Sunday, November 17, 2013

ಪಾತ್ರ ಅನ್ವೇಷಣಾ - ಕಿರುಪರಿಚಯ

ಬದರಿನಾಥ ಪಲವಳ್ಳಿಯವರ ಕವನ ಸಂಕಲನ
'ಪಾತ್ರ ಅನ್ವೇಷಣಾ'
ಕಿರುಪರಿಚಯ

ಬದರಿನಾಥ ಪಲವಳ್ಳಿಯವರ 'ಪಾತ್ರ ಅನ್ವೇಷಣಾ' ಕವನ ಸಂಕಲನ ಓದುತ್ತ ಹೋದಂತೆ, ಒಂದೊಂದು ಕವನವೂ ಮನಸನ್ನು ತುಂಬುತ್ತಾ ಹೋಯಿತು. ಎಲ್ಲವನ್ನು ಓದಿದೆ ಅರ್ಥಮಾಡಿಕೊಂಡೆ ಅನ್ನುವುದು ಅಸತ್ಯವಾಗುತ್ತದೆ. ಅವರ ಕವನಗಳ ವಿಸ್ತಾರ ಅಂತಹುದು. ಬದರಿಯವರು ಪ್ರತಿ ಕವನಕ್ಕು ಆರಸಿಕೊಳ್ಳುವ ವಸ್ತುವೆ ವೈವಿಧ್ಯದಿಂದ ಕೂಡಿರುತ್ತದೆ. ಅದು ವೇಧಾಂತವಾಗಿರಬಹುದು,ಸಾಮಾಜಿಕ ಚಿತ್ರಣವಾಗಿರಬಹುದು, ಯಾವುದೊ ಘಟನೆ, ಚಿತ್ರ, ವಾಸಿಸುವ ನಗರ ಯಾವುದನ್ನು ಒಳಗೊಂಡಿರಬಹುದು. ಪ್ರೀತಿ ಪ್ರೇಮ ದ್ವೇಷ ಎಲ್ಲ ನವರಸಗಳ ಚಿತ್ರಣವು ಅವರ ಬರಹದಲ್ಲಿ ಸುಲಲಿತವಾಗಿ ಮೂಡುತ್ತದೆ, ಹಾಗೆ ಮನಸಿಗೆ ತಟ್ಟುತ್ತದೆ,  ತೊಂಬತ್ತೆಂಟು ಕವನಗಳ ಈ ಪುಸ್ತಕದಲ್ಲಿ ಎಲ್ಲ ಕವನವನ್ನು  ನಾನು ಪರಿಚಯಿಸಲು ಹೋಗಲ್ಲ, ಆಗಲ್ಲ. ಪಕ್ಷಿನೋಟದಂತೆ ಕಣ್ಣಿಗೆ ಕಾಣುವ ಕವನಗಳನ್ನಷ್ಟೆ ಆಯ್ತುಕೊಂಡಿದ್ದೇನೆ.

 "ಅಜ್ಞಾತಕವಿ"  ಕವನದಲ್ಲಿ  ತನ್ನ ಒಳಹೊರಗನ್ನು ಶುದ್ದಗೊಳಿಸಿಕೊಳ್ಳುವ ಕವಿಯ ಪ್ರಾಮಾಣಿಕ ಭಾವ ಕಾಣುತ್ತದೆ. ತನ್ನನ್ನು ತಾನೆ ಬೆನ್ನುತಟ್ಟಿಕೊಳ್ಳುವ ಭ್ರಮೆಗೆ ಬೀಳದಿರಲಿ ತನ್ನ ಮನ ಎಂದು ಬೇಡಿಕೊಳ್ಳುವ ಕವಿ,
'ನನ್ನೊಳಗೆ ನಾನಿರದ ಶೂನ್ಯವೇಳೆಯಲ್ಲೊಮ್ಮೆ
ಗುಡಿಸಿ ಹಾಕಲಿ ಮನಸು ಮಹಾಕವಿಯ ತೆವಲು'
ಎನ್ನುವರು. ತಾನು ದೊಡ್ಡ ಕವಿ ಎನ್ನುವ ಭ್ರಮೆ ಕವಿಯದಿರಲಿ ಎನ್ನುವ ಎಚ್ಚರಿಕೆ . ಮತ್ತೆ ಹೇಳುವರು 'ಸತ್ಯ' ಎನ್ನುವುದು ಜೀವನದಲ್ಲಿ ಸದಾ ಅಗ್ನಿಯಂತೆ, ಅಂತಹ 'ನಿಜಾಗ್ನಿ' ತನ್ನ ಕೊಬ್ಬು ಕರಗಿಸಲಿ ಎಂದು,
'ನಿಜಾಗ್ನಿ ಕರಗಿಸಲಿ ಕೊಬ್ಬು ಎನ್ನದೇ ಕಾವ್ಯವೆನು ಮಂಕು
ದೈವ ಮಳೆ ತೊಳೆಯಲದು ಹೂಳುಮಯ ಒಳಮೋರಿ'
ತನ್ನ ಮನಸಿನಲ್ಲಿರುವ ಅರಿಷಡ್ವರ್ಗಗಳನ್ನೆಲ್ಲ ಮೋರಿಗೆ ಹೋಲಿಸುತ್ತ , ದೈವ ಕೃಪೆ ಅದನ್ನೆಲ್ಲ ಶುದ್ದಗೊಳಿಸಲಿ ಎನ್ನುವ ಸುಂದರ ಭಾವ. 'ಸಾವಿರ ಗ್ರಂಥಗಳ ಓದಿಗಿಂತ,
ಅರೆ ಪಾವು ತಿಳುವಳಿಕೆ ಒಪ್ಪವಾಗಿಸಲೆನ್ನ ತಿದ್ದಿ ! '
ಎಂತಹ ನಿರೀಕ್ಷೆ ! ಎಂತಹ ಅದ್ಭುತ ಹೋಲಿಕೆಗಳ ಕವನ.

