ಜೀವನ ದರ್ಶನ
==========
ಊರಿಗೆ ಬಂದು ಇಪ್ಪತ್ತು ವರ್ಷಗಳೆ ಕಳೆದಿತ್ತು. ಮೊದಲಿಗೆ ಅಪ್ಪ ಅಮ್ಮನಿರುವವರೆಗೂ ಇದ್ದ ಆಕರ್ಷಣೆ ಈಗೇನು ಇರಲಿಲ್ಲ. ಅಲ್ಲದೆ ನಾನು ಊರು ಬಿಟ್ಟು ಊರೂರು ಸುತ್ತತ್ತ ಹೆಂಡತಿ ಮಕ್ಕಳೊಡನೆ ಓಡಾಡಿದ್ದೆ ಆಯಿತು, ಸರಕಾರಿ ಚಾಕರಿಯೆ ಹಾಗೆ ಬಿಡಿ. ಈಗ ಮತ್ತೆ ಕರ್ನಾಟಕಕ್ಕೆ ಬಂದ ನಂತರ ಬೆಂಗಳೂರಿನಲ್ಲಿ ಮನೆ ಮಾಡಿ ಆರು ತಿಂಗಳಾಗುತ್ತ ಬಂದು, ಹುಟ್ಟಿದ ಊರನ್ನು ನೋಡಬೇಕೆಂಬ ಆಸೆ ಪ್ರಭಲವಾಯಿತು. ಅಲ್ಲಿ ಇದ್ದವನು ಅಣ್ಣನೊಬ್ಬನೆ. ಒಂದಿಷ್ಟು ವ್ಯಾಪಾರ ಅದು ಇದು ಎಂದು ಒದ್ದಾಡಿಕೊಂಡಿದ್ದ. ಮಕ್ಕಳನ್ನು ಚೆನ್ನಾಗಿ ಓದಿಸಿದ್ದ. ಮಗಳಿಗೆ ಮದುವೆ ಆಯಿತು , ಆದರೂ ಅಂತಹ ಹೇಳಿಕೊಳ್ಳುವ ಸ್ಥಿತಿಯಲ್ಲೇನು ಇರಲಿಲ್ಲ, ಊಟ ತಿಂಡಿಗೆ ಕೊರತೆ ಇಲ್ಲ ಅನ್ನುವ ಹಾಗಿದ್ದ.
ನಾನೊಬ್ಬನೆ ಹೊರಟಿದ್ದೆ ಊರಿಗೆ, ಹೆಂಡತಿ ಮಗ ಇಬ್ಬರೂ ಮುಂದಿನ ಸಾರಿ ಹೋಗುವಾಗ ಬರುವದಾಗಿ ತಿಳಿಸಿದ್ದರು, ಒಬ್ಬನೆ ಬಸ್ ಹತ್ತಿ ಊರು ಸೇರಿದೆ. ಅಣ್ಣ ಅತ್ತಿಗೆಯರಂತು ತುಂಬಾನೆ ಖುಶಿಪಟ್ಟರು , ಅಣ್ಣನ ಗಂಡು ಮಕ್ಕಳಿಬ್ಬರು ಆಗಲೇ ದೊಡ್ಡವರು, ಮೊದಲಿನಂತೆ ಚಿಕ್ಕಪ್ಪ ಚಿಕ್ಕಪ್ಪ ಎಂದು ಹಿಂದೆ ಸುತ್ತುವ ವಯಸ್ಸೇನಲ್ಲ ಆದರು ಬಳಿ ಕುಳಿತು ಹಿಂದಿನ ಸಲುಗೆಯಿಂದಲೇ ಮಾತನಾಡಿಸಿದರು.
ಮರುದಿನ ಊರು ಸುತ್ತುವ ಕೆಲಸವಾಯಿತು, ಇಪ್ಪತ್ತು ವರುಷ ಕಳೆದರು ಊರಿನಲ್ಲಿ ಅಂತಹ ಬದಲಾವಣೆ ಏನಿರಲಿಲ್ಲ, ಕೆಲವು ರಸ್ತೆಗಳಂತು ಅಲ್ಲಿ ಹಾಕಿದ ಕಲ್ಲು ಅಲ್ಲೆ ಅನ್ನುತ್ತಾರಲ್ಲ ಹಾಗೆ ಬಿದ್ದಿದ್ದವು. ಇದ್ದ ಮನೆಗಳಲ್ಲಿ ಕೆಲವು ಬಣ್ಣ ಕಳೆದುಕೊಂಡಿದ್ದರೆ, ಮತ್ತೆ ಕೆಲವು ಹೊಸರೂಪ ಪಡೆದುಕೊಂಡಿದ್ದವು.
ಗೆಳೆಯರನ್ನೆಲ್ಲ ಹುಡುಕಿದೆ. ಅವರು ಹಿಂದಿನದೆಲ್ಲ ನೆನೆಸಿಕೊಂಡು ಸಾಕಷ್ಟು ಮಾತನಾಡಿದರು. ಒಂದಿಬ್ಬರು ಮಾತ್ರ ಊರು ಬಿಟ್ಟು ಯಥಾಪ್ರಕಾರ ಬೆಂಗಳೂರು ಸೇರಿದ್ದರು, ಅವರ ವಿಳಾಸ ಫೋನ್ ನಂಬರ್ ಗಳು ಸಿಕ್ಕಿದವು, ಬೆಂಗಳೂರಿಗೆ ಹಿಂದಿರುಗಿದ ನಂತರ ಅವರನ್ನು ಹಿಡಿದು ಮಾತನಾಡಿಸುವ ಯೋಚನೆ ಇತ್ತು. ಸಂಜೆಯವರೆಗೂ ಸುತ್ತಾಟ , ರಾತ್ರಿ ಭರ್ಜರಿ ಊಟ , ನಿದ್ದೆ ಅಣ್ಣನ ಮನೆಯಲ್ಲಿ
ಮರುದಿನ ಅಣ್ಣನ ಮನೆಯ ಹತ್ತಿರವೆ ಇದ್ದ ಮತ್ತೊಬ್ಬ ಗೆಳೆಯ ದೇವರಾಜ್ ಅಂತ ಅವನನ್ನು ಹುಡುಕಿ ಹೋದೆ. ನಾನು ದೇವರಾಜನು ಹೈಸ್ಕೂಲು ಅಲ್ಲದೆ ಕಾಲೇಜು ಸಹ ಜೊತೆಯಲ್ಲಿಯೆ ಓದಿದವರು. ಎಮ್ಮೆಸ್ಸಿ ಪದವಿ ಪಡೆದು ನಾನು ಕೆಲಸ ಹುಡುಕಿ ಹೊರಟರೆ ಅವನಾದರು ಬಿಎಸ್ಸಿಗೆ ಅವನು ಓದು ನಿಲ್ಲಿಸಿದ , ಊರು ಬಿಡಲು ಒಪ್ಪಲೇ ಇಲ್ಲ, ಕೆಲಸಕ್ಕೆ ಸೇರಲು ಇಷ್ಟಪಡಲಿಲ್ಲ.
ಅವನು ನಾನ ಕಾರಣ ಕೊಡುತ್ತಿದ್ದ, ನನಗೆ ಬಂದಿರುವ ನಂಬರಿಗೆ ಎಂತಹ ಕೆಲಸ ಸಿಕ್ಕೀತು, ಸರ್ಕಾರಿ ಚಾಕರಿ ಎಂದರೆ ಅಷ್ಟೇ ಜೀತದ ಕೆಲಸದಂತೆ, ಕೊಡುವ ಸಂಬಳಕ್ಕೆ ಎಲ್ಲರ ಮಾತು ಕೇಳಬೇಕು ಯಾರಿಗೆ ಬೇಕು ಅಂತೆಲ್ಲ. ಆದರೆ ನಿಜ ಅಂದರೆ ಅವನಿಗೆ ಊರು ಬಿಡಲು ಇಷ್ಟವಿರಲಿಲ್ಲ ಅನ್ನುವುದು ಸತ್ಯ.
