ಯೋಗಿಯೊ ಭೋಗಿಯೊ ಬಲ್ಲವರಿಲ್ಲ
ಕೃಷ್ಣ .. ಕೃಷ್ಣ .. ಕೃಷ್ಣ. (13)- ಯೋಗಿಯೊ ಭೋಗಿಯೊ ಬಲ್ಲವರಿಲ್ಲ
ಇಲ್ಲಿಯವರೆಗೂ….
ಯಾವ ಮಥುರಾ ನಗರದ ಜನತೆ ನನ್ನನ್ನು ಸ್ವಾಗತಿಸಿದರೊ ಅಲ್ಲಿಯೆ ಕ್ರಮೇಣ ಒಳರಾಜಕೀಯ. ಹೋರಾಟದಲ್ಲಿಯೆ ಜೀವನ. ನನ್ನಿಂದ ಉಪಕಾರ ಪಡೆದವರಿಂದಲೆ ಅಪವಾದಗಳು . ಕಡೆಗೊಮ್ಮೆ ಯಾದವ ಕಲಹ, ಇಂತ ಜೀವನವನ್ನು ಸುಖ ಜೀವನ ಎಂದು ಯಾರಾದರು ಕರೆಯುವರೆ ಗಣೇಶ”
ಕೃಷ್ಣನ ದ್ವನಿ ಸಪ್ಪೆಯಾಗಿತ್ತು , ದೂರ ದಿಗಂತವನ್ನೆ ದಿಟ್ಟಿಸುತ್ತಿದ್ದ, ಗಣೇಶ ಕೊಂಚ ಕುತೂಹಲ, ಕಕ್ಕುಲತೆಯಿಂದ ಪ್ರಶ್ನಿಸಿದ
“ಕೃಷ್ಣ, ಬೇಸರವಾಯಿತೆ, ಅಳುತ್ತಿರುವೆಯ”
ಕೃಷ್ಣ ನುಡಿದ
“ಗಣೇಶ ಬೇರೆಯವರ ಕಣ್ಣೀರು ಒರೆಸುವ ಕರ್ತವ್ಯ ಇರುವವರಿಗೆ, ತಾವು ಕಣ್ಣೀರು ಹಾಕಲು ಹಕ್ಕಿರುವದಿಲ್ಲ ಅಲ್ಲವೆ” ಎನ್ನುತ್ತ ನಕ್ಕ
ಮುಂದೆ ಓದಿ...
ಗಣೇಶ ಕೊಂಚ ಬೇಸರದಲ್ಲಿಯೆ ನುಡಿದ
“ಕೃಷ್ಣ ನಿನ್ನನ್ನುನಿಂದಿಸುವ ಬರದಲ್ಲಿ ನಿನ್ನನ್ನು ಅಜ್ಞಾನಿ ಎಂದು, ಕಾಮುಕನೆಂದು, ಕಳ್ಳನೆಂದು, ಹೇಡಿ ಎಂದೆಲ್ಲ ಹೇಳುವರೆಲ್ಲ , ಇದೆಲ್ಲ ಸರಿಯೆ”
ಕೃಷ್ಣ ಸಮಾಧಾನವಾಗಿಯೆ ನುಡಿದ.
