Sunday, September 15, 2013

ಕೃಷ್ಣ..ಕೃಷ್ಣ..ಕೃಷ್ಣ.. - ಕೃಷ್ಣ ದೇವನೊ ಇಲ್ಲ ರಾಕ್ಷಸನೊ

ಕೃಷ್ಣ..ಕೃಷ್ಣ..ಕೃಷ್ಣ.. (3)-   ಕೃಷ್ಣ ದೇವನೊ  ಇಲ್ಲ  ರಾಕ್ಷಸನೊ





ಗಣೇಶ
"ಅಲ್ಲಿಗೆ ಏನು ಕೃಷ್ಣ, ಈ ಅವತಾರಗಳೆಲ್ಲ ಸುಳ್ಳು ಅನ್ನುವೆಯ, ನಿನ್ನನ್ನು ವಿಷ್ಣುವಿನ , ದೇವರ ಅಂಶವೆನ್ನುವರಲ್ಲ ಅದೆಲ್ಲ ಸುಳ್ಳು ಎಂದು ಹೇಳುವೆಯ? ನೀನು ದೇವರು ಎನ್ನುವ ವಾದವೆ ಸುಳ್ಳೆ"


ಕೃಷ್ಣ


"ಗಣೇಶ, ನೀನು ಎಲ್ಲವನ್ನು ತಿಳಿದಿರುವೆ ನನ್ನನ್ನು ಪುನಃ ಕೇಳುತ್ತಿರುವೆ. ಯಾವುದು ಸುಳ್ಳಲ್ಲ , ನಾವು ಅದನ್ನು  ಅರ್ಥಮಾಡಿಕೊಳ್ಳುವ ರೀತಿಯೆ ಸುಳ್ಳು. ಪ್ರತಿಯೊಬ್ಬ ಮನುಷ್ಯನು ದೇವರ, ವಿಷ್ಣುವಿನ ಅಂಶದಿಂದ ಹುಟ್ಟಿದವನೆ. ಆದರೆ ಅವನು ಬೆಳೆದಂತೆ ಅವನ ಗುಣಸ್ವಭಾವಗಳು  ಅವನಲ್ಲಿರುವ ದೇವ ಸ್ವಭಾವ ನಾಶವಾಗಿ ರಾಕ್ಷಸಗುಣ ಅಧಿಕವಾಗುವುದು. ತನ್ನಲಿರುವ  ವಿಷ್ಣುವಿನ , ದೇವರ ಅಂಶವನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಮನುಷ್ಯ ದೇವಮಾನವನಾಗುವನು, ಅವತಾರಪುರುಷನಾಗುವನು ಎನ್ನುವುದು ಸತ್ಯವಲ್ಲವೆ"


ಗಣೇಶ
"ಕೃಷ್ಣ ಅದು ಏಕೆ, ಮನುಷ್ಯ ಹುಟ್ಟುವಾಗ ಮುಗ್ದನಾಗಿರುವನು ಅವನಲ್ಲಿ ವಿಷ್ಣುವಿನ ಅಂಶ ತುಂಬಿರುವುದು ನಂತರ ರಾಕ್ಷಸತ್ವ ಹೆಚ್ಚುತ್ತ ಹೋಗಿ ಕಡೆಗೊಮ್ಮೆ ರಕ್ಕಸನೆ ಆಗುವನು ಎನ್ನುವೆಯಲ್ಲ, ಅದು ಏಕೆ, ಹುಟ್ಟಿದಾಗ ಅವನಲ್ಲಿ ಇದ್ದ ದೈವತ್ವ ನಶಿಸುತ್ತ ಹೋಗುವದೇಕೆ?"


