Sunday, February 26, 2012

ಕಥೆ : ಪಶ್ಚಿಮದಲ್ಲಿ ಲಕ್ಷ್ಮಣ


ಮದ್ಯಾನದ ಬೋಜನದ ನಂತರ , ಅಂತಃಪುರದಲ್ಲಿ ಸ್ವಲ್ಪಕಾಲ ಮಲಗಿ ವಿಶ್ರಾಂತಿ ಪಡೆಯುವುದು ಲಕ್ಷ್ಮಣನ ಅಭ್ಯಾಸ, ಆದರೆ ಇಂದೇಕೊ ಆ ರೀತಿ ವಿಶ್ರಾಂತಿಗೆ ಹೋಗದೆ ಅರಮನೆಯ ಹಜಾರದಲ್ಲಿ ಸುಖಾಸನದ ಮೇಲೆ ಸುಮ್ಮನೆ ಕುಳಿತಿದ್ದ. ಊಟ ಮುಗಿಸಿ ಬಂದ ಊರ್ಮಿಳಾದೇವಿ ಲಕ್ಷ್ಮಣನತ್ತ ನಡೆದುಬಂದಳು,
ಸ್ವಲ್ಪ ಆಶ್ಚರ್ಯದಿಂದಲೆ ಕೇಳಿದಳು,
"ಇದೇನು ಇಲ್ಲಿ ಕುಳಿತಿರಿ? ಮಲಗಿ ವಿಶ್ರಾಂತಿ ಪಡೆಯುವದಿಲ್ಲವೆ?"
ತುಸು ಅನ್ಯ ಮನಸ್ಕತೆಯಿಂದ ನುಡಿದ ಲಕ್ಷ್ಮಣ ,
"ಸ್ವಲ್ಪ ಅರಮನೆಯತ್ತ ಹೋಗಿ ಬರೋಣವೆಂದು ಅನ್ನಿಸಿತು, ಹಾಗಾಗಿ ಕುಳಿತೆ"
ನಗುತ್ತ, ಊರ್ಮಿಳ ಅಂದಳು
"ಈ ಬಿರು ಬಿಸಿಲಿನಲ್ಲಿಯೆ, ಸ್ವಲ್ಪ ಬಿಸಿಲು ಕಂದಲಿ ಬಿಡಿ, ಹೋದರಾದಿತು, ಅಣ್ಣನ ಅರಮನೆಗೆ ತಾನೆ"
ಲಕ್ಷ್ಮಣ ಸ್ವಲ್ಪ ಸಂಕೋಚ, ಸ್ವಲ್ಪ ಗಲಿಬಿಲಿ, ಮತ್ತೇನೊ ಭಾವ ತುಂಬಿ ನುಡಿದ
"ಇಲ್ಲ ಕೆಲಸವಿದೆ, ಅರಮನೆಗೆ ಹೋಗಬೇಕೆನಿಸಿದೆ, ನಿನಗೆ ಬೇಸರವೆ?" , ಊರ್ಮಿಳ ಜೋರಾಗಿ ನಕ್ಕುಬಿಟ್ಟಳು.
"ನಿಮ್ಮದೊಳ್ಳೆ ಕಷ್ಟವಾಯಿತು, ನೀವು ನಿಮ್ಮ ಅಣ್ಣನ ಹತ್ತಿರ ಹೋದರೆ ಬೇಸರೆವೆಂದು ನಾನೆಂದು ಹೇಳಿರುವೆ ?, ನನ್ನೊಬ್ಬಳನ್ನೆ ಬಿಟ್ಟು ನೀವು ಅಣ್ಣ ರಾಮರ ಜೊತೆ ಕಾಡಿಗೆ ಹೊರಟಾಗಲು ನಾನು ಏನು ಹೇಳಲಿಲ್ಲ, ಈಗೇನು, ದಾರಾಳ ಹೋಗಿ ಬನ್ನಿ, ಬಿಸಿಲಿಗೆ ಹೇಳಿದೆನಷ್ಟೆ" ಎಂದಳು.
ತೆಳುವಸ್ಟ್ರವನ್ನು ಧರಿಸಿ ಹೊರಟ ಲಕ್ಷ್ಮಣ, ಬಾಗಿಲಿನ ಹತ್ತಿರ ಬರುವಾಗಲೆ ಹೊರಗಿನ ಬಿಸಿಲಿನ ಜಳಕ್ಕೊ ಏನೊ ಸ್ವಲ್ಪ ಕಣ್ಣು ಕತ್ತಲಾಯಿತು, ಹೊಸಿಲು ಎಡವಿದಂತೆ, ಬಾಗಿಲನ್ನು ಹಿಡಿದು ಹಾಗೆ ನಿಂತ, ಊರ್ಮಿಳ ಹಿಂದಿನಿಂದ ಆತಂಕದಿಂದ ಓಡಿಬಂದಳು.
"ಏನಾಯಿತು," ಗಾಬರಿಯ ದ್ವನಿಯಲ್ಲಿ ಕೇಳಿದಳು.
"ಎನಿಲ್ಲ ಸ್ವಲ್ಪ ಬಳಲಿಕೆಯಾಯಿತು, ಬಿಸಿಲಿಗೆ ಇರಬಹುದು, ಗಾಬರಿ ಏನಿಲ್ಲ" ಎಂದ ಲಕ್ಷ್ಮಣ.
"ಸ್ವಲ್ಪ ವಿಶ್ರಾಂತಿ ಪಡೆದು ಹೋದರಾಗಿತ್ತು" ಎಂದಳು ಊರ್ಮಿಳ, ಹೊರಗೆ ಕೆಲಸಕ್ಕೆ ಹೊರಟ ಗಂಡನನ್ನು ತಡೆಯುವುದು ಶುಭಲಕ್ಷಣವಲ್ಲ, ಸುಮ್ಮನಾದಳು.
.....................................................................................................
