Friday, March 21, 2014

ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೨)



ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೨)

’ರೀ ನಿಮ್ಮನ್ನು ಹುಡುಕಿ  ಮಹಾಲಕ್ಷಮ್ಮನವರು  ಬಂದಿದ್ದಾರೆ,  ನಿಮ್ಮ ಮೇಷ್ಟ್ರು  ವೆಂಕಟೇಶಯ್ಯನವರ ಹೆಂಡತಿ"  
ಹೆಂಡತಿ ಶ್ರೀನಿಧಿ ಒಂದೆ ಸಮನೆ ಕೂಗಿ ಅಲ್ಲಾಡಿಸಿ ಎಬ್ಬಿಸಿದಾಗ ಸಹನೆಗೆಟ್ಟು ಎದ್ದು ಕುಳಿತ ನರಸಿಂಹ.


ರಾತ್ರಿ ಮಲಗುವುದು ಸದಾ ತಡವೆ.  ಅರ್ಧರಾತ್ರಿ ದಾಟಿರುತ್ತದೆ, ಬೆಳಗ್ಗೆ ಎಂಟಕ್ಕೆ ಮೊದಲೆ ಎದ್ದು ಅಭ್ಯಾಸವೆ ಇಲ್ಲ ಅವನಿಗೆ. ನರಸಿಂಹ ಪ್ರಖ್ಯಾತ ಕ್ರಿಮಿನಲ್ ಲಾಯರ್  ಆದರೂ ಅವನ ಜೀವನ ಏನು ಸದಾ ಗಡಿಬಿಡಿ ಇಲ್ಲ. ಕೋರ್ಟ್ ನಲ್ಲಿ ಕೇಸ್ ಇದ್ದಾಗ ಸ್ವಲ್ಪ ಮುಂಚೆ ಹೋಗುವುದು ಬಿಟ್ಟರೆ ತಲೆ ಬಿದ್ದು ಹೋಗುವ ಆತುರ ಅವನಿಗೇನು ಇಲ್ಲ, ಹಾಗಾಗೇ ಏಳುವುದು , ಸ್ನಾನ , ನಿದ್ದೆ ಎಲ್ಲ ನಿಧಾನವೆ.
ಸಮಯ ನೋಡಿದ, ಇನ್ನು ಬೆಳಗಿನ ಆರುವರೆ, ಅರೆ ಇದೇನು ಇಷ್ಟು ಬೇಗ ನನ್ನನ್ನು ಹುಡುಕಿಬರುವರು ಯಾರಿದ್ದಾರು , ವೆಂಕಟೇಶಯ್ಯ ಅಂದರೆ ಯಾರು ಎಂದು ಚಿಂತಿಸುತ್ತ, ಎದ್ದು ಹಲ್ಲು ಉಜ್ಜಿ ಮುಖ ತೊಳೆದು ಶರ್ಟ್ ತೊಟ್ಟು, ಪತ್ನಿಗೆ ಕಾಫಿ ತರುವಂತೆ ತಿಳಿಸಿ ಹೊರಗಿನ ವೆರಾಂಡಕ್ಕೆ ಬಂದ. ಅಲ್ಲಿಯೆ ಅವನು ತನ್ನೆಲ್ಲ ಕ್ಲೈಂಟ್ ಗಳನ್ನು ಬೇಟಿ ಮಾಡುವುದು.ಅವನು ಬಂದು ಗಮನಿಸಿದ, ಅರೆ ಈಕೆ ಮಹಾಲಕ್ಷಮ್ಮನವರಲ್ಲವೆ,  ಮೇಷ್ಟ್ರು ವೆಂಕಟೇಶಯ್ಯನವರ ಹೆಂಡತಿ. ವೆಂಕಟೇಶಯ್ಯನವರು ನರಸಿಂಹನಿಗೆ ಹೈಸ್ಕೂಲಿನಲ್ಲಿ  ಉಪದ್ಯಾಯರಾಗಿದ್ದವರು. ಅವನ ತಂದೆ ಶಿವರಾಮಯ್ಯನವರಿಗು ಸ್ನೇಹಿತರು. ಹೈಸ್ಕೂಲಿನಲ್ಲಿದಾಗ ಫೀಸ್ ತೆಗೆದುಕೊಳ್ಳದೆ, ಮನೆ ಪಾಠ ಹೇಳಿ ಎಸ್ ಎಸ್ ಎಲ್ ಸಿ ಮೊದಲದರ್ಜೆಯಲ್ಲಿ ಪಾಸಾಗುವಂತೆ ಮಾಡಿದವರು. ಅವನ ಮೆಚ್ಚಿನ ಉಪಾದ್ಯಾಯರು, ಅವನು ಲಾ ಮುಗಿಸಿ,  ಹೆಚ್ಚಿನ ವಿಧ್ಯಾಬ್ಯಾಸ ಮುಗಿಸಿ , ಲಾಯರ್ ಆಗಿದ್ದಾಗಲು ಅವರ ಜೊತೆ ಸಂಬಂಧ ಉಳಿಸಿಕೊಂಡಿದ್ದ , ಆಗೊಮ್ಮೆ ಈಗೊಮ್ಮೆ ಅವರ ಬೇಟಿ ಮಾಡುತ್ತಿದ್ದ. ಈಗ ಈ ಸಮಯದಲ್ಲಿ ಅವರ ಪತ್ನಿಯನ್ನು ನೋಡುವಾಗಲೆ ಅವನಿಗೆ ಏನೇನೊ ಕೆಟ್ಟ ಯೋಚನೆ ಸುಳಿದುಹೋಯಿತು. ಮಾಸ್ಟರಿಗೆ ವಯಸ್ಸಾಗಿತ್ತು ಪಾಪ  ಅವರಿಗೆ ಏನು ಆಯಿತೊ ಏನೊ ಎಂದು. ಅಂತಹ ಅನುಭವಸ್ಥನು ಪ್ರಶ್ನೆ ಕೇಳಲು ತಡಕಾಡಿ ಕಡೆಗೊಮ್ಮೆ

