಮನಸನ್ನೆಲ್ಲ ವ್ಯಾಪಿಸಿಬಿಟ್ಟಿತು . ಹೊರಗಿನ ಯಾವ ಅರಿವೂ ಇಲ್ಲ.

ಮನುಷ್ಯ ಅನುಭವಿಸಬಹುದಾದ ಅತಿ ದೊಡ್ಡ ನೋವು ಎಂದರೆ ಹೆಣ್ಣು ತನ್ನ ಮಗುವಿಗೆ ಜನ್ಮಕೊಡುವಾಗ ಅನುಭವಿಸುವ ಹೆರಿಗೆನೋವು ಎಂದು ನನ್ನ ಭಾವನೆಯಾಗಿತ್ತು, ಆದರೆ ನನ್ನ ದೇಹದಲ್ಲಿ ಕಾಣಿಸಿಕೊಂಡ ನೋವು ಅದೆಲ್ಲವನ್ನು ಮೀರಿದ್ದಾಗಿತ್ತು.

ಎದೆಯ ಮೇಲೆ ಸಾವಿರ ಸಾವಿರ ಟನ್ನುಗಳಷ್ಟು ಭಾರವಾದ ವಸ್ತುವಿಟ್ಟಂತೆ , ದೊಡ್ಡ ಆನೆಯೊಂದು ತನ್ನ ಕಾಲಿನಿಂದ ನನ್ನ ಎದೆಯನ್ನು ತುಳಿದು ನಿಂತಂತೆ, ಉಸಿರಾಡಲು ಆಗದಂತೆ ನನ್ನ ತಲೆಯನ್ನು ನೀರಿನಲ್ಲಿ ಅದುಮಿ ಹಿಡಿದಂತೆ ಎಂತದೋ ಹಿಂಸೆ.

ದೇಹ ಮನಸುಗಳ ಒಂದು ವಿಚಿತ್ರ ವ್ಯವಸ್ಥೆ ಇದೆ , ದೇಹದ ನೋವಿಗೆ ಸ್ಪಂದಿಸುವ ಮೆದುಳು, ಇನ್ನು ದೇಹ ನೋವನ್ನು ತಡೆಯಲಾಗದು ಎನ್ನುವ ಸ್ಥಿತಿ  ಬಂದೊಡನೆ ದೇಹದೊಡನೆ ತನ್ನ ಸಂಪರ್ಕವನ್ನು ಕಡಿದುಕೊಂಡುಬಿಡುತ್ತದೆ. ಒಂದೆರಡು ಗಳಿಗೆಗಳಾಗಿರಬಹುದೇನೊ ನೋವಿನ ಅನುಭವ ತಣಿದು ದೇಹ ಶಾಂತವಾಯಿತು.

ಎಲ್ಲ ಭಾವಗಳು ಕತ್ತಲಲ್ಲಿ ಕರಗುತ್ತಿರುವಂತೆ , ಮನಸಿಗೆ ಅನ್ನಿಸಿತು, ಇದು ನನ್ನ ಕಡೆಗಾಲ.  ನಾನು ಸಾವನ್ನು ಸಮೀಪಿಸಿದ್ದೇನೆ ಎನ್ನುವ ಅರಿವಿನಲ್ಲಿ ಮನ ಅನವರತ ಪೂಜಿಸುತ್ತ ಬಂದ ದೇವಿಯ ಪಾದಗಳನ್ನು ನೆನೆಯಿತು. ಕಣ್ಣೆದುರು ಆಕೆಯ ಆಕಾರವನ್ನು ತಂದುಕೊಳ್ಳಲು ಪ್ರಯತ್ನಪಡುತ್ತಿರುವಂತೆ , ಕಣ್ಣೆದುರಿನ ಬೆಳಕೆಲ್ಲ ಕರಗಿಹೋಗಿ ಕತ್ತಲು , ಬರೀ ಕತ್ತಲು ಅನ್ನುವಂತೆ ಉಳಿಯಿತು. ನಿಧಾನವಾಗಿ ದೇಹಭಾವ ಕರಗಿಹೋಯಿತು.

