ಗಣೇಶ ಬೇಕರಿ ಮತ್ತು ಸೋಮಾರಿಕಟ್ಟೆ
ನಗರದಲ್ಲಿ ಮಧ್ಯಮವರ್ಗದವರೆ ಜಾಸ್ತಿ ಇರುವ ಬಡಾವಣೆ ಅದು, ಅಂಗಡಿ ಸಾಲಿನಲ್ಲಿ ಅದೊಂದು ಗಣೇಶ ಬೇಕರಿ, ಅಲ್ಲಿ ಮಾಡುವ ಪಪ್ಸ್ ಚೆನ್ನಾ ಎಂದು ಜನರ ಅಭಿಪ್ರಾಯ .ಎದುರಿಗೆ ರಸ್ತೆಯ ಪಕ್ಕದ ಪುಟ್ ಪಾತಿನಲ್ಲಿ ಒಂದು ದ್ವಜ ಸ್ತಂಬ, ಅಲ್ಲಿ ಕನ್ನಡಮ್ಮನ ಬಾವುಟ ನಿತ್ಯ ನಿರಂತರ ಹಾರಾಟ. ಅ ದ್ವಜಸ್ತಂಬಕ್ಕೆ ಕಟ್ಟಿದ ಸಿಮೆಂಟ್ ಕಟ್ಟೆ. ಅಲ್ಲಿ ಜನರು ಕುಳಿತುಕೊಳ್ಳುವುದು ಕಡಿಮೆ, ಎಲ್ಲರಿಗೆ ಎನೊ ಒಂದು ಕೆಲಸ ಸದಾ ಬಿಸಿ. ಆದರೆ ನಮ್ಮ ಕತೆಯ ನಾಲ್ವರು ಹುಡುಗರು ಸರಿಯಾಗಿ ಬೆಳಗ್ಗೆ ಹತ್ತಕ್ಕೆ ಆ ಕಟ್ಟೆಯ ಮೇಲೆ ಹಾಜರ್. ಅದೆ ಅವರಿಗೆ ಆಫೀಸ್. ಎಲ್ಲ ಆಪೀಸಿನ ಹಾಗೆ ಅವರಿಗೆ ಮಾಡಲು ಕೈತುಂಬ ಕೆಲಸವೇನಿಲ್ಲ. ಹಾಗು ಪದೆ ಪದೆ ಹೋಗಿ ಕಾಫಿ ಕುಡಿದು ಸಿಗರೇಟ್ ಸೇದಿಬರಲು ಹೋಗಲ್ಲ ಅದಕ್ಕೆಲ್ಲ ಸಮಯವಿಲ್ಲ ಅಂತೇನಿಲ್ಲ. ಅದಕ್ಕೆಲ್ಲ ಖರ್ಚಿಗೆ ಬೇಕಾದ ಹಣವಿಲ್ಲ, ಅರ್ಥವಾಗಲಿಲ್ಲವೆ ಎಲ್ಲರು ನಿರುದ್ಯೋಗಿಗಳು.
ಅಲ್ಲಿ ಕುಳಿತು ಅವರು ಪೋಲಿ ಉದ್ಯೋಗವನ್ನೇನು ಮಾಡುತ್ತಿಲ್ಲ ಬಿಡಿ, ಸಾಮಾನ್ಯವಾಗಿ ಅವರು ಮಾತನಾಡುವುದು ಕಡಿಮೆ, ಏಕೆಂದರೆ ಅವರು ಆಡಬೇಕಾದ ಮಾತುಗಳನ್ನೆಲ್ಲ ಆಡಿ ಮುಗಿಸಿ ಬಹಳ ಕಾಲವಾಗಿದೆ. ಅವರ ಮಾತು ಕೇಳಬೇಕಾದವರು ಯಾರು ಇಲ್ಲ. ಬಹುತೇಕ ಅವರೆಲ್ಲರು ತಮ್ಮ ಜೀವನದಲ್ಲಿ ಆಸಕ್ತಿಯನ್ನು ನಂಭಿಕೆಯನ್ನು ಕಳೆದುಕೊಂಡುಬಿಟ್ಟಿದ್ದಾರೆ. ಬಹು ಸಮಯ ರಸ್ತೆಯಲ್ಲಿ ಹರಿದಾಡುವ ವಾಹನಗಳತ್ತ ದೃಷ್ಟಿ ನೆಟ್ಟು ಶೂನ್ಯ ನೋಟದಿಂದ ಕುಳಿತಿರುತ್ತಾರೆ. ರಸ್ತೆಯಲ್ಲಿ ಓಡಾಡುವ ಯಾರ ಬಗ್ಗೆಯು ಅವರ ಗಮನ ಹರಿಯುವುದು ಕಡಿಮೆ. ಬೇಕರಿಯಲ್ಲಿ ಗಣೇಶನೆಂಬ ಹುಡುಗನು ಇದ್ದಾನೆ ಕೆಲಸಗಾರನಾಗಿ, ಅವನ ಹೆಸರು ಗಣೇಶನಾದರು ಅವನೇನು ಆ ಗಣೇಶ ಬೇಕರಿಯ ಒಡೆಯನಲ್ಲ. ಅದರ ಯಜಮಾನ ಯಾವಾಗಲು ಹದ್ದಿನ ಕಣ್ಣಿನಿಂದ ಕೌಂಟರಿನಲ್ಲಿ ಕುಳಿತಿರುತ್ತಾನೆ.