Thursday, January 19, 2012

ಸತ್ಯ ಮಂಥನ


ಅಮುಧ ಹೇಳಿದ ಕಥೆ:
  ದಾರಾಳವಾಗಿ ಬೆಳಕು ಬರುತ್ತಿದ್ದ ವಿಶಾಲವಾದ ಡ್ರಾಯಿಂಗ್ ರೂಮ್. ಗೋಡೆಗೆ ಹಾಕಿದ್ದ ಸಮುದ್ರಮಂಥನದ ವರ್ಣಚಿತ್ರ ನೋಡಲು ಆಕರ್ಷಕವಾಗಿತ್ತು. ಹಾಲಹಲವನ್ನು ಅಮೃತ ಎಂಬಂತೆ ನಗುತ್ತ ಕುಡಿಯುತ್ತಿರುವ ಪರಶಿವನ ಶಾಂತಮುಖ
"ಇಷ್ಟಾದರು ನನಗೆ ಒಂದು ವಿಷಯ ತಿಳಿಯಲಿಲ್ಲ ನಿನ್ನ ಗಂಡ ಅರವಿಂದ ನಿನ್ನನ್ನು ತ್ಯಜಿಸಿಹೊರಟು ಹೋದದ್ದಕ್ಕೆ ಕಾರಣವನ್ನೆ ನೀನು ತಿಳಿಸಲಿಲ್ಲ"
ಹೊರಗೆ ಹಸಿರುಗಿಡಗಳ ನಡುವೆ ಬಣ್ಣಬಣ್ಣದ ಹೂಗಳ ಮೇಲೆ ಕುಳಿತು ಹಾರಿ ಮಾಡುತ್ತಿದ್ದ ಚಿಟ್ಟೆಗಳನ್ನು ಕಿಟಕಿಯಿಂದ ನೋಡುತ್ತಿದ್ದ ಅಮುದ ನಿದಾನವಾಗಿ  ನನ್ನತ್ತ ತಿರುಗಿ ದೀರ್ಘವಾಗಿ ನೋಡಿದಳು. ನನಗೆ ಮುಜುಗರ ಅನ್ನಿಸಿ ಮತ್ತೆ ನುಡಿದೆ "ಹಾಗಲ್ಲ ಅಮು, ನಿನಗೆ ಬೇಸರ ಮಾಡಬೇಕೆಂದಲ್ಲ ಕಾರಣ ತಿಳಿದರೆ ಸಮಸ್ಯೆ ಬಿಡಿಸಲು ಸಹಾಯವಾದೀತ ಅಂತ". ಅಮುದ ವಿಷಾದ ಭಾವದಿಂದ ನಕ್ಕಳು
"ಕಾರಣ? ಅದು ನನಗೆ ಈವರೆಗೂ ತಿಳಿದಿಲ್ಲ. ಅರವಿಂದ್ ಮನೆ ಬಿಟ್ಟುಹೋಗಿ ವರ್ಷವೇ ಆಗುತ್ತ ಬಂದಿತು ನಾನು ಯೋಚಿಸುತ್ತಲೇ ಇದ್ದೀನಿ ಇದೆಲ್ಲ ಹೇಗಾಯಿತು? ಏಕಾಯಿತು? ಅಂತ ನನಗೆ ತಿಳಿಯುತ್ತಿಲ್ಲ" ಅಂದಳು.
"ಇದೇನು ಅಮುದ ಹೀಗೆ ಹೇಳುತ್ತಿ! ಕಡೆ ಪಕ್ಷ ನಿನ್ನ ಗಂಡ ಅರವಿಂದ ಯಾವಕಾರಣದಿಂದ ನಿನ್ನಿಂದ ದೂರಹೋಗುತ್ತಿದ್ದೀನಿ ಅಂತ ಹೇಳಿಹೋಗಲಿಲ್ಲವೆ? ಕಡೆಗೆ ಒಂದು ಕಾಗದ, ಒಂದು ಫೋನ್ ಕಾಲ್, ಈ-ಮೈಲ್ ಮಾಡಲಿಲ್ಲವೆ" ಎಂದೆ ಆಶ್ಚರ್ಯದಿಂದ.
"ಇಲ್ಲ ಕೀರ್ತಿ ಇಲ್ಲ, ಒಂದು ವರ್ಷದಿಂದ ಎಲ್ಲರಿಗೂ ನಾನು ಇದೇ ಉತ್ತರ ಕೊಟ್ಟು ಸಾಕಾಗಿದೆ, ಕಡೆಗೆ ನನ್ನ ಪುಟ್ಟ ಮಗನೂ ಕೇಳುತ್ತಿದ್ದಾನೆ ಅಪ್ಪ ಏಕಮ್ಮ ಹೋದರು, ಎಲ್ಲಿಗೆ? ಎಂದು. ನಾನು ಕಾರಣವೆ ತಿಳಿಯದೆ ಅಪರಾದಿಯಾಗಿದ್ದೇನೆ ಅರವಿಂದ ಏಕೆ ಹೀಗೆ ಮಾಡಿದರು ಅನ್ನುವುದು ನನಗೆ ತಿಳಿಯುತ್ತಿಲ್ಲ".
ನಾನು ತುಸು ಸಂಕೋಚದಿಂದಲೆ ಕೇಳಿದೆ" ಅಮು ಬೇಸರ ಪಡಬೇಡ ಅರವಿಂದನಿಗೆ ಹೊರಗೆ ಆಫೀಸ್ ಅಥವ ಎಲ್ಲಾದರು ಬೇರೆ ಹೆಣ್ಣಿನ ಸಹವಾಸ...?"
ಅಮುದ ಉದ್ವಿಘ್ನಳಾದಳು "ಕೀರ್ತನ" ಎಂದು ಜೋರಾಗಿ ಚೀರಿದವಳು ನಂತರ ಶಾಂತದ್ವನಿಯಲ್ಲಿಯೆ " ಆರೀತಿ ಯೋಚಿಸಬೇಡ ಕೀರ್ತನ ನನಗೆ ನೋವಾಗುತ್ತದೆ. ಅವರು ಅಂತಹವರಲ್ಲ, ನಾನೆಂದರೆ ಅತೀವ ಪ್ರೀತಿ ಅವರಿಗೆ.ಹೆಣ್ಣೆಂದರೆ ತುಂಬಾ ಗೌರವ ಮರ್ಯಾದೆ ಅವರಿಗೆ" ಎಂದಳು. ನಾನು ತಲೆತಗ್ಗಿಸಿದೆ. ಸ್ವಲ್ಪಕಾಲ ಮೌನ ನಂತರ ಮತ್ತೆ ಕೇಳಿದೆ.
"ಅಮುದ ನೆನಪಿಸಿಕೊ ಅವರು ಹೋಗುವ ಮುಂಚೆ ಅವರಲ್ಲಿ ನೀನು ಏನಾದರು ಬದಲಾವಣೆ ಗಮನಿಸಿದ್ದೆಯಾ? ನಡೆ ನುಡಿಯಲ್ಲಿ ಸ್ವಭಾವದಲ್ಲಿ, ಅಥವ ಏನಾದರು ಘಟನೆಗಳು?" .
