Friday, January 27, 2012

ಶವಗಾರದಲ್ಲಿ ರಾತ್ರಿ


 ಸುಮಾರು ೨೦೦೩ ರ ಸೆಪ್ಟೆಂಭರ ಮಾಸವಿರಬಹುದು. ನನ್ನನ್ನು ಇಲಾಖೆಯ ತರಬೇತಿಯೊಂದಕ್ಕೆ ಕಳಿಸಲಾಯ್ತು.ನನ್ನ ಜೊತೆ ಶ್ರೀದರ್ ಎಂಬ ಅಧಿಕಾರಿಯು ಅದೇ ತರಬೇತಿಗೆ ಹೊರಟಿದ್ದರು ಹಾಗಾಗಿ ನಾವು ಬೆಂಗಳೂರಿನಿಂದ ಹೊರಡುವ ರಾಜದಾನಿ ಎಕ್ಸ್ ಪ್ರೆಸ್ ಗೆ ಒಟ್ಟಿಗೆ ಬರ್ಥ್ ಗಳನ್ನು ಬುಕ್ ಮಾಡಿದ್ದೆವು. ಬೆಂಗಳೂರಿನಿಂದ ಸಂಜೆ ಹೊರಟೆವು. ಹೊಸ ಅನುಭವವಾದ್ದರಿಂದ ಎಲ್ಲವೂ ಚೆನ್ನಾಗಿಯೆ ಕಾಣುತ್ತಿತ್ತು. ಹೊರಟ ಸ್ವಲ್ಪ ಹೊತ್ತಿನಲ್ಲಿಯೆ ನೀರಿನ ಬಾಟೆಲಗಳು ನಂತರ ಕುಡಿಯಲು ಕಾಫಿ ಮುಂತಾದವು ಕೊಡಲ್ಪಟ್ಟಿತ್ತು. ನಾವೆಲ್ಲ ಉತ್ಸಾಹದಿಂದ ಮಾತಾನಾಡುತ್ತಿರುವಾಗ ಊಟದ ಸಮಯವೂ ಬಂದಿತು. ಮೊದಲ ಊಟವಾದ್ದರಿಂದ ಅದು ಚೆನ್ನಾಗಿಯೆ ಇದೆ ಅನ್ನಿಸಿತು. ರಾತ್ರಿ ಹತ್ತು ಗಂಟೆ ದಾಟಿದಂತೆ ಎಲ್ಲರೂ ಮಲಗಲು ತೊಡಗಿದರು. ಅದು ಹವಾನಿಯಂತ್ರಣದ ಬೋಗಿಯಾದ್ದರಿಂದ ಎಲ್ಲರಿಗು ಬೆಡ್ ಶೀಟ್ ರಗ್ಗುಗಳನ್ನು ರೈಲ್ವೆಯವರೆ ಒದಗಿಸಿದ್ದರು. ಸರಿ ಶ್ರೀದರ್ ಸಹ "ನೀವು ಮಲಗಿ" ಅಂತ ನನಗೆ ತಿಳಿಸಿ ಅವರ ಬರ್ಥ್ ಸರಿಪಡಿಸಿ ಮೇಲೆ ಹತ್ತಿದರು. ನಾನು ಅವರ ಎದುರಿಗೆ ಕೆಳಗಿನ ಬರ್ತ್ ನಲ್ಲಿದ್ದೆ. ಸರಿ ಅಂತ ನಾನು ಹೇಗೊ ತೂರಿಕೊಂಡು ಮಲಗಿದೆ. ವಿದ್ಯುತ್ ಇಂಜಿನ್ ಆದ್ದರಿಂದ ಯಾವುದೆ ಶಬ್ದಗಳಿರದೆ ಕೇವಲ ಬೋಗಿಯ ಚಕ್ರಗಳು ಕಂಬಿಯಮೇಲೆ ಹೋಗುವಾಗ ಉಜ್ಜುತ್ತಿರುವ ಶಬ್ದ ಮಾತ್ರ ಕೇಳುತಿತ್ತು.
ಅದು ಎಷ್ಟೆ ಹಿತವಾಗಿದ್ದರು ನನಗೆ ಮನೆಯ ಹೊರಗೆ ಸ್ವಲ್ಪ ನಿದ್ದೆ ಕಡಿಮೆಯೆ. ಕೆಲವರು ಆ ವಿಷಯದಲ್ಲಿ ಪುಣ್ಯವಂತರು. ಅರ್ದ ಮುಕ್ಕಾಲು ಗಂಟೆ ಮಲಗಿದ್ದರು ನನಗೆ ಏಕೊ ನಿದ್ರಾದೇವಿಯ ಕೃಪೆಯಾಗಲಿಲ್ಲ. ಹಾಗಾಗಿ ಸೀಟಿನಿಂದ ಹೊರಗೆಬಂದು ನಿದಾನವಾಗಿ ನಡೆಯುತ್ತ ಬಾಗಿಲಿನ ಹತ್ತಿರ ಬಂದೆ. ಅದು ರಾತ್ರಿಯಾದ್ದರಿಂದ ಹಾಗು ರೈಲು ಅತಿವೇಗದಲ್ಲಿ ಚಲಿಸುತಿತ್ತಾಗಿ ಬಾಗಿಲು ತೆರೆದು ನಿಲ್ಲುವಂತಿಲ್ಲ. ಅಲ್ಲಿ ಎರಡು ಬೋಗಿಗಳು ಸೇರುವ ನಡುವಿನ ದ್ವಾರದ ಹತ್ತಿರ ಯಾರೋ ಸಿಗರೇಟ್ ಸೇದುತ್ತ ನಿಂತಿದ್ದ. ನಾನು ಹೋದ ಸ್ವಲ್ಪ ಸಮಯಕ್ಕೆಲ್ಲ ಅವನು ಹೊರಟುಹೋದ. ಅಲ್ಲಿ ಸುಮಾರು ೧೫ ನಿಮಿಷ ನಿಂತಿದ್ದೆ. ಅದು ಬೇಸರಬಂದು ಪುನಃ ಮಲಗೋಣ ಅಂತ ಹಿಂದಕ್ಕೆ ಹೊರಟೆ.
