ಕೃಷ್ಣ .. ಕೃಷ್ಣ ... ಕೃಷ್ಣ (9) - ಗೋವರ್ಧನ ಗಿರಿಧಾರಿ
ಗಣೇಶ ಮತ್ತೆ ಕೇಳಿದ
“ಕೃಷ್ಣ ಕಾಳಿಂಗನ ಘಟನೆಯೇನೊ ಹೇಳಿದೆ , ಆದರೆ ಗೋವರ್ಧನ ಗಿರಿಧಾರಿ ಎನ್ನುವರಲ್ಲ ನಿನ್ನನ್ನು , ಗೋವರ್ಧನ ಬೆಟ್ಟವನ್ನು ಸಾಮಾನ್ಯರು ಎತ್ತಲು ಅಸಾದ್ಯವೆ ಸರಿ. ಆದರೆ ನಿನ್ನಂತಹ ಪವಾಡಪುರುಷನಿಗೆ ಎಲ್ಲವು ಸಾದ್ಯ ಎನ್ನುವರು. ಆ ಗೋವರ್ಧನ ಪರ್ವತವನ್ನು ನೀನು ಎತ್ತಿ ಹಿಡಿದೆ ಅನ್ನುವುದು , ಇಂದ್ರನಿಗೆ ಅಹಂಕಾರವನ್ನು ಮುರಿದೆ ಅನ್ನುವ ಪ್ರಸಂಗವನ್ನು ವರ್ಣಿಸುವೆಯ?”
ಮುಂದೆ ಓದಿ.....
ಕೃಷ್ಣ ನಗುತ್ತ ಹೇಳಿದ
“ಗಣೇಶ ಮತ್ತೆ ನಿನಗೆ ನಿರಾಸೆಯೆ ನೀನು ನಿರೀಕ್ಷೆ ಮಾಡುವಂತ ಅದ್ಭುತ ಪವಾಡದ ಕತೆಯನ್ನೇನು ನಾನು ಹೇಳುವದಿಲ್ಲ. ಅದು ಹೇಗೆಂದು ತಿಳಿಯದು, ಆಗೆಲ್ಲ ನನ್ನ ಮನಸ್ಸು ಸಾಮಾನ್ಯರಿಗಿಂತ ವಿಭಿನ್ನವಾಗಿಯೆ ಚಿಂತಿಸುತ್ತಿತ್ತು. ಅದು ಏಕೆಂದು ನನಗೆ ಮೊದಲು ಅರ್ಥವಾಗುತಿರಲಿಲ್ಲ ಬಿಡು. ಪ್ರತಿ ವರ್ಷ ಗೋಕುಲದಲ್ಲಿ ಉತ್ಸವ ನಡೆಯುತ್ತಿತ್ತು. ವ್ಯವಸಾಯದ ಕೆಲಸಗಳೆಲ್ಲ ಮುಗಿದು, ಕೈಗೆ ಬೆಳೆ ಬಂದ ನಂತರ ಎಲ್ಲರು ಸಂಭ್ರಮ ಆಚರಿಸುತ್ತಿದ್ದರು. ನಮಗೆ ಮಳೆ ಬೆಳೆ ಕೊಡಲು ಕಾರಣ ಎನ್ನುವ ಮಳೆಯ ಒಡೆಯ ಇಂದ್ರನಿಗೆ ಪೂಜೆ ಸಲ್ಲಿಸಲಾಗುತ್ತಿತ್ತು. ಅದೆ ನೆಪದಲ್ಲಿ ಸಂಭ್ರಮ ಉತ್ಸವ ಎಲ್ಲವು. ನನಗೆ ಒಮ್ಮೆ ಅನ್ನಿಸುತ್ತಿತ್ತು, ಬೆಳೆ ಬೆಳೆಯಲು ಮಳೆ ಎನ್ನುವುದು ಮುಖ್ಯ ಕಾರಣವಾದರು ಆ ಮಳೆಗೆ ಕಾರಣ ಗೋವರ್ಧನ ಗಿರಿ ಎಂದು. ಹಾದು ಹೋಗುವ ಆ ಮಳೆಯ ಮೋಡಗಳೆಲ್ಲ ಗೋವರ್ದನ ಗಿರಿಯ ಎತ್ತರದ ಶೃಂಗಗಳಿಂದ ತಡೆಯಲ್ಪಟ್ಟು ಗೋಕುಲಕ್ಕೆ ಎಂದಿಗು ಮಳೆಯ ನೀರಿನ ಬರಗಾಲವಿರಲಿಲ್ಲ. ಹಾಗೆ ವಿಶಾಲವಾದ ಅ ಪರ್ವತದ ಮೇಲೆ ಬಿದ್ದ ಆ ನೀರೆಲ್ಲ ಗೋಕುಲದ ಕಡೆಗೆ ಹರಿಯುತ್ತ ಕೆರೆ ಕಟ್ಟೆಗಳನ್ನು ತುಂಬಿಸುತ್ತಿತ್ತು. ಹಾಗೆ ಗಾಳಿಯ ಕಾಲ ಬಂತೆಂದರೆ ಅದೆ ಗಿರಿಯೆ ಗಾಳಿಗೆ ಎದೆಗೊಟ್ಟು ನಿಂತು ನಮ್ಮನ್ನೆಲ್ಲ ರಕ್ಷಿಸುತ್ತಿತ್ತು ಅನ್ನು.
