Monday, November 19, 2012

ನಾನು , ನಾನು ಮತ್ತು ನಾನು

ನಾನು , ನಾನು  ಮತ್ತು ನಾನು

ಹೋಟೆಲ್ ನಲ್ಲಿ ಕಾಫಿ ಕುಡಿಯುತ್ತಲೆ ಎದುರಿಗಿರುವ ಸ್ನೇಹಿತರ ಜೊತೆ ಮಾತನಾಡುತ್ತಿದ್ದೆ
“ನೋಡಿ ಇವರಿಗೆಲ್ಲ ಎಷ್ಟು ಕೊಬ್ಬು, ಹಣ ಮಾತ್ರ ಪಡೆಯುತ್ತಾರೆ,  ಅದು ಕಡಿಮೆ ಏನಿಲ್ಲ ಒಂದು ಕಾಫಿಗೆ ಹನ್ನೆರಡು ರೂಪಾಯಿ, ಕಾಫಿ ಬಿಸಿ ಇಲ್ಲ ಎಂದರೆ ,   ಗ್ಯಾಸ್ ಸಪ್ಲೈ ಮಾಡಿಸಿ ಫುಲ್ ಬಿಸಿ ಕೊಡ್ತೀನಿ ಅಂತ ತಲೆಹರಟೆ ಉತ್ತರ ಕೊಡ್ತಾನೆ.  ವ್ಯಾಪಾರದಲ್ಲಿ ನಿಷ್ಟೆ ಪ್ರಾಮಾಣಿಕತೆ ಎಂಬುದೆ ಇಲ್ಲ ಅಯೋಗ್ಯರು’  ನನ್ನ ದ್ವನಿ ನನಗೆ ಅರಿಯದೆ ಜಾಸ್ತಿಯಾಗಿತ್ತು, ಕೋಪಕ್ಕೆ ಮೈ ಸ್ವಲ್ಪ ಬಿಸಿ ಆಗುತ್ತಿತ್ತು. ನಾವು ನಿಂತಿದ್ದು ಹೋಟೆಲಿನ ಎದುರಿನ ಪುಟ್ ಪಾತಲ್ಲಿ,   ಕುಳಿತು ಕಾಫಿ ಕುಡಿಯಲು ಸಹ ಅವಕಾಶವಿಲ್ಲದ ಸ್ಥಳ. ಅಷ್ಟರಲ್ಲಿ ಎದುರಿಗೆ  ಗೋಪಿನಾಥರಾಯರು ಬರುವುದು ಕಾಣಿಸಿತು. ಅವರನ್ನು ನೋಡುವಾಗಲೆ ನನಗೆ ಈ ಕಾಫಿ ವಿಷಯ ಮರೆತೆ ಹೋಗಿ, ಮುಖದಲ್ಲಿ ನಗು ತುಂಬಿತ್ತು
“ನಮಸ್ಕಾರ ಸಾರ್, ಬನ್ನಿ ಎಲ್ಲಿ ಅಪರೂಪವಾದಿರಿ, ತುಂಬಾ ದಿನಾ ಆಯ್ತು ನಿಮ್ಮ ನೋಡಿ” , ನನಗೆ ಅರಿವಿಲ್ಲದೆ ನನ್ನ ದ್ವನಿಯಲ್ಲಿ ಸಂತಸ, ಆತ್ಮೀಯತೆ ಹಾಗು ಸ್ವಲ್ಪ ವಿದೇಯತೆ.  
ನಂತರ  ಅನ್ನಿಸಿತು, ಮೊದಲು ಕೋಪದಿಂದ ಮಾತನಾಡುತ್ತಿದ್ದವನು ನಾನ ? ಅಥವ ತಕ್ಷಣ ಬದಲಾದ ದ್ವನಿ, ಮನಸಿನೊಂದಿಗೆ ನಗುತ್ತ ಮಾತನಾಡಿದವನು ನಾನ ?.

ನನ್ನೊಳಗೆ ಇದ್ದು, ಕ್ಷಣ ಕ್ಷಣಕ್ಕು ಈ ಊಸರವಳ್ಳಿಯಂತೆ ಬಣ್ಣ ಬದಲಾಯಿಸುತ್ತ ಎದುರಿಗೆ ಇರುವ ವ್ಯಕ್ತಿಗಳೊಂದಿಗೆ ವ್ಯವಹರಿಸುವ ನನ್ನೊಳಗಿನ ಈ ನಾನು ಯಾರು ? ಎಂಬ ಭಾವ ತುಂಬಿತು.