"ಅಪಾತ್ರ ದಾನ" ಕವನದಲ್ಲಿ ನಿಜವಾದ ದಾನಿ ಯಾರು ಎಂದು ಒರೆಹಚ್ಚುವ ಕೆಲಸ ಕೈಗೊಂಡಿದ್ದಾರೆ
'ಹಾಲುಣಿಸೋ ರಾಸುಗಳು ನೆನಪಿಟ್ಟಾವೆ ಕರೆದ ಲೆಕ್ಕ
ನೆಲದವ್ವ ಕೇಳುವಳೇ ಫಸಲ ರಾಶಿಯಲೂ ಭಾಗ!'
ಈ ಕವನ ಓದುವಾಗ ಅದೇಕೊ ದೇಗುಲಗಳಲ್ಲಿ ತಾವು ಕೊಟ್ಟ ಟ್ಯೂಬ್ ಲೈಟಿನ, ಫ್ಯಾನುಗಳ ಮೇಲೆಲ್ಲ ಬರೆಸಿರುವ ದೊಡ್ಡ ಹೆಸರುಗಳು ನೆನಪಿಗೆ ಬರುತ್ತವೆ!

ಕವಿಯ ವಿಶಾಲವಾದ ದೃಷ್ಟಿಗೆ (ವೈಡ್  ಯಾಂಗಲ್ ) ಬೀಳದ ವಿಷಯವೇ ಇಲ್ಲ. ಹಿಂದೊಮ್ಮೆ ಡಾ! ರಾಜ್ ರವರನ್ನು ಭೀಮನಅಮಾವಾಸ್ಯೆಯಂದು ಅಪಹರಣ ಮಾಡಿ ಕಾಡಿಗೆ ಒಯ್ದು ನಾಡನ್ನೆ ನಡುಗಿಸಿದ , ಸರ್ಕಾರದ ಬುಡಕ್ಕೆ ಕೈ ಹಾಕಿದ್ದ ವೀರಪ್ಪನ್ "ಅವನಿಲ್ಲದ ಕಾಡು.." ಕವನಕ್ಕೆ ವಸ್ತು !. ಅವನ ಸುತ್ತಲು ಇದ್ದ ಬಂಟರು ಪೋಲಿಸರು ಸಂದಾನಕಾರರು ರಾಜಕೀಯದವರು ಎಲ್ಲವನ್ನು ಪ್ರಸ್ತಾಪ ಮಾಡುತ್ತಲೆ
'ಕಾಲಧರ್ಮಕೆ ಸಿಕ್ಕು ಅವನೇ ಸತ್ತರೂ
ಕಳ್ಳಗಂಟಿನ ಕುಂಭ ಬಯಲಾಗಲೊಲ್ಲ'
ಎನ್ನುವಾಗ ಡಾ! ರಾಜ್ ಅಪಹರಣದ , ನಂತರ ವೀರಪ್ಪನ್ ಸಾವಿನ ಸುತ್ತಲು ಇದ್ದ ನಿಗೂಡತೆಯ ಪರದೆ ಕಣ್ಣಿಗೆ ಕಟ್ಟುತ್ತದೆ.

ಆಡುಮುಟ್ಟದ ಸೊಪ್ಪಿಲ್ಲವಂತೆ, ಈ ಕವಿ ಮುಟ್ಟದ ವಿಷಯವೂ ಇಲ್ಲವೇನೊ ಹಾಗಿದ್ದಾಗ ಪ್ರೇಮವನ್ನು ಬಿಡಲಾದಿತೆ ? ನರಸಿಂಹ ಸ್ವಾಮಿಯವರ  'ಮೈಸೂರು ಮಲ್ಲಿಗೆ' ಕವನವನ್ನು ನೆನಪಿಸುವ ಕವನ "ಅವಳಿಲ್ಲದ ಮನೆ..."
'ಆ ಗೋಡೆಗಳೋ..
ಒಂದಕ್ಕೂ ಬಾಯಿಲ್ಲ ಕಿವಿಯಿಲ್ಲ
ಹುಸಿಮುನಿಸು ಕುಡಿನೋಟ
ಸಣ್ಣದೊಂದು ಜಗಳ
ಛೇ ! ಅವಳಿಲ್ಲದ ಮನೆಯೂ ಮನೆಯೇ'
ಎನ್ನುವ ಸಾಲುಗಳಲ್ಲಿ, ಪತ್ನಿಯ ಮೇಲಿನ ಅನನ್ಯ ಪ್ರೀತಿಯೂ, ಅಕೆಯಿಲ್ಲದಾಗ ಜೀವ ಕಳೆದುಕೊಂಡ ಮನೆಯ ಚಿತ್ರವೂ ಒಟ್ಟಿಗೆ ಓದುಗರ ಮನ ತುಂಬುತ್ತದೆ

