Friday, November 25, 2011

ತುಂಗಾ ತೀರದಿ


ಕಥೆ : ತುಂಗಾತೀರದಿ  ನೆಲೆಸಿಹ ....

                                   ಶ್ರೀರಾಘವೇಂದ್ರರ ಕುರಿತ ಒಂದು ಕಲ್ಪನೆಯ ಕಥೆ ಅವರ ಆಶೀರ್ವಾದ ಕೋರುತ್ತ




 ತುಂಗಾನದಿಯ ತೀರ, ಸೂರ್ಯ ನಡುನೆತ್ತಿಯನ್ನು ದಾಟಿ ಕೆಳಗಿಳಿಯುತ್ತಿರುವಂತೆ , ಇಳೆ ಬಿಸಿಯನ್ನು ಕಳೆದು ತಂಪಾಗುತ್ತಿದೆ. ಆಗೊಮ್ಮೆ ಈಗೊಮ್ಮೆ  ತಂಪಾದ ಗಾಳಿ ತುಂಗೆಯ ಮೇಲಿನಿಂದ ಹಾದು ಹಸಿರುಗಿಡಮರಗಳು ಅಹ್ಲಾದದಿಂದ ತಲೆತೂಗುತ್ತಿವೆ. ನದಿಯಿಂದ ಅನತಿ ದೂರದಲ್ಲಿ ಯುವಕರಿಬ್ಬರು ಮರವೊಂದರ  ನೆರಳನ್ನು ಆಶ್ರಯಸಿ ಹುಲ್ಲಿನ ಮೇಲೆ ಕುಳಿತ್ತಿದ್ದಾರೆ. ಅವರಿಬ್ಬರು ಪರಸ್ಪರ ಹೆಚ್ಚು ಮಾತನಾಡುತ್ತಿಲ್ಲ, ಆಗಾಗ್ಯೆ ಮೆಲುನುಡಿಯಲ್ಲಿ ಪಕ್ಕದವರಿಗೆ ಮಾತ್ರ ಕೇಳುವಂತೆ ಮಾತನಾಡಿ ಮೌನ ತಾಳುತ್ತಾರೆ.ದೂರದಲ್ಲಿ ಮೇಯುವದನ್ನು ಮುಗಿಸಿದ ಹಸುಗಳು ನದಿಯತ್ತ ದಾವಿಸುತ್ತಿರುವ ಶಬ್ದ ಹೊರತುಪಡಿಸಿದರೆ, ತುಂಗೆಯ ತೆಳ್ಳಗೆ ಹರಿಯುತ್ತಿರುವ ಜುಳು ಜುಳು ಶಬ್ದ ಮಾತ್ರ ಕೇಳಿಬರುತ್ತಿದೆ.ನೋಡುವಾಗಲೆ ತಿಳುಯುತ್ತಿದೆ ಅವರಿಬ್ಬರು ವಿಧ್ಯಾರ್ಥಿಗಳಿರಬೇಕೆಂದು, ನಿಜವೆ ಅವರಿಬ್ಬರು ಶ್ರೀಮಠದ ವಿಧ್ಯಾರ್ಥಿಗಳು, ಅಲ್ಲಿ ಕುಳಿತು ತಾವು ಓದಿದ ಶಾಸ್ತ್ರಗಳನ್ನು ಮೆಲುಕುಹಾಕುತ್ತಿರುವರಾದರು, ಕುಳಿತಿರುವ ಕಾರಣ ಬೇರೆ.ಅವರಿಂದ ಕೂಗಳೆತೆಯ ದೂರದಲ್ಲಿ ತುಂಗೆಯ ಪಕ್ಕದಲ್ಲಿ ಮರವೊಂದರ ಕೆಳಗೆ ನೆಲಕ್ಕೆ ಹಾಸಿದ್ದ ಕಲ್ಲುಹಾಸಿನ ಮೇಲೆ ಪದ್ಮಾಸನದಲ್ಲಿ ಕುಳಿತು, ಗಂಭೀರವಾಗಿ ನದಿಯನ್ನು ದಿಟ್ಟಿಸುತ್ತ ಮೈಮರೆತ್ತಿದ್ದಾರೆ ಶ್ರೀರಾಘವೇಂದ್ರ ಯತಿಗಳು.

ವಿಧ್ಯಾರ್ಥಿಗಳಿಬ್ಬರು ತಮ್ಮ ಗುರುಗಳ ಸೇವೆಗೆ ನಿಂತವರು. ಯಾವಾಗ ಅವರಿಗೆ ಏನು ಬೇಕಾದಿತೊ ಎಂಬ ಕಾತುರದಲ್ಲಿ ಅವರು ಕರೆದರೆ ಕೈಸನ್ನೆ ಮಾಡಿದರೆ ತಕ್ಷಣ ಹೋಗಲು ಸಿದ್ದರಾಗಿ ಕುಳಿತಿದ್ದಾರೆ. ತಮ್ಮ ಗುರುಗಳಲ್ಲಿ ಅವರಿಗೆ ಅಪಾರ ಪ್ರೇಮ,ಭಕ್ತಿ. ಅವರ ಸೇವೆಗೆ ಎಲ್ಲರು ಸಿದ್ದವೆ, ಆದರೆ ಗುರುಗಳ ಏಕಾಂತಕ್ಕೆ ಭಂಗಬರಬಾರದು ಎನ್ನುವ ಕಾರಣಕ್ಕೆ ಒಮ್ಮೆಗೆ ಇಬ್ಬರು ಮಾತ್ರ ಅವರ ಸೇವೆಯಲ್ಲಿರುತ್ತಾರೆ.