ಅವನು ಜಾತಿಯಿಂದ ಚಿನ್ನ ಬೆಳ್ಳಿ ಮಾಡುವ ಆಚಾರಿಗಳು ಅನ್ನುವರಲ್ಲ ಆ ಪಂಗಡ. ಆದರೆ ಅವರ ಅಪ್ಪನಾಗಲಿ ಯಾರೆ ಆಗಲಿ ಚಿನ್ನಬೆಳ್ಳಿಯ ವ್ಯಾಪಾರ ಮಾಡಿದ್ದು ಕಂಡಿರಲಿಲ್ಲ. ಅವನಾದರು ಅಷ್ಟೆ ಆಭರಣ ಮುಂತಾದ ವಿಷಯಗಳು ಅವನಿಗೆ ತಿಳಿದೇ ಇರಲಿಲ್ಲ. ಅವರ ತಂದೆಯಾದರೋ ಊರಿನ ಗ್ರಾಮದೇವತೆಯ ಗುಡಿಯಲ್ಲಿ ಪೂಜೆ ಮಾಡಿಕೊಂಡಿದ್ದರು, ಜೊತೆ ಜೊತೆಗೆ ಪ್ರೈಮರಿ ಶಾಲೆಯಲ್ಲಿ ಉಪಾದ್ಯಾಯರು. ಕಡೆಯಲ್ಲೊಮ್ಮೆ ಟ್ರಾನ್ಸಫರ್ ಅದು ಇದು ಅನ್ನುವಾಗ ಶಾಲೆಯ ಕೆಲಸ ಬಿಟ್ಟು ಬರೀ ದೇವಾಲಯದ ಪೂಜೆ ಅಲ್ಲದೆ ಮನೆಯ ಹತ್ತಿರ ಸಣ್ಣದೊಂದು ದಿನಸಿ ಅಂಗಡಿ ಅಷ್ಟೆ.
ದೇವಾರಾಜಾಚಾರಿಗೆ ಯಾವುದೇ ಕೆಲಸ ಕೈ ಹತ್ತಲಿಲ್ಲ, ನಾನು ಕಡೆಯಲ್ಲಿ ನೋಡುವಾಗ ಅವನು ನದಿಯ ದಡದ ಹತ್ತಿರದಲ್ಲಿದ್ದ ಸಣ್ಣ ದೇವಾಲಯದಲ್ಲಿ ಪೂಜೆಯ ಕೆಲಸ ವಹಿಸಿಕೊಂಡಿದ್ದ. ನಾನು ಅಲ್ಲಿಗೆ ಹೋಗಿದ್ದೆ
"ಇದೇನೊ ನಿನ್ನ ಅವಸ್ಥೆ ? , ನನ್ನ ಜೊತೆ ನೀನು ಡಿಗ್ರಿ ಮಾಡಿದ್ದಿ ಅದೂ ಸಹ ಸೈನ್ಸ್ ನಲ್ಲಿ, ಎಂತಾದೋ ಒಂದು ಕೆಲಸ ಹೊಂಚಿಕೊಂಡು ಸುಖವಾಗಿ ಇರದೆ , ಪೂಜೆ ಅಂತ ಓದದವರ ತರ ಓಡಾಡ್ತಿಯಲ್ಲ, ಇದರಿಂದ ಜೀವನ ನಿರ್ವಹಣೆ ಹೇಗೋ ಸಾದ್ಯ?" ಎಂದರೆ
"ಏನು ಓದಿದವರೆಲ್ಲ ಸರ್ಕಾರಿ ಕೆಲಸಕ್ಕೆ ಹೋಗಲೇ ಬೇಕೆಂದು ನಿಯಮವಾ? ನೀನಂತು ಮಾರ್ಕ್ಸ್ ತೆಗೆದಿದ್ದಿ, ಅಲ್ಲದೆ ನಿಮ್ಮವರಿಗೆ ಸರ್ಕಾರಿ ಕೆಲಸ ಎಂದರೆ ಕೈ ಹತ್ತುತ್ತೆ ಬಿಡು, ನನ್ನ ಮನಸಿಗೇಕೊ ಅದು ಒಗ್ಗುವದಿಲ್ಲ, ಸ್ವತ್ರಂತ್ರವೋ ಸ್ವರ್ಗ ಲೋಕವೋ ಅಂತ ಕೇಳಿಲ್ಲವೇ? ಜೀವನ ಸಾಗಿಸಲು ಇಂತದೇ ಅಂತ ಏನಿಲ್ಲ , ನಮಗೆ ಹಿತವೆನಿಸುವ ಕೆಲಸ ಒಂದು ಮಾಡಿದರಾಯಿತು " ಎನ್ನುತ ವೇಧಾಂತ ಹೇಳಿದ್ದ.
ಅದೆಲ್ಲ ನಡೆದು ಇಪ್ಪತ್ತು ವರ್ಷ ಆಯಿತು. ಹಿಂದಿನದು ನೆನೆಯುತ್ತ ಮನೆಯ ಹತ್ತಿರ ಹೋದರೆ , ಮನೆಯಲ್ಲಿ ಬೇರಾರೊ ಇದ್ದರು, ಬಾಡಿಗೆಗೆ!. ಅಲ್ಲಿದ್ದ ದೇವರಾಜಚಾರ್ ಎಲ್ಲಿ ಎಂದು ವಿಚಾರಿಸಿದೆ, ಅವನೀಗ ಊರ ಹೊರಗಿನ ನದಿ ಹತ್ತಿರದ ದೇವಾಲಯದ ಪಕ್ಕದಲ್ಲಿ ಕಟ್ಟಿರುವ ಮನೆಗಳಲ್ಲಿಯೆ ಇರುವನಂತೆ, ಸರಿ ನನಗೆ ಕಾಣದ ಊರೇನು ಅಲ್ಲವಲ್ಲ ಆ ದಾರಿ ಹಿಡಿದೆ, ನದಿಯನ್ನು ನೋಡಿದ ಹಾಗು ಆಯಿತಲ್ಲ.
ಏಕ್ ಧಂ ಎಲ್ಲ ಬದಲಾವಣೆ, ಗುರುತು ಹಿಡಿಯುವುದೆ ಕಷ್ಟ ಅನ್ನುವ ಹಾಗೆ. ಮೊದಲ ನದಿ ದಡದಲ್ಲಿದ್ದ ದೊಡ್ಡ ಅರಳಿ ಮರ,ನದಿಯ ಒಳಗೆ ಇಳಿಯಲು ಕಲ್ಲಿನ ಮೆಟ್ಟಿಲುಗಳು, ಒಂದು ನವಗ್ರಹ ದೇವಾಲಯ, ಊರ ಮುಂದಿನ ಹನುಮನ ದೇವಾಲಯ ಯಥಾ ಪ್ರಕಾರ ಅಷ್ಟೆ ಇದ್ದಿದ್ದು. ಅಂತಾ ಜನ ಬರುವ ಜಾಗವೇನಲ್ಲ. ಸಂಜೆ ದನ ಕಾಯುವ ಹುಡುಗರು ಯಾರಾದರು ಇದ್ದರೆ ಬಂದು ಹೋದಾರು, ಬೆಳಗ್ಗೆ ಯಾರಾದರು ಮದುವೆಯಾಗದ ಹೆಣ್ಣು ಮಕ್ಕಳೊ, ಪರೀಕ್ಷೆ ಪಾಸು ಮಾಡದ ಗಂಡು ಹುಡುಗರೋ ಇದ್ದರೆ, ಎಳ್ಳು ದೀಪ ಹಚ್ಚುತ್ತೇನೆ ಅಂತ ಬಂದು ಹೋಗುತ್ತಿದ್ದರು.
ಈಗ ದೇವಾಲಯ ದೊಡ್ಡದಾಗಿ ಬೆಳೆದಿತ್ತು, ಮುಂದೆ ದೊಡ್ಡ ರಾಜಗೋಪುರ, ಇದ್ದ ಅರಳಿ ಮರ ದೇವಾಲಯದ ಒಳಗೆ ಸೇರಿ ಹೋಗಿತ್ತು, ನದಿಯ ಪಾತ್ರವೆ ಕಾಣದು , ಎರಡು ಬದಿಗಳಲ್ಲಿ ಹೊಸ ಹೊಸ ಕಟ್ಟಡಗಳು, ಹೋಟೆಲ್ ಗಳು, ಸಾಲು ಅಂಗಡಿಗಳು. ಖಾಲಿ ಜಾಗದಲ್ಲಿ ನಿಂತ ಸಾಲು ಸಾಲು ಕಾರ್ ಹಾಗು ಇತರೇ ವಾಹನಗಳು. ನಾನು ದಂಗಾಗಿ ನಿಂತೆ. ಇದು ನಾನು ನೋಡಿದ್ದ , ನಾನು ಆಟವಾಡಿಕೊಂಡು ಬೆಳೆದ ಜಾಗವೆ ? ಎಂದು.