"ಅದೇನು ನನ್ನ ನೋಡಲು ಇಷ್ಟು ಬೇಗ ಬಂದಿದ್ದೀರಿ, ಮೇಷ್ಟ್ರು ಹೇಗಿದ್ದಾರೆ?" ಎಂದ.

ರಾತ್ರಿಯೆಲ್ಲ ತನ್ನ ದುಃಖವನ್ನು ತಡೆದು ಒಬ್ಬಳೇ  ಹೊರಬರಲು ಹೆದರಿ ಮನೆಯಲ್ಲಿದ್ದು ಈಗ  ಇವನನ್ನು ನೆನಸಿಕೊಂಡು ಆರಕ್ಕೆ ಓಡಿ ಬಂದಿದ್ದ ಮಹಾಲಕ್ಷಮ್ಮನವರಿಗೆ,  ದುಃಖ ಉಕ್ಕಿ ಬಂದು ಜೋರಾಗಿ ಅಳಲು ಪ್ರಾರಂಭಿಸಿದರು. ವಯಸ್ಸಾದ ಹೆಂಗಸು, ಅದರಲ್ಲೂ ತನ್ನ ಮೇಷ್ಟರ ಹೆಂಡತಿ ಹೀಗೆ ಅವನ ಮುಂದೆ ಅಳುತ್ತಿರುವಾಗ ಅವನಿಗೂ ಏನು ಸಮಾದಾನ ಹೇಳಲು ತೋಚದೆ ಸುಮ್ಮನೆ ಕುಳಿತಿದ್ದ.

ಆಕೆಯ ಕೈಯಲ್ಲಿ ಅದೆಷ್ಟೋ ಸಾರಿ ಊಟ ಮಾಡಿರುವ ಅವನು, ಈಗ ಆಕೆಯ ದುಃಖವೇನೊ ತಿಳಿಯದೆ, ಮೇಷ್ಟರಿಗೆ ಅದೇನೆ ಆಪತ್ತು ಬಂದಿರಲಿ, ಅದೆಷ್ಟೇ ಹಣ ಖರ್ಚಾಗಲಿ ತಾನು ಸಹಾಯ ಮಾಡಲೇ ಬೇಕೆಂದು ನಿರ್ಧರಿಸಿದ. ಅಷ್ಟರಲ್ಲಿ ಒಳಗಿನಿಂದ ಶ್ರೀನಿಧಿ ಕಾಫಿ ಹಿಡಿದು ಬಂದವಳು, ಮಹಾಲಕ್ಷಮ್ಮ ಅಳುತ್ತಿರುವುದು ಕಂಡು ನಿಂತಳೂ, ಕಡೆಗೊಮ್ಮೆ ನರಸಿಂಹ ಕಣ್ಣಲ್ಲೆ ಸನ್ನೆ ಮಾಡಿದಾಗ, ಕಾಫಿ ಕೆಳಗಿಟ್ಟು ಆಕೆಯನ್ನು ಸಮಾದಾನ ಪಡಿಸಿದಳು, ಕುಡಿಯಿರಿ ಎಂದು ಕಾಫಿಯ ಲೋಟ ಕೈಗಿಟ್ಟಳು. ಆಕೆ ಬಲವಂತವಾಗಿಯೆ ಕಾಫಿ ಲೋಟ ಪಡೆದು ಸುಮ್ಮನೆ ಕುಳಿತಾಗ ನರಸಿಂಹ ಹೇಳಿದ