ಕೆಲವು ದಿನಗಳಿಂದ ಶಿಷ್ಯರೆಲ್ಲರ ಮನದಲ್ಲಿ ಎಂತದೊ ಆತಂಕ, ಗುರುಗಳು ವರ್ತನೆ ಸಜಜವಾಗಿಲ್ಲ, ಏನೊ ಯೋಚಿಸುತ್ತಿದ್ದಾರೆ ಎಂದು ಅವರಿಗೆ ತಿಳಿದಿದೆ.ಆದರೆ ಏನೆಂದು ಪ್ರಶ್ನಿಸಲಾರರು. ಕಳೆದು ಕೆಲವು ದಿನಗಳಿಂದ ಅವರು ಅಹಾರ ಸೇವನೆಯನ್ನು ಮಾಡುತ್ತಿಲ್ಲ. ಹಗಲಿನಲ್ಲಿ ದೇವರಿಗೆ ಅರ್ಪಿಸಿದ ಒಂದು ಲೋಟ ಹಾಲನ್ನು ಮಾತ್ರ ಸೇವಿಸುತ್ತಿರುವ ಅವರು ರಾತ್ರಿ ನಿರಾಹಾರ, ವಯಸ್ಸಾದ ದೇಹ ಮೆತ್ತಗಾಗುತ್ತಿದೆ ಎಂಬ ಚಿಂತೆ ಮಠದ ಎಲ್ಲರದು.

 ಮದ್ಯಾನ ಊಟದ ನಂತರ ಕ್ಷಣಕಾಲ ವಿಶ್ರಮಿಸುವುದು ಅವರ ಅಭ್ಯಾಸ, ಈಗ ವಿಶ್ರಾಂತಿಯ ಕೊಠಡಿಗೆ ಹೋಗದೆ ಒಬ್ಬರೆ ನಿದಾನವಾಗಿ ನಡೆದು ಬಂದು ಹರಿಯುವ ತುಂಗೆಯ ಪಕ್ಕದಲ್ಲಿ ನಿಶ್ಚಲರಾಗಿ ಕುಳಿತಿರುತ್ತಾರೆ. ಅವರ ಮನದ ಯೋಚನೆ ಯಾರು ಅರಿಯರು.ಅಲ್ಲದೆ ಈಚೆಗೆ ಅವರ ನಡೆನುಡಿಗಳು ಸಹ ಎಲ್ಲರಿಗು ನಿಗೂಡವೆನಿಸುತ್ತಿದೆ. ಶ್ರೀಮಠದ ಶಿಷ್ಯರೆಲ್ಲ ಗಮನಿಸಿದ್ದಾರೆ, ಬೆಳಗ್ಗೆ ಸ್ನಾನಕ್ಕೆ ತುಂಗಾನದಿಗೆ ಆಗಮಿಸುವ ಗುರುಗಳು ನಂತರೆ ಹಿಂದೆ ತೆರಳುವ ಮಾರ್ಗದಲ್ಲಿ ಮಂಚಾಲೆ ಗ್ರಾಮದ ಅಧಿದೇವತೆ ಮಂಚಾಲಮ್ಮನ ಗುಡಿಯ ಮುಂದಿನ ಜಗುಲಿಯಲ್ಲಿ ಕುಳಿತು ಕ್ಷಣಕಾಲ ದ್ಯಾನಮಗ್ನರಾಗಿ ನಂತರ ದೇವಿಯತ್ತ  ಕೈಮುಗಿದು ನಂತರ ಮುಂದುವರೆಯುತ್ತಾರೆ. ಅವರ ಶಿಷ್ಯರೆಲ್ಲರಿಗು ಕುತೂಹಲ ಮೂಲರಾಮನ ಆರಾದಕರು ಸಾಲಿಗ್ರಾಮನರಸಿಂಹನನ್ನು ಹೃದಯದಲ್ಲಿ ಧರಿಸಿರುವ ಶ್ರೀಕೃಷ್ಣ ಭಕ್ತರು ,ಮಂಚಾಲೆ ಗ್ರಾಮದೇವತೆಯನ್ನು ಕೈಮುಗಿಯುತ್ತ ಏನನ್ನೊ ಬೇಡುತ್ತಿದ್ದಾರೆ, ಏನಿರಬಹುದು?. ಆದರು ಯಾರು ಅವರನ್ನು ಈ ಕುರಿತು ಪ್ರಶ್ನಿಸರು.

ಗುರುಗಳ ಜೊತೆ ಸ್ವಲ್ಪ ಸಲುಗೆಯಿಂದ ವರ್ತಿಸುತ್ತಿದ್ದವರು ಎಂದರೆ ಹಿರಿಯ ಶಿಷ್ಯ ಅಪ್ಪಣ್ಣಾಚಾರ್ಯರು, ಅವರು ಗುರುಗಳ ಆದೇಶದ ಮೇರೆಗೆ ಎಲ್ಲಿಗೊ ತೆರಳಿದ್ದಾರೆ, ಹೀಗಾಗಿ ಎಲ್ಲ ಶಿಷ್ಯರಿಗು ಎಂತದೊ ಆತಂಕ. ಅವರ ಆತಂಕವು ಪೂರ್ಣ ಸುಳ್ಳೆನಾಗಿರಲಿಲ್ಲ.

  ನದಿಯತ್ತ ಗುರುಗಳು ನೋಡುತ್ತ ಕುಳಿತಂತೆ ಇಳಿಸೂರ್ಯನ ಕಿರಣಗಳು ಉದ್ದುದ್ದವಾಗುತ್ತಿರುವಂತೆ ಅವರ ಮನಸ್ಸು ಚಿಂತಿಸುತ್ತಿದೆ.ಹೊರಗೆ ಸದಾ ಹಸನ್ಮುಕರಾಗಿ ಕಾಣುತ್ತಿದ್ದರು, ಅವರ ಮನದಲ್ಲಿ ಯಾವುದೊ ನಿರ್ದಾರ ತೆಗೆದುಕೊಳ್ಳಬೇಕಾದ ಚಿಂತೆಯ ನೆರಳೊಂದು ಪದೆ ಪದೆ ಹಾದು ಹೋಗುತ್ತಿದೆ. ನೂರಕ್ಕೆ ಸಮೀಪಿಸುತ್ತಿರವ ಅವರ ದೇಹಭಾವವು ಮನಸಿನ ಓಘಕ್ಕೆ ತಕ್ಕಂತೆ ಸ್ಪಂದಿಸದೆ ತಡವರಿಸುತ್ತಾರೆ.