ರಾಮನ ಅರಮನೆಯ ಹತ್ತಿರ ಬರುವಾಗಲೆ ಲಕ್ಷ್ಮಣ ಗಮನಿಸಿದ, ರಾಮ ಬಾಗಿಲಲ್ಲಿಯೆ ನಿಂತಿದ್ದಾನೆ, ಇದೇನು ಆಶ್ಚರ್ಯ, ರಾಮನು ಸಹ ವಿಶ್ರಾಂತಿಗೆ ಹೋಗದೆ ಹೀಗೇಕೆ ನನ್ನನ್ನು ಕಾಯುತ್ತ ನಿಂತಿರುವ, ನಾನು ಬರುವೆನೆಂದು ಹೇಳಿರಲಿಲ್ಲ, ಏಕೊ ಸುಮ್ಮನೆ ರಾಮನನ್ನು ಕಾಣಬೇಕೆನಿಸಿತು ಬಂದೆ, ಅಂತ ಸಂತಸವಾಗುವಾಗಲೆ ಮತ್ತೆ ಗಮನಿಸಿದ , ರಾಮನ ಮುಖದಲ್ಲಿ ಸುಖಭಾವವೇನಿಲ್ಲ, ಎಂತದೊ ಆತಂಕ. ಮತ್ತೆ ಹತ್ತಿರ ಬಂದಂತೆ ಗಮನಿಸಿದ ಲಕ್ಷ್ಮಣ, ರಾಮನ ಗಮನವಿರುವುದು ತನ್ನ ಮೇಲಲ್ಲ ! ತನ್ನ ಹಿಂದೆ ಮತ್ತಾರೊ ಬರುತ್ತಿದ್ದಾರೆ, ಅವರತ್ತ ನೋಡುತ್ತಿರುವ ರಾಮ. ಲಕ್ಷ್ಮಣ ಹಿಂದೆ ತಿರುಗಿ ನೋಡಿದ. ಯಾರೀತ ನನ್ನ ಹಿಂದೆ ಬರುತ್ತಿರುವ , ಎಂದು ನೋಡಿದಂತಿಲ್ಲವಲ್ಲ. ನೋಡಲು ಬ್ರಾಹ್ಮಣನಂತೆ ವೇಶದರಿಸಿರುವ. ಪಂಚೆ ಮೇಲೆ ವಸ್ತ್ರ, ಬುಜದಲ್ಲಿ ಎದ್ದು ಕಾಣುವ ಜನಿವಾರ, ತಲೆಯ ಶಿಖೆ ಎಲ್ಲವು ಅದನ್ನೆ ಹೇಳುತ್ತಿದೆ, ಆದರೆ ಅವನ ಬಣ್ಣ , ಅಬ್ಬ ಅಂತ ಕಪ್ಪು ಬಣ್ಣವನ್ನು ಎಂದು ನೋಡಿರಲಿಲ್ಲ, ಆ ರೀತಿ ಕಪ್ಪಾಗಿರುವ ಬ್ರಾಹ್ಮಣನನ್ನ ನೋಡುತ್ತಿರುವುದು ಇದೆ ಮೊದಲು.
ರಾಮನು ಲಕ್ಷ್ಮಣನತ್ತ ನೋಡದೆ, ಆ ಹೊಸ ಆಗುಂತಕನನ್ನು ಸ್ವಾಗತಿಸಿದ
"ದಯಾಮಾಡಿ ಬನ್ನಿ, ಬನ್ನಿ ಒಳಗೆ ಹೋಗಿ ಮಾತನಾಡುವ" , ಆ ಬ್ರಾಹ್ಮಣನಾದರೊ ಒಂದೆ ಒಂದು ಪದವನ್ನು ಆಡಲಿಲ್ಲ, ಮುಖದಲ್ಲಿ, ಸ್ವಲ್ಪ ವಿಷಾದಭಾವ ಬಿಟ್ಟರೆ , ಮುಖ ನಿರ್ಲಿಪ್ತ, ರಾಮನ ಹಿಂದೆ ಹೊರಟ ಒಳಗೆ, ತುಸು ದೂರ ಹೋದ ರಾಮ ಮತ್ತೆ ಹಿಂದೆ ನೋಡಿ ,ತನ್ನ ಜೊತೆ ಬರುತ್ತಿರುವ ಲಕ್ಷ್ಮಣನನ್ನು ಕಂಡು,
"ನೋಡಿಲ್ಲಿ, ನನಗೆ ಒಳಗೆ ಇವರ ಜೊತೆ ಸ್ವಲ್ಪ ಮಾತನಾಡಲು ಇದೆ, ನೀನು ಬಾಗಿಲಿನಲ್ಲಿರು, ಎಂತಹುದೆ ಸಂದರ್ಭ ಬಂದರು ಯಾರನ್ನು ಒಳಗೆ ಬಿಡಬಾರದು, ಇದನ್ನು ರಾಜಾಜ್ಞೆ ಎಂದು ತಿಳಿ" ಎಂದು ಒಳಗೆ ಹೊರಟ.
ಲಕ್ಷ್ಮಣ ಕ್ಷಣ ಕಾಲ ಅವಕ್ಕಾದ! ರಾಮನು ಎಂದು ತನ್ನ ಬಳಿ ನಿಷ್ಟೂರವಾಗಿ ಮಾತನಾಡುವನಲ್ಲ, ಅಲ್ಲದೆ ಅವನು ತನ್ನ ಬಳಿ ಬಾಯಿಬಿಟ್ಟು ತನ್ನ ಮನಸನ್ನು ತಿಳಿಸುತ್ತ ಇದ್ದಿದ್ದು ಕಡಿಮೆ, ತಾನು ಈ ದಿನದದವರೆಗು ಕೇವಲ ಅವನ ಕಣ್ಣ ಸನ್ನೆಯನ್ನೆ ಅನುಸರಿಸಿ ಕೆಲಸಮಾಡಿದ್ದೇನೆ ಅವನೆಂದು ಅಪೇಕ್ಷಿಸಿದವನಲ್ಲ. ಈ ದಿನ ಅವನು 'ರಾಜಾಜ್ಞೆ' ಎನ್ನಲು ಅಷ್ಟೊಂದು ಗಂಭೀರವಾದ ವಿಷಯವೇನಿರಬಹುದು. ಅಲ್ಲದೆ ಅವನಿಗೆ ಆಶ್ಚರ್ಯ ಉಂಟುಮಾಡಿದ ಮತ್ತೊಂದು ವಿಷಯವಿತ್ತು, ರಾಮನ ಪರಿಚಿತರೆಲ್ಲ ತನಗೆ ತಿಳಿದಿರುವವರೆ, ತಾನು ಚಿಕ್ಕ ಮಗುವಿನಿಂದ ರಾಮನ ಜೊತೆಗೆ ಬೆಳೆದವನು, ಹಾಗಿರಲು ಈ ದಿನ ತನ್ನ ಹಿಂದೆ ಬಂದ ಆಗುಂತಕನನ್ನು ರಾಮನು ಮೊದಲಿನಿಂದ ತಿಳಿದಿರುವನಂತೆ ಒಳಗೆ ಕರೆದೋಯ್ದ, ಈ ಅಪರಿಚಿತ ಯಾರಿರಬಹುದು, ಮತ್ತು ತನಗು ಸಹ ತಿಳಿಯಬಾರದ ವಿಷಯ ಏನಿರಬಹುದು.