“ಇರಲಿ ಬಿಡು ಗಣೇಶ , ನನಗೆ ಬಿರುದುಗಳು ಅನೇಕ. ನನ್ನನ್ನು ಕಳ್ಳನೆಂದು ಕರೆದವರು ಎಷ್ಟೋ ಜನ. ಅದು ಒಮ್ಮೆ ಪ್ರೀತಿಯಿಂದ ಮತ್ತೊಮ್ಮೆ ದ್ವೇಷದಿಂದ. ಗೊಲ್ಲನೆಂದು ಕರೆದವರು ಅನೇಕ . ಹಾಗೆಯೆ ನನ್ನನ್ನು ಯೋಗಿಯೆಂದು ಚಿತ್ರಿಸಿದವರು ಭಾಗವತರಾದರೆ ನನ್ನನ್ನು ಕಾಮುಕನೆಂದವರು ಕೆಲಜನರು. ದಾಸರು ನನ್ನನ್ನು ಒಲಿಸಲು ನಿಂದನಾತ್ಮಕವಾದ ಭಕ್ತಿಗೀತೆಗಳನ್ನು ಸಹ ಬರೆದರು. ಹಾಗೆಯೆ ಬರೆಯುವರು ಜ್ಞಾನವು ನೀನೆ ಅಜ್ಞಾನವು ನೀನೆ, ಕತ್ತಲೆಯು ನೀನೆ ಬೆಳಕು ನೀನೆ ಎಂದರು. ಎಲ್ಲವನ್ನು ಸಮಚಿತ್ತದಿಂದ ಸ್ವೀಕರಿಸಬೇಕೆಂಬುದೆ ನನ್ನ ಅಭಿಪ್ರಾಯ . ಅಂತಹ ನಿಂದನೆ ಹೊಗಳಿಕೆಗಳು ನನ್ನನ್ನು ಆಗಲು ಏನು ಮಾಡಲಿಲ್ಲ. ಇನ್ನು ಈಗ ನನ್ನನ್ನು ಏನು ಮಾಡೀತು ಹೇಳು”.
“ಹ್ಹಾ ಕೃಷ್ಣ , ವಿಷಯವೆತ್ತಿದ್ದು ಸರಿಯಾಯಿತು. ನಾನು ನಿನ್ನನ್ನು ಅದೇ ವಿಷಯ ಕೇಳೋಣ ಎಂದು ಇಚ್ಚೆ ಆದರೆ ನಾನು ಕೇಳುವುದು ಸರಿಯಲ್ಲವೆಂಬ ಭಾವ ಮನದಲ್ಲಿ. ನಿನ್ನನ್ನು ಯೋಗಿಯೆಂದು ಮನೋ ಕಾಮನೆಯನ್ನು ಗೆದ್ದವನೆಂದು ಜಿತಮನದವನೆಂದು ಕರೆಯುವರು ಹಲವರು. ನಿನ್ನ ಹಾಗು ಗೋಪಿಕೆಯರ ಸಂಬಂಧಗಳನ್ನು ದೈವಿಕಗೊಳಿಸಿದವರು ಭಕ್ತಜನರು. ಆದರೆ ಅದೆ ನಿನ್ನ ಕ್ರಿಯೆಗಳು ಕೆಲವರ ಕಣ್ಣುಗಳಿಗೆ ನೀನು ಸ್ತ್ರೀಲೋಲುಪನಂತೆಯು ಕಾಣುತ್ತದೆ ಅಲ್ಲವೆ, ಹಾಗೆ ಕಾಮುಕನೆಂದು ಸಹ ಕರೆಯುವರು ಹಲವರು. ಈ ಬಗ್ಗೆ ನಿನ್ನ ಮಾತು ಕೇಳುವ ಆಸೆ ಆದರೆ ತಪ್ಪಾದಿತೇನೊ ಎನ್ನುವ ಭಯ”