  ಈಚೆಗೆ ಏಕೊ ಅವರಿಗೆ ಪ್ರಕೃತಿಸ್ಥರಾಗಿರುವುದೆ ಅವರಿಗೆ ಸಮಸ್ಯೆ ಎನಿಸುತ್ತಿದೆ. ರಾಮದ್ಯಾನದಲ್ಲಿರಲು ಬಯಸುವ ಮನ ಸದಾ ಸಮಾದಿಸ್ಥಿಥಿಯಲ್ಲಿದ್ದು, ಬಲವಂತವಾಗಿ ಎಚ್ಚರವಾಗಿರಬೇಕಾದ ಅನಿವಾರ್ಯತೆ ಅವರಿಗೆ.ಕಲಿಯುಗದ ಕಾಮಧೇನು ಕಲ್ಪವೃಕ್ಷ ಎಂದೆಲ್ಲ ಆರಾದಿಸುವ ಭಕ್ತರು ಸದಾ ಅವರನ್ನು ಬೇಟಿಮಾಡಲು ಬರುತ್ತಲೆ ಇರುವರು. ಮೊದಲಾದರೆ ಕಷ್ಟದಲ್ಲಿರುವ ಅವರ ಸ್ಥಿಥಿ ಕೇಳುತ್ತ ಕರಗಿ ಹೋಗಿ , ಮೂಲರಾಮನ ಆಜ್ಞೆ ಎನ್ನುತ್ತ ಬಂದವರ ಕಷ್ಟಗಳಿಗೆ ಸಮಸ್ಯೆಗಳಿಗೆ ಪರಿಹಾರವನ್ನು ಕೊಟ್ಟುಬಿಡುತ್ತಿದ್ದರು. ಆದರೆ ಈಗ ಅವರ ಮನಸ್ಥಿಥಿಯೆ ಬೇರೆ. ಕಷ್ಟಗಳನ್ನು ಹೇಳಿಕೊಳ್ಳಲು ಬರುವರ ಮುಖ ನೋಡುತ್ತಿದ್ದರೆ ಅವರಿಗೆ ಮೂಲರಾಮನ ನೆನಪು, ಅಮ್ಮಂದಿರ ಕೈಹಿಡಿದು ಬರುವ ಪುಟ್ಟಮಕ್ಕಳನ್ನು ಕಾಣುತ್ತಿದ್ದರೆ ಪುಟ್ಟ ಕೃಷ್ಣನನ್ನೆ ಕಂಡಂತಾಗಿ ಮೈಮರೆಯುತ್ತಾರೆ. ಎದುರಿಗೆ ಇರುವ ಭಕ್ತರ ಕಷ್ಟಗಳಿಗೆ ಪರಿಹಾರ ಹೇಳುವ ಬದಲು ಎಲ್ಲರ ಮುಖದಲ್ಲಿ ರಾಮನನ್ನು ಕಾಣುತ್ತ ಪ್ರಭು ಎಷ್ಟು ರೂಪದಲ್ಲಿ ಬರುವೆ ಎಂದು ಆಶ್ಚರ್ಯ ಪಡುತ್ತ ಕುಳಿತುಬಿಡುತ್ತಾರೆ, ಕಿವಿಯಲ್ಲಿ ಸದಾ ರಾಮ ಅವರನ್ನು ಕರೆದಂತಾಗಿ ವಾಯುಪುತ್ರ ಇದೇನಪ್ಪ ನಿನ್ನ ಲೀಲೆ ಎನ್ನುತ್ತ ಮೈಮರೆಯುವರು. ಹೀಗಾಗಿ ಪ್ರಾಪಂಚಿಕವಾದ ಈ ವಾತವರಣದಲ್ಲಿರುವುದೆ ಅವರ ಮನಸಿಗೆ ಕಷ್ಟವೆನಿಸಿ ಹೇಗಪ್ಪ ಇದರ ಪರಿಹಾರ ಎನ್ನುತ್ತ ಮೂಲರಾಮನಿಗೆ ಮೊರೆ ಹೋಗಿದ್ದಾರೆ.

ನದಿಯಪಾತ್ರದಲ್ಲಿ ಕುಳಿತು ಸೂರ್ಯನ ಹೊನ್ನ ಕಿರಣಗಳ ಹಿನ್ನಲೆಯಲ್ಲಿ ನದಿಯನು ದಿಟ್ಟಿಸುತ್ತ ಕುಳಿತಿರುವ ಅವರಿಗೆ ಮತ್ತೇನೊ ಗೋಚರಿಸುತ್ತಿದೆ. ದಡನ ಮರಗಳ ಹಿಂದೆ ಬಂಡೆಗಳ ಹಿನ್ನಲೆಯಲ್ಲಿ ,ತಾಯಿ ಮಂಚಾಲಮ್ಮ ಗುಡಿಯ ಪಕ್ಕದಲ್ಲಿ ಮತ್ತೊಂದು ದೇವಾಲಯ ಕಾಣಿತ್ತಿದೆ. ಭೃಂದಾವನದ ಎದುರಿಗೆ  ಅಭಯಹಸ್ತಹೊತ್ತ ಪ್ರಾಣದೇವರ ಗುಡಿ. ನೋಡು ನೋಡುತ್ತ ಅವರಿಗೆ ಎಲ್ಲ ನಿಚ್ಚಳವಾಗುತ್ತಿದೆ. ಹೃದಯ ಎಲ್ಲವು ಅರಿವಾಗಿ ಹೋಯ್ತು, ಶ್ರೀರಾಮನ ಚಿತ್ತ ಏನೆಂದು. ಕೆಲವಾರು ನಿಮಿಷ ಕಣ್ಣುಮುಚ್ಚಿ ಕುಳಿತರು.ಹೃದಯ ಹಗುರವಾಗಿ ಮನಸ್ಸು ನಿರ್ಮಲವಾಗಿ ಮುಖದ ಮಂದಹಾಸದ ಪ್ರಭೆ ನೂರ್ಮಡಿಯಾಗಿತ್ತು. ನಿದಾನಕ್ಕೆ ಎದ್ದು ನಿಂತು ಕಣ್ಣುಮುಚ್ಚಿ ಗಗನದತ್ತ ಮುಖ ಮಾಡಿ ಕೈಜೋಡಿಸಿ ನಮಸ್ಕರಿಸಿದರು. ಆ ಹಿರಿಯ ಜೀವ ಏನು ಕಂಡರೊ, ಗುರುಗಳು ನಿಲ್ಲುತ್ತಿರುವಂತೆ ಹತ್ತಿರ ಓಡಿ ಬಂದ ಶಿಷ್ಯರು ಗುರುಗಳ ಚರ್ಯೆಯನ್ನು ಗಮನಿಸಿ ಗುರುಗಳು ನಮಸ್ಕರಿಸುವಾಗ ಅಲ್ಲಿ ಏನೊ ಕಂಡಿರಬೇಕೆಂದು ತಮಗೆ ಕಾಣದ ಆ ದೈವಕ್ಕೆ ತಾವು ಗಗನದತ್ತ ಮುಖಮಾಡಿ ಕೈಮುಗಿದರು.
   ಕಣ್ಣುಬಿಟ್ಟ ಗುರುವಳು ತಮ್ಮ ಹತ್ತಿರ ಬಂದ ಶಿಷ್ಯರ ಮುಖಗಳನ್ನು ಪ್ರೇಮದಿಂದ ನೋಡಿದರು.ಶಿಷ್ಯರಿಬ್ಬರು ಗುರುಗಳಿಗೆ ನದಿಯ ಪಾತ್ರದಿಂದ ಮೇಲೆ ಬರಲು ಸಹಾಯ ಮಾಡುತ್ತಿರುವಂತೆ, ಮೇಲೆ ಬಂದು ನಿದಾನವಾಗಿ ತಮ್ಮ ಬಿಡಾರದತ್ತ ಹೊರಟರು
                                                     ..............

