Friday, August 17, 2012

ದೂರತೀರದ ಕರೆ

ದೂರತೀರದ ಕರೆ

ಅದುನಿಕ ಮಾದ್ಯಮಗಳಾದ ಟೀವಿ, ಕಂಪ್ಯೂಟರ್ , ಇಂಟರ್ ನೆಟ್ ಇವು ಬೇಕೊ ಬೇಡವೊ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿ ಬೆರೆತುಹೋಗಿವೆ. ಹಾಗೆಯೆ ಇವುಗಳನ್ನು ತೀರ ಹೀಗೆಳೆಯಲು ಆಗುವದಿಲ್ಲ. ಜೀವನದಲ್ಲಿ ಇವು ನಮ್ಮನ್ನು ಹೊಸ ನೆಲೆಯತ್ತ, ಹೊಸ ಚಿಂತನೆಗಳತ್ತ, ಹೊಸ ಆಯಾಮಗಳತ್ತ ಕರೆದೊಯ್ಯುತ್ತದೆ. ಹಾಗೆ ಜೀವನದ ಸಂಬಂದಗಳಿಗೆ, ಗೆಳೆತನಕ್ಕೆ ಹೊಸ ಅರ್ಥವನ್ನು ಹಚ್ಚುತ್ತ ಹೋಗುತ್ತದೆ.

ನಾವು ಚಿಕ್ಕವರಾಗಿದ್ದಾಗಲೆಲ್ಲ, ಗೆಳೆಯರೆಂದರೆ ನಮ್ಮಗೆ ಎಂತದೊ ಸಂತಸ, ಹಾಗೆ ಗೆಳೆಯರೆಂದರೆ ಯಾರೊ ಆಗುತ್ತಿರಲಿಲ್ಲ. ನಮ್ಮ ಸುತ್ತಲೆ ಸದಾ ಇದ್ದು, ಅಕ್ಕಪಕ್ಕದ ಮನೆಗಳಲ್ಲಿ, ಬೀದಿಗಳಲ್ಲಿ ಇರುತ್ತ. ಬೆಳಗ್ಗೆ ಶಾಲೆಗೆ ಹೋಗುವಾಗ, ಮತ್ತೆ ಶಾಲೆಯಲ್ಲಿ, ಸಂಜೆ ಆಡುವಾಗ ಹೀಗೆ ಸದಾ ನಮ್ಮ ಜೊತೆಯೆ ಇರುತ್ತ, ಆಟ ಊಟಗಳಲ್ಲಿ ನೋವು ನಲಿವುಗಳಲ್ಲಿ ಬೆರೆಯುತ್ತ ಒಂದಾಗುತ್ತಿದ್ದವರು. ಅವರಿಗೆ ವಿಶಿಷ್ಟ ಸ್ಥಾನ ನಮ್ಮ ಬದುಕಲ್ಲಿ

ಆದರೆ ಈಗ ಬದುಕೆ ಬದಲಾಗುತ್ತ ನಡೆದಿದೆ, ಪ್ರಪಂಚವೆಂದರೆ ತುಂಬಾ ಚಿಕ್ಕದಾಗುತ್ತ ನಡೆದಿದೆ, ಹಾಗೆ ಗೆಳೆಯರೆಂದರೆ ನಿಮ್ಮ ಪಕ್ಕದ ಮನೆಯವರಲ್ಲ, ಹಿಂದಿನ ಬೀದಿಯವರು ಅಲ್ಲ, ಎಲ್ಲೊ ಯಾವುದೋ ಕಾಣದ ಊರಿನಲ್ಲಿ, ಎಂದು ಕೇಳಿರದ ದೇಶದಲ್ಲಿರಬಹುದು. ಎಂದು ನೋಡಿರದೆ ಇರಬಹುದು, ಅವರ ಬಾಷೆಯು ಗೊತ್ತಿಲ್ಲದೆ ಇರಬಹುದು. ಗಂಡು ಅಥವ ಹೆಣ್ಣು ಎಂಬ ಬೇದವು ಇಲ್ಲದೆ ಹಾಗೆ ಈ ಗೆಳೆತನ ಬೆಸೆದುಬಿಡುತ್ತದೆ ಅನ್ನುವುದೆ ವಿಚಿತ್ರ. ಇದಕ್ಕೆಲ್ಲ ಕಾರಣವಾಗಿರುವುದು ಇಂಟರ್ ನೆಟೆ ಎಂಬ ಸೌಲಬ್ಯ.

ಹೀಗೆ ಅದು ನನ್ನನ್ನು ಒಮ್ಮೆ ವಿಚಿತ್ರ ಲೋಕಕ್ಕೆ ಕರೆದೊಯ್ಯಬಲ್ಲದೆಂದು ಅಥವ ನಾನು ಎಂದು ಊಹೆ ಮಾಡಿರದ ವ್ಯಕ್ತಿಯೊಬ್ಬರ ಬೇಟಿಯಾಗಬಲ್ಲನೆಂದು ಕಲ್ಪಿಸಿರಲಿಲ್ಲ.

ನಾನೇನು ಚಿಕ್ಕವಯಸಿನಿಂದಲು ಕಂಪ್ಯೂಟರ್ ಇಂಟರ್ ನೆಟ್ ಎಂದು ಬೆಳೆದವನಲ್ಲ ಅಸಲಿಗೆ ಚಿಕ್ಕವಯಸಿನಲ್ಲಿ ಅವೆಲ್ಲ ಇರಲೆ ಇಲ್ಲ. ತೀರ ತಡವಾಗಿ ಆ ಲೋಕಕ್ಕೆ ಪರಿಚಯವಾದವನು.  ಪೇಸ್ ಬುಕ್ , ಟ್ವಿಟರ್ ಎಂದು ಕೇಳುತ್ತ  ಅದೇನು ಎಂಬ ಕುತೂಹಲದಲ್ಲಿಯೆ ಅದರಲ್ಲಿ ಕಾಲಿಟ್ಟು,   ಸ್ವಲ್ಪ ಗಂಭೀರವಾಗಿಯೆ ಇಳಿದವನು. ಕೆಲವರಾದರು ಅದರಲ್ಲಿ ಗೆಳೆಯರಾದರು ಅಂದರೆ ಅದಕ್ಕೆ ಕಾರಣ ನನಗೆ ಕನ್ನಡದಲ್ಲಿದ್ದ ಆಸಕ್ತಿ. ಆದರೆ ಒಮ್ಮೊಮ್ಮೆ ಬಾಷೆಯನ್ನು ಮೀರುವ ಸಂದರ್ಭ ಬಂದಿತು. ಅದರಲ್ಲಿ ಮೊದಲಿಗೆ ನನಗೆ ನನ್ನ ಪ್ರೊಫೈಲ್ ಅಕೌಂಟ್ ಬೇರೆಯವರು ಕಾಲು ಹಾಕದಂತೆ ತಡೆಯಲು ಗೊತ್ತಿರಲಿಲ್ಲ. ಹಾಗಾಗಿ ಯಾವುದೊ ಯಾವುದೊ ಗೆಳೆತನದ ಅಫರ್ ಬರೋದು. ಯಾವುದಕ್ಕು ಸ್ಪಂದಿಸುವದಕ್ಕೆ ಹೋಗುತ್ತಿರಲಿಲ್ಲ. ಸುಮ್ಮನಾಗಿಬಿಡುತ್ತಿದ್ದೆ. ವಿಚಿತ್ರವಾಗಿ ಕೆಲವು ಬೇರೆ ದೇಶಗಳಿಂದಲು ಬೇರೆ ಬಾಷೆಯ ಜನರು ಸಹ ಫೇಸ್ ಬುಕ್ನಲ್ಲಿ ನನಗೆ ರಿಕ್ವೆಸ್ಟ್ ಕಳಿಸಿದಾಗ ಗೊಂದಲವಾಗುತ್ತಿತ್ತು. ಕೆಲವರು ನನ್ನ ವಯಸಿನ ಅರಿವಿಲ್ಲದವರು ಸಹ ಇರುತ್ತಿದ್ದರು.

ಸಾಮಾನ್ಯವಾಗಿ ಫೇಸ್ ಬುಕ್ ಅಕೌಂಟ್ ಎಂದಾಗ ಯಾರೊ ಒಬ್ಬ ವ್ಯಕ್ತಿ ಎಂದು ಭಾವಿಸುತ್ತೇವೆ, ಆದರೆ ಇಬ್ಬರು ಒಟ್ಟಾಗಿ ಅಪರೇಟ್ ಮಾಡುವ ಅಕೌಂಟ್ ಕಡಿಮೆ , ನನಗೆ ಒಂದು ಗೆಳೆತನದ ಕರೆ ಬಂದಿತ್ತು, ದೂರ ದೇಶದ ವ್ಯಕ್ತಿಗಳದು, ಇಬ್ಬರು ಒಂದೆ ಆಕೌಂಟ್ ಗೆ ರಿಜಿಸ್ಟರ್ ಆಗಿದ್ದವರು. ನನಗೆ ವಿಚಿತ್ರ ಅನ್ನಿಸಿತು. ಅವರಿಬ್ಬರು ಅಕ್ಕತಂಗಿಯರು ಅನ್ನಿಸುತ್ತೆ.  ಆಂಡ್ರಿಯಾ ಅನ್ಸಾಲ್ ಮತ್ತು ಅಂಜಲೀನ ಅನ್ಸಾಲ್ ಅವರ ಹೆಸರುಗಳು. ಸಾಮಾನ್ಯವಾಗಿ ಫೇಸ್ ಬುಕ್ ನಲ್ಲಿ ಅಪರಿಚಿತರ ಗೆಳೆತನ ಒಪ್ಪದೆ ತಳ್ಳಿಹಾಕಿಬಿಡುವ ನಾನು ಅದಕ್ಕೆ ಒಪ್ಪಿಗೆ ಮುದ್ರೆ ಒತ್ತಿಬಿಟ್ಟೆ ನನಗೆ ಆಶ್ಚರ್ಯ ಆಗುವಂತೆ.

ಎಷ್ಟೋ ಕಾಲ ಅವರ ಜೊತೆ ಗೆಳೆತನ ಬೆಳೆದು ನಡೆಯಿತು, ಮೊದಲಿಗೆ ಸ್ಟೇಟಸ್ ಅಪಡೇಟ್ ನಲ್ಲಿಯೆ ಮೆಸೇಜ್ ಗಳು ಸಾಗುತ್ತಿದ್ದುದ್ದು ಕಡೆ ಕಡೆಗೆ ಅದೇನೊ ಸ್ವಂತ ಮೆಸೇಜಗಳು ಹರಿದಾಡತೊಡಗಿ, ಫೇಸ್ ಬುಕ್ ಅಲ್ಲದೆ ನಮ್ಮದೆ ಇಮೈಲ್ ಮೂಲಕವು ಮಾತುಕತೆಗಳು, ಚಾಟ್ ಗಳು ಇರುತ್ತಿದ್ದವು. ಭಾರತದ ನೆಲದ , ಸಂಪ್ರದಾಯ, ಇಲ್ಲಿಯ ಸುತ್ತ ಮುತ್ತಲ ವಿಷ್ಯದ ಬಗ್ಗೆ ಅವರಿಬ್ಬರ ಆಸಕ್ತಿ ಹರಿದಾಡುತ್ತಿತ್ತು. ನಾನೇನು ಅವರ ದೇಶ ಅಮೇರಿಕದ ಬಗ್ಗೆ ಹೆಚ್ಚೆ ಆಸಕ್ತಿ ತೋರಿಸುತ್ತಿರಲಿಲ್ಲ. ನಿಜಕ್ಕು ನನಗೆ ಅವೆಲ್ಲ ಇಷ್ಟವು ಇರಲಿಲ್ಲ. ಆದರೆ ಅದು ಹೇಗೊ ಅವರಿಬ್ಬರ ಗೆಳತನ ಮಾತ್ರ ನನಗೆ ಅಂಟಿಕೊಂಡಿತ್ತು. ಅವರಿಬ್ಬರು ನಿಜವಾಗಿ ವ್ಯಕ್ತಿಗಳೊ ಅಥವ ಸುಳ್ಳು ಪ್ರೊಫೈಲ್ ಗಳೊ ಅನ್ನುವ ಅನುಮಾನವು ನನಗೆ ಮೊದಲಲ್ಲಿ ಕಾಡಿತ್ತು. ಆದರೆ ತೀರ ನನಗೆ ಇಮೈಲ್ ಗಳು ಪ್ರಾರಂಬವಾದ ನಂತರ ಅವರಿಬ್ಬರ ಮನಸ್ಸು ಸ್ವಭಾವ ಭಾವನೆಗಳು ಎಲ್ಲ ತಿಳಿಯುತ್ತ ಇರುವಂತೆ, ಅವರು ನಿಜ ವ್ಯಕ್ತಿಗಳೆ ಎಂಬ ನಂಬಿಕೆ ಬಂದಿತ್ತು. ಅದರೊಂದು ವಿಚಿತ್ರ ವಿತ್ತು ಎಂದು ಸಹ ಅವರಿಬ್ಬರ ಪ್ರತ್ಯೇಕ ಮೆಸೇಜ್  ನನಗೆ ಬರಲೆ ಇಲ್ಲ . ಯಾವ ಮೆಸೇಜ್ ಆಗಲಿ ಅವರಿಬ್ಬರ ಜೊತೆಯಾದ ಪತ್ರಗಳೆ ಇರುತ್ತಿದ್ದವು. ಕಡೆಯಲ್ಲಿ ಇಬ್ಬರ ಹೆಸರುಗಳು ಒಟ್ಟಿಗೆ ಇರುತ್ತಿದ್ದವು. ಅಕ್ಕತಂಗಿಯರು ತುಂಬಾ ಆತ್ಮೀಯರು ಎಂದುಕೊಳ್ಳುತ್ತಿದ್ದೆ.

ನನಗೆ ಅವರಿಂದ ಅವರ ದೇಶದ, ಅಮೇರಿಕದ ಜನರ ನಡವಳಿಕೆಗಳ ಬಗ್ಗೆ, ಸಾಮಾನ್ಯ ವರ್ತನೆಗಳ ಬಗ್ಗೆ, ಸಂಸಾರ, ಬಾಂದವ್ಯ, ಗೆಳೆತನ, ಸಂಸ್ಕೃತಿ ಹೀಗೆ ಹತ್ತು ಹಲವು ವಿಷಯಗಳು ತಿಳಿಯುತ್ತಿದ್ದವು. ಮೊದಲಿನಿಂದ ನನ್ನದೆ ಆದ ಒಂದು ಅಭಿಪ್ರಾಯವಿತ್ತು, ಅದೆಂದರೆ ದೇಶ ಜನ ಯಾವುದೆ ಆಗಲಿ, ಒಟ್ಟಾರೆಯಾಗಿ ಎಲ್ಲ ಮನುಷ್ಯರ ವರ್ತನೆಗಳು ಒಂದೆ ಆಗಿರುತ್ತದೆ ಎನ್ನುವುದು ನನ್ನ ಕಲ್ಪನೆ . ನನ್ನ ಹಾಗು ನನ್ನ ಫೇಸ್ ಬುಕ್ ಗೆಳತಿಯರ ನಡುವಿನ ವಿಷಯ ವಿನಿಮಯಗಳು ನನ್ನ ಕಲ್ಪನೆಯನ್ನು ನಿಜ ಎಂದು ತೋರಿಸುತ್ತಿದ್ದವು. ಎಲ್ಲ ದೇಶದಲ್ಲಿ ಸಹ ದೊಡ್ಡವರ ಸಣ್ಣವರ ನಡುವಿನ ಬಿನ್ನಾಭಿಪ್ರಾಯಗಳೆ ಆಗಲಿ, ಹಣವಂತರ ಬಡವರ ನಡುವಿನ ವ್ಯೆತ್ಯಾಸವೆ ಆಗಲಿ, ಗಂಡು ಹೆಣ್ಣುಗಳ ನಡುವಿನ ಶೋಷಣೆಯೆ ಆಗಲಿ. ಸಾಮಾನ್ಯರ ಹಾಗು ಸಮಾಜದಲ್ಲಿ ಉನ್ನತ ಸ್ತರದಲ್ಲಿರುವ ಜನರ ನಡುವಿನ ನಡುವಳಿಕೆಗಳ ವ್ಯೆತ್ಯಾಸ ಎಲ್ಲವು ಇರುತ್ತದೆ. ಹಾಗೆ ದೇವರನ್ನು ನಂಬುವರು, ನಂಬದಿರುವರು, ಮೂಡನಂಭಿಕೆ ಇರುವರು ವೈಜ್ಞಾನಿಕ ಮನೋಭಾವದವರು, ಈ ರೀತಿ ಎಲ್ಲ ವರ್ಗದ ಜನರು ಒಂದು ಸಮಾಜದಲ್ಲಿರುತ್ತಾರೆ ಅನ್ನುವುದು ಸತ್ಯ, ಅದು ಅಮೇರಿಕವೆ ಆಗಲಿ ಪಾಕಿಸ್ತಾನವೆ ಆಗಲಿ , ನಮ್ಮ ಭಾರತವೆ ಆಗಲಿ ಹಾಗೆ ಇರುತ್ತದೆ. ತನ್ನ ದೇಶದ ನಡುವಳಿಕೆ ತಪ್ಪು ಎಂದು ತಿಳಿದವರು ಎಲ್ಲ ದೇಶದಲ್ಲಿಯು ಇರುತ್ತಾರೆ ಆದರೆ ಜೋರಾಗಿ ಹೇಳಲಾರರು.

ಅದೆಲ್ಲ ಹಾಗಿರಲಿ , ನನ್ನ ಹಾಗು ಅಮೇರಿಕದ ಸಹೋದರಿಯರ ನಡುವಿನ ಗೆಳೆತನ ಹಾಗೆ ಮುಂದುವರೆದಿತ್ತು. ಅದೇನೊ ಎಲ್ಲಿಯೊ ಇರುವ ಅವರ ನನ್ನ ನಡುವೆ ಒಂದು ಗೆಳೆತನದ ಬೆಸುಗೆ ಬೆಸೆದಿತ್ತು. ನಾನು ಕೆಲವು ನನ್ನ ವೈಯುಕ್ತಿಕ ವಿಷಯಗಳನ್ನು ಅವರಲ್ಲಿ ಹಂಚಿಕೊಂಡಿದ್ದೆ, ನನ್ನ ಸಂಸಾರ , ಹೆಂಡತಿ, ಮಗಳ ವಿಷಯ, ನನ್ನ ವಯಸ್ಸು ಎಲ್ಲವು ಅವರಿಗೆ ತಿಳಿದಿತ್ತು, ಆದರೆ ಎರಡು ವರ್ಷಗಳ ಅಂತರ ದಲ್ಲಿ ನನಗೆ ಅವರ ಹೆಸರಿನ ವಿನಃ ಯಾವುದೆ ಸ್ವಂತ ವಿಷಯವು ತಿಳಿದಿರಲಿಲ್ಲ. ಕಡೆಗೆ ಅವರ ವಯಸ್ಸು ಸಹ ಸರಿಯಾಗಿ ತಿಳಿದಿರಲಿಲ್ಲ. ಅವರ ಬಾಷೆ, ಅನುಭವದ ಮಾತು, ಮನಸಿನ ಸ್ಥಿಥಿ ಎಲ್ಲವನ್ನು ಅನುಸರಿಸಿ ನಾನೆ ಸುಮಾರಾಗಿ ಅವರು ನಲವತ್ತು ನಲವತೈದು ವಯಸಿನವರಿರಬಹುದೆಂದು ಭಾವಿಸಿದ್ದೆ.  ಅವರು ಒಮ್ಮೆ ನನ್ನನ್ನು ಅಮೇರಿಕಗೆ ಬೇಟಿ ಕೊಡುವ ಬಗ್ಗೆ ವಿಚಾರಿಸಿದರು, ಆದರೆ ನನಗೆ ತಿಳಿದಂತೆ ಅದು ನನಗೆ ಸಾದ್ಯವೆ ಇರಲಿಲ್ಲ. ನನಗೆ ಅದಕ್ಕೆ ಬೇಕಾದ ಯಾವುದೆ ಪಾಸ್ ಪೋರ್ಟ್ ವೀಸಾ ಅಗಲಿ ಮತ್ಯಾವುದೆ ಆಗಲಿ ಇರಲಿಲ್ಲ. ಅಲ್ಲದೆ ನನಗೆ ಅಲ್ಲಿಗೆ ಹೋಗಬೇಕಾದ ಪ್ರೊಪೆಷನಲ್ ಕೆಲಸವು ಇರಲಿಲ್ಲ. ವೈಯುಕ್ತಿಕ ನೆಲೆಯಲ್ಲಿ ಅಲ್ಲಿಗೆ ಹೋಗುವಷ್ಟು ಹಣಕಾಸಿನ ಸ್ಥಿಥಿಯಾಗಲಿ ಅಥವ ಪರಿಸ್ಥಿಥಿಯಾಗಲಿ ಇರಲಿಲ್ಲ. ನಾನು ಅದನ್ನೆಲ್ಲ ತಿಳಿಸಿ ನನ್ನ ಅಮೇರಿಕದ ಬೇಟಿ ಬಹುಮಟ್ಟಿಗೆ ಅಸಾದ್ಯವೆಂದೆ ತಿಳಿಸಿದ್ದೆ. ಆದರೆ ಅವರಿಗಂತು ಭಾರತದ ವಿಷಯದಲ್ಲಿ ಸಾಕಷ್ಟು ಆಸಕ್ತಿ ಇತ್ತು, ಇಲ್ಲಿ ಒಮ್ಮೆ ಬಂದು ಇಲ್ಲಿಯ ಜನ, ಸಮಾಜ, ವಾರಣಾಸಿ, ಮುಂಬೈನಂತ ನಗರಗಳು ಎಲ್ಲವನ್ನು ನೋಡುವ ಕುತೂಹಲವಿತ್ತು, ಅದನ್ನು ಅವರೆ ನನಗೆ ತಿಳಿಸಿದ್ದರು, ಅವರು ಭಾರತಕ್ಕೆ ಬರುವದಾದಲ್ಲಿ ನಾನು ಅವರನ್ನು ಸ್ವಾಗತಿಸಲು ಸಿದ್ದನಿದ್ದೆ.

ಒಮ್ಮೆ ನನಗೆ ಅವರಿಂದ ಮೆಸೇಜ್ ಬಂದಿತು, ಏನೆಂದು ತೆಗೆದು ಓದುವಲ್ಲಿ ಅವರಿಬ್ಬರು ಬಾರತದ ಬೇಟಿಗೆ ಬಂದಿರುವರೆಂದು ಸದ್ಯಕ್ಕೆ ಮುಂಬಯಿ ನಗರದಲ್ಲಿ ಇರುವರೆಂದು ತಿಳಿಸಿದ್ದರು. ಅವರು ಮೂರು ನಾಲಕ್ಕು ದಿನ ಉತ್ತರ ಭಾರತ ವಾರಣಾಸಿ ಎಲ್ಲ ಕಡೆ ಹೋಗಿ ಪುನಃ ಮುಂಬಯಿಗೆ ಹಿಂದಿರುಗುವರೆಂದು ತಿಳಿಸಿದ್ದರು. ಅಲ್ಲದೆ  ನನ್ನನ್ನು ಬೆಂಗಳೂರಿನಿಂದ ಮುಂಬಯಿಗೆ ಬಂದು ಬೇಟಿ ಮಾಡಲು ಸಾದ್ಯವೆ ಎಂದು ಕೇಳಿದ್ದರು. ನನಗೆ ಸಂತಸವೆನಿಸಿತು. ಮೈಲ್ ನಲ್ಲಿ ಅವರ ಪೋನ್ ನಂಬರ್ ಕೊಟ್ಟು ಒಮ್ಮೆ ಮಾತನಾಡಲು ಕೋರಿದ್ದರು. ಎರಡು ವರ್ಷಗಳ ನಂತರ  ಈಮೈಲ್ ಬಿಟ್ಟು ಪ್ರಥಮ ಬಾರಿಗೆ ಅವರೊಂದಿಗೆ ನೇರವಾಗಿ ಮಾತನಾಡುವ ಸಂದರ್ಭ ಬಂದಿದ್ದು ನನಗಂತು ಕೊಂಚ ಕುತೂಹಲ, ಸ್ವಲ್ಪ ಗಡಿಬಿಡಿ. ಅಥವ ಟೆನ್ಶನ್ ಅಂದುಬಿಡಿ ಎಲ್ಲವು ಇತ್ತು. ನಾನೊಂದು ಮೆಸೇಜ್ ಕಳಿಸಿದೆ ಈಮೈಲ್ ನಲ್ಲಿ ಸಂಜೆ ಆರುಗಂಟೆಗೆ ಕಾಲ್ ಮಾಡುತ್ತಿದ್ದೇನೆ ಅಂತ ತಿಳಿಸಿ ನನ್ನ ನಂಬರ್ ಕೊಟ್ಟೆ.

ಸಂಜೆ ಎಲ್ಲ ಗಡಿಬಿಡಿ ಮುಗಿಸಿ, ಸ್ವಲ್ಪ ವಿರಾಮವಾಗೆ ಕುಳಿತು ಅವರ ನಂಬರ್ ಡಯಲ್ ಮಾಡಿದೆ, ಅತ್ತ ರಿಂಗ್ ಆಗುತ್ತಿರುವ ಶಬ್ದ, ಓಹ್ ರಿಸೀವ್ ಮಾಡಿದರು
"ಹಾಯ್, ಸಾರಥಿ ನ"  ಅತ್ತಲಿಂದ ದ್ವನಿ, ನನ್ನನ್ನು ಸದಾ ಅವರು ಹಾಗೆ ಅಡ್ರೆಸ್ ಮಾಡುತ್ತಿದ್ದರು, ನಾನು ಸಂಭ್ರಮದಿಂದ
"ಹೌದು, ನಾನೆ , ನಾನು ಈಗ ಯಾರ ಜೊತೆ ಮಾತನಾಡುತ್ತಿರುವೆ" ಎಂದು ಕೇಳಿದೆ, ಅಸಲಿಗೆ ಅದು ಅವರಿಬ್ಬರಲ್ಲಿ ಆಂಡ್ರಿಯ ಅಥವ ಆಂಜಲೀನ ಯಾರ ನಂಬರ್ ಎಂದು ನನಗೆ ತಿಳಿದಿರಲಿಲ್ಲ.
ಅತ್ತಲಿಂದ ಸ್ವಲ್ಪ ನಗು, ಮಧುರವಾದ ದ್ವನಿ
"ನಿಮಗೆ ಯಾರ ಜೊತೆ ಮಾತನಾಡಲು ಆದೀತು, ನಾನು ಅಂಜಾಲೀನ" ಎಂದಳು ಆಕೆ, ಈಗ ನಿಜವಾದ ತೊಂದರೆ ನನಗೆ ಪ್ರಾರಂಬವಾಗಿತ್ತು, ಅದೆಂದರೆ ಆಕೆ ಅಂಗ್ಲದಲ್ಲಿ ಮಾತನಾಡುತ್ತಿದ್ದರು, ನನಗೆ ಅಂಗ್ಲ ಬಾಷೆ ಗೊತ್ತು ಅದರಲ್ಲಿ ಪ್ರೊಫೆಷನಲ್ ಅಲ್ಲದಿದ್ದರು, ಮಾತನಾಡಬಲ್ಲೆ, ಆದರೆ ಅವರ ಅಂಗ್ಲ ಮಾತನಾಡುವ ಅಮೇರಿಕದ ಶೈಲಿ ನನಗೆ ತೊಂದರೆ ಕೊಡುತ್ತಿತ್ತು, ಆಕೆ ನನಗಾಗಿ ನಿದಾನಕ್ಕೆ ಮಾತನಾಡುತ್ತಿರುವಂತೆ ಅನ್ನಿಸಿತು.
"ಓಹ್, ನಿಜವಾಗಿ, ಆಂಜಲೀನ ನಿಮ್ಮ ಜೊತೆ ಮಾತನಾಡುವುದು ನನಗೆ ಖುಷಿ ಕೊಡುತ್ತಿದೆ, ನೀವು ಯಾವಾಗ ಭಾರತಕ್ಕೆ ಬಂದಿರಿ, ಎಲ್ಲಿ ಇದ್ದೀರಿ, ನಿಮ್ಮ ಕಾರ್ಯಕ್ರಮವೇನು" ಎಂದು ಕೇಳಿದೆ.
 ಬಂದು, ಸರಿ ಸುಮಾರು ಎರಡು ದಿನವಾಯಿತು, ಅಪ್ಪ ಜೊತೆಯಲ್ಲಿದ್ದಾರೆ, ಹಾಗು ಮುಂಬಯಿಯ ಏರ್ ಪೋರ್ಟ್ ಹತ್ತಿರದ, ಲಲಿತ್ ಇಂಟರ್ನ್ಯಾಷನಲ್ ಕಾಂಟಿನೆಂಟಲ್ ಹೋಟೆಲಿನಲ್ಲಿ ಇರುವದಾಗಿ ತಿಳಿಸಿದ ಅಂಜಲೀನ ಮೊದಲೆ ತಿಳಿಸಿದಂತೆ ವಾರಣಾಸಿಗೆ ಎರಡು ದಿನ ಹೋಗಿಬರುವದಾಗಿ ಹೇಳಿ, ನೀವು ಮುಂಬಯಿಗೆ ಬರಲು ಸಾದ್ಯವೆ, ಅಲ್ಲಿಂದ ಬೆಂಗಳೂರು ಎಷ್ಟು ದೂರದಲ್ಲಿದೆ ಮುಂತಾದ ವಿಷಯ ಕೇಳಿದರು.

ನಾನು ಬೆಂಗಳೂರು, ಮುಂಬಯಿ ನಡುವಿನ ದೂರ ಸುಮಾರು ಎಂಟುನೂರಾಐವತ್ತು ಕಿ.ಮಿ. ಆಗಬಹುದೆಂದು , ರೈಲಿನಲ್ಲಿಯಾದರೆ ಒಂದುದಿನ ತಗಲಬಹುದೆಂದೆ, ತಿಳಿಸಿ, ಅವರನ್ನು ಬೆಂಗಳೂರಿಗೆ ಅಹ್ವಾನಿಸಿದೆ.
ಅತ್ತಲಿಂದ ಸ್ವಲ್ಪ ಮೌನ. ಆಕೆ ಮತ್ತೆ ತಿಳಿಸಿದರು
'ಹೌದು ಅದೆಂತ ಸುಂದರ ಗಳಿಗೆ ನಿಮ್ಮಲಿಗೆ ಬರುವುದು, ಆದರೆ ಈಗ ಇರುವ ಪರಿಸ್ಥಿಥಿಯಲ್ಲಿ, ನಾವು ಬೆಂಗಳೂರಿಗೆ ಬರುವ ಸಾದ್ಯತೆ ಇಲ್ಲ. ಆದರೆ ನಿಮ್ಮನ್ನು ನೋಡುವ ಆಸೆ ಬಲವಾಗಿದೆ,  ಆಂಡ್ರಿ ಕೂಡ ನಿಮ್ಮನ್ನು ನೋಡಬೇಕೆಂದು ಹಾತೊರೆದಿದ್ದಾಳೆ,  ತೊಂದರೆ ಅನಿಸಿದರು ಪರವಾಗಿಲ್ಲ, ಒಮ್ಮೆ ಮುಂಬಯಿಗೆ ಬನ್ನಿ'  ಎಂದು ಅಹ್ವಾನಿಸಿದಳು.

ನಾನು ಸ್ವಲ್ಪ ಯೋಚಿಸಿ "ಸರಿ ಆಂಜಲಿನ ನನಗಂತು ನಿಮ್ಮನ್ನು ಬೇಟಿಮಾಡುವ ಕುತೂಹಲ, ಉತ್ಸಾಹ ಖಂಡೀತ ಇದೆ, ನೀವು ಬರಲು ಸಾದ್ಯವಿಲ್ಲ ಎಂದಾದರೆ ನಾನೆ ಅಲ್ಲಿಗೆ ಬಂದು ನಿಮ್ಮನ್ನು ಬೇಟಿ ಮಾಡುವೆ, ನೀವು ವಾರಣಾಸಿಯ ಬೇಟಿ ಮುಗಿಸಿ ಬರುವದರಲ್ಲಿ ನಾನು ಇಲ್ಲಿಂದ ಹೊರಟು ಮುಂಬಯಿಗೆ ಬಂದು ಸೇರುವೆ, ಅಲ್ಲಿಗೆ ಬಂದ ನಂತರ ಕಾಲ್ ಮಾಡಿ ಬೇಟಿ ಗೊತ್ತು ಪಡಿಸಿ ನಿಮ್ಮನ್ನು ಸೇರುವೆ" ಎಂದು ತಿಳಿಸಿದೆ. ನನಗೆ ಗೊತ್ತಿತ್ತು ಅಮೇರಿಕನ್ನರ ಸ್ವಭಾವ ಮೊದಲೆ ನಿಗದಿಪಡಿಸಿದ ಕಾರ್ಯಕ್ರಮದಲ್ಲಿಯಷ್ಟೆ ಅವರು ಮತ್ತೊಬ್ಬರನ್ನು ಬೇಟಿ ಮಾಡಲು ಇಷ್ಟ ಪಡುತ್ತಾರೆ, ಭಾರತದಲ್ಲಿಯಂತೆ ಬೇಕಾಬಿಟ್ಟಿ ನುಗ್ಗುವ ಹಾಗಿಲ್ಲ ಎಂದು.

ಒಂದೆ ಕ್ಷಣ ಅತ್ತಲಿಂದ ಮೌನ . ಆಕೆ
"ಇಲ್ಲ ನಾನು ಆ ಅರ್ಥದಲ್ಲಿ ಹೇಳಲಿಲ್ಲ, ನೀವು ಯಾವುದೆ ಬೇಟಿ ನಿಗದಿಪಡಿಸದೆ ಯಾವುದೆ ಕ್ಷಣದಲ್ಲಿ ನಮ್ಮಲಿಗೆ ಬರಬಹುದು, ಇನ್ ಫ್ಯಾಕ್ಟ್, ನೀವು ಎರಡು ದಿನ ನಮ್ಮ ಜೊತೆಗೆ ಇದ್ದರೆ ನಮಗೆ ಸಂತಸ , ನಾವು ಸಾಕಷ್ಟು ವಿಷಯ ಹಂಚಿಕೊಳ್ಳ ಬಹುದು " ಎಂದರು. ಮತ್ತೆ ಅದೆಂತದೊ ಮೌನ, ಆಕೆಯ ಮಾತು ಸ್ವಲ್ಪ ತಡವರಿಸಿತ್ತು,
"ಮತ್ತೆ ನೀವು ಒಬ್ಬರೆ ಬನ್ನಿ ಅಂತ ನಮ್ಮ ರಿಕ್ವೆಶ್ಟ್ , ನಿಮ್ಮನ್ನು ಹೊರತುಪಡಿಸಿ ಬೇರೆ ಯಾರು ಬೇಡ,  ಇಲ್ಲಿ ಬಂದಾಗ ನಮ್ಮ ಬೇಟಿ ನಿಮಗೆ ಸ್ವಲ್ಪ ಶಾಕಿಂಗ್ ಆಗಬಹುದು ಎಂದು ನಮಗೆ ಅನಿಸುತ್ತಿದೆ ಅದಕ್ಕಾಗಿ ಹೇಳುತ್ತಿರುವೆ ಅನ್ಯಥಾ ಭಾವಿಸದಿರಿ" ಎಂದಳು, ನನಗೆ ಮನ ಸ್ವಲ್ಪ ಸಪ್ಪೆಯಾಯಿತು. ನನಗೇನು ಹೆಂಡತಿ ಮಗಳನ್ನು ಜೊತೆಗೆ ಕರೆದೊಯ್ಯುವ ಅಲೋಚನೆ ಇರಲಿಲ್ಲ ಆದರೂ ಆಕೆ ಹಾಗೆಂದಾಗ ಸ್ವಲ್ಪ ಪಿಚ್ ಅನ್ನಿಸಿತು. ಅಲ್ಲದೆ ಆಕೆ ಅದೇನೊ ಹೇಳುತ್ತಿದ್ದಾರಲ್ಲ ಅದೆಂತದೊ ಶಾಕಿಂಗ್ ಆಗಿರಬಹುದೆಂದು.  ಸಮಾದಾನವಾಗಿಯೆ ಕೇಳಿದೆ
"ಸರಿ, ನಾನು ಒಬ್ಬನೆ ಬರುವೆ ಚಿಂತೆಯಿಲ್ಲ, ಮತ್ತೆ ಆಂಡ್ರಿ ಹೇಗಿದ್ದಾರೆ, ಅವರೊಡನೆ ಒಂದೆರಡು ಮಾತನಾಡಬಹುದಾ?" ಆಕೆ ನಕ್ಕರು
"ಏಕಿಲ್ಲ, ಆಕೆಯು ಕಾಯುತ್ತಿದ್ದಾಳೆ, ಮತ್ತೆ ನಿಮ್ಮ ನೋಡುವೆ, ಅವಳೊಡನೆ ಮಾತನಾಡಿ " ಎನ್ನುತ್ತ ಪೋನ್ ಆಕೆಗೆ ಕೊಟ್ಟರು ಅನ್ನಿಸುತ್ತೆ, ಆಕೆ ಪಕ್ಕದಲ್ಲಿಯೆ ಇದ್ದರೇನೊ, ಕಾಯುತ್ತಿರುವಂತೆ
"ಹಾಯ್, ನಾನು ಆಂಡ್ರಿಯ, ಹೇಗಿದ್ದೀರಿ " ಎನ್ನುತ್ತ ಮಾತು ಆರಂಬಿಸಿದರು, ಸ್ವಲ್ಪವು ಹೆಚ್ಚು ಕಡಿಮೆ ಎನಿಸದಂತೆ ಒಂದೆ ದ್ವನಿ ಆದರೆ ಮಾತಿನ ಶೈಲಿ ಮಾತ್ರ ಸ್ವಲ್ಪ ಬೇರೆ. ಅವರೊಡನೆ ಸ್ವಲ್ಪ ಮಾತನಾಡಿದೆ,  ಅವರೊಡೆನೆ ಸಹ ಮುಂಬಯಿಗೆ ಬರುತ್ತಿರುವದಾಗಿ ತಿಳಿಸಿ ಮಾತು ಮುಗಿಸಿದೆ.