ದೇವಾಲಯದ ಒಳಗೆ ಹೋಗುತ್ತ, ನೋಡಿದೆ, ಶ್ರೀ ಶನೀಶ್ವರ ಕ್ಷೇತ್ರ ಎಂದು ದೊಡ್ಡದಾದ ಭೋರ್ಡ್ ಗಮನ ಸೆಳೆಯಿತು. ಇದು ಏನು ಕತೆ ಅರ್ಥವಾಗಲಿಲ್ಲ. ಸರಿ ಇಲ್ಲಿ ನನ್ನ ಸ್ನೇಹಿತನನ್ನು ಹುಡುಕುವುದು ಹೇಗೆ. ಬಾಗಿಲಲ್ಲಿ ಜನರನ್ನು ನಿಯಂತ್ರಿಸಲು ನಿಂತಿದ್ದ ಗಾರ್ಡ್ ಒಬ್ಬನನ್ನು ಕೇಳಿದೆ
"ಇಲ್ಲಿ ಮೊದಲು ಪೂಜೆ ಮಾಡುತ್ತಿದ್ದರು ದೇವರಾಜಾಚಾರ್ ಅಂತ, ಈಗ ಎಲ್ಲಿ ಸಿಗ್ತಾರೆ?"
ಆತ ನನ್ನ ಮುಖವನ್ನು ಸ್ವಲ್ಪ ಆಶ್ಚರ್ಯದಿಂದಲೇ ನೋಡಿ, 'ನಿಮಗೆ ಅವರು ಪರಿಚಯವಾ? ' ಎಂದು ಮತ್ತೆ ಕೇಳಿದ
"ನನ್ನ ಬಾಲ್ಯ ಸ್ನೇಹಿತ, ಮೊದಲು ಇಲ್ಲಿದ್ದ ಗುಡೀಲಿ ಪೂಜೆ ಮಾಡ್ತಾ ಇದ್ದರು, ಈಗ ಇಲ್ಲಿಯೆ ಇದ್ದಾರೆ ಎಂದರು"
ನಾನು ಅನುಮಾನದಿಂದ ಹೇಳಿದೆ. ಅದಕ್ಕವನು
"ಸೀದ ಒಳಗೆ ಹೋಗಿ, ದೇವಾಯದ ಒಳಗೆ ಇರುತ್ತಾರೆ "
ಅಲ್ಲಿ ನಿಂತದ್ದ ಕ್ಯೂ ತಪ್ಪಿಸಿ ನನ್ನನ್ನು ಬಲಬಾಗದಿಂದ ಪ್ರತ್ಯೇಕವಾಗಿ ಬಿಟ್ಟ, ನಾನು ಪರವಾಗಿಲ್ಲವೆ ನನ್ನ ಸ್ನೇಹಿತನ ಹೆಸರಿಗೆ ಒಳ್ಳೆ ಬೆಲೆಯಿದೆ ಎಂದು ಕೊಳ್ಳುತ್ತಲೆ ಒಳಗೆ ಹೋದೆ. ಅಲ್ಲಿ ಜನರು ಸತತವಾಗಿ ದೇವರ ಮುಂದೆ ಸರಿದು , ಕೈಮುಗಿದು ಹೋಗುತ್ತಿದ್ದರು, ಪೂಜೆಗೆ ಟಿಕೇಟ್ ಮಾಡಿಸಿದವರು, ಪಕ್ಕಕ್ಕೆ ನಿಂತರೆ ಒಳಗಿನಿಂದ ಬಂದ ಮರಿ ಪುರೋಹಿತರುಗಳು, ಅವರ ಕೈಲಿ ಸಂಕಲ್ಪ ಮಾಡಿಸಿ , ಅವರ ಕೈಲಿದ್ದ ಪೂಜಾ ಸಾಮಾಗ್ರಿಗಳನ್ನು ತೆಗೆದುಕೊಂಡು ಒಳಹೋಗಿ ಮತ್ತೆ ಪೂಜೆ ಮಾಡಿ ಪ್ರಸಾದ ತಂದು ಕೊಡುತ್ತಿದ್ದರು, ಪೂಜೆ ಮುಗಿಸಿದವರು, ತಮ್ಮ ಕೈಲಾದ ದಕ್ಷಿಣೆ ಅರ್ಪಿಸಿ ಹೊರಹೋಗುತ್ತಿದ್ದರು.
ಗಮನಿಸಿದೆ, ಬರುವವರೆಲ್ಲ ನೂರು ರೂಪಾಯಿ ನೋಟುಗಳಲ್ಲೆ ದಕ್ಷಿಣೆ ಕೊಡುತ್ತಿದ್ದರು, ಸಾಲಿನಲ್ಲಿ ಎಲ್ಲರ ಕೈಲೂ ಒಂದು ಲೀಟರ್ ನಷ್ಟು ಎಳ್ಳೆಣ್ಣೆ ಪ್ಯಾಕೆಟ್ , ಹಾಗು ಹೂವಿನ ಹಾರ. ನಾನು ನಿಂತಂತೆ ಒಳಗಿನಿಂದ ಬಂದ ಒಬ್ಬಾತ ನನ್ನನ್ನು ಕೇಳಿದ,
"ಏನು ಬೇಕು ಸುಮ್ಮನೆ ಏಕೆ ನಿಂತಿರುವಿರಿ?" ಎಂದು
ನಾನು ದೇವರಾಜಚಾರ್ ನನ್ನು ನೋಡಬೇಕೆಂದು ತಿಳಿಸಿದೆ, ನನಗಾಗಲೆ ನನ್ನ ಸ್ನೇಹಿತ ಮನಸಿನಿಂದ ಮರೆಯಾಗಿದ್ದ. ನಾನು ಹೇಳಿದ ಒಂದೆರಡು ನಿಮಿಷದಲ್ಲಿ, ದೀರ್ಘ ಗಡ್ಡದಾರಿ ವ್ಯಕ್ತಿಯೊಬ್ಬರು ಹೊರಬಂದು ನನ್ನನ್ನು ಅನುಮಾನದಿಂದ ದಿಟ್ಟಿಸಿದರು, ನನಗೂ ಸ್ವಲ್ಪ ತಡಕಾಟವಾಯಿತು, ಇದೊಳ್ಳೆ ಕತೆಯಾಯಿತಲ್ಲ ಎಂದು, ಕ್ರಮೇಣ ಹೊಳೆಯಿತು, ಆ ಗಡ್ಡದಾರಿ ವ್ಯಕ್ತಿಯೆ ನನ್ನ ಸ್ನೇಹಿತ ದೇವರಾಜಚಾರ್ ಎಂದು. ಅವನೂ ನನ್ನ ಗುರುತು ಹಿಡಿದ.
"ನೀನು ನಂಜುಂಡ ಅಲ್ಲವ ? ಯಾವಾಗ ಬಂದೆ ? ಒಂದು ಕೆಲಸ ಮಾಡು ಸ್ವಲ್ಪ ಹೊತ್ತು ಕಾಯುತ್ತೀಯ, ಒಂದು ಹತ್ತು ನಿಮಿಷ, ಇಲ್ಲಿ ಮಾತನಾಡಲು ಆಗುವದಿಲ್ಲ, ಹೊರಗೆ ಬರುತ್ತೇನೆ ವಿರಾಮವಾಗಿ ಮಾತನಾಡಬಹುದು. ನೀನು ಹೊರಗೆ ಪೂಜಾ ಕೌಂಟರ್ ಇದೆಯಲ್ಲಿ ಅಲ್ಲಿ ನಿಂತಿರು ಬಂದೆ" ಎಂದ.