ವಿರೋದಿಕೃತ್ ಶ್ರಾವಣಮಸ  ಕೃಷ್ಣಪಕ್ಷದ ಎರಡನೆ ದಿನ(ಕ್ರಿ.ಶ.೧೬೭೧)
ಮಂಚಾಲೆಗ್ರಾಮದ ಶ್ರೀಮಠದ ಒಳಗೆ ಎಲ್ಲೆಲ್ಲು ಗಂಭೀರ ವಾತವರಣ. ವಿಷಯ ಎಲ್ಲರಿಗು ತಿಳಿಯುತ್ತಿರುವಂತೆ ಎಲ್ಲರು ಆಶ್ಚರ್ಯಚಕಿತರಾಗಿದ್ದಾರೆ.ಹಿಂದೆ ಒಮ್ಮೆ ಮಾತ್ರ ಈ ರೀತಿಯ ಘಟನೆ ನಡೆದಿದೆಯಂತೆ, ಪೂರ್ವದ ಗುರುಗಳಾದ ಶ್ರೀವಾದಿರಾಜರು ಮಾತ್ರ ತಮ್ಮ ನೂರ ಇಪ್ಪತ್ತನೆ ವಯಸ್ಸಿನಲ್ಲಿ ಕ್ರಿ.ಶ.೧೬೦೦ ರಲ್ಲಿ ಸಶರೀರಿಯಾಗೆ ಬೃಂದಾವನ ಪ್ರವೇಶಿಸಿದರು ಅಂತ ಹಿರಿಯರು ಹೇಳುತ್ತಾರೆ ಅದನ್ನು ಕಂಡವಾರಾರು ಈಗ ಇಲ್ಲ. ಈಗ ಶ್ರೀಮಠದ ಗುರುಗಳಾದ ಶ್ರೀರಾಘವೇಂದ್ರತೀರ್ಥರು ಅದೆ ನಿರ್ದಾರ ಮಾಡಿದ್ದಾರೆ ಅಂತ ಮಠದ ತುಂಬೆಲ್ಲ ಸುದ್ದಿ. ಯಾರು ಮೊದಲಿಗೆ ನಂಬರು ಆದರೆ ಗುರುಗಳ ಜೀವನವನ್ನು ಅರಿತವರು ಅವರ ಪವಾಡಗಳನ್ನು ಕಣ್ಣಾರೆ ಕಂಡ ಭಕ್ತರು ಇದು ನಿಜವಾದ ಸುದ್ದಿ ಇದ್ದಲ್ಲಿ ಆಶ್ಚರ್ಯಪಡುವದೇನು ಇಲ್ಲ ಅಂತ ಭಾವಿಸುತ್ತಾರೆ. ಈ ಎಲ್ಲ ಸುದ್ದಿಗೆ ಪುಷ್ಟಿ ಕೊಡುವಂತೆ ಮಠಕ್ಕೆ ಸುಲ್ತಾನರ ದಿವಾನ ವೆಂಕಣ್ಣನವರು ಪದೇ ಪದೇ ಬಂದು ಹೋಗುತ್ತಿದ್ದಾರೆ.

 ದಿವಾನ ವೆಂಕಣ್ಣನವರು ಶ್ರೀಗುರುಗಳ ಕೃಪೆಗೆ ಒಳಗಾದ ಪರಮಭಕ್ತ, ಅವರ ಕಥೆ ಎಲ್ಲರಿಗು ಗೊತ್ತು. ಹಳ್ಳಿಯಲ್ಲಿ ಹುಟ್ಟು ದನಮೇಯಿಸಿಕೊಂಡಿದ್ದ ವ್ಯಕ್ತಿಯೊಬ್ಬ ಇಂದು ಸುಲ್ತಾನರ ಆಪ್ತ ದಿವಾನನಾಗಿರುವುದು ಶ್ರೀರಾಘವೇಂದ್ರರ ಪವಾಡವೆಂದು ಎಲ್ಲರು ಗುರುತಿಸಿದ್ದಾರೆ. ಸುಲ್ತಾನರು ಗುರುಗಳ ಭಕ್ತರಾಗಿ ಅವರಿಗೆ ಕಾಣಿಕೆಯೆಂದು ಅವರ ಕೋರಿಕೆಯಂತೆ ಮಂಚಾಲೆ ಗ್ರಾಮವನ್ನೆ ಅರ್ಪಿಸಿದ್ದಾರೆ.ಮಂಚಾಲೆಗ್ರಾಮವು ಈ ಹಿಂದೆ ನರಸಿಂಹನ ಭಕ್ತ ಪ್ರಹ್ಲಾದನು ದೀರ್ಘಕಾಲ ಯಜ್ಞವನ್ನು ನಡೆಸಿದ ಸ್ಥಳವೆಂದು ಇತಿಹಾಸ ಪ್ರಸಿದ್ದ. ಈಗ ಅದೆ ಪ್ರಹ್ಲಾದನ ಅಂಶಜರೆಂದು   ಶ್ರೀರಾಘವೇಂದ್ರರು ಎಲ್ಲೆಲ್ಲು ಪ್ರಸಿದ್ದ.