ಪ್ರೇಮ ಕವನವನ್ನು ಬರೆದ ಕವಿ,  ಬೇರೊಂದು ಕವನ 'ಉಪನಯನ' ದಲ್ಲಿ   ಪ್ರಿಯತಮೆಯಿಂದ ತಿರಸ್ಕರಿಸಲ್ಪಟ್ಟ, ಪ್ರೀತಿ ಕೈಗೆಟುಕದವನಾಗಿ ಕುಳಿತಿರುವ ಅದೂ ಸಹ ತನ್ನ ಉಪನಯನದಲ್ಲಿ ಎದುರಿಗೆ ಬಂದ ಪ್ರಿಯತಮೆಯನ್ನು  ಕಾಣುತ್ತ,  ಅನ್ನುವಲ್ಲಿ ಎಂತಹ ವ್ಯಂಗ್ಯ ಎದ್ದು ಕಾಣುತ್ತದೆ ಅಲ್ಲವೇ ?
'ಆಕೆ ಉಪನಯನಕ್ಕೆ ತನ್ನ ಗಂಡ ಮಗುವಿನೊಡನೆ ಬಂದಾಗ ಎಲ್ಲವೂ ಹಳದಿ,
ಅವಳು ಹಳದಿ ಸೀರೆಯಲ್ಲಿದ್ದಳು
ಪತಿರಾಯ ಕುಸುರಿಯ ಹಳದಿ ಜುಬ್ಬ,
ಮಗುವಿಗೆ ಹಳದೀ ಸ್ವೆಟರ್ರೂ,
ಜೊತೆಗೆ ಇವನೂ ಹಳದಿ ಮಯ, ಅಂಗವಸ್ತ್ರ ಜನಿವಾರಗಳಲ್ಲಿ !'
ಕವಿ ಪೂರ್ಣ ಗೊಂದಲವನ್ನು, ಸಂದರ್ಭವನ್ನು ಹಳದೀ ಕಣ್ಣುಗಳಲ್ಲಿ ನೋಡುತ್ತಿರುವಂತೆ ಚಿತ್ರಿಸಿ, ತಪ್ಪಿಗೆ ಯಾರು ಕಾರಣರೆಂಬ ಪ್ರಶ್ನೆ ಉಳಿಸಿಬಿಡುತ್ತಾರೆ.

ಬೆಂಗಳೂರು ನಗರ ಕವಿಗೆ ಸದಾ ಹೃದಯಕ್ಕೆ ಹತ್ತಿರ ಅದರ ಸ್ಥಿತಿಗೆ ಮರಗುವರು, ರಾಯರ ಕಾಲದಲ್ಲಿ ರಾಶಿ ರಾಶಿ ರತ್ನಗಳ ವ್ಯಾಪರವಿದ್ದರೇ ಈಗ ನೋಡಿ !
"ನನ್ನ ಕಾಲಕ್ಕೆ ಕಳ್ಳೇ ಕಾಯಿ ಪರಿಷೆಯಲಿ
ಪ್ರಧ್ಯುಮ್ನ ಬಾಣಕ್ಕೆ ಸಿಕ್ಕ ಪದ್ಮ ಮೀನಾಕ್ಷಿಯರು!"
ಎಷ್ಟು ಸುಲುಭದಲ್ಲಿ  ಇಡೀಯಾಗಿ ಜಾತ್ರೆಯ, ಪ್ರಸ್ತುತ ಕಾಲದ ಪೂರ್ಣ ಚಿತ್ರ ಒಂದೇ ವಾಕ್ಯದಲ್ಲಿ ! ವಾಹ್ ! ಅದೇ ಕವನದ ಕಡೆಗೆ ಬಂದರೆ
"ನೂರು ತೊಂಬತ್ತೆಂಟು ಹುತ್ತಗಳಲು ಪರಕೀಯ ಹಾವುಗಳು
ನಮ್ಮ ಬಸ್ಸಲ್ಲೆ ನಾವು ನಿಂತ ಪಯಣಿಗರು…"
ಹತ್ತೆಂಟು ಪುಟಗಳ ಪ್ರಬಂಧದಲ್ಲಿ ಬರೆಯಬಹುದಾದ ಕತೆ ವ್ಯಥೆ ಒಂದೇ ವಾಕ್ಯದಲ್ಲಿ ಪೋಣಿಸಿದ್ದಾರೆ ! ಅಂತಹ ದೈತ್ಯ ಪ್ರತಿಭೆಯ ಕವಿ ಇವರು.

