Monday, December 16, 2013

ಗಂಡು ಹುಡುಕಿಕೊಟ್ಟವನು

"ಸೀತಾರಾಮಯ್ಯನವರ ಮನೆ ಇದೇನ?"

ಬೆಳಗ್ಗೆ ಸುದ್ದಿಪತ್ರಿಕೆ ಓದುತ್ತ ಕುಳಿತಿದ್ದೆ , ಮನೆಯಾಕೆ ಏಕೊ ಹೊರಗೆಹೋಗಿದ್ದರು. ಮುಂದೆ ಯಾರದೊ ನೆರಳು ಸರಿದಂತಾಯ್ತು, ತಲೆ ಎತ್ತಿದರೆ, ಬಿಲ್ಲಿನಾಕಾರಕ್ಕೆ ಬೆನ್ನನ್ನು ಬಗ್ಗಿಸಿ ಕೈಮುಗಿದು ವ್ಯಕ್ತಿಯೊಬ್ಬ ನಿಂತಿದ್ದ. ಇನ್ ಶರ್ಟ್ ಮಾಡಿ, ಮೇಲೆ ಟಿಪ್ಪುಸುಲ್ತಾನನ ದಿವಾನರು  ದಾನಕೊಟ್ಟಂತೆ ವಂಶಪಾರಪರ್ಯವಾಗಿ ಬಂದ ಕೋಟನ್ನು ಧರಿಸಿ, ಕೈಯಲ್ಲಿ ಬ್ಯಾಗ್ ಹಿಡಿದು ನಿಂತಿದ್ದ ಅವನನ್ನು ಕಾಣುವಾಗಲೆ ಏಕೊ ’ಅತಿವಿನಯಂ ಧೂರ್ತಲಕ್ಷಣಂ’ ಎನ್ನುವ ಗಾದೆ ಮಾತು ಮನಸಿನಲ್ಲಿ ಬಂದು ಹೋಯಿತು. ಆದರು ಸಂಸ್ಕಾರ ಅವನನ್ನು ನೋಡುತ್ತ ಪ್ರಶ್ನಿಸಿದೆ
"ಯಾರು ಬೇಕಾಗಿತ್ತು ?"  
(ಅಂತರ್ಗತ : ಕೇಳದೆ ಹೇಗೆ ಒಳಗೆ ಬಂದಿರಿ? :   ಮತ್ತೊಂದು ಅಂತರ್ಗತ :ದನದ ಹಾಗೆ )
"ಸಾರ್ ಅಮ್ಮಾವ್ರು  ಬಾ ಅಂತ ಪೋನ್ ಮಾಡಿದ್ರು "
"ಹೌದೆ ಹಾಗಿದ್ದಲ್ಲಿ ಬನ್ನಿ ಬನ್ನಿ " ಎಂದು ಸೋಪ ಕಡೆ ಕೈ ತೋರಿಸಿದೆ
 [" ಛೇ  ಅಮ್ಮಾವ್ರು ಅಂತ ಹೇಳಿದ ತಕ್ಷಣ ಕಡೆ ಪಕ್ಷ ಯಾವ ಅಮ್ಮಾವ್ರು ಅಂತಲು ಕೇಳದೆ ಸ್ವಾಗತಿಸುವ ಗಂಡಸರ ಪರಿ   ಮೂರ್ಖತನ ಅಂತ ನಿಮಗು ಅನ್ನಿಸಲಿಲ್ವ ?" ಇರಲಿ ಬಿಡಿ ]

