Friday, April 13, 2012

ಬಿಲ್ಲು ಹಿಡಿದುಕೊಂಡಿದ್ದವರು ನನ್ನವರೇ


ಯಾರೋ ಬಿಟ್ಟ ಬಾಣ ತಾಕಿ ರಕ್ತ ಚಿಮ್ಮಿದಾಗ, ಅಷ್ಟು ನೋವಾಗಿರಲಿಲ್ಲ,
ಸ್ನೇಹಿತರೇ,
ಆದರೆ,
ಬಿಲ್ಲು ಹಿಡಿದುಕೊಂಡಿದ್ದವರು ನನ್ನವರೇ ಎಂದರಿತಾಗ ಈ ಹೃದಯ ಛಿದ್ರವಾಯಿತು!
--ಆಸುಹೆಗ್ಡೆ (ಫೇಸ್ ಬುಕ್'ನಲ್ಲಿ)
======================================

ಸರಿಯಾಗಿ ಹತ್ತನೇ ದಿನ ಕೌರವರ ಸೇನಾಧಿಪತಿ ನೆಲಕ್ಕುರುಳಿದ್ದರು. ಕುರು ಪಾಂಡವರ ಮೆಚ್ಚಿನ ತಾತ, ವಂಶಕ್ಕೆ ಹಿರಿಯ, ಭೀಷ್ಮಾಚಾರ್ಯ, ಆರ್ಜುನನು ಹೂಡಿದ ಬಾಣಕ್ಕೆ ಎದೆಯೊಡ್ಡಿ ರಕ್ತಸುರಿಸುತ್ತ ರಥದಿಂದ ಉರುಳಿ ಕೆಳಗೆ ಬಿದ್ದಾಗ, ಅಂದಿನ ಯುದ್ಧಕ್ಕೆ ವಿರಾಮದ ಘೋಷಣೆಯಾಗಿತ್ತು. ಸಂಜೆಯ ಇಳಿಬಿಸಿಲಿನಲ್ಲಿ ನೊರಜುಕಲ್ಲಿನ ನೆಲದ ಮೇಲೆ ಮಲಗಿದ್ದ ಭೀಷ್ಮರು ಕಣ್ಣು ಮುಚ್ಚಿದ್ದರು. ಸುತ್ತಲು ಒಡಾಡುತ್ತಿದ್ದವರ ಧ್ವನಿ ಅವರಿಗೆ ಸ್ವಷ್ಟವಾಗಿ ಕೇಳಿಸುತ್ತಿತ್ತು.
ಸನಿಹದಲ್ಲಿಯೇ ದುರ್ಯೋಧನನ ಧ್ವನಿ ಕೇಳಿಸಿತು
"ಬೇಗ ತನ್ನಿ , ಅವರನ್ನು ನಿಧಾನವಾಗಿ ಎತ್ತಿ ಮಲಗಿಸಿ, ಗುಡಾರಕ್ಕೆ ಕರೆದೊಯ್ಯೋಣ, ವೈದ್ಯರು ಉಪಚಾರ ನಡೆಸಲಿ, ಸರಿಹೋದಾರು".
ಈಗ ಕಣ್ಣು ಬಿಟ್ಟರು ಭೀಷ್ಮರು. ಪಕ್ಕಕ್ಕೆ ತಿರುಗಿನೋಡಿದರು. ಗುಡಾರದಲಿ ಉಪಯೋಗಿಸುವ ಹಗ್ಗದ ಮಂಚಕ್ಕೆ ಬಿದರುಬೊಂಬುಗಳಿಂದ ಕಟ್ಟಿ ತನ್ನನ್ನ ಅದರಲ್ಲಿ ಮಲಗಿಸಿ ಸೈನಿಕರ ಸಹಾಯದಿಂದ ತನ್ನನ್ನು ಗುಡಾರಕ್ಕೆ ಕರೆದೊಯ್ಯಲು ಸಿದ್ದತೆಯಾಗಿದೆ. ಪಕ್ಕದಲ್ಲಿಯೆ ದುರ್ಯೋಧನನಿದ್ದಾನೆ ತಾನು ಕಣ್ಣುಬಿಟ್ಟಿದ್ದು ನೋಡಿ, ನೆಲಕ್ಕೆ ಮೊಣಕಾಲೂರಿ ಪಕ್ಕದಲ್ಲಿ ಕುಳಿತ,
"ಈಗ ಹೇಗಿದೆ ತಾತ ಚಿಂತೆಮಾಡಬೇಡ‌, ಎಲ್ಲ ಸರಿಯಾಗುತ್ತದೆ".
ಭೀಷ್ಮರಿಗೆ ಆ ನೋವಿನಲ್ಲು ನಗು ಬಂದಿತು.
"ಮಗು, ದುರ್ಯೋಧನ, ನನ್ನ ಬಗ್ಗೆ ಚಿಂತೆ ಬೇಡ. ನನಗೆ ಇನ್ನು ಯಾವ ಸಮಸ್ಯೆಯೂ ಇಲ್ಲ. ನನ್ನನ್ನು ಇಲ್ಲಿಂದ ಕದಲಿಸಬೇಡ. ನನಗೇಕೊ ನನ್ನ ಕಡೆಯ ಕಾಲ ಬಂದಿರುವಂತೆ ಕಾಣುತ್ತಿದೆ. ಈಗ ನಾನು ಗುಡಾರದಲ್ಲಿ ಅಥವಾ ಅರಮನೆಯಲ್ಲಿ ಮಲಗಿ ಸಾಯಲು ಇಷ್ಟ ಪಡುವುದಿಲ್ಲ. ರಣರಂಗದಲ್ಲಿ ಸೈನಿಕನಂತೆ ಸಾಯಲು ಇಷ್ಟಪಡುವೆ. ನನ್ನ ಮಾತು ಕೇಳು"
ದುರ್ಯೋಧನನಿಗೆ ಗಂಟಲು ಕಟ್ಟುತ್ತಿತ್ತು, ತಾತನ ಸ್ಥಿತಿಯ ಆಘಾತದಿಂದಲೋ, ಹತ್ತು ದಿನಗಳಿಂದ ರಣದಲ್ಲಿ ಬಳಲಿರುವದರಿಂದಲೋ, ಕಣ್ಣು ಕತ್ತಲೆ ಬರುತ್ತಿತ್ತು. ಆತನಿಗೆ ಭೀಷ್ಮರ ನಿರ್ಧಾರ ಅನಿರೀಕ್ಷಿತ. ಅಂದುಕೊಂಡ, ಇವರು ಯಾವಾಗಲೂ ಹೀಗೆಯೇ. ಮತ್ತೆ ನುಡಿದ
"ತಾತ, ಇದೇಕೆ, ಮಹಾರಾಜನ ಅಜ್ಜನಾದ ನೀನು ರಣರಂಗದಲ್ಲಿ ನೆಲದಲ್ಲಿ ಮಲಗಿರಬೇಕೇಕೆ, ಇದೇನು ಅವಸ್ಥೆ, ನನಗೆ ದುಃಖವಾಗದೆ?".