ಅಮುದ ಸಣ್ಣ ದ್ವನಿಯಲ್ಲಿ ಮಾತನಾಡುತ್ತಿದ್ದಳು
"ನಿಜ ಕೀರ್ತಿ ನಾನು ಎಷ್ಟೋ ಸಾರಿ ಯೋಚಿಸಿದ್ದೀನಿ, ಅವನು ಏಕೊ ಸಪ್ಪಗಾಗಿದ್ದ. ಏನೋ ಸಮಸ್ಯೆಯಲ್ಲಿರುವನಂತೆ ಸದಾ ಯೋಚನೆ. ಮಾಯವಾಗುವ ಮೂರುತಿಂಗಳ ಮುಂಚಿನಿಂದ ಈ ಮಾರ್ಪಾಡು ಅವನಲ್ಲಿ ಕಾಣಿಸಿತ್ತು.ನನ್ನ ಆತ್ಮೀಯ ಗೆಳೆಯನಂತೆ ವರ್ತಿಸುತ್ತಿದ್ದವ, ಮನೆಯಲ್ಲಿದ್ದಾಗ ಸದಾ ನನ್ನ ಮಡಿಲಿನಲ್ಲಿರುತ್ತಿದ್ದವ, ಮುಖಕೊಟ್ಟು ಮಾತನಾಡುವದನ್ನೆ ನಿಲ್ಲಿಸಿದ್ದ. ನನ್ನ ಹತ್ತಿರವೆ ಸೇರುತ್ತಿರಲಿಲ್ಲ. ಮಗುವಿನ ಜೊತೆಯು ಅಪರೂಪವೆ. ಒಮ್ಮೊಮ್ಮೆ ತಾನು ಪ್ರೀತಿಸುತ್ತಿದ್ದ ಮಗುವನ್ನು ತೊಡೆಯ ಮೇಲೆ ಕೂಡಿಸಿಕೊಂಡು ಹೊರಗಿನ ಲಾನ್ ನಲ್ಲಿ ಸುಮ್ಮನೆ ಕುಳಿತುಬಿಡೋನು"
ನಾನು ನಡುವೆಯೆ ಕೇಳಿದೆ "ಮತ್ತೆ ನೀನು ವಿಚಾರಿಸಲಿಲ್ಲವೆ ಏಕೆ ಅಂತ" . ಅಮುದ ಮೌನವಾದಳು ನಾನು ಮದ್ಯೆ ಮಾತನಾಡಿದ್ದು ಅವಳಿಗೆ ಸರಿಹೋಗಲಿಲ್ಲವೇನೊ,ಸೂಕ್ಷ್ಮಮನಸಿನ ಹುಡುಗಿ ಅವಳು.ನಂತರ ಅವಳೆ ಮುಂದುವರೆಸಿದಳು
"ನನಗೆ ನೆನಪಿದೆ ಅಂದು ಬಾನುವಾರ ಏನನ್ನೊ ಹರಟುತ್ತ ಕುಳಿತಿದ್ದವ ಲಘುಲಹರಿಯಲ್ಲಿದಂತೆ ಇದ್ದ. ತನ್ನ ಬಾಲ್ಯದ ನೆನಪುಗಳು ಅವನ ತಂದೆಯ ಮಾತುಗಳು ಎಂತದೋ ಎಲ್ಲ. ಅವನು ತಿಳಿಸಿದಂತೆ ಹುಟ್ಟಿನಿಂದ ಅವನು ಇಲ್ಲಿಯವನಲ್ಲ ಶ್ರೀಲಂಕದವನು, ಹೆತ್ತ ತಂದೆಯನ್ನು ತೊರೆದು ಹೇಗೊ ಬೆಂಗಳೂರು ಸೇರಿದ ಸಾಕು ತಂದೆಯ ಜೊತೆ.ಮಾತಿನ ನಡುವೆ ನಾನು ತಿಳಿಸಿದೆ ನಾನು ಶ್ರೀಲಂಕಾ ಮೂಲದವಳೆ ಎಂದು. ಅವನಿಗೆ ಅಶ್ಚರ್ಯ. ನಾನು ಸಾಕು ಮಗಳು ಅಂತ ಅವನಿಗೆ ತಿಳಿದಿತ್ತು ಆದರೆ ನನ್ನ ಮೂಲ ಸಿಂಹಳ ಅಂತ ತಿಳಿದಾಗ ಕುತೂಹಲದಿಂದ ವಿಚಾರಿಸಿದ. ನನಗೆ ನಿಜಕ್ಕು ನನ್ನ ಹೆತ್ತ ತಂದೆ ತಾಯಿಯ ನೆನಪಾಗಲಿ ವಿವರವಾಗಲಿ ಸಾಕಷ್ಟು ತಿಳಿದಿರಲಿಲ್ಲ, ಅವರನ್ನು ನೋಡಿದ ನೆನಪು ಇಲ್ಲ. ನನ್ನ ಅಮ್ಮ ಬಾಗ್ಯಮ್ ಇಂದಿಗೂ ನನಗೆ ಸಾಕುತಾಯಿ ಎಂದು ನನಗೆಂದು ಅನ್ನಿಸಿಲ್ಲ. ನನ್ನ ಹತ್ತಿರ ಹಳೆಯ ಬಾವಚಿತ್ರ ಒಂದಿತ್ತು ನನ್ನ ತಂದೆ ತಾಯಿ ಅಣ್ಣನ ಜೊತೆ ತೆಗೆಸಿರುವುದು. ಒಳಗೆಲ್ಲೊ ಇತ್ತು ಉತ್ಸಾಹದಲ್ಲಿ ಅದನ್ನು ಹುಡುಕಿ ತಂದು ತೋರಿಸಿದೆ. ಅವನು ಗಂಭೀರನಾಗಿ ಅದನ್ನು ನೋಡುತ್ತ ಇದರಲ್ಲಿ ನೀನು ಯಾರು ಅಂತ ಕೇಳಿ ತಿಳಿದ" 
ನಾನು ಗಮನಿಸಿದೆ ಅಮುದ ಅರವಿಂದರನ್ನು ಏಕವಚನ ಬಹುವಚನ ಎರಡರಲ್ಲು ಕರೆಯುತ್ತಿದ್ದಳು.
ಅಮುದ ಮುಂದುವರೆಸಿದಳು ತನ್ನ ಕಥೆಯನ್ನು "ನಂತರ ಅವನು ಅಮ್ಮನ ಮನೆಗೂ ಒಮ್ಮೆ ಹೋಗಿದ್ದನಂತೆ ನನ್ನ ಬಗ್ಗೆ ತಿಳಿಯಲು. ಅವರು ಎಲ್ಲ ಹೇಳಿದ್ದರು ನನ್ನ ತಂದೆ ತಾಯಿಯ ಬಗ್ಗೆ ಈಗ ಅವರಾರು ಬದುಕಿಲ್ಲ ಶ್ರೀಲಂಕದ ಜನಾಂಗೀಯ ಘರ್ಷಣೆಯಲ್ಲಿ, ತಮಿಳು ಈಳಂಗಳ ಸ್ವಾತಂತ್ರ ಹೋರಾಟದ ಮಾರಣಹೋಮಕ್ಕೆ ಅವರು ಬಲಿಯಾಗಿ ಹೋಗಿದ್ದರು.ಈ ವಿಷಯವನ್ನೆಲ್ಲ ನನ್ನ ಅಮ್ಮ ಅವನಿಗೆ ತಿಳಿಸಿದ್ದರು"
"ಅದಾದ ಮೂರು ತಿಂಗಳಿನ ನಂತರ ಅವನು ಯಾವ ಸೂಚನೆಯನ್ನು ಕೊಡದೆ ಇದ್ದಕ್ಕಿದ್ದಂತೆ ಮಾಯವಾಗಿ ಹೋಗಿದ್ದ. ನಾನು ಅವನನ್ನು ಹುಡುಕಲು ಎಷ್ಟೋ ಪ್ರಯತ್ನ ಪಟ್ಟೆ. ಆದರೆ ಮೂರು ತಿಂಗಳ ಅವದಿಯಲ್ಲಿ ನನಗೆ ಯಾವ ಸೂಚನೆಯನ್ನು ಕೊಡದೆ ಅವನು ಬಹಳಷ್ಟು ಕೆಲಸಗಳನ್ನು ಮಾಡಿಮುಗಿಸಿದ್ದ. ಅವನ ಹೆಸರಿನಲ್ಲಿದ್ದ ಮನೆಯಮೇಲಿನ ಪೂರ ಸಾಲವನ್ನು ತೀರಿಸಿ ನನ್ನ ಹೆಸರಿಗೆ ವರ್ಗಾಯಿಸಿದ್ದ. ಅವನ ಸಾಕು ತಂದೆಯ ಎಲ್ಲ ಅಸ್ತಿಯನ್ನು ಮಾರಿ ಬಂದ ಹಣವನ್ನು ನನಗೆ ಸಿಗುವಂತೆ ಏರ್ಪಾಡು ಮಾಡಿದ್ದ. ಮುಂದಿನ ನನ್ನ ಜೀವನಕ್ಕೆ ಆಗಲಿ ನನ್ನ ಮಗನಿಗೆ ಆಗಲಿ ಯಾವುದೆ ತೊಂದರೆಯಾಗದಂತೆ ಎಲ್ಲ ಏರ್ಪಾಡುಗಳನ್ನು ಮಾಡಿಯೆ ಇಲ್ಲಿಂದ ಹೊರಟುಹೋಗಿದ್ದ". ಅಮುದಳ ದ್ವನಿಯಲ್ಲಿ ತುಂಬು ವಿಷಾದ.