ನಾಲ್ವರಲ್ಲಿ ಯಾರ ಹತ್ತಿರವಾದರು ಸ್ವಲ್ಪ ಚಿಲ್ಲರೆ ಹಣವಿದ್ದಾಗ ಎದುರಿನ ಬೇಕರಿಗೆ ಹೇಳಿದರೆ ನಾಲ್ಕು ಬನ್ನು ಹಾಗು ಎರಡರಲ್ಲಿ ನಾಲಕ್ಕು ಟೀ ಬರುತ್ತದೆ. ಬೇಕರಿಯಲ್ಲಿರುವ ಹುಡುಗ ಗಣೇಶ ಸ್ವತಃ ತಾನೆ ಕೊಂಡುಹೋಗಿ ಬನ್ನು ಟೀ ಕೊಟ್ಟು ಅವರಿಂದ ದುಡ್ಡು ಪಡೆದು ಯಜಮಾನನಿಗೆ ಕೊಡುತ್ತಾನೆ, ಕೆಲವೊಮ್ಮೆ ಕಡಿಮೆ ಬಿದ್ದ ಐವತ್ತು ಪೈಸೆ ಒಂದು ರುಪಾಯಿಯನ್ನು ಅವನೆ ಕೈಯಿಂದ ಹಾಕಿ ಯಜಮಾನನಿಗೆ ಕೊಟ್ಟುಬಿಡುತ್ತಾನೆ. ಅವನಿಗು ಈ ನಿರುದ್ಯೋಗಿಗಳನ್ನು ಕಂಡರೆ ಎಂತದೊ ಮರುಕ. ಮತ್ತೆ ಮದ್ಯಾನದ ಊಟ ಅಂತ ಏನೇನೊ ಕೇಳಬೇಡಿ, ನಾಲ್ವರಲ್ಲು ಸಮಾನತೆ ಇದೆ, ಏನೆಂದರೆ ಮನೆಯಲ್ಲಿ ಊಟಕ್ಕೇಳಿ ಎಂದು ಉಪಚಾರ ಮಾಡಲು ಯಾರು ಇಲ್ಲ. ನಿರುದ್ಯೋಗಿಗಳಿಗೆ ಮನೆಯಲ್ಲಿ ಯಾರು ಉಪಚಾರ ಮಾಡುತ್ತಾರೆ ಹೇಳಿ. ನಾಲ್ವರ ಹೆಸರುಗಳು ಆಕರ್ಷಕವಾಗಿವೆ ಸುನಿಲ್, ಶ್ರೀಕಾಂತ್, ಶಶಿ, ಮುರಳಿ.. ಮರೆತೆ ಆ ನಾಲ್ವರ ಜೊತೆ ಸದಾ ಇರುವ ಮತ್ತೊಂದು ಪ್ರಾಣಿ ಇದೆ ಅದು ಒಂದು ನಾಯಿ ಸದಾ ಆ ಕಟ್ಟೆಯ ಕೆಳಗೆ ನೆಲದಲ್ಲಿ ಮಲಗಿರುವ ಅದು ಒಮ್ಮೆಮ್ಮೆ ನಾಲ್ವರು ಹಾಕುವ ಬನ್ನಿನ ತುಂಡನ್ನು ತಿಂದು ಕೃತಜ್ಞತೆ ತೋರಿಸಲು ಅವರು ಬಂದಾಗ ತನ್ನ ಬಾಲ ಅಲ್ಲಾಡಿಸುತ್ತಿತ್ತು.
ಸುನಿಲ್ , ಶ್ರೀಕಾಂತ್ ಒಟ್ಟಿಗೆ ಇಂಜಿನೀಯರಿಂಗ್ ಮುಗಿಸಿದವರು. ಓದುವದರಲ್ಲಿ ಮುಂದಿದ್ದ ಅವರು ಏಕೊ ಕೆಲಸದ ಬೇಟೆಯಲ್ಲಿ ಹಿಂದೆಬಿದ್ದರು. ಶಶಿ ಮತ್ತು ಮುರಳಿ ಸಹ ತಮ್ಮ ಡಿಗ್ರಿ ಮುಗಿಸಿದವರೆ, ಮುರಳಿಗೆ ಅವನ ಓದು ಮುಗಿಯುತ್ತಲೆ ಅಘಾತ ಕಾದಿತ್ತು ಚಿಕ್ಕ ವಯಸಿನಿಂದ ತಂದೆ ತಾಯಿ ಇಬ್ಬರು ಆಗಿ ಬೆಳೆಸಿದ್ದ ಅವನ ತಾಯಿ ಅಗಲಿದ್ದರು, ಈಗ ಅಣ್ಣನ ಆಶ್ರಯ. ಅಣ್ಣ ತಾನು ಪ್ರೀತಿಸಿದ್ದ ತಮಿಳು ಐಯ್ಯರ್ ಹೆಣ್ಣನ್ನು ಮದುವೆಯಾಗಿದ್ದ. ಆಕೆ ಅಂದರೆ ಮುರಳಿಯ ಅತ್ತಿಗೆಗೆ ಅಸಹನೆ ಇವನನ್ನು ಜೊತೆಗೆ ಇಟ್ಟುಕೊಳ್ಳಲು, ಹಾಗಾಗಿ ಸಾಕಷ್ಟು ಅಂದು ಕಾಡಿಸುತ್ತಿದ್ದರು. ಅದಕ್ಕಾಗಿ ಬೆಳಗ್ಗೆ ಹತ್ತಕ್ಕೆ ಮುಂಚೆ ಮನೆ ಬಿಟ್ಟರೆ ಅವನು ಪುನಃ ಮನೆಗೆ ಕಾಲಿಡುತ್ತ ಇದ್ದದ್ದು ಸಂಜೆ ಅಣ್ಣ ಬಂದ ಮೇಲೆ. ಆದರೆ ಮನೆ ಕೆಲಸಕ್ಕು ಒದಗುವದಿಲ್ಲ ಎಂದು ಅಣ್ಣನಿಂದಲು ಅತ್ತಿಗೆಯಿಂದಲು ಬೈಗುಳ ಅನಿವಾರ್ಯ. ಮಾಡಲು ಕೆಲಸವಿಲ್ಲ, ಬಿಟ್ಟು ಹೋಗೋಣವೆಂದರೆ ಹೋಗಲು ಜಾಗವಿಲ್ಲ. ಶಶಿಯದು ಅದಷ್ಟೆ ಅದಕ್ಕಿಂತ ಬಿನ್ನವಲ್ಲ, ಕೆಲಸ ಹುಡುಕಿ ಸೋತನವನು, ಅವನು ಮನೆಯಲ್ಲಿರುವಾಗ ಒಮ್ಮೆ ಅವನ ತಂದೆ ಸಹನೆ ತಪ್ಪಿ ನುಡಿದರು "ನಿನಗೆ ಕೆಲಸ ಅಂತ ಸಿಗುವದಿದ್ದರೆ ನಾನು ಸತ್ತು , ಸರ್ಕಾರಿ ಕೆಲಸದಲ್ಲಿದ್ದಾಗ ಸತ್ತೆ ಎಂದು ಆ ಕೆಲಸ ನಿನಗೆ ಸಿಗಬೇಕು ಅಷ್ಟೆ " . ಶಶಿಯ ಮನಸಿಗೆ ಅತೀವ ನೋವಾಗಿತ್ತು ಆದರೆ ಅವನು ಏನು ತೋಚದೆ ಪಕ ಪಕ ನಕ್ಕುಬಿಟ್ಟ. ಅಂದಿನಿಂದ ಅಗಾಗ್ಯೆ ಅದೆ ವಾಕ್ಯಗಳು ಅವನ ತಂದೆಯ ಬಾಯಿಯಿಂದ ಉದುರುತ್ತಿದ್ದವು. ಅವನು ಪ್ರತಿಬಾರಿಯು ನಗುತ್ತಿದ್ದ ಮತ್ತು ಅವನಿಗೆ ಎಲ್ಲ ಮಾತುಗಳಿಗು ಅದೆ ರೀತಿ ನಗುವುದು ಅಭ್ಯಾಸವಾಗಿತ್ತು. ಉಳಿದವರದು ಹೆಚ್ಚು ಕಡಿಮೆ ಅದೆ ಪರಿಸ್ಥಿಥಿ.
ಅಂದು ಬೆಳಗ್ಗೆ ಬರುವಾಗಲೆ ಮುರಳಿಯ ಮುಖ ಕೆಂಪಾಗಿತ್ತು, ಕಣ್ಣಲ್ಲಿ ಪದೆ ಪದೆ ತುಂಬುತ್ತಿದ್ದ ನೀರು. ಅವನು ಬಂದು ಕುಳಿತಾಗಲೆ ಎಲ್ಲ ಅರಿತರು ಮನೆಯಲ್ಲಿ ಅತ್ತಿಗೆಯಿಂದ ಸಹಸ್ರಾರ್ಚನೆಯಾಗಿದೆ ಎಂದು. ಯಾರು ಮಾತನಾಡಲಿಲ್ಲ ಏನೆಂದು ಕೇಳಲಿಲ್ಲ. ಸ್ವಲ್ಪ ಹೊತ್ತಿನ ನಂತರ ಮುರಳಿಯೆ ಮಾತನಾಡಿದ, ಅದು ಯಾರನ್ನು ಉದ್ದೇಶಿಸಿ ಅಲ್ಲ, ಒಂದು ಸ್ವಗತದಂತೆ
"ಅಲ್ಲ ಒಂದು ಹೊತ್ತಿನ ಊಟ, ರಾತ್ರಿ ಮಲಗಲು ಸ್ವಲ್ಪ ಜಾಗ ಇಷ್ಟಕ್ಕೆ ಮನುಷ್ಯ ಹಿಂಸೆ ಅನುಭವಿಸಬೇಕ ? ಅದನ್ನು ತೊರೆದು ಹೋಗಲು ಆಗಲ್ವ"
ಅದಕ್ಕೆ ಉತ್ತರ ಕೊಡದೆ ಸುನಿಲ್ ಕೇಳಿದ "ಯಾಕೊ ಮುರಳಿ ಪುನಃ ಅದೆ ಕತೇನ ಬೆಳಗ್ಗೆ ಬೆಳಗ್ಗೆ ಅತ್ತಿಗೆ ಬೈದರ?" , ಸುಮ್ಮನಿದ್ದ ಶ್ರೀಕಾಂತ ಬಾಯಿ ಹಾಕಿದ್ದ
"ಅವರು ತಮಿಳಿನಲ್ಲಿ ಅಲ್ಲವ ನಿನ್ನ ಬೈಯೋದು, ನಿನಗೆ ಪೂರ್ತಿ ಅರ್ಥವಾಗುತ್ತ"