"ಮಗು, ಇದರಲ್ಲಿ ದುಃಖವೇಕೆ? ಕ್ಷತ್ರೀಯನಿಗೆ ಎಂದಾದರೂ ಈ ಸ್ಥಿತಿ ಬರುವುದು ಸ್ವಾಭಾವಿಕವಲ್ಲವೇ?" ಎಂದ ಭೀಷ್ಮರ ದ್ವನಿ ಕ್ಷೀಣಿಸಿತ್ತು.
"ಆಗಲಿ ಬಿಡು , ನೀನು ಬರುವುದು ಬೇಡ, ಇಲ್ಲಿಯೆ ನಿನ್ನ ಸುತ್ತ ಗುಡಾರ ಹಾಕಿಸಿ ನಿನಗೆ ಸರಿಮಾಡುತ್ತೇನೆ" ಎಂದ ದುರ್ಯೋಧನ.
"ಮಗು, ಏನೂ ಬೇಡ , ನನಗೆ ತೊಂದರೆ ಕೊಡಬೇಡ. ನಾನು ಮಾತನಾಡಲಾರೆ. ಸ್ವಲ್ಪ ಸುಧಾರಿಸಲಿ, ನನ್ನನ್ನು ಹೀಗಿರುವ ಸ್ಥಿತಿಯಲ್ಲಿಯೆ ಬಿಡು. ಇದು ನನ್ನ ಇಚ್ಛೆ".
ಭೀಷ್ಮರು ತಮ್ಮ ಅಕ್ಕ ಪಕ್ಕ ನೋಡಿದರು. ಒಂದು ಪಕ್ಕದಲ್ಲಿ ಕೃಷ್ಣನ ಜೊತೆಗೆ ನಿಂತ ಪಾಂಡವರ ಕಾತುರದ ಮುಖಗಳು, ಮತ್ತೊಂದು ಕಡೆ ತಮ್ಮ ಈ ಸ್ಥಿತಿಯಿಂದ ಕಂಗೆಟ್ಟ ದುರ್ಯೋಧನಾದಿಗಳ ಮುಖಗಳು. ಅವರ ನಡುವೆ ಕರ್ಣನು ತಲೆತಗ್ಗಿಸಿ ನಿಂತಿದ್ದ.
ಅವರಿಗೆ ಯುದ್ಧದ ಮೊದಲಿನ ದಿನ ನೆನಪಿಗೆ ಬಂದಿತು. ದುರ್ಯೋಧನನು ತಮ್ಮನ್ನು ಸೈನ್ಯಕ್ಕೆ ಮುಖ್ಯಸ್ಥನನ್ನಾಗಿ ಇರಲು ಕೇಳಿಕೊಂಡ. ತಾನು ನಿಧಾನಕ್ಕೆ ಯೋಚಿಸಿ ಒಪ್ಪಲು ಕಾರಣವಿತ್ತು , ಯಾವುದಾದರೂ ಪರಿಸ್ಥಿತಿಯಲ್ಲಿ ಸಾದ್ಯವಾದರೆ ಯುದ್ಧವನ್ನು ತಡೆಯಲು ಸಾಧ್ಯವಾಗಬಹುದು ಎಂಬ ಆಲೋಚನೆ.
ಆದರೆ ಸೇನಾಧಿಕಾರಿಯಾಗುವುದಕ್ಕೆ ತಾನು ನೀಡಿದ ಒಪ್ಪಿಗೆಗೆ ಇದೇ ಕರ್ಣನ ಅಭಿಪ್ರಾಯವಾದರೂ ಏನಿತ್ತು? ತಾನು ಪಾಂಡವ ಪಕ್ಷಪಾತಿಯಾದ್ದರಿಂದ ಈ ಯುದ್ಧ ಗೆಲ್ಲುವ ಸಾಧ್ಯತೆ ಇಲ್ಲವೆಂದು ಹೇಳಿದ್ದ. ಅಷ್ಟು ಸಾಲದೆಂಬಂತೆ. ತಾನು ಸೇನಾಧಿಕಾರಿಯಾಗಿರುವವರೆಗೂ ಆಯುಧಹಿಡಿದು ಯುದ್ಧ ಮಾಡುವದಿಲ್ಲವೆಂದು ಪ್ರತಿಜ್ಞೆಯನ್ನೂ ಮಾಡಿದ್ದ. ಎಂತಹ ಮೂರ್ಖ? ತಾನು ಪ್ರೀತಿಸುವ ತನ್ನ ಗೆಳೆಯ, ಒಡೆಯನಿಗೆ ಇದರಿಂದ ತೊಂದರೆ ಎಂದು ಅರಿಯಲಾರದ ಮೂಢತನ. ಈಗ ಅವರ ಮನಸ್ಸು ನಿರಾಳವಾಗಿತ್ತು. ತಾನು ಯಾರ ಪಕ್ಷಪಾತಿಯೂ ಅಲ್ಲವೆಂದೂ, ಯುದ್ಧಕ್ಕೆ ನಿಂತರೆ ಎದುರಾಳಿ ಯಾರೇ ಇರಲಿ ಅವರನ್ನು ಭಂಗಿಸಿ ಅಲುಗಾಡಿಸುವನೆಂದೂ, ಎಲ್ಲರಿಗೂ ತೋರಿಸಿಯಾಗಿತ್ತು. ಅವರ ಮುಖದಲ್ಲಿ ಹೆಮ್ಮೆ ತುಂಬಿತ್ತು. ಕೃಷ್ಣ ಸಹ ಯುದ್ಧದಲ್ಲಿ ಆಯುಧ ಹಿಡಿಯುವದಿಲ್ಲ ಎಂಬ ತನ್ನ ಪ್ರತಿಜ್ಞೆ ಮರೆತು ಕೋಪದಿಂದ ತಮ್ಮ ಮೇಲೆ ತನ್ನ ಚಕ್ರಾಯುಧ ಎತ್ತಿದ್ದ, ಎನ್ನುವುದನ್ನು ಎಣಿಸಿ ಭೀಷ್ಮರಿಗೆ ನಗು ಬಂದಿತು.