"ನೀನು ಅವರ ಆಪೀಸಿನಲ್ಲಿ ವಿಚಾರಿಸಿದೆಯ?" ನಾನು ಕೇಳಿದೆ. ಅದಕ್ಕವಳು " ಎಲ್ಲ  ಆಯಿತು ಅವನು ಮನೆ ಬಿಟ್ಟಿ ಹೋಗುವ ಎರಡು ತಿಂಗಳ ಮುಂಚೆಯೆ ಕೆಲಸವನ್ನು ಬಿಟ್ಟಿದ್ದ ಆದರೆ ನನಗದು ತಿಳಿದಿರಲಿಲ್ಲ. ಎಲ್ಲವನ್ನು ಸಾಕಷ್ಟು ಯೋಚಿಸೆಯೆ ಮಾಡಿದ್ದಾನೆ ಅನ್ನಿಸುತ್ತೆ" ಎಂದಳು. ಮುಂದುವರೆದು
"ಈಗ ನನಗೆ ಅದೇ ಆಫೀಸಿನಲ್ಲಿಯೆ ಕೆಲಸ ಕೊಟ್ಟಿದ್ದಾರೆ, ನನ್ನದು ಹೇಗು ಅದೇ ಕ್ವಾಲಿಫಿಕೇಷನ್ ಅಲ್ಲವಾ ಹಾಗಾಗಿ? ಜೀವನಕ್ಕೆ ಏನು ತೊಂದರೆಯು ಇಲ್ಲ ಅದರೆ ಅದಕ್ಕೆ ಅರ್ಥವೂ ಇಲ್ಲ. ನನಗೆ ಎಲ್ಲ ದಾರಿ ಮುಚ್ಚಿದೆ. ಅವನು ಯಾವತ್ತೊ ಬರುತ್ತಾನೆ ಅಂತ ನಿರೀಕ್ಷೆ ಮಾಡುತ್ತ ಮಗನನ್ನು ಬೆಳೆಸುವದೊಂದೆ ಉಳಿದಿರುವ ಮಾರ್ಗ" ಎಂದು ಮೌನವಾದಳು. ಅಮುದ ಒಬ್ಬ ಶ್ರೀಲಂಕ ಮೂಲದವಳು ಅನ್ನುವ ವಿಷಯ ಅವನನ್ನು ಏಕೆ ಅಷ್ಟೊಂದು ವಿಹ್ವಲಗೊಳಿಸಿತು ಎಂದು ತಿಳಿಯಲಿಲ್ಲ.
ನಾನು ಮಾತು ಮುಗಿಸಿ ಹೊರಟೆ. ನನ್ನ ಬೆಂಗಳುರು ವಾಸ ಸದ್ಯಕ್ಕೆ ಮುಗಿಯಿತು. ನಾಳೆ ಚೆನ್ನೈಗೆ ಹೋಗುತ್ತಿದ್ದೇನೆ. ಮುಂದಿನ ತಿಂಗಳು ಉತ್ತರ ಭಾರತದ ಪ್ರವಾಸದಲ್ಲಿ ಕಾಶಿಗೆ ಹೋಗುತ್ತಿದ್ದೀನಿ ಅಂತ ತಿಳಿಸಿದೆ. ಅದಕ್ಕವಳು ನಗುತ್ತ " ಹೋಗು ಬಹುಷಃ ನನ್ನ ಸಮಸ್ಯೆಗೆ ಅಲ್ಲೆ ಪರಿಹಾರ ಸಿಗಬಹುದೇನೊ ನೋಡು " ಅಂದಳು ತಮಾಷಿಗೆ ಎಂಬಂತೆ.
  ನಾನು ಕಾರು ಹತ್ತುತ್ತ ತಿರುಗಿ ನೋಡಿದೆ ಗೇಟಿನಬಳಿ ಅವಳು ನಿಂತಿದಳು ಅವಳ ಹಿಂಬಾಗದಲ್ಲಿ ಮನೆಯ ನಾಮಫಲಕ ಕಾಣುತ್ತಿತ್ತು "ಧಾರುಣಿ" . ಒಳ್ಳೆ ಎಲಿಗೆಂಟ್ ಲುಕ್ ಇರುವ ಮನೆ ಅಂದುಕೊಳ್ಳುತ್ತ ಅವಳಿಗೆ ಬೈ ಹೇಳಿ ಹೊರಟೆ

ಅರವಿಂದ ಹೇಳಿದ ಕಥೆ:
  ಕಾಶಿಗೆ ಬಂದು ಮೂರುದಿನಗಳು ಕಳೆದಿದ್ದವು. ನನ್ನ ಕೆಲಸಗಳೆಲ್ಲ ಮುಗಿಯುತ್ತ ಬಂದಿತು. ನಡುವೆ ಕಾಶಿವಿಶ್ವನಾಥನ ದರ್ಶನ ಹಾಗು ಗಂಗಾನದಿ ಸೇರಿದಂತೆ ಎಲ್ಲವನ್ನು ನೋಡಿಯಾಗಿತ್ತು. ಹನುಮಾನ ಘಾಟಿನ ಪರಿಚಯದ ತಮಿಳಿನವರ ಮನೆಯಲ್ಲಿ ವಾಸವಾಗಿದ್ದು ಊಟತಿಂಡಿಗೇನು ತೊಂದರೆಯಿರಲಿಲ್ಲ. ಜೊತೆ ಜೊತೆಯಾಗಿ ನನ್ನ ಆಫೀಸಿನ ಕೆಲಸವು ಮುಗಿಯುತ್ತಿತ್ತು. ಎಲ್ಲಿ ಹೋದರು ಏಕೊ ನನ್ನ ಗೆಳತಿ ಅಮುದ ನೆನಪಿಗೆ ಬರುತ್ತಿದ್ದಳು ಅವಳು ಅಲ್ಲಿಂದ ಹೊರಡುವ ಮುಂಚೆ ಅಂದಿದ್ದಳು ನನ್ನ ಸಮಸ್ಯೆಗೆ ಕಾಶಿಯಲ್ಲೆ ಈ ವಿಶ್ವನಾಥನ ಕ್ಷೇತ್ರದಲ್ಲಿ ಪರಿಹಾರ ಸಿಗಬಹುದೇನೊ ಎಂದು.