 ನಾನು ಒಮ್ಮೆಲೆ ಮುಂಬಯಿಗೆ ಹೊರಟು ನಿಂತಾಗ ಮನೆಯಲ್ಲು ಎಲ್ಲರಿಗು ಆಶ್ಚರ್ಯ. ಇದೇನು ಇಷ್ಟು ಆತುರವಾಗಿ ನಿರ್ದಾರ ಅಂತ, ಅಲ್ಲದೆ ಮುಂಬಯಿಯಲ್ಲಿ ನನಗೆ ಪರಿಚಯದವರು ಅಂತ ಯಾರು ಇಲ್ಲ. ಯಾರೊ ದೂರದೇಶದ ಅಪರಿಚಿರತನ್ನು ನೋಡಲು ಹೊರಟಿದ್ದು ಮನೆಯವರು ಸಹ ಸ್ವಲ್ಪ  ಯೋಚಿಸಲು ಕಾರಣವಾಗಿತ್ತು. ನಾನು ಆ ರೀತಿ ಗಾಭರಿಗೆ ಕಾರಣ ಏನು ಇಲ್ಲ ಅಂತ ತಿಳಿಸಿ ಹೊರಟುಬಿಟ್ಟೆ. ಮೊದಲೆ ಬುಕ್ ಮಾಡಿಸದಿದ್ದರು ಸಹ ಒಬ್ಬ ಏಜೆಂಟ್   ಹಿಡಿದು ರೈಲಿನಲ್ಲಿ ಬರ್ತ್ ಟಿಕೆಟ್ ಹೊಂದಿಸಿದ್ದಾಯಿತು. ಬೆಂಗಳೂರಿನಿಂದ ಮುಂಬಯಿಗೆ ಹೋಗುವ ಕುರ್ಲಾ ಗಾಡಿಯ ಟೂ ಟೈರ್ ಏಸಿ ಬರ್ತ್ . ಮೊದಲ ಸಾರಿ ಮುಂಬಯಿಯ ಪ್ರಯಾಣ ಎಲ್ಲರು ಹೇಳುವರು ಅಲ್ಲಿಯ ಟ್ರಾಫಿಕ್ ಬಗ್ಗೆ , ಮುಂಬಯಿ ರೈಲಿನ ಬಗ್ಗೆ, ರಸ್ತೆಗಳ ಬಗ್ಗೆ ಕೊಳಗೇರಿಗಳ ಬಗ್ಗೆ , ಆದರೆ ಸದ್ಯಕ್ಕೆ ನನಗೆ ಆ ಯಾವುದರಲ್ಲು ಆಸಕ್ತಿ ಇರಲಿಲ್ಲ, ಆಸಕ್ತರೊಬ್ಬರ ಬೇಟಿಗಾಗಿ ಅಲ್ಲಿಗೆ ಹೊರಟಿದ್ದೆ. ನಾನು ಅಲ್ಲಿ ತಲುಪುವ ವೇಳೆ ಅವರ ವಾರಣಾಸಿ ಟ್ರಿಪ್ ಸಹ ಮುಗಿದಿರುತ್ತೆ ಅನ್ನಿಸಿತು.. ಅಲ್ಲಿಗೆ ತಲುಪಿ, ರೈಲ್ವೆ ನಿಲ್ದಾಣದ ಹತ್ತಿರ ಹೋಟೆಲ್ ಒಂದರಲ್ಲಿ ರೂಮನ್ನು ಪಡೆದೆ. ಎಲ್ಲ ಹೊಸ ಅನುಭವ. ಬೆಂಗಳೂರಿನಲ್ಲಿ  ಹೊರಡುವ ಮೊದಲೆ ಕೆಲವು ಗೆಳೆಯರ ಬಳಿ ಮುಂಬಯಿಯ ಬಗ್ಗೆ ವಿಚಾರಿಸಿದೆ, ಎಲ್ಲಿ ಇಳಿಯ ಬಹುದು, ಹೇಗೆ ತಲುಪುವುದು, ಅಲ್ಲಿಯ ಓಡಾಟ ಹೀಗೆಲ್ಲ, ಗೊತ್ತಿದ್ದವರ ಬಳಿ. ಹಾಗಾಗಿ ತೊಂದರೆ ಅನ್ನಿಸಲಿಲ್ಲ. ಸ್ನಾನ ವಿಶ್ರಾಂತಿಗಳು ಆದವು ಆಗಲೆ ರಾತ್ರಿಯು ಆದ್ದರಿಂದ ಆಗಲೆ ಹೊರಡುವ ಯೋಚನೆ ಕೈಬಿಟ್ಟು ಬೆಳಗ್ಗೆ  ಹೊರಟು ಅವರಿರುವ ಸ್ಥಳ ಸೇರಿವುದಾಗಿ ನಿರ್ದರಿಸಿ, ಅವರು ಕೊಟ್ಟಿದ್ದ  ನಂಬರ್ ಗೆ ಕಾಲ್ ಮಾಡಿದೆ.
ಯಥಾಪ್ರಕಾರ ಅಂಜಾಲಿನ ರಿಸೀವ್ ಮಾಡಿದರು . ನಾನು ಮುಂಬಯಿಗೆ ಬಂದಿರುವದನ್ನು ತಿಳಿಸಿ. ನಾನು ಇಳಿದಿರುವ ಸ್ಥಳದ ಬಗ್ಗೆ ತಿಳಿಸಿ. ಬರುದಿನ ಬೆಳಗ್ಗೆ ಬರುವದಾಗಿ ಹೇಳಿದೆ. ಆಕೆ ಸಂಬ್ರಮ ಪಟ್ಟರು
'ಬೆಳಗೆ ಏಕೆ ಈಗಲೆ  ಬರಬಹುದಾಗಿತ್ತು ' ಎಂದ ಆಕೆ , ಒಂದು ಸಲಹೆ ಕೊಟ್ಟರು. ಮರುದಿನ ಬೆಳಗ್ಗೆ ಹೊರಡುವಾಗ, ನಾನು ಇಳಿದ ಹೋಟೆಲ್ ರೂಮನ್ನು ಖಾಲಿ ಮಾಡಿ ಬರಬೇಕೆಂದು, ನನಗಾಗಿ ಅವರು ಇಳಿದಿರುವ ಹೋಟೆಲ್ ನಲ್ಲಿಯೆ ಒಂದು ರೂಮನ್ನು ರಿಸರ್ವ್ ಮಾಡಿರುವದಾಗಿ ತಿಳಿಸಿ, ನಾನು ಅವರ ಅತಿಥಿ ಎಂದರು. ನಾನೆಂದೆ
"ಇದೇನು, ನಮ್ಮ ದೇಶಕ್ಕೆ ಬಂದ ನೀವು ನನಗೆ ಅತಿಥಿಯಾಗಬೇಕು, ನಾನು ನಿಮಗೆ ಅತಿಥಿಯಾಗುವುದೆ" ಎಂದು ಸಂಕೋಚಪಟ್ಟಾಗ ಅವರು
"ಹಾಗೇನು ಇಲ್ಲ, ನೀವು ಎರಡು ದಿನ ನಮ್ಮ ಜೊತೆ ಇರಬೇಕು ಎಂದು ನಮ್ಮ ಬಯಕೆ, ಅಪ್ಪ ಸಹ ಹಾಗೆ ಹೇಳಿದರು, ಹಾಗಾಗಿ ಈ ಏರ್ಪಾಡು, ನೀವು ನಮಗಾಗಿ ನಿಮ್ಮ ಸ್ಥಳದಿಂದ ಇಷ್ಟು ದೂರ ಬಂದಿದ್ದೀರಿ, ಅದೇ ನಮಗೆ ಗೌರವ " ಎಂದರು.
ಸರಿ ಬೇರೆ ದಾರಿ ಇರಲಿಲ್ಲ,  ನಾನು ಒಪ್ಪಲೆ ಬೇಕಿತ್ತು, ಬೆಳಗ್ಗೆ ನನ್ನ ರೂಮನ್ನು ಖಾಲಿಮಾಡಿ. ಅಲ್ಲಿಂದ ಹೊರಟೆ. ನನಗೆ ಈ ಸ್ಟಾರ್ ಹೊಟೆಲ್ ಗಳು ಅಂದರೆ ಒಂದು ಮುಜುಗರ, ನಮ್ಮ ನಡೆನುಡಿಗಳಿಗೆ ಒಗ್ಗದ ಸ್ಥಳ ಎನ್ನುವ ಭಾವನೆ ಅಥವ ಕೀಳಿರಿಮೆ ಎಂದು ಬೇಕಾದರು ಅನ್ನಿ.  ಅವರಿವರ ಸಹಾಯ ಪಡೆದು , ಅವರು ಇಳಿದಿದ್ದ ಲಲಿತ್ ಕಾಂಟಿನೆಂಟಲ್ ಎಂಬ ಹೋಟೆಲ್ ತಲುಪುವಾಗ ಸಾಕಷ್ಟು ಸಾಹಸವಾಗಿತ್ತು. ಒಂದರ ಹಿಂದೊಂದು ಕಾರುಗಳು ಒಳ ಪ್ರವೇಶ ಮಾಡುತ್ತಿದ್ದವು. ನಾನು ಕೈಯಲ್ಲಿ ಸೂಟ್ ಕೇಸ್ ಹಿಡಿದು , ನಡೆಯುತ್ತ ಪ್ರವೇಶ ಮಾಡುವಾಗ ಸಹಜವಾಗಿ ಅಲ್ಲಿಯ ಗೇಟನಲ್ಲಿ ವಾಚ್ಮನ್ ಸಾಕಷ್ಟು ಸತಾಯಿಸಿದ. ಅದೇನೊ ಈ ವಾಚ್ ಮನ್ ಗಳು ಇವರು ಇರುವುದೆ ಕೆಲವೊಮ್ಮೆ ಗುಡಿಸಲುಗಳಲ್ಲಿ ಆದರೆ ನಡೆದು ಬರುವವರನ್ನು ಅನುಮಾನದಿಂದ ನೋಡುವ ಇವರು, ಕಾರಿನಲ್ಲಿ ಬರುವರನ್ನು ಸಲ್ಯೂಟ್ ಹೊಡೆಯುತ್ತ ಕಳಿಸುತ್ತಾರೆ. ಮೊದಲೆ ಯೋಚಿಸಿದ್ದರೆ ಟ್ಯಾಕ್ಸಿ ಮಾಡಿ ಬರಬಹುದಿತ್ತು.  ನನಗೆ ಗೊತ್ತಿದ್ದ ಅರ್ಥ ಹಿಂದಿ , ಮುಕ್ಕಾಲು ಅಂಗ್ಲದಲ್ಲಿ ಅವನನ್ನು ಒಪ್ಪಿಸಿ ಒಳಬಂದು ರಿಸಿಪ್ಷನ್ ಕಾಣುವಾಗ ಸುಸ್ತಾಗಿತ್ತು. ಅಲ್ಲಿ ನನಗೆ ಗೊತ್ತಿದ್ದ ವಿವರ ತಿಳಿಸಿದೆ. ಆಕೆ ನಗುತ್ತ ಫೋನ್ ತೆಗೆದು ಇಂಟರ್ ಕಾಂ ನಲ್ಲಿ  ಆಂಡ್ರಿಯಾ ಹಾಗು ಅಂಜಲೀನ ಇಳಿದಿದ್ದ  ಕೋಣೆಗೆ ಕಾಲ್ ಮಾಡಿದರು, ಒಂದು ಕ್ಷಣ ನನ್ನ ತ್ತ ನೋಡಿ, ಲಾಂಚ್ ನಲ್ಲಿದ್ದ ಸೋಪ ತೋರಿಸುತ್ತ,
"ಒಂದೆರಡು ನಿಮಿಶವಾಗಬಹುದು ಅವರೆ ಬರುತ್ತಿದ್ದಾರೆ ಕೆಳಗೆ, ದಯಾಮಾಡಿ ಕುಳಿತು ಕಾಯಿರಿ" ಎಂದಳು.

ನಾನು ಸರಿ ಎನ್ನುತ್ತ ಕುಳಿತೆ. ಮನದಲ್ಲಿ ಎಂತದೊ ಎಕ್ಸೈಟ್ ಮೆಂಟೆ ಹೇಗಿರಬಹುದು ಅವರಿಬ್ಬರು, ದ್ವನಿ ನೋಡುವಾಗ ತುಂಬಾ ವಯಸ್ಸಾದವರಂತೆ ಅನ್ನಿಸುವದಿಲ್ಲ. ಆದರೆ ಸರಿಯಾಗೆ ಅಳೆಯುವುದು ಕಷ್ಟ, ಸರಿ ವಿಪರೀತ ಕುತೂಹಲ ಏಕೆ, ಒಂದೆರಡು ಕ್ಷಣದಲ್ಲಿ ಅವರೆ ಕೆಳಗೆ ಬರುವರು ಎಂದು, ಲಿಫ್ಟ್ ಹಾಗು ಮೆಟ್ಟಿಲುಗಳನ್ನು ಗಮನಿಸುತ್ತ, ಬರಬಹುದಾದ ವಿದೇಶಿ  ಸ್ತ್ರೀಯರನ್ನು ಕಾಯುತ್ತ ಕುಳಿತೆ.

ನನ್ನ ನಿರೀಕ್ಷೆ ಸುಳ್ಳಾಯಿತು. ಸ್ವಲ್ಪ ಸಮಯದಲ್ಲಿಯೆ, ಸೂಟ್ ಧರಿಸಿದ್ದ,  ನಡುವಯಸ್ಸು ದಾಟಿದ್ದ.ಅಮೇರಿಕಾದ ಅಚ್ಚ ಕೆಂಪನೆಯ ವ್ಯಕ್ತಿಯೊಬ್ಬರು ನನ್ನ ಬಳಿ ಬಂದು ನಿಂತರು, ನಿಧಾನಕ್ಕೆ
"ಮಿ.ಪಾರ್ಥಸಾರಥಿ..." ಎನ್ನುವಾಗ, ನಾನು ನಿಂತು , ಹೌದು ಎನ್ನುತ್ತ ಪರಿಚಯಿಸಿಕೊಂಡೆ. ನನ್ನ ಇಂಗ್ಲೀಷ್ ಅವರಿಗೆ ಕೊಂಚ ಗಲಿಬಿಲಿಯೆ ಹಾಗೆ ನನಗು ಸಹ ಅವರ ಉಚ್ಚಾರಣೆ. ಅವರು ಬನ್ನಿ ಮೇಲೆ ರೂಮಿಗೆ ಹೋಗೋಣ ಎನ್ನುತ್ತ ಹೊರಟರು. ನಾನು ನಿರಾಸೆಯಿಂದ ಅವರ ಹಿಂದೆ ಹೊರಟೆ,
ತಮ್ಮನ್ನು ಪರಿಚಯಿಸಿಕೊಳ್ಳುತ್ತ ಅವರು ಹೇಳಿದರು, ಅವರು ಆಂಜಾಲೀನ, ಹಾಗು ಆಂಡ್ರಿಯ ತಂದೆ ಎಂದು. ಹೆಸರು 'ರಾಬರ್ಟ್ ಅನ್ಸಾಲಿ '.  ಅನ್ಸಾಲಿ ಇವರ ಪ್ಯಾಮಿಲಿ ಹೆಸರು ಅನ್ನಿಸುತ್ತೆ.  ಈತನ ವಯಸ್ಸು ನಲವತೈದು ದಾಟಿಲ್ಲ.ಅಂದರೆ ಅವರಿಬ್ಬರ ವಯಸ್ಸು, ಇಪ್ಪತೈದು ಮೂವತ್ತು ಇರಬಹುದು. ಅವರಿಬ್ಬರ ನಡುವಿನ ವಯಸ್ಸಿನ ಅಂತರವು ತಿಳಿದಿಲ್ಲ. ಸರಿ ಏಕೆ ಅನಗತ್ಯ ಕುತೂಹಲ   , ಹೇಗು ಬೇಟಿ ಮಾಡುತ್ತಿದ್ದೀನಲ್ಲ ಎಂದು ಸುಮ್ಮನಾದೆ.
ಲಿಫ್ಟ್ನಲ್ಲಿ ನಾಲ್ಕನೆಯ ಫ್ಲೋರ್ ತಲುಪಿದ್ದಾಯಿತು, ಅಲ್ಲಿ ಹೊರಗೆ ಬಂದು ಅವರ ಹಿಂದೆ ನಡೆದಂತೆ, ಒಂದು ರೂಮಿನ ಮುಂದು ನಿಂತು, ಕೀ ಬಳಸಿ ರೂಮಿನ ಬಾಗಿಲು ತೆರೆದರು, ಇದೇನು ರೂಮಿನ ಬೀಗ ಹೊರಗಿನಿಂದ ಹಾಕಲಾಗಿದೆ, ತನ್ನ ಮಕ್ಕಳಿಬ್ಬರನ್ನು ಒಳಗೆ ಬಿಟ್ಟು ಬೀಗ ಏಕೆ ಹಾಕಿ ಬಂದಿರುವ ಈತ ಎಂದು ಯೋಚಿಸುತ್ತ, ಅವನ ಹಿಂದೆ ಒಳಗೆ ನಡೆದು ಸುತ್ತ ನೋಡಿದೆ, ಎಲ್ಲಿ ಕುಳಿತ್ತಿದ್ದಾರೆ, ಅಂಜಾಲಿನ, ಹಾಗು ಆಂಡ್ರಿಯಾ ಎಂದು ಚಿಂತಿಸುತ್ತ.
ಆತ ನುಡಿದರು
"ಇದು ನಿಮಗಾಗಿ ರಿಸರ್ವ್ ಆದ ಕೋಣೆ, ನೀವು ನಿಮ್ಮ ಬ್ಯಾಗೇಜ್ ಇಲ್ಲಿ ಇಡಿ ಬಟ್ಟೆ ಬದಲಾಯಿಸುವದಾದರೆ ನೋಡಿ, ಮತ್ತೆ ಫ್ರೇಶ್ ಆಗಿ, ಕುಡಿಯಲು ಏನಾನ್ನಾದರು ತರಿಸುವೆ ನಿಮ್ಮ ಆಯ್ಕೆ ಏನು" ಎಂದು ಕೇಳಿದರು.
ನನಗೀಗ ಅರ್ಥವಾಯ್ತು, ಅವರು ಕರೆತಂದಿದ್ದು ನನಗೆ ಮೀಸಲಾದ ಕೊಟ್ಟಡಿಗೆ, ಎಂದು. ಸರಿ ಎನ್ನುತ್ತ ಪೆದ್ದುಪೆದ್ದಾಗಿ ನನ್ನ ಬ್ಯಾಗೇಜ್ ಕೆಳಗಿಟ್ಟು. ಅವರನ್ನು ಕುಳಿತುಕೊಳ್ಳಿ ಎಂದು ತಿಳಿಸಿ, ನಾನು ಸಿದ್ದನಾದೆ, ಮತ್ತೆ ತಿಳಿಸಿದೆ ಈಗ ಏನು ಬೇಡ, ನಿಮ್ಮ ಮಕ್ಕಳ ಜೊತೆಗೆ ಕುಡಿಯಲು ಕಾಫಿ ತೆಗೆದುಕೊಳ್ಳುವೆ, ಈಗ ನಿಮಗೆ ತೊಂದರೆ ಇರದಿದ್ದಲ್ಲಿ, ಅವರನ್ನು ಬೇಟಿ ಮಾಡಲು ಹೋಗೋಣ ಎಂದು.