ಸೂರ್ಯಮುಳುಗುವ ಸಮಯವಾಗುತ್ತಿತ್ತು . ದೂರ್ಯೋದನ ದಿಕ್ಕುಗೆಟ್ಟವನಂತೆ ನಿಂತ , ದಾರಿ ಕಾಣದೆ ಅವನೇ ಕೇಳಿದ,
"ತಾತ ಹಾಗಾದರೆ ನಾನೀಗ ಏನು ಮಾಡಲಿ? ನೀನೂ ಇಲ್ಲಿ ಹೇಗಿರುತ್ತಿ?".
"ಮಗು ನನ್ನ ಯೋಚನೆ ಬಿಡು ನೀನು ಬಿಡಾರಕ್ಕೆ ಹೋಗಿ ವಿಶ್ರಾಂತಿ ತೆಗೆದುಕೊ, ಮತ್ತೆ ಬೆಳಗ್ಗೆ ಮಾತನಾಡೋಣ ನೀನು ಹೊರಡು" ಎಂದರು.
ದುರ್ಯೋಧನನಿಗೆ ರಾತ್ರಿ ಯುದ್ಧ ಭೂಮಿಯಲ್ಲಿ ಗಾಯಾಳುವಾಗಿ ಸಾವನ್ನು ನಿರೀಕ್ಷಿಸುತ್ತ ಮಲಗಿರುವ ತಾತನನ್ನು ಬಿಟ್ಟುಹೋಗಲು ಭಯ. ಕೆಲವು ಸೈನಿಕರನ್ನು ಕರೆದು, ರಾತ್ರಿ ಇಲ್ಲಿಯೇ ತಾತನ ಸುತ್ತಲು ನಿಂತು ಕಾವಲು ಕಾಯುವಂತೆ, ಒಂದೊಮ್ಮೆ ಅವರೇನಾದರೂ ಕೇಳಿದರೆ, ತಕ್ಷಣ ತನಗೆ ಸುದ್ದಿ ಕಳಿಸುವಂತೆ ಸೂಚನೆ ಕೊಟ್ಟು , ಹೊರಡುವ ಮುಂಚೆ ಭೀಷ್ಮರ ಬಳಿ ಬಂದು ಅಪ್ಪಣೆ ಕೇಳಿದ ,
ತಲೆ ಆಡಿಸಿದ ಭೀಷ್ಮರು, ದುರ್ಯೋಧನನನ್ನು ಕುರಿತು,
"ಮಗು, ಈಗಲೂ ಒಮ್ಮೆ ಯೋಚಿಸು, ನಿಮ್ಮ ನಿರ್ಧಾರದಿಂದ ಪ್ರಾರಂಭವಾದ ಈ ಯುದ್ಧ ನನ್ನನ್ನು ಬಲಿ ತೆಗೆದುಕೊಂಡಿತು, ಮುಂದಿನ ನಡೆಗಳೇನು ಎಂದು ಗೊತ್ತಿಲ್ಲ. ಈ ಭಾರತ ಯುದ್ಧದಲ್ಲಿ ಯಾರು ಗೆಲ್ಲುವರೋ ಯಾರು ಸೋಲುವರೋ ಎನ್ನುವುದು ಮುಖ್ಯವಾಗುವದಿಲ್ಲ, ಆದರೆ ಸಾವಿರಾರು ಜನ ಸಾವು ನೋವಿನಿಂದ ನರಳುವರು. ನೀನು ಸಹನೆಯಿಂದ ಚಿಂತಿಸಿದರೆ ಈಗಲೂ ಕಾಲ ಮಿಂಚಿಲ್ಲ. ಈ ಯುದ್ಧವನ್ನು ನಿಲ್ಲಿಸಿ ಪಾಂಡವರನ್ನು ನಿನ್ನ ಸಹೋದರರಂತೆ ಕಂಡು, ಚಿಕ್ಕ ಪಾಲೊಂದನ್ನು ಕೊಟ್ಟು ಸಂತಸದಿಂದ ಇರಬಾರದೇಕೆ?" ಎನ್ನುತ್ತಾ ಅವನ ಮುಖವನ್ನು ನೋಡುತ್ತಿದ್ದರು. ಈ ಹಂತದಲ್ಲಿಯಾದರೂ, ಈ ದಾಯಾದಿ ಕಲಹ ನಿಲ್ಲಲ್ಲೆಂದು ಅವರ ಬಯಕೆ.
ದುರ್ಯೋಧನನ ಕಣ್ಣು ಮತ್ತೂ ಕೆಂಪಾಯಿತು, ಯುದ್ಧದ ಪರಿಣಾಮದಿಂದ ಅವನ ಬಟ್ಟೆಗಳು ಅಲ್ಲಲ್ಲಿ ಕೆಂಪಾಗಿತ್ತು, ಮೈಕೈಗಳಲ್ಲಿ ಅಲ್ಲಲ್ಲಿ ರಕ್ತವು ಒಸರಿ ಅವನ ಸ್ವರೂಪಕ್ಕೆ ಭೀಷಣತೆ ಬಂದಿತ್ತು.
"ಅದೊಂದು ಮಾತ್ರ ಆಗದು ತಾತ, ನೀನು ಸಂಬಂಧದಲ್ಲಿ ಅವರಿಗೂ ತಾತನಾಗಬೇಕು. ಆದರೆ ಅದನ್ನು ಮರೆತು, ನಿನ್ನ ಮೇಲೆ ಬಾಣಪ್ರಯೋಗ ಮಾಡಿ, ನಿನ್ನ ಈ ಸ್ಥಿತಿಗೆ ಕಾರಣರಾಗಿದ್ದಾರೆ ಪಾಂಡವರು, ಅವರು ಎಲ್ಲದಕ್ಕೂ ಸಿದ್ದರಾಗಿ ನಿಂತಿರುವಾಗ ನಾನು ಅವರಿಗೆ ಹೇಡಿಯಂತೆ ಶರಣು ಹೋಗಲೇ? ಏನಾಗಬೇಕಿದೆಯೊ ಆಗಲಿ, ನಾನಂತೂ ಇಟ್ಟ ಹೆಜ್ಜೆಯನ್ನು ಹಿಂದೆ ಸರಿಸಲು ಸಿದ್ದನಿಲ್ಲ"
ಎನ್ನುತ್ತ ಭೀಷ್ಮರಿಗೆ ವಂದಿಸಿ, ತನ್ನವರತ್ತ ಹೊರಡಿ ಎಂದು ಸನ್ನೆ ಮಾಡುತ್ತಾ , ದೊಡ್ಡ ದೊಡ್ದ ಹೆಜ್ಜೆಗಳನ್ನಿಡುತ್ತ ಹೊರಟು ಹೋದ. ಅವನ ಹಿಂದೆಯೇ ಕರ್ಣಾದಿಯಾಗಿ, ಆತನ ಗುಂಪೆಲ್ಲ ಹೊರಟು ಹೋಯಿತು.
