Sunday, February 26, 2012

ಕೂಗುಮಾರಿ

                                               ಕೂಗುಮಾರಿ
[ಜಿರಲೆ ಬಂದಾಗ ಅಥವ ವಿಶೇಷ ಸಂದರ್ಭಗಳಲ್ಲಿ ಹೆಂಗಸರು ಕಿಟಾರ್ ಎಂದು ಜೋರಾಗಿ ಕಿರುಚುವುದನ್ನು "ಕೂಗುಮಾರಿ" ಎಂದು ಕರೆದಿದ್ದೇನೆ]
ಹೀಗೆ ಸ್ಕೂಟರ್ ನಲ್ಲಿ ಎಲ್ಲಿಗೊ ಹೋಗಿದ್ದವನು ಮನೆಗೆ ಹಿಂದಿರುಗುತ್ತಿದ್ದೆ  . ಮನೆಯ ಹತ್ತಿರ ಬರುವಾಗಲೆ ದೂರದಿಂದ ಮನೆಯ ಗೇಟಿನ ಹತ್ತಿರ ನನ್ನಾಕೆ ನಿಂತಿರುವುದು ಕಾಣಿಸಿತು. ವೇಗವನ್ನು ಕಡಿಮೆ ಮಾಡುತ್ತ ಬ್ರೇಕ್ ಹಾಕಿದೆ, ಹಾಳು ಚಕ್ರ ಯಾವುದರ ಮೇಲೆ ಹತ್ತಿತೊ ಬ್ಯಾಲೆನ್ಸ್ ತಪ್ಪಿದಂತಾಗಿ ಸ್ಕೂಟರ ವಾಲುತ್ತ ಅಡದಿಡ್ಡಿಯಾಗಿ ಚಲಿಸಿತು.

 ಆದರೆ ಅಷ್ಟರಲ್ಲಿ  ನನ್ನವಳು ಗಾಭರಿಯಾಗಿ ಕೂಗುಮಾರಿಯಂತೆ ಜೋರಾಗಿ ’ಏನು ಆಯ್ತುರಿ ’ ಎನ್ನುತ್ತ ಕಿರುಚಿದಳು. 
ನಾನು ಬಿದ್ದಿದ್ದಕ್ಕೆ ಅವಳು ಕಿರುಚಿದಳೊ ಅಥವ ಅವಳು ಕಿರುಚಿದ್ದಕ್ಕೆ ನಾನು ಬಿದ್ದನೊ ಅರ್ಥವಾಗಲಿಲ್ಲ , ಒಟ್ಟಿನಲ್ಲಿ ನಾನು ನೆಲದಮೇಲೆ ಬಿದ್ದಿದ್ದೆ. ಅವಳು ಕಿರುಚಿದ ದ್ವನಿ ರಸ್ತೆಯಲ್ಲಿ ಎಲ್ಲರ ಮನೆ ತಲುಪಿ, ಎಲ್ಲರು ಈಚೆ ಬಂದರು. ಪಕ್ಕದ ಮನೆಯಾತ ಏನಾಯ್ತು ಎನ್ನುತ್ತ  ಓಡಿಬಂದರು. ಒಟ್ಟಿನಲ್ಲಿ ಇಪ್ಪತ್ತೈದು ವರುಷದಿಂದ ಗಾಡಿ ಓಡಿಸುತ್ತಿದ್ದೇನೆಂಬ  ಅಭಿಮಾನ ನಮ್ಮ  ಮನೆಯ "ಕೂಗುಮಾರಿ"ಯಿಂದಾಗಿ ಎಲ್ಲರ ಮುಂದೆ ಧೂಳೆದ್ದು ಹೋಯ್ತು.