ಗುರುಗಳು ವೆಂಕಣನವರನ್ನು ಕರೆಸಿ ಸಶರೀರಿಯಾಗ ಬೃಂದವನಸ್ಥರಾಗುವ ತಮ್ಮ ನಿರ್ದಾರ ತಿಳಿಸಿದಾಗ ಅವರು ಮೊದಲಿಗೆ ದಿಗ್ಭಾಂತರಾಗಿ ಹೋದರು. ಅವರ ಮನಸಿಗೆ ನಿಲುಕದ ವಿಚಾರವದು. ಮಠದ ಹಿರಿಯ ಶಿಷ್ಯರೆಲ್ಲ ಗುರುಗಳ ಹತ್ತಿರ ಬೇಡಿಕೊಂಡರು ಆದರೆ ಎಲ್ಲರು ಕಡೆಗೆ ಗುರುಗಳ ಆಜ್ಞೆಗೆ ತಲೆಬಾಗಲೆ ಬೇಕಾಯಿತು.ಶಿಷ್ಯರಿಗೆಲ್ಲ ತಳಮಳ ಈ ನಿರ್ದಾರದಿಂದ, ಗುರುಗಳ ಆಪ್ತಶಿಷ್ಯ ಅವರೊಡನೆ ಮೊಂಡುತನದಿಂದ ವಾದಹೂಡಬಲ್ಲ ಶ್ರೀಅಪ್ಪಣ್ಣಚಾರ್ಯರು ಏಕೊ ಮಠದಲ್ಲಿಲ್ಲ. ಅವರನ್ನು ಗುರುಗಳೆ ಕಾರ್ಯರ್ತವಾಗಿ ಹೊರಗೆ ಕಳಿಸಿದ್ದಾರೆ. ಅವರು ಬಂದರೆ ಹೇಗಾದರು ಗುರುಗಳು ತಮ್ಮ ನಿರ್ದಾರದಿಂದ ಹಿಂದೆ ಸರಿಯುವಂತೆ ಒಪ್ಪಿಸಬಲ್ಲುರು ಎಂದು ಶಿಷ್ಯರೆಲ್ಲ ಸೇರಿ ಅವರನ್ನು ಹುಡುಕಿ ವಿಷಯ ತಿಳಿಸಿ ಕರೆತರುವಂತೆ ಎಲ್ಲ ಕಡೆಗು ಸುದ್ದಿ ಕಳಿಸಿದ್ದಾರೆ.

ವೆಂಕಣನವರು ಗುರುಗಳ ಇಚ್ಚಾನುಸಾರ ಉತ್ತಮವಾದ ಶಿಲ್ಪಿಗಳನ್ನು ಕರೆಸು ಶ್ರೇಷ್ಟವಾದ ಕಲ್ಲುಗಳನ್ನು ಆಯ್ಕೆಮಾಡಿ ಗುರುಗಳಿಗೆ ತಿಳಿಸಿದರು.ಗುರುಗಳ ಮುಖದಲ್ಲಿ ಎಂತದೊ ನಗು, ಅವರು ವೆಂಕಣ್ಣನವರೊಂದಿಗೆ ತಾವೆ ಹೊರಟು, ಹತ್ತಿರದ ಕಾಡಿನಲ್ಲಿದ್ದ ಕರಿಕಲ್ಲೊಂದನ್ನು ಗುರುತಿಸಿ ಇದರಿಂದಲೆ ತಮ್ಮ ಬೃಂದಾವನದ ರಚನೆಯಾಗಬೇಕೆಂದರು.ಕಾರಣ ಅವರೆ ಸ್ವಷ್ಟ ಪಡಿಸಿದರು. ತ್ರೇತಯುಗದಲ್ಲಿ ಶ್ರೀರಾಮನು ಸೀತೆಯನ್ನು ಅರಸುತ್ತ ದಕ್ಷಿಣದತ್ತ ಚಲಿಸುವಾಗ ಇದೆ ಬಂಡೆಯ ಮೇಲೆ ವಿಶ್ರಾಂತಿ ಪಡಿದಿದ್ದನಂತೆ, ಗುರುಗಳ ದಿವ್ಯದೃಷ್ಟಿಯ ಮಾತಿಗೆ ಎಲ್ಲರು ಒಪ್ಪಿದರು. ಅದೆ ಬಂಡೆಯ ಕಲ್ಲು ಹಾಸುಗಳು ಸಿದ್ದವಾಗಿ ಈ ದಿನಕ್ಕೆ ಕಾದಿವೆ.