ಲಕ್ಷ್ಮಣ ಬಾಗಿಲಲ್ಲಿ ಗಂಭೀರಭಾವದಿಂದ ನಿಂತ, ತಾನು ರಾಮನಿಗೆ ವನವಾಸ ಕಾಲದಲ್ಲಿ ರಾಮ ಸೀತರಿಗೆ ಕಾವಲು ಕೆಲಸವನ್ನು ಮಾಡಿದ್ದು ನೆನಪಾಯಿತು, ಇಲ್ಲಿ ಅರಮನೆಯಲ್ಲು ಸಹ ರಾಮನ ಅರಮನೆಯ ಬಾಗಿಲು ಕೆಲಸ ಮೊದಲ ಬಾರಿಗೆ ವಹಿಸಲ್ಪಟ್ಟಿತ್ತು. ಅವನಿಗೆ ಒಮ್ಮೆ ನಗು ಬಂದಿತು, ಒಮ್ಮೆ ಊರ್ಮಿಳಗೆ ಈ ವಿಷಯ ತಿಳಿಸಿದರೆ ಏನನ್ನುವಳೊ, ಮತ್ತೇನು ನಗುವಳು
"ಅಣ್ಣನಿಗೆ ಎಲ್ಲ ಸೇವೆಯು ಆಯಿತು, ಇದು ನಡೆದು ಹೋಗಲಿ ಎನ್ನುವಳೇನೊ"
ಲಕ್ಷ್ಮಣ ತುಸು ಆರಾಮವಾಗಿ ಗೋಡೆಗೆ ಒರಗಿ ನಿಂತ, ಏಕೊ ಚಿಕ್ಕ ವಯಸಿನಿಂದಲು ಕಳೆದ ನೆನಪುಗಳಲ್ಲೆ ಒಮ್ಮೆಲೆ ಮುತ್ತಿಗೆ ಹಾಕಿದಂತೆ ಅನ್ನಿಸಿತು. ಅಣ್ಣನೊಡನೆ ವಿದ್ಯೆ ಕಲಿತಿದ್ದು, ವಿಶ್ವಾಮಿತ್ರರ ಜೊತೆ ಹೋಗಿ ಅವರ ಯಾಗಕ್ಕೆ ನೆರವು ನೀಡಿ ರಕ್ಕಸರನ್ನು ಸಂಹರಿಸಿದ್ದು, ಪುನಃ ಅಣ್ಣ ಹಾಗು ಗುರುಗಳೊಡನೆ ಮಿಥಿಲಾ ನಗರಿಗೆ ಪಯಣ, ಅಲ್ಲಿ ರಾಮನು ಶಿವ ದನುಸ್ಸನು ಭಂಗಿಸಿ ನಂತರ ಜನಕನ ಮಗಳಾದ ಸೀತ ಹಾಗು ರಾಮ ವಿವಾಹವಾದರೆ ತಾನು ಊರ್ಮಿಳಳನ್ನು ಹಾಗು ಭರತ , ಶತೃಘ್ನರ ವಿವಾಹ. ನಂತರ ಪಟ್ಟಾಭಿಷೇಕದ ಗಡಿಬಿಡಿಯಲ್ಲಿ ಎಲ್ಲವು ವಿರುದ್ದವಾಗಿ ರಾಮ ಸೀತಯರೋಡನೆ ತಾನು ಕಾಡಿಗೆ ನಡೆದುದ್ದು, ಕಾಡಿನ ವಾಸ, ಸೀತೆ ಕಾಣೆಯಾಗಿ ಪಟ್ಟ ಕಷ್ಟಗಳು. ಲಂಕೆಯಲ್ಲಿ ನಡೆದ ಯುದ್ದ ಎಲ್ಲವು ಒಂದೊಂದಾಗಿ ಅವನ ಕಣ್ಣಮುಂದು ಚಿತ್ರಗಳಂತೆ ಹಾದು ಹೋದವು.
ಏನು ಇಷ್ಟುಹೊತ್ತಾಯಿತು, ಒಳಗೆ ಏನು ನಡೆದಿರಬಹುದು ಮಾತು ಎಂಬ ಕುತೂಹಲ, ಏಕೊ ಮನ ನೊಂದಿತ್ತು, ತನಗೆ ತಿಳಿಯುವ ವಿಷಯವಾದರೆ ರಾಮನೆ ಒಳಗೆ ಕರೆಯುತ್ತಿದ್ದ, ಈಗ ತನಗೆ ಏಕೆ ಬೇಕು ಅದರಲ್ಲಿ ಆಸಕ್ತಿ ಎನಿಸಿತು. ಅವರು ತಾನಾಗೆ ಹೊರಗೆ ಬರುವವರೆಗು ಇಲ್ಲಿಯೆ ಕುಳಿತಿರುವುದು ಅನ್ನುತ್ತ ಬಾಗಿಲ ಹತ್ತಿರವಿದ್ದ ಆಸನದಲ್ಲಿ ಕುಳಿತ . ಅವನ ದೃಷ್ಟಿ ಬಾನಿನತ್ತ ಇತ್ತು, ಸೂರ್ಯ ಕೆಳಗಿಳಿದು ಹೋಗುವದಕ್ಕೆ ಇನ್ನು ಸ್ವಲ್ಪ ಕಾಲವಿತ್ತು.
ಯಾರೊ ಇತ್ತ ಬರುವಂತಿದೆ ಕಣ್ಣಿಟ್ಟು ನೋಡಿದ, ಏಕೆ ಈದಿನ ಹೀಗೆ ಕಣ್ಣು ಸ್ವಲ್ಪ ಮಬ್ಬು ಮಬ್ಬಾಗಿದೆ, ತನಗೆ ವಯಸ್ಸಾಗಿಹೋಯಿತಾ ಅನ್ನಿಸಿತು. ಹತ್ತಿರ ಬರುತ್ತಿರುವಂತೆ ಗಮನಿಸಿದ , ಯಾರೊ ಋಷಿವರ್ಯರು, ಇದೇನು ಇಂತ ಹೊತ್ತಿನಲ್ಲಿ, ಓಹೊ, ಇವರು ದುರ್ವಾಸರು , ಸಂಜೆಯಾಗುತ್ತಿರುವ ಸಮಯದಲ್ಲಿ ಇವರೇಕೆ ಬರುತ್ತಿದ್ದಾರೆ ಇದು ಅತಿಥಿ ಸತ್ಕಾರಕ್ಕೆ ಸರಿಯಾದ ಸಮಯವು ಅಲ್ಲ ಇರಲಿ ಎಂದು ಎದ್ದು ನಿಂತನು. ದೂರ್ವಾಸರು ಹತ್ತಿರ ಬಂದಂತೆ ಎದ್ದು ನಮಸ್ಕರಿಸಿದನು, ಸುಪ್ರೀತರಾದ ಮುನಿಗಳು ಅವನನ್ನು ಹರಸುತ್ತ,
"ನನಗೀಗ ರಾಮನನ್ನು ಕಾಣಬೇಕಿದೆ ಲಕ್ಷ್ಮಣ" ಎಂದರು.
