Thursday, May 14, 2015

ಅಲೋಕ (2)- ಪ್ರವೇಶ

ಅಲೋಕ (2)- ಪ್ರವೇಶ

ಕತೆ : ಅಲೋಕ



ಎದುರಿಗಿದ್ದ ವ್ಯಕ್ತಿ ನನಗೆ ಪೂರ್ಣವಾಗಿ ಗೋಚರ ಅನ್ನಿಸುತ್ತಿರಲಿಲ್ಲ. ಒಮ್ಮೆ ಅವನ ಆಕಾರ ಸ್ವಷ್ಟವಾಗಿ ಕಂಡಿತು  ಅನಿಸಿದರೆ ಮತ್ತೆ ಕಾಣಲಿಲ್ಲ ಅನ್ನುವಂತೆ. ಒಮ್ಮೆ ಪೂರ್ಣ ಬೆಳಕು ಅನಿಸಿದರೆ ಮತ್ತೆ ಕತ್ತಲು ಅನ್ನುವಂತೆ.  ಅವನ ನುಡಿಗಳು ಮಾತ್ರ ಕೇಳಿಸಿದವು.

‘ನಿಮ್ಮ ಪಯಣ ಮುಗಿಯಿತು ಅಲ್ಲವೇ ? , ನಿಮ್ಮ ವಿವರಗಳನ್ನು ಗಮನಿಸಲಾಗುತ್ತಿದೆ ಇರಿ’

ನನಗೇನೊ ಬೇಸರದ ಭಾವ , ಸ್ವಲ್ಪ ಕೋಪ.

ನಾನು ಅಸಹಾಯಕತೆಯಿಂದ ಕೇಳಿದೆ
‘ನೀನು ಯಮದೂತನೆ?”
ನಿಧಾನವಾಗಿ ಅವನ ಮುಖದಲ್ಲಿ ನಗು ಹರಡಿತು
‘ಯಮದೂತ ? !!! ….     ಹಾಗೆ ಭಾವಿಸಬಹುದು “
ನಾನೀಗ ವ್ಯಗ್ರನಾದೆ.

ನಾನು ಅತಿ ಸಾಧಾರಣ ಬದುಕು ಬದುಕಿದ್ದೆ, ಯಾರನ್ನೆ ಆಗಲಿ ನೋಯಿಸಿದ ನೆನಪಿರಲಿಲ್ಲ, ಅಥವ ಉದ್ದೇಶಪೂರ್ವಕವಾಗಿ ನೋಯಿಸಿರಲಿಲ್ಲ. ಯಾರೊಡನೆ ಕದನವಾಗುವ ಸಂದರ್ಭ ಬಂದಾಗಲು, ಮೌನವಹಿಸಿ ಸುಮ್ಮನಾಗುತ್ತಿದೆ. ಇನ್ನು ದೈಹಿಕವಾಗಿ ಹೊಡೆದಾಡುವಂತ ಗುಣವಂತೂ ಇರಲೇ ಇಲ್ಲ. ಕೊಲೆ ದರೋಡೆ ಇಂತಹ ಯಾವುದನ್ನು ಮಾಡುವ ವ್ಯಕ್ತಿ ನಾನಾಗಿರಲಿಲ್ಲ.

ಚಿಕ್ಕವಯಸಿನಲ್ಲಿ ಅರಿವಿಲ್ಲದೆ ಇರುವೆ ಸೊಳ್ಳೆಯಂತದ್ದೇನೊ ಸಾಯಿಸಿರಬಹುದು. ಆದರೆ ಅದು ಉದ್ದೇಶಪೂರ್ವಕವಲ್ಲ. ದೊಡ್ಡವನಾದ ನಂತರ ಸೊಳ್ಳೆಯೊಂದು ಕೈಮೇಲೆ ಕುಳಿತಿದೆ ಅನ್ನುವಾಗಲು, ‘ಉಫ್’ ಎಂದು ಉರುವಿಬಿಡುತ್ತಿದ್ದೆ ಹೊರತಾಗಿ ಹೊಡೆದುಕೊಂದವನಲ್ಲ. ಇನ್ನು ಕಳ್ಳತನ ಸುಳ್ಳುಗಳಂತು ಇರಲೇ ಇಲ್ಲ .  ಇವೆಲ್ಲ ನನ್ನ ನಂಬಿಕೆ.