ಕತ್ತಲು ಅಂದರೆ ಗಾಡಕತ್ತಲು. ಭಾವಗಳೆಲ್ಲ ಶೂನ್ಯವಾಗಿ ಭುವಿಯ ಎಲ್ಲ ಬಂಧಗಳನ್ನು ಕಳಚುತ್ತ ಇರುವ ಅನುಭವ. ಎದೆಯ ಗೂಡಿನೊಳಗೆ ಕುಳಿತಿದ್ದ ಪ್ರಾಣಪಕ್ಷಿ ಪಂಜರದ ಬಾಗಿಲು ತೆರೆದು ಹಾರಿದ ಅನುಭವ, ದೂರದ ಮರದ ಮೇಲೆಲ್ಲೊ ಕುಳಿತ ಪಕ್ಷಿ ರೆಕ್ಕೆಬಿಚ್ಚಿ ಪಟಪಟ ಬಡಿಯುತ್ತ ಹಾರಿದಂತೆ , ದೇಹದೊಳಗಿನ ಪ್ರಾಣಪಕ್ಷಿ ಹಾರಿತೇನೊ. ರೆಕ್ಕೆ ಬಡಿಯುತ್ತ ಆಗಿನ್ನು ಮೊಟ್ಟೆಹೊಡೆದು ಹೊರಬಂದು ಕಾಲು ಮೈಗಳಿಗೆ ಅಂಟಿದ ಕಸದ್ರವಗಳನ್ನೆಲ್ಲ ಕೊಡವುತ್ತ ಹಾರಿದ ಪಕ್ಷಿಯಂತೆ ಯಾವುದೋ ಒಂದು ಭಾವ, ದೇಹದ ಬಂಧಗಳನ್ನೆಲ್ಲ ಬಿಡಿಸಿಕೊಂಡು ಮೇಲೆ ಹಾರಿತು.

ಎಲ್ಲ ನೋವುಗಳಿಂದ ಮುಕ್ತ , ಎಲ್ಲ ಭಾವಗಳಿಂದ ಮುಕ್ತ , ಎಲ್ಲ ದೈಹಿಕ ಅನುಭವಗಳಿಂದ ಮುಕ್ತ.

ದೇಹ ಭಾವವಿಲ್ಲ ಅಂದೊಡನೆ ಯಾವ ಅನುಭವವೂ ಇಲ್ಲ. ಪಂಚೇಂದ್ರಿಯಗಳಿಲ್ಲದ ಪ್ರಪಂಚದ ಅನುಭವ. ಸದಾ ಶಬ್ಧಪ್ರಪಂಚದಲ್ಲಿದ್ದವನಿಗೆ ಶ್ರವಣೇಂದ್ರಿಯ ಶೂನ್ಯವಾದ , ಮೌನವೇ ಹೆಪ್ಪುಗೊಂಡ ಗಾಡಮೌನ. ಸ್ಪರ್ಶಾನುಭವವಿಲ್ಲದೆ ಸುತ್ತಲು ಸುಳಿದಾಡುವ ಗಾಳಿಯೂ ಇಲ್ಲದೆ, ಸುವಾಸನೆಯೂ ಇಲ್ಲದ ದುರ್ವಾಸನೆಯೂ ಇಲ್ಲದ ಅನುಭಾವ. ಕಣ್ಣುಗಳು ಇಲ್ಲದೆ, ಕತ್ತಲೆ ಬೆಳಕೂ ಇಲ್ಲದ ಗಾಡಾವಾದ ಘನಗೊಂಡ ಕತ್ತಲ ಪ್ರಪಂಚದೊಳಗೆ ಸೇರಿಹೋದ ಅನುಭವ

ಆದರೂ ಇದೇನು?

ದೇಹವೇ ಇಲ್ಲ ಅನ್ನುವಾಗಲೂ ಕಣ್ಣುಗಳು ಇಲ್ಲ ಅನ್ನುವಾಗಲೂ, ಕತ್ತಲೆ ಬೆಳಕಿನ ಅನುಭವ ಹೇಗೆ ಸಾದ್ಯ ?

ಎಲ್ಲೆಲ್ಲೂ ಗಾಡಕತ್ತಲು, ಆಗೊಮ್ಮೆ ಈಗೊಮ್ಮೆ ಅನಂತ ದೂರದಲ್ಲಿ ಎನ್ನುವಂತೆ ಯಾವುದೋ ಬೆಳಕಿನ ಸೆಲೆಯ ಅನುಭವ. ಹೋಗುತ್ತಿರುವಾದಾದರು ಎಲ್ಲಿಗೆ ?

ಕಾಲವೇ ಸ್ಥಭ್ದಗೊಂಡ ಸ್ಥಿತಿಯಲ್ಲಿ, ಇಂದ್ರೀಯ ಅನುಭವಗಳೆಲ್ಲ ಶೂನ್ಯ ಅನ್ನುವ ಸ್ಥಿತಿಯಲ್ಲೂ ಎಲ್ಲಿಗೂ ಚಲಿಸುತ್ತಿರುವ ಅನುಭವ .