ಲಕ್ಷ್ಮಣನೀಗ ಗೊಂದಲಕ್ಕೆ ಸಿಲುಕಿದ, ಅವನಿಗೆ ರಾಮನ ಆಜ್ಞೆ ಇತ್ತು ಯಾರನ್ನು ಒಳಗೆ ಬಿಡಬಾರದೆಂದು, ಆದರೆ ಇವರೋ ಅತಿ ಕೋಪಿಷ್ಟರೆಂದೆ ಪ್ರಸಿದ್ದ ದೂರ್ವಾಸ ಮುನಿ , ಅವನು ದ್ವನಿಯಲ್ಲಿ ವಿನಯ ತುಂಬಿ ನುಡಿದ
"ಮುನಿವರ್ಯರೆ, ಕುಳಿತು ಕೊಳ್ಳಿ, ಹೋಗುವಿರಂತೆ, ರಾಜ ರಾಮಚಂದ್ರ ಯಾರನ್ನು ಒಳಗೆ ಬಿಡಬಾರದೆಂದೆ ಅಪ್ಪಣೆ ಮಾಡಿದ್ದಾನೆ, ಒಳಗೆ ಯಾರೊ ಆಗುಂತಕರಿದ್ದಾರೆ, ಅವರು ಹೊರಬಂದ ನಂತರ ತಮ್ಮನ್ನು ಒಳಗೆ ಕರೆದೊಯ್ಯುವೆ"
ಮುನಿಗಳು ಕೆರಳಿದರು, ಮೊದಲೆ ಸೂಕ್ಷ್ಮ ಅವರು, ಈಗ ಒಳಗೆ ಬಿಡುವದಿಲ್ಲವೆಂದರೆ ಸುಮ್ಮನಿರುವರೆ
"ಲಕ್ಷ್ಮಣ ಇದೆಂತ ಮಾತು, ನೀನು ಯಾರ ಜೊತೆ ಮಾತನಾಡುತ್ತಿರುವೆ ಎಂದು ಅರಿತು ಮಾತನಾಡು, ನಿನಗೆ ನಿನ್ನ ರಾಮ ಅಪ್ಪಣೆ ಮಾಡಿರಬಹುದು ಯಾರನ್ನು ಒಳಗೆ ಬಿಡಬಾರದೆಂದು, ಆದರೆ ನಮಗು ಅದೇ ರಾಮಚಂದ್ರನೆ ಹೇಳಿದ್ದಾನೆ ನಾವು ಯಾವ ದಿನದಲ್ಲು ಯಾವ ಸಮಯದಲ್ಲಿ ಬೇಕಾದರೆ ಬಂದು ಅವನನ್ನು ನೋಡಬಹುದೆಂದು, ನೀನು ತಡೆದೆಯಾದರೆ ನಮಗೆ ಬರುವ ಕೋಪದಲ್ಲಿ, ನಿನ್ನನು ಶಪಿಸಿಯೇವು, ಮತ್ತು ತಾನು ರಾಜನಾಗಿರುವದರಿಂದ ಏನು ಅಪ್ಪಣೆ ಬೇಕಾದರೆ ಕೊಡಬಲ್ಲನೆಂದು ತಿಳಿದಿರುವ ನಿನ್ನ ರಾಮನನ್ನು ಶಪಿಸಿಯೇವು ಎಚ್ಚರ, ನಡಿ ರಾಮನನ್ನು ತೋರಿಸು" ಎಂದರು.
ಲಕ್ಷ್ಮಣನೀಗ ಗೊಂದಲದಲ್ಲಿ ಬಿದ್ದ, ಇದೆಂತ ಸನ್ನಿವೇಶ ರಾಮನೆ ಸ್ವತಹ ಎಂದು ಇಲ್ಲದೆ ರಾಜಾಜ್ಞೆ ಎನ್ನುತ್ತ , ಯಾರನ್ನು ಒಳಗೆ ಬಿಡಬಾರದೆಂದಿದ್ದಾನೆ, ಒಳಗಿರುವ ಆ ಅಗುಂತಕ ಯಾರಿರಬಹುದೆಂಬ ಕಲ್ಪನೆಯು ನನಗಿಲ್ಲ, ಈ ಮುನಿಗಳು ಇದೆ ಕಾಲಕ್ಕೆ ಬಂದು ನನ್ನನ್ನು ಇಕ್ಕಟಿಗೆ ಸಿಕ್ಕಿಸಿದ್ದಾರೆ, ಈಗ ತನ್ನ ಕರ್ತವ್ಯವೇನು ? .
ಲಕ್ಷ್ಮಣನು ಎಂದಿಗು ರಾಮನ ಮಾತನ್ನು ಮೀರಿದವನಲ್ಲ, ಹಿಂದೊಮ್ಮೆ ರಾಮ ಕಾಡಿಗೆ ಹೊರಟಾಗ ರಾಮ ತಾನೊಬ್ಬನೆ ಹೋಗುವನೆಂದಾಗ ತಾನವನನ್ನು ಒಪ್ಪಿಸಿ ಜೊತೆಗೆ ಹೊರಟುಬಿಟ್ಟ, ರಾಮನಿಗು ಸಹ ಲಕ್ಷ್ಮಣನನ್ನು ಅಗಲಿರಲಾರದ ಅನಿವಾರ್ಯತೆ ಇದ್ದು ಆಗ ರಾಮನ ಮಾತಿಗೆ ವಿರುದ್ದ ಎನ್ನುವ ಭಾವ ಬರಲಿಲ್ಲ, ಪ್ರಥಮ ಬಾರಿ ಲಕ್ಷ್ಮಣ ರಾಮನ ಮಾತು ಮೀರಿದ್ದು, ಸೀತೆಯ ಅಪಹರಣ ಸಮಯದಲ್ಲಿ, ತಾನು ಬರುವವರೆಗು ಅಲ್ಲಿಯೆ ಇರು ಎಂದು ಅವನು ನೀಡಿದ್ದ ಆಜ್ಞೆಯನ್ನು ಸೀತೆಯ ಕಠಿಣ ಮಾತುಗಳನ್ನು ಎದುರಿಸಲಾಗದೆ ಮೀರಿದ್ದ, ಪರಿಣಾಮ ಸೀತೆಯ ಅಪಹರಣವಾಗಿತ್ತು. ಈಗ ಎರಡನೆ ಬಾರಿ ರಾಮನ ಮಾತು ಮೀರುವ ಸಂದರ್ಬ ಬಂದಿದೆ. ಅವನು ವಿಹ್ವಲನಾದ ಅವನಿಗೆ ಇದ್ದದ್ದು ಎರಡೆ ಆಯ್ಕೆ ರಾಮನ ಮಾತು ಪಾಲಿಸಿ ಅವನು ಮತ್ತು ರಾಮ ಇಬ್ಬರು ಶಾಪಕ್ಕೆ ಗುರಿಯಾಗಿ ಮುನಿಗಳ ಕೋಪ ಎದುರಿಸುವುದು, ಅಥವ ತನಗೆ ರಾಮ ಶಿಕ್ಷೆ ವಿದಿಸಿದರು ಚಿಂತೆಯಿಲ್ಲ ಎಂದು ರಾಮನನ್ನು ಮುನಿಗಳ ಶಾಪದಿಂದ ಕಾಪಾಡುವುದು ಅವನಿಗೆ ತನಗೆ ಒದಗಬಹುದಾದ ಶಿಕ್ಷೆ ಅಥವ ಶಾಪದ ಬಗ್ಗೆ ಚಿಂತೆ ಇರಲಿಲ್ಲ, ತನ್ನ ಅಣ್ಣ ರಾಮ ಮುನಿಗಳ ಶಾಪಕ್ಕೆ ತನ್ನಿಂದ ಸಿಲುಕುವುದು ಇಷ್ಟವಾಗಲಿಲ್ಲ. ತಕ್ಷಣ ನಿರ್ದಾರಕ್ಕೆ ಬಂದ, ಎರಡನೆ ಆಯ್ಕೆಯೆ ಸರಿ. ಮುನಿಗಳನ್ನು ಒಳಗೆ ಬಿಡುವುದು ಎಂದು ನಿರ್ದರಿಸಿ
"ಕ್ಷಮಿಸಿ ಮುನಿಗಳೆ, ನಾನು ರಾಮನ ಅಜ್ಞೆ ನಿಮಗೆ ತಿಳಿಸಿದೆ ಅಷ್ಟೆ, ನಿಮ್ಮನ್ನು ತಡೆಯಲಾರೆ, ಬನ್ನಿ ಒಳಹೋಗೋಣ " ಎನ್ನುತ್ತ ಒಳಗೆ ಹೊರಟ.
