Monday, September 23, 2013

ಕಾಳಿಂಗ ಮರ್ದನ ಕೃಷ್ಣ

 ಕೃಷ್ಣ..ಕೃಷ್ಣ..ಕೃಷ್ಣ..-(8)  ಕಾಳಿಂಗ ಮರ್ದನ ಕೃಷ್ಣ

ಇಲ್ಲಿಯವರೆಗೂ.....
ಕೃಷ್ಣ  ಹೇಳಿದ
"ನಾನು ನುಣುಚಿಕೊಳ್ಳುತ್ತಿಲ್ಲ ಗಣೇಶ , ನನ್ನ ಮನಸಿನ ಸಾಕ್ಷಿಯಂತೆ ಉತ್ತರಿಸುತ್ತಿದ್ದೇನೆ.  ನೀನು ಯೋಚಿಸಿದರೆ ಸರಿಯಾದ ಉತ್ತರವೆ ಹೊಳೆಯುತ್ತದೆ. ಈಗ ನೋಡು ಕಾಳಿಂಗನ ಪ್ರಸಂಗ ಎತ್ತಿದೆ. ಅದು ಸಾಕಷ್ಟು ದೊಡ್ಡದಿದೆ ಕೇಳುವೆಯ ?"
ಗಣೇಶ ನುಡಿದ
"ನಿನ್ನ ಎಲ್ಲ ಪ್ರಸಂಗವನ್ನು ಕೇಳಲೆಂದೆ ನಾನು ಇಲ್ಲಿ ನಿನ್ನ ಜೊತೆ ಕುಳಿತಿದ್ದೇನೆ ಹೇಳು ಕೃಷ್ಣ . ವಿವರವಾಗಿಯೆ ಹೇಳು”
ಕೃಷ್ಣ ಹಳೆಯದೆಲ್ಲ ನೆನಪಿಸಿಕೊಳ್ಳುತ್ತಿರುವನಂತೆ ಸ್ವಲ್ಪ ಕಾಲ ಕಣ್ಣು ಮುಚ್ಚಿದ್ದ. ಗಣಪತಿ ಕುತೂಹಲದಿಂದ ಅವನತ್ತಲೆ ನೋಡುತ್ತಿರುವಂತೆ ಕೃಷ್ಣ ಪ್ರಾರಂಬಿಸಿದ.



ಮುಂದೆ ಓದಿ...

 “ ಗಣೇಶ , ನಾವು ದಿನವು ದನಗಳನ್ನು ಮೇಯಿಸಲು ಹಳ್ಳಿಯ ಹೊರವಲಯಕ್ಕೆ ಹೋಗುತ್ತಿದ್ದೆವು ಎಂದು ಗೊತ್ತಿದೆಯಲ್ಲ,  ನಾವು ಒಂದು ಕಡೆ ಕುಳಿತು   ಕಾಲ ಕಳೆಯುತ್ತಿರಲಿಲ್ಲ. ಸುತ್ತಮುತ್ತಲ ಗುಡ್ಡಗಳು, ನದಿ , ನೀರಿನ ಕೊಳಗಳು, ಹಣ್ಣಿನ ತೋಪುಗಳು ಎಲ್ಲವು ನಮಗೆ ಪರಿಚಿತ. ಅಲ್ಲೆಲ್ಲ ನಮ್ಮ ಅಲೆದಾಟವಿದ್ದೆ ಇತ್ತು. ಆದರೆ ಊರ ಹೊರಗಿದ್ದ ಒಂದು ನೀರಿನ ಕೊಳಕ್ಕೆ ಯಾರು ಕಾಲಿಡುತ್ತಿರಲಿಲ್ಲ. ಅದು ಎಷ್ಟು ವರ್ಷಗಳ ಪದ್ದತಿ ಎನ್ನುವಂತೆ ನಮ್ಮ ದನಗಳು ಸಹಿತ ಮರೆತು ಆ ಕಡೆ ತಲೆ ಹಾಕುತ್ತಿರಲಿಲ್ಲ. ಇದು ನನಗೆ ಮೊದಲಲ್ಲಿ ಕುತೂಹಲ ಕೆರಳಿಸಿತು ನಂತರ ಹಿರಿಯರ ಹತ್ತಿರ ಗೆಳೆಯರ ಹತ್ತಿರ ವಿಚಾರಿಸಲು, ಅದಕ್ಕೆ ಕಾರಣ ಆ ಕೊಳದ ಕಲ್ಲಿನ ಪೊಟರೆಗಳಲ್ಲಿ ವಾಸವಾಗಿರುವ ಭೀಕರ ಸರ್ಪ ಹಾಗು   ಗುಂಪಿನ ಇತರೆ ಸರ್ಪಗಳು. ಅದನ್ನು ಕಾಳಿಂಗ ಎಂದು ಎಲ್ಲರು ಕರೆಯುತ್ತಿದ್ದರು.  ಮೊದಲೆಲ್ಲ ಎಷ್ಟೊ ದನಗಳು, ದನಗಾಹಿಗಳು ಅದರ ಕಡಿತದಿಂದ ಮೃತಪಟ್ಟಿದ್ದರು. ಸರ್ಪದ ಭಯದಿಂದ ಆ ಕೊಳದ ನೀರನ್ನು ವರುಷಗಟ್ಟಲೆ ಉಪಯೋಗಿಸದೆ ಬಿಟ್ಟ ಕಾರಣಕ್ಕೆ ಅದು ಪಾಚಿಕಟ್ಟಿ ದಟ್ಟ ಹಸಿರುವರ್ಣಕ್ಕೆ ಕಾಣಿಸುತ್ತಿತ್ತು.