ಎಂತಹ ಕಷ್ಟಕರವಾದ ಪ್ರಶ್ನೆ.  ತುಂಬಾ ಸರಳ ಹಾಗು ನೇರ. ಅದು ಕೇವಲ ಎರಡೆ ಎರಡು ಪದ

“ನಾನು ಯಾರು?”

ಈ ಪ್ರಶ್ನೆಗೆ ಉತ್ತರ ಹುಡುಕಲು, ಮನುಕುಲ ಸಾವಿರ ಸಾವಿರ ವರ್ಷಗಳ ಹುಡುಕಾಟ ನಡೆಸಿದೆಯಲ್ಲ ಅನ್ನಿಸಿತು. ಈ ನಾನು ಯಾರು ಎನ್ನುವ ಪ್ರಶ್ನೆಗೆ ಎರಡು ಮುಖ .

ಮೊದಲ ಮುಖ ವೇದಾಂತದ್ದು.

ಶಂಕರಾಚಾರ್ಯರು ತಮ್ಮ  ಅದ್ವೈತ ಸಿದ್ದಾಂತವನ್ನು ಮಂಡಿಸುತ್ತ, ನಾನು ಯಾರು ಎಂದು ಹೇಳಲು ಹೊರಟರು.  ಸಂಪೂರ್ಣ ವಿಶ್ವವನ್ನೆ ಆವರಿಸಿರುವ ಶಕ್ತಿ ಹಾಗು ನಮ್ಮೊಳಗಿನ ಶಕ್ತಿಯ ಏಕಭಾವವನ್ನು ಬಿಂಬಿಸುತ್ತ ಅವರು ’ಅಹಂ   ಬ್ರಹ್ಮಾಸ್ಮಿ” ಎಂದರು.

ಅದೆ ಪ್ರಶ್ನೆಯನ್ನು ಮತ್ತೆ ಉತ್ತರಿಸುತ್ತ ಮದ್ವಾಚಾರ್ಯರಾಗಲಿ, ರಾಮಾನುಜರಾಗಲಿ ಮತ್ತೆ ತಮ್ಮ ತಮ್ಮ ದ್ವೈತ ವಿಶಿಷ್ಟಾದ್ವೈತ ಸಿದ್ದಾಂತಗಳನ್ನು ಪ್ರತಿಪಾದಿಸಿದರು.

ಆದರು ಪ್ರಶ್ನೆ ಹಾಗೆ ಉಳಿದಿತ್ತು “ನಾನು ಯಾರು?”

 ದಾಸರುಗಳು ಬಂದರು ನಾನು ಎನ್ನುವ ಪದಕ್ಕೆ ಉತ್ತರಗಳನ್ನು ಅವರದೆ ಹಾದಿಯಲ್ಲಿ ಹುಡುಕಿದರು, ಹಾಗೆ ಬಸವಣ್ಣನವರು, ನಂತರದಲ್ಲಿ ಕಾಲ ಕಾಲಕ್ಕೆ ಬಂದ ಹತ್ತು ಹಲವು ಸಿದ್ದ ಪುರಷರು ‘ನಾನು ‘ ಎನ್ನುವ ಚಿಕ್ಕ ಪದವನ್ನು ಬಿಡಿಸಲು ಯತ್ನಿಸಿದರು.

ಇದೆಲ್ಲ ವೇದಾಂತದ ಭಾಗವಾಯಿತು. ಅವೆಲ್ಲ ಕೇವಲ ತರ್ಕ ವಾದ  ನಂಬಿಕೆಗಳ ಮೇಲೆ ನಿಂತಿರುವ ‘ನಾನು’  ಬಿಡಿ.

ಅಷ್ಟಾದರು ‘ನಾನು‘ ಎಂದರೆ ಯಾರು ? .  

ನಿಜವಾದ ಪ್ರಾಕೃತ ಭಾವದೊಂದಿಗೆ ನೋಡೋಣ.

ಅದು ನಾನು ಎಂಬ ಪದದ ವ್ಯವಹಾರ ಭಾಗ ಅಥವ ಮನಸಿನ ಮುಖ.