ರಾಮನನ್ನು ಅರಸಿ ಒಳಕೋಣೆಗೆ ಹೊರಟ ಲಕ್ಷ್ಮಣ ಜೊತೆಯಲ್ಲಿ ಮುನಿಗಳಾದ ದೂರ್ವಾಸರು, ರಾಮನ ಅಂತರಂಗದ ಕೋಣೆಯ ಬಾಗಿಲು ಮುಂದೆ ಹಾಕಲಾಗಿತ್ತು, ಒಳಗೆ ಮೆಲುದ್ವನಿಯಲ್ಲಿ ಯಾರೊ ಮಾತನಾಡುತ್ತಿರುವ ಶಬ್ದ. ಲಕ್ಷ್ಮಣನು ನಿದಾನವಾಗಿ ಬಾಗಿಲು ತಳ್ಳಿದ. ಒಳಗೆ ನಡೆದಂತೆ, ಸುಖಾಸನದ ಮೇಲೆ ಕುಳಿತ್ತಿದ್ದ ರಾಮ , ಯಾವುದೆ ಭಾವವಿಲ್ಲದೆ ಲಕ್ಷ್ಮಣನತ್ತ ನೋಡಿದ.
"ಅಣ್ಣ , ದೂರ್ವಾಸ ಮುನಿಗಳು ನಿನ್ನ ದರ್ಶನಕ್ಕಾಗಿ ಬಂದಿದ್ದಾರೆ. ಅವರನ್ನು ಒಳಗೆ ಕರೆ ತಂದಿರುವೆ"
ರಾಮ ತಣ್ಣಗಿನ ಸ್ವರದಲ್ಲಿ ನುಡಿದ "ಸರಿ ನೀನು ಹೊರಗಿರು".
ಪೆಚ್ಚಾದ ಲಕ್ಷ್ಮಣ , ತಲೆತಗ್ಗಿಸಿ ನಿದಾನಕ್ಕೆ ಹೊರಬಂದ , ಅರಮನೆಯ ಹೊರಗಿನ ದ್ವಾರದ ಹತ್ತಿರ ನಿಂತ, ಇದೇನಾಯ್ತು ರಾಮನೇಕೆ ತನ್ನ ಬಳಿ ಈ ರೀತಿ ವರ್ತಿಸುತ್ತಿದ್ದಾನೆ. ಬಹುಷಃ ತನ್ನಿಂದ ಆದ ಅಪರಾದ ಅವನಿಗೆ ಅಸಮದಾನ ಉಂಟುಮಾಡಿದೆ ಅನ್ನಿಸುತ್ತೆ.
ಲಕ್ಷ್ಮಣನಿಗೆ ಮತ್ತು ಒಂದು ಗೊಂದಲ ಕಾಡಿತ್ತು, ರಾಮನ ಜೊತೆ ಇದ್ದ ಆ ಹೊಸ ಅಪರಿಚಿತ ಆಗುಂತಕ ಎಲ್ಲಿ , ಅವನೇಕೆ ಎಲ್ಲಿಯು ಕಾಣುತ್ತಿಲ್ಲ ? ಒಳಗೆ ಹೋದ ಅವನೆಲ್ಲಿ ಹೋದ?. ಅವನು ಪೆಚ್ಚಾಗಿ ನಿಂತ. ಅವನೆಂದು ರಾಮನ ಕೋಪ ಅಥವ ಅಸಮದಾನ ಎದುರಿಸಿದವನಲ್ಲ. ಅವನಿಗೆ ಏನು ತೋಚುತ್ತಿಲ್ಲ, ನಿಸ್ಸಹಾಯಕನಾಗಿ ನಿಂತಿದ್ದ. ಎಷ್ಟು ಸಮಯ ಕಳೆಯಿತೊ ತಿಳಿಯಲಿಲ್ಲ. ಒಳಗಿನಿಂದ ದೂರ್ವಾಸರು ಹಾಗು ರಾಮನು ಹೊರಬಂದರು. ರಾಮನು ದೂರ್ವಾಸರಿಗೆ ನಮಸ್ಕರಿಸಿ ಬಿಳ್ಕೋಟ್ಟ. ಲಕ್ಷ್ಮಣನು ಅವರಿಗೆ ಒಮ್ಮೆ ನಮಸ್ಕರಿಸಿದ, ಮುನಿಗಳು ಹೊರಟಂತೆ ಸ್ವಲ್ಪ ಹೊತ್ತು ನಿಂತಿದ್ದು ರಾಮನು ಒಳಹೋಗಲು ತಿರುಗಿದ. ಲಕ್ಷ್ಮಣ ತುಸು ಸಂಕೋಚಭಾವದಲ್ಲಿ ನುಡಿದ
"ಅಣ್ಣ ದೂರ್ವಾಸರು ಅಗ್ರಹ ಮಾಡಿದರು, ಬಿಡಬೇಕಾಯಿತು, ನಿನ್ನ ಮಾತನ್ನು ಮೀರಿದ ನನಗೆ ಯಾವ ಶಿಕ್ಷೆಯಾದರು ಕೊಡು"
ರಾಮನ ದ್ವನಿ ಪೂರ ತಣ್ಣಗಿತ್ತು, ಅವನು ನುಡಿದ
"ರಾಮನ ರಾಜ್ಯದಲ್ಲಿ ಎಲ್ಲರು ಸಮಾನರು, ಹಾಗೆ ಶಿಕ್ಷೆಯು ಸಮವೆ, ರಾಜಾಜ್ಞೆ ಮೀರಿದವರಿಗೆ ನೀಡುವ ಶಿಕ್ಷೆ ಎಲ್ಲರಿಗು ಒಂದೆ"
ಎನ್ನುತ ಒಳಗೆ ಹೊರಟುಹೋದ.