 ಆ ನೀರಿನ ಕೊಳವು ನಾವು ದನಗಳನ್ನು ಮೇವಿಗೆ ಬಿಡುತ್ತಿದ್ದ ಸ್ಥಳಕ್ಕೆ ಅತಿ ಸಮೀಪವಿದ್ದು, ನಾವು ನೀರಿಗಾಗಿ , ದನಗಳಿಗೆ ನೀರು ಕುಡಿಸುವುದಕ್ಕಾಗಿ ಬಹಳ ದೂರ ಹೋಗುತ್ತಿದ್ದೆವು. ನನಗೆ ಒಮ್ಮೆ ಈ ಸರ್ಪದ ಭಯ ತಪ್ಪಿದರೆ, ಎಲ್ಲರಿಗು ನೀರಿನ ಅನುಕೂಲವಾಗುವದೆಂದು ಅನ್ನಿಸಿತು. ದನಗಳಿಗೆ ಕುಡಿಯಲು ನೀರು ಅಲ್ಲದೆ ಸುತ್ತಲು ಮರಗಳು ಬೆಳೆದಿರುವದರಿಂದ ತಂಪು ಎಲ್ಲವು ಸಿಗುತ್ತಿತ್ತು.

 ನಾನು ಆ ಬಗ್ಗೆ ಗೆಳೆಯರ ಜೊತೆ ಚರ್ಚಿಸಿದೆ ಆದರೆ ಎಲ್ಲರು ಒಂದೆ ಮಾತಿನಲ್ಲಿ ನನ್ನ ಮಾತನ್ನು ತಿರಸ್ಕರಿಸಿದರು. ಆ ಸರ್ಪದ ತಂಟೆಗೆ ಹೋಗದಿರುವುದು ಒಳ್ಳೆಯದೆಂದು ಅದು ಬಹಳ ಹಳೆಯ ಸರ್ಪವಾಗಿದ್ದು. ಜೊತೆ ಜೊತೆಯಲ್ಲಿ ಕಲ್ಲಿನ ಪೊಟರೆಗಳಲ್ಲಿ ಹತ್ತು ಹಲವು ಹಾವುಗಳಿದ್ದು ನೀರಿನ ಹತ್ತಿರ ಹೋಗಲು ಸಾದ್ಯವೆ ಇಲ್ಲವೆಂದು ತಿಳಿಸಿದರು.