  ಆದರು ನಾನು  ’ಏನಾಗಲ್ಲಿಲ್ಲ ಬಿಡಿ ಗಾಡಿ ಸ್ಕಿಡ್ ಆಯ್ತು ಅಷ್ಟೆ’  ಎನ್ನುತ್ತ ಎದ್ದು ನಿಲ್ಲಲ್ಲು ಹೋದೆ. ಪಕ್ಕದ ಮನೆಯಾತ ’ಛೇ! ಹಾಗೆ ಒರಟುತನ ಮಾಡಬೇಡಿ ಏನಾದರು ಮೂಳೆ ಮುರಿದಿದ್ದರೆ ಕಷ್ಟ’ ಎನ್ನುತ್ತ. ನನ್ನವಳ   ಕಡೆ ತಿರುಗುತ್ತ, ’ನೋಡಿ ರಸ್ತೆಯಲಿ ಬಿದ್ದರೆ ಒಳ್ಳೆಯದಲ್ಲ ನೋಡಿ ಕೈಯೆಲ್ಲ ತರಚಿ ರಕ್ತ ಬರುತ್ತಿದೆ, ಒಂದು ಟಿಟಾನಸ್ ಆದರು ಹಾಕಿಸಬೇಕು’ ಅಂದರು.

ಪಾಪ ನನ್ನವಳು ಕಾತುರದಿಂದ ಹತ್ತಿರ ಬಂದು ’ ಏನಾಗಿದೆ ರೀ ನೋವುತ್ತಿದೆಯ’ ಅಂತ ನನ್ನನ್ನು ಎಬ್ಬಿಸುವ ಪ್ರಯತ್ನ ಮಾಡಿದಳು.   ರಸ್ತೆಗೆ ಕೈ ಕೊಟ್ಟಿ ಏಳಲು ಹೋದರೆ , ಬಲಕೈ ಎಂತದೊ ತುಂಬಾ ನೋಯ್ತಿದೆ ಅನ್ನಿಸಿ. 
’ಹೌದೆ ಏಕೊ ಬಲಕೈ ನೋಯ್ತಿದೆ, ಏನಾಯ್ತೊ ’ ಎಂದೆ. ಪಕ್ಕದ ಮನೆಯಾತನಿಗೆ ಅಷ್ಟು ಸಾಕಿತ್ತು,
’ಅದಕ್ಕೆ ಸಾರ್ ನಾನು ಹೇಳಲಿಲ್ವ, ಬಹುಷಃ ಮೂಳೆ ಮುರಿದಿದೆ ಅನ್ನಿಸುತ್ತೆ, ನೀವು ತಡಮಾಡ ಬೇಡಿ ತಡಮಾಡಿದಷ್ಟು ಅಪಾಯ ಜಾಸ್ತಿ ಬೇಕಾದರೆ ಹೇಳಿ ನಾನು ಜೊತೆಗೆ ಬರುತ್ತೇನೆ ’ ಎನ್ನುತ್ತ . ತಾನೆ ಬಿದ್ದಿದ್ದ ಗಾಡಿಯನ್ನು ಎತ್ತಿ ಮನೆಯೊಳಗೆ ತಳ್ಳಿ.  ನನ್ನ ಹೆಂಡತಿಯನ್ನು ಬಲವಂತಪಡಿಸಿ ಹೊರಡಿಸಿದ. ಆಕೆ ಮನೆಗೆ ಬೀಗವನ್ನು ಹಾಕಿ, ಕೀಯನ್ನು ಅವರ ಕೈಗೆ ಕೊಟ್ಟು ಆಟೊ ಹತ್ತುವವರೆಗು ರಸ್ತೆಯ ಅಕ್ಕಪಕ್ಕದ ಜನರೆಲ್ಲ ಪಾಪ ನಿಂತಿದ್ದರು. 