ಎಲ್ಲ ದೀಪಗಳೆಲ್ಲ ಆರಿ ಕೇವಲ ಸಣ್ಣ ಕೆಂಪು ದೀಪಗಳು ಮಾತ್ರ ಮಂದ ಬೆಳಕು ಬೀರುತ್ತಿದ್ದವು. ನಾನು ಆ ಮಂದ ಬೆಳಕಿನಲ್ಲಿ ನನ್ನ ಬರ್ಥ್ ಅರಸಿ ಹೊರಟೆ. ಇದ್ದಕಿದ್ದಂತೆ ನನ್ನ ಮನಸಿನಲ್ಲಿ ಎಂತದೊ ಅಯೋಮಯವಾಯಿತು. ಎಲ್ಲರು ರಗ್ ಹೊದ್ದು ಮೇಲೆ ಬಿಳಿಯ ಬೆಡ್ ಶೀಟ್ ಗಳನ್ನು ಹೊದ್ದು ಮುಸುಗುಹಾಕಿ ಮಲಗಿದ್ದರು. ನನ್ನ ಎರಡು ಬದಿಯಲು ಮೂರು ಮೂರು ಬರ್ಥ್ ಗಳಲ್ಲಿ ಮಲಗಿರುವ ಮುಸುಕುಹೊದ್ದ ಜನರನ್ನು ಕಾಣುವಾಗ ಏಕೊ ಯಾವುದೋ ಸಿನಿಮಾದಲ್ಲಿಯೊ ಎಲ್ಲಿಯೋ ನೋಡಿದ್ದ ಶವಗಾರದ ನೆನೆಪಿನ ದೃಷ್ಯ ಕಣ್ಣೆದುರು ಬಂದು ಇದ್ದಕಿದ್ದಂತೆ ನಾನು ಶವಗಾರದಲ್ಲಿ ಶವಗಳ ಮದ್ಯೆ ಸಂಚರಿಸುತ್ತಿದ್ದೀನಾ ಅಂತ ಭ್ರಮೆ ಮುತ್ತಿಕೊಂಡಿತು. ಹೇಗೊ ಆ ಶವಗಳ ನಡುವೆಯೆ ನಡೆಯುತ್ತ ಹೋಗಿ ನನ್ನ ಬರ್ಥ್ ಗುರುತಿಸಿ ಅದರ ಮೇಲೆ ಬಗ್ಗಿ ಕುಳಿತುಕೊಂಡೆ.
ನನ್ನ ಎದುರಿಗೆ ಮೇಲಿನ ಬರ್ಥನಲ್ಲಿದ್ದ ಶ್ರೀದರ್ ಗು ನಿದ್ದೆ ಬಂದಿರಲಿಲ್ಲವೊ ಅಥವ ಈಗ ಎಚ್ಚರವಾಯಿತೊ ಮುಸುಕಿನಿಂದಲೇ ನನ್ನನ್ನು ಕುರಿತು "ಏನ್ರೀ ನಿಮಗೆ ಇನ್ನು ನಿದ್ದೆ ಬರಲಿಲ್ಲವಾ?" ಅಂತ ಪ್ರಶ್ನಿಸಿದರು. ಅದು ಆಗಲೆ ಸರಿರಾತ್ರಿಯಾದರಿಂದಲೊ ಇಲ್ಲ ಹವಾನಿಯಂತ್ರಣ ಗಾಳಿಯಿಂದಲೊ ಅವರ ದ್ವನಿ ಸಾಕಷ್ಟು ದಪ್ಪಗಾಗಿದ್ದು ಹಾಗು ನಿಶ್ಯಬ್ದದಲ್ಲಿ ಇದ್ದಕಿದ್ದಂತೆ ಅವರು ಮಾತನಾಡಿದ್ದು ನನ್ನನ್ನು ಬೆಚ್ಚಿಬೀಳಿಸಿತ್ತು. ಸರಿ ಹೇಗೊ ಅವರಿಗೆ ಉತ್ತರಿಸಿ ನಿದ್ದೆಬಂದಿಲ್ಲವೆಂದು ತಿಳಿಸಿದೆ. ಅವರು ಏಕೆ ಕುಳಿತ್ತೀದ್ದೀರಿ ಮಲಗಿ ನಿದ್ದೆ ಬರುತ್ತೆ ಎಂದರು. ಆಗ ನಾನು ಅವರಿಗೆ ನನ್ನ ಶವಗಾರದ ಭ್ರಮೆಯ ಅನುಭವ ತಿಳಿಸಿದೆ. ನಾನು ಶವಗಳ ಮದ್ಯೆಯೆ ನಡೆದುಬಂದನೆಂದದ್ದು ಕೇಳಿ ಅ ಸರಿರಾತ್ರಿಯಲ್ಲು ಅವರು ಗಟ್ಟಿಯಾಗಿ ನಗಲು ಪ್ರಾರಂಬಿಸಿದರು
"ಹ್ಹಹ್ಹ .. ಹಹ್ಹ ...." ವಿವಿದ ಸ್ತರಗಳಲ್ಲಿ ನಗು.
ನಿಶ್ಯಬ್ದವಾದ್ದರಿಂದ ನನ್ನ ದ್ವನಿಯು ಸಾಕಷ್ಟು ಗಟ್ಟಿಯಿರಲು ಸಾಕು ಯಾರಿಗ್ಯಾರಿಗೆ ಕೇಳಿಸಿತೊ ಏನೊ ನನ್ನ ಎಡ ಎದುರಿನ ಬರ್ಥ್ ಮೇಲಿಂದ ಮತ್ತೊಂದು ದ್ವನಿ ಪ್ರಾರಂಬವಾಯಿತು
"ಹ್ಹ ಹ್ಹ ಹಾಹ " ಇದು ಬೇರೆ ರಿದಮ್ಮಿನ ನಗು
ಮತ್ತೊಂದು ಮೂಲೆಯಿಂದ ಇನ್ಯಾವುದೊ ದೆವ್ವದರೀತಿಯ ನಗು. ಆ ನಿಶ್ಯಬ್ದದಲ್ಲಿ ವಿವಿದ ನಗುವಿನ ತರಂಗಗಳು ನನ್ನ ಕಿವಿಯಮೇಲೆ ಬೀಳುತ್ತಿರುವಂತೆಯೆ ನಾನು ಮತ್ತಷ್ಟು ಅದುರಿಬಿದ್ದೆ. ಅಷ್ಟರಲ್ಲಿ ನನ್ನ ಬರ್ಥ್ ನ ಗೋಡೆಯ ಆ ಬದಿ ಬರ್ಥ್ ನಿಂದ ಕೀರಲು ಹೆಣ್ಣುದ್ವನಿಯಲ್ಲಿ ಮತ್ತೊಂದು ನಗು ಹೊರಟಿತು
"ಹ್ಹಿಹ್ಹಿ....ಹಿ..." ಇದು ಮೋಹಿನಿಯ ನಗುವ ?
ನನಗೆ ಏಕೊ ಭಯ ಅನ್ನಿಸಿ ತಟ್ಟನೆ ಬರ್ಥ್ ನಲ್ಲಿ ಮಲಗಿ ರಗ್ಗು ಹಾಗು ಬಿಳಿಯ ಬೆಡ್ ಶೀಟನ್ನು ನನ್ನ ಮುಖದ ತುಂಬಾ ಎಳೆದುಕೊಂಡುಬಿಟ್ಟೆ.