"ಚಿಟ್ಟೆ ಚಪ್ಪಲಿ" ಯಲ್ಲಿ ಚಿಕ್ಕ ಮಗುವೊಂದು ರಸ್ತೆ ಮಧ್ಯದಲ್ಲಿ ತನ್ನ ಪುಟ್ಟ ಚಪ್ಪಲಿ ಕಳೆದು ಕೊಳ್ಳುವುದು, ತಾಯಿ ಮಗುವಿಗೆ ಹೊಸಚಪ್ಪಲಿ ಕೊಡಿಸಿದರು ಮಗು ಒಪ್ಪದಿದ್ದಾಗ ಆಕೆ, ಚಿಟ್ಟೆಯ ಸ್ಟಿಕ್ಕರ್ ತಂದು ಚಪ್ಪಲಿಗೆ ಅಂಟಿಸಿ , ಸರಿ ಮಾಡುವ ಚಿತ್ರಣ, ಮಗುವಿನ ಮುಗ್ದತೆ , ತಾಯಿಯ ಪ್ರೀತಿ ಎಲ್ಲವೂ ಒಂದೆ ಕವನದಲ್ಲಿ .
"ನಟ್ಟ ನಡುರಸ್ತೆಯಲಿ
ಅನಾಥವಾಗಿ ಬಿದ್ದಿತ್ತು ಪುಟ್ಟ ಒಂಟೀ ಚಪ್ಪಲಿ
ಅದರ
ಅಂಗುಷ್ಟದ ಮೇಲೆ
ಬಣ್ಣದ ಚಿಟ್ಟೆ "
ಅನ್ನುವಾಗಲೆ ಕವನಕ್ಕೆ ಒಂದು ಅಮೂರ್ಥರೂಪ ಬಂದುಬಿಡುತ್ತದೆ.

"ಚೆಂಡಾಟ ಕಳ್ಳಾಟ" ಎನ್ನುವ ಕವನದಲ್ಲಿ ಭಾರತದೇಶದಲ್ಲಿ ವಿರಾಟ ರೂಪದಲ್ಲಿ ವ್ಯಾಪಿಸಿರುವ ಕ್ರಿಕೇಟ್ ಎನ್ನುವ ಕ್ರೀಡೆ, ಅದರಲ್ಲಿ ತುಂಬಿರುವ ಭ್ರಷ್ಟಾಚಾರ, ಹಣದ ಆಟ ಮೇಲುಗೈಯಾಗಿ ಜೈಲು ಸೇರಿದ "ಶ್ರೀಶಾಂತ" ನಂತವರ ಹೊಲಸುಮನದ ಚಿತ್ರಣ
'ಕಾರಾಗೃಹದಲಿ ಕುಳಿತು
ಭಗವದ್ಗೀತೆಯ ಪಠಿಸಿದರೆ
ಕಳೆವುದೇ ಮೈದಾನದಲಿ
ಮೈ ಮಾರಿಕೊಂಡ ಕಳ್ಳಾಟ?'
ಎಂತಹ ಶಿಕ್ಷೆ ಅನುಭವಿಸಿದರು ನಂಬಿಕೆ ದ್ರೋಹದ ಪಾಪಕ್ಕೆ ಆ ಶಿಕ್ಷೆ ಸಮನಾಗಲಾರದು ಎನ್ನುವ ಭಾವ ನಮ್ಮನ್ನು ತುಂಬುವುದು.

"ತಿರಂಗಿ" ಎನ್ನುವ ಕವನವಾದರು ಅಷ್ಟೆ ವಿಷಾದ ತುಂಬಿದ ಕವನ. ಈ ಸಾಲುಗಳನ್ನು ಒಮ್ಮೆ ನೋಡಿ
'ಕೇಸರಿಯು ಬಣ್ಣಗೆಟ್ಟಿದೆ
ಬಿಳಿಯು ಅನುಮಾನಾಸ್ಪದ
ಹಸಿರಂತು ಬರಿಯ ಕನಸು
ಗಟ್ಟಿಯೊಂದೆ ನಡುಬೀದಿಯಲಿ
ನೆಟ್ಟ ಒಬ್ಬಂಟಿ ಕಂಬ'
ಭಾರತದ , ಭಾರತೀಯರ ಸದ್ಯದ ಗೊಂದಲದ ಬೀಡಿನ ಚಿತ್ರಣ. ;ಗಟ್ಟಿಯೊಂದೆ ನಡುಬೀದಿಯಲಿ ನೆಟ್ಟ ಒಬ್ಬಂಟಿ ಕಂಬ ಎನ್ನುವಾಗ ಅಸಹಾಯಕ ಸಾಮಾನ್ಯ ಭಾರತೀಯ ಪ್ರಜೆಗಳ, ನಿಸ್ಸಹಾಯಕ ಭಾರತಾಂಭೆಯ ಪ್ರತೀಕವೇನೊ ಅನಿಸಿಬಿಡುತ್ತದೆ.