 ಆದರು ನನ್ನ ಗೊಂದಲ ಹಾಗೆ ಇತ್ತು. ನನ್ನ ಪತ್ನಿ ಈ ಕೊನೆಯ ನವಗ್ರಹವನ್ನು ಏಕೆ ಪೋನ್ ಮಾಡಿ ಕರೆಸಿದ್ದಾಳೆ ಅಂತ ಹಾಗಾಗಿ ಸ್ವಲ್ಪ ವಿನಯವಾಗಿಯೆ ಕೇಳಿದೆ
" ಏನು ವಿಷಯ ಬಂದಿದ್ದು ಅಂತ ಕೇಳ ಬಹುದಾ?"  
"ಇದೇನು ಸಾರ್ ಹೀಗೆ ಹೇಳ್ತೀರಿ ? ನಿಮ್ಮ ಮಗಳಿಗೆ ಮದುವೆ ಮಾಡ್ತೀರಂತಲ್ಲ ಅದಕ್ಕೆ ಗಂಡುಗಳ ವಿವರ ಪೋಟೊ ಬೇಕಂತ ಹೇಳಿದ್ದರು ಹಾಗಾಗಿ ಸಿದ್ದನಾಗಿಯೆ ಬಂದೆ" ಎಂದು ಮುಂದಿನ ಹಲ್ಲು ತೋರಿದ
[ಕ್ಷಮಿಸಿ ಮುಂದಿನ ಮೇಲಿನ ಸಾಲಿನ ಒಂದು ಹಲ್ಲು ಬಿದ್ದು ಹೋಗಿದ್ದು ಅಸಹ್ಯ ಎನಿಸಿತು]

ನನಗೆ ಶಾಕ್ ಆಯಿತು, ನಿನ್ನೆ ರಾತ್ರಿ ಹನ್ನೊಂದು ಗಂಟೆಯಲ್ಲಿ ಮಲಗುವ ಕೋಣೆಯಲ್ಲಿ ಮಾತಾಡಿದ ವಿಷಯ ಬೆಳಗ್ಗೆ ಏಳೂವಾಗಲೆ ಇವನಿಗೆ ಹೇಗೆ ತಲುಪಿತು, ನನ್ನಾಕೆ ಇವನಿಗೆ ಪೋನ್ ಮಾಡಿದ್ದಾಳೊ ಅಥವ ನಮ್ಮ ಮನೆಯ ಮಲಗುವ ಕೋಣೆಯ ಮೂಲೆಯಲ್ಲಿ ಎಲ್ಲಿಯಾದರು ಮೈಕ್ರೋಫೋನ್ ಇಟ್ಟಿದ್ದಾರೊ ಅಂತ. ಹಾಗೆ ನಿನ್ನೆ ರಾತ್ರಿ ನೆನಪಿಗೆ ಬಂತು....