ಕೃಷ್ಣ
"ಅದೇ ಗಣೇಶ ಈ ಕರ್ಮ ಭೂಮಿಯ, ಮಣ್ಣಿನ ವಿಶೇಷ, ಇಲ್ಲಿನ ಸೆಳೆತವೆ ಅಂತದು, ಈ ಭೂಮಿಯ ಮಣ್ಣಿನ ಶಕ್ತಿಯೆ ಅಂತದು. ಆ ಸೆಳೆತವನ್ನು ಯಾರು ಮೀರುವರೊ ಅವರು ದೈವತ್ವವನ್ನು ಸಾಧಿಸುವರು,   ಅಪರೂಪಕ್ಕೆ ಹುಟ್ಟುವ ಅವರನ್ನು ಅವತಾರ ಪುರುಷನೆಂದೆ ಕರೆಯಬಹುದು ಬಿಡು"
ಎನ್ನುತ್ತ ಜೋರಾಗಿ ನಕ್ಕನು
ಗಣೇಶ ಕೊಂಚ ಕುತೂಹಲದಿಂದ ಎನ್ನುವಂತೆ ಕೇಳಿದ.
“ಹಾಗಾದರೆ ಕೃಷ್ಣ, ಮತ್ತೆ ಕೆಲವರ ವಾದವಿದೆ, ನೀನು ಕಂಸನ ಸಂಬಂಧಿಯೆ ಅಲ್ಲವೆ , ಕಂಸನು  ರಾಕ್ಷಸ ಎನ್ನುವದಾದರೆ ನೀನು ಕಂಸನ ರಕ್ತ ಸಂಬಂಧಿ ನೀನು ಸಹ ರಾಕ್ಷಸನೆ ಅಲ್ಲವೆ?”


ಕೃಷ್ಣ  ಗಣೇಶನನ್ನೆ ದೀರ್ಘವಾಗಿ ನೋಡಿದ, ನಂತರ ನಗಲು ಪ್ರಾರಂಬಿಸಿದ, ನಕ್ಕು ನಕ್ಕು ಅವನ ಕಣ್ಣಲಿ ನೀರು ತುಂಬಿಕೊಂಡಿತು. ಅವನ ನಗುವನ್ನು ನೋಡುತ್ತ ಗೊಂದಲಗೊಂಡ ಗಣೇಶ ಕೇಳಿದ
“ಅದೇನು ಅಷ್ಟೊಂದು ನಗುವಂತಹುದು ಕೃಷ್ಣ , ನಾನಾದರೊ ಸುಮ್ಮನೆ ಲೋಕಾರೂಢಿ ಎನ್ನುವಂತೆ ಕೇಳಿದೆ , ಜನರ ಮಾತು ನನ್ನ ಬಾಯಲ್ಲಿ ಪ್ರಶ್ನೆಯಾಗಿ ಬಂದಿತು ತಪ್ಪೆ” ಎಂದ


ಕೃಷ್ಣ ಮತ್ತೆ ನಗುತ್ತ ಹೇಳಿದ
“ಇನ್ನೇನು ಮಾಡಲಿ ಗಣೇಶ. ಈಗ ತಾನೆ ನೀನು ನನ್ನನ್ನು  ‘ನೀನು ದೇವರೆ?”  ಎಂದು ಕೇಳಿದೆ, ನಾನು ಅದಕ್ಕೆ ಉತ್ತರ ಕೊಟ್ಟ ಕ್ಷಣದಲ್ಲಿ  ‘ನೀನು ರಾಕ್ಷಸನ ‘ ಎಂದು ಕೇಳುತ್ತಿರುವೆ . ನಗದೆ ಇನ್ನೇನು ಮಾಡಲಿ ಹೇಳು. ಆಯಿತು ಕಂಸ ರಾಕ್ಷಸ ಎನ್ನುವದಾದರೆ ಅವನ ರಕ್ತ ಸಂಬಂಧಿ ನಾನು ಸಹ ರಾಕ್ಷಸನೆ ಎಂದು ಭಾವಿಸಿದರಾಯಿತು.  ದೇವತೆ ಅಥವ ರಾಕ್ಷಸ ಎನ್ನುವದೆಲ್ಲ ಹುಟ್ಟಿನಿಂದ ನಿರ್ಧರವಾಗುವದಿಲ್ಲ ಗಣಪ. ನಮ್ಮ ನಡತೆ ನಮ್ಮನ್ನು ದೇವರನ್ನಾಗಿಯು ರಾಕ್ಷಸರನ್ನಾಗಿಯೂ ಮಾಡುತ್ತೆ ಬೇರೆಯವರ ಕಣ್ಣಿನಲ್ಲಿ . ಹಾಗೆ ನೋಡಿದರೆ ರಾಕ್ಷಸರಾದರು ರಾಮ ಒಲಿದ ವಿಭೀಷಣ, ನರಸಿಂಹನನ್ನು ಒಲಿಸಿದ ಪ್ರಹ್ಲಾದ, ವಾಮನನಿಗೆ  ದಾನ ಕೊಟ್ಟ ಬಲಿ ಇವರೆಲ್ಲ ರಾಕ್ಷಸರೆ ಅಲ್ಲವೆ. ಈ ಭೂಮಿಯ ಮಣ್ಣಿನ ಸ್ವಭಾವ ಅದು ಗಣೇಶ. ತಮಗೆ ಕಿಂಚಿತ್ತು ಉಪಕಾರ ಮಾಡಿದವರನ್ನು ಈ ಮನುಜರು ದೇವತೆಯನ್ನಾಗಿ ಮಾಡಿ ಪೂಜಿಸುವರು. ಅದು ರಾಮನೊ, ಕೃಷ್ಣನೊ , ಬುದ್ದನೊ, ಅಥವ ಈಚಿನ ಗಾಂಧಿ ಅಥವ ಅಂಬೇಡ್ಕರ್ ಎಲ್ಲರನ್ನು ಆಯಾ ಕಾಲಕ್ಕೆ ಜನ ದೇವರೆಂದೆ ಪೂಜಿಸಿದರು. ಹಲವಾರು ಗುರುಗಳು, ಜನಸೇವಕರು ಸಹ ದೇವತೆಯ ಸ್ಥಾನ ಪಡೆದುಕೊಂಡವರೆ.