ಹಾಗಿದ್ದಾಗಲು ನಾನು ನರಕಕ್ಕೆ ಬಂದನೇ ?
ನಾನು ಒಳ್ಳೆಯವನು ಎನ್ನುವ ನನ್ನ ಸ್ವಯಂ ವಿಶ್ವಾಸ ಕದಲಿ ಅಭಿಮಾನಭಂಗವಾಗಿತ್ತು. ಹಾಗಾಗಿ ಕೋಪವು ಕೆರಳಿತ್ತು.

ಅಷ್ಟರಲ್ಲಿ ಎದುರಿಗಿದ್ದ ಆತ  ಶಾಂತನಾಗಿ ನುಡಿದ
‘ಈಗ ನಿಮಗೆ ನಿಮ್ಮದೆ ಆದ ಕೆಲವು  ಕರ್ತವ್ಯಗಳನ್ನು ವಿವರಿಸಲಾಗುತ್ತೆ, ನೀವು ಅದನ್ನು ನಿರ್ವಹಿಸಬೇಕು’   

ನಾನು ಕೂಗುತ್ತ ಹೇಳಿದೆ
‘ಸಾದ್ಯವಿಲ್ಲ, ನನ್ನನ್ನು ನರಕಕ್ಕೆ ಹೇಗೆ ಕರೆತಂದಿರಿ. ನನಗೆ ತಿಳಿದಂತೆ ನಾನ್ಯಾವ ತಪ್ಪುಗಳನ್ನು ಮಾಡಿಲ್ಲ. ಶಿಕ್ಷೆಕೊಡುವ ಮೊದಲು ನನ್ನ ತಪ್ಪು ಏನು ಎಂದು ನಿರೂಪಿಸಿ’  
ಅವನು ಕೊಂಚ ಚಕಿತನಾದ.
‘ಶಿಕ್ಷೆಯೇ ? , ಇಲ್ಲ ಹಾಗಲ್ಲ , ನೀವು ತಪ್ಪು ಕಲ್ಪನೆ ಮಾಡಿಕೊಳ್ಳುತ್ತ ಇರುವಿರಿ,  ಭೂಲೋಕದಲ್ಲಿನ  ನಿಮ್ಮ ಕೆಲವು ಅನುಭವಗಳು ಅಪೂರ್ಣವಾಗಿವೆ ಹಾಗಾಗಿ ಇಲ್ಲಿ ಅದನ್ನು ಪೂರ್ಣಗೊಳಿಸಬೇಕಿದೆ ಅಷ್ಟೆ’
‘ಅವೆಲ್ಲ ಸುಳ್ಳು , ನೀವು ಯಮದೂತರು ಅಂದಮೇಲೆ ನನಗೆ ವಿಧಿಸುವ ಶಿಕ್ಷೆಯ ಕಾರಣವನ್ನು ನೀಡಿ ನಂತರ ನಿಮ್ಮ ಶಿಕ್ಷೆ ಒಪ್ಪಿಕೊಳ್ಳುವೆ ‘  ನಾನು ಕೂಗುತ್ತಿದ್ದೆ.
ಅವನು ಶಾಂತನಾಗಿ,
‘ನೀವು ಅಲ್ಲಿನ ನ್ಯಾಯಾಲಯ ,  ಶಿಕ್ಷೆಗಳ ಕಲ್ಪನೆಯಲ್ಲಿಯೆ ಇರುವಿರಿ ಅನ್ನಿಸುತ್ತೆ ‘ ಅಂದವನು ,  ನಾನು ನಿಂತಿದ್ದ  ಹಿಂಬಾಗದ ಜಾಗದತ್ತ ನೋಡುತ್ತ,
‘ಇವರಿಗೆ ಮಾತಿನ ಸ್ವಾತಂತ್ರ್ಯ ಅನಗತ್ಯ ಅನ್ನಿಸುತ್ತೆ ಅಲ್ಲವೇ?” ಎಂದ.

ಆಗ ಗಮನಿಸಿದೆ, ನನ್ನ ಹಿಂದೆ ಸಹ ಒಬ್ಬ ವ್ಯಕ್ತಿ ನಿಂತಿದ್ದಾನೆ !!!

‘ಹೌದು ಇವರು ಮಾಡುತ್ತಿರುವ ಶಬ್ಧದ ಪರಿಣಾಮ ಇಲ್ಲಿರುವರ ಮೇಲೆ ಆಗುತ್ತಿದೆ, ತೊಂದರೆ ಆಗುತ್ತದೆ ಅನ್ನಿಸುತ್ತೆ, ಇವರಿಗೆ ನಾಲಿಗೆ ಅನಗತ್ಯ , ಅನವಶ್ಯಕ ಅನ್ನಿಸುತ್ತಿದೆ’ ಎಂದ ನನ್ನ ಹಿಂದೆ ನಿಂತಿರುವನು.