ರಾತ್ರಿ ಮಲಗಲು ಸಿದ್ದನಾಗುತ್ತಿದೆ...
ಸಿದ್ದತೆ ಎಂದರೆ ಬೇರೇನು ಮಹಾ ಕಾರ್ಯಕ್ರಮವಲ್ಲ ... ಟೀವಿ ಮುಂದಿನಿಂದ ಎದ್ದು ಹಾಸಿಗೆವರೆಗು ನಡೆದು ದೊಪ್...
ಅಂತ... ಅರ್ದ ಶತಮಾನ ಕಳೆದ ಈ ದೇಹವನ್ನು ಹಾಸಿಗೆ ಮೇಲೆ ಎಸೆದು ಕೈಕಾಲುಗಳನ್ನು ಸರಿಪಡಿಸಿಕೊಂಡು ಆರಾಮವಾಗಿ ಮಲಗುವುದು...
ಇಂತ ಶುಭಕಾರ್ಯದ ಮದ್ಯೆ ಪತ್ನಿ ತನ್ನ ಗೊಗ್ಗುರು ದ್ವನಿಯಿಂದ ಅಡ್ಡ ಹಾಕಿದಳು..
"ದಿನಾ ನೀವು ಮಲಗೋದು ಇದ್ದೆ ಇದೆ, ಮಗಳ ಬಗ್ಗೆ ಯೋಚನೆ ಮಾಡಿದ್ದೀರಾ?" ಅಂತ
ಮಗಳ ಬಗ್ಗೆ ಯೋಚಿಸಲು ಯಾವ ವಿಷಯವಿದೆ ಇದೇ ಒಂದು ಯೋಚನೆಯಾಯಿತು. ಕಡೆಗೆ ಸೋತು ಕೇಳಿದೆ ,"ಅವಳ ಬಗ್ಗೆ ಯೋಚಿಸಲು ಏನೆ ಇದೆ?" 
ನನ್ನಾಕೆ ಅಸಹನೆಯಿಂದ ನುಡಿದಳು
"ಅವಳು ಮದುವೆಯ ವಯಸ್ಸಿಗೆ ಬಂದಾಗಿದೆ, ಒಂದು ಗಂಡು ಹುಡುಕಬೇಕು ಅಂತ ನಿಮಗನ್ನಿಸಲಿಲ್ವ? ನಿಮ್ಮ ಜವಾಬ್ದಾರಿಗಳು ನಿಮಗೆ ಯಾವುದು ತಿಳಿಯುವುದು ಇಲ್ಲ ಎಲ್ಲ ಬೇರೊಬ್ಬರು ಹೇಳಬೇಕು "
ಅವಳು ಅಂದಿದ್ದು ಸರಿಯೆ ನನಗೆ ಯಾರಾದರು ಹೇಳದಿದ್ದಲಿ ತಿಳಿಯುವದಾದರು ಎಂತು, ಆದರು ಹೇಳಿದೆ
"ಅವಳಿಗೇನೆ ಇನ್ನು ಚಿಕ್ಕ ಮಗು, ಮೊಬೈಲ್ ನಲ್ಲಿ ಆಡಿಕೋಂತ ಕುಳಿತಿರುತ್ತಾಳೆ , ನೋಡಿದರಾಯ್ತು ಬಿಡು" ಎಂದೆ,
ನನ್ನವಳು " ಸರಿಯೆ ಏನು ಆಡಿಕೊಂಡು ಕುಳಿತಿರುತ್ತಾಳೆ ಅಂತ ಎಂದಾದರು ನೋಡಿದ್ದೀರ? ಅದರ ಬರ್ತಿ ಹುಡುಗರ s.m.s.ಗಳು"
"ಇರಲಿ ಬಿಡೆ ಏನೊ ಎಲ್ಲ ಈಗಿನ trend ಅಲ್ವೆ ?  ಸ್ವಲ್ಪ ದಿನ ಹಾಗಿರ್ತಾರೆ " ಅಂದೆ , ಏನೊ generation ಗ್ಯಾಪನ್ನು ಕಡಿಮೆಗೊಳಿಸುವ ಅದುನಿಕ ಮನೋಭಾವದ ವಯಸ್ಕನಂತೆ.
"ಸರಿಯೆ ಇರಲಿ ಬಿಡಿ ಅವಳು ಯಾರಿಗಾದರು , com soon ltus rnwy ಅಂತ ಮೆಸೇಜ್ ಮಾಡಿ ಓಡಿ ಹೋಗಲಿ ಆಗ ತಿಳಿಯುತ್ತೆ " ಅಂದಳು , ನಾನು ಗಾಭರಿಯಾಗಿ ಎದ್ದು ಕುಳಿತೆ
"ಏನೆ ಹೇಳ್ತೀಯೆ ಯಾರೆ ಅವನು ಕಾಲು ಮುರಿತೀನಿ " ಅಂತ ದ್ವನಿ ಏರಿಸಿದೆ , ಅವಳು