ಚಿಕ್ಕವಯಸಿನಲ್ಲಿ ನನ್ನನ್ನು ತಂದೆ ತಾಯಿ ಸಲಹಿದರು, ಅವರ ಪಾಲಿಗೆ ನಾನು ಮಗುವಾಗಿದ್ದೆ. ಈಗಲು ಒಮ್ಮೆ ಕಣ್ಣು ಮುಚ್ಚಿ ನೋಡಿ ನಿಮ್ಮ ಚಿಕ್ಕ ವಯಸನ್ನು ನೆನೆಯಿರಿ, ನಿಮ್ಮ ಮನಸ್ಸು ಪುಟ್ಟ ಮಗುವಾಗಿಯೆ ಇರುತ್ತದೆ, ನಿಮ್ಮ ಕೈ ಹಿಡಿದು ನಡೆಸಿದ ತಂದೆ, ಕೈ ತುತ್ತು ನೀಡಿದ ತಾಯಿ ಕಾಣುವಾಗ ನೀವು ಮಗುವೆ ಆಗಿರುತ್ತಿರಿ, ಅಂದರೆ ನೀವು ತಂದೆ ತಾಯಿಗೆ ಮಗು

ಮತ್ತೆ ಎಂತದೊ ನೆನಪು , ಶಾಲೆಯಲ್ಲಿ ನಮಗೆ ಅಕ್ಷರಗಳನ್ನು ತಿದ್ದಿ ಕಲಿಸಿದ, ನಮಗೆ ತಿಳಿಯದ ವಿಸ್ಮಯದ ಜಗತ್ತನು ನಮ್ಮೆದುರು ಅನಾವರಣಗೊಳಿಸುತ್ತ ಬಂದ ನಮ್ಮ  ಶಿಕ್ಷಕರು, ಅವರ ಪಾಲಿಗೆ ನಾವು   ವಿದ್ಯಾರ್ಥಿಗಳಾಗಿದ್ದೆವು , ನಿಜ ನಾನು ವಿದೇಯ   ವಿದ್ಯಾರ್ಥಿ ,  ಹಾಗೆ ಗೆಳೆಯರ ಮದ್ಯೆ ನೆನೆಯುವಾಗ ಅವರಿಗೆಲ್ಲ ನಾನು ಸ್ನೇಹಿತನಾಗಿದ್ದೆ. ಎಷ್ಟೊಂದು ಜನ , ಅವರ ಪಾಲಿಗೆ ನಾನು ಗೆಳೆಯ ಸ್ನೇಹಿತ. ಎಂತಹ ಪಾತ್ರ.

ನಿಜ ಇವೆಲ್ಲ ನನ್ನ ನಿಜವಾದ ಮುಖಗಳೆ, ನಾನು ತಂದೆ ತಾಯಿಗೆ ಮಗುವಾಗಿದ್ದು ನಿಜ, ಮತ್ತೆ   ವಿದ್ಯಾರ್ಥಿಯಾಗಿದ್ದು,  ಹಾಗೆ ಎಲ್ಲರಿಗು ಗೆಳೆಯನಾಗಿದ್ದು ನಿಜವಾದ ’ನಾನೆ’

ಹಾಗೆ ಕೆಲಸಕ್ಕೆ ಸೇರಿದೆ. ಎಷ್ಟೋ ವರ್ಷಗಳ ಕಾಲ ಅಲ್ಲಿಯೆ ಕಾಲ ಸವಿಸಿದೆ. ಆದರೆ ಅದೊಂದು ವಿಚಿತ್ರ. ನನ್ನ ಮನೆಯಲ್ಲಿನ ’ನಾನು’ ವಿಗು ಆಫೀಸಿನಲ್ಲಿಯ ’ನಾನು’ ವಿಗು ಯಾವುದೆ ಸಂಭಂದವಿರಲಿಲ್ಲ. ಇಲ್ಲೆಲ್ಲ ಎಂತದೊ ಕೃತಕ ಭಾವ. ಕೆಲವರಿಗೆ ನಾನು ಮೇಲಾಧಿಕಾರಿಯಾದರೆ  , ನನ್ನ  ಮೇಲಾಧಿಕಾರಿಗೆ ನಾನು ಕೈ ಕೆಳಗಿನ ಕೆಲಸದವನು.

ನಾನು ಇಲ್ಲಿ ಎನು? , ಅಧಿಕಾರಿಯೊ ಕೆಲಸದವನೊ ಅರ್ಥವಾಗದ ಭಾವ.