ಇದೆಲ್ಲ ನಾವು ಯೋಚಿಸಿದಲ್ಲದೆ ಸಾಮಾನ್ಯರಿಗೆ ಅರಿವು ಬರುವಂತಿರಲಿಲ್ಲ. ಅನಾದಿಕಾಲದಿಂದ ಬಂದ ಪದ್ದತಿಯಂತೆ ಪುರೋಹಿತರನ್ನು ಕರೆದು ಇಂದ್ರನಿಗೆ ಪೂಜೆಗಳೆ ಹೋಮ ಹವನಗಳು ಎಲ್ಲವು ನಡೆಯುತ್ತಿದ್ದವು. ನಿನಗೆ ಮತ್ತು ಒಂದು ವಿಷಯ ತಿಳಿಸಬೇಕು, ಗೋಕುಲದಲ್ಲಿ ವ್ಯವಸಾಯಕ್ಕಿಂತ ಬಲವಾದ ಜೀವನದಾರವೆಂದರೆ ಗೋವುಗಳ ಪೋಷಣೆ ಮತ್ತು ಹಾಲು ಮೊಸರಿನ ವ್ಯವಹಾರ ಅಲ್ಲಿದ್ದವರಲ್ಲಿ ಗೊಲ್ಲರೆ ಜಾಸ್ತಿ. ಮಳೆಗಾಲ ಕಳೆದ ನಂತರ ಗೋವರ್ದನ ಗಿರಿಯ ಕೆಳಗಿನ ಪ್ರದೇಶ ಹಸಿರುಹುಲ್ಲಿನಿಂದ ತುಂಬಿ ಕಂಗೊಳಿಸುತ್ತಿತ್ತು. ನಮ್ಮ ದನಗಳಿಗೆ ಸುಗ್ರಾಸ ಹಸಿರು ಹುಲ್ಲು. ಮರದ ತಂಪು. ಅಲ್ಲದೆ ನೀರಿನ ಹರಿವು ಇಂತವೆಲ್ಲ ಇದ್ದವು, ಹಾಗೆ ನೋಡಿದರೆ ನಮ್ಮ ಗೋಕುಲಕ್ಕೆ ಗೋವರ್ಧನ ಗಿರಿ ಎಲ್ಲ ರೀತಿಯಲ್ಲು ರಕ್ಷಣೆ ಹಾಗು ಜೀವನಕ್ಕೆ ದಾರಿ ಎರಡನ್ನು ಒದಗಿಸಿತ್ತು.