ನನ್ನ ಜೊತೆ ಮಾತನಾಡುವಾಗಲೆ ಗಮನಿಸಿದೆ, ಬಹಳ ಜನ ಭಕ್ತಿಯಿಂದ ಅವನನ್ನು ದಿಟ್ಟಿಸುತ್ತಿದ್ದರು. ಕೆಲವರು ನನ್ನ ಕಣ್ಣ ಮುಂದೆಯೆ ಅವನ ಪಾದಗಳಿಗೆ ನಮಸ್ಕಾರ ಮಾಡಿದರು. ಆಗೆಲ್ಲ ಅವನು ತನ್ನ ಕೈಯಿಂದ ಅವರ ತಲೆ ಮುಟ್ಟಿ , ಆಶೀರ್ವದಿಸುತ್ತಿದ್ದ. ಸರಿ ಅವನು ಹೇಳಿದಂತೆ ಹೊರಗೆ ಬಂದು ನಿಂತೆ. ನನ್ನನ್ನು ಕಳಿಸಿದ ವಾಚ್ ಮನ್ ನನ್ನನ್ನು ನೋಡಿ
"ಸಿಕ್ಕಿದ್ರಾ?" ಎಂದು ಕೇಳಿದ
"ಸಿಕ್ಕಿದ್ರಪ್ಪ, ಇಲ್ಲಿ ನಿಂತಿರು ಬರುತ್ತೀನಿ ಅಂದರು" ಎಂದೆ .
ಆತ ಸ್ವಲ್ಪ ಆಶ್ಚರ್ಯದಿಂದಲೆ ಸುಮ್ಮನಾದ. ಎಂಟು ಹತ್ತು ನಿಮಿಷಗಳಲ್ಲಿ, ಹೊರಬಂದ ದೇವರಾಜಾಚಾರ್ ನಾನು ನಿಂತಿರುವಲ್ಲಿಗೆ ಬಂದ. ಅಲ್ಲಿದ್ದ ವಾಚ್ ಮನ್, ಕೌಂಟರ್ ನಲ್ಲಿದ್ದ ಮನುಷ್ಯ ಎಲ್ಲರು ಎದ್ದು ನಿಂತು ಅವನಿಗೆ ಗೌರವ ಸಲ್ಲಿಸಿದರು.
"ಬಾ ಹೊರಗೆ ಹೋಗೋಣ" ಎನ್ನುತ್ತ ಹೊರಟ. ನಾನು ಹಿಂಬಾಲಿಸಿದೆ.
ಕೇಸರಿ ಪಂಚೆ ಹಾಗು ಮೇಲು ಹೊದಿಕೆ ಧರಿಸಿ, ಹಣೆಯ ತುಂಬಾ ವಿಭೂತಿ, ನೊಸಳಿನಲ್ಲಿ ಅಗಲ ಕುಂಕುಮ, ತಲೆಯ ತುಂಬಾ ಕೂದಲು, ಹಿಂದೆ ಜುಟ್ಟು, ಉದ್ದಕ್ಕೆ ಬೆಳೆದ ಕರಿ ಬಿಳಿ ಬಣ್ಣದ ಗಡ್ಡದಾರಿಯಾದ ಅವನ ಪಕ್ಕ ಪ್ಯಾಂಟು ಶರ್ಟ ಧರಿಸಿ ನಡೆಯುತ್ತಿದ್ದ ನಾನು. ಒಂದಕ್ಕೊಂದು ಹೊಂದಿಕೆಯಾಗುವದಿಲ್ಲ ಅನ್ನಿಸಿತು ಮನಸಿಗೆ. ಎದುರಿಗೆ ಬರುತ್ತಿದ್ದ ಕೆಲವರು ಇವನನ್ನು ಕಾಣುತ್ತಲೆ ಬಗ್ಗಿ ನಮಸ್ಕರಿಸುತ್ತಿದ್ದರೆ ಇವನಿಗೆ ಅವರನ್ನು ಆಶೀರ್ವದಿಸುವುದೆ ಕೆಲಸ. ನನಗೆ ಆಶ್ಚರ್ಯವಾಗಿತ್ತು ಇದೆಂತ ಬದಲಾವಣೆ ಎಂದು.
ದೇವಾಲಯದಿಂದ ಹೊರಬರುವಾಗಲೆ ಅವನನ್ನು ಪ್ರಶ್ನಿಸಿದೆ,
"ಇದೇನೊ ಪೂರ್ಣ ಬದಲಾವಣೆ, ಊರಿನಲ್ಲಿ ಹಾಗು ನಿನ್ನಲ್ಲಿ .."
ಎಲ್ಲರೂ ಅವನನ್ನು ಕಾಲು ಮುಟ್ಟಿನಮಸ್ಕರಿಸುತ್ತ ಇರುವಾಗ ನನಗೆ ಏಕವಚನದಲ್ಲಿ ಮಾತನಾಡಿಸಲು ತಡವರಿಸುವಂತೆ ಆಗಿತ್ತು.
ಮನುಷ್ಯನ ಮನವೇ ಹಾಗೇ ಧರ್ಮ , ಹಣ , ಅಧಿಕಾರ ಇವುಗಳನ್ನೆಲ್ಲ ಕಂಡರೆ ವಿಭ್ರಮೆಗೆ ಒಳಗಾಗುತ್ತೆ.
"ಇಲ್ಲಿ ಮಾತು ಬೇಡ , ಸರಿಯಾಗಲ್ಲ, ಹೀಗೆ ನಡೆಯುತ್ತ ಹೋದರೆ ನಮ್ಮ ತೋಟ ಸಿಗುತ್ತೆ ಬಾ ಅಲ್ಲಿ ಹೋಗೋಣ"
ಎನ್ನುತ್ತ ಹೊರಟ. ರಸ್ತೆಯ ಅಕ್ಕಪಕ್ಕ ಅಂಗಡಿಗಳು ಇದ್ದವು, ಅವುಗಳಲ್ಲೆಲ್ಲ ತೆಂಗಿನಕಾಯಿ, ಎಳ್ಳೆಣೆಯ ಪೊಟ್ಟಣಗಳು, ಕಪ್ಪುವಸ್ತ್ರ, ದೀಪಗಳು, ವಿವಿದ ಪುಸ್ತಕಗಳು, ತುಳಸಿಹಾರದ ಅಂಗಡಿಗಳು ಇಂತಹುವುಗಳೆ, ಎಲ್ಲ ಕಡೆ ತುಂಬಿರುವ ಜನ. ಅಂಗಡಿಯಲ್ಲಿರುವ ಕೆಲವರು ನನ್ನ ಪಕ್ಕದಲ್ಲಿದ್ದ ದೇವರಾಜನನ್ನು ದೂರದಿಂದಲೆ ವಂದಿಸುತ್ತ ನನ್ನತ್ತ ಆಶ್ಚರ್ಯದಿಂದ ನೋಡುತ್ತಿದ್ದರು.
ನಾವು ನದಿಯ ಪಕ್ಕದಲ್ಲಿಯೆ ನಡೆಯುತ್ತಿದ್ದೆವು, ಹಾಗೆ ಜನಸಂದಣಿ ದಾಟುತ್ತಿರುವಂತೆ , ಅವನು ನಗುತ್ತ ಮತ್ತೆ ಪ್ರಶ್ನಿಸಿದ
"ಏನಪ್ಪ ನಂಜುಂಡ , ಆಗಲೇ ಅದೇನೊ ಕೇಳಿದೆಯಲ್ಲ, ಏನದು?"
ನಾನು ಈಗ ಬೇರೆ ಪ್ರಶ್ನೆ ಕೇಳಿದೆ
"ಮೊದಲು ಇಷ್ಟೊಂದು ಜನವಿರುತ್ತಿರಲಿಲ್ಲ, ಈಗ ಸಾಕಷ್ಟು ಜನ ಕಾಣುವರು ದೇವಾಲಯದ ಬಳಿ, ಅಲ್ಲದೇ ನೋಡುತ್ತಿದ್ದರೆ, ಈ ಊರಿನ ಜನರಲ್ಲ ಅನ್ನಿಸುತ್ತೆ, ಬೇರೆ ಬೇರೆ ಊರಿನಿಂದ ಬರುತ್ತಿರುವರು"
"ಹೌದು ಹೊರಗಿನವರೇ ಜಾಸ್ತಿ, ಬಹುತೇಕ ಬೆಂಗಳೂರಿನವರೆ ಇಲ್ಲಿ ಬರುವವರು. ನೀನು ಈ ದಿನ ಬರುವ ಬದಲು ನಾಳೆ ಶನಿವಾರ ಬಂದಿದ್ದಲ್ಲಿ ನನಗೆ ನಿನ್ನನ್ನು ಮಾತನಾಡಿಸಲು ಪುರುಸೊತ್ತು ಆಗುತ್ತಿರಲಿಲ್ಲ, ಬಿಡು" ಎಂದ ಅವನು ಹೆಮ್ಮೆಯಿಂದ.
