Friday, January 13, 2012

ತರಕಾರಿ ಮಾರುವವಳು ಮತ್ತು ನಾನು



                (1)

ಅಮ್ಮ  ಕೈಯ ತೋರಿ ಹೇಳಿದಳು
'ಅಲ್ಲಿ ಹೋಗಿ ತಾ'
ಎಡವುತ್ತ ನಡೆದು ಹೋದೆ
"ಏನು ಬೇಕು ಪುಟ್ಟಾ?"
ಕೇಳಿದಳು ಅವಳು
ತರಕಾರಿ ಮಾರುವವಳು
"ಕೊತ್ತಂಬರಿ ತೊಪ್ಪು" ತೊದಲಿತು ಬಾಯಿ
"ಅಯ್ಯೊ ನನ್ನ ಬಂಗಾರ"
ಉಲಿದಳು ಆಕೆ ಜೊತೆಗೆ ಒಂದು ಸೇಬು
'ತಿನ್ನು ಪುಟ್ಟು' ಎಂದು


         (2)

"ಏನು ಬೇಕೊ ಹುಡುಗ"
ಅವಳ ಮುಖದಲ್ಲಿ ಎಂತದೊ ನಗು
ನನ್ನ ದ್ವನಿಯಲ್ಲಿ ಎಂತದೊ ಬಿಂಕ
"ಕೊತ್ತಂಬರಿ ಸೊಪ್ಪು ಕೊಡಿ .."
ಕೈಗೆ ಕೊಡುತ್ತ ಕೇಳಿದಳು
"ಏನು ಓದುತ್ತಿರುವೆ ?"
"ನಾನು ಸ್ಕೂಲು ಓದುತ್ತಿರುವೆ"
ಪೆದ್ದು ಉತ್ತರಕ್ಕೆ ಗಹಗಹಿಸಿ ನಕ್ಕಳು
ಅವಳ ಕೈ ನೋಡಿದೆ
ಸೇಬು ಏನು ಕೊಡಲಿಲ್ಲ.



         (3)

"ಏನು ಬೇಕು ನಿಮಗೆ"
ಕಣ್ಣಿನಲ್ಲಿಯೆ ಕೇಳಿದಳು
ಕೆನ್ನೆಯಲ್ಲಿ ಎಂತದೊ ಓಕುಳಿ ಬಣ್ಣ
"ಕೊತ್ತಂಬರಿ ಸೊಪ್ಪು ಕೊಡಿ"
ಆಗಿನ್ನು ಒಡೆದ ನನ್ನ ಗಂಡು ದ್ವನಿ
ಕೊಡುವಾಗ ಕೈಬೆರಳು ತಗುಲಿತೇನೊ
ಎಂತದೊ ಪುಳಕ ನನ್ನಲ್ಲಿ
 ಎಂತದೊ ನಡುಕ
ಅವಳ ಕೆಂಪು ತುಟಿಯಲ್ಲಿ



                (4)

'ಸ್ವಲ್ಪ ಅಂಗಡಿಗೆ ಹೋಗಿ ಬರಲಾರಿರೇನು"
ಮನದನ್ನೆಯ ಕೋರಿಕೆ
ತರಕಾರಿ ಮಾರುವವಳ ಎತ್ತಲೊ ನೋಟ
"ಇದೇನು ಸೊಪ್ಪು ಹೀಗಿದೆ
ಬಿಸಲಿಗೆ ಎಲ್ಲ ಬಾಡಿದೆ"
ನನ್ನ ಕಿರಿಕಿರಿ
"ಅದು ಈಗ ಹಾಗೆ"
ಅವಳ ಅಲಕ್ಷ ದ್ವನಿ.



               (5)

ಮಗಳ ಕೈಹಿಡಿದು ಅಂಗಡಿಗೆ ಹೋದೆ
"ಹೇಗಮ್ಮ ಕೊತ್ತಂಬರಿ ಸೊಪ್ಪು
ಕೊಡು ಎರಡು ರುಪಾಯಿಗೆ"
ಅವಳ ಬಳಿ ಕೇಳಿದೆ , ನಿರ್ಲಕ್ಷ ನೋಟ
"ಚಿಲ್ಲರೆ   ಕೊಡಿ ಅಂಕಲ್  ಇಲ್ಲವೆಂದರೆ
ಕೊತ್ತಂಬರಿ ಸೊಪ್ಪು ಇಲ್ಲ"
ತರಕಾರಿಯವಳ ಅಹಂಕಾರ
ನನ್ನೊಳಗೆ ನನ್ನತನದ ಅಹಾಕಾರ



                     (6)

ಮೊಮ್ಮಗುವಿನ ಜೊತೆ ಅಂಗಡಿಯ ದಾರಿ
"ಕೊತ್ತಂಬರಿ ಸೊಪ್ಪು ಕೊಡಮ್ಮ"
ಎನ್ನುವ ಮುಂಚೆಯೆ ಕಾಡಿದ ಕೆಮ್ಮು
ನುಡಿದರೆ ನಡುಗುವ ದ್ವನಿ, ಜೊತೆಗೆ ದಮ್ಮು
"ಬೆಳಗಿನ ಚಳಿಯಲ್ಲಿ ಮನೆಯಲ್ಲಿ
ಬೆಚ್ಚಗಿರಬಾರದೆ ತಾತ"
ತರಕಾರಿಯವಳ ದ್ವನಿಯಲ್ಲಿ ಎಂತದೊ ಕುಹಕ.
ಉತ್ತರಿಸದೆ ಹೊರಟೆ ನಾನು ಮನೆಗೆ
"ಕೈ ಬಿಡು ತಾತ ಈ ದಾರಿ ನನಗೆ ಹೊಸತೆ"
ಮೊಮ್ಮಗುವಿನ ನಗುವಿನ ಜಳಕ.


ಬದಲಾಗುತ್ತ ಸಾಗಿದೆ
ಈ ಜಗದ ರೀತಿಯೆ ಹೀಗೆ
ತರಕಾರಿ ಮಾರುವವಳ ಮಾತಿನ ಹಾಗೆ .
===========================

No comments:

Post a Comment

enter your comments please