ಹಾಗಾಗಿ ನನಗೇಕೊ , ಸುಗ್ಗಿಯ ಸಂಭ್ರಮದಲ್ಲಿ ಗೋವರ್ದನ ಗಿರಿಯೆ ಏಕೆ ಪೂಜೆ ಸಲ್ಲಿಸಬಾರದು ಎನ್ನುವ ಭಾವನೆ ಬಲವಾಯಿತು. ನನ್ನ ಸ್ನೇಹಿತರೆಲ್ಲರೊಡನೆ ಚರ್ಚಿಸಿದೆ. ಅದು ಗೋಕುಲವೆಂಬ ಪುಟ್ಟ ಹಳ್ಳಿಯಲ್ಲಿ ಹರಡಿತು. ಹಿರಿಯರೆಲ್ಲ ಗಾಭರಿ ಪಟ್ಟರು. ಆದರೆ ನಾನು ಗೋಕುಲದ ನಾಯಕನಾದ ನಂದಗೋಪನ ಮಗ ಹಾಗಾಗಿ ನನ್ನ ಮಾತಿಗೆ ಒಂದು ಬೆಲೆಯಿತ್ತು. ಅಲ್ಲದೆ ನಾನು ಕೊಟ್ಟ ಕಾರಣಗಳಲ್ಲಿ ತೂಕವಿದೆ ಎಂದು ಅವರಿಗೆಲ್ಲ ಅನ್ನಿಸಿತು. ಅದು ಹೇಗೆ ನಮ್ಮ ತಂದೆಯು ಅದಕ್ಕೆ ಒಪ್ಪಿದರು. ಹಬ್ಬದ ದಿನ ಎಲ್ಲರು ಗೋವರ್ಧನ ಗಿರಿಗೆ ನಡೆದೆವು. ಗೋಕುಲವೆ ಅಲ್ಲಿ ಸೇರಿತ್ತು. ಅಲ್ಲಿಯ ಮರಗಳ ಕೆಳಗೆ , ಬಂಡೆಗಳ ಹತ್ತಿರ ಗುಂಪುಗಳು ಸೇರಿ , ಅಡುಗೆ ಮಾಡಿ ಅದನ್ನು ಗಿರಿಗೆ ಅರ್ಪಿಸುತ್ತ ಪೂಜಿಸಿ ತಾವು ಸ್ವೀಕರಿಸಿದರು. ಬೇರಡೆಯಿಂದ ಬಂದ ಪುರೋಹಿತರು ಸಹ ಅದನ್ನು ಒಪ್ಪಿ ಗೋವರ್ದನ ಗಿರಿಗೆ ಪೂಜೆ ಸಲ್ಲಿಸಿದರು
ನಾವೆಲ್ಲ ಸಂಭ್ರಮದಲ್ಲಿ ಮುಳುಗಿರಬೇಕಾದರೆ , ರಭಸ ಮಳೆ ಪ್ರಾರಂಬವಾಯಿತು, ನಾವ್ಯಾರು ಅಲ್ಲಿಯವರೆಗು ಅಂತಹ ಮಳೆ ನೋಡೆ ಇರಲಿಲ್ಲ ಅನ್ನು , ಗಣೇಶ, ಮೊದಲಿಗೆ ಸಂಭ್ರಮದಲ್ಲಿದ್ದ ಎಲ್ಲರು ಮಳೆಯನ್ನು ಸ್ವಾಗತಿಸಿದರು, ಮಳೆಯಲ್ಲಿ ನರ್ತಿಸುತ್ತ ಸಂಭ್ರಮಿಸಿದರು, ಅದರ ರಭಸ ಹೆಚ್ಚುತ್ತ ಹೋದಂತೆ ಗಾಭರಿಯಾದರು. ತಕ್ಷಣ ಅಲ್ಲಿಯೆ ದೊಡ್ಡ ಬಂಡೆಗಳ ಕೆಳಗೆ, ಮರಗಳ ಕೆಳಗೆ ಸೇರಿ ರಕ್ಷಣೆ ಪಡೆದೆವು. ನನಗೆ ಅನ್ನಿಸುವಂತೆ, ಹಳ್ಳಿಯಲ್ಲಿದ್ದರೆ ಅದು ಸಾಮಾನ್ಯ ಮಳೆಯೆನೊ ಆದರೆ ನಾವು ಗೋವರ್ಧನ ಗಿರಿಯ ಮೇಲೆ ಇದ್ದದ್ದರಿಂಗ ರಕ್ಷಣೆ ಇಲ್ಲದೆ ಅದು ಅಸಾದಾರಣ ಮಳೆಯಾಗಿತ್ತು. ಮೋಡಗಳು ಅಲ್ಲಿಯೆ ಸ್ಪೋಟಿಸಿ, ಹಾಗೆ ಹಾಗೆ ನೀರು ದುಮುಕಿದಂತೆ.