ಆತ ನಗುತ್ತ ಎದ್ದು ನಿಂತು, ಸರಿ ನಿಮಗೂ ಅವರನ್ನು ಬೇಟಿ ಮಾಡಲು ಕಾತುರ ಅನ್ನಿಸುತ್ತೆ ದೂರವೇನು ಇಲ್ಲ , ನಿಮ್ಮ ರೂಮಿನ ಎದುರಿನ ರೂಮೆ ಇದೆ, ಎನ್ನುತ್ತ ಹೊರಟರು, ನಾನು ಹೊರಗೆ ಬಂದಂತೆ ಆತ ರೂಮನ್ನು ಲಾಕ್ ಮಾಡಿ ಕೀ ನನ್ನ ಕೈಗೆ ಕೊಟ್ಟು ಇದು ನಿಮ್ಮಲ್ಲಿಯೆ ಇರಲಿ ಎನ್ನುತ್ತ, ನನ್ನ ರೂಮಿನ ಎದುರಿಗೆ ಇದ್ದ ಮತ್ತೊಂದು ರೂಮಿನ ಬಾಗಿಲು ತೆರೆಯುತ್ತ ಹೇಳಿದರು.

"ಒಳಹೋಗುವ ಮುಂಚೆಯೆ ನಿಮಗೆ ತಿಳಿಸಿದರೆ ಒಳ್ಳೆಯದು ಅನ್ನಿಸುತ್ತೆ, ಅವರಿಬ್ಬರನ್ನು ನೋಡುವಾಗ ನಿಮಗೆ ಗಲಿಬಿಲಿ ಅನ್ನಿಸಬಹುದು ಆದರೆ ಮುಖದಲ್ಲಿ ಯಾವುದೆ ಭಾವನೆ ತೋರಿಸಬೇಡಿ ಸಹಜವಾಗಿರಿ,  ಜಷ್ಟ್ ರಿಕ್ವೆಷ್ಟ್ ಅಷ್ಟೆ" ಎಂದರು. ನಾನು ಸ್ವಲ್ಪ ಆಶ್ಚರ್ಯ ಪಟ್ಟೆ, ಇದನ್ನು ನಾನು ನಿರೀಕ್ಷಿಸಿರಲಿಲ್ಲ.
ಒಳಗೆ ಹೋದವನು ಅಲ್ಲಿಯ ಮಂದ ಬೆಳಕಿಗೆ ಸುಲುಭವಾಗಿ ಹೊಂದಿಕೊಂಡೆ. ಸ್ವಲ್ಪ ಆಸಕ್ತಿ ಯಿಂದಲೆ ಕಣ್ಣಾಡಿಸಿದೆ ಸುತ್ತಲು, ಆಕರ್ಷಕ ಇಂಟೆರಿಯರ್ ಇರುವ ರೂಮದು. ವಿಶಾಲವಾದ ಕಿಟಕಿಯಿಂದ ಸಾಕಷ್ಟು ಬೆಳಕು ಬರುತ್ತಿತ್ತು. ತಂಪಾದ ಗಾಳಿ ಎಲ್ಲವು ಸುಖಕರ. ಕಿಟಕಿಯ ಹತ್ತಿರದ ಸೋಫದಲ್ಲಿ ಕುಳಿತಿದ್ದ  ಆಕೆಯತ್ತ ನಾವು ನಡೆದವು, ಆಕೆ ಇತ್ತ ತಿರುಗಿ ನಮ್ಮತ್ತ ನಗು ಬೀರುವಲ್ಲಿ ಪಕ್ಕದಲ್ಲಿ ಮತ್ತೊಬ್ಬರ ಮುಖ ಕಾಣಿಸಿತು. ಎದ್ದು ನಿಂತ ಆಕೆಯತ್ತ ನೋಡುತ್ತಿರುವಂತೆ ಮೊದಲು ನನ್ನಲ್ಲಿ ಮೂಡಿದ ಭಾವನೆ ಹೆದರಿಕೆ ನಂತರ ವಿಸ್ಮಯ. ಸ್ವಲ್ಪ ಅಘಾತ ಎಲ್ಲ ಭಾವನೆಗಳು ಒಟ್ಟೊಟ್ಟಿಗೆ ನನ್ನನ್ನು ಆಕ್ರಮಿಸಿದವು.
-------------------------------------------------------------------------------------------------------------------------------------------------------------------------------------

ನಾನು ಕಾಣುತ್ತಿರುವದೇನು ,  ಸಾಮಾನ್ಯಕ್ಕಿಂತ ಅಗಲವಾದ ಬುಜ  ಆದರೆ  ಬುಜದ ಹತ್ತಿರ ಮರವೊಂದು ಕವಲು ಒಡೆದಂತೆ ಎರಡು ವಿಭಾಗವಾಗಿ ಎರಡು ಕುತ್ತಿಗೆ ಹಾಗು  ತಲೆಗಳು. ನೋಡಲು ಹೆಚ್ಚು ಕಡಿಮೆ ತದ್ರೂಪು.  ಸುಂದರವಾಗ ಮುಖಗಳು. ದೇಹ ಮಾತ್ರ ಒಂದೆ. ಸಡಿಲವಾದ ಬಿಳಿ ಶರ್ಟ್ ಹಾಗು ಜಿನ್ಸ್ ಪ್ಯಾಂಟ್ ದರಿಸಿದ್ದ ಆಕೆ ನನ್ನನ್ನು ಎರಡು ಮುಖದಿಂದಲು ನಗುತ್ತ ನೋಡುತ್ತ ನಿಂತಿದ್ದರು. ನಾನು ತಿಳಿದಂತೆ ವಯಸ್ಸು ಹೆಚ್ಚಿರಲಿಲ್ಲ ಜಾಸ್ತಿ ಎಂದರೆ ಇಪ್ಪತ್ತು ಅನ್ನಬಹುದೇನೊ.  

ನನ್ನಿಂದ ಯಾವ ಮಾತು ಹೊರಡಲಿಲ್ಲ. ನನ್ನ ಮೌನ ಪ್ರತಿಕ್ರಿಯೆಯನ್ನು ಆಕೆ ಮೊದಲೆ ನಿರೀಕ್ಷಿಸಿದ್ದರು ಅನ್ನಿಸುತ್ತೆ. ನಗುತ್ತ ನುಡಿದರು ಆಕೆ
"ಸಾರಿ, ತುಂಬಾ ಆಘಾತವಾಯಿತ ನನ್ನನ್ನು ನೋಡಿ, ನಿಮಗೆ ಮೊದಲೆ ತಿಳಿಸಿರಲಿಲ್ಲ ನಮ್ಮನ್ನು ಕ್ಷಮಿಸುತ್ತೀರ"
ನನ್ನ ಜೊತೆ ಮಾತನಾಡಿದವರು ಯಾರು ಆಂಡ್ರಿಯಾನೊ ಅಥವ ಆಂಜಾಲಿನನೊ ತಿಳಿಯಲಿಲ್ಲ.
ಎಡಬಾಗದ ಮುಖದಿಂದ ಆಕೆ ಮಾತನಾಡುತ್ತಿದ್ದರು. ಆಕೆಯ ಎಡಮುಖ ಸ್ವಲ್ಪ ಎತ್ತರಕ್ಕಿದ್ದು ಸುಮಾರು ಐದು ಡಿಗ್ರಿಯಷ್ಟು ಎಡಕ್ಕೆ ವಾಲಿತ್ತು, ನನ್ನನ್ನು ನೋಡಿ ನಗುತ್ತಿದ್ದ ಬಲಮುಖ ಸುಮಾರು ಹದಿನೈದು ಡಿಗ್ರಿಯಷ್ಟು ಬಲಕ್ಕೆ ವಾಲಿತ್ತು. ನನಗೆ ಅಘಾತವಾಗಿದ್ದಂತು ನಿಜ. ಆದರು ಮಾತನಾಡಿದೆ
'ಹಾಗೇನು ಇಲ್ಲ, ನೀವು ಅವಳಿ ಜವಳಿ ಎಂದು ತಿಳಿಯಲಿಲ್ಲ ಉಹಿಸಿದ್ದೆ'
ಆಕೆ ನನಗೆ ಹೇಳಿದಳು,
'ದಯಮಾಡಿ ಕುಳಿತುಕೊಳ್ಳಿ, ನಾವು ಅವಳಿ ಜವಳಿ ಯಾದರು ಪ್ರತ್ಯೇಕವಾದ ಕೇಸ್, ನಮ್ಮನ್ನು ಕೋಜಾಯಿಂಡ್ ಟ್ವಿನ್ಸ್ ಎನ್ನುತ್ತಾರೆ, ಅದರಲ್ಲಿಯಿ ''ಡೈಸಿಪಲಿ' ಅಥವ 'ಪಾಲಿಸಿಪಲಿ' ಎಂಬ ಪ್ರತ್ಯೇಕ ಹೆಸರಿನಲ್ಲಿ ಗುರುತಿಸುತ್ತಾರೆ, ಹುಟ್ಟುವಾಗಲೆ ಒಂದೆ ದೇಹದಲ್ಲಿ ಎರಡು ತಲೆಗಳು'  
ಎಡಬಾಗದಲ್ಲಿದ್ದ ತಲೆಯಿಂದ ಆಕೆ ಮಾತನಾಡುತ್ತಿದ್ದರೆ, ಬಲಬಾಗದ ತಲೆಯಿಂದ ನನ್ನನ್ನು ಗಂಭೀರವಾಗಿ ನೋಡುತ್ತಿದ್ದಳು.  ನನಗೆ ಮಾತನಾಡಲು ತಡವರಿಸುವಂತೆ ಆಗಿತ್ತು.
"ಇರಲಿ ಬಿಡಿ , ಕೆಲವೊಮ್ಮೆ ದೇಹ ಪ್ರಕೃತಿ , ನಿಸರ್ಗದ ನಿಯಮದ ಮುಂದೆ ನಾವು ಅಸಹಾಯಕರು, ತೊಂದರೆ ಅಂದುಕೊಳ್ಳುವ ಬದಲಿಗೆ ಅನುಕೂಲ ಅಂದುಕೊಳ್ಳುವುದು" ಎಂದೆ.
ಆಕೆ ನಗುತ್ತ
"ನೋಡಿದೆಯ ಆಂಜಲೀನ, ಬರುವಾಗಲೆ ತಮ್ಮ ವೇದಾಂತ ಪ್ರಾರಂಬಿಸಿದರು,  ಅದಕ್ಕಾಗಿಯೆ ಅಲ್ಲವೆ ಇವರನ್ನು ಕರೆಸಿದ್ದು"  ಎನ್ನುತ್ತ ನನ್ನ ಕಡೆ ತಿರುಗಿ
"ಈಗ ಸ್ವಲ್ಪ ರಿಲಾಕ್ಸ್ ಆಗಿ,  ನಮ್ಮನ್ನು ನೋಡಿ ಹೆದರಿದ್ದು ಸಾಕು, ಈಗ ಏನು ತೆಗೆದುಕೊಳ್ಳುವಿರಿ, ನನಗೆ ಗೊತ್ತು, ನೀವು ದಕ್ಷಿಣಭಾರತೀಯರು ಕಾಫಿ ಇಷ್ಟ ಪಡುವಿರಿ "  ಎನ್ನುತ್ತ ತಂದೆಯ ಕಡೆ ತಿರುಗುತ್ತ,
"ಡಾಡ್, ಇವರಿಗೆ ಕಾಫಿ ಮತ್ತೆ ನಮಗೆಲ್ಲ ಮಾಮೂಲಿ ಕೋಕ್ " ಎಂದಳು.  
ನನಗೀಗ ಅರ್ಥವಾಗಿತ್ತು ನನ್ನ ಜೊತೆ ಮಾತನಾಡುತ್ತಿರುವ ತಲೆ ಆಂಡ್ರಿಯಾದ್ದು, ಸುಮ್ಮನೆ ಮೌನವಾಗಿರುವ ತಲೆ ಆಂಜಾಲಿನದ್ದು. ಅಂತ.
"ಹಾಯ್ ಆಂಜಲೀನ ನೀವೇಕೆ ಮಾತನಾಡುತ್ತಿಲ್ಲ, ನನ್ನ ಆಗಮನ ನಿಮಗೆ ಹಿತವಾಯಿತೆ" ಎಂದೆ.
ಆಂಡ್ರಿಯ ಬಲಕ್ಕೆ ತಿರುಗಿ ಆಂಜಾಲಿನಳನ್ನು ನೋಡಿದಳು. ಈಗ ಆಂಜಾಲಿನ ಮಾತನಾಡಿದಳು.
"ಇಷ್ಟವಾಗದೆ ಏನು, ಅಸಲಿಗೆ ನಾನಂತು ನಿಮ್ಮ ಬರವನ್ನು ಕಾಯುತ್ತ ಇದ್ದೆ, ನಿಮ್ಮನ್ನು ಕಂಡು ತುಂಬಾ ಸಂತಸ ಸಮಾದಾನ ಎನಿಸಿತು" ಎಂದಳು.   ನಾನು,
"ಮತ್ತೇನು , ನೀವು ಇಬ್ಬರೇನಾ ಬಂದಿರುವುದು, ನಿಮ್ಮ ತಾಯಿಯವರು ಅಥವ ಮತ್ಯಾರಾದರು ಬಂದಿರುವರ ?" ಎಂದೆ
ಆಕೆ ಆಶ್ಚರ್ಯದಿಂದ " ಇಬ್ಬರಲ್ಲ ನಾವು ಮೂವರು ಬಂದಿರುವುದು, ನಾನು ಆಂಡ್ರಿ, ಮತ್ತು ನಮ್ಮ ತಂದೆ" ಎಂದಳು,
ಓಹ್ ನಾನು ಅವರಿಬ್ಬರನ್ನು ಒಂದೆ ವ್ಯಕ್ತಿಯಾಗಿ ಎಣಿಸಿ , ತಂದೆಯ ಜೊತೆ ಸೇರಿಸಿ ಇಬ್ಬರು ಎಂದು ಕೇಳಿದ್ದೆ!  ಇದೊಂದು ರೀತಿ ಕನ್ ಫ್ಯೂಶನ್ .

ಅಷ್ಟರಲ್ಲಿ ನನಗೆ ಕಾಫಿ ಹಾಗು ಅವರಿಗೆ ಅವರವರ ಪಾನೀಯಗಳು ಬಂದವು. ಅವರ ತಂದೆ ಎರಡು ಕೋಕೊ ಬಾಟಲನ್ನು  ನೀಡಿದ, ಅವರು ಎಡಕೈಲಿ ಒಂದು ಬಲಗೈಲಿ ಒಂದು ಹಿಡಿದು ಎರಡು ಬಾಯಿಯಿಂದ ಕುಡಿಯುವ ರೀತಿ ನನ್ನಲ್ಲಿ ಅಚ್ಚರಿ ಹುಟ್ಟಿಸಿತ್ತು. ಆದರೆ ಎಲ್ಲ ಪ್ರಶ್ನೆಗಳನ್ನು ಕೇಳಿ ಅವರಲ್ಲಿ ಮುಜುಗರ ಹುಟ್ಟಿಸುವುದು ಬೇಡವೆಂದು ಸುಮ್ಮನಾದೆ.

