Monday, July 14, 2014

ಸಣ್ಣಕತೆ : ನೆನಪು

ನೆನಪು
=====

ಅಪ್ಪ ಈ ಜಾಗ ಅದೆಷ್ಟು ಸುಂದರ ಅಲ್ವಾ?

ಅಪ್ಪ  ಮೌನವಾಗಿ ಸುತ್ತಲೂ ನೊಡುತ್ತಿದ್ದ.
ಅಪ್ಪನ ಮೌನದಲ್ಲಿ ನಿರ್ಧಾರವಿತ್ತು

ಜುಳು ಜುಳು ಶಬ್ದ ಮಾಡುತ್ತ ಹರಿಯುತ್ತಿರುವ ನದಿ. ಸುತ್ತಲೂ ಸುಂದರ ಕಾನನ. ಪಕ್ಷಿಗಳ ಕಲರವ. ಬೆಟ್ಟಗುಡ್ಡಗಳ ಮೋಹಕ ದೃಷ್ಯ. ನೋಡಿದಷ್ಟು ನೋಡಲೇ ಬೇಕೆನಿಸುವ ಪರಿಸರ.

ಅಪ್ಪ ಈ ನದಿಯನ್ನು ನೋಡು ಅದೆಷ್ಟು ಮನಮೋಹಕ. ನಾವು ಇರುವ ಸ್ಥಳದಲ್ಲಿಯಾದರೆ ಕುಡಿಯುವ ನೀರಿಗೂ ಎಂತದೋ ಕಾಟ. ಅಲ್ಲಿರುವ ಅಷ್ಟು ಜನರಿಗೂ ಅದೇ ಜೀವ. ಬೇಸಿಗೆ ಬಂತೆಂದರೆ ಅಷ್ಟೆ, ಹನಿ ಹನಿ ನೀರಿಗೂ ಪರದಾಟ. ಹಾಗೆ ನೋಡಿದರೆ ನಾವಿರುವ ಜಾಗದಿಂದ ಬಲು ದೂರವೇನು ಇಲ್ಲ. ಇಲ್ಲಿಯ ನದಿ ನೋಡಿದರೆ ಸಂತೋಷ ಮೈದುಂಬುತ್ತದೆ.

ಹುಡುಗನ ಮಾತಿಗೆ ನದಿ ಮುದದಿಂದ ಉಬ್ಬಿತು. ಅದಕ್ಕೊಂದು ಆಮೋದ, ನುಲಿತ.

.

ಕೆಲವೇ ದಿನದಲ್ಲಿ ಅವರ ವಾಸಸ್ಥಳ ಬದಲಾಗಿ ನದಿಯ ದಡಕ್ಕೆ ಬಂದು ಸೇರಿದರು. ಅವರ ಹಿಂದೆ ನಿಧಾನಕ್ಕೆ ಚಿಕ್ಕ ಹಳ್ಳಿಯೆ ನಡೆದುಬಂದಿತು. ಅಲ್ಲಿ ಮನೆಗಳಾದವು. ಅವರ ಹಿಂದೆಯೆ ಸಾಕಿದ ದನಗಳು ಪ್ರಾಣಿಗಳು . ಸಕಲ ಸಂಪತ್ತು.

ಅಲ್ಲಿದ್ದ ಹಕ್ಕಿಗಳೀಗ ಬೇರೆ ಸ್ಥಳ ಹುಡುಕಿ ಹೊರಟಿದ್ದವು.  ಜನರ ಮಾತಿನ ಶಭ್ದ ಪ್ರಾಣಿಗಳ ಕೂಗು ನಾಯಿಗಳ ಬೊಗಳುವಿಕೆ ಎಲ್ಲವನ್ನು ಸೇರಿ ಅಲ್ಲಿ ಸದಾ ನೆಲೆಸಿದ್ದ ಮೌನವನ್ನು ಹೊರದೂಡಿದ್ದವು. ಹಾಡುಹಗಲೇ ಕೇಳುತ್ತಿದ್ದ ನದಿಯ ಜುಳು ಜುಳು ಈಗ ನಡುರಾತ್ರಿಗೆ ಮಾತ್ರ ಮೀಸಲಾಯಿತು.

ದಿನ ದಿನಕ್ಕೆ ಜನ ಹೆಚ್ಚಾದರು, ನದಿಯ ನೀರು ಕಲುಶಿತವಾಯಿತು.