2 comments:

  1. ಹ್ಹ ಹ್ಹ ಹ್ಹ ಹ್ಹಾ..:D ನಿಮ್ಮ ಪರಿಸ್ಥಿತಿ ನೆನೆದು ಭಯವಾದರೂ, ನಗುವೇ ಕಡೆಯಲ್ಲಿ ಗೆದ್ದಿದ್ದು.. ಸರಳವಾದ ನಿರೂಪಣೆ, ಕಡೆಯಲ್ಲಿ ನಿದ್ರೆ ಬರದ ನಿಮಗೆ ನಿದ್ರೆ ಬರಿಸಲು ಶವಗಳು ಭೂತಗಳಾಗಿ ಮತ್ತು ಮೋಹಿನಿಯರಾಗಿ ಬರಬೇಕಾಯ್ತು ನೋಡಿ.. ನೈಜವಾದ ನಿರೂಪಣೆ ಮನಗೆಲ್ಲುತ್ತದೆ.. ಹಿಡಿಸಿತ್ತು..

    ReplyDelete
  2. ನಿಜ ಏಕೆಂದರೆ ಅದು ನಗು ಲೇಖನವೆಂದೆ ನಾನು ಬರೆದಿದ್ದು ಅಲ್ಲಿಗೆ ನನ್ನ ಪ್ರಯೋಗ ಯಶಸ್ವಿ, ನಿಮ್ಮ ಮೆಚ್ಚುಗೆಗೆ ವಂದನೆಗಳು ಸಾರ್

    ReplyDelete

enter your comments please