‘ಸರಿ ಹಾಗಿದ್ದಲ್ಲಿ ನಾಲಿಗೆ ತೆಗೆದುಬಿಡು’  ಆಜ್ಞೆ ನೀಡಿಬಿಟ್ಟ ನನ್ನ ಎದುರಿಗೆ ನಿಂತಿದ್ದವ.
ನಡುಗಿಹೋದೆ !!

ಪರಿಣಾಮಗಳ ಬಗ್ಗೆ ಚಿಂತಿಸದೆ ತೀರ ಅಪ್ರಬುದ್ಧನಂತೆ ವರ್ತಿಸಿದ್ದೆ. ಈಗ ಅನವಶ್ಯಕ ತೊಂದರೆಗೆ ಒಳಗಾಗಿದ್ದೆ. ಭೂಮಿಯಲ್ಲಿನ ನ್ಯಾಯವನ್ನು , ಇಲ್ಲಿಯ ನ್ಯಾಯದ ಜೊತೆ ಸಮೀಕರಿಸಿ ತಪ್ಪುಮಾಡಿದ್ದೆ. ಈಗ ಏನು ಮಾಡುವಂತಿರಲಿಲ್ಲ

ನನ್ನ ಹಿಂದಿದ್ದ ವ್ಯಕ್ತಿ ಮತ್ತೊಬ್ಬ ಯಮದೂತನಿರಬಹುದು, ನನ್ನ ಮುಂದೆ ಬಂದು ನಿಂತ. ಅವನ ಕೈಯಲ್ಲಿ ಬೆಳಕಿನ ಕೋಲಿನಂತಹ ವಸ್ತುವೊಂದು ಹೊಳೆಯುತ್ತಿತ್ತು. ಭಯ ಎಂಬುದು ಒಳಗಿನಿಂದ ಉಮ್ಮಳಿಸಿ ಬಂದಿತು.

ಅವನು ಬಾಯಿ ತೆಗೆ ಎನ್ನುತ್ತ ತನ್ನ ಕೈಯಲ್ಲಿದ್ದ ಆಯುಧ ಮುಖದ ಹತ್ತಿರ ತಂದ, ನಾಲಿಗೆ ಕೀಳುವ  ನೋವಿನ ಕಲ್ಪನೆಯೆ ನನ್ನಲ್ಲಿ ನಡುಕ ತಂದಿತ್ತು. ಅವನು ಬೆಳಕನ್ನು ಬಾಯೊಳಗೆ ತೂರಿಸುವಾಗಲೆ ನಾಟಕೀಯವಾಗಿ ಎನ್ನುವಂತೆ ಜೋರಾಗಿ ಕಿರುಚಲು ಸಿದ್ದನಾದೆ.

ಅವನು ‘ಆಯಿತು’ ಎಂದ

ಕಿರುಚಲು ಹೋದರೆ ದ್ವನಿಯೆ ಹೊರಬರಲಿಲ್ಲ. ನನ್ನ ದ್ವನಿ ನಿಷ್ಕ್ರಿಯಗೊಂಡಿತ್ತು

ಆದರೆ ಅದಕ್ಕಿಂತಲೂ ಹೆಚ್ಚಿನ ಆಶ್ಚರ್ಯ ನನ್ನನ್ನು ಆವರಿಸಿತು, ನನಗೆ ಯಾವುದೇ ನೋವೇ ಆಗಿರಲಿಲ್ಲ. ಈಗ ನನ್ನಲ್ಲಿ ತರ್ಕ ನಡೆಯುತ್ತಿತ್ತು. ‘ಹೌದು’ ನೋವು ಇಂತಹುದೆಲ್ಲ ಇಂದ್ರೀಯಗಳಿಗೆ ಸಂಬಂದಿಸಿದ್ದು. ಹಾಗಿರಲು ಇಂದ್ರೀಯಗಳ ಸಮೇತ ಶರೀರವನ್ನೆ ತೊರೆದು ಬಂದಿರುವ ನನಗೆ ನೋವಿನ ಅನುಭವವೇ ಆಗಿರಲಿಲ್ಲ. ಆಗುವ ಸಾದ್ಯತೆಯೂ ಇರಲಿಲ್ಲ.