ಮುರಳಿ ಅಂದ "ಬೈದಾಗ ಅರ್ಥವಾಗಬೇಕಿರುವುದು ಬಾಷೆಯಲ್ಲ, ಅವರಲ್ಲಿರುವ ಅಸಹನೆ, ಅಸಹ್ಯ, ನಮ್ಮ ಬಗ್ಗೆ ಇರುವ ತಿರಸ್ಕಾರ, ಅದನ್ನು ಅನುಭವಿಸುವವರಿಗಷ್ಟೆ ಗೊತ್ತು, ಅದು ಬೇರೆ ಮನೆಯಿಂದ ಬಂದ ಹೆಣ್ಣೊಂದು ನನ್ನ ಮನೆಯಲ್ಲಿಯೆ ನನ್ನನ್ನು ಅಪಮಾನಿಸುವ ಕ್ರೌರ್ಯ, ಛೀ.. ಆದರೆ ನಾನು ಅದನ್ನು ಎದುರಿಸಲು ಆಗುತ್ತಿಲ್ಲ, ಚಿಕ್ಕ ಮಕ್ಕಳ ಹಾಗೆ ಅಣ್ಣನಲ್ಲಿ ದೂರು ಕೊಡಲಾರೆ, ಅಥವ ಅವಳಿಗೆ ಸರಿಸಮನಾಗಿ ನಿಂತು ಜಗಳವಾಡಿ ನಾನು ಸಣ್ಣವನಾಗಲಾರೆ" ಎಂದ.
"ಮತ್ತೇನು ಮಾಡಬೇಕೆನ್ನುತ್ತೀಯ" ಶಶಿ ಕೇಳಿದ.
"ಗೊತ್ತಿಲ್ಲ" ಮುರಳಿಯ ಉತ್ತರ.
ಈದಿನ ಅದೆನೊ ಸುನಿಲ್ ಬಳಿ ಸ್ವಲ್ಪ ಹಣವಿತ್ತು. ಅವನು ಬೇಕರಿಯತ್ತ ತಿರುಗಿ ಗಣೇಶನಿಗೆ ಸನ್ನೆ ಮಾಡಿದ ಬನ್ನು ಹಾಗು ಟಿ ತರಲು.ಬನ್ನು ಟೀ ಬರುತ್ತಿರುವಂತೆ ಮತ್ತೆ ಮಾತು ನಿಂತು ಹೋಯಿತು. ಎಲ್ಲರು ಶೂನ್ಯ ದೃಷ್ಟಿಯಿಂದ ಮೌನಿಗಳಂತೆ ಕುಳಿತರು. ರಸ್ತೆಯಲ್ಲಿ ವಾಹನಗಳು ಒಂದರ ಹಿಂದೆ ಹೋಗುತ್ತಲೆ ಇತ್ತು. ಹಾಗಿರಲು ಬೇಕರಿಗೆ ಒಬ್ಬಾಕೆ ಬಂದಳು ಕೈಯಲ್ಲಿ ಒಂದು ಬ್ಯಾಗ್ . ಬೇಕರಿಯಲ್ಲಿ ನಿಂತು ಬೇಕಾದ್ದುದನ್ನೆಲ್ಲ ಕಟ್ಟಿಸಿಕೊಂಡು ಕೆಳಗೆ ಮೆಟ್ಟಲು ಇಳಿದು ಬರಿತ್ತಿರುವಾಗ, ಕನ್ನಡ ಬಾವುಟದ ಕೆಳಗಿನ ಸೋಮಾರಿ ಕಟ್ಟೆಯ ಮೇಲೆ ಕುಳಿತ್ತಿದ್ದ ಇವರನ್ನು ಕಂಡು ನೋಡುತ್ತ ನಿಂತಳು, ಅವಳ ಕಣ್ಣಲ್ಲಿ ಎಂದದೊ ಕಿಡಿ. ಸುನಿಲನಿಗೆ ಆಶ್ಚರ್ಯ ಅವಳೇಕೆ ನಮ್ಮನ್ನು ಹಾಗೆ ಕ್ರೂರ ದೃಷ್ಟಿಯಿಂದ ನೋಡುತ್ತಿದ್ದಾಳೆ, ನಮ್ಮ ತಪ್ಪು ಏನಿರಬಹುದು. ಅವರನ್ನು ಕೆಕ್ಕರಿಸಿ ನೋಡುತ್ತಲೆ ಆಕೆ ಹೊರಟು ಹೋದಳು. ಅವಳು ಹೊರಟ ನಂತರ ಸುನಿಲನೆಂದ
"ಪಾಪ ಆಕೆ ನಮ್ಮನ್ಯಾಕೆ ಆ ರೀತಿ ನೋಡಿದಳು, ನಮ್ಮಿಂದ ಏನು ತೊಂದರೆ ಆಯಿತು?" , ಶಶಿ ಜೋರಾಗಿ ನಗುತ್ತಿದ್ದ
"ಅಲ್ಲ ಸುನಿಲ ಆಕೆ ನಮ್ಮನ್ನಲ್ಲ ನೋಡುತ್ತ ಇದ್ದಿದ್ದು, ಮುರಳಿಯನ್ನು, ಆಕೆ ಮುರಳಿಯ ಅತ್ತಿಗೆ" ಮತ್ತೆ ಜೋರಾಗಿ ನಗುತ್ತಿದ್ದ.
