Saturday, October 5, 2013

ಕೃಷ್ಣ ..ಕೃಷ್ಣ ..ಕೃಷ್ಣ - ಮುಗಿದ ಸಂವಾದ

ಕೃಷ್ಣ ..ಕೃಷ್ಣ ..ಕೃಷ್ಣ (18) - ಮುಗಿದ ಸಂವಾದ



ಕೃಷ್ಣನ ಮಾತು ಮುಗಿದು ಎಷ್ಟು ಹೊತ್ತಾದರು ಗಣಪನಿಗೆ ಮಾತನಾಡಬೇಕು ಎಂದು ಅನಿಸಲಿಲ್ಲ. ಕೃಷ್ಣನು ಅಷ್ಟೆ ಮಾತು ಮುಗಿಸಿ ಮೌನವಾಗಿ ಕುಳಿತು ಬಿಟ್ಟಿದ್ದ. ಇಬ್ಬರ ನಡುವೆ ಎಂತದೊ ಭಾವೋತ್ಕರ್ಷ ಮನೆ ಮಾಡಿತ್ತು,
ಉಡುಪಿಯ ಕಡಲ ಕಿನಾರೆ ರಾತ್ರಿಯನ್ನು ಕಳೆದು ಬೆಳಗಿನ ಸೂರ್ಯನ ಆಗಮನಕ್ಕೆ ಅಣಿಯಾಗುತ್ತಿತ್ತು. ಸಮುದ್ರದ ಮೇಲಿನ ಗಾಳಿ ಹಿತಕರವಾಗಿತ್ತು. ರಾತ್ರಿ ಪೂರ್ತಿ ಕುಳಿತು ಮಾತನಾಡಿದ ಕೃಷ್ಣನಿಗೆ ತನ್ನ ಮನಸನ್ನೆಲ್ಲ ಒಬ್ಬರ ಬಳಿ ಹಂಚಿಕೊಂಡ ಸಮಾದಾನ. ಮನವು ಹಗುರವಾಗಿತ್ತು . ಗಣೇಶನಿಗು ಅಷ್ಟೆ ಕೃಷ್ಣನ ಜೊತೆ ಕುಳಿತು ಆತ್ಮೀಯವಾಗಿ ಮಾತನಾಡಿದ ತೃಪ್ತಿ.
ಗಣೇಶ ಎದ್ದು ನಿಂತ
"ಕೃಷ್ಣ, ನಿನ್ನ ಮಾತುಗಳನ್ನು ಕೇಳುತ್ತ ನನ್ನ ಮನ ಹಲವು ಬಾರಿ ವಿವಶವಾಯಿತು. ಹಾಗೆ ನೀನು ಜೀವನವನ್ನು ನೋಡುತ್ತಿದ್ದ ಪರಿ ತಿಳಿಯಿತು. ಬಹುಶಃ ನಾನು ಮಹಾಭಾರತ ಬರೆಯುವಾಗ ಅರಿತುಕೊಂಡಿದ್ದ ಅರ್ಥಗಳು ಬೇರೆ. ಹಾಗೆ ನಿನ್ನ ಮಾತುಗಳ ಅರ್ಥ ನಿನ್ನ ಹೃದಯದಿಂದ ಬಂದಿರುವುದು. ಅಂದು ಅರ್ಜುನನಿಗೆ ಗೀತೋಪದೇಶ ಮಾಡಿದ್ದೆ, ಇಂದು ಬದುಕಿನ ಅರ್ಥವನ್ನು ತಿಳಿಯಹೇಳಿದೆ" ಎಂದ
ಕೃಷ್ಣನು