 ’ನೀವು ಹೋಗುವದಾದರೆ ಸೀತಸರ್ಕಲ್ ನಲ್ಲಿ ಇದೆಯಲ್ಲ ’ಹರೋಹರ ಮೂಳೆತಜ್ಞರ ಕ್ಲೀನಿಕ್’ ಅಲ್ಲಿಗೆ ಹೋಗಿ ತುಂಬಾ ಚೆನ್ನಾಗಿ ನೋಡ್ತಾರೆ’ ಎಂದು ನಮ್ಮನ್ನು ಹೊರಡಿಸಿ ಪಕ್ಕದ ಮನೆಯ ಆ ಗಂಡ ಹೆಂಡತಿ ನಗುತ್ತ ಒಳಹೊರಟರು.

 ಕ್ಲೀನಿಕ್ ಮುಂದೆ ಆಟೊದವನು ನಿಲ್ಲಿಸಿದ, ನಾನು ಮೊದಲು ಇಳಿದೆ. ನನ್ನಾಕೆ ಕೆಳಗೆ ಇಳಿದು ಡ್ರೈವರಿಗೆ ದುಡ್ಡು ಕೊಟ್ಟು ಆತಂಕದಿಂದ ಒಳಹೊರಟಳು. ನನಗೆ ಏಕೊ ಸ್ವಲ್ಪವು ನೋವೆ ಇಲ್ಲ ಅನ್ನಿಸಿತು. ತರಚಿದ ಕಡೆಮಾತ್ರ ಸ್ವಲ್ಪ ಉರಿಯುತ್ತಿತ್ತು ಅಷ್ಟೆ. ಈಗ ಅವಳೂ ತುಂಬಾ ಆತಂಕದಲ್ಲಿರುವಾಗ ಇದನ್ನು ಹೇಳಿದರು  ಮಾತಿಗೆ ಬೆಲೆಕೊಡಲ್ಲ ಏನಾದರು ಮಾಡಿಕೊಳ್ಳಲ್ಲಿ ಅಂತ ಸುಮ್ಮನಾದೆ. 

ಒಳಗೆ ಹೋದ ಅವಳು ರಿಸಿಪ್ಷನನಲ್ಲಿ ಹೇಳಿ ಹೆಸರು ಬರೆಸಿದಳು. ಕೌಂಟರನಲ್ಲಿದ್ದಾಕೆ  ನನ್ನತ್ತ ನೋಡುತ್ತ ನನ್ನವಳನ್ನು ಕೇಳಿ ಹೆಸರು ವಿಳಾಸ ಕೆಲಸ ಎಲ್ಲವನ್ನು ಫಾರ್ಮನಲ್ಲಿ ಬರೆದು ತುಂಬಿಸಿ, ’ಇದೇನಾದರು ಪೋಲಿಸ್ ಕೇಸ’ ಅಂತ ಅನುಮಾನದಿಂದ ಪ್ರಶ್ನಿಸಿದಳು. ನನಗೆ  ಮೈಯೆಲ್ಲ ಉರಿ, "ಹೌದೂ ಪೋಲಿಸ್ ಕೇಸೆ , ನನ್ನಾಕೆ "ಕೂಗುಮಾರಿ"ಯಂತೆ ಕಿರುಚಿ ಹೆದರಿಸಿ ನನ್ನ ಬೀಳಿಸಿದಳು ಅಂತ ಬರಕೊಳ್ಳಿ’ ಅನ್ನುವ ಮನಸ್ಸಾಯಿತು, ಆದರೆ ಅನ್ನಲಿಲ್ಲ ಸುಮ್ಮನೆ ತಲೆತಗ್ಗಿಸಿ ಕುಳಿತಿದ್ದೆ. 