ನಂತರ ಮಾತು ಅವರು ಹೋಗಿ ಬಂದ ವಾರಣಾಸಿಯ ಪ್ರಯಾಣದತ್ತ ತಿರುಗಿತು. ನನಗೆ ಅಚ್ಚರಿ ಎನಿಸಿದ್ದು ಎಂದರೆ, ಎಲ್ಲ ಸುದ್ದಿಗಳ ಹಿಂದಿ ಬಿದ್ದು ಹೋಗುವ ಮಾದ್ಯಮಗಳು ಇವರನ್ನು ಹೇಗೆ ಬಿಟ್ಟಿದ್ದಾರೆ ಇವರ ಬೆನ್ನು ಏಕೆ ಹತ್ತಿಲ್ಲ ಎಂದು ಅರ್ಥವಾಗಲಿಲ್ಲ. ಭಾರತದ ಸಂಸ್ಕೃತಿ ಆಚರಣೆ ಇಲ್ಲಿಯ ಹಬ್ಬಗಳು ಹೀಗೆ ಅವರ ಜೊತೆ ಹತ್ತು ಹಲವು ವಿಷಯಾಳು ಚರ್ಚೆಯಾದವು. ಮತ್ತೆ ನನ್ನನ್ನು ಕೇಳುತ್ತ ಅವರು ಊಟಕ್ಕೆ ಆರ್ಡರ್ ಮಾಡಿದರು. ನನ್ನದು ಶುದ್ದ ಸಸ್ಯಾಹಾರವೆಂದು ತಿಳಿಸಿದೆ, ಆಂಡ್ರಿಯಾ ನಗುತ್ತ
"ಹೆದರಬೇಡಿ, ನಾವು ನೋಡುವದಕ್ಕೆ ಈ ರೀತಿ ರಾಕ್ಷಸರ ತರ ಇದ್ದರು, ನಾವಿಬ್ಬರು ಶುದ್ದ ಸಸ್ಯಾಹಾರಿಗಳು, ಅಮೇರಿಕದಲ್ಲಿ ಮಾಂಸಹಾರ ಸೇವನೆ ಸಾಮಾನ್ಯವಾದರು, ಡಾಕ್ಟರ ಗಳ ಸಲಹೆ ಮೇರೆಗೆ ನಾವು ಬರಿ ಸಸ್ಯಹಾರ ತೆಗೆದುಕೊಳ್ಳುವೆವು, ಹೀಗಾಗಿ ಕೊಬ್ಬುಸೇರುವದನ್ನು ತಡೆಯುವ ಉಪಾಯ " ಎಂದರು.

ಊಟದ ನಂತರ ಅವರಿಬ್ಬರು ನನಗೆ " ನೀವು ನಿಮ್ಮ ರೂಮಿನಲ್ಲಿ ಸ್ವಲ್ಪ ವಿಶ್ರಾಂತಿ ಪಡೆಯಿರಿ, ಸಂಜೆ ಸಿದ್ದವಿರಿ ಹೊರಗೆ ಹೋಗುವ ಕಾರ್ಯಕ್ರಮವಿದೆ, ಒಟ್ಟಿಗೆ ಹೋಗೋಣ " ಎಂದರು. ನಾನು ಸಹ ಊಟ ಮುಗಿಸಿ, ನನಗಾಗಿ ಮೀಸಲಿದ್ದ ರೂಮಿಗೆ ಬಂದೆ. ಆದರೆ ಅವರನ್ನು ನೋಡಿದ ವಿಶೇಷ ಸಂದರ್ಭ ಅಲ್ಲದೆ ಇಂತ ಹೋಟಲಿನ ವಾತವಾರಣ ಎಲ್ಲ ಸೇರಿ ನಿದ್ದೆ ಮಾಡಲು ಬಿಡಲಿಲ್ಲ. ಸುಮ್ಮನೆ ವಿಶ್ರಾಂತಿಗಾಗಿ ಹಾಸಿಗೆಯ ಮೇಲೆ ಮಲಗಿದೆ ಅಷ್ಟೆ.

ಸಂಜೆಯಾಗುತ್ತಿರುವಂತೆ ನನ್ನ ರೂಮಿಗೆ ಫೋನ್ ಕಾಲ್ ಬಂದಿತು. ನಿರೀಕ್ಷಿಸಿದಂತೆ ಆಂಡ್ರಿಯ  ಕರೆ ಮಾಡಿದ್ದರು, ಇನ್ನು ಅರ್ದ ಘಂಟೆಯಲ್ಲಿ ಸಿದ್ದವಾಗುವಂತೆ ತಿಳಿಸಿ ಕಾರಿನಲ್ಲಿ ಹೊರಗೆ ಹೋಗುವದಾಗಿ ತಿಳಿಸಿದರು.

ನನಗೆ ಸ್ವಲ್ಪ ಆತಂಕ. ಇವರಿಬ್ಬರ ಜೊತೆ ಹೊರಟರೆ ಹೊರಗೆ ಎಲ್ಲರು ಇವರನ್ನೆ ಖಂಡೀತ ಮುತ್ತಿಗೆ ಹಾಕುವರು ಸುಮ್ಮನೆ ಜನರ ದೃಷ್ಟಿಯಲ್ಲಿ ಕುತೂಹಲದ ವಸ್ತುವಾಗಿ ಇವರು ನಿಂತರೆ ಪಕ್ಕದಲ್ಲಿ ನಾನಿರಬೇಕಲ್ಲ ಎಂದು. ಅದನ್ನು ಹೇಳಲಾಗಲಿಲ್ಲ. ಸರಿ ಸಿದ್ದವಾಗಿ ಹೊರಗೆ ಬಂದೆ,
ನನ್ನ ರೂಮಿನ ಬಾಗಿಲಿನ ಹತ್ತಿರ ಕಾರಿಡಾರಿನಲ್ಲಿ  ಆಂಡ್ರಿಯ ಹಾಗು ಆಂಜಾಲೀನರ ತಂದೆ ರಾಬರ್ಟ್ ಕಾಯುತ್ತ ನಿಂತಿದ್ದರು,

ನಾನು ಸಂಕೋಚದಿಂದ 'ಒಳಗೆ ಬರಬಹುದಿತ್ತಲ್ಲ' ಎಂದೆ .
ಆತ 'ಇಲ್ಲ ನಾನು ಸಹ ಈಗ ಬಂದೆ , ಕರೆಯುವದರಲ್ಲಿ ನೀವು ಸಹ ಹೊರಬಂದಿರಿ' ಎನ್ನುತ್ತ
'ಸ್ವಲ್ಪ  ಹಾಗೆ ಕೆಳಗೆ ಹೋಗಿ ವಾಹನದ ಏರ್ಪಾಡು ಮಾಡಿಬರುವ ಬನ್ನಿ' ಎಂದರು .

ನಾನು ಸರಿ ಎನ್ನುತ್ತ ಅವರ ಜೊತೆ ಹೊರಟೆ. ನಮಗೆ ಕೊಟ್ಟಿದ್ದ ರೂಮಿನಲ್ಲಿ ಒಂದು ಪ್ರತ್ಯೇಕತೆ ಇತ್ತು. ರೂಮಿನ ಪಕ್ಕದಲ್ಲಿ ಕೆಳಗೆ ಹೋಗಲು ಪ್ರತ್ಯೇಕ ಮೆಟ್ಟಿಲುಗಳಿದ್ದು, ಅದು ನೇರವಾಗಿ ಹೋಟಲಿನ ಹಿಂಬಾಗಕ್ಕೆ ಹೋಗುತ್ತಿತ್ತು, ಆ ಮೆಟ್ಟಿಲುಗಳನ್ನು ಉಪಯೋಗಿಸುವುದು ತುಂಬಾ ಕಡಿಮೆ ಎಂದು ತೋರುತ್ತಿತ್ತು. ಎಲ್ಲರು ನಡೆದು ಹೋಗಿ ಕಾರಿಡಾರ್ ನ ಕಡೆಯಲ್ಲಿದ್ದ ಲಿಫ್ಟ್ ಗಳನ್ನೆ ಉಪಯೋಗಿಸುತ್ತಿದ್ದರು. ಇಬ್ಬರು ಕೆಳಗೆ ಬಂದೆವು, ರಾಬರ್ಟ್ ರವರು ಟೆಲೆಪೋನಿನಲ್ಲಿ ಯಾರೊಂದಿಗೊ ಮಾತನಾಡಿದರು, ಸ್ವಲ್ಪ ಕಾಲದಲ್ಲಿಯೆ ಕಾರೊಂದು ಹಿಂಬಾಗಕ್ಕೆ ಬಂದು ನಿಂತಿತು,

ಅದರ ಡ್ರೈವರ್ ಕೆಳಗಿಳಿದು ಬಂದು " ಸಾರ್ ಸಿದ್ದವ ಹೊರಗೆ ಹೊರಡಲು" ಎನ್ನುತ್ತ ಹಿಂದಿಯಲ್ಲಿ ಕೇಳಿದ.
ರಾಬರ್ಟ್ ಆತನಿಗೆ ಹಿಂದಿಯಲ್ಲಿ ಉತ್ತರಿಸಿ, ನೀನು ಸ್ವಲ್ಪ ಕಾರಿನಲ್ಲಿಯೆ ಕುಳಿತು ಕಾದಿರು, ಮೇಲೆ ಹೋಗಿ ಬರುತ್ತೇನೆ ಎನ್ನುತ್ತ, ನನ್ನ್ನನ್ನು ಕುರಿತು ಅಂಗ್ಲದಲ್ಲಿ ,
" ನೀವು ಕಾರಿನಲ್ಲಿ ಹಿಂಬಾಗದಲ್ಲಿ ಕುಳಿತುಕೊಳ್ಳಿ, ಎರಡು ನಿಮಿಷ ' ಎನ್ನುತ್ತ ಮತ್ತೆ ಮೇಲೆ ಹೊರಟರು.

'ಈತನಿಗೆ ಹಿಂದಿ ಸಹ ಗೊತ್ತಿದೆ' ಎಂದು ಕೊಳ್ಳುತ್ತ, ಕಾರಿನ ಒಳಗೆ ಕುಳಿತೆ,.
ಅದೊಂದು ಐಶರಾಮಿಯಾದ ಕಾರು, ಡ್ರೈವರ್ ಇರುವನಾದರು, ಮುಂದಿನ ಸೀಟಿಗು ಹಿಂದಿನ ಸೀಟಿಗು ನಡುವೆ ಒಂದು ಗಾಜಿನಪರದೆ ಯಿಂದ ಬೇರ್ಪಟ್ಟಿತ್ತು. ಹಿಂದೆ ಕುಳಿತವರು ಹಾಗು ಅವರ ಮಾತು ಡ್ರೈವರನಿಗೆ ಸಿಗದು. ಎರಡು ಮೂರು ನಿಮಿಷ , ನೋಡುತ್ತಿರುವಂತೆ, ತಂದೆಯ ಹಿಂದೆಯೆ ಇಳಿದ, ಆಂಡ್ರಿಯ ಹಾಗು ಆಂಜಾಲಿನ , ( ಕ್ಷಮಿಸಿ ಇಬ್ಬರು ಒಬ್ಬರೆ ) , ಹಿಂದಿನ ಸೀಟಿಗೆ ಬಂದರು.
ಒಳಗೆ ಕುಳಿತುಕೊಳ್ಳುತ್ತ "ನಿಮಗೆ ಕಂಫರ್ಟ್ ಬಲ್ ಆಗಿದೆಯ ಯಾವ ಮುಜುಗರವು ಇಲ್ಲವಲ್ಲ" ಎಂದರು.
ನನ್ನೊಳಗೆ ಎಂತದೊ ಮುಜುಗರವಿತ್ತು, ಆದರೆ ಅವರ ಪ್ರಶ್ನೆ ಕೇಳಿದ ತಕ್ಷಣ ನನ್ನ ಮನ ಸ್ಥಿರವಾಯಿತು.
"ಮುಜುಗರ ಎಂತದು, ನಿಮ್ಮ ಜೊತೆ ಪ್ರಯಾಣ ನನಗೆ ಖುಷಿ ಕೊಡುತ್ತಿದೆ ಬನ್ನಿ " ಎಂದೆ.
ಅವರ ತಂದೆ ರಾಬರ್ಟ್ ಕಾರಿನ ಮುಂಬಾಗಕ್ಕೆ ಹೋದರು, ಬಾಗಿಲುಗಳು ಮುಚ್ಚಲ್ಪಟ್ಟು ನಾವು ಹೊರಟೆವು.
'ನಿಮ್ಮ ತಂದೆ ಹಿಂದಿಯನ್ನು ಅರಿತಿರುವರು' ಎಂದೆ ಸ್ವಲ್ಪ ಕುತೂಹಲದಿಂದ, ಅದಕ್ಕೆ ಆಂಡ್ರಿಯಾ
"ಹೌದು, ಅವರು ಈಗ ಬಿಸಿನೆಸ್ ಮನ್ , ಆದರೆ ಮೊದಲಿಗೆ, ಅಮೇರಿಕದ ರಾಯಬಾರ ಕಚೇರಿಯಲ್ಲಿ  ದುಬಾಷಿಯಾಗಿ ಕೆಲಸ ಮಾಡುತ್ತಿದ್ದರು' ಎಂದಳು. ನನಗೆ ಅರ್ಥವಾಯಿತು.


ಅದೊಂದು ಪ್ರತ್ಯೇಕ ವ್ಯವಸ್ಥೆ ಇದ್ದ ಕಾರು, ನಾವು ಹೊರಗಿನವರಿಗೆ ಕಾಣುವ ಸಂದರ್ಭವಿಲ್ಲ ಆದರೆ ನಮಗೆ ಹೊರಗೆ ಎಲ್ಲವು ಸ್ವಷ್ಟವಾಗಿ ಕಾಣುತ್ತಿತ್ತು. ನಿಜವಾಗಿ ಹೇಳುವಾಗ ಮುಂಬಯಿ ರಸ್ತೆಗಳಲ್ಲಿ ನನಗೆ ಸಹ ಇದು ಮೊದಲನೆ ಓಡಾಟ. ಕಿಟಕಿಯಿಂದ ನೋಡುತ್ತ, ಪಕ್ಕದಲ್ಲಿದ್ದ ಆಕೆಯ ಜೊತೆ ಮಾತನಾಡುತ್ತ ಹೊರಟೆ. ಸಂಜೆಯ ಕತ್ತಲಲ್ಲಿ ರಸ್ತೆಗಳಲ್ಲಿ ಓಡಾಟ, ಬೇಕಾದ ಕಡೆ ಕಾರನ್ನು ಸ್ವಲ್ಪ ನಿಲ್ಲಿಸಲಾಗುತ್ತಿತ್ತು, ಹಾಗೆ ಮುಂದೆ ಹೋಗುತ್ತಿದ್ದೆವು, ನನ್ನ ಜೊತೆ ಅವರು ಸಾಕಷ್ಟು ಮಾತನಾಡಿದರು, ಭಾರತದ  ದರ್ಮ, ಪುರಾಣಗಳು, ನಂಬಿಕೆ, ರಾಮಯಣ ಮಹಾಭಾರತದ ಕತೆಗಳು, ಇಲ್ಲಿಯ ರಾಜಕೀಯ ಪರಿಸ್ಥಿಥಿ ಹೀಗೆ ಸಾಗುತ್ತಿತ್ತು.

ನಮ್ಮ ಪುರಾಣದಲ್ಲಿಯ ಕತೆಗಳ ಪ್ರಸ್ತಾಪ , ನಾಲಕ್ಕು ತಲೆಯ ಬ್ರಹ್ಮನ ವಿಚಾರ ಬಂದಾಗ ಅವರು ಸಾಕಷ್ಟು ಕುತೂಹಲದಿಂದ ಅದರ ಬಗ್ಗೆ ವಿಚಾರಿಸಿದರು. ಅಂತಹ ಕಲ್ಪನೆ ಅಷ್ಟು ಪುರಾಣಕಾಲದಲ್ಲಿಯೆ ಹೇಗೆ ಅವರಿಗೆ ಬಂದಿತು ಅಂತ ಆಶ್ಚರ್ಯ ಅವರಿಗೆ.  ಹೆಚ್ಚು ಮಾತನಾಡುವ ಆಂಡ್ರಿಯ ಹೇಳಿದಳು
"ಬಹುಷಃ ಇದು ಪೂರ್ತಿ ಕಲ್ಪನೆಯು ಆಗಿರಲಾರದು, ಆಗಿನ ಕಾಲಕ್ಕೆ ನಮ್ಮಂತೆ ಯಾರಾದರು, ಎರಡು ಅಥವ ನಾಲಕ್ಕು ತಲೆಯ ಮನುಷ್ಯರು ಹುಟ್ಟಿದ್ದರೊ ಏನೊ" ಎಂದಳು.
ನನಗೂ ಅವಳ ಮಾತು ನಿಜವಿರಬಹುದೆ ಎನ್ನಿಸಿತು.
ಮತ್ತೆ ಹತ್ತು ತಲೆಯ ರಾವಣನ ವಿಷಯ ಬಂದಾಗ, ಆಂಜಾಲೀನ ತನ್ನ ಗಾಂಭೀರ್ಯ ಬಿಟ್ಟು  ಜೋರಾಗಿ ನಗುತ್ತಿದ್ದಳು, ನನಗು ಕುತೂಹಲ ಕೇಳಿದೆ ಏಕೆ ಅಷ್ಟೊಂದು ನಗು ಎಂದು. ಅದಕ್ಕವಳು
"ಮತ್ತೇನಿಲ್ಲ , ಎರಡು ತಲೆ ಜೊತೆಯಾಗಿ ಹುಟ್ಟಿರುವ ನಮಗೆ ಇಂತಹ ಪಾಡು, ಹಲವು ಸಂಕಷ್ಟಗಳು ಯಾವ ಸ್ವತಂತ್ರ್ಯವು ಇಲ್ಲ, ಇನ್ನು ಹತ್ತು ತಲೆಯ ಆತ ಅದೇಗೆ ಬಾಳಿದನೊ, ಎಷ್ಟು ಕಷ್ಟ ಪಟ್ಟನೊ ಎನ್ನಿಸಿ ನಗುಬಂದಿತು" ಎಂದಳು. ನನಗೂ ಮತ್ತು ಆಂಡ್ರಿಯಾಗು ಆಕೆಯ ಮಾತಿನಿಂದ ನಗು ಉಕ್ಕಿ ಬಂದಿತು.