"ದೇವರೂ ದೇವರಂತವನೆ..."
ಜಗದೊದ್ದಾರಕನೆ ಸರಳುಗಳ ಹಿಂದೆ ತಾನು ಬಂಧಿ ಎನ್ನುವ ದೇವಾಲಯಗಳು ಸರಕು ಮಾರಟಗಳ ಮಳಿಗೆಯೇನೊ ಅನ್ನುವಾಗ, ಅಧುನಿಕ ಮಾಲ್ ಗಳನ್ನೆ ಹೋಲುವ 'ಇಸ್ಕಾನ್ ದೇವಾಲಯ' ದಂತಹ ದೇವಾಲಯಗಳು ನನ್ನ ಕಣ್ಣ ಮುಂದೆ ಬಂದರೆ ಅದರಲ್ಲಿ ಪಲವಳ್ಳಿಯವರ ತಪ್ಪಿಲ್ಲ ಬಿಡಿ.

ಮತ್ತೆ "ದೊಡ್ಡವರು ಸತ್ತರೇ..." ಕವನವನ್ನಿಷ್ಟು ಓದಿ,
ಹೊರಗೆ ಜನರ ಸಾವಿನ ಉನ್ಮಾದದ ಚಿತ್ರಣ , ಒಳಗೆ ಆಸ್ಪತ್ರೆಯ ಬಿಲ್ಲು ತುಂಬಿಸಲು ಅಸಮರ್ಥರಾಗಿ, ಕಂಗೆಟ್ಟು ಕುಳಿತ ಹೆಂಡತಿ, ಮಕ್ಕಳ ಚಿತ್ರದ ವೈರುಧ್ಯ.
'ಸತ್ತವನ ಹೆಂಡತಿಗೋ
ಮರುಜನ್ಮಕ್ಕೂ ತೀರದ ಸಾಲ ಬಾಧೆ
ಅವನ ಸಾಧನೆ ಬಿರುದು ಗೌರವ
ಎಂತು ತುಂಬಿತ್ತು ಗಂಜಿ ಪಾತ್ರೆ '
ಎನ್ನುವಾಗ ಹೊರಗೆ ಪ್ರಸಿದ್ದ ವ್ಯಕ್ತಿ , ಒಳಗೆ ತುತ್ತಿನ ಚೀಲ ತುಂಬಿಸಲು ಅಸಹಾಯಕ ಎನ್ನುವಾಗ ಆ ಪ್ರಸಿದ್ದ ವ್ಯಕ್ತಿ ಬಹುಶಃ ಪ್ರಸಿದ್ದ ಕವಿಯೊಬ್ಬರೆ ಇರಬಹುದು ಅನ್ನಿಸುತ್ತೆ. ಏಕೆಂದರೆ ಉಳಿದವರಿಗೆಲ್ಲ ಆ ಪರಿಸ್ಥಿತಿ ಇರುವುದು ಕಡಿಮೆಯೆ. ಅವರ ಸಾವನ್ನು ಹಣಮಾಡಿಕೊಳ್ಳಲು ಹೊರಟವರು ಹೊರಗಿನ ಜನ !.


"ನೆನಪ ಪಳಿಯುಳಿಕೆಯು" ಹಳೆಯ ಸುಂದರ ನೆನಪಿನ ಚಿತ್ರಣ ಹಾಗು ಮೆಲುಕು. ಹಳ್ಳಿ ಹಾದಿಯಲ್ಲಿ ನೆರಿಗೆ ಚಿಮ್ಮಿಸಿ ಹೊರಟವಳ ಕನಸು, ಕೆಲ ಚಿತ್ರಗಳೆ ಹಾಗೆ ಚೆನ್ನ ಚೌಕಟ್ಟಿನೊಳಗೆ ಅನ್ನುವಾಗ ದಿಟವಲ್ಲವೆ ಅನಿಸುವುದು, ಈ ಸಾಲುಗಳು ಪಲ್ಲವಳ್ಳಿಯವರ ಬ್ಲಾಗ್ ನ ಶೀರ್ಷಿಕೆ ಸಹ ಅಲ್ಲಿ ಅದು ತೋರಣದ ನುಡಿ.

"ನದಿಯ ಸ್ವಗತ .." ಕಾಲನ ವಶಕ್ಕೆ ಸಿಕ್ಕು ಮಾಯವಾಗುತ್ತಿರುವ ನದಿಯ ತೊರೆಗಳ ಸ್ವಗತದ ನುಡಿ. ಈ ಕವನ ಇಂದಿನ ಸಮಾಜದ ಕನ್ನಡಿಯೂ ಹೌದು
'ಅರ್ಕಾವತಿ ವೃಷಭಾವತಿ ಪಿನಾಕಿನಿ
ಯಾರ ತಪ್ಪಿಗೆ ಇಂಥ ತಲೆದಂಡ?
ಬತ್ತಿದ ಗಂಗೆಯ ಒಡಲ ಮರಳ
ಬಗೆದಿರಿ ಇಂಗಲಾರದಿನ್ನು ನೀರು'
ಈ ಪ್ರಶ್ನೆಗೆ ಉತ್ತರಿಸಬೇಕಾದವರು ಕರ್ನಾಟಕದ ಆರು ಕೋಟಿ ಕನ್ನಡಿಗರು.