ನಂತರ   ಎದುರಿಗೆ ಕಾಣುತ್ತಿದ ಕನ್ಸಲ್ಟೆಂಸಿ ರೂಮಿಗೆ ಕಳುಸಿದಳು, ಅದರ ಬಾಗಿಲ ಮೇಲೆ ’ಡಾ||ಸಿದ್ದೇಸ ’ ಮೂಳೆ ತಜ್ಞ ಅನ್ನುವ ಜೊತೆಗೆ ಎಂತೆಂತದು ಉದ್ದುದ್ದ ಡಿಗ್ರಿಗಳ ಸಾಲು. ಒಳಗೆ ಹೋದರೆ ಯಾರು ಇಲ್ಲ , ಡಾಕ್ಟರ ಟೇಬಲ್ಲಿನ ಎದುರಿನ ಎರಡು ಕುರ್ಚಿಯಲ್ಲಿ ನಾನು ಹಾಗು ನನ್ನ "ಕೂಗುಮಾರಿ ", ಕ್ಷಮಿಸಿ,   ಪತ್ನಿ ಕುಳಿತವು.
ಸ್ವಲ್ಪ ಹೊತ್ತು ಕಳೆಯಿತು ಒಳಗೆ ಯಾರು ಇಲ್ಲ, ನಾನು ಬೇಸರ ಪಡುತ್ತಿರುವಂತೆ, ಬಾಗಿಲು ತೆರೆದು ಮತ್ತೊಬ್ಬ ಒಳಬಂದ, ನೋಡಿದರೆ ಪಾಪ ಅವನ ಎಡಕೈ ಮುರಿದು ಕಟ್ಟು ಹಾಕಲಾಗಿದೆ, ಕೈಯನ್ನು ಎತ್ತಿ ಬಟ್ಟೆಯ ದಾರದ ಸಹಾಯದಿಂದ ಕುತ್ತಿಗೆಗೆ ಬಿಗಿದಿದ್ದರು. ನಾನು  ’ಏನಿದು ನಾವು ಒಳ ಇರುವಾಗಲೆ ಮತ್ತೊಬ್ಬ ಪೇಶೆಂಟ್ ನನ್ನು ಒಳಗೆ ಬಿಟ್ಟರು ಸ್ವಲ್ಪವು ಡಿಸಿಪ್ಲೀನ್ ಇಲ್ಲ ’ ಅಂದುಕೊಳ್ಳುವಾಗಲೆ , ಒಳಬಂದ ಬ್ಯಾಂಡೇಜಿನಾತ , ಡಾಕ್ಟರರ ಕುರ್ಚಿಯಲ್ಲಿ ಕುಳಿತ. 

ನಾನು ಗಾಭರಿಯಿಂದ ’ರೀ ಮಿಸ್ಟರ್ ಅದು ಡಾಕ್ಟರ್ ಕುರ್ಚಿರಿ ನೀವು ಈ ಕಡೆ ಬನ್ನಿ’ ಎಂದೆ
ಅವನು ನಗುತ್ತ ’ಇವರೆ ಗಾಭರಿ ಬೇಡ ನಾನೆ ಡಾಕ್ಟರ್ ಸಿದ್ದೇಶ, ಪರವಾಗಿಲ್ಲ ನಿಮ್ಮ ಸಮಸ್ಯೆ ಹೇಳಿ’ ಎಂದ’
ನಾನು ’ಮತ್ತೆ ನಿಮ್ಮ ಕೈ ಮುರಿದಿದೆಯಲ್ಲ" ಅಂತ ಅನುಮಾನದಿಂದ ನುಡಿದೆ, ಅದಕ್ಕೆ ಡಾ|ಸಿದ್ದೇಶರು
"ಅಲ್ಲಾರಿ ಮೂಳೆ ಡಾಕ್ಟರ್ ಕೈ ಮುರಿಯಬಾರದು ಅಂತ ಇದೆಯೇನ್ರಿ, ಹೀಗೆ ನಿನ್ನೆ ಬೆಳಗ್ಗೆ ಗಾಡಿ ನಿಲ್ಲಿಸುವಾಗ ನನ್ನ ಪತ್ನಿ ಏನೊ ಗಡಿಬಿಡಿ ಮಾಡಿಬಿಟ್ಟಳೂ ಬಿದ್ದೆ ಕೈಮುರಿಯಿತು, ಅದಕ್ಕೆ ಪುತ್ತೂರು ಶಾಪಿಗೆ ಹೋಗಿ ಕಟ್ಟು ಹಾಕಿಸಿಬಂದೆ’ ಅಂದರು.
ನನ್ನ  ಮನಸಿನಲ್ಲಿ "ಎಲಾ ಇವನ , ಇದು ನನ್ನದೆ ಕೇಸು, ಆದರು ಇವನೆ ಪುತ್ತೂರು ಶಾಪಿಗೆ ಹೋಗುವಾಗ ನಾನು ಮಾತ್ರ ಇವನ ಹತ್ತಿರ ಏಕೆ ಬರಬೇಕು" ಅಂದುಕೊಂಡು 
"ನಿಮ್ಮದು "ಕೂಗುಮಾರಿ"ಯ ಪ್ರಭಾವನ?" ಎಂದೆ , ಡಾಕ್ಟರ್ ಕಣ್ಣುಗಳು ಹೊಳೆದವು "ಹೌದು" ಎಂದರು ನಗುತ್ತ.