ಇಂದು ಎಂದಿಗಿಂತ ಮೊದಲೆ ಸೂರ್ಯೋದಯದ ಬಹಳ ಪೂರ್ವದಲ್ಲಿಯೆ ಇನ್ನು ನಕ್ಷತ್ರಗಳು ಕಾಣುವಾಗಲೆ ಎದ್ದರು. ತಮ್ಮ ಸ್ನಾನ ಜಪತಪಗಳನ್ನು ಮುಗಿಸಿದರು.ನಂತರ ತಮ್ಮ ಶಿಷ್ಯರನ್ನೆಲ್ಲ ಕೂಡಿಸಿಕೊಂಡು. ಶ್ರೀಮದಾಚಾರ್ಯರ ಭಾಷ್ಯವನ್ನು ಅದರ ತತ್ಪಾರ್ಯ ಟಿಪ್ಪಣಿಗಳನ್ನು ವಿವರಿಸಿದರು. ಶಿಷ್ಯರಿಗೆಲ್ಲ ತಮ್ಮ ಪ್ರೀತಿಯ ಗುರುಗಳ ಕಡೆಯ ಪ್ರವಚನ ಇದೆಂಬ ಭಾವ. ಪ್ರ್ವವಚನ ಮುಗಿಸಿದ ಗುರುಗಳು ಮತ್ತೊಮ್ಮೆ ಸ್ನಾನ ದ್ಯಾನಾದಿಗಳನ್ನು ಮುಗಿಸಿ ಮೂಲರಾಮನ ಪೂಜೆಗೆ ಕುಳಿತರು.ಭಾವಪೂರ್ಣರಾಗಿ ಪೂಜೆಯನ್ನು ಮುಗಿಸಿ ತಾವೆ ಎಲ್ಲರಿಗು ತೀರ್ಥ ಪ್ರಸಾದ ಫಲಮಂತ್ರಾಕ್ಷತೆಗಳನ್ನು ಆಶೀರ್ವದಿಸಿದರು.ನಂತರ ತಾವು ಬೃಂದಾವನಸ್ಥರಾಗಳು ನಿರ್ದಿರಿಸಿದ ಕ್ಷಣ ಹತ್ತಿರವಾಗಲು, ಆ ಸ್ಥಳದತ್ತ ಎಲ್ಲರೊಡನೆ ಹೊರಟರು.

ಸುತ್ತಮುತ್ತಲ ಹಳ್ಳಿಗಳಿಗೆಲ್ಲ ಹೇಗೊ ವಿಷಯ ಹರಡಿಹೋಗಿತ್ತು. ಶ್ರೀಗಳು ಬೃಂದಾವನರಾಗುವ ಘಟನೆಗೆ ಸಾಕ್ಷಿಗಳಾಗಲು ಸಾಲುಸಾಲಾಗಿ ಸಹಸ್ರ ಸಹಸ್ರ ಸಂಖ್ಯೆಗಳಲ್ಲಿ ಭಕ್ತಜನ ನೆರೆದು ಬಂದಿದ್ದರು. ಎಲ್ಲರಿಗು ಗುರುಗಳನ್ನು ನೋಡುವ ತವಕ, ಅವರ ದರ್ಶನಪಡೆದು ಅವರ ಪಾದಗಳಿಗೆ ವಂದಿಸುವ ಆಸೆ.ಗುರುಗಳಾದರೊ ಎಲ್ಲರನ್ನು ಪ್ರೀತಿಭಾವದಿಂದ ನೋಡುತ್ತ, ಆಶೀರ್ವಾದ ಮಾಡುತ್ತ, ಮಾತನಾಡಿಸುತ್ತ, 'ಒಳ್ಳೆಯದಾಗಲಿ' ಎಂದು ಹರಸುತ್ತ ನಿದಾನವಾಗಿ ಪವಿತ್ರವಾದ ನದಿಯ ದಡದ ಆಜಾಗ ತಲುಪಿದರು.

ಬೃಂದಾವನ ಕಟ್ಟಲು ನಿರ್ದರಿಸಲಾಗಿದ ಜಾಗವನ್ನು ಭಕ್ತಿಯಿಂದ ವಂದಿಸಿ, ಅಲ್ಲಿ ಪದ್ಮಾಸನಸ್ಥರಾಗಿ ಕುಳಿತರು. ಹಲವು ಸಾವಿರ ಜನ ನೆರೆದಿದ್ದರು ಸಹ ಎಲ್ಲೆಲ್ಲು ನಿಶ್ಯಬ್ದ. ಗುರುಗಳು ಆಡಬಹುದಾದ ಪ್ರತಿಮಾತನ್ನು ಕೇಳಲು ಕಿವಿತೆರೆದು ನಿಂತ ಜನ ಸಮೂಹ. ಗುರುಗಳು ತಮ್ಮ ಶಿಷ್ಯರನ್ನು ಕುರಿತು ಮೆಲುದ್ವನಿಯಲ್ಲಿ ಮಾತನಾಡಿದರು. ಅವರ ದ್ವನಿಯ ಮೇಲೆ ಅವರ ವಯಸಿನ ಯಾವುದೆ ಪ್ರಭಾವವಿರಲಿಲ್ಲ.
"ತಾವು ಶ್ರೀಹರಿವಾಯುಗಳ ಇಚ್ಚೆಯ ಮೇರೆಗೆ ಈ ನಿರ್ದಾರ ಕೈಗೊಂಡಿರುವದಾಗಿ, ಅದಕ್ಕೆ ತಮ್ಮ ಪೂರ್ವಗುರುಗಳು ಶ್ರೀಸುಧೀಂದ್ರತೀರ್ಥರು ಹಾಗು ಶ್ರೀಕೃಷ್ಣದ್ವೈಪಾಯನರ ಸೂಚನೆಯು ಇದೆಯೆಂದು ತಿಳಿಸಿದರು. ತಾವು ಸಶರೀರಿಯಾಗಿ ಬೃಂದಾವನದಲ್ಲಿ ಏಳುನೂರುವರ್ಷಗಳ ಕಾಲ ನೆಲೆಸಿ ಭಕ್ತರ ಎಲ್ಲ ಸದ್ದೀಚ್ಚೆಯನ್ನು ನೆರೆವೇರಿಸುವದಾಗಿ ವಾಗ್ದಾನವಿತ್ತರು.ಈ ಕ್ಷೇತ್ರದಲ್ಲಿ ನೆಲೆಸಲು ಮಂಚಾಲೆ ಕ್ಷೇತ್ರದ ಆದಿದೇವತೆ ಮಂಚಾಲೆಯಮ್ಮನ ಒಪ್ಪಿಗೆ ಪಡೆದಿರುವದನ್ನು ತಿಳಿಸಿ ಮುಂದೆ ತಮ್ಮ ಯಾವುದೆ ಭಕ್ತರು ಪ್ರಥಮವಾಗಿ ತಾಯಿಯ ಆಶೀರ್ವಾದಪಡೆದು ನಂತರ ತಮ್ಮ ಬೃಂದಾವನ ದರ್ಶನಪಡೆಯಬೇಕೆಂದು ತಿಳಿಸಿದರು"