ಕೆಲವು ಕ್ಷಣ ಕಳೆದಿರಬಹುದು. ಸ್ವಲ್ಪ ಕಂದಿದ ಮುಖಭಾವದಿಂದ ಧರ್ಮರಾಯ ಭೀಷ್ಮರ ಬಳಿಬಂದ
"ತಾತ, ನನಗೆ ನೋವಾಗುತ್ತಿದೆ, ಯುದ್ಧದ ಅನೀವಾರ್ಯತೆಯಿಂದ ನನ್ನ ತಮ್ಮ ಆರ್ಜುನನೇ ತಮ್ಮ ಮೇಲೆ ಬಾಣ ಬಿಟ್ಟು ಈ ಸ್ಥಿತಿಗೆ ಕಾರಣನಾಗಬೇಕಾಯಿತು, ನಮ್ಮನ್ನು ಕ್ಷಮಿಸಿ. ಈ ರಾತ್ರಿ ತಮ್ಮ ಜೊತೆ ನಾನಿರಲೇ?" ಎಂದನು.
ಭೀಷ್ಮರು "ಬೇಡ ಧರ್ಮ, ನೀನಾಗಲಿ ಬೇರೇ ಯಾರೇ ಆಗಲಿ ಇಲ್ಲಿರುವ ಅಗತ್ಯವಿಲ್ಲ. ಆರ್ಜುನನ ಬಾಣ ನನ್ನ ಅಂತ್ಯಕ್ಕೆ ಕಾರಣವಾಯಿತೆಂದು ನೀನು ನೊಂದುಕೊಳ್ಳದಿರು. ಇದೆಲ್ಲ ವಿಧಿಯಾಟ. ನಿನ್ನಲ್ಲಿ ನಾನು ಕೋರಿಕೊಳ್ಳಲೇ , ಈಗ ನೀನಾದರೂ ಮನಸ್ಸು ಮಾಡು, ಈ ಯುದ್ಧ ನಿಲ್ಲಿಸು, ಮುಂದೆ ಹೇಗಾದರೂ ದುರ್ಯೋಧನನನ್ನು ಒಲಿಸಿಕೊಳ್ಳಬಹುದು. ಈ ಯುದ್ಧವೆಂಬ ಭೂತ ದೂರವಾಗಲಿ. ನೀನು ನನ್ನ ಮಾತಿಗೆ ಬೆಲೆಕೊಡಲಾರೆಯಾ?" ಎಂದರು.
ಧರ್ಮರಾಯನ ಮುಖದಲ್ಲಿ ಇಕ್ಕಟ್ಟಿನ ಭಾವ, ಅವನು ಎದುರಿಗಿದ್ದ ಕೃಷ್ಣನ ಮುಖ ನೋಡಿದ. ಕೃಷ್ಣ ಯಾವ ಮಾತನ್ನೂ ಆಡಲಿಲ್ಲ. ಕಿರುನಗೆಯೊಂದು ಅವನ ಮುಖದಲ್ಲಿ ಸದಾ ನೆಲೆಸಿತ್ತು. ಧರ್ಮರಾಜನು ಭೀಷ್ಮರನ್ನು ಕುರಿತು ನುಡಿದ
"ತಾತ ನನಗೂ ಈ ಯುದ್ಧ ಇಷ್ಟವಿಲ್ಲ, ಆದರೆ ಏನು ಮಾಡಲಿ, ಕ್ಷತ್ರೀಯ ಧರ್ಮ ನನ್ನನ್ನು ಕಟ್ಟಿ ಹಾಕಿದೆ, ದುರ್ಯೋಧನನು ಸಣ್ಣ ಐದು ಗ್ರಾಮ ಕೊಡಲು ಒಪ್ಪಿದರು ನಾನು ಯುದ್ಧ ನಿಲ್ಲಿಸಲು ಸಿದ್ಧ, ಮಾತುಕತೆಯಲ್ಲಿ ಸಾಧ್ಯವಾಗದ್ದನ್ನು ನಾನು ಯುದ್ಧದಲ್ಲಿ ಪಡೆಯಬೇಕು ಅದೇ ಧರ್ಮವಲ್ಲವೆ?" ಎಂದ.
ಭೀಷ್ಮರಿಗೆ ಆ ನೋವಿನಲ್ಲೂ ನಗು ಬಂದಿತು. ಪಾಂಡವರ ಮನಸನ್ನು ಈ ಕೃಷ್ಣ ಸಂಪೂರ್ಣವಾಗಿ ತಾನು ನಿಯಂತ್ರಿಸುತ್ತಿದ್ದಾನೆ. ಧರ್ಮರಾಯನ ಬಾಯಲ್ಲಿ ಬರುತ್ತಿರುವ ಈ ಮಾತುಗಳು ಅದೇ ಹಳೆಯ ರಾಗದ ಪುನರಾವರ್ತನೆ. ಧರ್ಮದ ಹೆಸರಿನಲ್ಲಿ ಯುದ್ಧಕ್ಕೆ ನಿಂತಿರುವ ಇವರಿಗೆ ಯಾವ ಸಂಬಂಧಗಳೂ ಕಾಣಿಸುವುದಿಲ್ಲ. ಸ್ವಂತ ತಾತನನ್ನು ದಾರಿಯಿಂದ ನಿವಾರಿಸಲು ಸಿದ್ದರಾದ ಪಾಂಡವರ ಈ ಧರ್ಮದ ವಾದದ ಹಿಂದಿರುವುದು ಸಹ ರಾಜಾಧಿಕಾರದ ಹುಚ್ಚೇ, ಅದನ್ನು ನೀರೆರೆದು ಪೋಷಿಸುತ್ತಿರುವವನು ಈ ಕೃಷ್ಣ ಎಂದು ಮನದಟ್ಟಾಯಿತು.