"ಪಾತ್ರ ಅನ್ವೇಷಣಾ"  ಕವನ ಸಂಕಲನದ ಶೀರ್ಷಿಕೆಯ ಕವನ. ನಾನು ಮೊದಲು ಅರ್ಥಮಾಡಿಕೊಂಡಿದ್ದು , ಜನರ ನಡುವೆ ಬೆರೆತು ಹೋಗಿರುವ ವಿವಿಧ 'ಪಾತ್ರಗಳು' ಎಂದು. ಅಂದರೆ ವ್ಯಕ್ತಿತ್ವಗಳ, ಅನ್ವೇಷಣೆ , ಆ ವ್ಯಕ್ತಿತ್ವಗಳಲ್ಲಿ ನಮ್ಮನ್ನು ನಾವು ಹುಡುಕುವಿಕೆ ಎಂದು. ಹಾಗೆಂದು ಭಾವಿಸಿ ಕವನ ಓದಿದೆ. ನನಗೆ ಬೇರೆ ಅರ್ಥವೆ ಸ್ಪುರಿಸಿತು. 'ನದಿಯ ಪಾತ್ರ' ಎಂದರೆ ಅದು ಹರಿಯುವ ದಾರಿ, ನಮ್ಮ ಜೀವನದ ಗತಿಯನ್ನು ನಾವು ಅರಸುತ್ತ ಹೋಗುವ ಕ್ರಿಯೆ , ಹುಟ್ಟಿನಿಂದ ಸಾವಿನ ವರೆಗೂ ಸಾಗುವ ನಮ್ಮ ಜೀವನದ ಗತಿಯ ಅನ್ವೇಷಣೆ. ನಮ್ಮ ಸ್ವರೂಪದ ಸ್ವಯಂ ವಿಶ್ಲೇಷಣೆ ಎಂದು ಅನ್ನಿಸಿತು
'ಬರೀ ಸೆಲೆಗೆ ಕಾದು ಕುಳಿತ
ಆಮೆ ತೇಲು ಪ್ರಕಾರದ
ಇಷ್ಟಗಲ ಬಾವಿಯೇ ನಾನು ?'
ಕವಿಯ ನುಡಿಗಳೆ ಹಾಗೆ, ನಾವು ಅರ್ಥಮಾಡಿಕೊಂಡಂತೆ ಅದಕ್ಕೆ ನೂರಾರು ಅರ್ಥಗಳು ಹುಟ್ಟುತ್ತಾ ಸಾಗುತ್ತದೆ,

"ಬಂದರುಗಳಿಗೆ" ಕವನದ ಮೊದಲ ಸಾಲುಗಳು

'ಬಂದರೇ ಅನುಮತಿಸಿ
ಅಕ್ಷರಗಳ ನಾವೆ ಬಂದಿದೆ
ಲಂಗರಿಳಿಸಲು ನಿಮ್ಮಲ್ಲಿ'

ಬಂದರುಗಳಿಗೆ....ಒಂದು ಕುಶಲತೆಯ ಪ್ರಯೋಗ, ಬಂದರು ಎನುವಾಗ-ಹಡಗನ್ನು ಲಂಗರಿಳಿಸುವ ಸ್ಥಳ- ಇಲ್ಲಿ ಓದುಗ, ಬಂದಿರುವ ಸರಕು ಅಕ್ಷರಗಳು ತುಂಬಿರುವ ನಾವೆ, ಕೆಳಗಿಳಿಸಲು ಅನುಮತಿ ಬೇಡುತ್ತಿರುವ ಕವಿ. ಇಲ್ಲಿ ಅಕ್ಷರಗಳ ಚಮತ್ಕಾರ ಹೇಗಿದೆ ನೋಡಿ. ತಕ್ಷಣಕ್ಕೆ ಪುರಂದರರ 'ರಾಗಿ ತಂದೀರಾ?"  ಗೀತೆಯನ್ನು ನೆನಪಿಸಿತು.

"ಬೆಟ್ಟದ ದೇವರಿಗೆ.."
 ಕೋಪಿಷ್ಟ ದೇವರುಗಳು (ನರಸಿಂಹನೆ ? ) ತಣ್ಣಗಾಗಲು ನಿಂತಿದ್ದು ಬೆಟ್ಟಗಳ ಮೇಲೆ. ಅವನ ತಾಪ ಇಳಿಸಲು ದೇಹ ದಂಡಿಸಿ ಬೆಟ್ಟ ಹತ್ತಿ ಬರುವ ಭಕ್ತಾಧಿಗಳು.
'ನಿನ್ನೆ ತಂದ ಮಾಂಸಕ್ಕೂ
ಮುನ್ನ ಮದಿರೆಗೂ ಸೇರಿ
ಮುನ್ನ ಮನ್ನಿಸಿಕೋ ಎನ್ನ'
ಎನ್ನುವ ಆತ್ಮ ನಿವೇದನೆ. ಪಾಪಗಳ ಲೆಕ್ಕ ಚುಕ್ತ ಮಾಡುವ ಹುನ್ನಾರ .

