Saturday, May 16, 2015

ಅಲೋಕ (3) - ಸೇವೆಗೆ ನಿಯೋಜನೆ

ಅಲೋಕ (3) - ಸೇವೆಗೆ ನಿಯೋಜನೆ
ಕತೆ : ಅಲೋಕ 
ಆತ ಮಾತನಾಡಿದ
"ಈಗ ನನ್ನ ಮಾತನ್ನು ಕೇಳಿಸಿಕೊಳ್ಳಿ, ನಿಮ್ಮಲ್ಲಿ ಅಪೂರ್ಣವಾಗಿರುವ ಕೆಲವು ಅನುಭವ , ಕರ್ತವ್ಯಗಳು ಇಲ್ಲಿ ಪೂರ್ಣಗೊಳ್ಳ ಬೇಕಾಗಿದೆ. ಅಲ್ಲಿಯವರೆಗೂ ನೀವು ಇಲ್ಲಿ ಇರಲೇ ಬೇಕಾದ ಅಗತ್ಯವಿದೆ. ಅದನ್ನು ನೀವು ಶಿಕ್ಷೆ ಎಂದು ಕರೆದರು, ಭಾವಿಸಿದರು ನಮ್ಮ ಅಭ್ಯಂತರವಿಲ್ಲ" ಎಂದ
ನನಗೀಗ ತೋಚುತ್ತಿತ್ತು, ನಾನು ನೆನೆಸಿರುವಂತೆ ಇದು ನರಕ ಅಥವ ಯಮಲೋಕ ಎನ್ನುವುದು ಸತ್ಯವೇ ಆಗಿರಬಹುದು. ಆದರೆ ನಾನು ತಿಳಿದಿರುವಂತೆ ಪಾಪಿಗಳ ಕಾಲು ಕತ್ತರಿಸುತ್ತಾರೆ, ಬೆಂಕಿಯಲ್ಲಿ ಬೇಯಿಸುತ್ತಾರೆ, ಕುದಿವ ಎಣ್ಣೆಯಲ್ಲಿ ಹಾಕುತ್ತಾರೆ ಎನ್ನುವದೆಲ್ಲ ಸತ್ಯವಲ್ಲ ಎಂದೇ ತೋರುತ್ತದೆ. ಏಕೆಂದರೆ ಈ ಶಿಕ್ಷೆಗಳೆಲ್ಲ ದೈಹಿಕವಾದದ್ದು. ಭೂಮಿಯ ಕಲ್ಪನೆಗೆ ಹೊಂದುವಂತದ್ದು. ಇಲ್ಲಿ ದೇಹಭಾವವೆ ಇಲ್ಲದಿರುವಾಗ ನೋವಿನ, ಶಿಕ್ಷೆಯ ಕಲ್ಪನೆಗಳೆಲ್ಲ ತಪ್ಪು ಕಲ್ಪನೆಗಳಂತೆ ತೋರುತ್ತಿದೆ . 
ನನ್ನ ಯೋಚನೆ ಸಾಗಿರುವಂತೆ ಅವನು ನಗುತ್ತ ನನ್ನತ್ತ ನೋಡಿ,
"ಹೆಚ್ಚು ಚಿಂತಿಸದಿರುವುದು ಒಳ್ಳೆಯದು. ಅಲ್ಲಿಯ ಹೋಲಿಕೆಗೆ ಹೋಗದೆ ಇಲ್ಲಿಯ ಕರ್ತವ್ಯಗಳನ್ನು ನೆರವೇರಿಸಿದರೆ ಅದು ನಿಮಗೆ ಶ್ರೇಯಸ್ಸು. ಈಗ ಇವರ ಜೊತೆ ಹೋದರೆ ನೀವು ಮಾಡಬಹುದಾದ ಕರ್ತವ್ಯ ತಿಳಿಯುತ್ತದೆ"
ಸತ್ತುಹೋಗಿಯೆ ಆಗಿದೆ ಇನ್ನು ಯಾವ ಶ್ರೇಯಸ್ಸು ಇವನ ಮಾತೊಂದು ಎಂದು ಕೊಂಡವನು ,  ಹೆಚ್ಚು ಯೋಚಿಸದಿರುವುದೇ ಒಳ್ಳೆಯದು. ಮಾತುಗಳನ್ನಂತು ಆಡುವಂತಿಲ್ಲ ಆಗಲೆ ನಾಲಿಗೆ ಕಿತ್ತುಹಾಕಿದ್ದಾರೆ ಎಂದುಕೊಂಡು ಸುಮ್ಮನಾದೆ.
ಅಲ್ಲಿನ ವಾತವರಣಕ್ಕೆ ಚಿಂತನೆಗೆ ತರ್ಕಕ್ಕೆ ನಾನು ಹೊಂದಿಕೊಳ್ಳುತ್ತ ಹೋದಂತೆ , ಅವರಿಬ್ಬರ ಚಹರೆ ಹೆಚ್ಚು ಸ್ವಷ್ಟವಾಗುತ್ತ ಹೋಯಿತು. ಬಹುಶಃ ಭೂಮಿಯ ಭೌತಿಕ ಅನ್ನಬಹುದಾದ ಗುಣಸ್ವಭಾವಗಳು ದೂರಸರಿಯುತ್ತಿವೆ ಅನ್ನಿಸಿತು.