ಚೈನೈನಲ್ಲಿ ಸಹೋದ್ಯೋಗಿಯೊಬ್ಬರು ಹೇಳಿದ್ದರು ಕಾಶಿಗೆ ಹೋದರೆ ರಾಮಕ್ರಿಷ್ಣಾಶ್ರಮಕ್ಕೆ ಹೋಗಿ ಬನ್ನಿ ಅಲ್ಲಿ ಚೆನ್ನಾಗಿದೆ ಎಂದು.ಏನಿದೆ ನೋಡೋಣ ಅಂತ ಕುತೂಹಲಕ್ಕೆ ಆದಿನ ಸಂಜೆ ಅಲ್ಲಿಗೆ ಹೋದೆ. ಅಲ್ಲೆಲ್ಲ ಸುತ್ತಾಡುವಾಗ ಹಾಲಿನಲ್ಲಿ ಯಾವುದೋ ಪ್ರವಚನ ನಡೆದಿತು.ಬಾರತೀಯ ಸಮಾಜದಲ್ಲಿ ತಂದೆ ತಾಯಿ ಅಣ್ಣಾ ಅಕ್ಕ ತಂಗಿ ಅಂತ ಕುಟುಂಬ ಸಂಬಂದಗಳ ಬಗ್ಗೆ ಅದ್ಬುತವಾಗಿ ವಿವರಿಸುತ್ತಿದ್ದರು. ನಾನು ಸ್ವಲ್ಪ ಹೊತ್ತು ಕೇಳುತ್ತ ಕುಳಿತುಕೊಂಡೆ. ಸುತ್ತಲು ಕಣ್ಣಾಡಿಸುವಾಗ ಗೋಡೆಯ ಬಳಿ ಬಿಳಿಯ ಪೈಜಾಮ ಕುರ್ತಾ ದರಿಸಿ ಕುಳಿತ್ತಿದ್ದ ಗಡ್ಡದಾರಿಯೊಬ್ಬರು ನನ್ನ ಗಮನ ಸೆಳೆದರು. ಇದ್ದಕಿದ್ದಂತೆ ಅನ್ನಿಸಿತು ಅವರದು ಪರಿಚಿತ ಮುಖ, ಯಾರೀತ ಅಮುದಳ ಗಂಡ ಅರವಿಂದನೆ?. ಮತ್ತೆ ಮತ್ತೆ ಅವರತ್ತಲೆ ನೋಡುತ್ತಿದ್ದ ನನ್ನನು ಅವರು ಗಮನಿಸಿದಂತೆ ಕಾಣಿಸಿತು. ನನಗೇಕೊ ಕುತೂಹಲ ಕೆದರಿತ್ತು ಆದರು ಹಿಂಜರಿಕೆ ನನ್ನ ಊಹೆ ತಪ್ಪಾಗಿದ್ದರೆ? ಎಂದು. ಬೆಂಗಳೂರಿನ ಅರವಿಂದ ಕಾಶಿಯಲ್ಲೇಕೆ ನೆಲಸುತ್ತಾರೆ?. ಪ್ರವಚನ ಮುಗಿದಂತೆ ಎಲ್ಲ ಎದ್ದು ಹೊರಟರು ನಾನು ಹೇಗೊ ಅವ್ಯಕ್ತಿಯ ಸಮೀಪ ಸೇರಿದೆ ನಂತರ ಅಂಗ್ಲ ಬಾಷೆಯಲ್ಲಿ
"ಕ್ಷಮಿಸಿ ನೀವು ಇಲ್ಲಿಯವರೇನಾ? " ಅಂತ ಪ್ರಶ್ನಿಸಿದೆ. ಆತ ನಿಂತು ನನ್ನ ಕಡೆ ನೋಡಿದರು ಅಂಗ್ಲಬಾಷೆಯಲ್ಲಿಯೆ ಉತ್ತರಿಸಿದರು, " ಹೌದು ನಾನು ಇಲ್ಲಿಯೆ ಆಶ್ರಮದಲ್ಲಿಯೆ ನೆಲೆಸಿದ್ದೀನಿ".
ನಾನು ಮುಂದುವರೆದು ಹೇಳಿದೆ " ತಪ್ಪು ತಿಳಿಯಬೇಡಿ ನಿಮ್ಮನ್ನು ನೋಡುವಾಗ ನನ್ನ ಸ್ನೇಹಿತೆ ಒಬ್ಬಳಿದ್ದಾಳೆ ಬೆಂಗಳೂರಿನಲ್ಲಿ ಅಕೆಯ ಪತಿ ಅರವಿಂದ ಅಂತ ಅವರು ಅನ್ನಿಸಿತು" ಎಂದೆ. ಒಂದು ಕ್ಷಣ ಮೌನವಾಗಿ ನಿಂತರು ನನಗೇನೊ ಆತಂಕ ಏನು ಹೇಳುತ್ತಾರೊ ಎಂದು. ಆಗ ಆತ
"ನೀವು ಅಮುದ ಸ್ನೇಹಿತೆ ಕೀರ್ತನ ಅಲ್ಲವ ಚೈನೈನವರು" ಅಂದರು, ಈಗ ಅವರ ಮಾತು ಕನ್ನಡಕ್ಕೆ ತಿರುಗಿತ್ತು. ನನಗೆ ಹುರ್ರಾ ಎನ್ನುವಂತಾಯಿತು. ನನ್ನ ಆತಂಕವೆಲ್ಲ ಕರಗಿ ಆನಂದವಾಗಿತ್ತು ಕಡೆಗೂ ನನ್ನ ಊಹೆ ನಿಜವಾಯಿತಲ್ಲ ಅಂತ.
"ನಿಮ್ಮ ಹತ್ತಿರ ಮಾತನಾಡಬೇಕಲ್ಲ ಸ್ವಲ್ಪ " ಎಂದೆ. ಅವರು ಮತ್ತೆ ಮೌನವಾದರು ನಂತರ ಹೇಳಿದರು
"ಬನ್ನಿ ಹೊರಗೆ ಕಲ್ಲಿನ ಬೆಂಚುಗಳಿವೆ ಕುಳಿತು ನಿದಾವವಾಗಿ ಮಾತನಾಡಬಹುದು" ಎನ್ನುತ್ತ ಹೊರಟರು.
ಕಾಶಿಯ ದಗೆ ಚೈನೈಗಿಂತ ಬಿನ್ನ ದೇಹವೆಲ್ಲ ಬಿಸಿಯಾಗುತ್ತಿತ್ತು. ಅವರು ಮಾತಾಡುತ್ತಾರೆ ಎಂದು ಕಾದೆ, ಆದರೆ ಅವರದು ಅದೇ ದಿವ್ಯ ಮೌನ,ಹಾಗಾಗಿ ನಾನೆ ಮಾತನಾಡಿದೆ.
"ಅರವಿಂದ್ ನೀವು ಮಾಡಿರುವುದು ಸರಿಯಾ? ನನಗೆ ನನ್ನ ಗೆಳತಿಯ ಪರವಾಗಿ ಮಾತನಾಡುವ ಹಕ್ಕಿದೆ, ಅವಳು ಯಾವ ತಪ್ಪು ಮಾಡಿದ್ದಾಳೆ ಅಂತ ಅಲ್ಲಿ ಒಬ್ಬಳನ್ನೆ ಬಿಟ್ಟು ಬಂದು ಇಲ್ಲಿ ಸನ್ಯಾಸಿಯಾಗಿ ಕುಳಿತ್ತಿದ್ದೀರಿ?" ಅಂದೆ.
ಏನು ಉತ್ತರ ಕೊಡುವುದು ಅಂತ ಯೋಚಿಸುವಂತೆ ನನ್ನ ಮುಖ ನೋಡಿದರು, ನನಗೆ ಮತ್ತೆ ಹುರುಪು ಬಂದಂತಾಗಿ ಮತ್ತೆ ಜೋರಾಗಿ ಮಾತನಾಡಿದೆ
"ನಿಮಗೆ ಸಂಸಾರ ಬೇಸರ ಅನ್ನುವದಾದರೆ ಬೇಡ ಅನ್ನುವಂತಿದ್ದರೆ ಮದುವೆ ಆಗಿದ್ದಾದರು ಯಾಕೆ? ನಡುನೀರಿನಲ್ಲಿ ಕೈಬಿಟ್ಟಿದ್ದು ಯಾಕೆ? ಕಡೆಯಪಕ್ಷ ನೀವು ಸನ್ಯಾಸಿಯಾಗಲು ಅವಳಿಗೆ ತಿಳಿಸಿ ಒಪ್ಪಿಗೆ ಪಡೆಯುವುದು ನಿಮಗೆ ಧರ್ಮ ಅನ್ನಿಸಲಿಲ್ವ?" ಎಂದೆ.