ನಾನು ನಿನಗೆ ಮತ್ತೊಂದು ವಿಷಯ ತಿಳಿಸಬೇಕು.  ನಾನು ದನ ಕಾಯಲು ಹೋಗುವಾಗ  ಮತ್ತೆ ಕೆಲವು ಸಮಯದಲ್ಲಿ  ಊರ ಹೊರಗೆ ವಾಸವಿದ್ದ ಹಾವಡಿಗರ ಹಾಡಿಗಳಿಗೆ ಒಮ್ಮೊಮ್ಮೆ ಹೋಗುತ್ತಿದೆ. ಅಲ್ಲಿ ವಯಸ್ಸಾದ, ಯುವಕರಾದ , ಹಾವಾಡಿಗರ ಕುಟುಂಬ ಬಹಳವಿದ್ದವು. ಅವರೆಲ್ಲರ ಕುಲಕಸುಬು ಹಾವುಗಳನ್ನು ಹಿಡಿದು ಆಡಿಸುವುದು ಅದನ್ನು ಜನರಿಗೆ ತೋರಿಸಿ ಅವರು ಕೊಡುವ ಧಾನ್ಯ ಧನ ಇವುಗಳಿಂದಲೆ ಅವರ ಜೀವನ. ನಾನು ಪದೆ ಪದೆ ಹೋಗುತ್ತ ಅವರೆಲ್ಲ ನನಗೆ ಪರಿಚಿತರಾಗಿದ್ದರು. ಅವರಿಂದ ಹಾವುಗಳ ಬಗ್ಗೆ ಅವುಗಳ ಸ್ವಭಾವದ ಬಗ್ಗೆ ಬಹಳ ವಿಷಯ ಅರ್ಥಮಾಡಿಕೊಂಡಿದ್ದೆ. ಹಾವುಗಳ ಬಹಳ ಮುಖ್ಯವಾದ ಸ್ವಭಾವ ಎಂದರೆ ಜನರ ಸಹವಾಸದಿಂದ ಅವು ದೂರ ಇರುತ್ತವೆ. ಆದಷ್ಟು ಜನರ ದಾರಿಯಿಂದ ಅವು ದೂರ ಸರಿಯಲು ಪ್ರಯತ್ನಿಸುತ್ತವೆ. ನಾವಾಗೆ ಅದರ ತಂಟೆಗೆ ಹೋಗದ ಹೊರತಾಗಿ ಅದು ನಮ್ಮ  ಮೇಲೆ ಆಕ್ರಮಣ ನಡೆಸಲು ಬರುವ ಸಂಭವ ಕಡಿಮೆ. ಇದೆಲ್ಲ ಹಾವಾಡಿಗರೆ ನನಗೆ ತಿಳಿಸಿದ್ದ ವಿಷಯಗಳು

ನಾನು ಹಾವಿನ ಈ ಸ್ವಭಾವ ಬಳಸಿಕೊಳ್ಳಲು ಪ್ರಯತ್ನಿಸಿದೆ. ಕೆಲವು ಧೈರ್ಯವಂತ ಗೆಳೆಯರನ್ನು ಒಟ್ಟಿಗೆ ಹಾಕಿಕೊಂಡು, ಕಾಳಿಂಗ ವಾಸವಾಗಿದ್ದ ಕೊಳದ ಹತ್ತಿರ ಹೋಗಿ ಅಲ್ಲಿಯ ವಿಷಯವನ್ನೆಲ್ಲ ಗಮನಿಸಿದೆ. ಅಂದಿನಿಂದ ದಿನವು ದನಮೇಯಿಸಲು ಹೋಗುವಾಗ ಹಾವುಗಳು ವಾಸವಾಗಿದ್ದ ಕೊಳಕ್ಕೆ ಕಲ್ಲು ಎಸೆಯುವುದು, ಅವುಗಳನ್ನು ಕೆಣಕುವುದು ಮಾಡುತ್ತಿದ್ದೆವು. ಕೆಲವೊಮ್ಮೆ ಪೊಟರೆಯಿಂದ ಹೊರಬಂದ ಹಾವುಗಳು ಬುಸುಗುಟ್ಟುತ್ತಿದ್ದವು. ನಮ್ಮತ್ತ ಹೆಡೆ ಬೀಸುತ್ತಿದ್ದವು ಆದರೆ ನಾವುಗಳು ಸಾಕಷ್ಟು ದೂರದಲ್ಲಿದ್ದು ಸುರಕ್ಷಿತವಾಗಿದ್ದೆವು.