ಲಕ್ಷ್ಮಣ ವಿಹ್ವಲನಾದ, ತನ್ನ ಅಣ್ಣ ಏನು ನುಡಿದ ? ರಾಜಾಜ್ಞೆ ಮೀರಿದವರಿಗೆ ನೀಡುವ ಶಿಕ್ಷೆ ಎಲ್ಲರಿಗು ಒಂದೆ, ಅಂದರೆ ಅದರ ಅರ್ಥವೇನು. ಇಷ್ಟುವರ್ಷ ರಾಜ್ಯಬಾರದಲ್ಲಿ ಬಾಗವಹಿಸಿದ ಲಕ್ಷ್ಮಣನಿಗೆ ಅದು ತಿಳಿಯದ್ದೇನು ಅಲ್ಲ. ರಾಜಾಜ್ಞೆ ದಿಕ್ಕರಿಸುವರಿಗೆ ರಾಜ್ಯದಲ್ಲಿ ಇರುವುದು ಒಂದೆ ಶಿಕ್ಷೆ "ಮರಣ ದಂಡನೆ". ಅಂದರೆ ರಾಮನು ತನಗೆ ಮರಣದಂಡನೆಯನ್ನು ವಿದಿಸಿದನೆ, ಅವನ ದ್ವನಿ ಅದೇಕೆ ಅಷ್ಟೇಕೆ ತಣ್ಣಗಿತ್ತು. ಅವನ ವರ್ತನೆಯು ಸಹ ಎಂದಿನಂತೆ ಸದರವಾಗಿರಲಿಲ್ಲ. ವಿವೇಕಶೂನ್ಯನಾದ ಲಕ್ಷ್ಮಣ. ಅವನಿಗೆ ಏನು ತೋಚದೆ ನಿದಾನವಾಗಿ ಅಲ್ಲಿಂದ ಹೊರಹೊರಟ.
.....................................................................................................
ಲಕ್ಷ್ಮಣನಿಗೆ ತಾನು ಎತ್ತ ನಡೆದಿರುವನೆಂಬ ಪರಿವಿಲ್ಲ, ಅವನ ಕಾಲುಗಳು ಅವನನ್ನು ಅಯೋದ್ಯೆಯ ಹೊರವಲಯದಲ್ಲಿ ಹರಿಯುತ್ತಿರುವ ಸರಯೂ ನದಿಯ ದಂಡೆಯ ಹತ್ತಿರ ಕರೆತಂದಿದ್ದವು. ಮುಳಗಲು ಅಣಿಯಾಗಿ ಕೆಂಪು ಚೆಂಡಿನಂತಾದ ಸೂರ್ಯನನ್ನೆ ನೋಡುತ್ತ ನಿಂತ. ಮುಳುಗು ಸೂರ್ಯನ ಕಿರಣಗಳ ಹಿನ್ನಲೆಯಲ್ಲಿ ತುಂಬಿಹರಿಯುತ್ತಿದ್ದ ಸರಯೂ ಅವನಿಗೆ ಹಳೆಯ ನೆನಪೊಂದನ್ನು ಕೆದಕಿತು, ತಾನು ಹಾಗು ಅಣ್ಣ ರಾಮಚಂದ್ರ ಹಾಗು ಸೀತಾದೇವಿ ಅರಣ್ಯವಾಸಕ್ಕೆ ಹೊರಟಾಗ ಈ ನದಿಯನ್ನು ಹರಿಗೋಲಿನಲ್ಲಿ ದಾಟಿದ್ದೆವು, ಯಾರಾತ ಅಂಬಿಗ ಗುಹ ಎಂದೊ ಏನೊ ಅವನ ಹೆಸರು. ಲಕ್ಷ್ಮಣನ ಮನವನ್ನು ದೊಡ್ಡ ಶೂನ್ಯ ಒಂದು ಆಕ್ರಮಿಸಿತ್ತು, ಅವನು ಯೋಚಿಸುತ್ತಿದ್ದ, ತನ್ನ ಮುಂದಿನ ನಿರ್ದಾರವೇನು. ಪುನಃ ಹೋಗಿ ರಾಮನ ಮುಂದೆ ನಿಂತು , ತಾನು ಮುನಿಗಳನ್ನು ಒಳಗೆ ಬಿಟ್ಟಿದ್ದಕ್ಕೆ ಕಾರಣ ವಿವರಿಸಿ ಕ್ಷಮೆ ಯಾಚಿಸುವುದೆ, ನಿನ್ನ ಆಜ್ಞೆಯನ್ನು ಹಿಂದೆ ಪಡೆ ಎನ್ನುತ್ತ ಪ್ರಾಣ ಬಿಕ್ಷೆ ಬೇಡುತ್ತ ಅಂಗಲಾಚುವುದೆ. ಅದು ಎಂದಿಗು ಸಾದ್ಯವಿಲ್ಲ ಎಂದಿತು ಅವನ ಮನಸ್ಸು. ಅವನಿಗೆ ಚೆನ್ನಾಗಿ ತಿಳಿದಿತ್ತು ಒಮ್ಮೆ ರಾಮನ ಬಾಯಲ್ಲಿ ಬಂದ ಮಾತು ಅವನ ಬಾಣದಂತೆ ಅವನ್ನು ಹಿಂದಕ್ಕೆ ಪಡೆಯಲಾಗದು. ಅವನ ಮನ ಚಿಂತಿಸಿತು. ಪ್ರಜೆಗಳ ಒಂದು ಮಾತಿಗಾಗಿ ತನ್ನ ಕೈಹಿಡಿದವಳನ್ನೆ ಯಾವ ಅಳುಕು ಇಲ್ಲದೆ ದೂರ ತಳ್ಳಿ ಅಡವಿಗೆ ಅಟ್ಟಿದವನು ರಾಮ, ಇನ್ನು ತಾನು ಹೇಗೆ ಅವನ ಬಳಿ ಪ್ರಾಣ ಬಿಕ್ಷೆ ಬೇಡಲಿ. ನಾಳೆ ಪುನಃ ರಾಮನಿಗೆ ಅಪವಾದ ಬಾರದೆ ? ಪ್ರಜೆಗಳಿಗೆ ಒಂದು ನ್ಯಾಯ ತಮ್ಮನಿಗೆ ಒಂದು ನ್ಯಾಯ ಎಂದು ಯಾರು ಬೇಕಿದ್ದರು ಅನ್ನಬಹುದಲ್ಲವೆ, ಅಂತಿರಲು ರಾಮನನ್ನು ಪ್ರಾರ್ಥಿಸುವುದು ನಿಷ್ಪ್ರಯೋಜಕ. ಮತ್ತೆ ತಾನು ದೇಶ ಬಿಟ್ಟು ಹೊರಟು ಹೋಗುವುದೆ, ಛೇ! ಬೇಡ ಕೇವಲ ಜೀವಕ್ಕೆ ಹೆದರಿ ದೂರಹೋಗುವುದೆ.
