ಅಮ್ಮನ ಕೆಲಸ
=========
'ಎದ್ದೇಳಪ್ಪ ಹೊತ್ತಾಯಿತು, ನನಗೆ ಇನ್ನು ತುಂಬಾ ಕೆಲಸವಿದೆ, ನೀನು ಎದ್ದರೆ ಹಾಸಿಗೆ ಸುತ್ತಿಟ್ಟು ಕಸಗುಡಿಸಬಹುದು, ಈದಿನ ಯುಗಾದಿ ಹಬ್ಬವಲ್ಲವ, ಬೇಗ ಎದ್ದು ತಲೆಗೆ ಎಣ್ಣೆ ಇಟ್ಟು ನೀರು ಹಾಕಿಕೊ'
ಅಮ್ಮನ ದ್ವನಿ ಜಾಸ್ತಿಯಾದಷ್ಟು , ಮತ್ತಷ್ಟು ಮುದುಡಿ ಮಲಗಿದೆ, ಎರಡು ಕೈಗಳನ್ನು ಕಾಲುಗಳ ಮದ್ಯೆ ತೂರಿಸಿ, ಚಳಿಗೆ ರಕ್ಷಣೆ ಪಡೆಯುತ್ತ, ಹೊದ್ದಿಕೆಯೊಳಗೆ ತೂರಲು ಪ್ರಯತ್ನಿಸಿದೆ,
"ಒಳ್ಳೆ ಒನಕೆಬಂಡಿ ತರ ಸುತ್ತುಕೊಳ್ತಿದ್ದಿಯಲ್ಲ, ನನಗೆ ತುಂಬಾ ಕೆಲಸವಿದೆ, ಎಲ್ಲ ಕೆಡಿಸಬೇಡ ಎದ್ದೇಳು"
ಅಮ್ಮನ ದ್ವನಿ ಎಷ್ಟು ಗಟ್ಟಿಯಾದರು , ಎಷ್ಟು ಕಠಿಣವಾದರು ಎಂತ ಚಿಂತೆಯು ಇಲ್ಲ, ಅದೇಕೊ ಕಣ್ಣೆ ಬಿಡಲು ಆಗದಂತೆ ನಿದ್ದೆ ಎಳೆಯುತ್ತಿತ್ತು,
.
.
.
.
'ರೀ ಏಳ್ರಿ ಆಗಲೆ ಅಡಿಗೆಯವರು ಬಂದಾಯ್ತು, ಸುಮ್ಮನೆ ಅಡಿಗೆಯವರು ಅಂತ ಹೇಳೋದು ಅಷ್ಟೆ, ಅವರು ಕೇಳಿದ ವಸ್ತು ತೆಗೆದು ಕೊಡಲು ಅವರ ಹಿಂದೆಯೆ ನಿಂತಿರಬೇಕು, ಅದರ ಬದಲು ನಾವೆ ಅಡಿಗೆಮಾಡಬಹುದು, ನೀವು ಬೇಡ ಅಂತೀರಿ, ಆಗಲೆ ಏಳು ಗಂಟೆ ಆಗ್ತ ಬಂತು, ಎದ್ದೇಳ್ರಿ, ಏನು ಹೇಳಿದರು ನಾಳೆ ಬೆಳಗೆ ಅಂತ ನಿನ್ನೆ ಅಂದಿರಿ, ಇನ್ನು ನೀವು ಹೋಗಿ ಬಾಳೆ ಎಲೆ ತರಬೇಕು ಎಷ್ಟೊಂದು ಕೆಲಸವಿದೆ, ಇನ್ನು ಇಗೋ ಅಗೋ ಅನ್ನುವದರಲ್ಲಿ, ಒಂಬತ್ತು ಘಂಟೆಗೆ ನಿಮ್ಮ ಅಣ್ಣ ಅತ್ತಿಗೆ ಬಂದು ಇಳಿಯುತ್ತಾರೆ, ನಾನು ಕಸಗುಡಿಸಿ ಒಳಹೋಗಬೇಕು"
.
ಇದೇನು ಅಮ್ಮನ ಬದಲಿಗೆ .... ನನ್ನವಳ ದ್ವನಿ, ಎಚ್ಚರವಾಯಿತು, ಓ ಆಗಲೆ ಬೆಳಕಾಯಿತು ಅಂತ ಕಾಣುತ್ತೆ, ಅಡಿಗೆಯವರು ಬಂದರೆ, ತಕ್ಷಣ ಎದ್ದು ಕುಳಿತೆ,
ಅಯ್ಯೋ ಇನ್ನು ಎಷ್ಟೊಂದು ಕೆಲಸ ಬಾಕಿ ಇದೆ, ಚಾಮರಾಜ ಪೇಟೆಗೆ ಹೋಗಿ ಬಾಳೆಲೆ ತರಬೇಕು, ಜೊತೆಗೆ ವಿಳೆಯದೆಲೆ, ಬರುವಾಗ ವಿದ್ಯಾಪೀಠದ ಹತ್ತಿರ ಹೋಮಕ್ಕೆ ಬೇಕಾದ, ಕಟ್ಟಿಗೆ ಸಿಗುತ್ತೆ, ತೆಗೆದುಕೊಳ್ಳಬೇಕು, ಮತ್ತೆ ಈ ಬಾರಿ ಬ್ರಾಹ್ಮಣಾರ್ಥಕ್ಕೆ ಹೇಳಿರುವ ಬ್ರಾಹ್ಮಣರು ಹೊಸಬರು ಬೇರೆ, ಅವರ ಮನೆಗೆ ಹೋಗಿ ನೆನಪಿಸಿ ಬರಬೇಕು,
"ಸರಿ , ಮುಖತೊಳೆದು ಬರುತ್ತೇನೆ, ಬೇಗ ಒಂದು ಕಾಫಿ ಕೊಡೆ, ಹೊರಗೆ ಹೋಗಿ ಎಲ್ಲ ಕೆಲಸ ಮುಗಿಸಿ ಬರುವೆ " ಗಡಬಡಿಸಿ ಎದ್ದು ಮುಖತೊಳೆಯಲು ಹೊರಟೆ,
ಎಂತದೋ ಧಾವಂತ.
ಈ ದಿನ ನಮ್ಮ ಅಮ್ಮನ ಹತ್ತನೆ ವರ್ಷದ ವೈದೀಕ.
No comments:
Post a Comment
enter your comments please