"ಅಂತೂ ನೀನು ಜೀವನದಲ್ಲಿ ನಿನ್ನ ದಾರಿಯಲ್ಲಿಯೆ ಏನೋ ಸಾಧಿಸಿದೆ, ಅಲ್ಲ ಕಾಲೇಜಿನಲ್ಲಿ ಸೂರ್ಯ ಚಂದ್ರ, ಗ್ರಹಗಳು, ಗುರು, ಶನಿ,ಚಂದ್ರರು ಸೂರ್ಯನ ಸುತ್ತ ಇರುವ ಆಕಾಶಕಾಯಗಳು ಎಂದು ಓದಿ ಡಿಗ್ರಿ ಮುಗಿಸಿ, ಈಗ ಅದೇ ಗ್ರಹಗಳಿಗೆ ಪೂಜಿಸುವ ಕೆಲಸಕ್ಕೆ ನಿಂತು ಜೀವನದ ದಾರಿ ಕಂಡುಕೊಂಡೆ ಬಿಡು"
ನನ್ನ ಮಾತು, ಮೆಚ್ಚುಗೆಯೊ ಅಥವ ಟೀಕೆಯೊ ಎಂದು ಅರ್ಥವಾಗದೆ ಅವನು ನನ್ನ ಮುಖ ನೋಡಿ ಮತ್ತೆ ನುಡಿದ
"ನಂಜುಂಡ, ನಮ್ಮ ಓದೆ ಬೇರೆ, ಜೀವನದ ದಾರಿಯೆ ಬೇರೆ, ಎರಡೂ ಒಂದೇ ಅಂದುಕೊಂಡರೆ ಬದುಕಲಾರೆವು, ಹಾಗೆ ನೋಡಿದರೆ ನಿನ್ನ ಓದಿಗು ಬದುಕಿಗು ಎಲ್ಲಿಯ ಸಂಬಂಧವಿದೆ. ಎಲ್ಲರೂ ಓದುವ ಜಾಮಿಟ್ರಿ, ಆಲ್ಜಿಭ್ರ, ಇಂಟಿಗ್ರೇಶನ್, ಮೊಗಲರ ಇತಿಹಾಸ, ಮನುಷ್ಯನ , ಸಸ್ಯದ ಜೀವಕೋಶ ಇವೆಲ್ಲ ಎಲ್ಲಿ ಜೀವನದಲ್ಲಿ ಉಪಯೋಗಿಸುತ್ತೇವೆ ಹೇಳು" ಎಂದು ಜೋರಾಗಿ ನಕ್ಕ.
ನನಗೆ ಅರ್ಥವಾಯಿತು, ಈಗ ಇವನು ಮೊದಲಿನಂತೆ ನಾನು ಮಾತನಾಡುತ್ತಿದ್ದರೆ, ಬರಿ 'ಹೂಂ' ಗುಟ್ಟುವನಲ್ಲ, ಅನುಭವಸ್ಥ, ಮಾತು ಕಲಿತಿರುವವನು ಎಂದು. ನಾವು ನದಿಯ ಪಕ್ಕದ ತೆಂಗಿನ ತೋಟದ ಒಳಗೆ ಬಂದಿದ್ದೆವು.
"ಇದು ನಮ್ಮದೆ ತೋಟ, ನೋಡು ಎಂದು ತೋರಿಸಿದ"
ಸುಮಾರು ಸಾವಿರ ಮರವಿರಬಹುದು, ನದಿಪಕ್ಕ ನೀರಿನ ಆಸರೆ ಬೇರೆ, ಹಸಿರಾಗಿದೆ. "ಎಳನೀರು ಕುಡಿಯುತ್ತೀಯ?" ಎಂದು ಕೇಳಿದ
ನಾನು ಮಂಕನಂತೆ, ತಲೆಯಿತ್ತಿ ಮರದ ಮೇಲೆ ನೋಡಿದೆ, ಹಳ್ಳಿ ಬಿಟ್ಟು , ಎಷ್ಟೋ ವರ್ಷ ಹೊರಗಡೆ ತಿರುಗುತ್ತ ಇದ್ದು, ಒಂದು ರೀತಿ ಮಂಕು ಕವಿದಂತೆ ಆಗಿತ್ತು, ನಾನು ಮಾತನಾಡದೆ ಇರುವದನ್ನು ಕಂಡು ಅವನೇ,
"ಲೋ ಬಾ ಇಲ್ಲಿ "
ದೂರದಲ್ಲಿ ಆಳು ವ್ಯಕ್ತಿಯನ್ನೊಬ್ಬನನ್ನು ಕೂಗಿದ,
ಅವನು ಹತ್ತಿರ ಬರುವಾಗ
"ಈ ಮರ ಹತ್ತಿ , ನಾಲಕ್ಕು ಕೆಂದಳನೀರು ಕಿತ್ತು, ಸ್ವಲ್ಪ ಚೆನ್ನಾಗಿರೋದು ನೋಡು" ಎಂದ.
ಬಂದ ಆವ್ಯಕ್ತಿ ಯಾವ ಮಾತು ಆಡದೆ, ಸರ ಸರ ಮರ ಹತ್ತಿದ, ನಾಲಕ್ಕು ಎಳನೀರು ಕೆಡವಿ ಕೆಳಗಿಳಿದು, ಸೊಂಟದಲ್ಲಿ ಮಚ್ಚು ತೆಗೆದು, ಕೊಚ್ಚಿ ದೇವರಾಜನ ಕೈಗೆ ಕೊಟ್ಟ, ದೇವರಾಜ ಅದನ್ನು ನನಗೆ ಕೊಡುತ್ತ
"ನೋಡು ಕುಡಿದು ನೋಡು, ಹೇಗಿದೆ?" ಎಂದ.
ನಿಜಕ್ಕು ಎಳನೀರು ಅನ್ನುವುದು ತಂಪಾಗಿ, ಅಮೃತದಂತೆ ಇತ್ತು, . ಇಬ್ಬರು ಎರಡು ಎರಡು ಎಳನೀರು ಕುಡಿದೆವು, ನಂತರ
"ನೋಡು, ಇಲ್ಲಿ ಬುರುಡೆಯನ್ನು ಬಿಡಬೇಡ, ಇನ್ನು ಎಲ್ಲರೂ ಮರ ಹತ್ತಿ ಬಿಡ್ತೀರಿ, ತೆಗೆದು ಹಾಕು, ನೀನು ದೂರ ಹೋಗು" ಎಂದ, ತನ್ನ ಆಳಿಗೆ
ಅವನು ತಲೆ ಆಡಿಸುತ್ತ ಅಲ್ಲಿ ಬಿದ್ದ ಎಳನೀರಿನ ಬುರುಡೆ ತೆಗೆದುಕೊಂಡು, ಅಲ್ಲಿಂದ ಹೊರಟುಹೋದ.