ನನ್ನ ಹೆಂಡತಿ ಡಾಕ್ಟರ್ ಕಡೆ ನೋಡುತ್ತ
"ಏನಿಲ್ಲ ಡಾಕ್ಟರ್ , ಇವರು ಮನೆ ಹತ್ತಿರ ಗಾಡಿಯಿಂದ ಬಿದ್ದುಬಿಟ್ಟರು, ಅದಕ್ಕೆ ಕರೆತಂದೆ, ಏನಾದರು ಮೂಳೆಮುರಿದಿದೆಯ ನೋಡಿ ಏಕೊ ಬಲಕೈ ನೋವು ಅಂತಾರೆ" ಅಂದಳು.
ಅದಕ್ಕೆ ಸಿದ್ದೇಶರು ಎಲ್ಲಿ ಹೀಗೆ ಬನ್ನಿ ಮಲಗಿ , ಈ ಕಾಲು ಎತ್ತಿ, ಈ ಕೈ ಎತ್ತಿ ಅಂತ ಏನೇನೊ ಪರೀಕ್ಷೆಯೆಲ್ಲ ಮಾಡಿ ತಲೆಆಡಿಸುತ್ತ, 
"ನೋಡಮ್ಮ ಈಗ ಅರ್ಜೆಂಟ್ಗೆ  ಒಂದು ಇಂಜೆಕ್ಷನ್ ಕೊಡುತ್ತೇನೆ, ನೋವಿಗೆ ಟಾಬ್ಲೇಟ್ ಕೊಡುತ್ತೇನೆ, ಕೆಲವು ಪರೀಕ್ಷೆ ಮಾಡಿಸಿ ಕನ್ ಫರ್ಮ್ ಮಾಡಿಕೊಳ್ಳಬೇಕು, ಕೈಯಿನ x-ray ಗೆ ಬರೆದು ಕೊಡ್ತೀನಿ, ಈ ರಸ್ತೆಯ ಕಡೆಯಲ್ಲಿ ಇದೆಯಲ್ಲ, ’ನೋ ಪೈನ್ ಲ್ಯಾಬ್’ ಅಲ್ಲಿ ಹೋಗಿ ಮಾಡಿಸಿ’ ಎಂದು. ಚೀಟಿಯಲ್ಲಿ ಎನೇನೊ ಬರೆದು,
’ಟಿಂಗ್’ ಅಂತ ಬೆಲ್ ಬಾರಿಸಿದರು. ಒಳಬಂದ ನರ್ಸಿಗೆ , ಒಂದು ಸ್ಲಿಪ್ ಕೊಟ್ಟು ’ಈ ಇಂಜೆಕ್ಷನ್ ಕೊಡಿ’ ಆಮೇಲೆ ಕೈಗೆ ಒಂದು ಪಟ್ಟಿಕಟ್ಟಿಬಿಡಿ’ ಅಂದರು.
ನರ್ಸನ್ನು ನೋಡುತ್ತ , ಇಂಜೆಕ್ಷನ್ ಎಲ್ಲಕ್ಕು ಸಿದ್ದನಾಗಿ ಅವಳ ಹಿಂದೆ ಹೊರಟುಬಿಟ್ಟೆ. ಪಾಪ ನನ್ನ ಪತ್ನಿ  ಬೇಗ ಬೇಗ ಡಾಕ್ಟರ್ ಹತ್ತಿರ ಚೀಟಿ ಎಲ್ಲ ಪಡೆದು, ಎಷ್ಟು ದುಡ್ಡು ಅಂತ ಕೇಳಿ, ಹೊರಗೆ ಬಂದಳು .
  ನರ್ಸ ಒಂದು ಟಿಟಾನಸ್ ಚುಚ್ಚಿ, ಬ್ಯಾಡೇಜಿನ ಬಟ್ಟೆಯಲ್ಲಿ ಒಂದು ಪಟ್ಟಿಮಾಡಿ ಕುತ್ತಿಗೆಗೆ ಕಟ್ಟಿ, ಅದರಲ್ಲಿ ನನ್ನ ಕೈಯನ್ನು ತೂರಿಸಿ ಸಿದ್ದಮಾಡುತ್ತಿದ್ದರೆ, ಪಾಪ ನಾನು ಹಸುಗೂಸಿನಂತೆ ಕುಳಿತು ಎಲ್ಲವನ್ನು ಮಾಡಿಸಿಕೊಂಡೆ. ಹೊರಗೆ ಬಂದ ನನ್ನ ಪತ್ನಿಯನ್ನು ಕಂಡತಕ್ಷಣ, ಎದ್ದು ನಿಂತೆ. ಸರಿ ಡಾಕ್ಟರ್ ಹೇಳಿದ 750/ ರೂ ಪೀಸನ್ನು ಕೌಂಟರಿನಲ್ಲಿ ಕಟ್ಟಿ ಹೊರಬಂದ ಅವಳು ನನ್ನನ್ನು ಮತ್ತೆ ರಸ್ತೆಯ ಕಡೆಯಲ್ಲಿದ್ದ , ಲ್ಯಾಬ್ ಗೆ ಕರೆದೋಯ್ಡಳು.
ಅಲ್ಲಿ  x-ray ಎಲ್ಲ ತೆಗೆದು ಮತ್ತೆ 500/ ರೂಗಳನ್ನು ಕೊಟ್ಟಾಯ್ತು. ಅವನು ರಿಪೋರ್ಟ್ ನಾಳೆ ಕೊಡುತ್ತೀನಿ ಬನ್ನಿ ಎಂದ.