ಬರುಬರುತ್ತ ನಮಗೂ ಧೈರ್ಯ ಜಾಸ್ತಿಯಾಯಿತು. ಹತ್ತಿರವೆ ಹೋಗುತ್ತಿದ್ದೆವು ದಿನವೂ ಅವುಗಳನ್ನು ಕೆಣಕುತ್ತಿದ್ದೆವು. ಸುಮಾರು ಇಪ್ಪತ್ತು ದಿನ ಹೀಗೆ ಮುಂದುವರೆದಿತ್ತು ನಮ್ಮ ಸಾಹಸ. ಆದರೆ ಯಾರೊಬ್ಬರು ಊರಿನ ಹಿರಿಯರಿಗೆ ಈ ವಿಷಯ ಮುಟ್ಟಿಸಲು ಹೋಗಿರಲಿಲ್ಲ.

ಹೀಗೆ ಒಮ್ಮೆ ನಮ್ಮ ಕಾಟ ಸಹಿಸಲಾರದೆ ಕಾಳಿಂಗ ಸರ್ಪವೆಂದೆ ಹೆಸರಾಗಿದ್ದ ದೊಡ್ಡ ಸರ್ಪವೆ ಎದುರಿಗೆ ಬಂದಿತು. ಜನರು ಹೇಳುತ್ತಿದ್ದ ವಿಷಯ ನಿಜವಾಗಿತ್ತು. ಅದು ಸುಮಾರು ಇಪ್ಪತ್ತು ಅಡಿಗಿಂತ ದೊಡ್ಡದಿದ್ದು. ನೋಡುವಾಗ ಎದೆಯಲ್ಲಿ ನಡುಕ ಹುಟ್ಟುವಂತಿತ್ತು. ಅದು ಹೆಡೆ ಅಗಲಿಸಿ ಬುಸುಗುಟ್ಟಿದ್ದರೆ ಎಲ್ಲರು ದೂರ ಓಡುತ್ತಿದ್ದರು. ಕೆಲವು ದಿನಗಳಲ್ಲೆ ನಾನು ಗಮನಿಸಿದೆ ಕಾಳಿಂಗ ಸರ್ಪದ    ಚಲನವಲನಗಳು ಸಹ ಅತಿ ನಿಧಾನವಾಗಿದ್ದವು. ನಾವು ಇಬ್ಬರು ಮೂವರು ಒಟ್ಟಿಗೆ ಇದ್ದರೆ ಅದು ಪ್ರತಿಕ್ರಿಯಸಲು ನಿಧಾನ ಮಾಡುತ್ತಿತ್ತು.

ನಮಗೆ ಕಾಳಿಂಗನ ಹತ್ತಿರ ಹೋಗುವಷ್ಟು ಧೈರ್ಯ ಬಂದಿತ್ತು. ನನಗೆ ಕೊಳಲು ನುಡಿಸುವ ಹುಡುಗಾಟ ಬೇರೆ. ಕೊಳಲನ್ನು ಬಾಯಲ್ಲಿ ಇಟ್ಟು ಅತ್ತ ಇತ್ತ ಓಡಾಡುತ್ತಿದ್ದರೆ ಅದು ತನ್ನ ಹೆಡೆಯನ್ನು ಅಗಲಿಸಿ ನಾನು ಹೋದತ್ತಲೆ ಚಲಿಸುತ್ತಿತ್ತು. ಜೊತೆಯ ಹುಡುಗರಿಗೆ ಅದೇನೊ ಖುಷಿ. ನನಗೆ ಹುಮ್ಮಸ್ಸು ಜಾಸ್ತಿಯಾಗುತ್ತ, ಅದರಿಂದ ಸುರಕ್ಷಿತ ದೂರದಲ್ಲಿ ಅದರ ಸುತ್ತಲು ನರ್ತಿಸುತ್ತಿದ್ದೆ.