ನನಗೆ ಏನು ಮಾತನಾಡಲು ತೋಚದೆ ಹೇಳಿದೆ
"ತೋಟ ಸಾಕಷ್ಟು ದೊಡ್ಡದು"
ಅವನ ಮುಖದಲ್ಲಿ ಎಂತದೋ ಹೆಮ್ಮೆ
"ಹೌದು ತೆಂಗಿನ ಮರವೆ ಐದು ನೂರಕ್ಕೂ ಜಾಸ್ತಿ ಇದೆ. ಸ್ವಲ್ಪ ಅಡಕೆಯನ್ನು ಹಾಕಿಸಿರುವೆ, ನಡುವೆ ನಿಂಬೆ ಮುಂತಾದ ಗಿಡಗಳು, ಹಣ್ಣಿನ ಗಿಡಗಳು ಇವೆ ನೀರಿಗೇನು ಕೊರತೆಯಿಲ್ಲ"
"ಈ ತೋಟ ಇಲ್ಲಿ ಇದ್ದದ್ದು ನೆನಪೇ ಇಲ್ಲವಲ್ಲ " ನಾನು ನುಡಿದೆ
"ಇಲ್ಲ ಮೊದಲು ಇಲ್ಲಿ ಶಿವರಾಮು ಎನ್ನುವರು ಸ್ವಲ್ಪ ವ್ಯಯಸಾಯ ಮಾಡಿಸಿಕೊಂಡಿದ್ದರು, ಅವರೆ ತೆಂಗಿನ ಗಿಡ ಹಾಕಿಸಿದರು, ನಂತರ ಅದೇನೊ ಎಲ್ಲವನ್ನು ಕೊಟ್ಟು ಬೆಂಗಳೂರಿಗೆ ಹೊರಟುಹೋದರು, ನಾನಂತು ಊರು ಬಿಡುವನಲ್ಲವಲ್ಲ ಹಾಗಾಗಿ ಇದನ್ನು ಅವರಿಂದ ಕೊಂಡುಕೊಂಡೆ, ಆಗಲೆ ಎಂಟು ಹತ್ತು ವರ್ಷವಾಯಿತೇನೊ, ನಂತರ ಸಾಕಷ್ಟು ಅಭಿವೃದ್ದಿಪಡಿಸಿದೆ, ಸುತ್ತಲೂ ಬೇಲಿ ಹಾಕಿಸಿದೆ, ಈಗ ಸುತ್ತಮುತ್ತ ಇಂತಹ ಚೆಂದ ತೋಟ ಎಲ್ಲಿಯೂ ಇಲ್ಲ" ಅವನ ದ್ವನಿಯಲ್ಲಿ ಹೆಮ್ಮೆ.
ನಾನು ನುಡಿದೆ
"ಹೌದೇನು, ಇಲ್ಲಿ ಎಲ್ಲವೂ ಬದಲಾಗಿದೆ ಅಂದದ್ದು ಅದಕ್ಕೇನೆ, ದೇವಾಲಯವು ಅಷ್ಟೆ ಹಾಗಿರಲಿಲ್ಲ ಅಲ್ಲವೆ, ಅಲ್ಲಿ ನದಿಯ ದಡದಲ್ಲಿದ್ದ ಮೆಟ್ಟಲುಗಳ ಮೇಲೆ, ಹನುಮಂತನ ಗುಡಿಯಿತ್ತು, ಸಣ್ಣದೊಂದು ನವಗ್ರಹ ಗುಡಿ ಅಷ್ಟೆ ಅಲ್ಲವೇ ಇದ್ದಿದ್ದು. ಅಲ್ಲಿಯೂ ಈಗ ಗುರುತೇ ಸಿಗದ ಹಾಗೆ ಆಗಿದೆ, ಅಷ್ಟು ಅಂಗಡಿಗಳು, ಮನೆಗಳು ಏನೆಲ್ಲ ಆಗಿದೆ"
ದೇವರಾಜನೆಂದ,
"ನಿಜ ನಂಜುಂಡ , ಅಲ್ಲಿ ಇದ್ದದ್ದು ಚಿಕ್ಕದೊಂದು ದೇವಾಲಯ, ಅಲ್ಲಿ ಎರಡು ಹೊತ್ತು ಹೋಗಿ ನಾನು ದೀಪ ಹಚ್ಚಿ ಬರುತ್ತಿದ್ದೆ, ಜನರೂ ಯಾರು ತಲೆಹಾಕುತ್ತಿರಲಿಲ್ಲ ಅಂತ ಇಟ್ಟುಕೋ. ಮನೆಯಲ್ಲಿ ತಿನ್ನಲೂ ಇಲ್ಲದಾಗಲೂ ಅಲ್ಲಿ ಹೋಗಿ ಎಷ್ಟೋ ದಿನಗಳನ್ನು ಅಲ್ಲಿಯ ಮೆಟ್ಟಿಲುಗಳ ಮೇಲೆ ಕುಳಿತು ಕಳೆದಿರುವೆ, ನಂತರ ಬದಲಾವಣೆ ಗಾಳಿ ಬೀಸಿತು, ಅಥವ ದೇವರ ಕೃಪೆ ಆಯಿತು ಅಂತ ಇಟ್ಟುಕೋ, ನನ್ನ ಜೀವನವೇ ಹಂತ ಹಂತವಾಗಿ ಬದಲಾಯಿತು"
"ಅದು ಹೇಗೆ, ಇಷ್ಟು ದೊಡ್ಡ ದೇವಾಲಯ ನಿನ್ನಿಂದ ಕಟ್ಟಲು ಹೇಗೆ ಸಾದ್ಯವಾಯಿತು, ಊರಲ್ಲಿ ಇದ್ದವರೆಲ್ಲ , ನನ್ನ ನಿನ್ನಂತಹವರೆ ಹಣಕೊಡುವರಂತು ಯಾರು ಇರಲಿಲ್ಲ ಬಿಡು"
ಎಂದೆ ನಾನು.
"ನಿನ್ನ ಮಾತು ನಿಜ, ಆದರೆ ಕೆಲವೊಮ್ಮೆ ಯಾವುದೋ ಘಟನೆ ಇನ್ಯಾರಿಗೋ ಅನುಕೂಲವಾಗುತ್ತೆ ಅಲ್ಲವೆ , ಅಂತದೇ ಪ್ರಸಂಗ, ಊರ ಮೇಲೆ ಹಾದುಹೋಗುತ್ತಿರುವ ರಾಷ್ಟ್ರೀಯ ಹೆದ್ದಾರಿಗೆ ಬೈಪಾಸ್ ಹಾದಿ ಮಾಡುವ ಯೋಜನೆ ಪ್ರಾರಂಭವಾಯಿತು. ಆ ಬೈಪಾಸ್ ಊರಿನ ಪ್ರತಿಷ್ಠಿತ ಅನ್ನಿಸಿಕೊಂಡ ದೊಡ್ಡೆಗೌಡರ ಜಮೀನನ್ನು ಮಧ್ಯ ಗೆರೆಹಾಕಿದಂತೆ ಬಾಗಮಾಡುತ್ತಿತ್ತು, ಅವರ ಗದ್ದೆಗಳ ನಡುವೆ ಹೆದ್ದಾರಿಯ ಬೈಪಾಸ್ ಸಾಗಬೇಕಿತ್ತು, ಅವರೇನು ಕಡಿಮೆ ಕುಳವಲ್ಲ ಎರಡು ಸಾರಿ ಎಮ್ ಎಲ್ ಎ ಆಗಿ ಆರಿಸಿಬಂದಿದ್ದವರು, ತಮ್ಮ ನೂರಾರು ಎಕರೆ ಜಮೀನು ಉಳಿಸಲು ನನ್ನ ಹತ್ತಿರ ಬಂದರು" ಅವನ ದ್ವನಿಯಲ್ಲಿ ಹಳೆಯ ನೆನಪು.
"ನಿನ್ನ ಹತ್ತಿರವೆ ?, ನಿನಗೆ ಅಷ್ಟು ಪ್ರಭಾವ ಇದೆಯ , ಒಬ್ಬ ಆಳುವ ಪಕ್ಷದ ಎಮ್ ಎಲ್ ಏ ಗೆ ಸಹಾಯ ಮಾಡುವಷ್ಟು" ನಾನು ಆಶ್ಚರ್ಯದಿಂದ ಕೇಳಿದೆ. ದೇವರಾಜ ನಗುತ್ತಿದ್ದ.