ಸರಿ ಇಬ್ಬರು ಸಪ್ಪೆ ಮುಖದೊಂದಿಗೆ ಮತ್ತೆ ಆಟೊಹತ್ತಿ ಮನೆಗೆ ಬಂದು, ಕೀ ಕೇಳಲು ಹೋದಾಗ ಪಕ್ಕದ ಮನೆಯವರಲ್ಲಿ ಪೂರ ವರದಿ ಒಪ್ಪಿಸಬೇಕಾಯಿತು. ಆತ ’ನಾನು ಹೇಳಲಿಲ್ವೆ ಸಾರ್ ಅವರು ಒಳ್ಳೆ ಡಾಕ್ಟರ್’ ಅಂದರು.
ಸರಿ ಬಾಗಿಲು ತೆರೆದು ಒಳಬಂದ ಇಬ್ಬರು ಉಸ್ಸಪ್ಪ ಅಂತ ಸೋಫಮೇಲೆ ಕುಳಿತವು. ನನ್ನವಳಿಗೆ ದುಃಖ ಏನೇನೊ ಆಗಿಹೋಯಿತಲ್ಲ ಅಂತ, ನಾನು ಮಾತ್ರ ’ಏನು ಆಗಿಲ್ಲ ಬಿಡೆ ಸರಿ ಹೋಗುತ್ತೆ ಅನ್ನಿಸುತ್ತೆ ’ ಅಂತ ದೈರ್ಯ ಹೇಳಿದೆ. 