ಮೊದಲಿಗೆ ಮೇಲಿನವರಿಗೆ ನಮಸ್ಕರಿಸುವಾಗ ಅನ್ನಿಸುತ್ತಿತ್ತು, ಇದೆಂತಹ ದಾಸ್ಯ ಭಾವ, ಹೊಟ್ಟೆಪಾಡಿಗಾಗಿ ಈ ಶೃಂಖಲೆ ಬೇಕೆ. ಹೆಚ್ಚು ಕಡಿಮೆ ಜೀತದಾಳಿನ ಸ್ಥಿಥಿ. ಜೀವಮಾನ ಪೂರ್ತ ಬಿಡಿಸಿಕೊಳ್ಳಲಾರದ ಅನಿವಾರ್ಯತೆ. ಒಮ್ಮೆ ನನ್ನ ಸ್ನೇಹಿತರು ಎಂದರು
“ಹಾಗೇಕೆ   ಅಂದುಕೊಳ್ಳುವಿರಿ, ನಿಮ್ಮ ಕೆಲಸಗಾರರು ನಿಮಗೆ ನಮಸ್ಕರಿಸುವರು, ನೀವು ನಿಮ್ಮ ಮೇಲಾದಿಕಾರಿಗೆ ನಮಸ್ಕರಿಸುವಿರಿ ಅಷ್ಟೆ” ಎಂದು.

ಹೌದಲ್ಲವೆ , ಇಲ್ಲಿ ನನ್ನದೇನು ಹೋಗುತ್ತಿದೆ, ಅನ್ನಿಸಿತು. ನಾನು ನನ್ನ ಕೆಳಗಿನ ಎಲ್ಲ ಕೆಲಸಗಾರರು ನನಗೆ ಸಲ್ಲಿಸುವ ನಮಸ್ಕಾರವನ್ನು ಹಾಗೆಯೆ ನನ್ನ ಮೇಲಾದಿಕಾರಿಗೆ ತಲುಪಿಸುತ್ತಿದ್ದೇನೆ ಅಷ್ಟೆ. ನಾನು ಕೇವಲ ಒಂದು ಮಾಧ್ಯಮ ಅನ್ನಿಸಿತು.  ಉಧ್ಯೋಗ ಅನ್ನುವುದೊಂದು ವ್ಯವಸ್ಥೆ ಇಲ್ಲಿ  ’ನಾನು’ ಎನ್ನುವ ಪದಕ್ಕೆ ಅರ್ಥವೆ ಇಲ್ಲ. ಒಮ್ಮೆ ಕೆಲಸದಿಂದ , ನಿವೃತ್ತನಾದರೆ ಮುಗಿಯಿತು. ಆ ’ನಾನು’ ಹಾಗೆ ನನ್ನಿಂದ ದೂರವಾಗಿ ಮತ್ಯಾರನ್ನೊ ಹುಡುಕಿ ಹೊರಟುಹೋಗುತ್ತೆ. ಇಲ್ಲಿ ನಾನು ಕೆಲಸಗಾರನು ಅಲ್ಲ, ಮೇಲಾದಿಕಾರಿಯು ಅಲ್ಲ. ಒಂದು ಅದಿಕಾರ ಅಷ್ಟೆ,  ಒಂದು ’ಆಯುಧ’ ಅಷ್ಟೆ. ನನ್ನನ್ನು ಮತ್ಯಾರೊ ಇನ್ಯಾರ ಮೇಲೊ ಪ್ರಯೋಗಿಸಬಹುದು.  ಇಲ್ಲಿ ನನಗೆ ವ್ಯಕ್ತಿತ್ವವೆ ಇಲ್ಲ.

ಹಾಗೆ ಮದುವೆ ಆಯಿತು.  ಸಂಸಾರದಲ್ಲಿ ನನ್ನದು ಗಂಡನ ಪಾತ್ರ,. ನಿಜ ಈಗ ಇಲ್ಲಿ ಸಹ ನಾನು ಇದ್ದೆ, ಆದರೆ ಅವರ ಪಾಲಿಗೆ ಗಂಡನಾಗಿ , ಮಗಳ ಪಾಲಿಗೆ ಅಪ್ಪನಾಗಿ ಇರುವೆ.    ಎಷ್ಟೊಂದು  ‘ನಾನು ‘ ಗಳು

ಈ ಎಲ್ಲ ’ನಾನು’ ವಿನಲ್ಲಿ ನಿಜವಾದ ನಾನು ಯಾರು? .