ಎಂದು ಅನುಭವಿಸಿರದ  ವಿಚಿತ್ರ ಅನುಭೂತಿ. ಕತ್ತಲೆ ಬೆಳಕಿನ ನಡುವೆ ಅಗಾದ ವೇಗದಲ್ಲಿ ಚಲಿಸುತ್ತಿದ್ದೆ. ನಿಧಾನವಾಗಿ ಎನ್ನುವಂತೆ ಯಾವುದೋ ಹಿತಕರವಾದ ಸುವಾಸನೆ ನನ್ನನ್ನು ಆವರಿಸಿತು. ಓಂಕಾರದಿಂದ ರೂಪಗೊಂಡ ವಿಶ್ವದೊಳಗಿನ ಶಬ್ಧರೂಪ ನನ್ನನ್ನು ಆವರಿಸಿದಂತೆ , ನನ್ನೊಳಗೆ ನಾನು ಪ್ರಶ್ನಿಸಿಕೊಳ್ಳುತ್ತಿದ್ದೆ, ಚಲಿಸುತ್ತಿದ್ದೆ, ಆದರೆ ಅಂತಹ ಚಲನೆ ನನ್ನ  ಐಚ್ಚಿಕ ಕ್ರಿಯೆಯಾಗದೆ, ಯಾವುದೋ ಹೊರಗಿನ ಅದೃಶ್ಯ ಶಕ್ತಿಯೊಂದು ನನ್ನನ್ನು ಹಗ್ಗಕ್ಕೆ ಕಟ್ಟಿದ ಹಸುವನ್ನು ಎಳೆದೊಯ್ಯುವಂತೆ , ಯಾವುದೋ ಅದೃಶ್ಯ ಅಪ್ಪಣೆಗೆ ಅಧೀನ ಎಂಬಂತೆ ಚಲಿಸುತ್ತಿದ್ದೆ .

ಎಷ್ಟು ಕಾಲವೆಂಬ ಅರಿವಿಲ್ಲ. ನಡುವಿನ ದೂರದ ಕಲ್ಪನೆಯೂ ಬರಲಿಲ್ಲ. ಹಿಂದೆ ಎಂದು ಕಂಡ ನೆನಪಾಗಲಿಲ್ಲ. ಅರ್ಥವಾಗದ ಅನುಭವದೊಡನೆ ಅರಿವಿಲ್ಲದ ಲೋಕದತ್ತ , ಜೊತೆಗಾರರು ಯಾರು ಇಲ್ಲದೆ ಒಂಟಿಯಾಗಿ ಎನ್ನುವಂತೆ  ಚಲಿಸುತ್ತಿದ್ದೆ.

ನಾನು ತಲುಪಿರುವದಾದರು ಎಲ್ಲಿಗೆ ?
ದ್ವಾರ ತೆಗೆಯಿತು ಅನ್ನುವ ಹಾಗೇನು ಇಲ್ಲ, ಏಕೆಂದರೆ ಒಳಗೆ ಪ್ರವೇಶಿಸುವಾಗ ಯಾರೋ ತಡೆದು ಬಿಟ್ಟಂತೆ ಅನುಭವವಾಯಿತು ವಿನಾ ತಡೆದವರಾಗಲಿ, ತಡೆಯಾಗಲಿ ಯಾವುದೆಂದು ಯಾರೆಂದು ತಿಳಿಯಲಿಲ್ಲ. ಯಾರನ್ನೊ ಏತಕ್ಕೋ ಕಾಯುತ್ತಿರುವ ಅನುಭವ. ಎಷ್ಟು ಕಾಲವೋ ಎಂದರಿವಾಗದ ಶೂನ್ಯ ಸ್ಥಿತಿಯಲ್ಲಿ ಕಾಯುತ್ತಲೆ ಕುಳಿತಿದ್ದೆ.ಮುಂದುವರೆಯುವುದು.......

1 comment:

  1. ಹೀಗೆಯೇ ಗುಟುಕು ಗುಟುಕಾಗಿಯೇ ಬರಲಿ, ಒಂದಕ್ಷರವನ್ನೂ ಬಿಡದೆ ಓದುವ ಹಂಬಲವೂ ತೀರಿದಂತಾಗುತ್ತದೆ.

    ಆನಂತರದ ಅನುಭವಗಳು ಮುಂದುವರೆಯಲಿ...

    ಧೂಮಪಾನದ ಚಟಕ್ಕೆ ಬಿದ್ದ ನನಗೆ ಅದೆಂತ ಯಮ ಯಾತನೆ ಸಹಿತ ಸಾವು ಕಾದಿದೆಯೋ?

    ReplyDelete

enter your comments please