ನಡುವೆ ಮತ್ತೊಂದು ವಿಷಯ ಗಮನಿಸಿದ್ದೆ. ಈ ಅವಳಿಗಳಲ್ಲಿ ಒಮ್ಮೆ ಒಬ್ಬಳು  ಮಾತನಾಡುವಳು. ಒಬ್ಬಳು ಮಾತನಾಡುವಾಗ ಮತ್ತೊಬ್ಬಳು ಮೌನ ವಹಿಸುತ್ತಿದ್ದರು. ನನಗೆ ಕುತೂಹಲವೆನಿಸಿ ಅದೇ  ಕೇಳಿದೆ. ಈಗ ಅವರು ನನ್ನ ಬಗ್ಗೆ ಏನಾದರು ತಪ್ಪು ಭಾವಿಸುವರು ಎನ್ನುವ ನನ್ನ ಹಿಂಜರಿಗೆ ಸ್ವಲ್ಪ ಮಾಯವಾಗಿತ್ತು.
ಆಂಜಾಲೀನ ನುಡಿದಳು
"ನಿಮ್ಮ ಅನಿಸಿಕೆ ನಿಜ, ನಾವು ಒಟ್ಟಿಗೆ ಮಾತನಾಡುವದಿಲ್ಲ, ಅದಕ್ಕೆ ಕಾರಣ ನಮ್ಮ ದೇಹ ರಚನೆ ಅದನ್ನು ಪೂರ್ಣವಾಗಿ ನಿಮಗೆ ವಿವರಿಸಲೆ ಬೇಕು" ಎನ್ನುತ್ತ ಹೇಳಿದಳು.
' ಅದಕ್ಕೆ ಮುಂಚೆ ನಿಮ್ಮ ಬಗ್ಗೆ ಕೇಳಬೇಕು '
ನನಗೆ ಆಶ್ಚರ್ಯ ಎನಿಸಿತು 'ನನ್ನ ಬಗ್ಗೆಯೆ' ಎಂದೆ.
ಅದಕ್ಕವಳು
"ಹೌದು ನಿಮ್ಮ ಬಗ್ಗೆಯೆ, ನಿಮಗೆ ತಿಳಿಯದು, ನನ್ನ ತಂದೆಗೆ ಒಬ್ಬ ತಮ್ಮನಿದ್ದ ತುಂಬ ಚಿಕ್ಕವನು, ನಮಗಿಂತ ಒಂದೆರಡು ವರ್ಷ ದೋಡ್ಡವನಿರಬಹುದು,  ಚಿಕ್ಕವಯಸ್ಸಿನಿಂದಲು ನಮ್ಮ ಬಗ್ಗೆ ಅದೆಂತದೊ ವ್ಯಾಮೋಹ ಅವನಿಗೆ, ನಮ್ಮ ಮಾತು ಆಟ ಊಟ ಎಲ್ಲವು ಜೊತೆಯಾಗಿಯೆ ಸಾಗುತ್ತಿತ್ತು, ಆದರೆ ದುರಾದೃಷ್ಟ, ಮೂರುವರ್ಷದ ಕೆಳಗೆ ಹೆದ್ದಾರಿಯ ಅಪಘಾತ ಒಂದರಲ್ಲಿ ಅವನು ತೀರಿಕೊಂಡ ನಮ್ಮಿಬ್ಬರಿಗು ಪ್ರಪಂಚದ ಜೊತೆಗೆ ಇದ್ದ ಒಂದು ಸಂಬಂಧವೆ ಅಳಿಸಿಹೋಗಿ ಒಬ್ಬಂಟಿಗರಂತೆ ಬಾಸವಾಯಿತು. ಒಮ್ಮೆ ಇಂಟರ್ನೆಟ್ ನಲ್ಲಿ ಭಾರತದ ಬಗ್ಗೆ ನೋಡುತ್ತಿರುವಾಗ ಏನನ್ನೊ ಹುಡುಕುತ್ತ ಇರಬೇಕಾದರೆ, ನಿಮ್ಮ ಪ್ರೊಪೈಲ್ ನ ಚಿತ್ರ ಇದ್ದಕ್ಕಿದಂತೆ ಎದುರಿಗೆ ಬಂದಿತು, ವಯಸಿನಲ್ಲಿ ಸ್ವಲ್ಪ ಹೆಚ್ಚು ಕಡಿಮೆ ನಿಜ,  ಆದರೆ ಅದೇನೊ ನಿಮ್ಮನ್ನು ನೋಡುವಾಗ ಅವನನ್ನು ನೋಡಿದ ಬಾಸವಾಗುತ್ತೆ, ಹಾಗಾಗಿ ನಿಮ್ಮ ಜೊತೆ ಪ್ರೆಂಡ್ ರಿಕ್ವೆಸ್ಟ್ ಕಳಿಸಿದೆ , ನೀವು ಒಪ್ಪಿಗೆ ಎಂದಿರಿ, ಹಾಗಾಗಿ ನಿಮ್ಮ ಬಗ್ಗೆ ನಮ್ಮ ವಾತ್ಸಲ್ಯದ ಭಾವನೆ ಬೆಳೆಯುತ್ತ ಹೋಯಿತು, ಈಗಲು ನಮ್ಮಿಬ್ಬರಿಗೆ ನಿಮ್ಮನ್ನು ನೋಡುವಾಗ ಅದೆ ಕ್ರಿಸ್ ಚಿತ್ರವೆ ಮನದಲ್ಲಿ ತುಂಬುತ್ತೆ, ನಿಮ್ಮ ಅಭ್ಯಂತರವಿಲ್ಲ ಎನ್ನುವದಾದರೆ ನಾವಿಬ್ಬರು ನಿಮ್ಮನ್ನು ಅದೇ ಹೆಸರಿನಿಂದ ಕರೆಯೋಣವೆ" ಎಂದಳು.

ಇದೆಂತ ವಿಚಿತ್ರ ! ಪ್ರಪಂಚದ ಮತ್ಯಾವುದೋ ಮೂಲೆಯಲ್ಲಿನ ಕ್ರಿಸ್ ನನ್ನನ್ನು ಹೋಲುವುದು, ಅವನ ಮರಣದ ನಂತರ ನನ್ನ ಚಿತ್ರ ಇವರ ಕಣ್ಣಿಗೆ ಬೀಳುವುದು, ನನ್ನ ಜೊತೆ ಇವರ ಫೇಸ್ ಬುಕ್ ಒಡನಾಟ, ಈಮೈಲ್ ನ ವ್ಯವಹಾರ ಎಲ್ಲವು  ಅಯೋಮಯವೆನಿಸಿತು!. ಕೆಲವೊಮ್ಮೆ ಈ ಸಂಬಂಧ ಬೆಸೆಯುವ ಪರಿ ಯಾರಿಗು ಅರ್ಥವಾಗುವುದೆ ಇಲ್ಲ. ನಾನು ಎಲ್ಲವನ್ನು ಮನದಲ್ಲಿ ಯೋಚಿಸುತ್ತ,
"ಸರಿ ನನ್ನನ್ನು ಕ್ರಿಸ್ ಹೆಸರಿನಿಂದ ಕರೆಯಲು ನನ್ನ ಯಾವ ಅಭ್ಯಂತರವು ಇಲ್ಲ, ಹಾಗೆ ನೀವು ಬಯಸಿದರೆ ನನ್ನನ್ನು ಏಕವಚನದಲ್ಲಿ ಕರೆಯಬಹುದು " ಎಂದೆ ,
ಅಸಲಿನಲ್ಲಿ ಇವರು ಮಾತನಾಡುವ ಇಂಗ್ಲೀಷ್ ನಲ್ಲಿ ಏಕವಚನಕ್ಕು ಬಹುವಚನಕ್ಕು ಬಹಳ ವ್ಯತ್ಯಾಸವೇನಿಲ್ಲ.  
"ಸರಿ ಆಂಡ್ರಿಯ ನಿಮ್ಮ ದೇಹ ರಚನೆಯ ಬಗ್ಗೆ ಏನನ್ನೊ ಹೇಳುತ್ತೀನಿ ಅಂದಿದ್ದರಲ್ಲ, ಈಗ ಹೇಳಬಹುದೆ ಅಂದೆ" ಅದಕ್ಕೆ ಆಕೆ,
"ನೋಡಿದೆಯ ಕ್ರಿಸ್ ನಿನಗೆ ಎಷ್ಟು ಮರೆವು , ಹಾಗೆ ಹೇಳಿದ್ದು ನಾನಲ್ಲ ಆಂಜಲೀನ" ಎಂದಳು.  
ನಾನು ನಗುತ್ತ
'ನೋಡಿದೆಯ ನಾನು ಮೋಸ ಹೋದೆ, ಆದರೆ ನಿಮ್ಮಿಬ್ಬರನ್ನು ಬೇರೆ ಬೇರೆ ಎಂದು ಒಪ್ಪಿಕೊಳ್ಳುವುದೆ ಒಂದು ಕಷ್ಟ, ಇರಲಿ ಅದೇನೊ ಹೇಳು ಆಂಜಾಲಿನ" ಎಂದೆ
ಈಗ ಬಲಗಡೆಯ ಮುಖದ ಆಂಜಾಲೀನ ನಗುತ್ತ
"ಸರಿ, ತಿಳಿಸುವೆ, ವೈದ್ಯಕೀಯ ಶಾಸ್ತ್ರದ ಪ್ರಕಾರ ನಾವಿಬ್ಬರು ಕೋಜಾಯಿಂಡ್ ಟ್ವಿನ್ಸ್, ನಮ್ಮನ್ನು  'ಡಯಾಸಿಪಲಿ' ಎನ್ನುತ್ತಾರೆ,  ಅಥವ 'ಪಾಲಿಸಿಫಲಿಯು' ಆಗಬಹುದು. ಮೇಲ್ನೋಟಕ್ಕೆ ಒಂದೆ ದೇಹವಿದ್ದರು, ಎರಡು ದೇಹ ಬೆಸೆದುಕೊಂಡ ದೇಹ ನಮ್ಮದು, ಬುಜದ ಮೇಲೆ ಮಾತ್ರ ಎರಡು ತಲೆಗಳಿವೆ,  ಆದರೆ ಕೈ ಕಾಲುಗಳು ಮಾತ್ರ ಒಂದೆ ದೇಹದ್ದು,  ಎರಡು ಕುತ್ತಿಗೆ ಇರುವ ಕಾರಣ ಶ್ವಾಸಕೋಶ ಎರಡು ಜೊತೆ ಇವೆ, ಹೃದಯ ಮಾತ್ರ ಒಂದೆ, ಜೀರ್ಣಾಂಗಗಳು ಎರಡು ಜೊತೆ ಇವೆ ಹಾಗಾಗಿ ಪ್ರತ್ಯೇಕವಾಗಿ ಅಹಾರ ಸೇವನೆ, ಆದರೆ ಕಿಡ್ನಿ ಮಾತ್ರ ಹಂಚಿಕೊಳ್ಳ ಬೇಕು ಎರಡೆ ಇವೆ.
ಒಬ್ಬರು ಮಾತನಾಡುವಾಗ ಮತ್ತೊಬ್ಬರು ಮಾತನಾಡಲು ಹೋದರೆ ಶ್ವಾಸಕೋಶ ಒತ್ತಿದಂತೆ ಆಗಿ ತಡೆಯುತ್ತದೆ ಹಾಗಾಗಿ ಒಮ್ಮೆ ಒಬ್ಬರು ಮಾತ್ರ ಮಾತನಾಡುವೆವು, ಹಾಗೆ ಕೈಕಾಲುಗಳೆಲ್ಲ ಆಂಡ್ರಿಯಾ ಮಾತ್ರ ಉಪಯೋಗಿಸುವಳು. ಇದೆಲ್ಲ ನಮ್ಮಲಿಯ ವೈಪರೀತ್ಯ. ಇದೆಲ್ಲ ದೇಹಕ್ಕೆ ಸಂಬಂದಿಸಿದ್ದಾಯಿತು, ಆದರೆ ಇಬ್ಬರಿಗು ಯಾವುದೆ ಸ್ವತಂತ್ರ್ಯ ವಿಲ್ಲ, ಒಬ್ಬರೆ ಸ್ವತಂತ್ರವಾಗಿ ಏನು ಮಾಡಲಾರೆವು, ಇಬ್ಬರು ಜೊತೆ ಇರಲೆ ಬೇಕು" ಎಂದಳು. ಅದಕ್ಕೆ ತಕ್ಷಣ ಆಂಡ್ರಿಯ
"ಹಾಗೇನು ಇಲ್ಲ ದೇಹ ಪೂರ್ಣ ನನ್ನ ವಶದಲ್ಲಿದೆ, ಕೈ ಕಾಲುಗಳೆಲ್ಲ ನನ್ನವೆ , ನಾನಿಲ್ಲದೆ ಆಂಜಾಲಿನ ಏನು ಮಾಡಲಾರಳು" ಎನ್ನುತ್ತ ನಕ್ಕಳು, ಅದೇಕೊ ಆಂಜಾಲಿನಳ ಮುಖ ಸಪ್ಪೆಯಾಯಿತು.
ನಾವು ಸಮುದ್ರದ ದಡದಲ್ಲಿದ್ದವು, ಸುತ್ತಲು ನೋಡುವಾಗ ಯಾರು ನಮ್ಮನ್ನು ಗಮನಿಸುತ್ತಿಲ್ಲ ಅನ್ನುವಾಗ, ನಿದಾನಕ್ಕೆ ಕಾರಿನ ಬಾಗಿಲು ತೆರೆದು, ಆಕೆ ಸ್ವಲ್ಪ ಗಾಳಿಗೆ ಮುಖ ಒಡ್ಡಿ ನಿಂತಳು, ಸಮುದ್ರದ ಸಂಜೆಗತ್ತಲಿನ ನೋಟ ಆಕರ್ಷಕವಾಗಿತ್ತು, ದೂರದಲ್ಲಿ ಮಾರುತ್ತಿರುವ ತಿನಿಸುಗಳನ್ನು ನೋಡುತ್ತಿದ್ದರು. ಆಂಜಾಲಿನ ಕೇಳಿದಳು, 'ಅದೇನು ಅಲ್ಲೆಲ್ಲ ಗಾಡಿಗಳಲ್ಲಿ ಮಾರುತ್ತಿರುವ ತಿನಿಸುಗಳು , ತಿನ್ನುವಂತದ'.
ನಾನೆ ಹೇಳಿದೆ
"ಹೌದು  ಮುಂಬಯಿ ನಗರದ ಸ್ಪೆಶಲ್ ಎಂದರೆ ವಡಾಪಾವ್ ಇಲ್ಲಿ ಎಲ್ಲರಿಗು ಅಚ್ಚುಮೆಚ್ಚು, ತಿನ್ನುವಿರ ಹೋಗಿ ತರುವೆ" ಎಂದು ಕೇಳಿದೆ,
ಅವರು ನಗುತ್ತಿರುವಂತೆ , ಅಲ್ಲಿಂದ ಹೊರಟೆ, ಕೆಳಗೆ ಇಳಿದ ರಾಬರ್ಟ್ ಗಾಭರಿಯಾದಂತೆ ನಾನು
"ಏನು ಆಗುವದಿಲ್ಲ ಬನ್ನಿ ಹೋಗಿ ಬರೋಣ" ಎನ್ನುತ್ತ ಬಲವಂತವಾಗಿ ಹೊರಟು, ಅಲ್ಲಿ ಇದ್ದ ತಳ್ಳುಗಾಡಿಯ ಹತ್ತಿರ ಹೋಗಿ, ಎಲ್ಲರಿಗು ಸಾಲುವಷ್ಟು ವಡಪಾವ್ ಕಟ್ಟಿಸಿ ತಂದೆ. ಕಾರಿನ ಹತ್ತಿರ ಬಂದಂತೆ ,
ನಗುತ್ತ ನುಡಿದಳು ಆಂಜಾಲೀನ ಅವರ ತಂದೆಯ ಹತ್ತಿರ
"ನಾನು ಹೇಳಲಿಲ್ಲವೆ ಡ್ಯಾಡ್, ಇವನು ಕ್ರಿಸ್ ಎಂದು,  ನೋಡು ಎಲ್ಲ ಅವನದೆ ನಡವಳಿಕೆ, ನಮ್ಮ ಬಾಯಲ್ಲಿ ಬರುತ್ತಿರುವಂತೆ ಅದು ಏನೆ ಆಗಲಿ ಹೋಗಿ ತಂದು ಬಿಟ್ಟ" ಎಂದಳು ಸಂತಸದಿಂದ. ರಾಬರ್ಟ್ ಸಹ ನಗುತ್ತ ನನ್ನತ್ತ ನೋಡುತ್ತಿದ್ದರು.. ಅದನ್ನೆಲ್ಲ ಮುಗಿಸಿ , ನಾವು ಪುನಃ ಹೊರಟು, ಅದೆ ಹೋಟೆಲಿನ ಹಿಂಬಾಗದ ಬಾಗಿಲಿಗೆ ಸೇರಿ ಹೋಟೆಲಿನ ರೂಮ್ ಸೇರಿದಾಗ ರಾತ್ರಿ ಊಟದ ಸಮಯ.