ಅವರು ನನ್ನತ್ತ ಆಶ್ಚರ್ಯದಿಂದ  ನೋಡುತ್ತ ನಿದಾನವಾಗಿ ನುಡಿದರು " ಕೀರ್ತನ ನಾನು ಸನ್ಯಾಸಿ ಅಲ್ಲ ನೀವು ತಪ್ಪು ತಿಳಿಯುತ್ತಿದ್ದೀರಿ"
ನಾನು ಸಾಕಷ್ಟು ಪೆಚ್ಚಾಗಿದ್ದೆ,ಆದರು ಸಾವರಿಸಿ ನುಡಿದೆ "ಇರಬಹುದೇನೊ ಆದರೆ ಅವಳನ್ನು ಇದ್ದಂತೆ ಬಿಟ್ಟು ಬಂದಿರುವುದು ಸತ್ಯ ತಾನೆ, ಕಡೆಗೆ ನೀವು ಅವಳನ್ನು ಏಕೆ ತೊರೆದಿರಿ ಅವಳ ಕಡೆಯೊಂದ ಆದ ತಪ್ಪಾದರು ಏನು ಎಂದು ತಿಳಿಯುವ ಹಕ್ಕು ಅವಳಿಗಿಲ್ಲವಾ? "
ಅವರು ನಿದಾನವಾಗಿ ನುಡಿದರು "ಅವಳಿಂದ ಯಾವ ತಪ್ಪು ಆಗಿಲ್ಲ ಕೀರ್ತನ ನನ್ನದು ಇಲ್ಲ ಆದರೆ ವಿದಿ ಅನ್ನುವುದು ಆಡಿದ ವಿಚಿತ್ರ ಆಟದಲ್ಲಿ ನಾನು ತಪ್ಪು ಮಾಡಿ ಒಂದು ಪಾಪಕೂಪದಲ್ಲಿ ಸಿಕ್ಕಿಬಿದ್ದೆ. ಅವಳನ್ನು ತೊರೆದು ಬರದೆ ನನಗೆ ಬೇರೆ ಮಾರ್ಗವೆ ಇಲ್ಲವಾಗಿತ್ತು ಬೇರಾವ ದಾರಿಯು ಇರಲಿಲ್ಲ"
ನಾನು ಮತ್ತೆ ಹೇಳಿದೆ " ಹೀಗೆ ಒಗಟಾಗಿ ಹೇಳಿದರೆ ಯಾವ ಸಮಸ್ಯೆಯು ಪರಿಹಾರವಾಗದು, ಬಿಡಿಸಿ ಹೇಳಿದರೆ ಸಮಸ್ಯೆ ಬಿಡಿಸಲು ಪ್ರಯತ್ನಪಡಬಹುದು".
ನಾನು ಏಕೊ ಸ್ವಲ್ಪ ಮೃದುವಾಗಿದ್ದೆ, ಅವರ ಮುಖಭಾವ ಮತ್ತು ದ್ವನಿಯೆ ಹಾಗಿತ್ತು.ಅರವಿಂದ ಮತ್ತೆ ನುಡಿದರು,ಎಂತದೊ ವಿಷಾದಭಾವದ ನಗುವಿತ್ತು ಅವರ ಮುಖದಲ್ಲಿ
"ಆಗದು ಕೀರ್ತನ , ಇದು ಪರಿಹಾರವೆ ಇಲ್ಲದ ಸಮಸ್ಯೆ, ಕ್ಷಮೆ ಮತ್ತು ಪಶ್ಚಾತಪವಿರದ ಅಗ್ನಿಕುಂಡ, ನಿಮಗೆ ಅದನ್ನು ಬಿಡಿಸಿಹೇಳಬೇಕೆಂದರೆ ನನ್ನ ಜೀವನದ ಪೂರ್ಣಕಥೆಯನ್ನು ಮೊದಲಿನಿಂದಲೂ ನಿಮಗೆ ಹೇಳಬೇಕು. ಕೀರ್ತನ ಕ್ರಿಶ್ಚಿಯನ್ನರಲ್ಲಿ ಒಂದು ಪದ್ದತಿಯಿದೆ ಪಾದ್ರಿಗಳ ಬಳಿಹೋಗಿ ನಮ್ಮ ಪಾಪನಿವೇದನೆ ಮಾಡಿಕೊಂಡು ಅದರಿಂದ ಮುಕ್ತರಾಗಬಹುದು. ಆದರೆ ನಿಮ್ಮ ಬಳಿ ನನ್ನ ಪಾಪ ನಿವೇದನೆಯಿಂದ ನನ್ನ ಮನ ಹಗುರವಾಗಬಹುದೆ ವಿನಃ ಪಾಪಮುಕ್ತನಾಗಲಾರೆ, ಕೇಳುವಿರಾ?"  ಎಂದರು.
ನನಗೆ ಕುತೂಹಲವೆನಿಸುತ್ತಿತ್ತು. ಏಕೊ ಆತನ ಬಗ್ಗೆ ಇದ್ದ ಮೊದಲಿನ ಕೋಪ ಮಾಯವಾಗಿತ್ತು. ಅರವಿಂದ ಕಣ್ಣುಮುಚ್ಚಿ ತನ್ನ ಕಥೆಯನ್ನು ಪ್ರಾರಂಬಿಸಿದರು.
"ಕೀರ್ತನ ನಿಮಗೆ ತಿಳಿಯದೊ ಇಲ್ಲವೊ ನಾನು ಅರಿಯೆ, ನಾನು ಹುಟ್ಟಿನಿಂದ ಬಾರತೀಯನಲ್ಲ, ಶ್ರೀಲಂಕದಲ್ಲಿ ಹುಟ್ಟಿದ ಭಾರತ ಮೂಲದ ತಮಿಳಿನವ. ನಾನು ಹುಟ್ಟಿದ್ದು ಶ್ರೀಲಂಕದ ಉತ್ತರಬಾಗದ ಜಾಫ್ನ ಪಟ್ಟಣದಲ್ಲಿ. ನನ್ನ ತಂದೆ ರಾಜಶೇಖರನ್ ಮತ್ತು ನನ್ನ ತಾಯಿ ಕಾಮಾಕ್ಷಿ ಮತ್ತು ಒಬ್ಬ ಪುಟ್ಟ ತಂಗಿ ಇದ್ದಳು. ದುರಾದೃಷ್ಟ ನಮ್ಮ ಸಂಸಾರದ ಬೆನ್ನತ್ತಿತ್ತು, ಕಾಯಿಲೆಗೆ ಬಲಿಯಾಗಿ ನನ್ನ ಹೆತ್ತತಾಯಿ ನನ್ನನ್ನು ನನ್ನ ಪುಟ್ಟ ತಂಗಿಯನ್ನು ಅನಾಥರನ್ನಾಗಿಸಿ ತೀರಿಕೊಂಡರು.  ನನ್ನ ತಂದೆ ಕಂಗೆಟ್ಟರು ನನ್ನನ್ನು ಹಾಗು ಪುಟ್ಟಮಗುವನ್ನು ನೋಡಿಕೊಳ್ಳುವ ಜವಾಬ್ದಾರಿ ಅವರಿಗೆ, ಆಗ ಭಾರತದ ಚೈನೈನಿಂದ ನಮ್ಮ ಸಂಬಂದಿಕರು ಕೆಲವರು ಬಂದಿದ್ದರು. ಅವರು ನನ್ನ ತಂಗಿ ಅನುರಾದಳನ್ನು ಸ್ವಲ್ಪ ದೊಡ್ಡಹುಡುಗಿಯಾಗುವವರೆಗಾದರು ಬೆಳೆಸುವದಾಗಿ ತಿಳಿಸಿ ನಮ್ಮ ತಂದೆಯನ್ನೊಪ್ಪಿಸಿ ಕರೆದುಕೊಂಡು ಹೋದರು. ನಮ್ಮ ತಂದೆಗೂ ಬೇರೆ ದಾರಿ ಇರಲಿಲ್ಲ. ಅಲ್ಲದೆ ಜಾಫ್ನದ ಪರಿಸ್ಥಿಥಿ ಆಗ ಹದಗೆಟ್ಟಿತ್ತು. ಅದು ೧೯೮೫-೮೬ ರ ಕಾಲವಿರಬಹುದು ತಮಿಳು ಎಲ್ ಟಿ ಟಿ ಯು ಗಳು ಅತ್ಯಂತ ಪ್ರಬಲವಾಗಿದ್ದ ಕಾಲ.ನಂತರ ನನ್ನ ತಂದೆಯ ಜೊತೆ ನಾನೊಬ್ಬನೆ ಆದೆ ನಾನಾಗ ಪ್ರಾಥಮಿಕ ತರಗತಿ ಓದುತ್ತಿದನೆ ಏನೊ. ಅಪ್ಪ ನನ್ನನ್ನು ಪ್ರೀತಿಯಿಂದಲೆ ಸಾಕುತ್ತಿದ್ದರು. ನಾನು ಓದಿ ದೊಡ್ಡವನಾಗಿ ಉನ್ನತ ಸ್ಥಾನ ಸೇರಬೇಕೆಂದು ಕೆಲಸ ಹಿಡಿಯಬೇಕೆಂದು ಅವರ ಇಷ್ಟ. ಆದರೆ ಅಲ್ಲಿ ಆರೀತಿಯ ವಾತವರಣವೆ ಇರಲಿಲ್ಲ.ಅದೇ ಸಮಯದಲ್ಲಿ ನಮ್ಮ ತಂದೆ ತೊಂದರೆಗೆ ಸಿಕ್ಕಿದ್ದರು. ನಮ್ಮ ಮನೆ ಜಾಫ್ನ ಪಟ್ಟಾಣಾದ ಹೊರವಲಯದಲ್ಲಿದ್ದು ಮುಖ್ಯರಸ್ತೆಗೆ ಸಮೀಪದಲ್ಲಿದ್ದು ತುಂಬಾ ಎತ್ತರದಲ್ಲಿದ್ದು ಆಯಕಟ್ಟಿನ ಜಾಗದಲ್ಲಿತ್ತು. ಹಾಗಾಗಿ ತಮಿಳು ಹುಲಿಗಳು ಸಹಜವಾಗಿಗೆ ನಮ್ಮ ಮನೆಯತ್ತ ಬರುತ್ತಿದ್ದರು. ಅಗಾಗ್ಯೆ ಅವರು ನಮ್ಮ ಮನೆಯಲ್ಲಿಯೆ ಇರತೊಡಗಿದರು. ರಕ್ಷಣೆಗೆ ಸೊಗಾಸಾಗಿತ್ತು ನಮ್ಮ ಮನೆ ಹಾಗಾಗಿ ಅವರಿಗೆ ಸಹಜ ಗೂಡಾಗಿತ್ತು.ನಮ್ಮ ತಂದೆ ತಮಿಳು ಈಳಂ ಸೈನಿಕರೊ ಇಲ್ಲವೊ ನನಗೆ ತಿಳಿದಿಲ್ಲ ಆದರೆ ಅವರ ಮುಖದಲ್ಲಿ ಎಂತದೊ ನೋವು ಮುಡುಗಟ್ಟಿತ್ತು.