ಭೂಮಿಯಲ್ಲಿನ ನನ್ನ ಅನುಭವವನ್ನು , ಕಲ್ಪನೆಗಳನ್ನು ಇಲ್ಲಿ ಹೋಲಿಸಿಕೊಳ್ಳುವುದು ತಪ್ಪೆನಿಸುತ್ತೆ. ಎದುರಿಗಿರುವ ಈತನ ಮಾತನ್ನು ಸಹನೆಯಿಂದ ಕೇಳಿದ್ದರೆ ಚೆನ್ನಾಗಿತ್ತು, ಎನ್ನುವ ನಾಚಿಕೆ ನನ್ನನ್ನು ಆವರಿಸಿತು. ಆತ ನಗುತ್ತಿದ್ದ .


6 comments:

  1. ಯಾತನೆಯು ದೇಹ ಸಂಬಂಧಿ ಅನುಭವ, ಆತ್ಮವದು ಭಾವಕೆ ಎಟುಕದ್ದೇ ಇರಬಹುದೇನೋ?

    ReplyDelete
  2. ದೇಹ ಸಂಬಂಧ ಕಳಚಿದ
    ಆತ್ಮವದು ಭಾವಸಂಬಂಧವನ್ನು ಕಳಚುವ ಕಲ್ಪನೆಯ ಕಥೆಯೇ ಅಲೋಕದ ವಸ್ತು

    ReplyDelete
  3. ದೇಹ ಸಂಬಂಧ ಕಳಚಿದ
    ಆತ್ಮವದು ಭಾವಸಂಬಂಧವನ್ನು ಕಳಚುವ ಕಲ್ಪನೆಯ ಕಥೆಯೇ ಅಲೋಕದ ವಸ್ತು

    ReplyDelete
  4. ದೇಹ ಸಂಬಂಧ ಕಳಚಿದ ಆತ್ಮಕ್ಕೆ ಜ್ಞಾನೇಂದ್ರಿಯಗಳು ಹಾಗೂ ಕರ್ಮೇಂದ್ರಿಯಗಳ ಅನುಭೂತಿ ಸಾಧ್ಯವೇ?

    ReplyDelete
  5. ನಾಗರಾಜ್ ಸರ್
    ಈ ಕತೆಗೆ ಯಾವುದೇ ಧರ್ಮ ಪುಸ್ತಕ ತರ್ಕದ ಆದಾರಗಳಿಲ್ಲ.ಕಲ್ಪನೆ ಅಷ್ಟೇ ಆಧಾರ.
    ಸದ್ಯಕ್ಕೆ ನಿಮ್ಮ ಪ್ರಶ್ನೆಗೆ ಉತ್ತರ ಹೌದು.ಏಕೆಂದರೆ ಹಾಗಿಲ್ಲದಿದ್ದರೆ ಕತೆಯ ನಿರೂಪಣೆ ಸಾಧ್ಯವಿಲ್ಲ
    ಸತ್ತಿರುವ ವ್ಯಕ್ತಿ ಯ ಕಥೆ ಇದು ಅಲ್ಲವೇ
    ತಾವು ನನ್ನ ಕರಿಗಿರಿ ಬ್ಲಾಗಿನಲ್ಲಿ ಬಂದು ಒದಿ ಪ್ರಶ್ನಿಸಿದ್ದಕ್ಕೆ ವಂದನೆಗಳು
    ಪಾರ್ಥಸಾರಥಿ

    ReplyDelete
  6. ನಾಗರಾಜ್ ಸರ್
    ಈ ಕತೆಗೆ ಯಾವುದೇ ಧರ್ಮ ಪುಸ್ತಕ ತರ್ಕದ ಆದಾರಗಳಿಲ್ಲ.ಕಲ್ಪನೆ ಅಷ್ಟೇ ಆಧಾರ.
    ಸದ್ಯಕ್ಕೆ ನಿಮ್ಮ ಪ್ರಶ್ನೆಗೆ ಉತ್ತರ ಹೌದು.ಏಕೆಂದರೆ ಹಾಗಿಲ್ಲದಿದ್ದರೆ ಕತೆಯ ನಿರೂಪಣೆ ಸಾಧ್ಯವಿಲ್ಲ
    ಸತ್ತಿರುವ ವ್ಯಕ್ತಿ ಯ ಕಥೆ ಇದು ಅಲ್ಲವೇ
    ತಾವು ನನ್ನ ಕರಿಗಿರಿ ಬ್ಲಾಗಿನಲ್ಲಿ ಬಂದು ಒದಿ ಪ್ರಶ್ನಿಸಿದ್ದಕ್ಕೆ ವಂದನೆಗಳು
    ಪಾರ್ಥಸಾರಥಿ

    ReplyDelete

enter your comments please