ಸುನಿಲ ಹಾಗು ಶ್ರೀಕಾಂತನಿಗೆ ಅರ್ಥವಾಗಿತ್ತು ಆಕೆಯ ನೋಟದ ಅರ್ಥ. ಏನಾಯಿತೊ, ಮುರಳಿ ದಡ್ಡನೆ ಎದ್ದು ಹೊರಟು ಹೋದ. ನಗುತ್ತಿದ್ದ ಶಶಿ ನಿಲ್ಲಿಸಿ ಕೂಗುತ್ತಿದ್ದ
"ಇರೊ ಯಾಕೆ ಹೋಗ್ತಿದ್ದಿ, ಏನಾಯ್ತೊ " , ಅವನ ಮಾತು ಮುರಳಿ ಕಿವಿಗೆ ಬೀಳಲೆ ಇಲ್ಲ. ಕಿವುಡನಂತೆ ಇವರ ಕಡೆ ತಿರುಗದೆ ಹೊರಟು ಹೋದ.
"ಇವನಿಗೆ ಏನಾಯ್ತು, ಯಾಕೆ ಹೀಗೆ ಹೋದ" ಶಶಿ ಕೇಳಿದ ಸುನಿಲನನ್ನು
"ಅದು ಭಾವಸ್ಪೋಟ ಅದಕ್ಕೆ ಹಾಗೆ ಅವನು ಪ್ರತಿಕ್ರಿಯಿಸಿದ" ಎಂದು ಹೇಳಿದ ಸುನಿಲ
"ಹೋಗಲಿ ಬಿಡು ನಾಳೆ ಬರುತ್ತಾನಲ್ಲ ಆಗ ಕೇಳಿದರಾಯಿತು" ಅಂದ ಶಶಿ
"ಇಲ್ಲ ನಾಳೆ ಅವನು ಬರುವದಿಲ್ಲ" ಅಂದ ಸುನಿಲ
"ಏಕೆ , ಏಕೆ ಬರುವದಿಲ್ಲ " ಆಶ್ಚರ್ಯದಿಂದ ಕೇಳಿದ ಶಶಿ
"ಅದು ಹಾಗೆ ನನಗು ಒಮ್ಮೆ ಹಾಗೆ ಆಗಿತ್ತು, ಆಗ ನಾನು ಹಾಗೆ ವರ್ತಿಸಿದ್ದೆ. ಭಾವನೆ ಒತ್ತಡ ಜಾಸ್ತಿಯಾದಗ ನಮ್ಮ ಹತ್ತಿರದವರೊಡನೆ ಅದನ್ನು ಪ್ರಕಟಿಸಲು ಪ್ರಯತ್ನಿಸುತ್ತೇವೆ ಅಸಹನೆ ತೋರುತ್ತೇವೆ" ಸುನಿಲ ಅಂದ
ನಿಜ ಅದು ಹಾಗೆ ಆಯ್ತು, ಮುರಳಿ ಎರಡು ದಿನ ಬರಲೆ ಇಲ್ಲ. ಮತ್ತೆ ಬಂದಾಗ ಪೂರ್ತಿ ಸಪ್ಪಗಿದ್ದ. ಎಲ್ಲರು ಕೇಳಿದರು ಏಕೊ ಮೊನ್ನೆ ಮನೆಯಲ್ಲಿ ಏನಾಯ್ತು ಎಂದು. ಮುರಳಿ ಅದಕ್ಕೆಲ್ಲ ಉತ್ತರಕೊಡಲು ಹೋಗಲಿಲ್ಲ. ಬದಲಾಗಿ ಪ್ರಶ್ನಿಸಿದ
"ನಾನು ಅವತ್ತು ಕೇಳಿದೆ ಸುನಿಲ ಹೇಳೊ, ನಾವು ಒಂದು ಹೊತ್ತಿನ ಊಟ ಹಾಗು ಮಲಗಲು ಸ್ವಲ್ಪ ಜಾಗಕ್ಕಾಗಿ ಹಿಂಸೆ ಅನುಭವಿಸ ಬೇಕ. ಆ ಹಿಂಸೆಯನ್ನು ತೊರೆದು ಹೋಗಲು ಆಗಲ್ವ"
ಯೋಚಿಸಿ ಸುನಿಲನೆಂದ
"ಆಗುತ್ತೆ . ಹೋಗಬಹುದು ಆದರೆ ಎಲ್ಲಿಗೆ ? ಎಲ್ಲಿಗೆ ಅಂತ ಹೋಗೋದು"
"ಇಲ್ಲಿಂದ ಹೊರಗೆ ಅಂದ ಮೇಲೆ ಹೊರಗೆ ಅಷ್ಟೆ ಎಲ್ಲಿಗೆ ಅಂತ ಪ್ರಶ್ನೆ ಬರಲ್ಲ, ಎಲ್ಲಿಯಾದರು ಆಗಬಹುದು"
"ಯಾವುದಾದರು ಹೋಟೆಲ್ ಗೆ ಹೋಗಿ ಸೆಟಲ್ ಆಗಿಬಿಡೋಣ್ವ? ಇರಲು ಜಾಗವಿರುತ್ತೆ, ಮಾಡಲು ಊಟವಿರುತ್ತೆ" ಅಂದ ಶಶಿ
"ಇರಬಹುದು ಆದರೆ ಅದಕ್ಕೆ ಹಣಕೊಡಬೇಕು" ಶ್ರೀಕಾಂತನೆಂದ
"ಸರಿ ಯಾವುದಾದರು ರೈಲ್ವೆ ನಿಲ್ದಾಣದಲ್ಲೊ ಅಥವ ಪಾರ್ಕಿನಲ್ಲೊ ಇದ್ದುಬಿಡೋದು" ಪುನಃ ಶಶಿ ಎಂದ
"ಅದು ಆಗಲ್ಲ ಪೋಲಿಸನವರೊ ಮತ್ಯಾರೊ ನಮ್ಮನ್ನು ಅಲ್ಲಿಂದ ದಬ್ಬಿ ಬಿಡುತ್ತಾರೆ .