ಆದರೆ ಜನರ ನೆನಪಿನ ಶಕ್ತಿ ಮಾತ್ರ ಅತ್ಯಲ್ಪ ಗಣೇಶ. ಜನರಿಗೆ ಎಷ್ಟೆ ಉಪಕಾರ ಮಾಡಿರು, ನೀನು ಯಾವುದೊ ಸಣ್ಣ ಕಾರಣಕ್ಕೆ ಎಡವಿದರು ಅವರ ಕಣ್ಣಲ್ಲಿ ರಾಕ್ಷಸನಾಗಿಬಿಡುವೆ. ಅಷ್ಟೆ ಅಲ್ಲ ಯಾವ ದೇವತೆಯಾದರು ಕಾಲನಂತರದಲ್ಲಿ ಯಾರದೊ ಬಾಯಿಗೆ ಸಿಕ್ಕಿ ವಿವಾದಿತರಾಗಿ ಮತ್ತೆ ಅವರ ದೇವತ್ವಕ್ಕೆ ಕುಂದು ಬರುವುದು. ಸಣ್ಣ ಮಾತು ಸಾಕು ದೇವತೆ ರಾಕ್ಷಸನಾಗಲು ಜನರ ಕಣ್ಣಿನಲ್ಲಿ ಬದಲಾಗಲು “ ಎಂದನು


ಗಣೇಶ
‘ನಿನ್ನ ಮಾತು ನಿಜ ಕೃಷ್ಣ.   ಭೂಮಿಯ ಜನರ ಮನಸ್ಸು ಬಹಳ ಸೂಕ್ಷ್ಮ , ಸಣ್ಣ ಕಾರಣವೊಂದು ಸಾಕು ಅವರ ಮೆಚ್ಚುವ ದೈವವನ್ನು ಅವರೇ  ದ್ವೇಷಿಸಲು ‘
ಎನ್ನುತ್ತ ಮತ್ತೆ ಕೇಳಿದ  
"ನಿನ್ನ ಮಾತು ಸರಿ ಕೃಷ್ಣ, ಆದರೆ ಎಲ್ಲಿ ಧರ್ಮಕ್ಕೆ ಕುಂದು ಬರುವುದು, ಆಗ ನಾನು ಮತ್ತೆ ಮತ್ತೆ ಜನ್ಮವೆತ್ತಿ ಅಧರ್ಮವನ್ನು ನಾಶಪಡಿಸಿ ಧರ್ಮವನ್ನು  ಸ್ಥಾಪನೆ ಮಾಡುವೆ ಎನ್ನುವ ನಿನ್ನ ಮಾತಿನ ಕತೆ ಏನು?"

ಮುಂದೆವರೆಯುವುದು…..

No comments:

Post a Comment

enter your comments please