"ಅಮ್ಮಾ ಎಂತದೇ ಸಮಸ್ಯೆ ಇದ್ದರೂ ಬಗೆಹರಿಸೋಣ ಹೆದರಬೇಡಿ, ಕಾಫಿ ಕುಡಿಯಿರಿ, ಅಳುವನ್ನು ನಿಲ್ಲಿಸಿ, ಏನು ಸಮಸ್ಯೆ ತಿಳಿಸಿ, ವೆಂಕಟೇಶಯ್ಯನವರು ಏಕೆ ಬರಲಿಲ್ಲ ? ಎಲ್ಲಿ ಹೋಗಿದ್ದಾರೆ" ಎಂದ ವಿಷಯ ತಿಳಿಯಲು.  
ಆಕೆ ಪುನಃ ಅಳುತ್ತ
"ಅವರನ್ನು ರಾತ್ರಿ ಪೋಲಿಸರು ಅರೆಷ್ಟ್ ಮಾಡಿ ಕರೆದುಕೊಂಡು ಹೋದರು, ನನಗೆ ಏನು ಮಾಡಲು ಗೊತ್ತಾಗಲಿಲ್ಲ, ಅಳುತ್ತ ಕುಳಿತಿದ್ದೆ, ಆಗ ನಿಮ್ಮ ನೆನಪು ಬಂದಿತು, ಈಗ ಅವರನ್ನು ನೀವೇ ಕಾಪಾಡಬೇಕು" ಎಂದರು.
ನರಸಿಂಹನೆಗೆ ಆಶ್ಚರ್ಯವಾಗಿಹೋಗಿತ್ತು,  ವೆಂಕಟೇಶಯ್ಯ ಮಾಸ್ಟರನ್ನು ಅರೆಷ್ಟ್ ಮಾಡಿದ್ದಾರ ಏಕೆ ಎಂದು ಅವನಿಗೆ ಅರ್ಥವಾಗಲಿಲ್ಲ,
"ಅವರನ್ನು ಅರೆಷ್ಟ್ ಮಾಡಿದ್ದಾರ ಏಕೆ? ಏನು ಆಯಿತು, ನನಗೆ ಅರ್ಥವಾಗುವಂತೆ ತಿಳಿಸಿ ಅವರು ಏನು ಅಪರಾದ ಮಾಡಿದ್ದಾರೆ ಎಂದು ಅರೆಷ್ಟ್ ಮಾಡಿದರು?"
"ಅದ್ಯಾರೋ ಇನ್ಸ್ ಪೆಕ್ಟರ್ ನನಗೆ ತಿಳಿಯದು ರಾತ್ರಿ ಬಂದಿದ್ದರು,   ಕೊಲೆ ಮಾಡಿದ್ದೀಯ ಎಂದು ಅರೆಷ್ಟ್ ಮಾಡಿ ಕರೆದುಕೊಂಡು ಹೋದರು, ಇವರ ಸ್ನೇಹಿತ ಅನಂತರಾಮಯ್ಯ ಅನ್ನುವವರು ಮಾಗಡಿ ರಸ್ತೆಯಲ್ಲಿದ್ದಾರೆ ಅವರು ಕೊಲೆಯಾಗಿದಾರಂತೆ"
ಎಂದಳು ಆಕೆ.
ನರಸಿಂಹನಿಗೆ ಅನಂತರಾಮಯ್ಯನವರೂ ಗೊತ್ತು ಅವರು ಸಹ ಶಾಲ ಮಾಷ್ಟರ್ , ಈಗಲೂ ಬೆಂಗಳೂರಿಗೆ ಸಮೀಪದ ನೆಲವಂಗಲದ ಹತ್ತಿರ ಅದ್ಯಾವುದೋ ಸ್ಕೂಲಿನಲ್ಲಿ ಕೆಲಸಮಾಡುತ್ತಿದಾರೆ ಎಂದು ತಿಳಿದಿತ್ತು. ಆದರೆ ಅವರ ಬಗ್ಗೆ ಹೆಚ್ಚಿನ ವಿವರ ಇವನಿಗೆ ತಿಳಿಯದು.