"ನೀನು ಪೋಲಿಸ್ ಅಂದಾಗ ನೆನಪಾಯಿತು, ಪೋಲಿಸ್ ಸ್ಟೇಷನ್ ಗೆ ಹೋಗಿ ಏಕೆ ಇರಬಾರದು, ಜೈಲು, ಹೌದು ಜೈಲು ತುಂಬ ಪ್ರಶಸ್ತವಾದ ಸ್ಥಳ ಇರಲು, ಊಟ ಕೊಡ್ತಾರೆ, ಮಲಗಲು ಜಾಗ, ಕೊಡ್ತಾರೆ ಅದು ಬಿಟ್ಟಿ ಏನು ಅಲ್ಲ ಅದಕ್ಕೆ ತಕ್ಕ ಹಾಗೆ ಕೆಲಸ ಕೊಡ್ತಾರೆ" ಶಶಿ ಹೇಳುತ್ತಿದ್ದ ಉತ್ಸಾಹದಲ್ಲಿ. ಯಾವ ಮಾಯದಲ್ಲೊ ಗಣೇಶ ಸಹ ಇವರ ಜೊತೆ ಬಂದು ಮಾತು ಕೇಳುತ್ತ ನಿಂತಿದ್ದ.
"ಎಲ್ಲ ಸರಿಯೆ ಅವರು ಸುಮ್ಮನೆ ಏನು ಒಳಗೆ ಸೇರ್ಸಲ್ಲ, ಭಾರತದಲ್ಲಿ ಪ್ರತಿ ಕೆಲಸಕ್ಕು ಒಂದು ಸರ್ಟಿಫಿಕೇಟ್ ಬೇಕು, ಜೈಲಿನ ಒಳಗೆ ಹೋಗಲು ಸಹ ಒಂದು ಪತ್ರ ಬೇಕು ಕೋರ್ಟಿನಿಂದ ಅದು ನಮ್ಮ ಹತ್ತಿರ ಇಲ್ಲ"
ಎಂದ ಸುನಿಲ
ಸುಮ್ಮನಿದ್ದ ಮುರಳಿ ಈಗ ಮಾತನಾಡಿದ
"ಅಂದರೆ ಎಲ್ಲರು ನನ್ನ ಜೊತೆ ಬರಲು ಸಿದ್ದರಿದ್ದೀರ"
"ಏಕಿಲ್ಲ, ನಾವೆಲ್ಲರು ಒಂದೆ ದೋಣಿಯಲ್ಲಿರುವವರು, ಬಿಟ್ಟಿ ಅನ್ನಕ್ಕೆ ಮನೆಯಲ್ಲಿ ಬಿದ್ದಿರುವವರು, ಹಾಗಿದ್ದಾಗ ನಮ್ಮ ನಾಲ್ವರ ಸಂಭಂದಗಳು ಮನೆಗಿಂತ ಗಟ್ಟಿಯಲ್ಲವೆ . ಸಮಯವೆಂದರೆ ಜೈಲು ಎನು ನೇಣಿಗು ಜೊತೆಯಲ್ಲಿ ಬರಬಹುದು"
ನಿರ್ವಿಕಾರವಾಗಿ ಮಾತನಾಡಿದ ಶ್ರೀಕಾಂತ. ಎಲ್ಲರು ಮೌನವಾಗಿದ್ದರು.
"ಅಂದರೆ ನಾವು ಜೈಲಿನಲ್ಲಿ ಜಾಗ ಸಂಪಾದಿಸಬೇಕು ಎನ್ನುವ ಹಾಗಿದ್ದರೆ, ಏನಾದರು ಅಪರಾದ ಮಾಡಬೇಕಲ್ಲ ಅದು ಪೋಲಿಸರು ನಮ್ಮನ್ನು ಹಿಡಿದು ಒಳಗೆ ಹಾಕುವ ಹಾಗೆ" ಮುರಳಿ ಎಂದ.