ಕೃಷ್ಣ (ನಗುತ್ತ)
“ಅದೇನು ಗಣೇಶ ಅಷ್ಟೊಂದು ಸಂಕೋಚ, ಭಯ. ಈಗ ಎಲ್ಲ ಕಳೆದು ಯುಗಗಳೆ ಮುಗಿದಿವೆ ನನ್ನ ಬಗ್ಗೆ ನನ್ನ ಹಾಗು ಗೋಪಿಕೆಯರ ಮೇಲೆ ಸಾವಿರ ಸಾವಿರ ವ್ಯಾಖ್ಯಾನಗಳಿವೆ. ನನ್ನ ಗೋಪಿಕೆಯರ ಸಂಬಂಧವಾಗಿ ಭಾಗವತವೆ ರಚಿತವಾಗಿದೆ. ಅಧುನಿಕ ಸಾಹಿತ್ಯವು ಹಲವು ರಚಿತವಾಗಿವೆ. ಹಾಗಿರುವಾಗ ನೀನು ಆ ವಿಷಯವೆತ್ತಲು ಸಂಕೋಚಪಡುವುದು ಆಶ್ಚರ್ಯಕರವೆನಿಸುತ್ತಿದೆ”
ಗಣೇಶ
“ಅದು ಹಾಗಲ್ಲ ಕೃಷ್ಣ. ನೀನಾದರು ಸಂಸಾರಿಯಾಗಿದ್ದವನು. ನಾನು ಚಿರ ಬ್ರಹ್ಮಚಾರಿಯಲ್ಲವೆ. ನಾನು ನಿನ್ನಲ್ಲಿ ಗೋಪಿಕೆಯರ ವಿಷಯ ಪ್ರಸ್ತಾಪ ಮಾಡಿದಲ್ಲಿ ಯಾರಾದರು, ಈ ಬ್ರಹ್ಮಚಾರಿಗೆ ಅದೇನು ಆಸಕ್ತಿ ಈ ವಿಷಯದಲ್ಲಿ ಎಂದು ಅಪಹಾಸ್ಯಮಾಡುವದಿಲ್ಲವೆ. ಹಾಗಾಗಿ ಲೋಕನಿಂದೆಗೆ ಹೆದರಿದೆ ಅಷ್ಟೆ”
“ಹಹ್ಹ ಹ್ಹಾ” ಎಂದು ಎಷ್ಟು ಹೊತ್ತಾದರು ನಗುತ್ತಿದ್ದ ಕೃಷ್ಣ ನಂತರ ಗಂಭೀರನಾಗುತ್ತ ನುಡಿದ
ಆದರೆ ನಾನಾದರೊ ನೋಡು, ಜೀವನ ಪೂರ್ತಿ ನನ್ನ ಮನಸಿಗೆ ನ್ಯಾಯ ಎಂದು ತೋರಿದಂತೆ ನಡೆಯುತ್ತಿದ್ದೆ. ಬೇರೆಯವರು ನನ್ನ ಬಗ್ಗೆ ಅಪಹಾಸ್ಯ ಮಾಡುವರು, ನಿಂದಿಸುವರು ಎನ್ನುವ ಬಗ್ಗೆ ಒಮ್ಮೆಯಾದರು ಚಿಂತಿಸಲಿಲ್ಲ. ನನ್ನ ಜನರ ಯೋಗಕ್ಷೇಮದ ಪ್ರಶ್ನೆ ಬಂದಾಗ ಹಿಂಜರಿಯದೆ ಯಾವುದೇ ನಿಂದನೆಯನ್ನು ಸ್ವೀಕರಿಸಿದೆ. ಕಡೆಯಲ್ಲಿ ಅದೇ ಜನರಿಂದ ಅಪಮಾನವನ್ನು ಪಟ್ಟೆ. ಸದಾ ಸತ್ಯವನ್ನು ಹೇಳುತ್ತೇನೆ ಅನ್ನುವುದು, ನನಗೆ ನ್ಯಾಯ ಎಂದು ಕಂಡ ದಾರಿಯಲ್ಲಿ ನಡೆಯುವುದು ಬಹಳ ಕಷ್ಟದ ಮಾರ್ಗ ಗಣೇಶ. ಅದು ಕತ್ತಿಯ ಮೇಲೆ ಹೆಜ್ಜೆ ಇಟ್ಟು ನಡೆದಂತೆ ಸದಾ ಕಾಲನ್ನು ಒತ್ತುತ್ತಲೆ ಇರುವುದು. ನಿನ್ನ ಹಾಗೆ ನನ್ನನ್ನು ಅಪಮಾನ ಕಾಡೀತು ಎನ್ನುವ ಎಚ್ಚರಿಕೆಯ ದಾರಿಯಲ್ಲಿ ನಾನು ನಡೆಯಲೆ ಇಲ್ಲ ನೋಡು”
ಕೃಷ್ಣನ ದ್ವನಿಯಲ್ಲಿ ಎಂತದೊ ನೋವು ಎದ್ದು ಕಾಣುತ್ತಿತ್ತು
ಗಣೇಶ
“ಹಾಗೆಲ್ಲ ಬೇಸರಪಡಬೇಡ ಕೃಷ್ಣ. ಅವರವರ ಮನೋಧರ್ಮ , ಒಬ್ಬರ ದಾರಿ ಮತ್ತೊಬ್ಬರಿಗೆ ಸರಿಯಾಗಲಾರದು. ನಾಸ್ತಿಕನು ಆಸ್ತಿಕನದಾರಿಯಲ್ಲಿ ನಡೆಯಲಾರ ಹಾಗೆಯೆ ಆಸ್ತಿಕನು ನಾಸ್ತಿಕನ ದಾರಿಯಲ್ಲಿ ನಡೆಯಲಾರ ಅಲ್ಲವೆ. ಅದನ್ನು ಬಿಡು ನಿನ್ನ ಅನುಭವ ಹಾಗು ಮನೊಭಾವವವನ್ನು ತಿಳಿಸು”
ಕೃಷ್ಣ ನುಡಿದನು
“ಗಣೇಶ , ನೀನು ನನ್ನ ಮನೋಭಾವ ಅನ್ನುವೆ, ನಾನು ಏನು ಹೇಳಬೇಕು, ತಿಳಿಯುತ್ತಿಲ್ಲ . ಇರಲಿ . ನಾನು ಚಿಕ್ಕ ವಯಸಿನಲ್ಲಿ ನನ್ನ ತಂದೆ ತಾಯಿಯರ ಯಶೋದ, ನಂದಗೋಪನ ಜೊತೆಗೆ ಇದ್ದದ್ದು ಗೋಕುಲದಲ್ಲಿ, ಅದೊಂದು ಪುಟ್ಟಹಳ್ಳಿ, ಅಲ್ಲಿ ಎಲ್ಲರು ಎಲ್ಲರಿಗು ಪರಿಚಿತರು, ಇರಲು ಬೇರೆ ಬೇರೆ ಮನೆ ಇತ್ತು ಅನ್ನುವದನ್ನು ಹೊರತುಪಡಿಸಿದರೆ, ನಾವು ಮಕ್ಕಳು ಎಲ್ಲರು ಎಲ್ಲ ಮನೆಗಳಲ್ಲು ಸುತ್ತುತ್ತಿದ್ದೆವು. ಹಾಗಾಗಿ ನಮಗೆ ಎಲ್ಲರ ಮನೆಗಳಲ್ಲು ಮೊಸರು, ಬೆಣ್ಣೆ ಇಡುತ್ತಿದ್ದ ಜಾಗವೆಲ್ಲ ಪರಿಚಿತವೆ, ಹಾಗೆಯೆ ಅವರ ಮನೆಯ ಹೆಣ್ಣು ಮಕ್ಕಳು ಸಹಿತ. ಅವರೆಲ್ಲ ಬೇರೆ ಮನೆಯವರೆಂಬ ಭಾವವೆ ಯಾರಲ್ಲಿಯು ಇರಲಿಲ್ಲ. ಆದರೆ ನನಗೆ ಅವರು ತೊಂದರೆ ಕೊಡುತ್ತ ಇದ್ದುದ್ದೆಲ್ಲ, ನಾನು ಬೆಣ್ಣೆ ಕದ್ದೆ, ಮೊಸರು ಕದ್ದೆ ಅಂತ ಯಶೋದ ಬಳಿ ಹೇಳುತ್ತಿದ್ದರು, ಕೆಲವೊಮ್ಮೆ ನಿಜವಾಗಿ, ಕೆಲವೊಮ್ಮೆ ನನ್ನನ್ನು ಕಿಚಾಯಿಸಲು ಗೋಳಾಡಿಸಲು ಸುಳ್ಳು ಸುಳ್ಳೆ ಹೇಳುತ್ತಿದ್ದರು. ಅಮ್ಮನು ತನಗೆ ಇಷ್ಟವಿರಲಿ ಇಲ್ಲದಿರಲಿ, ಅವರೆದುರು ನನ್ನನ್ನು ದಂಡಿಸುತ್ತಿದ್ದಳು. ಕೆಲವೊಮ್ಮೆ ಅಪ್ಪನ ಬಳಿಯವರೆಗು ಈ ಚಾಡಿಗಳು ಹೋದಾಗ ಭಯ ಅನಿಸುತ್ತಿತ್ತು, ಆದರೆ ಅಪ್ಪ ನನ್ನನ್ನೆಂದು ನಿಂದಿಸಿದ್ದು, ದಂಡಿಸಿದ್ದು ನನಗೆ ನೆನಪಿಲ್ಲ, ಅಮ್ಮನಾದರು ಒಂದು ಹುಸಿ ಏಟು ಕೊಟ್ಟಿದ್ದಾಳೆ, ಆದರೆ ಅಪ್ಪ ನಂದಗೋಪನಲ್ಲ. ಹಾಗಾಗಿ ಆ ಎಲ್ಲರನ್ನು ಗೋಳಾಡಿಸಲು ನಾನು ಎಂತ ಚಿಕ್ಕ ಅವಕಾಶ ಸಿಕ್ಕರು ಬಿಡುತ್ತಿರಲಿಲ್ಲ. ಪರಸ್ಪರ ಗೋಳಾಡಿಸುವದರಲ್ಲಿ ಎಂತದೊ ಖುಷಿ ಇತ್ತೇನೊ. ಹಾಗಿರುವಾಗ ಊರ ಹೊರಗೆ ಇದ್ದ ಯಮುನೆಯ ಹತ್ತಿರ ಊರಿನ ಹೆಂಗೆಳೆಯರೆಲ್ಲ, ಬಟ್ಟೆ ಸ್ವಚ್ಚಗೊಳಿಸುವ ನೆಪದಲ್ಲಿ ಬಂದು, ಬಿಸಿಲಬೇಗೆ ತಾಳದೆ ತಮ್ಮ ಮೇಲು ವಸ್ತ್ರವನ್ನೆಲ್ಲ ತೆಗೆದು ನೀರಿಗೆ ಇಳಿಯುತ್ತಿದ್ದರು. ನಾನು ಆ ಅವಕಾಶವನ್ನು ಕಾದು, ಅವರು ದಡದ ಮೇಲೆ ಇಟ್ಟಿರುವ ಬಟ್ಟೆಯನ್ನು ಅಪಹರಿಸಿ ಮರದ ಮೇಲೆ ಏರುತ್ತಿದ್ದೆ, ಅವರು ಸ್ನಾನ ಮುಗಿಸುವದನ್ನೆ ಕಾಯುತ್ತಿದ್ದೆ”
ಗಣೇಶ ನಡುವೆ ನುಡಿದ ನಗುತ್ತ
“ನೀನು ಸಾಕಷ್ಟು ರಸಿಕನೆ ಬಿಡು ಕೃಷ್ಣ, ಹೆಣ್ಣು ಮಕ್ಕಳನ್ನು ಸಾಕಷ್ಟು ಕಾಡಿಸಿರುವೆ”