"ಅದಕ್ಕೆ ನೋಡು ಹೇಳುವುದು, ಓದಿದವರಿಗೆ ನಿಮ್ಮಂತವರಿಗೆ, ಜೀವನ ಅರ್ಥವಾಗುವುದು ಕಷ್ಟ ಅಂತ, ಜೀವನದಲ್ಲಿ ಯಾರು ಯಾರಿಗೆ ಸಹಾಯ ಮಾಡಬಲ್ಲರು ಎಂದು ಸಂದರ್ಭ ಬರದ ಹೊರತು ನಿನಗೆ ಅರ್ಥವಾಗುವದಿಲ್ಲ. ಅವರು ನನ್ನ ಹತ್ತಿರ ಬಂದು , ಈಗ ಇರುವ ಅಂಜನೇಯ ಗುಡಿಯನ್ನು ಅಭಿವೃದ್ದಿ ಪಡಿಸಲು , ಹಾಗು ಅದನ್ನು ದೊಡ್ಡದಾಗಿಸಿ, ಹಾಗೆ ಒಂದು ಶನಿಮಹಾತ್ಮನ ದೇವಾಲಯ ಕಟ್ಟುವ ಯೋಜನೆ ಒಂದನ್ನು ವಿವರಿಸಿ, ಅದಕ್ಕೆ ನನ್ನನ್ನು ಮುಂದಿರುವಂತೆ ಕೇಳಿಕೊಂಡರು, ದೇವಾಲಯಕ್ಕೆ ಬೇಕಾದ ಹಣ ಯಾವುದು ಯಾವುದೋ ಮೂಲಗಳಿಂದ ಬಂದಿತು, ದೇವಾಲಯ ಪ್ರಸಿದ್ದವಾಯಿತು, ನಾನು ಇಲ್ಲಿ ಟ್ರಷ್ಟಿಗಳಲ್ಲು ಮುಖ್ಯನಾದೆ, ದೇವಾಲಯದ ಆಡಳಿತ ಪೂರ್ಣ ನನ್ನ ಕೈಯಲ್ಲಿಯೇ ಇದೆ. ಈಗ ನೆಪ ಮಾತ್ರಕ್ಕೆ ದೊಡ್ಡೆಗೌಡರು ಕಮಿಟಿಯಲ್ಲಿದ್ದಾರೆ ಆದರೆ ಅವರು ಯಾವುದೇ ವಿಷಯಕ್ಕು ತಲೆಹಾಕಲ್ಲ, ಅಲ್ಲದೆ ನನ್ನ ಕಂಡರೆ ಶನಿದೇವರ ಪೂಜಾರಿ ಎಂದು ಅವರಿಗೆ ಸ್ವಲ್ಪ ಭಯವು ಇದೆ, ಇದೇ ನೋಡು ವಿಚಿತ್ರ ಅವರು ಹುಟ್ಟು ಹಾಕಿದ ದೇವರಿಗೆ ಈಗ ಅವರೇ ಸ್ವಲ್ಪ ಹೆದರುತ್ತಾರೆ, ಆದರೆ ಈ ದೇವರು ಅವರ ಜಮೀನುಗಳನ್ನು ಉಳಿಸಿದ್ದಂತು ಹೌದು, ಈಗ ಬೈಪಾಸ್ ಊರಿನ ಈ ಬದಿಗೆ ಬರದೆ ಊರಿನ ಮತ್ತೊಂದು ಪಕ್ಕಕ್ಕೆ ವಿರುದ್ದ ದಿಕ್ಕಿನಲ್ಲಿ ಆಗಿದೆ. ಆದರೆ ಈ ದೇವಾಲಯ ಮಾತ್ರ ಎಲ್ಲಡೆ ಪ್ರಸಿದ್ದವಾಗಿದೆ, ಬೆಂಗಳೂರಿನಿಂದ ಜನಪ್ರವಾಹವೆ ಹರಿದು ಬರುತ್ತೆ , ಬರಿ ಒಂದೂವರೆ ಘಂಟೆ ಪ್ರಯಾಣ ಅಲ್ಲಿಂದ" ಎಂದ.
"ಸರಿಯೇ ನಾನು ನೋಡಿದೆನಲ್ಲ, ಆದರೆ ಬೆಂಗಳೂರಿನಲ್ಲಿಯೆ ಅಷ್ಟೊಂದು ದೇವಾಲಯಗಳಿರುವಾಗ ಅಲ್ಲಿಂದ ಸುಮಾರು ಎಪ್ಪತ್ತು ಕಿ.ಮಿ ದೂರದಲ್ಲಿರುವ ಈ ದೇವಾಲಯಕ್ಕೆ ಬರಲು, ದೇವಾಲಯದ ಪ್ರಭಾವ ಎಂತದೂ, ಇದೆಲ್ಲ ಹೇಗೆ ಜನಮನದಲ್ಲಿ ಹರಡಿತು" ಎಂದೆ ನಾನು ಆಶ್ಚರ್ಯ ಸೂಚಿಸುತ್ತ.
ಗಡ್ಡಮೀಸೆ ತುಂಬಿದ ಅವನ ಮುಖದಲ್ಲಿ ಒಂದು ಶಾಂತ ನಗೆ ಹರಡಿತು.
"ನಿಜ ಅನ್ನು ಜನರಿಗೆ ಒಂದು ಸುದ್ದಿ ನಂಬುವಂತೆ ಮಾಡುವದಂತೂ ಕಷ್ಟ, ಆದರೆ ಒಮ್ಮೆ ಜನಗಳಿಗೆ ನಂಭಿಕೆ ಬಂದರೆ ನಂತರ ಅವರ ನಂಭಿಕೆಯನ್ನು ಯಾವ ಶಕ್ತಿಯೂ ಕದಲಿಸಲಾರದು, ಮೊದಲಲ್ಲಿ ದೇವಾಲಯದ ನಕ್ಷೆಯೇನೊ ಸಿದ್ದವಾಯಿತು, ಅದಕ್ಕಾಗಿ ಹಣಸಂಗ್ರಹ ಎಂದು ನಾನು ಸಾಕಷ್ಟು ಬಾರಿ ಬೆಂಗಳೂರಿಗೆ ಬರುತ್ತಿದ್ದೆ. ದೊಡ್ಡೆಗೌಡರ ಪ್ರಭಾವದಿಂದ ನನಗೆ ಸಾಕಷ್ಟು ಜನರ ಪರಿಚಯವೂ ಆಯಿತು. ಹೀಗೆ ಒಮ್ಮೆ ಟೀವಿ ಚಾನಲ್ ನಲ್ಲಿ ಬರುತ್ತಾರೆ ನೋಡು ಜೋತಿಷಿ ಗುರು ನಾಗೇಂದ್ರಶರ್ಮ ಎನ್ನುವವರು ಅವರ ಪರಿಚಯವಾಯಿತು. ಅವರಲ್ಲಿ ಸಹ ನಾನು , ಇಲ್ಲಿಯ ದೇವಾಲಯದ ವಿಷಯ , ನಾನು ಪಡುತ್ತಿರುವ ಕಷ್ಟ ಎಲ್ಲವನ್ನು ತಿಳಿಸಿ, ಒಮ್ಮೆ ನಮ್ಮ ಊರಿಗೆ ಬರುವಂತೆ ಆಹ್ವಾನ ನೀಡಿದೆ"
ನಾನು ಮೌನವಾಗಿ ಕೇಳುತ್ತಿದ್ದೆ, ದೇವರಾಜ ಮುಂದುವರೆಸಿದ