"ನನಗೆ ಒಂದು ಪ್ಲಾನ್ ಹೊಳೆಯುತ್ತಿದ್ದೆ, ಹೇಳಲ " ಜೀನಿಯಸ್ ಇಂಜಿನೀಯರ್ ಶ್ರೀಕಾಂತ ನೆಂದ ಉತ್ಸಾಹದಲ್ಲಿ
"ಬೇಡ, ನೀನು ಮಾತ್ರ ಹೇಳ ಬೇಡ" ಸುನಿಲ್ ಕೈ ಎತ್ತುತ್ತ ಅವನನ್ನು ತಡೆದ
"ಏಕೆ ? ಅವನ ಪ್ಲಾನ್ ಕೇಳದಲೆ ಬೇಡ ಅಂತಿದ್ದಿ " ಮುರಳಿ ಕೇಳಿದ ಅಮಾಯಕನಂತೆ, ಅದಕ್ಕೆ ಸುನಿಲ ನೆಂದ
"ನಿನಗೆ ಗೊತ್ತಿಲ್ಲವ ಶ್ರೀಕಾಂತನ ಬುದ್ದಿವಂತಿಕೆ, ಅವನು ಪ್ಲಾನ್ ಹೇಳಿದರೆ ನಾವು ಅಪರಾದವನ್ನೇನೊ ಮಾಡ್ತೀವಿ, ಆದರೆ ಪೋಲಿಸರು ನಮ್ಮನ್ನೆಂದು ಹಿಡಿಯಲು ಆಗಲ್ಲ, ಆಮೇಲೆ ಆ ಕಳ್ಳತನದ ಹಣ ನಮ್ಮಲ್ಲೆ ಉಳಿದು ಬಿಡುತ್ತೆ, ಥತ್ ಅಸಹ್ಯ ಕಳ್ಳತನದ ಹಣದಲ್ಲಿ ಬದುಕೋದು. ನಮಗೆ ಈಗ ಕಳ್ಳರಾಗೋದು ಬೇಕಿಲ್ಲ, ದರೋಡೆಯು ಬೇಕಿಲ್ಲ, ಜಸ್ಟ್ ಜೈಲಿಗೆ ಹೋಗಬೇಕಾಗುವಷ್ಟು ಮಾತ್ರ ಅಪರಾದ ಮಾಡಬೇಕು ಆಮೇಲೆ ಪೋಲಿಸರು ಹಿಡಿತಾರೆ, ಆ ಕಳ್ಳತನದ ಹಣ ವಾಪಾಸ್ ಹೋಗುತ್ತೆ, ನಾವು ನೆಮ್ಮದಿಯಾಗಿ ಜೈಲು ಸೇರ್ತೀವಿ, ಹೀಗಾಗಬೇಕು ಅಂದರೆ ನಮಗೆ ಈ ಶ್ರೀಕಾಂತನ ಉಪಾಯ ಬೇಕಾಗೊಲ್ಲ, ನಮ್ಮ ಪೋಲಿಸರ ಬುದ್ದಿವಂತಿಕೆಯನ್ನು ಮೀರಿಸದ ಲೆವೆಲ್ ಗಷ್ಟೆ ನಮ್ಮ ಅಪರಾದವಿರಬೇಕು" ಎಂದ ಸುನಿಲ್. ಅದು ನಿಜ ಅಂತ ಎಲ್ಲರು ಯೋಚಿಸುತ್ತಿದ್ದರು.
ಆಗ ಗಣೇಶ ಮದ್ಯ ಮಾತನಾಡಿದ
"ನೀವೆಲ್ಲ ಆಯ್ತು ಅಂದರೆ ನನ್ನ ಹತ್ತಿರ ಒಂದು ಉಪಾಯವಿದೆ, ನಾನು ಇರುವ ಗುಡಿಸಲಿನಲ್ಲಿ ನನ್ನ ಸ್ನೇಹಿನನೊಬ್ಬನಿದ್ದಾನೆ ಬ್ಲೇಡ್ ಮಂಜ ಅಂತ ಅವನಾದರೆ ವರ್ಷಕ್ಕೆರಡು ಸಾರಿ ಸಲಿಸಾಗಿ ಜೈಲಿಗೆ ಹೋಗಿ ಹೊರಗೆ ಬಂದುಬಿಡ್ತಾನೆ. ಆ ಟ್ರಿಕ್ ಅವನಿಗೆ ಚೆನ್ನಾಗಿ ಗೊತ್ತು, ನೀವು ಸಂಜೆ ನನ್ನ ಗುಡಿಸಲ ಹತ್ತಿರ ಬಂದರೆ ಅವನಿಗೆ ಹೇಳ್ತೀನಿ ನಿಮಗೆ ಸಹಾಯ ಮಾಡ್ತಾನೆ " ಎಂದ.