ಹಾಗೆಯೆ ಯಾತ್ರೆಗೆ ಹೋಗುವ ಭಕ್ತರ ಇನ್ನೊಂದು ಚಿತ್ರಣ "ಯಾತ್ರ ಸ್ಪೆಶಲ್' " ಇತ್ತೀಚೆಗೆ ಹರಿದ್ವಾರದಲ್ಲಿ ಉಂಟಾದ ಪ್ರವಾಹದ ಚಿತ್ರಣ
'ತಡೆದಾನೆಲ್ಲಿ ಶಿವನೂ
ಸಾಕ್ಷಾತ್ತು ತಾ ಕೂತಲ್ಲೆ
ಕಂಠಮಟ್ಟ ಮುಳುಗಡೆ'
ಅನ್ನುವಾಗ ಪದೇ ಪದೇ ಮಾಧ್ಯಮಗಳಲ್ಲಿ ಬಿತ್ತರವಾದ ಗಂಗೆಯಲ್ಲಿ ಮುಳುಗಿದ ದ್ಯಾನನಿರತ ಶಿವನ ಚಿತ್ರ ನಮ್ಮ ಮನಸಿನ ಪರದೆಯಲ್ಲಿ,
'ಕಾಸಿಗೆ ಕಾಸು ಕೂಡಿಸಿ
ವರ್ಷವೆಲ್ಲ ಹುಂಡಿ ತುಂಬಿಸಿ
ಯಾತ್ರೆ ಬಂದ ತಪ್ಪಿಗೆ
ಅಂತಿಮ ಯಾತ್ರೆಯೆ
ಸ್ವಾಮಿ ನಮ್ಮ ಪಾಲಿಗೆ'
ಅನ್ನುವಾಗ ಮನುಜನ ಅಸಹಾಯಕ ಮನಸ್ಥಿತಿ, ದೈವವನ್ನು ನ್ಯಾಯ ಕೇಳುತ್ತಿರುವ ಭಾವ ! ಪ್ರಕೃತಿಯ ಎದುರಿಗೆ ನಿಸ್ಸಹಾಯಕ ಭಾವ.

'ಸಾವಿಗೆ ಬಾರದ ನೆಂಟ..'
ಕವನವು ಅಷ್ಟೆ ಒಂದು ವಿಶಿಷ್ಟ ಸಂದರ್ಭದ ರಚನೆ. ಬಹುಶಃ ಯಾರು ಕವನಕ್ಕೆ ತೆಗೆದುಕೊಂಡು ಪ್ರಯೋಗಿಸಲು ಹಿಂದೆ ಮುಂದೆ ನೋಡುವ ವಸ್ತು ಆದರೆ ಪಲವಳ್ಳಿಯವರಿಗೆ ಎಲ್ಲವು ಸುಲಲಿತ
'ಹಿಂದೆಯೆ ಕೌರವ ಪ್ರಸೂತಿನಿ
ತುಂಬು ಗರ್ಭಿಣಿ ಹೆಂಡತಿ...'
ಅನ್ನುವ ಸಾಲು ಸಾಕು ಆ ಕುಟುಂಬದ ಪೂರ್ಣ ಚಿತ್ರವನ್ನು ಕಣ್ಣೆದುರು ನಿಲ್ಲಿಸುತ್ತದೆ ಯಾವುದೇ ವಿವರಣೆ ಇಲ್ಲದೆ.ಬಾರದ ಕಣ್ಣೀರು ಹಾಕಿ ಕಡೆಗೆ ಸಂಸಾರ ಸಮೇತ ಊಟಕ್ಕೆ ಕುಳಿತವನ ಕುತ್ಸಿತ ಬುದ್ದಿನೋಡಿ, ಪಕ್ಕದವನ ಕಿವಿಯಲ್ಲಿ ಉಸುರುವನು
''ಇತ್ತಿತ್ತಲಾಗೆ ಸಣ್ಣಗೆ ಮಾಡುತ್ತಾರಲ್ಲೊ
ತಮ್ಮ ವಡೆಯ?
ನೀನು ನೋಡಬೇಕಿತ್ತು
ಶೆಟ್ಟರು ಸತ್ತಾಗ
ಅಗೈ ಅಗಲ ವಡೆ
ಅಲ್ಲೂ ಪೊಗರ್ದಸ್ತು ಗೋಡಂಬಿ'
ಓದುವಾಗಲೆ ಅವನ ಸಣ್ಣ ಬುದ್ದಿಯ ಜೊತೆ ಜೊತೆಗೆ ಅವನ ಅಸಹಾಯಕ ಬಡತನವು ಕಣ್ಣಿಗೆ ಕಟ್ಟುತ್ತದೆ

ಇಂತದೊಂದು ಬರಹದಲ್ಲಿ ಪಲವಳ್ಳಿಯವರ ಕವನ ಸಂಕಲದ  ಎಲ್ಲ ಕವನಗಳ ಪೂರ್ಣ ಪರಿಚಯ ಮಾಡಿಕೊಡಲಾಗುವದಿಲ್ಲ. ಅದೊಂದು ಮಿನಿ ವಿಶ್ವಕೋಶದಂತಿದೆ. ಅವರ ಲೇಖಣಿಗೆ ನಿಲುಕದ ವಿಷಯವಿಲ್ಲ.  ಹಾಗೆ ಒಂದೇ ಸಾಲಿನಲ್ಲಿ ಹಲವು ಭಾವ, ವಿಷಯ ತುಂಬಿ ಸಲಿಸಾಗಿ ನಮ್ಮ ಮನ ಮುಟ್ಟುವಂತೆ ಹೇಳಿ ಬಿಡುವ ಚಾತುರ್ಯ ಅವರ ಕವನದಲ್ಲಿದೆ. ಅಂತಹ ಕಸುವು ಅವರ ಪದಪ್ರಯೋಗಗಳಲ್ಲಿದೆ.