ನಿದಾನವಾಗಿ ಅವರೆಲ್ಲರ ಗಮನ ನನ್ನ ಕಡೆ ತಿರುಗಿತು. ನಾನು ಚಿಕ್ಕ ಹುಡುಗನಾದ್ದರಿಂದ ಅವರಿಗೆ ಅನೂಕೂಲವೆನಿಸಿ ಅವರ ಕಾಗದ ಪತ್ರಗಳನ್ನು ಕೆಲವೊಮ್ಮೆ ಅವರು ವಸ್ತುಗಳನ್ನು ಅವರು ಹೇಳಿದಲ್ಲಿ ತಲುಪಿಸಿ ಬರುವ ಜವಾಬ್ದಾರಿ ಕೆಲಸವನ್ನು ನನಗೆ ಕೊಡುತ್ತಿದ್ದರು. ನಮ್ಮ ತಂದೆಗಾಗಲಿ ನನಗಾಗಲಿ ಅವರನ್ನು ಪ್ರತಿಬಟಿಸುವ ಶಕ್ತಿ ಇರಲಿಲ್ಲ. ಒಮ್ಮೆ ಹೀಗೆ ಊರ ಹೊರಗೆ ಏನೊ ಹಿಡಿದು ಹೊಂಚುಹಾಕುತ್ತಿದ್ದೆ, ಆಗ ಇದ್ದಕಿದ್ದಂತೆ ನಮ್ಮ ತಂದೆ ಕಾಣಿಸಿದರು ಜೊತೆಗೆ ಮದ್ಯವಯಸ್ಕನೊಬ್ಬನಿದ್ದ. ತಂದೆ ಹೇಳಿದರು,
"ಅರವಿಂದ ಈಗ ನಾನು ಹೇಳಿದಂತೆ ಕೇಳು, ನೀನು ಇಲ್ಲಿಯೆ ಇದ್ದರೆ ನಿನ್ನ ಭವಿಷ್ಯ ಮಣ್ಣಾದಂತೆಯೆ ನೀನು ಈಗಿಂದೀಗಲೆ ಭಾರತಕ್ಕೆ ಹೊರಟುಬಿಡು. ಈತ ನನ್ನ ಸ್ನೇಹಿತ ವಡಿವೇಲನ್ ಎಂದು ಹೆಸರು. ಇವರು ನಿನ್ನನ್ನು ಚೈನೈಗೆ ಮುಟ್ಟಿಸುವರು ಅಲ್ಲಿ ನನ್ನ ಆಪ್ತಮಿತ್ರ ಒಬ್ಬರಿದ್ದಾರೆ ಗಣೇಶ ಎಂದು, ಅವರಲ್ಲಿ ನಿನ್ನನ್ನು ಬಿಟ್ಟುಬರುತ್ತಾರೆ. ನೀನು ಅಲ್ಲಿ ಇದ್ದು ಓದಿ ಮುಂದೆ ಬಾ. ನಾನು ಅವರಲ್ಲಿ ಎಲ್ಲ ಮಾತನಾಡಿದ್ದೇನೆ. ಮುಂದೆ ಎಲ್ಲ ಸರೀ ಹೋದನಂತರ ನಾನು ನಿನ್ನನ್ನು ಬಂದು ಕಾಣುತ್ತೇನೆ" ಎಂದರು. ನನಗೆ ಆಗ ಬೇರೆ ದಾರಿಯೆ ಇರಲಿಲ್ಲ. ಆತನ ಜೊತೆ ಹೊರಟುಬಿಟ್ಟೆ. ಯಾವುದೋ ಸಮುದ್ರಮಾರ್ಗಗಳು ದೋಣಿಗಳು ಹೇಗೊ ಚೈನೈ ಸೇರಿದೆವು.ಆತ ನನ್ನನ್ನು ಚೈನೈನ ಗಣೇಶ್ ಹತ್ತಿರ ಸೇರಿಸಿ ಹೊರಟುಬಿಟ್ಟ."
ಸ್ವಲ್ಪ ಮೌನದ ನಂತರ ಅರವಿಂದ ಪುನಃ ಮಾತು ಮುಂದುವರೆಸಿದರು
"ನಾನು ಅವರಿಗೆ ಕ್ರಮೇಣ ಹೊಂದಿಕೊಂಡೆ ಅವರಿಗೆ ಮಕ್ಕಳಿರಲಿಲ್ಲ ಅವರಿಗೆ ಮಗನಂತಾದೆ  ಅವರಿಗು ಪತ್ನಿ ಇರಲಿಲ್ಲ ತೀರಿಕೊಂಡಿದ್ದರು ಹಾಗಾಗಿ ಇಲ್ಲಿಯೂ ನನಗೆ ಅಮ್ಮನಿರಲಿಲ್ಲ. ನನ್ನನ್ನು ಬಿಟ್ಟು ಹೊರಟ ವಡಿವೇಲನ್ ಪುನಃ ಜಾಫ್ನ ಸೇರಲೆ ಇಲ್ಲ ದಾರಿಯಲ್ಲಿ ಸಮುದ್ರದ ಮದ್ಯೆ ಕಾವಲು ಸೈನಿಕರ ಗುಂಡಿಗೆ ಬಲಿಯಾದ. ಆಗ ರಾಜೀವ್ ಗಾಂದಿ ಸೈನಿಕರನ್ನು ಕಳಿಸಿದ ಸಮಯವೆನ್ನಿಸುತ್ತೆ ಸುಮಾರು ೧೯೮೭ರ ಕಾಲವಿರಬಹುದು. ನನ್ನನ್ನು ಸಾಗಹಾಕಿದ ನಮ್ಮ ತಂದೆಯವರ ಕೃತ್ಯ ಹೇಗೊ ಎಲ್ ಟಿ ಟಿ  ಗಳಿಗೆ ತಿಳಿಯಿತೇನೊ ಅದೆ ಅವರಿಗೆ ಮುಳುವಾಯಿತು ಶಾಂತಿ ಸೈನಿಕರಿಗೆ ಅವರ ಸಮಾಚಾರ ತಿಳಿಸುತ್ತಿದ್ದಾರೆ ಅನ್ನುವ ಅನುಮಾನದಿಂದ ಅವರನ್ನು ಜೀವಂತವಾಗಿ ಮನೆ ಸಮೇತ ಸುಟ್ಟುಹಾಕಿದರು. ಜಾಫ್ನದ ಬಹುತೇಕ ಪರಿಚಯಸ್ಥರು ನಾನು ಆ ಮನೆಯಲ್ಲಿ ಬೆಂದು ಹೋದೆ ಎಂದು ಭಾವಿಸಿದರು. ಈ ವಿಷಯವೆಲ್ಲ ನನ್ನ ಸಾಕು ತಂದೆ ಗಣೇಶರಿಂದ ನಂತರ ನನಗೆ ತಿಳಿಯಿತು.