"ಸುಮ್ಮನಿರಿ ನಿಮ್ಮ ಪೌರುಷಕ್ಕೇನು ಕಡಿಮೆ ಇಲ್ಲ ಬಿಡಿ, ನಾನು ಹೇಳಿದ್ದು ಹಾಗಾಗೊಕ್ಕೆ ಮುಂಚೆ ಹುಡುಗನ್ನ ಹುಡುಕಿ ಅಂತ ಹೇಳಿದ್ದು ಅಂದಳು" , ನನಗೆ ಸ್ವಲ್ಪ ಸಮಾದಾನ ಎನಿಸಿ ಕೂತು
"ಆಗಲಿ ಬಿಡು ಅದಕ್ಕೇನು ಹುಡುಕಿದರಾಯ್ತು " ಅಂತ ಅಂದು , ಮುಸುಕು ದರಿಸಿ ಮಲಗಿ ನೆಮ್ಮದಿಯಾಗಿ ನಿದ್ದೆಗೆ ಜಾರಿದೆ....
ಬೆಳಗ್ಗೆ ಆ ಮದುವೆಯ ವಿಷಯವೆ ನನ್ನ ತಲೆಯೊಳಗಿರದೆ, ಪಾಪ ಯಡ್ಡಿ ಮತ್ತು ಕುಮಾರಸ್ವಾಮಿಗಳು ಧರ್ಮಸ್ಥಳದಲ್ಲಿ ಮಾಡಿದ ಗುಟ್ಟಾದ ಆಣೆಗಳ ಬಗ್ಗೆ ನನ್ನ ಮನ ಚಿಂತಿಸುತ್ತಿರುವಾಗ . ...ಮೊಸರನ್ನದಲ್ಲಿ ಕಲ್ಲು ಸಿಕ್ಕಿದಂತೆ ಈ ಮುದುಕ ನನ್ನ ಎದುರಿಗೆ ವಕ್ರಿಸಿದ್ದ....
ಬಹುಷಃ ನನ್ನ ಸ್ವಭಾವದ ಪರಿಚಯವಿದ್ದ ನನ್ನಾಕೆ ಇವನಿಗೆ ಬೆಳಗ್ಗೆಯೆ ಪೋನ್ ಮಾಡಿರಬಹುದು, ಅಲ್ಲಿಗೆ ಅವಳು ಮನಸ್ಸು ಮಾಡಿದ್ದಾಳೆ ಅಂದರೆ ಮಗಳ ಮದುವೆ ಆದಂತೆ ಅನ್ನಿಸಿತು.
ಸರಿ ಪಾಪ ವಯಸ್ಸಾದವ ಬಂದಿದ್ದಾರೆ ಅನ್ನಿಸಿ ಕೇಳಿದೆ "ಕಾಫಿ ಕುಡಿಯುತ್ತೀರ ?" ಅಂತ ಕೇಳಿದೆ
ಅವರು ಆಸೆಯಿಂದ ತಲೆ ಆಡಿಸಿ " ಬೆಳಗ್ಗೆ ಬೇಗ ಹೊರಟಿದ್ದು ತಿಂಡಿನೂ ಮಾಡಲಿಲ್ಲ ಅರ್ಜೆಂಟ್ ಹೊರಟುಬಿಟ್ಟೆ" ಎಂದರು.
"ಹಾಳಾಗಿ ಹೋಗಲಿ " ಅಂತ ಅಡಿಗೆ ಮನೆಯ ಒಳಗೆ ಹೋಗಿ ನನಗೆ ಅಂತ ನನ್ನಾಕೆ ಇಟ್ಟಿದೆ ಇಡ್ಲಿಯನ್ನು ಪ್ಲೇಟಿಗೆ ಹಾಕಿ, ತಂದು ಕೊಟ್ಟೆ. ಅವರು ಅದನ್ನು ಆತುರವಾಗಿಯೆ ಮುಗಿಸುತ್ತಿದ್ದಾಗ ಕಾಫಿ ಸಿದ್ದ ಪಡಿಸಿ ತಂದು ಅವರಿಗೆ ಕೊಟ್ಟು ನಾನು ಒಂದು ಲೋಟ ತೆಗೆದುಕೊಂಡು
"ಈಗ ಪೋಟೊ ಎಲ್ಲ ತಂದ್ದಿದ್ದೀರ ನೋಡಬಹುದಾ? "ಎಂದೆ
"ಓಹೋ ಎಲ್ಲ ಸಿದ್ದ ಸಾರ್ ... ನಿಮ್ಮವರು ಬರಲಿ ಒಟ್ಟಿಗೆ ತೋರಿಸಿಬಿಡ್ತೀನಿ " ಅಂದ
"ಎಲಾ ಮುದುಕ" ನನ್ನ ಪಾಲಿನ ಇಡ್ಲಿಯನ್ನು ತಂದು ಕೊಟ್ಟು ಕಾಫಿ ಕೊಟ್ಟರು ನನಗೆ ಯಾವ ಬೆಲೆಯು ಇಲ್ಲ ಅಂತ ಕೋಪ ಬಂದಿತು. ಅದೇ ಸಮಯ ನನ್ನವಳು ಹೊರಗಿನಿಂದ ಬಿರುಗಾಳಿಯಂತೆ ಒಳಗೆ ಬಂದಳು ಕೈಯಲ್ಲಿ ಎಂತದೊ ಬ್ಯಾಗ್ ಗಳು.