ಊಟದ ಅಗತ್ಯವಿಲ್ಲದಿದ್ದರು, ರಾಬರ್ಟ್ ಊಟ ರೂಮಿಗೆ ತರುವಂತೆ ಆರ್ಡರ್ ಮಾಡಿದರು. ಮಾತನಾಡುತ್ತ ಊಟ ಮುಗಿಸಿದೆವು.
ರಾಬರ್ಟ್ ,
"ಸರಿ ಕ್ರಿಸ್ , ನೀವು ಸ್ವಲ್ಪ ಕಾಲ ಬೇಕಿದ್ದಲ್ಲಿ ಇವರೊಡನೆ ಹರಟೆ ಹೊಡೆಯುತ್ತ ಕುಳಿತಿರಿ, ನಾನು ನನ್ನ ರೂಮಿಗೆ ಹೋಗುವೆ ' ಎನ್ನುತ್ತ ಹೊರಟಾಗ, ಆತ ಸಹ ನನ್ನನ್ನು ಕ್ರಿಸ್ ಎಂದು ಕರೆದಿದ್ದಕ್ಕೆ ನನಗೆ ಆಶ್ಚರ್ಯವೆನಿಸಿತು.
ರಾಬರ್ಟ್ ಹೊರಟ ನಂತರ ಸ್ವಲ್ಪ ಕಾಲ ಮತ್ತೇನೆನೊ ಮಾತು ಮುಂದುವರೆಯಿತು. ಮತ್ತೆ ಅದೇನೊ ಕೋಜಾಯಿಂಡ್ ಟ್ವಿನ್ಸ್  ಕಡೆಗೆ ಮಾತು ಹೊರಳಿತು. ನಂತರ   ನಾನು ಕೇಳಿದೆ
"ಕೆಲವು ಪ್ರಕರಣಗಳಲ್ಲಿ  ಜಾಯಿನ್ ಆಗಿರೊ ಮಕ್ಕಳನ್ನು ಅಪರೇಷನ್ ಮಾಡಿ ಬೇರ್ಪಡಿಸುತ್ತಾರೆ ಅಲ್ಲವೆ?"
ಅದಕ್ಕೆ ಆಂಡ್ರಿಯ ಉತ್ತರಿಸಿದಳು
"ಅದೇನೊ ಸರಿ , ಆದರೆ ಅದು ಹೇಗೆ ಅಂಟಿಕೊಂಡಿದ್ದಾರೆ ಅನ್ನುವದರ ಮೇಲೆಯೆ ಅವಲಂಬಿಸಿದೆ, ಕೆಲವು ಪ್ರಕರಣದಲ್ಲಿ ಅವುಗಳಿಗೆ ಅಪಾಯವಾಗುವುದು ಇದೆಯಲ್ಲವೆ"" ಎಂದಳು.
"ಇರಬಹುದು ಈಗಂತು ವೈದ್ಯವಿಜ್ಞಾನ ಬಹಳ ಮುಂದುವರೆದಿದೆ, ಸೂಕ್ಷ್ಮ ರೀತಿಯ ಉಪಕರಣಗಳ ಅವಿಷ್ಕಾರ ಎಲ್ಲವು ಸೇರಿ , ಕೆಲವೊಮ್ಮೆ ಅಂತಹ ಪ್ರಕರಣದಲ್ಲಿ ಯಶಸ್ಸು ಸಿಗುವುದು ಇರುತ್ತದೆ" ಎಂದೆ
ಆಗ ಆಂಡ್ರಿಯ ನುಡಿದಳು
"ನಾವು ಅದರ ಬಗ್ಗೆಯೆ ಚಿಂತಿಸಿದೆವು, ನಿಜ ಹೇಳಬೇಕೆಂದರೆ ಭಾರತಕ್ಕೆ ಬರುವ ಕಾರಣಗಳಲ್ಲಿ ಅದು ಒಂದು, ಇಲ್ಲಿ ಕುಳಿತು ಒಂದು ನಿರ್ದಾರಕ್ಕೆ ಬರಬಹುದಾ ಎಂದು, ಅದಕ್ಕೆ ನಿನ್ನ ಸಲಹೆಯನ್ನು ನಿರೀಕ್ಷಿಸಿದ್ದೇವೆ, ಅದೇನೊ ನಿನ್ನ ಬಳಿ ಮಾತನಾಡುವಾಗ ಕ್ರಿಸ್ ಬಳಿ ಮಾತನಾಡುವಂತೆ ಅನ್ನಿಸುತ್ತೆ, ನೀನು ಕೆಲವೊಮ್ಮೆ ತುಂಬಾ ತರ್ಕಬದ್ದ ವಾಗಿ ಮಾತನಾಡುತ್ತೀಯ, ಅದು ನಮಗೆ ಸಹಾಯ ಮಾಡಬಹುದು" ಎಂದಳು.
"ಅದೇನೊ ಸರಿ, ಆದರೆ ಇದು ವೈದ್ಯಕೀಯ ಕ್ಷೇತ್ರ ಹಾಗು ನಿಮ್ಮಿಬ್ಬರ ನಿರ್ದಾರಕ್ಕೆ ಸೇರಿರುವಂತದ್ದು, ಅಲ್ಲದೆ ನಿಮ್ಮಿಬ್ಬರಲ್ಲಿ ಬೇರೆಯಾಗುವ ಸಾದ್ಯತೆಗಳೆ ಇಲ್ಲ, ನೀವು ಹೆಚ್ಚು ಕಡಿಮೆ ಒಂದೆ ದೇಹ ಹಂಚಿಕೊಂಡಿರುವಿರಿ, ಹಾಗಿರುವಾಗ ಆಪರೇಷನ್ ಬಗ್ಗೆ ಅದು ಹೇಗೆ ಚಿಂತಿಸಲು ಸಾದ್ಯ?" ಎಂದೆ
"ಅದೇನೊ ನಿಜ ಆದರೆ, ಜೀವನ ಪೂರ್ತಿ ಈ ರೀತಿಯ ನರಕ ಸದೃಷ್ಯವಾದ ಬಾಳು ಹೇಗೆ ಬಾಳುವುದು ಕ್ರಿಸ್ , ಯಾವುದಕ್ಕು ಸ್ವಾತಂತ್ರ್ಯವಿಲ್ಲ, ಎಲ್ಲಿಯು ಹೋಗುವಂತಿಲ್ಲ, ಹೋದರೆ ಸಾಕು ಜನರ ಪಾಲಿಗೆ ನಾವು  ಪ್ರಾಣಿಸಂಗ್ರಹಾಲದಲ್ಲಿನ ಪ್ರಾಣಿಗಳಂತೆ ಭಾವಿಸುತ್ತಾರೆ, ವಿಚಿತ್ರ ಪ್ರಶ್ನೆಗಳಿಂದ ಮನ ನೋಯಿಸುತ್ತಾರೆ, ಇದಕ್ಕಿಂದ ಅಪರೇಶನ್ ಉತ್ತಮ ಎಂದು ಇಬ್ಬರು ಅಂದುಕೊಂಡೆವು, ಆದರೆ ಡಾಕ್ಟರಗಳ ಅಭಿಪ್ರಾಯ ಬೇರೆ, ಅವರು ನಮ್ಮ ದೇಹದ ರಿಪೋರ್ಟ್ ನೋಡಿ, ಒಬ್ಬರು ಮಾತ್ರ ಉಳಿದು ಕೊಳ್ಳಬಹುದು, ಒಂದು ತಲೆ, ಕರುಳು, ಮತ್ತು ಕಿಡ್ನಿಗಳನ್ನು ತೆಗೆಯಬಹುದೆ,  ಸ್ವಲ್ಪ ಪ್ರಯತ್ನ ಪಟ್ಟಲಿ ಹಣೆದುಕೊಂಡಿರುವ ಬೆನ್ನೆಲಬು ಬೇರೆ ಮಾಡಬಹುದು, ಆದರೆ ಉಳಿಯುವ ಒಬ್ಬರ ಜೀವನ ಸಹ, ಹೀಗೆ ಎಂದು ಹೇಳಲು ಸಾದ್ಯವಿಲ್ಲ, ಮೆದುಳಿಗೆ ಅಪಾಯ ಆಗುವ ಸಾದ್ಯತೆ ಇದೆ, ಎನ್ನುತ್ತಾರೆ, ನನಗಂತು ಇಂತ ಬದುಕು ಬೇಸತ್ತು ಹೋಗಿದೆ, ನಾನು ಹೇಳಿರುವೆ ನನ್ನ ತಲೆಯನ್ನೆ ತೆಗೆದು ಬಿಡಿ, ಬೇಕಿದ್ದಲ್ಲಿ ಅಂಜಾಲೀನ ಇರಲಿ ಎಂದು" ಎಂದಳು, ಅವರಿಬ್ಬರ ಕಣ್ಣುಗಳಲ್ಲಿ ನೀರು ತುಂಬಿ ಹರಿಯುತ್ತಿತ್ತು,

"ಇಲ್ಲ ಅಷ್ಟು ಸುಲುಭವಾಗಿ ನಿರ್ದರಿಸಬೇಡಿ, ಕೇವಲ ದೇಹದ ತೊಂದರೆ , ಮತ್ತು ಹೊರಗಿನವರ ಭಾವನೆ ನಿಮ್ಮ ನಿರ್ದಾರಕ್ಕೆ ಕಾರಣವಾಗಬಾರದು" ಎಂದೆ.

ಆಂಡ್ರಿಯ ಏಕೊ ಮಾತನಾಡುವ ಮೂಡ್ ಕಳೆದುಕೊಂಡಳು ಅನ್ನಿಸುತ್ತೆ,
"ಕ್ರಿಸ್  ಆಂಜಾಲಿನ ನೀವಿಬ್ಬರು ಮಾತನಾಡುತ್ತಿರಿ, ಅದೇಕೊ ನನಗೆ ಈ ವಿಷಯ ಚರ್ಚಿಸಲು ಮನಸಾಗುತ್ತಿಲ್ಲ, ನನಗೇನೊ ಅಪರೇಶನ್ ಉತ್ತಮ ನಿರ್ದಾರ ಅನ್ನಿಸುತ್ತೆ,  ಬದುಕಿಗಿಂತ ಸಾವೆ ಮನಸಿಗೆ ಹತ್ತಿರವೆನ್ನಿಸುತ್ತೆ"  
ಎನ್ನುತ್ತ ಆಂಡ್ರಿಯ, ಎದ್ದು ಹಾಗೆ ನಿದಾನಕ್ಕೆ ಮಂಚದ ಮೇಲೆ ಒರಗಿದಳು, ದಿಂಬನ ಮೇಲೆ ತಲೆಯಿಟ್ಟು ನಿದ್ದೆ ಮಾಡುವಳಂತೆ ಕಣ್ಣು ಮುಚ್ಚಿದಳು,.
ನಾನು
"ಸರಿ , ನಿಮಗೆ ನಿದ್ದೆಯ ಸಮಯ ಆಯಿತು ಅನ್ನಿಸುತ್ತೆ, ನಾನು ನನ್ನ ರೂಮು ಸೇರುತ್ತೇನೆ" ಎನ್ನುತ್ತ ಎದ್ದೆ. ಆಂಜಾಲೀನ ತಕ್ಷಣ ಎಂಬಂತೆ
"ಬೇಡ ಕ್ರಿಸ್ ಮತ್ತು ಸ್ವಲ್ಪ ಹೊತ್ತು ಕುಳಿತಿರು, ನನಗೆ ಅದೇನೊ ನಿನ್ನ ಜೊತೆ ಇನ್ನು ಮಾತನಾಡಬೇಕು ಎಂದು ಅನಿಸುತ್ತದೆ" ಎಂದಳು.
"ಆದರೆ ನಿನ್ನ ಮಾತಿನಿಂದ, ಆಂಡ್ರಿಯಾಗೆ ತೊಂದರೆ ಅನಿಸುವದಲ್ಲವೆ" ಎಂದೆ. ಆಕೆ ನಗುತ್ತಿದ್ದಳು
"ಅದೇನು ಇಲ್ಲ, ನೋಡು ಆಗಲೆ ಅವಳು ನಿದ್ದೆಗೆ ಜಾರಿದಳು, ಇದೇ ನೋಡು ಕ್ರಿಸ್ ಮತ್ತೊಂದು ವಿಚಿತ್ರ, ಆಂಡ್ರಿಯಾಗೆ ಹಾಸಿಗೆಗೆ ತಲೆಯಿಡುವಾಗಲೆ ನಿದ್ದೆ ಬಂದುಬಿಡುತ್ತದೆ, ನನಗೆ ಹಾಗಲ್ಲ, ರಾತ್ರಿ ಎಲ್ಲ ಕೆಲವೊಮ್ಮೆ ಎಚ್ಚರ ಇದ್ದೆ ಇರುತ್ತದೆ.  ಮತ್ತೊಂದು ಸಂಗತಿ ಗೊತ್ತ, ಒಮ್ಮೆ  ಅವಳು ಮಲಗಿದಳು ಎಂದರೆ ಮುಗಿಯಿತು, ನಾನು ಎಷ್ಟು ಕೂಗಿದರು ಅವಳಿಗೆ ಎಚ್ಚರವಾಗಲ್ಲ, ಅವಳಿಗೆ ಎಚ್ಚರಿಸಲು ಹೊರಗಿನವರು ಯಾರಾದರು ಕೂಗಲೆ ಬೇಕೆ, ನಾನು ಎಷ್ಟು ಜೋರಾಗಿ ಕೂಗಾಡಿದರು ಎಚ್ಚರವಾಗದ ಅವಳಿಗೆ ಹೊರಗಿನವರು ಸಣ್ಣಗೆ ಒಮ್ಮೆ ಕೂಗಿದರು ಸಾಕು ಎದ್ದು ಕೂಡುವಳು. ಅವಳು ಏಳುವ ತನಕ ನಾನು ಕಾಯಲೆ ಬೇಕು, ನನಗಂತು ಈ ದೇಹದ ಮೇಲೆ ಯಾವ ಸ್ವಾತಂತ್ರ್ಯವು ಸಹ ಇಲ್ಲ" ಎಂದಳು
"ಆಂಜಾಲೀನ , ಕೆಲವು ಸಂದರ್ಭ ಹಾಗಿನ್ನಿಸಬಹುದು ಆದರೂ ಸಹ ನನಗೇಕೊ ಈ ಆಪರೇಶನ್ ಸರಿಯಲ್ಲ ಎಂದೆ ಅನ್ನಿಸುತ್ತದೆ, ಅಲ್ಲದೆ ಅಪರೇಷನ್ ನಂತರ ಎಲ್ಲ ಸರಿ ಹೋಗುತ್ತದೆ ಅನ್ನುವಾಗಲು, ನಿಮ್ಮಿಬ್ಬರಲ್ಲಿ ಯಾರೊ ಒಬ್ಬರು ಇರಲ್ಲವಲ್ಲ" ಎಂದೆ. ಅವಳು ನೋವಿನಿಂದ ನಕ್ಕಳು.
"ಯಾರೊ ಏನು ಕ್ರಿಸ್, ನಿಮಗೆ ಇಷ್ಟಾದ ಮೇಲು ಅರ್ಥವಾಗಲಿಲ್ಲವೆ,  ನಾನು ಡಾಕ್ಟರಗಳ ಎಲ್ಲ ಅಭಿಪ್ರಾಯ ಕೇಳಿಸಿಕೊಂಡಿರುವೆ, ಅವರು ಹೇಳುವದಾದರು ಏನು, ಒಂದು ಶಿರವನ್ನು ಉಳಿಸಿಕೊಂಡು, ಮತ್ತೊಂದು ಶಿರ ಮತ್ತು ಅದಕ್ಕೆ ಸಂಬಂದಿಸಿದ ಬಾಗ ಆಪರೇಶನ್ ನಿಂದ ತೆಗೆಯಬಹುದು ಎಂದು, ನೀವೆ ಯೋಚಿಸಿ, ನನಗೆ ಈ ದೇಹದ ಕೈ, ಕಾಲುಗಳ ಮೇಲೆ ಸ್ವತಂತ್ರವಿಲ್ಲ, ನಾನಿದ್ದು ಅವಳ ತಲೆ ತೆಗೆಯುತ್ತಾರೆ ಅನ್ನುವದಾದರೆ, ಆಗ ದೇಹ ನಿಶ್ಚಲವಾಗಿರುತ್ತದೆ, ಸ್ವ್ಲಲ್ಪ ಯೋಚಿಸಿದರು ತಿಳಿಯುತ್ತೆ ನನ್ನನ್ನೆ ಬೇರ್ಪಡಿಸುತ್ತಾರೆ ಎಂದು, ಅದು ಆಂಡ್ರಿಯಾಗು ಸಹ ತಿಳಿಯದೆ ಏನಿಲ್ಲ ಆದರು, ಗೊತ್ತಿಲ್ಲದಂತೆ ನಟಿಸುತ್ತಾಳೆ" ಎಂದಳು, ಅವಳ ದ್ವನಿ ಕಟ್ಟಿಕೊಂಡು ಅಳುವಂತೆ ಇತ್ತು.
ಅವಳು ಮತ್ತೆ ಹೇಳಿದಳು,
"ನಿನಗೆ ಹೇಗೆ ಹೇಳಲಿ ಕ್ರಿಸ್, ಆಂಡ್ರಿಯ ಸ್ವಭಾವ ಸದಾ ಜೊತೆಗಿರುವ ನನಗೆ ಎಂದು ಅರ್ಥವಾಗಿಲ್ಲ, ಒಮ್ಮೆ ನನ್ನನ್ನು ಅತಿಯಾಗಿ ಪ್ರೀತಿಸುವಳು ಅನ್ನಿಸುತ್ತೆ,ಮತ್ತೊಮ್ಮೆ ನನ್ನನ್ನು ಅಷ್ಟೆ ತೀವ್ರವಾಗಿ ದ್ವೇಷಿಸುವಳು, ಸದಾ ನಾನು ಜೊತೆಗಿರುವುದು ಅವಳಿಗೆ ಇಷ್ಟವಿಲ್ಲ, ಹಾಗಾಗಿಯೆ ಈ ಅಪರೇಶನ್ ಪ್ರಸ್ತಾಪ, ನನಗಂತು ಅದು ಭಯ ಅನ್ನಿಸುತ್ತೆ ,ಇಷ್ಟವು ಇಲ್ಲ" ಎಂದಳು.

ನಾನು ಬೇಕೆಂದೆ ಸ್ವಲ್ಪ ಅಸಂಬದ್ದವಾಗಿ ಕೇಳಿದೆ.