ಸ್ವಲ್ಪ ಕಾಲ ಕಳೆದಂತೆ ಕೆಲವು ಹಿರಿಯರು ಹಾಗು ಪುರೋಹಿತರು, ನಾವು ಇಂದ್ರನನ್ನು ನಿರ್ಲಕ್ಷಮಾಡಿ ಗಿರಿಯನ್ನು ಪೂಜಿಸಿದ್ದರಿಂದ ಇಂದ್ರ ಕೋಪಮಾಡಿ ಮಳೆ ಸುರಿಸುತ್ತಿದ್ದಾನೆ ಎಂದರು.
ಬಹಳ ಕಾಲ ಮಳೆ ಸುರಿಯುತ್ತಲೆ ಇತ್ತು, ನಾನು ಅವರೆಲ್ಲರ ಗಮನ ಬೇರೆಡೆ ಹರಿಸಲು, ಎಲ್ಲ ಸ್ನೇಹಿತರನ್ನು ಸೇರಿಕೊಂಡು ಹಾಡು ನೃತ್ಯ ಗಳಿಂದ ರಂಜಿಸಿದೆ. ಮೇಲಿನಿಂದ ಕವಿದಿದ್ದ ಬಂಡೆಗೆ ಕೈಕೊಟ್ಟು ನೋಡಿ ಗೋವರ್ದನ ಗಿರಿಯೆ ನಮಗೆ ರಕ್ಷಣೆ ಕೊಡುತ್ತಿದ್ದಾನೆ ಮಳೆ ನಮ್ಮನ್ನು ಏನು ಮಾಡದು ಎಂದೆ. ಹಾಗೆ ದೀರ್ಘಕಾಲ ಸುರಿದ ಮಳೆ ನಂತರ ನಿಂತು ಹೋಯಿತು. ಎಲ್ಲರು ಪುನಃ ಗೋಕುಲಕ್ಕೆ ಹೊರಟೆವು.
ಅದು ಹೇಗೊ ಗೋವರ್ಧನ ಗಿರಿ ನಮಗೆ ರಕ್ಷಣೆ ಕೊಟ್ಟಿತ್ತು ಅನ್ನುವುದು ಕ್ರಮೇಣ ನಾನೆ ಗೋವರ್ಧನ ಗಿರಿಯನ್ನು ಎತ್ತಿ ಹಿಡಿದು ರಕ್ಷಿಸಿದೆ ಅನ್ನುವವರೆಗು ಕಲ್ಪನೆ ಬೆಳೆಯಿತು. ನಮಗೆ ಆ ಮಳೆಯಿಂದ ಗಿರಿ ರಕ್ಷಣೆ ಕೊಟ್ಟಿದ್ದಂತು ಹೌದು, ಹಾಗೆ ನಾನು ಅವರಿಗೆಲ್ಲ ಇಂದ್ರ ಏನು ಮಾಡನು ಹೆದರಿದಿರಿ ಎಂದು ಧೈರ್ಯ ಕೊಟ್ಟಿದ್ದು ಹೌದು. ಹಾಗೆ ನೋಡಿದರೆ, ಇಂದ್ರ ಸುರಿಸಿದ ಅನ್ನುವ ಆ ಮಳೆಯಿಂದ ನಮಗೆ ಏನು ತೊಂದರೆ ಆಗಿರಲಿಲ್ಲ. ಸುತ್ತ ಮುತ್ತಲ ಎಲ್ಲ ಹಳ್ಳಿಗಳ ಕೆರೆಕಟ್ಟೆಗಳು ತುಂಬಿದವು, ಬೆಟ್ಟಗುಡ್ಡಗಳೆಲ್ಲ ಹಸಿರಿನಿಂದ ಕಂಗೊಳಿಸಿದವು. ಆ ಘಟನೆ ಸಹ ಎಂದು ಕೇಳರಿಯದ ಪ್ರಸಂಗದಂತೆ ಭಾಗವತದಲ್ಲಿ ಸೇರಿ ಹೋಯಿತು”
ಕೃಷ್ಣ ಸುಮ್ಮನೆ ಕುಳಿತಂತೆ ಗಣೇಶ ನುಡಿದನು
“ಹೌದು ಕೃಷ್ಣ ಹಾಗೆ ನೋಡಿದಲ್ಲಿ ನೀನು ಹೇಳುವ ಎಲ್ಲ ತರ್ಕವು ಸರಿಯೆ ಇದೆ. ಗೋವರ್ಧನ ಗಿರಿಯನ್ನು ಪೂಜೆ ಮಾಡಿದರಲ್ಲಿ ತಪ್ಪೇನು ಇಲ್ಲ, ಹಾಗೆ ಹಳ್ಳಿಯ ಜನ ಹೇಳಿದ್ದರಲ್ಲಿ ಸಹ ಸತ್ಯವಿದೆ. ಇಂದ್ರ ಸುರಿಸಿದ ಆ ಮಳೆಯಿಂದ ನೀನು ಗೋವರ್ಧನನನ್ನು ಹಿಡಿದು ಅವರನ್ನೆಲ್ಲ ರಕ್ಷಿಸಿದೆ ಅನ್ನುವುದು ಸರಿಯೆ ಅಲ್ಲವೆ “ ಎನ್ನುತ್ತ ನಕ್ಕ . ಕೃಷ್ಣ ಸಹ ನಕ್ಕ.