ಅವಳು ಕಾಫಿಮಾಡಿ ತರುತ್ತೇನೆ ಅಂತ ಒಳಹೋದವಳು ಹತ್ತು ನಿಮಿಶವಾದರು ಹೊರಬರಲಿಲ್ಲ,
ನಾನು ಬೇಸರವಾಗಿ ನಿಂತೆ. ಕೈಗೆ ಕಟ್ಟಿದ ಬ್ಯಾಂಡೇಜ್ ನೋಡಿಕೊಂಡು, "ಎಲ್ಲ ಮೋಸ ಸುಮ್ಮನೆ ಹೆದರಿಸುತ್ತಾರೆ ಈ ಡಾಕ್ಟರ್ ಗಳು, ಕೈ ಕಾಲು ಎಲ್ಲ ಸರಿಯಾಗೆ ಇದೆ " ಅಂದುಕೊಂಡು,
ನಿಂತವನ್ನು ಬಲಕಾಲನ್ನೆತ್ತಿ ಅರ್ದಚಂದ್ರಾಕೃತಿಯಂತೆ ತಿರುಗಿಸಿದೆ ಸರಿಯಾಗೆ ಇದೆ ಅನ್ನಿಸಿತು, ಮತ್ತೆ ಎಡಕಾಲನೆತ್ತಿ ತಿರುಗಿಸಿದೆ , ಅದು ಸರಿಯಾಗೆ ಇದೆ. ಈಗ ಎಡಕೈಯನ್ನು ಮೇಲೆತ್ತಿ ಜೋರಾಗಿ ತಿರುಗಿಸಿದೆ, ಸಜಜವಾಗಿಯೆ ಇದೆ, ಸರಿ ಅಂತ ಅದೇ ಕೈಯನ್ನು ವಿರುದ್ದ ದಿಕ್ಕಿನಲ್ಲಿ ಚಕ್ರದಂತೆ ತಿರುಗಿಸಿದೆ, ಯಾವ ನೋವು ಇಲ್ಲ. "ಅಯ್ಯೊ ಗೂಬೆಗಳಾ" ಅಂದು ಕೊಂಡವನು, ನಿದಾನಕ್ಕೆ ಬಲಕೈಗೆ ಕಟ್ಟಿದ ಕಟ್ಟನ್ನು ಬಿಚ್ಚಿ. ಚಕ್ರಕಾರವಾಗಿ ನಿದಾನಕ್ಕೆ ತಿರುಗಿಸಿದೆ, 
"ಅಯ್ಯೊ ಏನು ಆಗಿಲ್ಲ"  
ಈಗ ನನಗೆ  ದೈರ್ಯಬಂತು, ಬಲಕೈಯನ್ನು ಮತ್ತೆ ವಿರುದ್ದ ದಿಕ್ಕಿನಲ್ಲಿ ಜೋರಾಗಿ ತಿರುಗಿಸುತ್ತಿದ್ದೆ, ಒಂದು ಸುತ್ತು ಎರಡು ಸುತ್ತು, ... ಹಿಂದೆ ಯಾರು ಬಂದಂತಾಯ್ತು.. ಏನೆಂದು ನೋಡುವದರಲ್ಲಿ ,... ಮತ್ತೆ ... ಕೂಗುಮಾರಿ !!!
"ಟಪ್ .." ಅಂತ ಶಬ್ದ ಬಂದಿತು. ನನ್ನವಳು ತರುತ್ತಿದ್ದ ಕಾಫಿಯ ಕಪ್ ಮತ್ತು ಸಾಸರ್ ಗೆ ನನ್ನ ಕೈ ರಭಸದಿಂದ ಬಡಿದು, ಕಪ್ ಮೇಲಕ್ಕೆ ಹಾರಿತು,. ಅದರಲ್ಲಿದ್ದ ಕಾಫಿ ಇಬ್ಬರ ಮೇಲು ಸುರಿಯಿತು. ಪ್ಲೇಟ್ ನೆಲಕ್ಕೆ ಬಿದ್ದು ಶಬ್ದ ಮಾಡುತ್ತ ಚೂರು ಚೂರಾಗಿ ಒಡೆದು ಹೋಯಿತು. ಅವಳು ’ರೀ....’ ಅಂತ ಕೂಗಿದ ಶಬ್ದಕ್ಕೆ ನಾನು ಅದುರಿಬಿದ್ದೆ, ಅರ್ದಹಿಂದಕ್ಕೆ ತಿರುಗಿದ್ದ ನಾನು , ಕೈಯನ್ನು ಮೇಲೆ ಎತ್ತಿರುವಂತೆ, ಮತ್ತೆ ಬ್ಯಾಲೆನ್ಸ್ ತಪ್ಪಿ, ನೆಲಕ್ಕೆ ಉರುಳಿದೆ, ನೆಲಕ್ಕೆ ಬಿದ್ದ ನನ್ನ ತಲೆಯ ಮೇಲೆ, ಕೈಬಡಿದು ಮೇಲೆ ಹೋಗಿದ್ದ ಕಪ್  ಬಂದು ಬಿತ್ತು. 