ಕೃಷ್ಣ
“ಅಲ್ಲ ಗಣೇಶ ಆಗೆಲ್ಲ ನನ್ನ ವಯಸ್ಸು ಎಷ್ಟಿರಬಹುದು ಹೇಳು ಎಂಟರಿಂದ ಹತ್ತು, ರಸಿಕತೆ, ಕಾಮುಕತೆ ಇಂತ ಪದಗಳ ಉಪಯೋಗ ಹೇಗೆ ಸರಿ ನನಗೆ ತಿಳಿಯದು. ಆಗೆಲ್ಲ ನಮ್ಮ ಎಲ್ಲರ ಮನದಲ್ಲಿ ಇರುತ್ತ ಇದ್ದಿದ್ದು ಬರಿ ತುಂಟ ಬುದ್ದಿ, ಹಾಗು ಕಿಡಿಗೇಡಿತನವಷ್ಟೆ. ಅವರಿಗು ನಾನು ಮನೆಯ ಒಂದು ತುಂಟು ಮಗುವಷ್ಟೆ, ಮೊದಲ ಸಾರಿ, ಸ್ನಾನ ಮುಗಿಸಿ ಹೊರಬಂದಾಗ, ತಮ್ಮ ಬಟ್ಟೆ ಕಾಣದೆ ಸಾಕಷ್ಟು ಗಾಭರಿಯಾದರು ಮನೆಗೆ ಹಿಂದೆ ಹೋಗುವದು ಹೇಗೆ ಎಂಬ ಚಿಂತೆ ಅವರಿಗೆ, ನಾನು ಮರದ ಮೇಲೆ ಕುಳಿತು ಕೊಳಲು ಬಾರಿಸುವದ ಕಂಡಾಗಲೆ ಅವರಿಗೆ ಅದು ನನ್ನದೆ ಕೆಲಸವೆಂದು ಅರ್ಥವಾಗಿತ್ತು, ಎಲ್ಲರು ಬೇಡಿದರು, ಬಟ್ಟೆ ಕೊಡು ಎಂದು, ಅಮ್ಮನ ಹತ್ತಿರ ಅವರೆಲ್ಲ ಚಾಡಿ ಹೇಳಿ ಅಮ್ಮ ನನ್ನನ್ನು ದಂಡಿಸಿದ ನನ್ನ ಕೋಪ ತೀರಿಸಿಕೊಂಡು, ಮತ್ತೆ ಅವರ ಮನೆಗಳಿಗೆಲ್ಲ ಹೋದಾಗ ಬೆಣ್ಣೆ ಎಲ್ಲ ಕೊಡುವೆವು ಎಂಬ ಆಶ್ವಾಸನೆ ದೊರೆತೊಡನೆ ಬಟ್ಟೆ ಹಿಂದೆ ಕೊಡುತ್ತಿದ್ದೆ , ಇದು ನಡೆಯುತ್ತಿದ್ದ ಕತೆ, ಅದಕ್ಕೆ ಯಾರು ಯಾವ ಬಣ್ಣ ಕೊಡುವರು ಎನ್ನುವ ಚಿಂತೆ ನನಗೇನು ಇಲ್ಲ”
ಗಣೇಶ
“ನೀನು ಹೇಳುವುದು ಸರಿ ಕೃಷ್ಣ, ನೀನು ಆಗ ಸಾಕಷ್ಟು ಚಿಕ್ಕವನೆ, ಆದರೆ ಗೋಪಿಕೆಯರ ಜೊತೆ ರಾಸಲೀಲೆ ಎಂದೆಲ್ಲ ಹೇಳುವರಲ್ಲ ಆಗ ನೀನು ಸಾಕಷ್ಟ ದೊಡ್ಡವನು ಇರಬೇಕಲ್ಲವೆ. ಆ ಬಗ್ಗೆ ನಿನ್ನ ವ್ಯಾಖ್ಯಾನವೇನು?”