“ಹೌದಪ್ಪ ಅಲ್ಲದೆ ಅದನ್ನು ಬರೆದವನು ನೀನೆ ಅಲ್ಲವೆ. ಮಹಾಭಾರತದಲ್ಲಿ ಬರುವ ಪ್ರಸಂಗಗಳನ್ನೆಲ್ಲ ಯಾರೆ ಹೇಳಿರಲಿ ಅದರ ಬರಹಗಾರ ನೀನೆ ಹಾಗಿರಲು ಅದು ಸುಳ್ಳು ಸುಳ್ಳು ಹೇಗೆ ಆಗುತ್ತೆ” ಎನ್ನುತ್ತ ನಕ್ಕನು.
ಗಣೇಶ ಸಹ ನಗುತ್ತಿದ್ದವನು ಏನನ್ನೊ ನೆನೆದವನಂತೆ
“ಹೌದಲ್ಲವೆ ಕೃಷ್ಣ ನೋಡು ಆಗಲೆ ಸೂರ್ಯ ಮುಳುಗಿ ಆಯಿತು, ಸುತ್ತಲು ಕತ್ತಲು ಆವರಿಸಿತು, ನಾವು ಹಿಂದೆ ಹೋಗುವ ಸಮಯವಾಯಿತು, ಹೊರಡೋಣವೆ ಮತ್ತೊಮ್ಮೆ ಬೇಟಿ ಮಾಡೋಣ” ಎಂದ ಗಣೇಶ
ಅದಕ್ಕೆ ಕೃಷ್ಣ
“ನೋಡಿದೆಯ ಗಣೇಶ ಈ ಭೂಮಿಯ ಶಕ್ತಿಯನ್ನು, ಕಾಲದ ಮಹಿಮೆಯನ್ನು. ಸಮಯ ಕಾಲ ಅನ್ನುವದೆಲ್ಲ ಈ ಭೂಮಿಯಲ್ಲಿ ಹುಟ್ಟಿದ ಜೀವಿಗಳಿಗೆ ಇರುವ ನಿರ್ಭಂದ. ದೇವತೆಯಾದ ನಿನಗೆ ಆಗಲಿ , ಕಾಲಾತೀತನಾದ ನನಗೆ ಆಗಲಿ ಈ ಸಮಯದ ಅನ್ವಯವಾಗುವದಿಲ್ಲ. ಆದರೆ ಭೂಮಿಯ ತತ್ವಗಳ ಪ್ರಭಾವವೆ ಹಾಗೆ ಅದು ಇಲ್ಲಿರುವ ಎಲ್ಲರ ಮೇಲೆ ತನ್ನ ಪ್ರಭಾವ ಬೀರುತ್ತದೆ. ನಿನಗೆ ಕತ್ತಲು ಬೆಳಕು, ರಾತ್ರಿ ಹಗಲು ಎಲ್ಲವೂ ಒಂದೆ ಅಲ್ಲವೆ ಗಣಪ ಹಾಗಿರಲು ಈ ಆತುರವೇಕೆ” ಎಂದ
ಗಣೇಶ ಸ್ವಲ್ಪ ಚಿಂತಿಸಿ ನುಡಿದ
“ನಿಜ ಕೃಷ್ಣ ಭೂಮಿಯ ಪರಿಧಿಯಲ್ಲಿ ನಾವಿರುವಾಗ ಇಲ್ಲಿಯ ಪ್ರಭಾವಕ್ಕೆ ಒಳಗಾಗಿಯೆ ನಮ್ಮ ಚಿಂತನೆಯು ಸಾಗುತ್ತದೆ. ಅದಕ್ಕಾಗಿಯೆ ನೀನು ದೇವತೆಗಳಿಗೆ ದೇವನಾಗಿದ್ದರು ಅವತಾರಕಾಲಕ್ಕೆ ಇಲ್ಲಿಯ ನಿಯಮದಂತೆ ನಡೆಯ ಬೇಕಾಗಿರುತ್ತೆ. ಮರೆತು ಇಲ್ಲಿಯ ನಿಯಮ ಮೀರಿದಾಗ ಅದು ಪವಾಡವಾಗುತ್ತೆ ಅಲ್ಲವೆ , ಸರಿ ಈಗ ಒಟ್ಟಿಗೆ ಸೇರಿದ್ದೇವೆ ಮತ್ತೆ ಈ ಅವಕಾಶ ಎಂದು ಸಿಗುವುದೊ ಕಾಣೆ, ನಿನ್ನ ಇಚ್ಚೆಯಂತೆ ಇಲ್ಲಿ ಕುಳಿತು ಮಾತು ಮುಂದುವರೆಸೋಣ ಆಗದೆ” ಎಂದ