ಆತನ ಹಿಂದೆ ಮೌನವಾಗಿ ನಡೆದೆ. ಅದ್ಯಾವುದೋ ಜಾಗ ಪ್ರವೇಶಿಸಿದೆ. ಅಲ್ಲಿ ಹಲವಾರು , ಬಹುಶಃ ನೂರಾರು ಜನ ಮಂಚಗಳ ಮೇಲೆ ಸಾಲಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವುದು ಕಾಣಿಸಿತು. ತೀರ ಆಶ್ಚರ್ಯವೆನಿಸಿತು  ಯಾರಿರಬಹುದು ಇವರೆಲ್ಲ ?
ಅವನು ಹೇಳಿದ.
"ನೀನು ಇವರೆಲ್ಲರ ಸೇವೆ ಮಾಡಬೇಕು"
ನನಗೆ ಅರ್ಥವಾಗಲಿಲ್ಲ ಸೇವೆ ಅಂದರೆ ಏನೆಂದು. ಅವನ ಮುಖ ನೋಡಿದೆ.
"ಅಂದರೆ ಅವರ ಕಾಲು ಒತ್ತುವುದು ಇತ್ಯಾದಿ, ಅವರು ನಿರೀಕ್ಷಿಸುವ ಯಾವುದೇ ಸೇವೆ" ಅವನು ತಿಳಿಸಿದ
ನನ್ನ ಸ್ವಾಭಿಮಾನ ತಲೆ ಎತ್ತಿತು. ಇವರೆಲ್ಲ ಯಾರೋ ಅನಾಮದೇಯರು, ನಾನು ಇವರ ಕಾಲು ಒತ್ತಬೇಕೆ ?  ಸೇವೆ ಮಾಡಬೇಕೆ?. ನನಗೂ ಇವರಿಗೂ ಯಾವ ಸಂಬಂಧ?
ನಂತರ ನಾನೇ ಚಿಂತಿಸಿದೆ , ಹಾಗೆಲ್ಲ  ನಾನಿಲ್ಲಿ ಸ್ವತಂತ್ರನಲ್ಲ , ನನ್ನ ಅಭಿಮಾನ ಬಿಡುವುದೇ ಒಳ್ಳೆಯದು
ಅವನು ಮತ್ತೆ ನುಡಿದ
"ನೀವು ಭೂಮಿಯಲ್ಲಿ ತಂದೆ ತಾಯಿಯರ ಸೇವೆ ಮಾಡದೇ ವಂಚಿತರಾಗಿದ್ದೀರಿ, ಅಂತಹ ಅನುಭವ ಇಲ್ಲಿ ಪೂರ್ಣವಾಗಲಿ" 
ನನಗೆ ಮತ್ತೆ ಕೋಪ ಭುಗಿಲೆದ್ದಿತು!
ಚಿಕ್ಕವಯಸಿಗೆ ತಂದೆ ತಾಯಿಯರನ್ನು ಕಿತ್ತುಕೊಂಡಿದ್ದು ಇದೇ ವಿಧಿ . ಈಗ ಅವರ ಸೇವೆ ಮಾಡಿಲ್ಲ ಎಂದು ಆಪಾದನೆ ಹೊರಸುವದಾದರೆ ಇದೆಂತಹ ಮೋಸ. ತಂದೆ ತಾಯಿ ನನ್ನ ಜೊತೆ ಇರುವದಾಗಿದ್ದರೆ ಖಂಡಿತ ಸೇವೆ ಮಾಡಿರುತ್ತಿದ್ದೆ
ಮತ್ತೆ ನೆನಪಿಗೆ ಬಂದಿತು, ಭೂಮಿಯ ನ್ಯಾಯವೆ ಬೇರೆ , ಇಲ್ಲಿಯ ನ್ಯಾಯವೇ ಬೇರೆ . ಅಷ್ಟಕ್ಕೂ ಇಲ್ಲಿರುವರೆಲ್ಲ ನನಗಿಂತ ಹಿರಿಯರು ಹಾಗಿರುವಲ್ಲಿ ಕಾಲು ಒತ್ತುವುದು ಸೇವೆ ಮಾಡುವುದು ಅವಮಾನ ಎಂದು ಭಾವಿಸುವುದು ತಪ್ಪು . 
"ಸರಿ" ಎನ್ನುವಂತೆ ತಲೆ ಆಡಿಸಿದೆ. 
ಅವನು ನಸುನಗುತ್ತ ಅಲ್ಲಿಂದ ಹೊರಟುಹೋದ. ಎಲ್ಲೆಲ್ಲೂ ಕತ್ತಲು ಕತ್ತಲು ಎನ್ನುವಂತಹ ವಾತಾವರಣ.

ಮುಂದುವರೆಯುವುದು ......

No comments:

Post a Comment

enter your comments please