"ನೋಡಿ ಅಮ್ಮ ಅರ್ಧ ಅರ್ಧ ವಿಷಯ ತಿಳಿಸಿದರೆ ನನಗೆ ಅರ್ಥವಾಗಲ್ಲ. ಒಂದು ಕೆಲಸ ಮಾಡಿ ನಿಮಗೆ ಏನೇನು ವಿಷಯ ಗೊತ್ತಿದೆಯೊ ಅದನ್ನೆಲ್ಲವನ್ನು ವಿವರವಾಗಿ ಹೇಳಿ. ಮೇಷ್ಟ್ರು ಕೊಲೆ ಮಾಡುವಂತವರಲ್ಲ ನನಗೆ ತಿಳಿದಿದೆ, ಏನು ತಪ್ಪಾಗಿರುತ್ತೆ ನಂತರ ಅದನ್ನು ಯೋಚಿಸೋಣಾ" ಎಂದ.
ಮಹಾಲಕ್ಷಮ್ಮನವರು ಎಲ್ಲ ವಿಷಯವನ್ನು ವಿವರವಾಗಿ ತಿಳಿಸಿದರು. ಅನಂತರಾಮಯ್ಯನವರು ವೆಂಕಟೇಶಯ್ಯನವರ ಜೊತೆಗೆ ಕೆಲಸಮಾಡುತ್ತಿದ್ದವರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಅವರು  ಏನೊ ಮಾಡಿ ಮಾಹಾಲಕ್ಷ್ಮೀ ಲೇಔಟ್ ನಲ್ಲಿ ಒಂದು ಸೈಟ್ ಖರೀದಿಸಿ, ಮನೆ ಕಟ್ಟಿಸಿದರು. ಕೈಯಲ್ಲಿ ಹಣವಿಲ್ಲದೆ , ಲೋನ್ ಅಲ್ಲದೆ ಹೊರಗೆಲ್ಲ ಸಾಲ ಮಾಡಿದರು. ಆಗ ವೆಂಕಟೇಶಯ್ಯನವರು ಸಹ ತಮ್ಮ ರಿಟೈರ್ಡ್ ಆದಾಗ ಬಂದಿದ್ದ ಹಣದಲ್ಲಿ ಐದು ಲಕ್ಷ ಹಣವನ್ನು ಅವರಿಗೆ ಕೊಟ್ಟಿದ್ದರು. ಪಡೆದು ಎರಡು ವರ್ಷದ ಮೇಲಾಗಿತ್ತು. ಮನೆ ಪೂರ್ಣವಾದ ನಂತರವೂ ಸಹ ಅವರು ಹಣವಾಪಸ್ ಕೊಟ್ಟಿರಲಿಲ್ಲ. ಈಗ ಆಗ ಎಂದು ಸತಾಯಿಸುತ್ತಿದ್ದರು. ಆರು ತಿಂಗಳಲ್ಲಿ ಕೊಡುವೆ ಎಂದು ಬಡ್ಡಿಯೂ ಇಲ್ಲದೆ ಪಡೆದ ಹಣ ಎರಡೂ ವರ್ಷವಾದರು ಹಿಂದಕ್ಕೆ ಬರದಾದಾಗ ವೆಂಕಟೇಶಯ್ಯನವರು ಅವರನ್ನು ಅಗಾಗ್ಯೆ ತಮ್ಮ ಹಣ ಹಿಂದಿರುಗಿಸುವಂತೆ ಕೇಳುತ್ತಿದ್ದರು. ನಿನ್ನೆ ಸಹ ಕೇಳಲು ಹೋದಾಗ ಸಾಕಷ್ಟು ವಾಗ್ವಾದವಾಯಿತು. ನಂತರ ಜಗಳ ತಣ್ಣಗಾಗಿ ಇಬ್ಬರೂ ಸ್ನೇಹಿತರು ಒಂದಾದರು.  ಕಡೆಗೆ ವೆಂಕಟೇಶಯ್ಯನವರನ್ನು ಅನಂತರಾಮಯ್ಯನೆ ಬಸ್ ಸ್ಟಾಂಡಿನವರೆಗೂ ಬಂದು ಬಸ್ ಹತ್ತಿಸಿದ್ದರು.