ನಂತರ ನಾವು ಬೆಂಗಳೂರಿಗೆ ವಾಸ್ತವ್ಯ ಬದಲಿಸಿದೆವು. ನನ್ನ ಮುಂದಿನ ಶಾಲೆಯ ವ್ಯಾಸಂಗ ಕಾಲೇಜು ಎಲ್ಲ ಅಲ್ಲಿಯೆ ಆಯಿತು. ನಾನು ಅಲ್ಲಿನ ವಾತವರಣಾಕ್ಕೆ ಹೊಂದಿಕೊಂಡೆ ಕನ್ನಡ ಕಲಿತೆ ಅಲ್ಲಿಯವನೆ ಆಗಿಹೋದೆ.ಅಲ್ಲಿಯೆ ಕೆಲಸವು ಆಯಿತು. ಹೀಗೆ ಹಿರಿಯರ ಮೂಲಕ ಅಮುದಳ ಪರಿಚಯವಾಗಿ ಮದುವೆಯೂ ಆಗಿ, ಒಂದು ಮಗುವು ಆಯಿತು. ಈ ನಡುವೆ ನನ್ನ ಸಾಕು ತಂದೆ ತೀರಿಹೋಗಿ ನನಗೆ ಅಮುದ ಹೊರತು ಯಾವ ಬಾಂದವ್ಯವು ಇಲ್ಲವಾಯಿತು. ಮನೆ ಕಟ್ಟಿದೆ ಎಲ್ಲವು ಸರೀ ಹೋಗಿ ಜೀವನದಲ್ಲಿ ಶಾಂತಿ ನೆಮ್ಮದಿ ತುಳುಕಾಡುತ್ತಿದ್ದವು. ಅಥವ ಹಾಗೆಂದು ಭಾವಿಸಿದ್ದೆ ಆ ಕಾಲದಲ್ಲಿ ಇದ್ದಕಿದ್ದಂತೆ ಬಿರುಗಾಳಿ ಬೀಸಿತು.
ಆದಿನ ನಾನು ಅಮುದ ಮಾತನಾಡುತ್ತ ಕುಳಿತ್ತಿದ್ದೆವು, ನಾನೇಕೊ ನನ್ನ ಬಾಲ್ಯದ ನೆನಪುಗಳನ್ನು ಅವಳಲ್ಲಿ ಹಂಚಿಕೊಂಡೆ. ಆಗ ಅವಳು ತಾನು ಸಹ ಶ್ರೀಲಂಕ ಮೂಲದವಳೆ ಎಂದು ತಿಳಿಸಿದಳು, ನನಗೆ ಕುತೂಹಲವೆನೆಸಿ ವಿವರ ಕೇಳಿದರೆ ಅವಳಿಗೆ ಏನು ತಿಳಿಯದು,ನೆನಪಿಲ್ಲ. ಆದರೆ ಒಳಗಿನಿಂದ ಅವಳ ಹತ್ತಿರವಿದ್ದ ಯಾವುದೋ ಹಳೆಯ ಬಾವಚಿತ್ರ ತಂದು ತೋರಿಸಿದಳು. ಅದನ್ನು ನಾನು ನೋಡುತ್ತಿರುವಾಗಲೆ ನನಗೆ ಅಘಾತವಾಗಿತ್ತು, ನಾನು ಚಿಕ್ಕವಯಸ್ಸಿನಲ್ಲಿ ಜಾಫ್ನದಲ್ಲಿದ್ದಾಗ, ಅದೇ ಫೋಟವನ್ನು ದೊಡ್ಡದು ಮಾಡಿ ನಮ್ಮ ಮನೆಯ ಹಾಲಿನಲ್ಲಿ ಹಾಕಿದ್ದರು. ಅದನ್ನು ದಿನವು ನೋಡುತ್ತಿದ್ದೆ ಅದರಲ್ಲಿ ನನ್ನ ತಾಯಿ ತಂಗಿಯನ್ನು ಮನಸಿಗೆ ತುಂಬಿಕೊಳ್ಳುತ್ತಿದ್ದೆ.
ಈಗ ಅಮುದ ಅದೇ ಫೋಟವನ್ನು ತೋರಿಸಿ ತಾನು ಅನ್ನುತ್ತಿದ್ದಾಳೆ. ನನಗೆಂತದೊ ಕಸಿವಿಸಿ ಶುರುವಾಯಿತು. ಚಿಕ್ಕವಯಸ್ಸಿನಿಂದಲೂ ನಿನ್ನದೂ ಇದೇ ಹೆಸರ ಅಮುದ ಎಂದೆ. ಅದಕ್ಕವಳು 'ಇಲ್ಲ ಅಮ್ಮ ನನ್ನ ತಂದು ಸಾಕಲು ಪ್ರಾರಂಬಿಸಿದ ನಂತರ ಅಮುದ ಎಂದು ಕರೆಯುತ್ತಿದ್ದಾರೆ, ನನ್ನ ತೊಟ್ಟಿಲ ಹೆಸರು ಅನುರಾದ ಅಂತೆ' ಎಂದಳು. ನನ್ನ ಎದೆ ದಸಕ್ ಎಂದಿತು. ಈಗ ಯಾವ ಅನುಮಾನವು ಉಳಿದಿರಲಿಲ್ಲ, ನನ್ನ ಹೆಂಡತಿ ಅಮುದ, ನನ್ನ ಮಗು ಕಿಶೋರನ ತಾಯಿ ಅಮುದ ಹಾಗು ನನ್ನ ಬಾಲ್ಯದ ಪುಟ್ಟ ತಂಗಿ ಅನು ಇಬ್ಬರು ಒಬ್ಬರೆ. ನನಗೆ ಅರಿವಿಲ್ಲದೆ ನನ್ನ ತಂಗಿಯನ್ನು ಮದುವೆಯಾಗಿ ಸಂಸಾರ ನಡೆಸಿ ಮಗುವನ್ನು ಪಡೆದಿದ್ದೆ. ಐದು ವರ್ಷ ಸಂಸಾರ ಮಾಡಿದ್ದೆ"
ಅವರು ಕಥೆಯನ್ನು ನಿಲ್ಲಿಸಿದರು , ನನ್ನ ಎದೆಯಲ್ಲಿ ಬತ್ತ ಕುಟ್ಟುವ ಅನುಭವ ನನ್ನ ಎದೆಯ ಬಡಿತ ನನಗೆ ಕೇಳುವಷ್ಟು ಸ್ವಷ್ಟ. ನನಗೇನೊ ಉದ್ವಿಘ್ನತೆ ಇದೇನು ವಿದಿ ಇಷ್ಟು ಕ್ರೂರಿಗೆ ಅನ್ನಿಸಿತು.ಅರವಿಂದನೆ ಪುನಃ ಮುಂದುವರೆಸಿದರು.