ಅವರ ಮನಸಿನ ಪರದೆಯ ಮೇಲೆ, ಯಾವುದೋ ದೃಶ್ಯವೊಂದು ಬಂದು ನಿಂತಿತು. ಪಾಂಡವರು ಎಲ್ಲ ಚಿಕ್ಕ ಮಕ್ಕಳು ದೊಡ್ಡವನಾದ ದರ್ಮರಾಯ ಹತ್ತು ಹದಿನೈದು ವರ್ಷದವನಿರಬಹುದು , ಉಳಿದವರೆಲ್ಲ ಕೂಸುಗಳು, ಅರ್ಜುನ ಏಳು ಎಂಟು ವರ್ಷದ ಮಗು, ತಾಯಿ ಕುಂತಿಯ ಜೊತೆ , ತಂದೆಯನ್ನು ಕಳೆದು ಕೊಂಡು ಬಂದು ನಿಂತಿದ್ದ ಅನಾಥ ಮಕ್ಕಳು. ತನಗೆ ಅಯ್ಯೊ ಅನ್ನಿಸಿತ್ತು, ಹಾಕಲು ಬಟ್ಟೆಗಳು ಇಲ್ಲದೆ, ಸರಿಯಾದ ಉಪಚಾರಗಳಿಲ್ಲದೆ ಕಾಡಿನಲ್ಲಿ ಅಮ್ಮನ ಜೊತೆ ಬೆಳೆದ ಮಕ್ಕಳು, ಎಲ್ಲರ ವಿರೋಧದ ನಡುವೆಯೂ ಇವರನ್ನು ಹತ್ತಿರ ಸೇರಿಸಿ, ವಿದ್ಯಾಭ್ಯಾಸ ಕೊಡಿಸಿ, ರಾಜ್ಯ ಕೊಡಿಸಿ ನಿಲ್ಲಿಸಿದೆ, ಆದರೆ ತಮ್ಮ ಮೂರ್ಖತೆಯಿಂದ ದುರ್ಯೋಧನನ ಜೊತೆಗೆ ಜೂಜಿಗೆ ಇಳಿದು ರಾಜ್ಯ ಕಳೆದು ವನವಾಸ ಮಾಡಿ ಈಗ ಈ ಸ್ಥಿತಿಗೆ ಬಂದು ನಿಂತಿದ್ದಾರೆ. ಈಗ ತನ್ನ ಮಾತು ಸಹ ಇವರಿಗೆ ರುಚಿಸದು ಎಂದು ಅರ್ಥವಾಗಿ ಮೌನವಾದರು.
ಧರ್ಮರಾಯ ಹೊರಡುವ ಮುಂಚೆ
"ಪೂಜ್ಯ ತಾತ, ನನಗೆ ತಮ್ಮಿಂದ ಕೆಲವು ಧರ್ಮದ ಉಪದೇಶ ಬೇಕಾಗಿದೆ ಮತ್ತೆ ಬಂದು ನಿಮ್ಮನ್ನು ಕಾಣುತ್ತೇನೆ" ಎಂದ.
ಭೀಷ್ಮರಿಗೆ ಗಹಗಹಿಸಿ ನಗುವ ಮನಸ್ಸಾಯಿತು. ಆದರೆ ಏನನ್ನೂ ಹೇಳದೆ ತಲೆಯಾಡಿಸಿದರು. ಅವರು ಮೌನವಾಗಿ ತಲೆಯಾಡಿಸುತ್ತಿದ್ದಂತೆ ಧರ್ಮರಾಯ ಹಾಗು ಉಳಿದ ಪಾಂಡವರು ಹೊರಟರು.
ಅರ್ಜುನ ಸಹ ಹೊರಟಂತೆ, ಕೃಷ್ಣ ಅರ್ಜುನನ ಹೆಗಲ ಮೇಲೆ ಮೃದುವಾಗಿ ಕೈಒತ್ತಿದ. ನಿಲ್ಲುವಂತೆ ಸೂಚಿಸಿದ.
"ಅರ್ಜುನ ಪೂಜ್ಯರು ನೆಲದ ಮೇಲೆ ಮಲಗಿದ್ದಾರೆ, ಅವರಿಗೆ ಏನಾದರು ಅಗತ್ಯವಿದೆಯ ಕೇಳಿ ಹೋಗೋಣ" ಎಂದ.
ಭೀಷ್ಮರು ಯೋಚಿಸಿದರು, ಕೃಷ್ಣನ ದ್ವನಿ ಅತ್ಯಂತ ಮೃದು. ಅವನು ನುಡಿದರೆ, ವೇಣುವಿನ ಶಬ್ದದಂತೆ ಕೇಳುವುದು. ಮಾತಿನಲ್ಲಿ ಸಹಜವಾಗಿಯೆ ಆಜ್ಞೆ ಇರುತ್ತಿತ್ತು, ಎದುರಿಗಿರುವವರು ಪುಂಗಿಯ ನಾದಕ್ಕೆ ಹೆಡೆತೂಗುವ ಹಾವಿನಂತೆ ಅವನ ಮಾತಿಗೆ ತಲೆತೂಗುವರು. ಆದರು ಇವನು ದುರ್ಯೋಧನನನ್ನು ಏಕೆ ಒಲಿಸಲಿಲ್ಲ ಎಂದು ಅವರಿಗೆ ಅನ್ನಿಸಿತು.
ಆರ್ಜುನ ನಿಧಾನಕ್ಕೆ ಅವರ ಹತ್ತಿರ ಬಂದು ನಿಂತ, ಅವನ ನಿಲುವಿನಲ್ಲಿ ಅನಿವಾರ್ಯತೆ ಇತ್ತೇ ಹೊರತು, ತಾತನ ಈ ಸ್ಥಿತಿಗೆ ತಾನು ಕಾರಣನಾದೆನೆಂಬ ನೋವು ಕಾಣಿಸಲಿಲ್ಲ.
ಕೃಷ್ಣ ಕೇಳಿದ
"ಪೂಜ್ಯರೆ, ತಮಗೆ ಏನಾದರೂ ಬೇಕಿತ್ತೆ?".
ಭೀಷ್ಮರಿಗೆ ಆಗಿನಿಂದ ಬಾಯಾರುತ್ತಿತ್ತು, ಅವರಿಗೆ ಕುಡಿಯಲು ನೀರು ಬೇಕಿತ್ತು. ಅವರು ನಿಧಾನಕ್ಕೆ ನುಡಿದರು
"ಕೃಷ್ಣ ಬಾಯಾರಿದೆ, ಕುಡಿಯಲು ನೀರು ಬೇಕಿದೆ" ,
ಅರ್ಜುನ ಸುತ್ತಲು ನೋಡಿದ, ಎಲ್ಲಿಯಾದರು ಹೋಗಿ ನೀರು ತರಬೇಕು ಎಂದುಕೊಳ್ಳೂತ್ತಿರುವಂತೆ ಕೃಷ್ಣನು ಅರ್ಜುನನಿಗೆ ನುಡಿದ.
"ಅರ್ಜುನ ನೀನು ನಿನ್ನ ವಿದ್ಯಾಬಲದಿಂದ ನೆಲಕ್ಕೆ ಬಾಣ ಹೂಡಿ ಇಲ್ಲೆ ನೀರೇಕೆ ತರಿಸಬಾರದು"
ಅರ್ಜುನನ ಕಣ್ಣು ಮಿನಗಿತು, ಇಂತಹವನ್ನೆಲ್ಲ ಕೆಲವೊಮ್ಮೆ ಅವನು ಬಿಲ್ವಿದ್ಯೆಯ ಅಭ್ಯಾಸದ ಸಮಯದಲ್ಲಿ ಪ್ರಯತ್ನ ಪಟ್ಟಿದ್ದ. ಈಗ ನೆನಪಿಸಿಕೊಂಡು, ಹಿಂದಿನಿಂದ ಬಾಣವೊಂದನ್ನು ತೆಗೆದ, ಬಿಲ್ಲಿಗೆ ಹೂಡಿ, ದಿಕ್ಕನ್ನು ಸರಿಯಾಗಿ ಹೊಂದಿಸಿ, ಭೀಷ್ಮರ ಸನಿಹ ಕುಳಿತ, ಬಾಣಕ್ಕೆ ತಕ್ಕ ಮಂತ್ರ ದೇವತೆಯನ್ನು ಸ್ಮರಿಸಿ, ಬಗ್ಗಿ ನೆಲಕ್ಕೆ ಬಾಣವನ್ನು ಬಿಟ್ಟ. ಶಬ್ದ ಮಾಡುತ್ತ ಬಾಣವು ನೆಲದೊಳಗೆ ಕಣ್ಮರೆಯಾಯಿತು. ಅದು ಯಮುನೆ ಹರಿಯುವ ಸನಿಹದ ನೆಲ. ಕ್ಷಣಗಳಲ್ಲಿ ಬಾಣಬಿಟ್ಟ ಜಾಗದಿಂದ ನೀರು ಚಿಮ್ಮಿತ್ತು, ನೇರವಾಗಿ ಭೀಷ್ಮರ ಮುಖದ ಹತ್ತಿರ, ಆರ್ಜುನ ಬೊಗಸೆಯಲ್ಲಿ ನೀರು ಹಿಡಿದು ಅವರಿಗೆ ಕುಡಿಸಿದ. ಒಂದೆರಡು ಕ್ಷಣ ನೀರು ಹಾಗೆ ನಿಂತಿತು.
ಭೀಷ್ಮರು ಅರ್ಜುನನ ಮುಖ ಹತ್ತಿರದಿಂದ ವೀಕ್ಷಿಸಿದರು. ಅರ್ಜುನನನಲ್ಲಿ ತಾತನಿಗೆ ನೀರು ಕುಡಿಸಿದ ಯಾವ ಸಾರ್ಥಕ ಭಾವವು ಕಾಣುತ್ತಿಲ್ಲ. ಬದಲಾಗಿ ತನ್ನ ಬಿಲ್ವಿದ್ಯೆಯನ್ನು ತಾತನಿಗೆ ತೋರಿಸಿದ, ಅಹಂ ಮತ್ತು ತೃಪ್ತ ಭಾವ ಕಾಣುತ್ತಿದೆ. ಬೆಚ್ಚಿದರು ಭೀಷ್ಮರು.
"ಪೂಜ್ಯರೆ ನಮ್ಮಿಂದ ಮತ್ತೇನಾದರು ಸೇವೆಯ ಅಗತ್ಯವಿದೆಯೆ?"
ಭೀಷ್ಮ ಅರಿತರು ಕೃಷ್ಣನು ತನಗೆ ಈ ಮೂಲಕ ಏನನ್ನೊ ಹೇಳುತ್ತಿದ್ದಾನೆ. ಅವರು ಈಗ ನುಡಿದರು.
"ಕೃಷ್ಣ, ಎದೆಯಲ್ಲಿ ನೆಟ್ಟ ಬಾಣದಿಂದಾಗಿ ನೇರವಾಗಿ ಮಲಗಲು ಆಗುತ್ತಿಲ್ಲ, ಒರಗಿ ಮಲಗಲು ತಲೆಗೆ ಆಸರೆ ಏನಾದರು ಬೇಕಿತ್ತು"
ಆರ್ಜುನ ಸುತ್ತಮುತ್ತ ನೋಡಿದ ಮತ್ತೇನಾದರು ಒರಗುದಿಂಬಿನಂತದು ಸಿಗಲು ಸಾದ್ಯವೆ ಎಂದು. ಕೃಷ್ಣ ನಗುತ್ತ ನುಡಿದ
"ಆರ್ಜುನ ಇಲ್ಲಿ ಅಂತದೇನು ಸಿಗಲಾರದು, ಇಲ್ಲಿರುವದೆಲ್ಲ ಬಾಣ, ಕತ್ತಿಯಂತ ಆಯುದಗಳೆ, ಒಂದು ಕೆಲಸಮಾಡು, ಬಾಣಗಳನ್ನು ಒಟ್ಟುಗೂಡಿಸಿ, ಅವರ ಬೆನ್ನು ತಲೆಗೆ ಆದರಾವನ್ನಾಗಿಸು" .
ಅರ್ಜುನನಿಗೆ ಒಂದು ಕ್ಷಣ ಮರುಕ ಮೂಡಿತು, ಆದರೇನು ಇದು ಯುದ್ಧಭೂಮಿ ಎಂದುಕೊಳ್ಳುತ್ತ, ಸುತ್ತ ಮುತ್ತಲಿದ್ದ ಬಾಣಗಳನ್ನೆಲ್ಲ ಒಂದುಮಾಡಿ ಒರಗುದಿಂಬಿನಂತಾಗಿಸಿದ, ಅದನ್ನು ತಾತ ಬೀಷ್ಮಾಚಾರ್ಯರ ಬೆನ್ನು ತಲೆಗೆ ಆದಾರವಾಗಿ ಕೊಟ್ಟು ಅವರನ್ನು ಮಲಗಿಸಿದ. ಭೀಷ್ಮರು ಆರ್ಜುನನತ್ತ ದಿಟ್ಟಿಸಿದರು, ಆರ್ಜುನನಲ್ಲಿ ಕೃಷ್ಣ ಹೇಳಿದ ಕೆಲಸವನ್ನು ಮಾಡುವ ತತ್ಪರತೆಯಷ್ಟೆ. ತನ್ನತ್ತ ಒಂದು ಮರುಕದ ನೋಟವಿಲ್ಲ. ಇದೆಂತ ವಿಚಿತ್ರ, ನಾನು ಮಲಗಿರುವ ಈ ಸ್ಥಿತಿಗೆ ಅಯ್ಯೋ ಎನ್ನುತ್ತ ಕಣ್ಣೀರಗೆರೆಯುವರು ಒಬ್ಬರೂ ಇಲ್ಲವೆ. ತಾವು ಆರ್ಜುನನನ್ನು ಪ್ರೀತಿಯ ಮೊಮ್ಮಗನನ್ನಾಗಿ ಭಾವಿಸಿದ್ದರು, ಆದರೆ ಆರ್ಜುನನಲ್ಲಿ ತಾತನ ಈ ಸ್ಥಿತಿಗೆ ಯಾವ ಸ್ಪಂದನೆಯು ಇಲ್ಲ 'ತಾತ ನನ್ನಿಂದಾಗಿ ತಮ್ಮ ಗತಿ ಹೀಗಾಯಿತು' ಎನ್ನುವ ಒಂದು ಕಣ್ಣೀರ ಹನಿ ಇಲ್ಲ.