ಅದರತ್ತ ಕಾಲು ಸಹ ಬೀಸುತ್ತಿದ್ದೆ, ಅದು ಹೆಡೆ ಅಪ್ಪಳಿಸುವದರಲ್ಲಿ ನನ್ನ ಕಾಲು ತಪ್ಪಿಸುವಷ್ಟು ಚುರುಕು ನಾನು. ಕಾಳಿಂಗನಂತು ತನ್ನ ಸಹನೆ ಕಳೆದುಕೊಂಡಿತ್ತು ಅನ್ನಿಸುತ್ತೆ.

ಕ್ರಮೇಣ ಈ ವಿಷಯಗಳೆಲ್ಲ ಅದು ಹೇಗೊ ಊರಿನ ಹಿರಿಯರಿಗೆ ತಲುಪಿತ್ತು ಆದರೆ ಅಮ್ಮ ಅಪ್ಪನ ಗಮನಕ್ಕೆ ಬಂದಿರಲಿಲ್ಲ.  ದಿನಕಳೆದಂತೆ ಅಲ್ಲಿ ವಾಸವಾಗಿದ್ದ ಸರ್ಪ ಹಾವುಗಳಿಗೆ  ನೆಮ್ಮದಿ ತಪ್ಪಿತ್ತು. ನಾವು ಹುಡುಗರೆಲ್ಲ ದಿನದಿನವು ಅವುಗಳನ್ನು ಕಾಡುತ್ತಿದ್ದು ಅವುಗಳಿಗೆ ಆ ಸ್ಥಳದ ಆಕರ್ಷಣೆ ಕಡಿಮೆಯಾಯಿತು ಅನಿಸುತ್ತೆ. ಅವುಗಳೆಲ್ಲ ಅಲ್ಲಿಂದ ತಮ್ಮ ವಾಸಸ್ಥಳವನ್ನು ಬದಲಿಸಿಲು ಪ್ರಾರಂಭಿಸಿದವು.  ಬರುಬರುತ್ತ ನಾವು ಹಗಲಿನಲ್ಲಿ ಅಲ್ಲಿ ಹೋದರೆ ಹಾವುಗಳು ಹೊರಗೆ ಬರುತ್ತಲೆ ಇರುತ್ತಿರಲಿಲ್ಲ.  ಎಷ್ಟೊ ದಿನಗಳ ನಂತರ ನಮಗೆ ಅರ್ಥವಾಗಿತ್ತು ಹಾವುಗಳು ಅಲ್ಲಿಂದ ತಮ್ಮ ವಾಸದ ಜಾಗ ಬದಲಿಸಿ , ಮೇಲೆ ಕಾಡಿನತ್ತ ಸರಿದು ಹೋಗಿವೆ ಎಂದು.

ಸುಮಾರು ದಿನಗಳು ಅಲ್ಲೆಲ್ಲೆ ಹೋಗಿ ಪರಿಶೀಲಿಸಿ ನಂತರ ಊರಿನಲ್ಲಿ ವಿಷಯ ತಿಳಿಸಿದೆವು. ಹಳ್ಳಿಯ ಹಿರಿಯರು ಎಲ್ಲರು ಬಂದು ನೋಡಿದರು. ಅವರಿಗೆ ನಂಬಿಕೆಯೆ ಇಲ್ಲ. ಕೊಳದ ಸುತ್ತ ಮುತ್ತ ಸುತ್ತಾಡಿದರು   ಹಾವಿನ ದರ್ಶನವಿಲ್ಲ. ಕೆಲವರು ನೀರಿನಲ್ಲಿ ಇಳಿದು ಪರೀಕ್ಷಿಸಿದರು. ಹಾವಿಲ್ಲ ಎಂದು ನಿರ್ಧಾರವಾದ ಮೇಲೆ ಕೊಳವನ್ನು ಸ್ವಚ್ಚ ಗೊಳಿಸಲಾಯಿತು. ಅಂದಿನಿಂದ ದನಗಳಿಗೆ ಹತ್ತಿರದಲ್ಲಿಯೆ ಕುಡಿಯುವ ನೀರು. ಮಲಗಲು ತಂಪು ನೆರಳು. ನಮಗೆಲ್ಲ ಈಜಲು ಉತ್ತಮ ಸ್ಥಳ ದೊರೆಯಿತು