ಹಿಂದೊಮ್ಮೆ ಅವರ ಕವನದ ಪುಸ್ತಕ ಬಿಡುಗಡೆಯ ನಂತರ ಪೇಸ್ ಬುಕ್ ನಲ್ಲಿ  ಸಂಜೆ ಒಂದು ಪ್ರತಿಕ್ರಿಯೆ ಓದಿದ್ದೆ , ಅವರ ಪುಸ್ತಕದ ಬಗ್ಗೆ,
"ನನ್ನದು ಓದಿ ಆಯ್ತು " ಎಂದು. ನನಗೆ ಆ ಮಾತನ್ನು ಹೇಳುವ ದೈರ್ಯವಿಲ್ಲ .  'ಪಾತ್ರ  ಅನ್ವೇಷಣಾ ' ಕವನ ಸಂಕಲನ ಓದಿ ಆಯ್ತು ಎಂದು ಹೇಳುವುದು ಕಷ್ಟಕರವೆ, ಓದುತ್ತಿರುವೆ ಎಂದು ಮಾತ್ರ ಹೇಳಬಲ್ಲೆ.

ಸಣ್ಣದೊಂದು ಕೊರತೆ ಅನ್ನಿಸುತ್ತದೆ ಪುಸ್ತಕದಲ್ಲಿ. ಕೆಲವು ಕವನಕ್ಕೆ , ಅಲ್ಲಿಗೆ ಹೊಂದುವ ವರ್ಣಚಿತ್ರಗಳನ್ನು ಹಾಕಿದ್ದರೆ ಕವನಗಳು ಮತ್ತಷ್ಟು ಅರ್ಥವತ್ತಾಗುತ್ತಿತ್ತೇನೊ ಅನ್ನುವ ಭಾವ ನನ್ನಲ್ಲಿ. ತಾಂತ್ರಿಕ ಅಡಚಣೆಯು ಇರಬಹುದೇನೊ ತಿಳಿಯದು.

ಬದರಿನಾಥ ಪಲವಳ್ಳಿಯವರಿಗೆ ಇಂತಹ ಕವನಗಳ ಸಂಕಲನ ಒಂದನ್ನು ಹೊರತರುತ್ತಿರುವದಕ್ಕೆ, ಅದಕ್ಕೆ ಕಾರಣರಾದ ಎಲ್ಲರಿಗೂ ನನ್ನ ಅಭಿನಂದನೆಗಳು.




1 comment:

  1. ನಿಜವಾಗಲೂ ನಾನು ಓದುತ್ತಾ ಓದುತ್ತಾ ಮೂಕನಾಗಿ ಹೋದೆ.
    ಅತ್ಯಂತ ಸಮರ್ಥವಾದ ವಿಶ್ಲೇಷಣೆ. ಇಲ್ಲಿ ನೀವು ಉಲ್ಲೇಖಿಸಿರುವ ಪ್ರತಿ ಕವನದ ನಿಮ್ಮ ಅರ್ಥೈಸುವಿಕೆಯೂ ಸರಿಯಾಗೇ ಇದೆ. ಮತ್ತು ಇದು ನನ್ನನ್ನು ಸರಿ ದಿಕ್ಕಿನಲ್ಲಿ ಮುನ್ನಡೆಸುತ್ತದೆ.
    ಒಬ್ಬ ಅಜ್ಞಾತನನ್ನು - ಬೆಳಕಿಗೆ ತಂದ ಅಶೋಕ್ ಶೆಟ್ಟಿಯವರಿಗೂ. ಕಾರ್ಯಕ್ರಮವನ್ನು ಆಯೋಜಿಸಿದ ಗೆಳೆಯರಿಗೂ,
    ನನ್ನ ಕವನಗಳನ್ನು ಓದುವಿಕೆಯ ಮೂಲಕ ನನ್ನನ್ನು ಇನ್ನೂ ಬರೆಯುವ ಹುಮ್ಮಸ್ಸಿಗೆ ಸಜ್ಜಾಗಿಸುವ ನಿಮ್ಮ ಸಹೃದಯತೆಗೆ ನಾನು ಶರಣು.
    ಬ್ಲಾಗ್ ಮತ್ತು ನಿಮ್ಮ ಸ್ನೇಹ ಯಾವತ್ತಿಗೂ ಚಿರಂಜೀವಿಯಾಗಲಿ.
    ಅನಂತ ವಂದನೆಗಳು.

    ReplyDelete

enter your comments please