ಹಾಗೆ ಅಲ್ಲಿ ನೆಲೆಸಿದ್ದ ಜನರ ಮನಸು ನುಡಿ ಆಚರಣೆಗಳು ಸಹ ಕಲುಶಿತಗೊಂಡಿತು. ಅಟ್ಟದಲ್ಲಿ ಸಾಕಷ್ಟು ಕೂಡಿಟ್ಟರು ಮತ್ತಷ್ಟಕ್ಕೆ ಹೋರಾಟ. ಅಕ್ಕ ಪಕ್ಕದ ಜನರ ನೆಲವೂ ತನಗೇ ಸೇರಬೇಕೆನ್ನುವ  ಆಸೆಪುರಕ ಜನರ ತವಕ. ಆಸೆ ತೀರದಾಗ ತೋರುವ ಕ್ರೌರ್ಯ. ಜಗಳ ಹೋರಾಟ ಕೊಲೆಗಳಿಗೆ ಇಂತಹುದೆ ಎಂದು ಕಾರಣವೇನಿಲ್ಲ ನೀರು,ನೆಲ, ಧರ್ಮ, ಬಾಷೆ, ಜಾತಿ ಎಲ್ಲ ಕಾರಣಕ್ಕೂ ಹೋರಾಟ ದ್ವೇಷ ಯುದ್ದ ಕೊಲೆ .

ಪಕ್ಕದಲ್ಲಿದ್ದ ನದಿಗೆ ಸಹನೆ ಮೀರಿ ಹೋಯಿತು. ಎಷ್ಟು ಎಂದು ಇವರ ಗಲಾಟೆ ಸಹಿಸುವುದು. ಇದ್ದುಕೊಂಡು ಹೋಗಲಿ ಎಂದರೆ ತನ್ನನ್ನೆ ಮಾರಿಕೊಳ್ಳುವ ಜನ ಇವರು,
ಪ್ರಕೃತಿಗೆ ಶಾಪ ಇವರು
ದೈವ ಸೃಷ್ಟಿಯ ವಿಕೃತಿ ಇವರು
ಇನ್ನು ಸಹಿಸುವುದು ಬೇಡ ಅಂದುಕೊಂಡಿತು.
ಮರುಕ್ಷಣದಲ್ಲಿ ಅದರಲ್ಲಿ ಅದೆಲ್ಲಿ ತುಂಬಿ ಬಂದಿತೊ ಜಲಪೂರ. ಆಳೆತ್ತರದ ಅಲೆಗಳು , ಕಣ್ಣು ಕುಕ್ಕುವ ರೌದ್ರತೆ. ಎಲ್ಲವನ್ನೂ ಏಕಾಪೋಶನೆ ತೆಗೆದುಕೊಳ್ಳುವ ಉತ್ಸಾಹ.

ದಡದಲ್ಲಿದ್ದ ಜನರರನ್ನೆಲ್ಲ ಒರೆಸಿ ಹಾಕಿತು, ನದಿಯ ಪ್ರವಾಹ, ಅವರು ನಿರ್ಮಿಸಿದ, ಮನೆ ಮಠ, ದೇವಾಲಯ ಶಾಲೆಯೆನ್ನದೆ ಎಲ್ಲವನ್ನು ಕಿತ್ತೊಗೆಯಿತು. ಅದರ ರೋಷ ತೀರಲಿಲ್ಲ. ಅವರು ಸಾಕಿದ್ದ ಪ್ರಾಣಿಗಳನ್ನು ಕೊಚ್ಚಿಹಾಕಿತು. ಮನುಜ ಸಾಕಿದ ಪ್ರಾಣಿಗಳಿಗು ಅವನದೇ ದುರ್ಗುಣ ಬಂದಿರುತ್ತೆ ಎಂದು ನದಿಯ ಅನುಭವ.

ಎಲ್ಲವನ್ನು ಕಿತ್ತೊಗೆದ ನಂತರ ಅದರ ಕೋಪ ತಣಿಯಿತು. ನಿಧಾನಕ್ಕೆ ತನ್ನ ಪ್ರವಾಹವನ್ನು ತಗ್ಗಿಸಿತು. ಕೆಲವೇ ದಿನ ಮತ್ತೆ ಸಹಜ ಸ್ಥಿತಿಗೆ ತಲುಪಿತು ಅದರ ಹರಿವು. ಈಗ ಸುತ್ತ ಮುತ್ತಲೂ ಮತ್ತೆ ಅದೇ ಮೌನ. ಜನ ಜೀವನವಿದ್ದ ಗುರುತು ಇಲ್ಲದಂತೆ ಅಳಿದು ಹೋಗಿದೆ. ಕಷ್ಟಪಟ್ಟು ಹುಡುಕಿದರೆ ಅಲ್ಲೊಂದು ಇಲ್ಲೊಂದು ಕುರುಹುಗಳು ನದಿಯ ಪೌರುಷದ ಸಂಕೇತದಂತೆ ಉಳಿದಿತ್ತು. ನದಿಯ ಮನ ಶಾಂತವಾಯಿತು. ಮತ್ತೆ ಜುಳು ಜುಳು ವಿನಾದ.  ದೂರಹೋಗಿದ್ದ ಹಕ್ಕಿಗಳ ಗುಂಪು ಮತ್ತೆ ಬಂದು ನೆಲಸಿದವು, ಮರಗಿಡಗಳು ಪೊದೆಗಳು ಮತ್ತೆ ತನ್ನ ಒಡೆತನವನ್ನು ಸ್ಥಾಪಿಸಿದವು.