ಊರಿನ ಹಿರಿಯರೆಲ್ಲರಿಗೆ ನನ್ನ ಸಾಹಸದ ಬಗ್ಗೆ ಅಚ್ಚರಿ. ಹಾವಾಡಿಗರಿಗೆ ಸುದ್ದಿ ಮುಟ್ಟಿ ಬಂದು ನೋಡಿದರು, ಕಾಳಿಂಗ ಅಲ್ಲಿಂದ ಕದಲಿರುವುದು ತಿಳಿದು ಅವರು  ಆಶ್ಚರ್ಯಪಡುತ್ತ,  ನಾವು ಎಷ್ಟೊ ದೊಡ್ಡ ಹಾವನ್ನು ಹಿಡಿದು ಆಡಿಸಿರುವೆವು, ಆದರೆ ಕಾಳಿಂಗನಂತ ಸರ್ಪದ ತಂಟೆಗೆ ಹೋಗಲಿಲ್ಲ. ಈ ಹುಡುಗ ಅದನ್ನು ಸಾಧಿಸಿದ ಎಂದು ನನ್ನ ಬೆನ್ನು ತಟ್ಟಿದರು

ಗಣೇಶ ಮತ್ತೆ ಕೇಳಿದ
“ನಿನ್ನ ಅಮ್ಮನಾಗಲಿ ಅಪ್ಪನಾಗಲಿ ಏನು ಅನ್ನಲಿಲ್ಲವೆ ?”
“ಅನ್ನದೆ ಏನು ಅಪ್ಪ ನನ್ನನ್ನು ‘ಏಕಪ್ಪ ಇಂತ ಸಾಹಸಕ್ಕೆಲ್ಲ ಕೈಹಾಕಿ ಜೀವಕ್ಕೆ ಅಪಾಯ ತಂದುಕೊಳ್ಳುತ್ತಿ, ನನಗೆ ಅರ್ಥವಾಗಲ್ಲ’ ಎಂದು ಬೇಸರ ಪಟ್ಟರು. ಅಮ್ಮ ಮಾತ್ರ ಬೈದಳು, ನಿನಗೆ ಏನಾದರು ಆಗಿದ್ದಲ್ಲಿ ನನ್ನ ಗತಿ ಏನು ಎಂದು ಕಣ್ಣೀರು ಸುರಿಸಿದಳು. ಮತ್ತೆ ಇಂತಹ ಸಾಹಸಗಳಿಗೆ ಕೈಹಾಕಲ್ಲ ಎಂದು ನನ್ನಿಂದ ಪ್ರಮಾಣ ಮಾಡಿಸಿದಳು”
ಗಣೇಶ
“ಇದೆಲ್ಲ ನಡೆದಾಗ ನಿನ್ನ ವಯಸ್ಸು ಎಷ್ಟಿರಬಹುದು ಕೃಷ್ಣ “ ಎಂದ
ಕೃಷ್ಣ
“ಸುಮಾರು  ಹದಿನೈದು ಇರಬಹುದೇನೊ ಗಣೇಶ, ಆಗೆಲ್ಲ ನನಗೆ ಅದೇನೊ ಬಂಡ ದೈರ್ಯ ಜಾಸ್ತಿ ಇತ್ತು” ಎನ್ನುತ್ತ ನಕ್ಕ.
ಗಣೇಶನ ಮುಖದಲ್ಲಿ ಮಾತ್ರ ಅದೇನೊ ನಿರಾಸೆ
“ನೀನು ಇಷ್ಟು ಸರಳವಾಗಿ ಮುಗಿಸಿಬಿಟ್ಟೆಯಲ್ಲ ಕೃಷ್ಣ ಕತೆಯನ್ನ. ಈ ಪ್ರಸಂಗದ ಬಗ್ಗೆ ಎಷ್ಟು ಕಲ್ಪನೆಗಳಿವೆ, ಎಷ್ಟು ಹಾಡುಗಳಿವೆ, ಭಾಗವತರು ಹಾಡಿ ಹೊಗಳಿದ್ದಾರೆ ‘  ಎಂದ
ಕೃಷ್ಣ
“ಹೌದು ಗಣೇಶ ಕತೆಯ ರೂಪದಲ್ಲಿ ಕೇಳುವಾಗ ಎಲ್ಲವು ಅದ್ಭುತ ಅನ್ನಿಸುತ್ತೆ. ಆದರೆ ಅನುಭವ ಹೇಳುವಾಗ ಎಲ್ಲರಿಗು ಸಾಧಾರಣ ಘಟನೆ ಎಂದೆ ಅನ್ನಿಸುತ್ತೆ. ಇಂತವೆಲ್ಲ ಬಾಯಿಂದ ಬಾಯಿಗೆ ಹರಡುವಾಗ ಹಲವು ಕಲ್ಪನೆಗಳು ಸೇರಿಕೊಳ್ಳುತ್ತವೆ. ಭಾಗವತದಲ್ಲಿ ಈ ಪ್ರಸಂಗ ಅತ್ಯಂತ ರೋಚಕವಾಗಿದೆ. ಭಾಗವತರು ಇದನ್ನೆಲ್ಲ ಭಕ್ತಿಯಿಂದ ಹೊಗಳಿ ಹಾಡಿದರು. ಮುಗ್ದ ಜನರು ಅಚ್ಚರಿಯಿಂದ ಕೇಳಿದರು” ಎನ್ನುತ್ತ ನಿಲ್ಲಿಸಿದ.