"ನೀನು ಏಕೆ, ಕೈ ಕಾಲುಗಳನ್ನು ಅಲುಗಾಡಿಸಲು ಪ್ರಯತ್ನಿಸಲ್ಲ, ಅದೇಕೆ ಹಾಗೆ, ಇಬ್ಬರಿಗು ಮೆದುಳು ಹಾಗು ಬೆನ್ನುಮೂಳೆ ಇರಬೇಕಾದರೆ, ನಿನಗು ಕೈಕಾಲುಗಳ ಮೇಲಿನ ಹಿಡಿತ ಸಾದ್ಯವಾಗಬೇಕಲ್ಲವೆ "ಎಂದೆ
"ಅದೇನೊ ಮೊದಲಿನಿಂದಲು ಹಾಗೆ,  ಅವಳು ಮಾತನಾಡುವಾಗ ನಾನು ಆಡಲ್ಲ, ಶ್ವಾಸಕೋಶ ಒತ್ತಿದಂತೆ ಆಗುತ್ತೆ , ಇಬ್ಬರು ಒಟ್ಟಿಗೆ ಮಾತನಾಡಲ್ಲ, ಹಾಗೆ ಕೈಕಾಲುಗಳು ಅವಳ ವಶದಲ್ಲಿವೆ ನಾನು ಎಂದು ಅದನ್ನು ಉಪಯೋಗಿಸಲು ಪ್ರಯತ್ನಿಸಿಲ್ಲ " ಎಂದಳು.
ನನಗೆ ಈಗ ಅರ್ಥವಾಗಿತ್ತು, ಅದು ಅವರಿಬ್ಬರ ಮನಸಿನಲ್ಲಿ ಅವರೆ ಕಟ್ಟಿ ಬಿದ್ದಿರುವ ಅಭ್ಯಾಸ, ಅವರಿಗೆ ಅವರೆ ನಿಯಮಿಸಿಕೊಂಡಿರುವ ಮಾನಸಿಕ ನಿಯಮ. ಕೇವಲ ಅನುಕೂಲಕ್ಕಾಗಿ, ಇಬ್ಬರು ಒಟ್ಟಿಗೆ ಪ್ರಯತ್ನಿಸಿದರೆ ದೇಹದಲ್ಲಿ ಗೊಂದಲ ಹಾಗಾಗಿ ಮೊದಲಿನಿಂದ ಆಂಜಾಲೀನ ಸುಮ್ಮನೆ ಇದ್ದು , ಆಂಡ್ರಿಯ ದೇಹದ ಮೇಲೆ ಹಿಡಿತ ಸಾದಿಸಿದ್ದಾಳೆ ಅನ್ನಿಸಿತು. ಡಾಕ್ಟರ್ ಗಳು ಇವರ ದೇಹ ಬಾಷೆಯನ್ನು ಅರ್ಥಮಾಡಿಕೊಂಡಿದ್ದಾರೆ ಆದರೆ ಮನಸಿನ ಬಾಷೇ ಅಭ್ಯಾಸಿಸಲಿಲ್ಲ ಅನ್ನಿಸುತ್ತೆ,  ಆದರೆ ಅದನ್ನು ಆಂಜಾಲೀನಬಳಿ ಹೇಳಲು ಹೋಗಲಿಲ್ಲ.
ಆಗ ಆಕೆ, "ಸರಿ ಕ್ರಿಸ್, ಅದೇನೊ ನನಗು ಆಯಾಸ ಅನ್ನಿಸುತ್ತಿದೆ, ಸ್ವಲ್ಪ ನಿದ್ದೆ ಮಾಡುವೆ , ರಾತ್ರಿ ತಡವಾಯಿತು, ನೀನು ಹೋಗಿ ಮಲಗು, ಒಂದು ಸಹಾಯ ಮಾಡು, ನನ್ನ ತಲೆಯ ಕೆಳಗಿರುವ ದಿಂಬನ್ನು ಸರಿಯಾಗಿ ಹೊಂದಿಸು, ಅವಳ ಕುತ್ತಿಗೆ ಎತ್ತರ ಆದ್ದರಿಂದ ಈ ತೊಂದರೆ ಎಂದಳು"
ನಾನು ಸರಿ ಎನ್ನುತ್ತ ಅವಳ ಹತ್ತಿರ ಹೋಗಿ, ಅವಳು ಹೇಳಿದಂತೆ ದಿಂಬನ್ನು ಸರಿ ಪಡಿಸಿದೆ, ಮತ್ತೆ ಕಾಲ ಕೆಳಗಿದ್ದ ಬೆಡಶೀಟನ್ನು ಸೊಂಟದವರೆಗು ಬರುವಂತೆ ಹೊದ್ದಿಸಿ,
"ಸರಿ ಆಂಜಾಲೀಯ, ಬೆಳಗ್ಗೆ ಮಾತನಾಡುವ ಮತ್ತೆ ಸಿಗುವೆ, ಗುಡ್ ನೈಟ್ " ಎನ್ನುತ್ತ, ಕೈ ಆಡಿಸಿದೆ,
ಆಕೆಯು ಗುಡ್ ನೈಟ್ ಆನುವಾಗ ಅದೇಕೊ ನನ್ನ ಗಮನ ಅವಳ ಬಲಗಡೆಯ ಕೈಗಳ ಕಡೆ ಹೋಯಿತು, ಕೈ ಪೂರ್ತಿ ಎತ್ತದಿದ್ದರು ಸಹ, ಮುಂಗೈ ನಿದಾನಕ್ಕೆ ನನ್ನ ಕಡೆ ಬೈ ಅನ್ನುವಂತೆ ಚಲಿಸಿತು. ನನ್ನ ಮುಖದ ಮೇಲೆ ನಗುವೊಂದು ಹರಿಯಿತು ಅನ್ನಿಸುತ್ತೆ, ಅವರ ದೇಹಭಾವದ ಅರ್ಥ ನನಗೇನೊ ಸ್ವಲ್ಪ ಆದಂತೆ ಅನ್ನಿಸಿತು. ನಾನು ರೂಮಿನ ಹೊರಬಾಗಿಲಿನ ಆಟೊ ಲಾಕ್ ರಿಲೀಸ್ ಮಾಡಿ ಹೊರಬಂದು, ಬಾಗಿಲು ಎಳೆದುಕೊಂಡೆ, ಬಾಗಿಲು ಒಳಗಿನಿಂದ ಲಾಕ್ ಆಯಿತು.
.
.


ಬೆಳಗ್ಗ್ಗೆ ಸ್ನಾನ ಮುಗಿಸಿ, ಎಲ್ಲರು ಒಟ್ಟಿಗೆ ಬೆಳಗಿನ ಉಪಹಾರಕ್ಕೆ ಕುಳಿತಿದ್ದೆವು,  ರಾಬರ್ಟ್ ಹಾಗು ಆಂಜಾಲಿನ, ಆಂಡ್ರಿಯಾಗೆ ಸಂಜೆಯ ಪ್ಲೈಟ್ ನಲ್ಲಿ ಅಮೇರಿಕಾಗೆ ಸೀಟ್ ರಿಸರ್ವ ಆಗಿತ್ತು, ನಾನು ಸಹ ಹೋಟೆಲಿನಿಂದಲೆ, ಬೆಂಗಳೂರಿಗೆ ಟ್ರೈನ್ ನಲ್ಲಿ ತತ್ಕಾಲ್ ನಲ್ಲಿ ಟೆಕೆಟ್ ಗಳಿಸಿದ್ದೆ. ಉಪಹಾರದ ನಂತರ ಹೇಳಿದೆ.
"ಆಂಜಾಲಿಯ ಹಾಗು ಆಂಡ್ರಿಯಾ, ನನಗೆ ನಿಮ್ಮಿಬ್ಬರ ನಿರ್ದಾರ ಸರಿ ಎಂದು ಅನ್ನಿಸುತ್ತಿಲ್ಲ, ಅಪರೇಶನ್ ಇದೆಲ್ಲ ಯೋಚನೆ, ಕೈಬಿಡಿ " ಎಂದೆ
ಆಂಡ್ರಿಯ "ಅದೇಕೆ ತಪ್ಪು ನಿರ್ದಾರ ಎಂದು ಬಿಡಿಸಿ ಹೇಳು ಕ್ರಿಸ್" ಎಂದಳು .
ನಾನು
"ಬಹುಷಃ ನಿಮ್ಮ ಈ  ತಪ್ಪು ನಿರ್ದಾರಕ್ಕೆ ನಿಮ್ಮ ತಂದೆಯ ತಪ್ಪು  ಕಾರಣವಿದೆ"  ಎಂದೆ.
ಆಗೊಂದು ವಿಚಿತ್ರ ನಡೆಯಿತು ಆಂಡ್ರಿಯಾ ಹಾಗು ಆಂಜಾಲೀನ ಒಟ್ಟಿಗೆ "ಅದು ಹೇಗೆ" ಅಂದರು, ನಂತರ ಒಬ್ಬರಿಗೊಬ್ಬರು ನೋಡಿಕೊಂಡರು,  
ಎಲ್ಲರು ಆಶ್ಚರ್ಯದಿಂದ ನನ್ನತ್ತ ನೋಡಿದರು. ನಾನು ನಗುತ್ತ,
"ಮತ್ತೇನಿಲ್ಲ, ನಿಮ್ಮ ತಂದೆ ಹೆಸರಿಡುವಾಗ, ಅದೇಕೆ ಎರಡು ಹೆಸರಿಟ್ಟರೊ ತಿಳಿದಿಲ್ಲ, ಆಗಲೆ ನಿಮ್ಮಲ್ಲಿ ಇಬ್ಬರೆಂಬ ಭಾವ ಉಂಟಾಗಿದೆ, ಅದೇ ತಪ್ಪು ಭಾವನೆ, ಎರಡು ತಲೆಯಿರಬಹುದು ಏನೆ ಇರಬಹುದೆ , ನಿಮ್ಮದು ಒಂದೆ ವ್ಯಕ್ತಿತ್ವ. ಬಹುಷಃ ನೀವು ಬೇರೆ ಬೇರೆಯಾಗಿ ಚಿಂಸಿಸುವದರಿಂದ ನಿಮಗೆ ಇಬ್ಬರು ಎಂದೆನಿಸಬಹುದು. ಆದರೆ ಒಂದುವೇಳೆ ನಿಮ್ಮಿಬ್ಬರಿಗು ಸೇರಿ ಒಂದೆ ಹೆಸರಿದ್ದರೆ ಏನು ಮಾಡುತ್ತಿದ್ದೀರಿ, ದೇಹವನ್ನು ನನ್ನದು ನನ್ನದು ಎಂದು ಹೇಗೆ ಚಿಂತಿಸುತ್ತಿದ್ದೀರಿ, ನೀವೆ ಕೇಳಿದಂತೆ , ನಮ್ಮ ಹಿಂದು ಪುರಾಣಗಳಲ್ಲಿ ಬ್ರಹ್ಮ, ಆಗಲಿ ಅಥವ ರಾವಣ ಆಗಲಿ ಅದು ಕಲ್ಪನೆಯೊ ಅಥವ ನಿಜವೊ ಆಗಲಿ ಅವರಿಗೆ ಒಂದೊಂದು ತಲೆಗು ಒಂದು ಹೆಸರಿಟ್ಟಿದ್ದರೆ ಹೇಗಿರುತ್ತಿತ್ತು, ಅಲ್ಲವ ಆಗ ಅದೆಷ್ಟು ಸಮಸ್ಯೆ ಉಂಟಾಗುತ್ತಿತ್ತು ಚಿಂತಿಸಿ. ಹಾಗಾಗಿ ನಿಮಗೆ ದೇಹದ ಮೇಲೆ ಅಧಿಕಾರದ ಚಿಂತನೆ ಹೊಕ್ಕಿದೆ" ಎಂದೆ. ಅವರಿಬ್ಬರು ಅರ್ಥವಾಗದವರಂತೆ ನೋಡಿದರು. ನಾನು ಮತ್ತೆ ಹೇಳಿದೆ
"ನೋಡಿ ನಮಗೆ ಎರಡು ಕೈಗಳು, ಕಾಲುಗಳಿವೆ, ನಾನೆಲ್ಲಾದರು ಇದು ಒಬ್ಬನದು , ಬಲಕೈ ಮತ್ತೊಬ್ಬನದು ಎಂದು ಚಿಂತಿಸುತ್ತೇನೆಯೆ? , ಹಾಗೆ ನಿಮಗಿರುವ ದೇಹಕ್ಕೆ ಎರಡು ತಲೆಗಳಿವೆ ಎಂದುಕೊಳ್ಳಿ, ಹಾಗಾದಾಗ, ಇಬ್ಬರ ಪ್ರಶ್ನೆಯೆ ಬರಲ್ಲ. ನಿಮಗೆ ಅರ್ಥವಾಗುತ್ತೊ ಇಲ್ಲವೊ , ನೀವು ನಮ್ಮ ಧರ್ಮದ ಬಗ್ಗೆ ಓದುವಾಗ ಆತ್ಮದ ಬಗ್ಗೆ ಕೇಳಿರುತ್ತೀರಿ ಅಥವ ನಿಮ್ಮ ಬಾಷೆಯಲ್ಲಿ soul ಎಂದುಕೊಳ್ಳಿ,  ಯಾವುದೆ ದೇಹದಲ್ಲಿ ಜೀವ ಅಥವ ಆತ್ಮ ಒಂದೆ ಇರಲು ಸಾದ್ಯ, ಹಾಗಿರುವಾಗ ನೀವು ತಲೆಗಳನ್ನು ಮಾತ್ರ ಲೆಕ್ಕ ತೆಗೆದು ನಿರ್ದಾರಿಸಲಾರಿರಿ, ಅಲ್ಲದೆ ನಮ್ಮಗಿರುವ ದೇಹ ನಮ್ಮದು, ಪ್ರಕೃತಿ ನಮಗೆ ಕೊಟ್ಟಿರುವುದು, ಅದು ಹೇಗಿದೆಯೊ ಹಾಗೆ ಸ್ವೀಕರಿಸುವುದು  ಅನಿವಾರ್ಯ, ಬದುಕಿನಲ್ಲಿ ಎಲ್ಲವನ್ನು ಅಷ್ಟೆ ನಮಗೆ ಹೇಗೆ ದೊರೆಯುತ್ತದೆ ಹಾಗೆ ಸ್ವೀಕರಿಸಬೇಕು. ಇದು ನನ್ನ ತತ್ವ,  ಯಾರಿಗೋಸ್ಕರವೊ, ಯಾವ ಕಾರಣಕ್ಕೊ ನನಗಿರುವುದು ಸರಿ ಇಲ್ಲ, ನನ್ನ ದೇಹ ವಿಕಲ್ಪ ಅಂದುಕೊಳ್ಳುವದೆಲ್ಲ ತಪ್ಪು. ಪ್ರಕೃತಿ ನಮಗೆ ಈ ದೇಹಕೊಡಲು ಏನೊ ಕಾರಣವಿದೆ , ಅದನ್ನು ಶಾಪ ಎನ್ನುವದಕ್ಕಿಂದ ವರ ಅಂದುಕೊಳ್ಳುವದರಲ್ಲಿಯೆ ಜಾಣತನವಿದೆ ಅಲ್ಲವೆ" ಎಂದೆ. ಅವರಿಬ್ಬರು ಮೌನವಾಗಿದ್ದರು. ನಾನು ಮತ್ತೆ ನುಡಿದೆ
"ಒಮ್ಮೆ ಯೋಚಿಸಿ, ಕ್ರಿಸ್ ನಿಮ್ಮ ಚಿಕ್ಕಪ್ಪ,  ಎಂದೊ ಜೊತೆಗಿದ್ದವ, ಈಗ ಇಲ್ಲ, ಹಾಗಿರುವಾಗ ಅವನಿಲ್ಲ ಎಂದು ಎಷ್ಟು ನೊಂದುಕೊಳ್ಳುವಿರಿ ಅಲ್ಲವೆ, ಹಾಗಿರುವಾಗ ನಿಮ್ಮದೆ ದೇಹದ ಬಾಗವಾಗಿರುವ ಒಂದು ತಲೆಯನ್ನು ತೆಗೆದ ನಂತರ ಉಳಿದ ಮತ್ತೊಬ್ಬರು ಸುಖವಾಗಿ ನೆಮ್ಮದಿಯಾಗಿ ಇರುವಿರ, ಸುಖವಾಗಿರುವೆವು ಎಂದು ನಿಮಗೆ ಅನ್ನಿಸುತ್ತದೆಯೆ. ಹುಟ್ಟಿನಿಂದ ಜೊತೆಗೆ ಇರುವ  ದೇಹದ ಬಾಗವನ್ನು ತೊರೆದು, ನೀವು ಬದುಕ ಬಲ್ಲಿರ, ಜೀವನಪೂರ್ತಿ ಅದು ಕೊರಗಾಗಿ ಕಾಡುವದಲ್ಲ, ನೀವು ಪ್ರತಿ ಸಾರಿ ಪಕ್ಕಕ್ಕೆ ತಿರುಗಿದಾಗಲು, ಮತ್ತೊಂದು ಮುಖ ನೆನಪಿಗೆ ಬರುವದಿಲ್ಲವೆ, ಅದು ಕೊಲೆ ಎಂದು ನಿಮಗನಿಸುವದಿಲ್ಲವೆ, ಈ ಎಲ್ಲ ಭಾವನೆಗಳ ಹಿನ್ನಲೆಯಲ್ಲಿ ಯೋಚಿಸಿ, ನಿಮ್ಮ ನಿರ್ದಾರವನ್ನು ಬದಲಾಯಿಸಿ ಎಂಬುದೆ ನನ್ನ ಸಲಹೆ, ನನಗಂತು ನಿಮ್ಮ ಈಗಿರುವ ದೇಹ ರೂಪವನ್ನು ಹೊರತುಪಡಿಸಿ ಬೇರೆ ರೀತಿ ಕಲ್ಪಿಸಲು ಸಾದ್ಯವಿಲ್ಲ" ಎಂದು ಮಾತು ನಿಲ್ಲಿಸಿದೆ. ರಾಬರ್ಟ್ ಸಹ ಗಂಭೀರವಾಗಿ ಕೇಳುತ್ತಿದ್ದರು.
ಸ್ವಲ್ಪ ಕಾಲ ಬಿಟ್ಟು ಹೇಳಿದೆ 'ಆಂಡ್ರಿಯ ಮತ್ತು ಆಂಜಾಲೀನ, ನಾನು ನಿಮ್ಮ ನೋಡಿದಾಗ ಪ್ರಥಮ ಬಾರಿಗೆ ಹೇಳಿದ ವಾಕ್ಯವನ್ನೆ ಪುನಃ ಹೇಳುವೆ , ನಿಸರ್ಗದ ನಿಯಮದ ಮುಂದೆ ನಾವು ಅಸಹಾಯಕರು ನೀವು ಇದನ್ನು ತೊಂದರೆ ಅಂದುಕೊಳ್ಳುವದಕ್ಕಿಂತ ಅನುಕೂಲ ಅಂದುಕೊಳ್ಳಿ"
ಕಡೆಗೊಮ್ಮೆ ನಗುತ್ತ ಹೇಳಿದೆ "ಆಂಜಾಲೀನ ನನಗೆ ಅನ್ನಿಸುತ್ತೆ  ಆಂಡ್ರೀಯ ಮಲಗಿದ್ದಾಗ ನಿನ್ನ ದಿಂಬು ನೀನೆ ಸರಿಮಾಡಿಕೊಳ್ಳಬಲ್ಲೆ ಇಂದಿನಿಂದ ಪ್ರಯತ್ನಿಸು"
.
.

.
ಸುಮಾರು ಹದಿನೈದು ದಿನವಾಗಿತ್ತು, ನನಗೆ ಒಂದು ಈ ಮೈಲ್ ಇತ್ತು
"ಕ್ರಿಸ್, ನನಗೆ ನೀನು ಹೇಳಿದ್ದೆ ಸರಿ ಅನ್ನಿಸುತ್ತಿದೆ, ಈಗ ನಿರ್ದಾರ ಬದಲಾಗಿದೆ, ನನ್ನ ದೇಹ ಈಗ ಹೇಗಿದೆಯೊ ಅದೇ ಚೆನ್ನಾಗಿದೆ, ನಿನ್ನ ತಿಳುವಳಿಕೆಗಾಗಿ ಥ್ಯಾಂಕ್ಸ್" ಎಂದಿತ್ತು,

ಕಡೆಯಲ್ಲಿ   ಮೊದಲೆಲ್ಲ ಇದ್ದ ಹೆಸರು "ಆಂಜಾಲೀನ ಅನ್ಸಾಲಿ" -  "ಆಂಡ್ರಿಯಾ ಅನ್ಸಾಲಿ"  ಗೆ ಬದಲಾಗಿ  "ಆಂಜಾಲೀನಆಂಡ್ರಿ" ಎಂದಿತ್ತು
- ಮುಗಿಯಿತು.

----------------------------------










No comments:

Post a Comment

enter your comments please