ಮತ್ತೆ ಹೇಗೆ ರಾಮನ ಎದುರಿಗೆ ಹೋಗಿ , ಅವನು ಕೊಟ್ಟ ಶಿಕ್ಷೆಗೆ ತಲೆಯೊಡ್ಡಿ ನಿಲ್ಲುವುದೆ?. ಏಕೊ ಬೇಡವೆನಿಸಿತು. ನನ್ನಷ್ಟೆ ರಾಮನು ನೊಂದಿರುತ್ತಾನೆ, ತನ್ನನ್ನು ಶಿಕ್ಷೆಗೆ ಒಳಪಡಿಸುವುದು ಎಂದರೆ ಅವನಿಗು ಹಿಂಸೆಯೆ, ಅಂತ ಹಿಂಸೆ ಅವನಿಗೆ ಏಕೆ ಕೊಡುವುದು. ಅಲ್ಲದೆ ಪ್ರಜೆಗಳ ಎದುರಿಗೆ ಇದು ಮತ್ತು ಅಪಹಾಸ್ಯಕ್ಕೆ ಒಳಗಾದಿತು. ಈಗ ಏನು ಮಾಡುವುದು ಎನ್ನುವಾಗ ಹೊಳೆಯಿತು. ತಾನಾಗೆ ಜೀವತ್ಯಾಗ ಮಾಡಿಬಿಡುವುದು. ಇದನ್ನು ಅಣ್ಣನ ಆಜ್ಞೆ ಎಂದು ಭಾವಿಸಿದರೆ ಆತ್ಮಹತ್ಯೆಯ ಪಾಪವು ಹತ್ತುವದಿಲ್ಲ ಅನ್ನಿಸಿತು. , ಮರುಕ್ಷಣದಲ್ಲೆ ಅವನ ಮನ ಅದನ್ನು ಸರಿ ಎಂದು ಒಪ್ಪಿ ನಿರ್ದರಿಸಿಬಿಟ್ಟಿತು. ತಾನೀಗ ಸರಿಯಾದ ಜಾಗಕ್ಕೆ ಬಂದಿರುವೆ, ಸರಯೂ ನದಿಯು ತುಂಬಿ ಹರಿಯುತ್ತಿದ್ದಾಳೆ. ತನ್ನ ಜೀವನವನ್ನೆಲ್ಲ ಪೊರೆದ ತಾಯಿಗೆ ತನ್ನ ದೇಹವನ್ನು ಅರ್ಪಿಸಿಬಿಡುವುದು ಎಂದು ನಿರ್ದರಿಸಿದ. ಏಕೊ ಊರ್ಮಿಳೆಯ ನೆನಪು ಬಂದಿತು. ಮದ್ಯಾನ ಹೊರಡುವಾಗ ಅವಳೇಕೊ ತಡೆದಳು ಆದರು ತಾನು ನಿರ್ಲಕ್ಷಿಸಿ ಹೊರಟೆ ಅನ್ನಿಸಿತು. "ಊರ್ಮಿಳ ನನ್ನನ್ನು ಕ್ಷಮಿಸು ನಿನಗೆ ತಿಳಿಸಿ ಹೋಗುವಷ್ಟು ಸಮಯವಿಲ್ಲ, ವ್ಯವದಾನವು ಇಲ್ಲ" ಎಂದು ಮನಸಲ್ಲಿಯೆ ಅಂದುಕೊಂಡ. ಮಗ ಚಿತ್ರಕೇತು ತಾಯಿ ಊರ್ಮಿಳಗೆ ತಿಳಿಸಿ ಅಯೋದ್ಯ ಬಿಟ್ಟು ವಿಹಾರಕ್ಕೆಂದು ಪತ್ನಿಯೊಡನೆ ಹೋಗಿದ್ದ.
ಲಕ್ಷ್ಮಣ ನಿದಾನಕ್ಕೆ ನದಿಯ ಮದ್ಯಕ್ಕೆ ನಡೆಯುತ್ತ ಹೊರಟ, ನೀರಿನ ಸೆಳವು ಅಪಾರವಾಗಿತ್ತು, ನೀರು ಸೊಂಟದವರೆಗು ಬರುವಂತೆ ಕಾಲಿಗೆ ಆದಾರ ತಪ್ಪುವಂತೆ ಎಳೆಯುತ್ತಿತ್ತು. ಮತ್ತು ಮುಂದೆ ಹೊರಟ. ದೂರದಲ್ಲಿ ಸೂರ್ಯನೀಗ ಪೂರ್ಣ ಮುಳುಗಿದ್ದ, ನೀರೆಲ್ಲ ಕಪ್ಪು ಛಾಯೆಯಲ್ಲಿ ಕಾಣಿಸುತ್ತಿತ್ತು. ನೀರು ಅವನ ಕುತ್ತಿಗೆವರೆಗು ಬಂದಿತ್ತು. ಲಕ್ಷ್ಮಣನ ಮನವೇಕೊ ಸ್ವಲ್ಪ ಒದ್ದೆಯಾಯಿತು. ಅವನ ಕಣ್ಣೆದುರು ಒಂದು ದೃಷ್ಯ ಕಾಣಿಸಿತು. ರಾಮ ತೀರ ಚಿಕ್ಕ ವಯಸಿನವ, ಆಗಿನ್ನು ಪುಟ್ಟ ಬಿಲ್ಲಿನಲ್ಲಿ ಬಾಣಬಿಡುವುದನ್ನು ಕಲಿಯುತ್ತಿದ್ದ, ತಾನು ಸದಾ ಅವನ ಜೊತೆಗೆ, ರಾಮನು ಬಿಟ್ಟ ಬಾಣವನ್ನು ತಾನು ಹೋಗಿ ತಂದು ಕೊಡುತ್ತಿದ್ದೆ, ರಾಮನು ಅದನ್ನು ಪುನಃ ಪಡೆದು ಬಿಲ್ಲಿನಲ್ಲಿ ಹೂಡಿ ದೂರಕ್ಕೆ ಚುಮ್ಮಿಸುತ್ತಿದ್ದ, ತನ್ನತ್ತ ಒಂದು ಕುಡಿನೋಟವಷ್ಟೆ, ಅವನ ಮನ ಅರಿತವನಂತೆ ತಾನು ಪುನಃ ಬಾಣದತ್ತ ಓಡಿ ಅದನ್ನು ತಂದು ಕೊಡುತ್ತಿದ್ದೆ, ಮತ್ತೆ ಏಕೊ ನೆನಪಿಗೆ ಬಂದಿತು ರಾಮನ ಜೊತೆ ಇದ್ದ ನನಗೆ ಕಾಲಯಮನ ರೂಪಿನಲ್ಲಿ ಬಂದ ಆ ಅಪರಿಚಿತ ಆಗುಂತಕ ಯಾರಿರಬಹುದು? . ಏಕೊ ಲಕ್ಷ್ಮಣನ ಕಣ್ಣ ಕೊನೆಯಲ್ಲಿ ನೀರಿನ ಬಿಂದು ಒಂದು ಮೂಡಿ ಅದು ಸರಯೂ ನದಿಯಲ್ಲಿ ಕರಗಿ ಒಂದಾಗಿ ಹರಿಯುತ್ತಿತ್ತು.......