ನಂತರದಲ್ಲಿ ತಮ್ಮ ಶಿಷ್ಯರು ಹೊತ್ತು ತಂದಿದ್ದ ತಮ್ಮ ವೀಣೆಯನ್ನು ಪಡೆದು, ನುಡಿಸಿ ಆನಂದಿಸಿದರು. ಬೈರವಿ ರಾಗದಲ್ಲಿ ತಮ್ಮದೆ ರಚನೆ "ಇಂದು ಎನಗೆ ಗೋವಿಂದ ನಿನ್ನಯ ಪಾದಾರವಿಂದವ ತೋರೊ ಮುಕುಂದ" ಎಂದು ಹಾಡುತ್ತ ಹಾಡುತ್ತ ಕಣ್ಣುತುಂಬಿ ಭಾವಪೂರ್ಣರಾಗಿ ಗಂಟಲು ಕಟ್ಟಿ ಗದ್ಗದಿತರಾದರು.

ಸುತ್ತಲು ನಿಂತಿದ್ದ ಪ್ರತಿಯೊಬ್ಬರಿಗು ಗುರುಗಳನ್ನು ಕಾಣುವ ತವಕ, ಇದು ನಿಜರೂಪದಲ್ಲಿ ಗುರುಗಳು ಕೊಡುತ್ತಿರುವ ಕಡೆಯ ದರ್ಶನವೆಂದು ಪ್ರತಿಯೊಬ್ಬರಿಗು ತಿಳಿದಿದೆ.ಆದರೆ ಭಕ್ತರಿಗೆ ಗುರುದರ್ಶನಕ್ಕೆ ಅಡ್ಡಿಯಾಗುತ್ತ ಇದ್ದಿದ್ದು, ಅವರದೆ ದುಃಖಾಶ್ರುಗಳು, ಪದೇ ಪದೇ ಕಣ್ಣಲ್ಲಿ ತುಂಬಿಕೊಳ್ಳುತ್ತಿರುವ ಕಣ್ಣೀರೆ. ಅವರ ದೃಷ್ಟಿ ಮಂಜಾಗುತ್ತಿತ್ತು, ಕಣ್ಣೀರು ಒರೆಸಿಕೊಂಡು ಪುನಃ ಗುರುಗಳನ್ನು ಕಣ್ತುಂಬಿಕೊಳ್ಳುತ್ತಿದ್ದರು.

ದಿವಾನ ವೆಂಕಣ್ಣನವರೆ ನಿಂತು ಗುರುಗಳ ಸೂಚನೆ ಮೇರೆಗೆ ಬೃಂದಾವನ ನಿರ್ಮಾಣದ ಉಸ್ತುವಾಗಿ ವಹಿಸಿದ್ದರು.ಅದನ್ನು ನಿರ್ಮಿಸುತ್ತಿದ್ದ ಶಿಲ್ಪಿಗಳು ಅಷ್ಟೆ , ಅವರಿಗೆ ಮನಸಿನಲ್ಲಿ ಎಂತದೊ ಆಂದೋಲನ, ತಾವು ಮಾಡುತ್ತಿರುವ ಕಾರ್ಯವು ಪುಣ್ಯಕಾರ್ಯವೆ ಅಥವ ಮತ್ತೇನೊ ಎಂದು. ಆದರೆ ಗುರುಗಳ ಆಜ್ಞೆ ನೆರವೆರಿಸುವುದೆ ತಮ್ಮ ಸರಿಯಾದ ಕರ್ತವ್ಯವೆಂದು ದೃಡನಿಶ್ಚಯ.

ಗುರುಗಳು ಕೈಯಲ್ಲಿ ಜಪಮಾಲೆ ಹಿಡಿದು ಪ್ರಣವ ಮಂತ್ರವನ್ನು ಉಚ್ಚರಿಸುತ್ತ ಧ್ಯಾನಮಗ್ನರಾದರು.ಮುಖದಲ್ಲಿ ಅಪೂರ್ವಶೋಭೆಯೊಂದು ಬೆಳಗುತ್ತಿತ್ತು. ನೋಡುವರ ಕಣ್ಣಿಗೆ ಸ್ವಷ್ಟವಾಗಿ ಕಾಣುವ ಪ್ರಭೆ. ದ್ಯಾನದಲ್ಲಿ ನಿರತರಾದಂತೆ  ಅವರ ಕೈಬೆರಳುಗಳ ತುಳಸಿಜಪಮಾಲೆಯ ಚಲೆನೆಯು ನಂತರ ತುಟಿಯ ಚಲನೆಯು ನಿಂತಿತು.ದೇಹ ನಿಶ್ಚಲವಾಯಿತು. ಈಗ ನಿಶ್ಯಬ್ದವಾಗಿ ಗುರುಗಳ ಅಣತಿಯಂತೆ ಅವರ ಸುತ್ತ ಕಲ್ಲಿನ ಕಟ್ಟಡದ ರಚನೆ ಪ್ರಾರಂಬವಾಯಿತು.ತಲೆಯವರೆಗು ಕಲ್ಲಿನ ರಚನೆ ಬಂದ ನಂತರ , ಅದರ ಮೇಲೆ ಗಂಡಕಿ ನದಿಯಿಂದ ವಿಶೇಷವಾಗಿ ತರಿಸಿದ ಅಪೂರ್ವವಾದ ಸಾವಿರದ ಇನ್ನೂರ ಶ್ರೀಲಕ್ಷ್ಮೀನಾರಯಣ ಸಾಲಿಗ್ರಾಮವನ್ನು ಜೋಡಿಸಿದ ತಾಮ್ರದ ಪೆಟ್ಟಿಗೆಯನ್ನು ಇರಸಲಾಯಿತು.ನಂತರ ಅದರಮೇಲೆ ಕಲ್ಲಿನ ಕಟ್ಟಡ ನಿರ್ಮಿಸಿ, ನಂತರ ಕಟ್ಟೆ ನಿರ್ಮಿಸಿ ಮೃತ್ತಿಕೆಯನ್ನು ತುಂಬಿಸಲಾಯಿತು.