ಅವರಿಗೆ ಅರ್ಥವಾಗಿಹೋಗಿತ್ತು. ತಾನೀಗ ಯಾರಿಗೂ ಬೇಡವಾಗಿಬಿಟ್ಟಿರುವೆ. ನನ್ನಿಂದ ಇದ್ದ ಅಗತ್ಯವೆಲ್ಲ ಇವರಿಗೆ ತೀರಿ ಹೋಗಿದೆ. ದುರ್ಯೋಧನ ನನ್ನನ್ನು ಪಾಂಡವರಿಗೆ ಎದುರಾಗಿ ನಿಲ್ಲಿಸಿ , ಭಾವನಾತ್ಮಕವಾಗಿ ಪಾಂಡವರನ್ನು ಕಂಗೆಡಿಸಿ, ಗೆಲವು ಸಾಧಿಸಲು ಪ್ರಯತ್ನಿಸಿದ. ಆದರೆ ಈಗ ತಾನು ನೆಲಕ್ಕೆ ಬಿದ್ದ ಮೇಲೆ ಅವನಿಗೆ ತನ್ನ ಅಗತ್ಯವಿಲ್ಲ. ಸೈನಿಕರನ್ನು ಕಾವಲಿಗೆ ಬಿಟ್ಟು ಹೊರಟುಹೋದ. "ತಾತ ನಾನು ಇಲ್ಲಿ ಇರಲೇ " ಎಂದು ಕೇಳಬಹುದಿತ್ತು, ಆದರೆ ಅವನಿಗೆ ನಾಳಿನ ಯುದ್ಧದ್ದ ಚಿಂತನೆ. ಯಾರನ್ನಾದರೂ ಸೇನಾಧಿಪತಿಯನ್ನಾಗಿ ಆರಿಸುವ ಆತುರ.
ಪಾಂಡವರಿಗೆ ತಾನು ಎದುರಾಗಿ ನಿಂತಿರುವವರೆಗೂ ಗೆಲುವು ಅಸಾಧ್ಯವೆಂದು ಅರ್ಥವಾಗಿತ್ತು, ಹಾಗಾಗಿ ತನ್ನನ್ನು ನಿವಾರಿಸಿಕೊಂಡುಬಿಟ್ಟರು, ಇನ್ನು ಮುಂದಿನ ಚಿಂತನೆಯಷ್ಟೆ. ಇಬ್ಬರಿಗೂ ತಾತನಾಗಿರುವ ತಾನು ಈಗ ಇವರಿಬ್ಬರಿಗೂ ಏನೂ ಅಲ್ಲ.
ಸಂಜೆಯ ಯುದ್ಧದ ನೆನಪಾಗಿತ್ತು, ನಾನದೆಷ್ಟು ಯುದ್ಧಗಳಲ್ಲಿ ಬಾಗವಹಿಸಿಲ್ಲ, ಗೆದ್ದಿಲ್ಲ, ಕತ್ತಿಯ ಏಟು, ಬಾಣದ ಏಟು ನನಗಾವ ನೋವನ್ನು ಮಾಡದು. ಆದರೆ ಸಂಜೆ ಏಕೋ ಮನಸ್ಸು ವಿಚಲಿತವಾಗಿತ್ತು. ಎದುರಿಗೆ ಯಾರೊ ಶಿಖಂಡಿಯನ್ನು ನಿಲ್ಲಿಸಿದ್ದರು. ಅದೇನೂ ಮುಖ್ಯವಾಗಿರಲಿಲ್ಲ. ಅರ್ಜುನನಿಗೆ ಕೃಷ್ಣ ಹೇಳಿದ್ದ
"ಆರ್ಜುನ ಇದೇ ಸಮಯ ಮತ್ತೆ ಸಿಗದು, ಭೀಷ್ಮರು ವಿಚಲಿತರಾಗಿದ್ದಾರೆ, ಅವರ ಮೇಲೆ ಬಾಣ ಪ್ರಯೋಗಿಸು."
ಭೀಷ್ಮರು ಶೂನ್ಯ ಮನಸ್ಕರಾಗಿ ಅರ್ಜುನನನ್ನು ದಿಟ್ಟಿಸಿದರು, ಅರ್ಜುನನ ಕಣ್ಣಲ್ಲಿ ಇದ್ದ ಗೆಲುವಿನ ಹಸಿವು ಅವರನ್ನು ನೋಯಿಸಿತ್ತು. ಎದುರಿಗೆ ನಿಂತಿರುವ ತಾತನ ಮೇಲೆ ಅವನಿಗಾವ ಮಮಕಾರವೂ ಇರಲಿಲ್ಲ. ಹೇಗಾದರೂ ಸರಿ, ತನ್ನನ್ನು ಹೊಡೆದು ಕೆಡವಿ, ಯುದ್ಧವನ್ನು ಕೊನೆಗಾಣಿಸಬೇಕೆಂಬುದೇ ಅವನ ಕಣ್ಣಿನಲ್ಲಿ ಕಾಣಿಸಿದ ಭಾವ. ಅವರು ವಿಹ್ವಲರಾದರು.
" ಯಾರೋ ಬಿಟ್ಟ ಬಾಣ ತಾಕಿ ರಕ್ತ ಚಿಮ್ಮಿದಾಗ, ಅಷ್ಟು ನೋವಾಗಿರಲಿಲ್ಲ,
ಆದರೆ,
ಬಿಲ್ಲು ಹಿಡಿದುಕೊಂಡಿದ್ದವರು ನನ್ನವರೇ ಎಂದರಿತಾಗ ಹೃದಯ ಛಿದ್ರವಾಯಿತು!"
ಕೈಲಿದ್ದ ಬಿಲ್ಲು ಬಾಣಗಳನ್ನು ಎಸೆದರು, ಅರ್ಜುನನು ಬಿಟ್ಟಬಾಣಕ್ಕೆ ಎದೆಯೊಡ್ಡಿ ನಿಂತರು, ಅವರ ಯುದ್ಧ, ಹೋರಾಟ ಕೊನೆಯಾಗಿತ್ತು.