ಗಣೇಶ ಮತ್ತೆ ಕೇಳಿದ

“ಕೃಷ್ಣ  ಕಾಳಿಂಗನ ಘಟನೆ  ಹೇಳಿದೆ , ಆದರೆ ಗೋವರ್ಧನ ಗಿರಿಧಾರಿ ಎನ್ನುವರಲ್ಲ ನಿನ್ನನ್ನು , ಗೋವರ್ಧನ ಬೆಟ್ಟವನ್ನು ಸಾಮಾನ್ಯರು ಎತ್ತಲು ಅಸಾದ್ಯವೆ ಸರಿ. ಆದರೆ ನಿನ್ನಂತಹ ಪವಾಡಪುರುಷನಿಗೆ ಎಲ್ಲವು ಸಾದ್ಯ ಎನ್ನುವರು. ಆ ಗೋವರ್ಧನ ಪರ್ವತವನ್ನು ನೀನು ಎತ್ತಿ ಹಿಡಿದೆ ಅನ್ನುವುದು ಆ ಇಂದ್ರನಿಗೆ   ಅಹಂಕಾರವನ್ನು ಮುರಿದೆ ಅನ್ನುವ ಪ್ರಸಂಗವನ್ನು ವರ್ಣಿಸುವೆಯ?”



ಮುಂದುವರೆಯುವುದು……….



ಕಾಳಿಂಗ ಮರ್ದನ ಚಿತ್ರ ಕೃಪೆ : http://www.lahari.com/sculptures/s4.jpg

1 comment:

  1. ಕಾಳಿಂಗ ಸರ್ಪದ ಘಟನೆ ತುಂಬಾ ಚೆನ್ನಾಗಿ ವಿವರಿಸಿದ್ದೀರಾ. ಅವು ವಾಸಸ್ಥಳವನ್ನು ಬದಲಿಸಿದ ಕಥೆ ನನಗೂ ಈಗಲೇ ಅರಿವಿಗೆ ಬಂದದ್ದು.

    ReplyDelete

enter your comments please