 ಎಲ್ಲ ಕೆಲಸಗಳನ್ನು ಶ್ರೀರಾಘವೇಂದ್ರ ಗುರುಗಳ ಇಚ್ಚೆಯಂತೆ ನೆರವೇರಿಸಲಾಯಿತು. ನಂತರ ಅಭಿಷೇಕ ನಡೆಯಿತು.ಶ್ರೀರಾಘವೇಂದ್ರರಿಗೆ ಜಯಕಾರ ಹಾಕಲಾಯಿತು. ಕೆಲವರನ್ನು ಹೊರತುಪಡಿಸಿ, ಎಲ್ಲರೂ ಮೌನವಾಗಿ ಅಲ್ಲಿಂದ ಹೊರಟರು. ಹೀಗೆ ಶ್ರೀರಾಘವೇಂದ್ರರು ಸಶರೀರರಾಗಿ ಬೃಂದಾವನದಲ್ಲಿ ನೆಲೆಸಿದರು, ತಮ್ಮ ಭಕ್ತರ ಯೋಗಕ್ಷೇಮ ಕಾಯಲು ಅವರ ಅಭೀಷ್ಟಗಳನ್ನು ನೆರವೇರಿಸಲು.ದೈವಕೃಪೆ ದೊರಕಿಸಲು.
*********************************   ೩

 ಗುರುಗಳ ಆಜ್ಞೆಯ ಮೇರೆಗೆ ಶ್ರೀಮಠದಿಂದ ಕಾರ್ಯಾರ್ಥವಾಗಿ ಬಂದಿದ್ದ ಶ್ರ್ಖೀಅಪ್ಪಣ್ಣಾಚಾರ್ಯರಿಗೆ ಕಿವಿಯಿಂದ ಕಿವಿಗೆ ಹರಡಿ ಬಂದ ಸುದ್ದಿ ತಲುಪಿದಾಗ ನಂಬದಂತಾದರು ಆದರೆ ಶ್ರೀಮಠದ ಶಿಷ್ಯರೆ ಸುದ್ದಿ ಹೊತ್ತು ತಂದಾಗ ಕುಸಿದುಹೋದರು. ಗುರುಗಳನ್ನು ಹೇಗಾದರು ಕಂಡು ಅವರ ನಿರ್ದಾರದಿಂದ ಹಿಂದೆಸರಿಯುವಂತೆ ಮಾಡಬೇಕೆಂದು ಕಾತುರದಿಂದ ಬಂದ ಅವರಿಗೆ ಕಂಡಿದ್ದು ಆಗತಾನೆ ನಿರ್ಮಾಣವಾಗಿದ್ದ ಬೃಂದಾವನ, ಕಾವಲಿಗೆ ಇದ್ದ ಒಂದಿಬ್ಬರನ್ನು ಹೊರತುಪಡಿಸಿ ಎಲ್ಲರು ಹೊರಟುಹೋಗಿದ್ದರು.
 ಶ್ರೀಅಪ್ಪಣ್ಣರಿಗೆ ತಮ್ಮ ಅನುಪಸ್ಥಿಥಿಯಲ್ಲಿ ನಡೆದುಹೋದ ಈ ಕಾರ್ಯದಿಂದ ದುಃಖವುಕ್ಕಿ ಬಂದು, ಗುರುಗಳ ಬೃಂದಾವನದ ಎದುರಿನಲ್ಲಿ ಕುಳಿತು, ಶೋಕಪಡುವಾಗ ಅವರಿಗೆ ಅರಿವಿಲ್ಲದೆ "ಶ್ರೀಪೂರ್ಣಭೋಧ ಗುರುತೀರ್ಥ ಪಯೋಬ್ದಿಪಾರ .." ಎನ್ನುವ ಗುರುಗಳನ್ನು ಸ್ತುತಿಸುವ ಶ್ಲೋಕ ಅವರ ಬಾಯಲಿ ಹೊರಟಿತು. ಶ್ಲೋಕವನ್ನು ಪಠಿಸುತ್ತ, ಕಡೆಯಲ್ಲಿ ಈ ಶ್ಲೋಕವನ್ನು ನಿಷ್ಟೆಯಿಂದ ಪಠಿಸಿದಲ್ಲಿ ಶ್ರೀಹರಿಯ ಒಲಿವಿನಿಂದ ಶ್ರೇಯಸ್ಸು ಉಂಟಾಗುವದೆಂದು ಹೇಳುತ್ತಿರಲು,ಅದ್ಭುತವೊಂದು ನಡೆದಿತ್ತು, ಬೃಂದಾವನದ ಒಳಗಿನಿಂದ , ಇದಕ್ಕೆ ಸಾಕ್ಷಿ ಶ್ರೀಹಯಗ್ರೀವರು ಎನ್ನುವ ಸ್ವಷ್ಟ ದ್ವನಿ ಕೇಳಿಬಂದಿತು. ಶ್ರೀಅಪ್ಪಣ್ಣರು ಆನಂದಬರಿತ ರಾದರು ಶ್ರೀಗುರುಗಳ ಪೂರ್ಣ ಕೃಪೆ ತಮ್ಮ ಮೇಲಿದೆಯೆಂದು ಅರಿತು ಸಮಾದಾನಗೊಂಡರು. ಹೀಗೆ ಶ್ರೀಗುರುರಾಘವೇಂದ್ರರ ಬೃಂದಾವನದ ಸನ್ನಿದಿಯಲ್ಲಿ  ಪ್ರಥಮ ಪವಾಡರೀತಿಯ ಘಟನೆಯೊಂದು ನಡೆದು ಹೋಯಿತು.
                    -------

2 comments:

  1. Dear Parathysarathy sir,
    You have brought the essense of the last days of Sri Raghavendra Swamy's life. Ireally loved this article.

    ReplyDelete
  2. Dear suresh
    thank you
    this one is first comment
    after 2011
    regards
    parthasarathy N

    ReplyDelete

enter your comments please