ನನ್ನಾಕೆ ಕೋಪದಿಂದ " ಏನ್ರಿ ನೀವೇನು ಎಳೆ ಮಗೂನ, ಹೀಗೆ ಕುಣಿತಿದ್ದೀರಿ, ನಾನು ಕಷ್ಟ ಬಿದ್ದು ಕರೆದುಕೊಂಡು ಹೋಗಿ, ತೋರಿಸಿ ಬಂದರೆ ನೀವು ಕಟ್ಟು ಬಿಚ್ಚಿ ಹಾಕಿ ಕುಣಿತಿದ್ದೀರಿ ನನ್ನ ಮೇಲೆಲ್ಲ ಕಾಫಿ ಸುರಿದಿರಿ" ಅಂತ ಕೂಗಾಡುತ್ತ , ನೆಲದ ಮೇಲೆ ಬಿದ್ದ ಕಾಫಿ ಒರೆಸಲು ಬಟ್ಟೆ ತರಲು ಒಳಹೋದಳು. 

ನೆಲದ ಮೇಲೆ ಬಿದ್ದಿದ್ದ ನಾನು ಮೇಲೆ ಏಳಲು ಹೋದ, ಏಕೊ ಆಗುತ್ತಿಲ್ಲ, ಬಲಕೈ ನೆಲಕ್ಕೆ ಊರಲು ಹೋದೆ ಆಗುತ್ತಿಲ್ಲ, ಬಲದಕೈ ಸಿಕ್ಕಾಪಟ್ಟೆ ನೋಯುತ್ತಿದೆ. ಎಡಕೈಯಿಂದ ಬಲಕೈ ಮುಟ್ಟಿನೋಡಿದೆ, ಅಯ್ಯಯ್ಯೊ ಇದೇನು ಮೂಳೆ ಮುರಿದ ಹಾಗಿದೆ, ಮೊಣಕೈ ಹತ್ತಿರ ಊದಿಕೊಂಡಿದೆ. 
ನನಗೀಗ ಗೊತ್ತಾಯಿತು, ನಿಜ ಈಗ ಬಲದಕೈ ಮೂಳೆ ಮುರಿದಿದೆ.

No comments:

Post a Comment

enter your comments please