ಇಲ್ಲ ಇಲ್ಲಿ ನಾನು ಎಂಬ ಯಾವ ವ್ಯಕ್ತಿತ್ವ ಸಹ ಅಸ್ತಿತ್ವದಲ್ಲಿ ಇಲ್ಲ. ಇಲ್ಲಿ ನಾನು ಎಂಬವದೆಲ್ಲ ಒಂದು ‘ಭಾವ ‘ ಅಷ್ಟೆ. ಅದಕ್ಕೆ ಸ್ಥಿರವಾದ ರೂಪವಿಲ್ಲ. ಪಾತ್ರೆಗೆ ಹಾಕಿದ ನೀರಿನಂತೆ ತನ್ನ ರೂಪ ಧರಿಸುತ್ತಿದೆಯಲ್ಲ ಅನ್ನಿಸಿತು. ಹೌದು ’ನಾನು’ ಎಂಬುದು ಒಂದು ಭಾವ ಅಷ್ಟೆ ಬದಲಾಗುತ್ತಿರುವ ಭಾವ.

ಅಂದರೆ ನಾನು ಎಂಬುದು ಈ ಎಲ್ಲ ನಾನಾ ವ್ಯಕ್ತಿತ್ವಗಳೆ, ಎದುರಿಗೆ ಇರುವವರಿಗೆ ನಾನು ಹೇಗೆಲ್ಲ ಕಾಣಿಸುತ್ತೇನೆ ? ನಾನು ಮಗುವಾಗಬಲ್ಲೆ, ನಾನು ವಿಧ್ಯಾರ್ಥಿಯಾಗಬಲ್ಲೆ, ನಾನು ಸ್ನೇಹಿತನಾಗಬಲ್ಲೆ, ನಾನು ಗಂಡನಾಗಬಲ್ಲೆ, ನಾನು ಅಪ್ಪನಾಗಬಲ್ಲೆ ಈ ಎಲ್ಲ ಭಾವಗಳ ಸಂಕೀರ್ಣ ರೂಪ ನನ್ನ ಈ ದೇಹ ಅನ್ನಿಸಲು ಪ್ರಾರಂಭಿಸಿತು.

ಇಲ್ಲ ಇಲ್ಲ ಮತ್ತೆ ತಪ್ಪುತ್ತಿರುವೆ , ’ನಾನು’ ಎಂದರೆ ಮತ್ತೆನೊ ಇದೆ. ಅನ್ನಿಸಿತು ಹೌದು. ಅದು ಮನಸಿನ ಒಳಗೆ ಕುಳಿತು ಸದಾ ನನ್ನ ಹೊರ ರೂಪವನ್ನು ನೋಡುತ್ತಿರುವ ಮತ್ತೊಂದು ’ನಾನು’ .  ಅದು ’ನಾನಲ್ಲದ ನಾನು’ , ಎಂದಿಗೂ ಹೊರಗೆ ಪ್ರಕಟಗೊಳ್ಳದ ನಾನು. ನನ್ನ ಒಳಗೆ ಮಾತ್ರ ಕಾಣಿಸಿ ಮರೆಯಾಗುವ, ಈ ಎಲ್ಲ ಹೊರಗಿನ ’ನಾನು’ ಗಳಿಗೆ ಸಾಕ್ಷಿಯಾಗಿರುವ ’ನಾನು’ . ನಿಜ ಅದು ನನ್ನೊಳಗೆ ನಿಮ್ಮೊಳಗೆ ಸದಾ ಇದ್ದೆ ಇರುವ ನಾನು. ನಾನು ಮಗುವಾಗಿದ್ದಾಗಲು, ನನ್ನೊಳಗೆ ಇದ್ದ , ನಾನು ಗುರುಗಳೊಡನೆ ಇರುವಾಗ ಇದ್ದ, ಸ್ನೇಹಿತರೊಡನೆ ಇರುವಾಗ ಇದ್ದ, ಹೆಂಡತಿಯೊಡನೆ ಇದ್ದಾಗಲು ಇದ್ದ,  ಮಗಳೊಡನೆ ಆಡುವಾಗಲು ಸಹ ನನ್ನೊಳಗೆ ಇದ್ದು , ಸದಾ ಅಂತರ್ಯಾಮಿಯಾಗಿ, ಜೊತೆಗೆ ಇದ್ದ ’ನಾನು’ . ಎಲ್ಲ ’ನಾನು’ಗಳಿಗು ಸಾಕ್ಷಿಯಾಗಿ ಇದ್ದ ನಾನು. ಹೌದಲ್ಲವೆ ಈ ನಾನು ವಿನ ಭಾವವೇನು. ಇದರ ಸ್ವರೂಪವೇನು. ಯಾರೊಂದಿಗು ಯಾವುದೆ ’ಸಂಭಂದ’ ಇಟ್ಟುಕೊಳ್ಳದ ಈ ’ನಾನು’ ನನ್ನೊಳಗೆ ಸದಾ ಇರುವದಲ್ಲವೆ.  ನನ್ನೊಳಗೆ ನಾನು ಚಿಂತಿಸುತ್ತಿರುವಾಗ ಮೇಲೆ ಬರುವದಲ್ಲವೆ ಈ ‘ನಾನು’
ಅನ್ನಿಸಿ ಮನಸಿನಲ್ಲಿ ಎಂತದೊ ಸಮಾದಾನ ಮೂಡಿತು.