ಅದೆಷ್ಟೋ ದಶಕಗಳು ಕಳೆದುಹೋದವು. ದಾರಿಯಲ್ಲಿ ನಡೆದು ಹೊರಟಿದ್ದ ಯಾರೋ ಅಪ್ಪ ಮಗನಿರಬಹುದು , ಹಾದಿ ಮಧ್ಯದ ನದಿಯ ದಡದಲ್ಲಿ ನಿಂತರು .

ಜುಳು ಜುಳು ಶಬ್ದ ಮಾಡುತ್ತ ಹರಿಯುತ್ತಿರುವ ನದಿ. ಸುತ್ತಲೂ ಸುಂದರ ಕಾನನ. ಪಕ್ಷಿಗಳ ಕಲರವ. ಬೆಟ್ಟಗುಡ್ಡಗಳ ಮೋಹಕ ದೃಷ್ಯ. ನೋಡಿದಷ್ಟು ನೋಡಲೇ ಬೇಕೆನಿಸುವ ಪರಿಸರ......

ಅಪ್ಪ ಈ ಜಾಗ ಅದೆಷ್ಟು ಸುಂದರ ಅಲ್ವಾ?
’      
ಅಪ್ಪ  ಮೌನವಾಗಿ ಸುತ್ತಲೂ ನೊಡುತ್ತಿದ್ದ
ಅಪ್ಪನ ಮೌನದಲ್ಲಿ ನಿರ್ಧಾರವಿತ್ತು

ನದಿ ಅದೇನೊ ನೋವಿನಿಂದ ಹಳೆಯ ನೆನಪಿನಿಂದ ನರಳಿತು.

4 comments:

 1. ಎಲ್ಲ ನದಿ ಪಾತ್ರಗಳಗುಂಟ ಅತಿಕ್ರಮಣಕಾರೀ ಮನುಜ ಸ್ಥಾಪಿಸಿಕೊಳ್ಳುವ ನಾಗರೀಕತೆಗಳಿಂದ ಪರಿಸರ ಮತ್ತು ಮೂಲಾಧಾರವಾದ ನದಿಯೂ ಕಲುಷಿತವಾಗಿ ಹೋಗುವ ದುರಂತ ಕಥೆ ಇದು.

  ಇನ್ನೊಂದು ಕರಾಳ ಮಗ್ಗುಲಲ್ಲಿ ನಿಸರ್ಗದ ಬೇರುಗಳಲ್ಲೇ ಬೆರೆತು ಹೋಗಿರುವ ಕಾಡು ಮಕ್ಕಳನ್ನು ವಕ್ಕಲೆಬ್ಬಿಸುವ ಪಟ್ಟಭದ್ರ ಹಿತಾಸಕ್ತಿಗಳು.

  ನಿಮ್ಮ ಗ್ರಹಿಕೆ ಮತ್ತು ವೈಚಾರಿಕ ಮನಸಿಗೆ ನಾವು ಚಿರರುಣಿಗಳು.

  ReplyDelete
 2. ವಂದನೆಗಳು ತಮ್ಮ ಅಮೂಲ್ಯವಾದ ಪ್ರತಿಕ್ರಿಯೆಗೆ

  ReplyDelete
 3. ಎಲ್ಲ ಆಸೆಗಳಿಗೆ ಕೊನೆಗೊಂದು ಅಳಿವೆಂಬುದು ಇದ್ದೇ ಇರುತ್ತದೆ ಎಂಬ ನೀತಿ ಪಾಠ. ಸಣ್ಣ ಕಥೆ ಅನ್ನಲು ಮನಸೊಪ್ಪುತ್ತಿಲ್ಲ, ಗಂಭೀರ ಕಥೆ ಅನ್ನಬಹುದು :)

  ReplyDelete

enter your comments please