" ನನಗೆ ಮುಂದೆ ಏನು ಮಾಡಲು ತೋಚಲಿಲ್ಲ. ಅವಳಿಗೆ ತಕ್ಷಣ ಏನು ತಿಳಿಸಲು ಹೋಗಲಿಲ್ಲ. ನಂತರ ಅವಳಿಗೆ ತಿಳಿಸುವುದು ಬೇಡವೆಂದು ನಿರ್ದರಿಸಿದೆ. ಅವಳ ಮುಖ ನೋಡುವ ಶಕ್ತಿ ಕಳೆದುಕೊಂಡಿದ್ದೆ. ನಿದಾನವಾಗಿ ಅವಳ ತಾಯಿಯ ಬಳಿಯೂ ವಿಷಯ ಕೆದಕಿದೆ. ಆಕೆಗೆ ನನ್ನ ತಂದೆ ತಾಯಿಯ ಪೂರ್ತಿ ಪರಿಚಯವಿತ್ತು ಮತ್ತು ನಮ್ಮ ತಂದೆಗೆ ಆಕೆ ದೂರದ ಸಂಬಂದಿ ಕೂಡ. ಆದರೆ ನಾನು ಅವರ ಮಗನೆಂಬ ಕಲ್ಪನೆಯೆ ಅವರಿಗಿರಲಿಲ್ಲ. ಅಲ್ಲಿಗೆ ನನ್ನ ಜೀವನ ಸರ್ವನಾಶವಾಗಿತ್ತು"
"ನಾನಿನ್ನು ಅಲ್ಲಿದ್ದು ಅಮುದಳ ಜೊತೆ ಸಂಸಾರ ಮಾಡುವುದು ಸಾದ್ಯವೆ ಇರಲಿಲ್ಲ ಮುದ್ದು ತಂಗಿಯನ್ನು ಪ್ರೀತಿಯ ಮಡದಿ ಎಂದು ಹೇಗೆ ಕಲ್ಪಿಸಿಕೊಳ್ಳಲಿ. ನನ್ನ ಯಾವ ತಪ್ಪು ಇರಲಿಲ್ಲ, ವಿದಿ ತಪ್ಪು ಮಾಡಿದ್ದ , ಮದುವೆ ಸ್ವರ್ಗದಲ್ಲಿ ಅನ್ನುತ್ತಾರೆ ಆದರೆ ಹೇಗೆ ಸಾದ್ಯ?. ನಾನು ಆ ಪಾಪಕೂಪದಲ್ಲಿ ಇರದಾದೆ. ಅವಳಿಗೆ ಎಲ್ಲ ಅನೂಕೂಲ ಕಲ್ಪಿಸಿ ಅಲ್ಲಿಂದ ಹೊರಟು ಕಾಶಿಕ್ಷೇತ್ರ ಬಂದು ಸೇರಿದೆ, ಈ ಗಂಗೆ ನನ್ನ ಪಾಪ ತೊಳೆಯುತ್ತಾಳೆ ಅಂತ ನಂಬಿಕೆಯಲ್ಲಿ"
ಅವನು ಕಥೆಯನ್ನು ಮುಗಿಸಿದ್ದ. ಮತ್ತೆ ಹೇಳಿದ" ಮುಂದೆ ನಾನು ಈ ಕಾಶಿಯಲ್ಲಿ ಇರಲಾರೆ ಏಕೆಂದರೆ ನೀವು ಹೋಗಿ ನಾನಿಲ್ಲಿರುವ ವಿಷಯ ಅವಳಿಗೆ ತಿಳಿಸುತ್ತೀರಿ ಆಕೆ ನನ್ನನ್ನು ಅರಸುತ್ತ ಬರುತ್ತಾಳೆ. ನನಗೆ ಯಾರಿಗೂ ಈ ವಿಷಯಗಳನ್ನು ತಿಳಿಸುವ ಇಷ್ಟವಿರಲಿಲ್ಲ ಆದರೆ ವರ್ಷದಿಂದ ನನ್ನೊಳಗೆ ನಾನು ಬೆಂದು ಹೋಗಿದ್ದೇನೆ ಕೀರ್ತನ. ಯಾರಲ್ಲಿಯಾದರು ಹೇಳಲೇ ಬೇಕೆಂಬ ಮಾನಸಿಕ ಒತ್ತಡ ತಾಳಲಾರದೆ ನಿಮ್ಮಲ್ಲಿ ಹೇಳಿದ್ದೀನಿ. ನಿಮ್ಮಲ್ಲಿ ನನ್ನ ಪ್ರಾರ್ಥನೆ ಒಂದೆ, ನೀವು ಅಮುದಳ ಪ್ರೀತಿಯ ಗೆಳತಿ ಅವಳು ಸುಖವಾಗಿರಬೇಕೆಂದು ನೀವು ಇಷ್ಟಪಟ್ಟರೆ ಎಂದಿಗೂ ಈ ವಿಷಯ ಯಾರಲ್ಲಿಯೂ ತಿಳಿಸಬೇಡಿ. ಅವಳಿಗೂ ತಿಳಿಸಬೇಡಿ. ಇದು ಅವಳನ್ನು ಜೀವಂತವಾಗಿ ದಹಿಸಿಬಿಡುವ ವಿಷ. ಈ ಸತ್ಯವನ್ನು ಅರಗಿಸಿಕೊಳ್ಳಲು ಅವಳಿಗೆ ಸಾದ್ಯವೇ ಇಲ್ಲ. ಅದಕ್ಕಿಂತಲು ನಾನು ಅವಳ ಪಾಲಿಗೆ ಸದಾ ಓಡಿಹೋದ ಗಂಡನಾಗಿಯೆ ಉಳಿದುಬಿಡುತ್ತೇನೆ. ನನಗೆ ಮಾತು ಕೊಡುವಿರ ಕೀರ್ತನ" ಎಂದು ಅಂಗಲಾಚುತ್ತ ನಿಂತ.
ದೇವರೆ ಎಂತಹ ಅಗ್ನಿಪರೀಕ್ಷೆ? ಈತ ಹೇಳುವುದೆ ನಿಜ ಸೂಕ್ಷ್ಮಮನಸಿನ ಅಮುದ ಈ ವಿಷಯವನ್ನು ಅರಗಿಸಿಕೊಳ್ಳಲಾರಳು ಅನ್ನಿಸಿತು.ಅರವಿಂದನ ನಿರ್ದಾರವೆ ಸರಿ ಅನ್ನಿಸಿತು. ನಾನು ಅರವಿಂದನ ಕಣ್ಣು ನೋಡುತ್ತ ನುಡಿದೆ
"ಸರಿ ಅರವಿಂದ್  ನಾನು ಯಾವುದೆ ಕಾರಣಕ್ಕು ನಿಮ್ಮನ್ನು ನೋಡಿದ ವಿಷಯವಾಗಲಿ ನೀವು ತಿಳಿಸಿದ ಯಾವುದೇ ವಿಷಯವನ್ನಾಗಲಿ ಅಮುದಳಿಗೆ  ತಿಳಿಸುವದಿಲ್ಲ. ನೀವು ಈ ಜಾಗವನ್ನು ಬಿಡುವ ಅಗತ್ಯವಿಲ್ಲ ನನ್ನನ್ನು ನಂಬಿ" ಎಂದೆ.
ಆತ ಸರಿ ಎಂದು ಎದ್ದು ನಿಂತವರು ಒಂದು ಕ್ಷಣ ನನ್ನತ್ತ ನೋಡಿದರು, ನಂತರ ನಿದಾನವಾಗಿ ತಲೆತಗ್ಗಿಸಿ ಅಲ್ಲಿಂದ ನಡೆಯುತ್ತ ಹೊರಟುಹೋದರು.
ಸತ್ಯವೆಂಬ ವಿಷ ನನ್ನೆದೆಯನ್ನೆಲ್ಲ ವ್ಯಾಪಿಸಿತ್ತು. ಏಕೊ ನನಗೆ ಅಮುದಳ ಮನೆಯಲ್ಲಿ ನೋಡಿದ್ದ ಸಮುದ್ರಮಂಥನದ ಪರಶಿವ ನೆನಪಿಗೆ ಬರುತ್ತಿದ್ದ. ನನ್ನ ಸ್ಥಿಥಿಯೂ ಹಾಗೆ ಆಗಿತ್ತು ಸತ್ಯದ ಮಂಥನ ನಡೆಸಲು ಹೋಗಿ ಆಗ ಹುಟ್ಟಿರುವ ಈ ವಿಷವನ್ನು ಗಂಟಲಿನಲ್ಲಿಯೆ ದರಿಸಬೇಕು. ನುಂಗಿದರೆ ನನ್ನನ್ನು ಸುಡುವುದು, ನುಡಿದರೆ ಅಮುದಳ ಬಾಳನ್ನೆ ಸುಡುವುದು ಅನ್ನಿಸಿತು. ಸ್ಮಶಾನ ಮೌನ ನನ್ನೊಳಗೆ ನೆಲೆಸಿತ್ತು.

No comments:

Post a Comment

enter your comments please