ಮತ್ತೆ ಕಣ್ಣು ಮುಚ್ಚಿದಾಗ  ನನ್ನೊಳಗೆ ಎಂತದೋ ಪ್ರಶ್ನೆ ,  ಸರಿಯೆ ಎಲ್ಲ ‘ನಾನು’ ಗಳು ಸಹ ನಾನೆ ಅಂದುಕೊಳ್ಳೋಣ.  ಒಮ್ಮೆಲೆ ಸಾವು ಬಂದು ನನ್ನನ್ನು ಆಕ್ರಮಿಸಿದಾಗ , ಬಲವಂತವಾಗಿ ಆ ಜವರಾಯ ನನ್ನನ್ನು ಕರೆದೋಯ್ಯುವಾಗ, ಈ ಎಲ್ಲ ಹೊರಗಿನ ’ನಾನು’ ಗಳ ಭಾವ ಅಳಿಸಿಹೋಗುತ್ತೆ. ತಾಯಿಗೆ ’ಮಗ’ ಇಲ್ಲವಾಗುವ, ಗೆಳೆಯರಿಗೆ  ಆ ’ನಾನು’ ಇಲ್ಲವಾಗುವ. ಹಾಗೆ ಹೆಂಡತಿಗೆ , ಮಕ್ಕಳಿಗೆ ಸಹ ಅವರೊಂದಿಗೆ ವ್ಯವಹರಿಸುವ ನನ್ನೊಳಗಿನ ’ನಾನು’ ಇಲ್ಲವಾಗಿ ಶೂನ್ಯ ಭಾವ ಆವರಿಸುತ್ತದೆ.

ಎಲ್ಲ ಸರಿ ಎಲ್ಲ ಸರಿ ….. ಆದರೆ ಮತ್ತೆ ಪ್ರಶ್ನೆ ಉಳಿಯಿತಲ್ಲ. ಎಲ್ಲ ’ನಾನು’ ಗಳು ನಾಶವಾದರು, ಈ ಎಲ್ಲ ನಾನು ಗಳಿಗೆ ಸಾಕ್ಷಿಯಾಗಿರುವ,  ನನ್ನೊಳಗೆ ಅಂತರ್ಗತನಾಗಿರುವ. ಎಂದು ಹೊರಗೆ ಕಾಣಿಸಿಕೊಳ್ಳದ ’ನಾನು’ ಏನಾಗುತ್ತದೆ ?   

-------------------------------

೧೭-೧೧-೨೦೧೨ ಬಾನುವಾರ ವಾಕ್ಪಥದಲ್ಲಿ  ’ನಾನು’ ಎಂಬ ಪದದ ಬಗ್ಗೆ ನಡೆದ ’ಆಶುಭಾಷಣ’ ಗಳ . ಒಟ್ಟು ಬರಹ ರೂಪ




1 comment:

  1. So sad. I am the first person commenting on this. This is a very well scripted article. The mistery of " Naanu " has reflected well in different role and still demonstrates its inadequacy. I am sure it is beyond words can express sufficiently. Great sir.

    ReplyDelete

enter your comments please