ಕೃಷ್ಣ ಹೀಗೇಕೆ ಮಾಡಿದೆ, ಅರ್ಜುನನ ಹೃದಯದಲ್ಲಿ ತನ್ನವರೆಂಬ ಭಾವ ಹೊಕ್ಕಾಗ ಅದನ್ನು ನಿನ್ನ ಭಗವದ್ಗೀತೆಯ ವಾಣಿಗಳಿಂದ ತೊಡೆದು ಅವನನ್ನು ಉತ್ತೇಜನಗೊಳಿಸಿ ಯುದ್ಧಕ್ಕೆ ಸಿದ್ದ ಮಾಡಿದೆ. ಆದರೆ ಅದೇ ಭಾವವನ್ನು ನನ್ನ ಹೃದಯದಲ್ಲಿ ಮೂಡಿಸಿ ನನ್ನ ಬದುಕನ್ನು ಯುದ್ಧವನ್ನು ಕೊನೆಗಾಣಿಸಿದೆ. ನಿನ್ನನ್ನು ದೈವವೆಂದು ಎಲ್ಲರು ಪೂಜಿಸುತ್ತಾರೆ, ನಿನ್ನ ಬಗ್ಗೆ ಮದುರ ಭಾವ ಹೊಂದಿರುವ ನನ್ನಲ್ಲೇಕೆ ಈ ಭೇದ ಭಾವ.
ಅವರ ಮನ ಚಿಂತಿಸುತ್ತಿತ್ತು.
ನಿಧಾನಕ್ಕೆ ಕಣ್ಣು ತೆರೆದು ಕೃಷ್ಣನ ಮುಖ ನೋಡಿದರು, ಅಲ್ಲಿ ಎಂದೂ ಬಾಡದ ಒಂದು ಮುಗುಳ್ನಗೆ, ಅವರ ಹೃದಯಕ್ಕೆ ವೇದ್ಯವಾಗಿತ್ತು. 'ನಿಜ ಕೃಷ್ಣ, ನೀನು ಸತ್ಯವನ್ನು ನನ್ನ ಕಣ್ಣೆದುದುರಿಗೇ ತೋರಿಸುತ್ತಿರುವೆ. ಆದರೆ ನಾನಿನ್ನೂ ಅರ್ಥಮಾಡಿಕೊಂಡಿಲ್ಲ. ನಾನು ನಂಬಿರುವ ಇವರಾರೂ ನನ್ನ ಬಂಧುಗಳಲ್ಲ. ನಾನಿನ್ನು ಇವರ ನಡುವೆ ಇರುವ ಅಗತ್ಯವಿಲ್ಲ. ಇವರ ಸೋಲು ಗೆಲುವಿಗೂ ನನಗೂ ಸಂಬಂಧವೇ ಇಲ್ಲ. ನನ್ನ ಈ ಲೋಕದ ಯಾತ್ರೆ ಮುಗಿಯಿತು,' ಎಂಬ ಭಾವ ಅವರನ್ನು ತುಂಬುತ್ತಾ, ಅವರು ಹೊರಗಿನ ಏನನ್ನು ನೋಡಲು ಇಚ್ಚೆ ಇಲ್ಲದವರಂತೆ ಕಣ್ಣು ಮುಚ್ಚಿಕೊಂಡರು.
"ಅರ್ಜುನ ನಾವಿನ್ನು ಹೊರಡೋಣ, ನಮ್ಮ ಕೆಲಸವಾಯಿತು"
ಕೃಷ್ಣ ಅರ್ಜುನನಿಗೆ ತನ್ನ ಮೃದು ಧ್ವನಿಯಲ್ಲಿ ಹೇಳುತ್ತಿದ್ದ. ಇಬ್ಬರೂ ಅಲ್ಲಿಂದ ನಿಧಾನವಾಗಿ ನಡೆದು ಹೊರಟು ಹೋದರು.
- ಮುಗಿಯಿತು.
ಕೃತಜ್ಞತೆ:
ಚಿತ್ರವನ್ನು ಇಂಟರ್ ನೆಟ್ ನ : supergoodmovies.com ನಲ್ಲಿಯ bhishma dance drama ದಿಂದ ಕಾಪಿ ಮಾಡಿರುವೆ
-------------------------------------------------------------------------------------------
ಹಿನ್ನುಡಿ : ಫೇಸ್ ಬುಕ್ ನಲ್ಲಿ ಆಸುಮನದ ಕವಿತೆ ಓದಿ ಮರೆತರು ನಡುನಡುವೆ ಆ ವಾಕ್ಯಗಳು ನೆನಪಿಗೆ ಬರುತ್ತಲೆ ಇದ್ದಿತು. ಏಕೊ ಭೀಷ್ಮರ ಸಾವಿನ ಪ್ರಸಂಗವು ಅದರೊಂದಿಗೆ ನೆನಪಿಗೆ ಬರುತ್ತಿತ್ತು. ಸಂಪೂರ್ಣ ಸಿಂಹಾಸನಕ್ಕೆ ಅವರೆ ನಿಜವಾದ ಅಧಿಕಾರಿಯಾಗಿದ್ದರು ಸಹ ತಂದೆಗಾಗಿ ಕೊಟ್ಟ ಮಾತಿನಂತೆ , ಎಂತಹ ಸಂದರ್ಭದಲ್ಲಿ ಸಹ ಸಿಂಹಾಸನವೇರದೆ, ಕಡೆಯಲ್ಲಿ ಸುತ್ತಲು ಜನರಿದ್ದರು ತನ್ನವರು ಎಂದು ಯಾರು ಇರದೆ, ತಾನು ಸಾಕಿ , ವಿದ್ಯೆ ಕೊಡಿಸಿ ಬೆಳೆಸಿದ ತನ್ನ ಮೊಮ್ಮಕ್ಕಳ ಯುದ್ಧೋನ್ಮಾದದಲ್ಲಿ ತನ್ನ ಮೊಮ್ಮಗನಿಂದಲೆ ಹತನಾದ ಭೀಷ್ಮರ ಕತೆ, ಆಸುರವರ ವಾಕ್ಯದೊಂದಿಗೆ ತಾಳೆಯಾಗುತ್ತಿತ್ತು. ಹಾಗಾಗಿ ಈ ಕತೆ. ತಮ್ಮ ಕವಿತೆ ಮೂಲಕ ಕತೆಗೆ ಸ್ಪೂರ್ತಿಯಾದ ಹಾಗು ಕತೆಯಲ್ಲಿನ ಅಲ್ಪ/ಮಹಾಪ್ರಾಣ ಹಾಗು ತಪ್ಪುಗಳನ್ನು ತಿದ್ದಿಕೊಟ್ಟ ಆಸುರವರಿಗೆ ವಂದನೆಗಳು
-ಪಾರ್ಥಸಾರಥಿ

No comments:

Post a Comment

enter your comments please