ಆದರೆ ವೆಂಕಟೇಶಯ್ಯನವರು ಮನೆಗೆ ಬಂದ ಸ್ವಲ್ಪವೇ ಹೊತ್ತಿನಲ್ಲಿ ಪೋಲಿಸ್ ಬಂದು , ಬಸ್ ಸ್ಟಾಂಡಿನಲ್ಲಿ ಅನಂತರಾಮಯ್ಯನವರ ಕೊಲೆ ಆಗಿದೆ ಎಂದು ಹೇಳಿ ವೆಂಕಟೇಶಯ್ಯನವರನ್ನು ಅರೆಷ್ಟ್ ಮಾಡಿ ಕರೆದುಕೊಂಡು ಹೋಗಿದ್ದರು, ರಾತ್ರಿ ಎಲ್ಲ ಅಳುತ್ತ ಕುಳಿತಿದ್ದ ಆಕೆ, ಬೆಳಗ್ಗೆ ದಿಕ್ಕು ತೋರದೆ ಇಲ್ಲಿಗೆ ಓಡಿ ಬಂದಿದ್ದರು.

ನರಸಿಂಹನಿಗೂ ಏನು ನಡೆದಿರಬಹುದು ಎಂದು ಊಹಿಸಲಾಗಲಿಲ್ಲ. ಹೇಗಾದರು ಸರಿ ಎಂದು, ತಾನು ಖಂಡಿತ ಸಹಾಯಮಾಡುವೆನೆಂದು ಆತಂಕಪಡಬಾರದೆಂದು. ಮೇಷ್ಟರನ್ನು ಹೊರಗೆ ತರುವ ಜವಾಬ್ದಾರಿ ತನ್ನದೆಂದು ಹೇಳಿ ಸಮಾದಾನ ಪಡಿಸಿ ಅವರನ್ನು ಮನೆಗೆ ಕಳಿಸಿದನು.

ಸ್ವಲ್ಪ ಸಮಯ ಯೋಚಿಸುತ್ತ ಕುಳಿತು ಏನು ಮಾಡುವದೆಂದು ನಿರ್ಧರಿಸಿ. ವೆಂಕಟೇಶಯ್ಯನವರು ಅರೆಷ್ಟ್ ಆಗಿರುವ ಪೋಲಿಸ್ ಸ್ಟೇಷನ್‍ಗೆ  ಮೊದಲು ಹೋಗಬೇಕೆಂದು ನಿರ್ಧರಿಸಿ ನಂತರ ತಾನು ನೇರವಾಗಿ ಹೋಗದೆ. ತನ್ನ ಅಸಿಸ್ಟೇಂಟ್  ಪಾಂಡುಗೆ ಫೋನ್ ಮಾಡಿ ಎಲ್ಲವನ್ನು ತಿಳಿಸಿ, ಅವನು ಮೊದಲು ಅಲ್ಲಿಗೆ ಹೋಗಬೇಕೆಂದು ನಂತರ ತಾನು ಹೋಗುವದೆಂದು  ನಿರ್ಧರಿಸಿದ

ಮುಂದುವರೆಯುವುದು…..

2 comments:

  1. ಈಗ ನರಸಿಂಹರ ಪ್ರವೇಶವಾಗಿದೆ. ಕೊಲೆಗೂ ವೆಂಕಟೇಶಯ್ಯನವರಿಗೂ ಸಂಬಂಧವಿದೆಯೋ ಇನ್ನು ಮುಂದೆ ತೆರೆದುಕೊಳ್ಳಬಹುದೇನೋ..

    ReplyDelete
  2. ವಂದನೆಗಳು ಪಲವಳ್ಳಿ ಸಾರ್, ತಮ್ಮ ಪ್ರತಿಕ್ರಿಯೆ ನನಗೆ ಉತ್ಸಾಹ ಮೂಡಿಸಿದೆ, ಕೊಲೆಗಾರ ಯಾರಿರಬಹುದು ಎಂದು ಹುಡುಕಲು. ನನಗೂ ತೋಚುತ್ತಿಲ್ಲ. ಬಹುಷಃ ಸಿ ಎಸ್ ಪೀ ರವರ ಸಲಹೆ ತೆಗೆದುಕೊಳ್ಲಬೇಕಾಗುತ್ತೋ ಎನೋ :-(

    ReplyDelete

enter your comments please