ಕೃಷ್ಣ ನುಡಿದ
“ಆಗಬಹುದು ಗಣೇಶ, ನನಗೇನೊ ಅದೇಕೊ ಇಂದು ಸಮುದ್ರ ದಡ ಮರುಳು ಮಾಡಿದೆ. ಸೂರ್ಯ ಮುಳುಗಿದರು ಸಹ ಏನಂತೆ ನೋಡು, ಸುತ್ತಲು ನಿಧಾನಕ್ಕೆ ಹರಡುತ್ತಿರುವ ಹುಣ್ಣಿಮೆ ಚಂದ್ರನ ಬೆಳಕು ಎಂತದೋ ಮುಗ್ದತೆಯನ್ನು ತರುತ್ತಿದೆ. ಗಮನಿಸು ಚಂದ್ರ ಮೇಲೆ ಬರುತ್ತಿರುವ, ತಣ್ಣನೆಯ ಗಾಳಿ ಹೀಗೆ ಮಾತನಾಡುತ್ತ ಕುಳಿತಿರುವ ಆಗದೆ” ಎಂದ
ಗಣೇಶ ನುಡಿದ
“ಹಾಗಿದ್ದಲ್ಲಿ ಮುಂದುವರೆಸು ಕೃಷ್ಣ ನಿನ್ನ ಮಾತನ್ನು, ಈಗ ಹೇಳು, ನೀನೇನೊ ಯಶೋದೆಯ ಮಗನಾಗಿ ಬೆಳೆದೆ, ಚಿಕ್ಕ ಮಗುವಿನಲ್ಲಿ ಸರಿಯೆ, ಆದರೆ ದೊಡ್ಡವನಾದಂತೆ ನಿನಗೆ ಎಂದಿಗು ನೀನು ಅವರ ಮಗನಲ್ಲ ಎನ್ನುವ ಅನುಮಾನ ಬರಲಿಲ್ಲವೆ. ಅಲ್ಲದೆ ನಿನಗೆ ನೀನು ನಂದಗೋಪ, ಹಾಗು ಯಶೋದೆಯ ಮಗ ಅಲ್ಲ ಎಂದು ಯಾವಾಗ ತಿಳಿಯಿತು, ಆಗೆಲ್ಲ ನಿನ್ನ ಮನಸಿನ ಸ್ಥಿಥಿ ಹೇಗಿತ್ತು”
ಮುಂದುವರೆಯುವುದು….
ಗೋವರ್ಧನ ಗಿರಿಧಾರಿ : ಹಳೆಯ ಬೀಡಿನ ಶಿಲ್ಪದ ಚಿತ್ರ,
ಕೃತಜ್ಞತೆ:
https://blogger.googleusercontent.com/img/b/R29vZ2xl/AVvXsEhNbD-PXwUXscnjL1op9JafoBWglwKRIvwuZ6SJueZMsIRDIcPy5Up8mVwevE8vrHA2Z6ZzWOJWw4Grpsp1GwzhEFyIIFtiBuuwRyYXC_684WgB8yWLfD1wo3e0LWoge94C5tf6eAc0Fdyk/s640/Govardhan_Giri_Lord.jpg
No comments:
Post a Comment
enter your comments please