ಅವಳನ್ನು ನೋಡುತ್ತಲೆ , ಮುದುಕ ಗಾಭರಿಯಾಗಿ ಎದ್ದು ನಿಂತ , ಅವನನ್ನು ಕಾಣುತ್ತಲೆ ಕೋಪಗೊಂಡ ನನ್ನಾಕೆ
"ನಿಮ್ಮನ್ಯಾರಿ ಇಲ್ಲಿ ಕರೆದಿದ್ದು ಇಲ್ಲಿ ಏಕೆ ಬಂದಿರಿ ?" ಅಂತ ಅರ್ಭಟಿಸಿದಳು.
ಆತ ನಡುಗುತ್ತ "ಬ್ಬೆ ಬ್ಬ್ ಬ್ಬೆ .. ತ್ತ ತ್ತ ತ್ತ " ಎನ್ನುತ್ತ ಏನೇನೊ ತೊದಲಿದರು
ನಾನು ದೈರ್ಯವಾಗಿ "ಅಲ್ವೆ ನೀನೆ ಹೇಳಿದ್ದೆಯಲ್ಲಿ ಮಗಳಿಗೆ ಮದುವೆ ಮಾಡೋದು ಅಂತ , ಅದಕ್ಕೆ ಪಾಪ ಪೋಟೊ ಜಾತಕ ಹಿಡಿದು ಬಂದಿದ್ದಾರೆ " ಎಂದೆ
ಅದಕ್ಕವಳು ’ ಇವನಾ? ಇವನೆಂತದು ಗಂಡು ನೋಡೋದು ನನಗೆ ಗೊತ್ತಿಲ್ಲವ , ಇವನು ಗಂಡು ಹುಡುಕೊ ಬದಲು ಮಗಳು ಬೇಕಾದರೆ ಯಾರ ಜೊತೆಗಾದರು ಓಡಿ ಹೋಗಲಿ?" ಅಂದವಳೆ ಅವರತ್ತ ತಿರುಗಿ
" ಏಳಯ್ಯ ಮೇಲೆ ನೀನೇನು ಗಂಡು ಹುಡುಕಬೇಡ ಇನ್ನು ನಮ್ಮ ಮನೆ ಕಡೆ ತಲೆಯು ಹಾಕಬೇಡ ಹೊರಡುತ್ತಿರು " ಅಂದಳು. ಅವನು ಯಾವ ಮಾತು ಆಡದೆ ಎದ್ದು ಬ್ಯಾಗ್ ಹಿಡಿದು ಹೊರಟು ಹೋದ
"ಅಲ್ಲವೆ ಪಾಪ ಅವನನ್ನು ಏಕೆ ಓಡಿಸಿದೆ ಪಾಪ ವಯಸ್ಸಾದವನು ಹಾಗೆ ಅಂದೆಯಲ್ಲ , ನೀನೆ ಅಲ್ಲವ ಅವನನ್ನು ಫೋನ್ ಮಾಡಿ ಕರೆದಿದ್ದು " ಎಂದೆ. ಅವಳ ಕೋಪ ಇನ್ನು ಇಳಿದಿಲ್ಲ
"ಅವನ ವಿಷಯ ಎತ್ತ ಬೇಡಿ ಅವನೂಬೇಡ , ಅವನು ಗಂಡು ಹುಡುಕುವುದು ಬೇಡ, ಅವನನ್ನು ನಾನೇಕೆ ಕರೆಯಲಿ ಎಲ್ಲೊ ಅಡ್ರೇಸ್ ತಪ್ಪಿ ಬಂದಿರಬೇಕು " ಎಂದಳು
"ಇರಬಹುದು ಆದರು ಅವನ ಬಗ್ಗೆ ನಿನಗೇಕೆ ಅಷ್ಟು ಕೋಪ ಅವನು ನಿನಗೆ ಗೊತ್ತಾ?" ಎಂದೆ
"ಗೊತ್ತಿಲ್ಲದೆ ಏನು ಹಾಳಾದವನು ಇಪ್ಪತ್ತೆರಡು ವರ್ಷದ ಹಿಂದೆ ನನಗೆ ಗಂಡು ಹುಡುಕಿಕೊಟ್ಟವನು ಅವನೆ ಅಲ್ವೆ?"
ಎನ್ನುತ ಒಳಗೆ ಹೋದಳು.
ನಾನು ಬೆಪ್ಪನಂತೆ ಮತ್ತೆ ಪೇಪರ್ ಹಿಡಿದು ಕುಳಿತೆ.
ಪಾಪ ಕಡೆಯ ನವಗ್ರಹ ಕೇಳಿದ ಮೊದಲ ಪ್ರಶ್ನೆ ನೆನಪಿಗೆ ಬಂತು
"ಸೀತಾರಾಮಯ್ಯನವರ ಮನೆ ಇದೇನ?"
  ಛೇ!  ಅವನು ಕೇಳಿದ್ದು ಸೀತಾರಾಮಯ್ಯನವರ ಮನೆ , ನಾನು ಶಾಂತರಾಮಯ್ಯನಲ್ಲವೆ . ನಾನೆ ಮತ್ತೆ ಎಡವಟ್ಟು ಮಾಡಿಕೊಂಡಿದ್ದೆ.
 