....
....................................................................................................
ಸರಯೂ ನದಿಯ ದಡದಲ್ಲಿದ್ದ ಹಲವು ಮೀನುಗಾರರು, ಮತ್ತೆ ವಿಹಾರಕ್ಕೆಂದು ಬಂದವರು ಕೆಲವರು ಲಕ್ಷ್ಮಣನನ್ನು ಗುರುತಿಸಿದ್ದರು. ಅವರಿಗೆ ಆಶ್ಚರ್ಯ ಇದೇನು ಮಹರಾಜ ಲಕ್ಷ್ಮಣನು ಈ ರೀತಿ ಒಂಟಿಯಾಗಿ ನದಿಯ ದಡಕ್ಕೆ ಬಂದಿರುವ, ಯಾರ ಕಡೆಯು ನೋಡದೆ ನದಿಯ ದಡದಲ್ಲೇಕೆ ನಿಂತಿರುವ ಪ್ರಶ್ನೆ. ಆದರೆ ಅವರಿಗೆಲ್ಲ ಲಕ್ಷ್ಮಣನ ಜೊತೆ ಅಷ್ಟು ಸಲುಗೆ ಇಲ್ಲ. ಸದಾ ಅರಮನೆಯಲ್ಲಿ ನಿಂತು ರಾಜ್ಯಾಡಳಿತವನ್ನು ನೋಡಿಕೊಳ್ಳುವ ಲಕ್ಷ್ಮಣನನ್ನು , ಸಾದಾರಣ ಪ್ರಜೆಗಳು ಹೇಗೆ ಮಾತನಾಡಿಸಿಯಾರು. ದೂರದಿಂದಲೆ ಗಮನಿಸುತ್ತಿದ್ದರು. ಅವರಿಗೇನೊ ಆತಂಕ. ಆದರೆ ಸ್ವಲ್ಪ ಸಮಯದಲ್ಲೆ ಲಕ್ಷ್ಮಣ ನಿದಾನಕ್ಕೆ ನೀರಿನೊಳಗೆ ಇಳಿದು ಹೊರಟು ಹೋದಂತೆ ಅವರಿಗೆ ಅಘಾತ. ಇದೇನು ಆಗುತ್ತಿದೆ, ನದಿಯ ಪ್ರವಾಹದ ನೀರಿನೊಳಗೆ ಇವನೇಕೆ ಇಳಿಯುತ್ತಿದ್ದಾನೆ ಎಂದು ಎಲ್ಲ ಎಚ್ಚರಗೊಳುವದರಲ್ಲಿ ಲಕ್ಷ್ಮಣನು ನೀರಿನ ಆಳಕ್ಕೆ ಇಳಿದಿದ್ದು ಆಗಿತ್ತು. ದೂರದಲ್ಲಿದ ಕೆಲವರು ಗಾಭರಿಗೊಂಡು ಹತ್ತಿರ ಓಡಿಬಂದರು. ಕೆಲವರು ಅರಮನೆಗೆ ವಿಷಯ ತಿಳಿಸಲು ದಡಬಡಿಸಿ ಓಡಿದರು.
ನೀರಿನ ಹತ್ತಿರ ಬಂದವರಿಗೆ ಅಚ್ಚರಿಯೊಂದು ಕಾದಿತ್ತು, ಲಕ್ಷ್ಮಣ ನೀರಿನಲ್ಲಿ ಇಳಿದ ಜಾಗದ ಸುತ್ತ ಎಲ್ಲು ಅವನ ಸುಳಿವೆ ಕಾಣಲಿಲ್ಲ ಬದಲಿಗೆ ಆ ಜಾಗದಲ್ಲಿ ನೀರಿನ ಮೇಲ್ಮೆಯಲ್ಲಿ ಕೌತುಕವೊಂದು ಕಾಣಿಸಿತು, ಅ ಮಬ್ಬುಗತ್ತಲಿನಲ್ಲಿ, ನೀರಿನ ಮೇಲೆ ಹಲವು ಹೆಡೆಗಳ ಸರ್ಪವೊಂದು ನಿದಾನಕ್ಕೆ ನೀರಿನಲ್ಲಿ ಸೇರುತ್ತ ಕಣ್ಮರೆಯಾಗಿ ಹೋದಂತೆ ಅನ್ನಿಸಿತು, ಅವರು ಪುರಾಣಗಳಲ್ಲಿ ಸಾವಿರ ಹೆಡೆಗಳ ಆದಿಶೇಷ ಮುಂತಾದ ಹೆಸರುಗಳನ್ನು ಕೇಳಿದ್ದರು, ಈಗ ಅವರಿಗೆ ಇದು ಅದೇ ರೀತಿಯ ಹಲವು ಹೆಡೆಗಳ ಸರ್ಪವೊ , ಇಲ್ಲ ಹಲವು ಸರ್ಪಗಳು ಒಂದಕ್ಕೊಂದು ಹೆಣೆದುಕೊಂಡು ಹೆಡೆಬಿಚ್ಚಿ ಸಾಗಿದವೊ ಎಂಬ ಗೊಂದಲ ಅವರನ್ನು ಕಾಡಿತು, ಅಥವ ಮಬ್ಬು ಕತ್ತಲೆಯಲ್ಲಿ ಕಂಡ ದೃಷ್ಯ ಒಂದು ಭ್ರಮೆಯೊ ನಿರ್ದರಿಸಲಾಗದೆ ಅವರೆಲ್ಲ ನದಿಯಲ್ಲಿ ಉಕ್ಕಿ ಹರಿಯುತ್ತಿದ್ದ ಕೆಂಪು ನೀರನ್ನು ನೋಡುತ್ತ ನಿಂತರು.
-ಮುಗಿಯಿತು.

No comments:

Post a Comment

enter your comments please