"ಭ್ಲೇಡ್ ಮಂಜ ಅಂದರೆ ಏನು ಅವನೇನು ಬ್ಲೇಡ್ ಉಪಯೋದದಲ್ಲಿ ಪ್ರಸಿದ್ದನಾ" ಕೇಳಿದ ಶಶಿ ದ್ವನಿಯಲ್ಲಿ ಎಂತದೊ ಧ್ರಿಲ್
"ಇಲ್ಲ ಅವನು ಬ್ಲೇಡ್ ಉಪಯೋಸಿದ್ದು ನಾನು ಎಂದು ನೋಡಿಲ್ಲ, ಅ ಹೆಸರು ಅವನಿಗೆ ಹೇಗೆ ಅಂಟಿತು ನನಗೆ ತಿಳಿದಿಲ್ಲ, ಅವನಿಗು ಗೊತ್ತಿದೆಯೊ ಇಲ್ಲವೊ ತಿಳಿದಿಲ್ಲ, ಆದರೆ ಜೈಲಿಗೆ ಹೋಗಲು ಆ ರೀತಿ ಒಂದು ಸೈಡ್ ನೇಮ್ ಇದ್ದರೆ ಅನುಕೂಲ. ಅವನೆ ಎಲ್ಲ ತಿಳಿಸ್ತಾನೆ" ಎಂದ ಗಣೇಶ.
"ಬ್ಲೇಡ್ ಮಂಜ ಅಂದರೆ ಅವನೇನು ತುಂಬಾ ಓದಿದ್ದಾನ" ಕುತೂಹಲದಿಂದ ಶ್ರೀಕಾಂತ ಕೇಳಿದ ತನ್ನ ಡಿಗ್ರಿ ನೆನೆಯುತ್ತ.
"ಛೇ ಇಲ್ಲ ಅವನು ಬರಿ ಎಸ್ ಎಸ್ ಎಲ್ ಸಿ ಫೇಲ್ ಅಷ್ಟೆ, ಒಬ್ಬ ಪೇದೆಗಿರಬೇಕಾದ ಕ್ವಾಲಿಪಿಕೇಶನ್ ಅಷ್ಟೆ ಅವನಿಗಿರೋದು" ಎಂದ ನಗುತ್ತ ಗಣೇಶ. ಅದೇನೊ ಸರಿ ಅಂತ ನಾಲ್ವರು ಒಪ್ಪಿಬಿಟ್ಟರು,
ಅದೇನೊ ಕುತೂಹಲದಿಂದ ಶಶಿ ಕೇಳಿದ ಗಣೇಶನನ್ನು "ಅದು ಸರಿ ಗಣೇಶ ನೀನೇನು ಓದಿದ್ದಿ"
"ನಾನ , ಬಿಡಿ , ನನ್ನದು ಮಾಸ್ಟರ್ ಡಿಗ್ರಿ ಆಗಿದೆ ಕನ್ನಡದಲ್ಲಿ, ಅದು ಚಿನ್ನದ ಪದಕದ ಶ್ರೇಣಿಯಲ್ಲಿ ' ಸಂಕೋಚದಿಂದ ದ್ವನಿ ತಗ್ಗಿಸಿ ಹೇಳಿದ ಗಣೇಶ. ಸಂಜೆ ಗುಡಿಸಲ ಹತ್ತಿರ ಬರ್ತೀವಿ ಎಂದು ಜಾಗದ ಗುರುತು ಪಡೆದು ಎಲ್ಲರು ಅಲ್ಲಿಂದ ಎದ್ದು ಹೊರಟರು.
ಎಲ್ಲ ಹೊರಟ ನಂತರ ಅವರತ್ತಲೆ ನೋಡುತ್ತ ನಿಂತ ಗಣೇಶ. ತಾನು ಅವರಿಗೆ ಮಾಡುತ್ತಿರುವುದು ಸಹಾಯವೊ ಅಥವ ತೊಂದರೆಯೊ ಅವನಿಗೆ ಗೊತ್ತಾಗುತ್ತಿಲ್ಲ. ತಾನು ಅವರಿಗೆ ದಾರಿ ತೋರಿಸುತ್ತಿರುವೆನೊ ಅಥವ ದಾರಿ ತಪ್ಪಿಸುತ್ತಿರುವೆನೊ ಎಂಬ ಗೊಂದಲ ಅವನನ್ನು ಕಾಡುತ್ತಿತ್ತು.
ಗಣೇಶ ಎದ್ದು ಹೋದ ನಾಲ್ವರನ್ನು ನೋಡುತ್ತ ನಿಂತಿರುವಾಗ, ಅಲ್ಲಿಯವರೆಗು ಆ ಸೋಮಾರಿಕಟ್ಟೆಯ ನೆರಳಿನಲ್ಲಿ ಮಲಗಿದ್ದ ನಾಯಿ ಎದ್ದು ನಿಂತಿತು. ಗಣೇಶನನ್ನು ನೋಡಿದ ಅದಕ್ಕೆ ಏನು ಆಯಿತೊ ಏನೊ, ಗಣೇಶನ ಕಾಲಿನ ಮೀನಖಂಡದ ಬಾಗಕ್ಕೆ ಬಾಯಿ ಹಾಕಿ ಜೋರಾಗಿ ಕಚ್ಚಿ ಅವನು ಕೂಗಿಕೊಳ್ಳುತ್ತಿರುವಂತೆ ಅಲ್ಲಿಂದ ಓಡಿ ಹೋಯಿತು.
No comments:
Post a Comment
enter your comments please