“ಇಲ್ಲ ಗಣೇಶ, ನಾನು ಅರ್ಜುನನಿಗೆ ಮಾಡಿದ್ದೆ ಎನ್ನುವ ಗೀತೋಪದೇಶವನ್ನು   ಯಾರು ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ ಹೇಳು, ಕಡೆಗೆ ಅರ್ಜುನನೆ ಅದನ್ನು ಪಾಲಿಸಲಿಲ್ಲ. ಇನ್ನು ಯಾರಾದರು ಅದನು ಪಾಲಿಸುತ್ತಾರೆ ಎಂದು ಹೇಗೆ ಹೇಳುವುದು.  ಗಣೇಶ ಪ್ರತಿಯೊಬ್ಬರ ಜೀವನ ಮಾರ್ಗವು ಭಗವದ್ಗೀತೆಯೆ. ಪ್ರತಿಯೊಬ್ಬರ ಜೀವನವು ಹೋರಾಟ, ಪ್ರೀತಿ, ಪ್ರೇಮ, ದ್ವೇಷ, ಬೇಸರ ಇವುಗಳಿಂದಲೆ ತುಂಬಿರುತ್ತದೆ. ಅವರ ಜೀವನ ಮಾರ್ಗ ಭೋದಿಸುವ ಕೃಷ್ಣ  ಅವರ ಆತ್ಮ ರೂಪದಲ್ಲಿ ನೆಲೆಸಿರುತ್ತಾನೆ, ಪ್ರತಿ ಜೀವಿಯು ಅರ್ಜುನ ಸ್ವರೂಪನೆ.  ಅಂತಹ ಆತ್ಮಸ್ವರೂಪಿ ಕೃಷ್ಣನು ತೋರುವ ದಾರಿಯಲ್ಲಿ ನಡೆದವರು ಜೀವನ ಗೆಲ್ಲುತ್ತಾರೆ, ಇಲ್ಲದವರು ದುರ್ಯೋಧನನಂತೆ ಸೋಲುತ್ತಾರೆ”
ಗಣೇಶ.
“ಬಹುಶಃ , ನಿನ್ನ ಮಾತುಗಳು ನನ್ನ ಬಹಳಷ್ಟು ಅನುಮಾನಗಳನ್ನು ಪರಿಹರಿಸಿದೆ ಕೃಷ್ಣ. ಇನ್ನು ಮುಂದಾದರು ನಿನ್ನ ನಿಂದನೆ ತಗ್ಗೀತೆ? , ನಿನ್ನ ಬದುಕನ್ನು ಜನ ಅರ್ಥಮಾಡಿಕೊಳ್ಳುವರೆ?”
ಕೃಷ್ಣ  ಶಾಂತನಾಗಿ   ಗಣೇಶನನ್ನು ನೋಡಿದ.
“ಇಲ್ಲ ಗಣೇಶ, ಬಹುಶಃ ನೀನು ಹೇಳಿದ್ದು ಆಗಲಾರದು, ನಾವು ಎಷ್ಟೇ ವಿವರಣೆ ಕೊಟ್ಟರು ಅದನ್ನು ಕೇಳುವ ಅರ್ಥಮಾಡಿಕೊಳ್ಳುವ ಮನವು ಇರಬೇಕಲ್ಲವೆ. ಈ ರೀತಿಯ ಸಾವಿರ ಸಾವಿರ ವ್ಯಾಖ್ಯಾನಗಳು ಬಂದಿವೆ ಆದರೆ ನನ್ನ ಮೇಲಿನ ದ್ವೇಷ ಹಾಗು ನಿಂದನೆಗಳು ಕಡೆಮೆ ಆಗಿಲ್ಲ. ನನ್ನನ್ನು ಪ್ರೀತಿಸುವರು ಆರಾಧಿಸುವರು, ಪೂಜಿಸುವರು ನನ್ನನ್ನು ಪೂಜಿಸುತ್ತಲೆ ಇರುತ್ತಾರೆ, ಹಾಗೆ ನಿಂದಿಸುವವರು ದ್ವೇಷಿಸುವವರು ಅವರು ಸಹ ತಮ್ಮ ದಾರಿಯಲ್ಲಿಯೆ ಇರುತ್ತಾರೆ, ಅಂತಹ ಕ್ರಿಯೆಗಳನ್ನು ಬದಲಿಸಲಾಗದು, ಬದಲಿಸುವ ಅಗತ್ಯವೂ ಇಲ್ಲ. ಈ ಪ್ರಪಂಚದ ರೀತಿಯೆ ಹಾಗೆ, ಕತ್ತಲೆ ಹಾಗು ಬೆಳಕು, ಹಗಲು ಹಾಗು ರಾತ್ರಿ, ಸತ್ಯ ಹಾಗು ಅಸತ್ಯ, ಪ್ರೀತಿ ಹಾಗು ದ್ವೇಷ ಇವೆಲ್ಲ ಸದಾ ಜೊತೆಜೊತೆಯಾಗಿಯೆ ಸಾಗುತ್ತ ಇರುತ್ತದೆ”