2 comments:

  1. 5*
    ಮೊದಲು ಮನಸೆಳೆದಿದ್ದು, ಕೈಲಾಸಂ ನೆನಪಿಸುವ ಪಾತ್ರಗಳ ನಡುವಿನ ಸಂಭಾಷಣೆಯಲ್ಲಿನ ಚುರುಕು ಮತ್ತು ಸಹಜವಾದ ನಡುವಳಿಕೆ.
    ತಮಗೆ ನಾಟಕ ಬರೆಯುವ ಶೈಲಿಯಲ್ಲೂ ಕೈಕುದುರಿರುವುದು ಇಲ್ಲಿ ಕಾಣಬಹುದಾಗಿದೆ.
    ಮಡದಿ ಸಿಟ್ಟಿಗೆದ್ದ ಕಾರಣವೇ ಅಮೋಘ, ಅದೇ ನಗೆ ಉಕ್ಕಿಸಿ ಬಿಡುತ್ತದೆ.
    ನಮಗಾಗಿ ನೀವೇಕೆ ಒಂದು ನಾಟಕ ಬರೆದುಕೊಡಬಾರದು, ಬ್ಲಾಗಿನಲ್ಲಿ?

    ReplyDelete
  2. ಮೆಚ್ಚುಗೆ ಹಾಗು ಪ್ರೋತ್ಸಾಹಕ್ಕಾಗಿ ನಮನಗಳು.
    ನಾಟಕ ಬರೆಯಬಹುದು ಸರಿಯಾದ ವಿಷಯ ಸಿಕ್ಕರೆ

    ReplyDelete

enter your comments please