ಕೃಷ್ಣ
“ಗಣೇಶ ನೀನು ಅದೇಕೊ ನನ್ನನ್ನು ಅಪರಾದಿ ಸ್ಥಾನದಲ್ಲಿ ನಿಲ್ಲಿಸಿ ಪ್ರಶ್ನೆ ಕೇಳುತ್ತಿರುವೆ ಅನ್ನಿಸುತ್ತಿದೆ, ನನ್ನ ವರ್ತನೆ ಬಗ್ಗೆ ನಾನೆ ವ್ಯಾಖ್ಯಾನ ಮಾಡಬೇಕೆ ವಿಚಿತ್ರವೆನಿಸುತ್ತಿದೆ. ಅಷ್ಟಕ್ಕು ಗೋಪಿಕೆಯರು ಎಂದರೆ ಯಾರು ಗಣೇಶ, ಅವರೆಲ್ಲ ಮುಗ್ದ ಗೋಕುಲದ ಹೆಣ್ಣು ಮಕ್ಕಳು. ನನ್ನ ಬಗೆ ಹಲವು ವಿಧ ವಿಧವಾದ ಕತೆಗಳನ್ನು ಕೇಳಿ ಮರುಳಾಗಿ ಬಂದ ಮುಗ್ದೆಯರು, ನನ್ನ ಕೊಳಲಿನ ದ್ವನಿ ಕೇಳಿ ಇಷ್ಟಪಡುತ್ತಿದ್ದವರು. ನನ್ನ ನೋಡಲು ಮನೆಗಳಲ್ಲಿಯ ಕೆಲಸಗಳನ್ನು ತೊರೆದು ಬರುತ್ತಿದ್ದರು ಅನ್ನುವುದು ಸತ್ಯ. ಬಹುಶಃ ಅವರ ಭಾವ ಎಂತದು ಎಂದು ಯಾರು ಅರ್ಥಮಾಡಿಕೊಳ್ಳುವುದು ಕಷ್ಟವೆ. ಆದರೆ ಅಲ್ಲಿ ಕಾಮವಿದೆ, ನಾನು ಗೋಪಿಕೆಯರನ್ನೆಲ್ಲ ಕಾಮಿಸುತ್ತಿದ್ದೆ ಅನ್ನುವುದು ಅತ್ಯಂತ ಮೂರ್ಖತನವೆ ಗಣೇಶ. ಅಲ್ಲಿ ಇದ್ದದ್ದು ಶುದ್ದ ಸ್ನೇಹ ಹಾಗು ಪ್ರೇಮ. ಅದು ಬೇರೆಯದೆ ಆದ ಶುಭ್ರ ನಿರಂಬಳ ನಿರಪೇಕ್ಷ ಲೋಕ”
ಕೃಷ್ಣ ಹಳೆಯ ಚಿತ್ರಗಳನ್ನು ಮನದೊಳಗೆ ತುಂಬಿಕೊಳ್ಳುತ್ತ ಮೌನವಾಗಿ ಕುಳಿತಿದ್ದ.
.
ಮುಂದೆವರೆಯುವುದು..
ಚಿತ್ರಕೃಪೆ :
'ಬೇರೆಯವರ ಕಣ್ಣು ಒರೆಸುವ ಕರ್ತವ್ಯ ಇರುವವರಿಗೆ, ತಾವು ಕಣ್ಣೀರು ಹಾಕಲು ಹಕ್ಕಿರುವದಿಲ್ಲ' ಎಂತಹ ಮಾತು ಸಾರ್ ಇದು.
ReplyDeleteಕೃಷ್ಣನನ್ನು ಯಾರೇ ಏನೇ ಆಪಾದಿಸಿದರು ಆತ - ಆಜನ್ಮ ಬ್ರಹ್ಮಚಾರಿಯೇ!
ಶುದ್ದ ಸ್ನೇಹ ಹಾಗು ಪ್ರೇಮ ಇದ್ದಕಡೆ ಕಾಮದ ದೃಷ್ಟಿ ಕೋನವೇ ಸಲ್ಲುವುದೇ ಇಲ್ಲ.