ಕೃಷ್ಣನ ಮಾತು ಒಂದು ಕ್ಷಣ ನಿಂತಿತು, ಮತ್ತೆ ಮುಂದುವರೆಸಿದ
“ಆದರೆ ನಮ್ಮ ಜೀವನವನ್ನು ಸದಾ ವಿಮರ್ಷಿಸುತ್ತಲೆ ಇರಬೇಕು ಗಣಪ, ಅದು ನಮಗೆ ಮುಂದಿನ ಜೀವನಕ್ಕೆ ದಾರಿ ತೋರುತ್ತದೆ”
ಗಣೇಶ
“ಹೌದು ಕೃಷ್ಣ ಪ್ರತಿಯೊಬ್ಬರು ಅವರ ಜೀವನವನ್ನು ಅರ್ಥ ಮಾಡಿಕೊಳ್ಳಲೇಬೇಕು, ಬದುಕಿನ  ಸತ್ಯಾಸತ್ಯತೆಗಳನ್ನು ಅರಿಯಬೇಕು. ತಮ್ಮ ಹಿಂದಿನ ನಡೆಗಳನ್ನು ಅಗಾಗ್ಯೆ ತಾವೆ ಮೌಲ್ಯ ಮಾಪನ ಮಾಡುತ್ತಿದ್ದರೆ. ಮುಂದಿನ ಹೆಜ್ಜೆಗಳು ದೃಡವಾಗುತ್ತವೆ ಅಲ್ಲವೆ " ಎಂದ.
ಕೃಷ್ಣನು ಹೌದೆನ್ನುವಂತೆ ತಲೆ ಆಡಿಸಿದ.
ಗಣೇಶನು
"ಸರಿ ಕೃಷ್ಣ ಮತ್ತೊಮ್ಮೆ ಸಾದ್ಯವಾದರೆ ಹೀಗೆ ಬೇಟಿ ಮಾಡೋಣ,  ಈಗ  ನಮ್ಮ ಕರ್ತವ್ಯಗಳು ನಮ್ಮನ್ನು ಕರೆದಿವೆ ಹೊರಡೋಣ" ಎಂದ.
ಅವರಿಬ್ಬರು ಹೊರಟರು.
ಸಮುದ್ರ ಬಹಳ ಗಂಬೀರವಾಗಿತ್ತು. ಗಣೇಶ ಕೃಷ್ಣರ ಮಾತುಕತೆಗಳಿಗೆ ಸಾಕ್ಷಿಯಾಗಿದ್ದ  ಸಮುದ್ರ , ತನ್ನ ಮನದಲ್ಲಿ ಮಂಥನ ನಡೆಸಿರುವಂತೆ,  ಸಮುದ್ರ ಇಲ್ಲಿಯವರೆಗೂ ಕೇಳಿಸಿಕೊಂಡಿದ್ದ ಕೃಷ್ಣನ ಮಾತುಗಳನ್ನು ಹೇಳಲು ಕಾತುರವಾಗಿರುವಂತೆ , ಸಮುದ್ರದ ಮಾತುಗಳಿಗೆ ಕಿವಿಗೊಡಲೊ ಎನ್ನುವಂತೆ ಸೂರ್ಯ ಸಮುದ್ರದ ಅಂಚಿನಲ್ಲಿ ಕಾಣಿಸಿಕೊಂಡ.




ಶುಭಂ.
೦೭/೦೮/೧೩
ಚಿತ್ರಕೃಪೆ:




..
 

No comments:

Post a Comment

enter your comments please