"ನನ್ನ ಅಹ್ವಾನ ಮನ್ನಿಸಿ ಅವರು ಊರಿಗೆ ಬಂದರು ನಿರ್ಮಾಣವಾಗುತ್ತಿದ್ದ ದೇವಾಲಯ ವೀಕ್ಷಿಸಿದರು. ನಾನು ಕೇಳದೆ ಅವರು ಅಶ್ವಾಸನೆ ಕೊಟ್ಟರು, ನೀನು ದೇವರ ಕೆಲಸ ನಡೆಸಿದ್ದೀಯ, ನಾನು ನಿನಗೆ ಸಹಾಯ ಮಾಡುವೆ ಬಿಡು. ಎಂದು. ದೇವಾಲಯದ ಪ್ರಾರಂಭೋತ್ಸವಕ್ಕು ಅವರು ಬಂದರು. ನಂತರ ಅವರ ಕಾರ್ಯಕ್ರಮಗಳ ನಡುವೆ ಎಲ್ಲ ಊರುಗಳಲ್ಲಿ, ತಮ್ಮ ಟೀವಿ ಕಾರ್ಯಕ್ರಮಗಳಲ್ಲಿ ಹಲವೂ ಬಾರಿ, ನಮ್ಮ ದೇವಾಲಯದ ಬಗ್ಗೆ ಪ್ರಚಾರ ಕೊಟ್ಟರು, ಯಾರಿಗೆ ಯಾವ ಕಷ್ಟ ಬಂದರು , ಇಲ್ಲಿಯ ಶನಿಮಹಾತ್ಮ, ಹನುಮರಿರುವ ದೇವಾಲಯಕ್ಕೆ ಬಂದು, ಒಂದು ಲೀಟರ್ ನಷ್ಟು ಎಳ್ಳೆಣ್ಣೆ ಅರ್ಪಿಸಬೇಕೆಂದು ಮೂರುದಿನ ಸೇವೆ ಮಾಡಿದರೆ, ಎಂತಹ ಕಷ್ಟಗಳು ಪರಿಹಾರವಾಗುವದೆಂದು ಹೇಳಿದರು. ನಂತರ ನೋಡು ಪ್ರಾರಂಭವಾಯಿತು ಇಲ್ಲಿಗೆ ಬರುವ ಜನಪ್ರವಾಹ. ಈಗ ಜನರ ಬಾಯಿಂದ ಬಾಯಿಗೆ ಹರಡಿ ಎಲ್ಲಡೆ ಪ್ರಸಿದ್ದವಾಗಿದೆ ಈ ದೇವಾಲಯ. ಹಾಗೆ ದೇವಾಲಯದ ಆದಾಯವು ಬೆಳೆಯಿತು. ನನ್ನ ಹಣಕಾಸಿನ ಪರಿಸ್ಥಿಥಿಯೂ ಸಾಕಷ್ಟು ಸುದಾರಿಸಿತು, ಈ ತೋಟವನ್ನು ತೆಗೆದುಕೊಂಡೆ, ಊರಿನಲ್ಲಿದ್ದ ಮನೆ ಬಾಡಿಗೆಗೆ ಕೊಟ್ಟು, ಇಲ್ಲಿ ನಿರ್ಮಿಸಿರುವ ದೊಡ್ಡ ಮನೆಗೆ ವಾಸ ಬದಲಾಯಿಸಿದೆ, ಹೇಗೂ ತೋಟಕ್ಕು ಹತ್ತಿರ ಅಂತ"
ನಾನು ಕೇಳಿದೆ
"ಜನರನ್ನು ನೋಡಿದರೆ ದಿನಾ ಎರಡು ಸಾವಿರಕ್ಕೆ ಕಡೆಮೆ ಇಲ್ಲದಂತೆ ಬರುತ್ತಾರೆ ಅನ್ನಿಸುತ್ತೆ, ನಿನಗೆ ಮಕ್ಕಳೆಷ್ಟು , ಮದುವೆ ಯಾವಾಗ ಆಯಿತು ಏನು ಕತೆ ?" ಎಂದೆ
"ಯಾವ ಎರಡು ಸಾವಿರ, ನೀನೆಲ್ಲಿ, ದಿನಾ ಬರುವ ಎಳ್ಳೆಣ್ಣೆಯ ಕಾಣಿಕೆಯೇ, ಎಂಟುನೂರು, ಸಾವಿರ ಪ್ಯಾಕೆಟ್ ಬರುತ್ತದೆ, ಶನಿವಾರ ಬಂದರಂತು ಆಯಿತು, ಒಂದೇ ದಿನ ಎರಡು ಸಾವಿರ ಎಳ್ಳೆಣ್ಣೆಯ ಪ್ಯಾಕೆಟ್ ಬಂದು ಬೀಳುತ್ತದೆ, ಈಗ ಮಗನು ನನ್ನ ಜೊತೆಗೆ ಇದ್ದಾನೆ. ಅವನು ಹೈಸ್ಕೂಲ್ ಮುಗಿಸಿ ಓದು ನಿಲ್ಲಿಸಿದ" ಎಂದ
ನನಗೆ ಕುತೂಹಲ ಅನ್ನಿಸಿತು.
"ಅಲ್ಲ ಅಷ್ಟೆಲ್ಲ ಎಳ್ಳೆಣ್ಣೆಯ ಪ್ಯಾಕೇಟ್ ಬಂದರೆ ಅದನ್ನೆಲ್ಲ ಏನು ಮಾಡುವಿರಿ? , ದೀಪಕ್ಕೆ ಎಷ್ಟು ಎಣ್ಣೆ ಆದೀತು" ಎಂದೆ
"ಏನು ಮಾಡುವುದು , ಅದನ್ನೆಲ್ಲ ಪುನಃ ಹೊರಗೆ ಇರುವ ವ್ಯಾಪಾರಿಗಳಿಗೆ ಮಾರಿಬಿಡುವೆವು"
ನನಗೆ ಅನ್ನಿಸಿತು , ಛೇ , ಇದೆಂತ ಮೋಸ, ಅಂಗಡಿಯಿಂದ ತಂದ ಪ್ಯಾಕೆಟ್ ಗಳನ್ನು ದೇವರ ಸೇವೆಯಲ್ಲಿರುವ ಇವರು ಪುನಃ ಅದೇ ಅಂಗಡಿಗಳಿಗೆ ಮಾರುವುದು, ಅವರು ಪುನಃ ಅದೇ ಪ್ಯಾಕೇಟನ್ನು ಮತ್ತೆ ಮತ್ತೊಬ್ಬ ಭಕ್ತರಿಗೆ ಮಾರುವುದು, ಎಂತಹ ಮೋಸ ಅನ್ನಿಸಿ ಹೇಳಿದೆ.
"ಮಾರುವಿರ? , ತಪ್ಪಲ್ಲವೆ, ದೇವರಿಗೆ ಎಂದು ಜನ ಭಕ್ತಿಯಿಂದ ಕೊಟ್ಟಿದ್ದನು ಪುನಃ ಮಾರುವುದು ತಪ್ಪಲ್ಲವೆ? " ಎಂದು ನೈತಿಕ ಪ್ರಶ್ನೆ ಎತ್ತಿದೆ.
ಅವನಿಗೆ ಆಶ್ಚರ್ಯ.
"ಮತ್ತೇನು ಮಾಡು ಅಂತೀಯ ನೀನು, ಅಷ್ಟೆಲ್ಲ ಎಳ್ಲೆಣ್ಣೆಯನ್ನು ದೇವರ ವಿಗ್ರಹದ ಮೇಲೆ ಪ್ರತಿದಿನ ಸುರಿಯಲು ಸಾದ್ಯವೇ? . ಮಾರಿದರೆ ಏನು ತಪ್ಪು. ನಿಮ್ಮ ಈ ಓದಿದ ಜನದ ತರ್ಕವೆ ನನಗೆ ಅರ್ಥವಾಗಲ್ಲ ನೋಡು, ಈ ಪ್ರಪಂಚದಲ್ಲಿ ಇರುವ ವಸ್ತುಗಳಲ್ಲಿ ಬೇಧ ಹೇಗೆ ಮಾಡುವೆ, ಇಲ್ಲಿ ಇರುವದೆಲ್ಲ , ನನಗೆ ಸಿಕ್ಕಿರುವದೆಲ್ಲ ದೇವರದು , ಅಥವ ನನ್ನದು ಆಯಿತು. ದೇವರದು, ನನ್ನದೂ ಅಂತ ಬೇಧ ಹೇಗೆ ಮಾಡುವುದು. ಇದು ನನ್ನ ಜೀವನದ ರೀತಿ ಅಷ್ಟೆ, ದೇವರ ಪೂಜೆ ಅದರಿಂದ ಬರುವ ಆದಾಯವೆ ನನ್ನ ಜೀವನ ಮಾರ್ಗ , ಅದರಲ್ಲಿ ಮೋಸ ವಂಚನೆಯ ಪ್ರಶ್ನೆ ಎಲ್ಲಿ ಬರುತ್ತೆ. ಅಷ್ಟಕ್ಕು ದೇವರ ಪೂಜೆಯಲ್ಲಿ ಲೋಪಮಾಡಿದರೆ ನೀನು ಹೇಳಿದ ಹಾಗೆ ತಪ್ಪು, ಆದರೆ ಇಷ್ಟು ವರ್ಷಗಳ ನನ್ನ ಜೀವನದಲ್ಲಿ ದೇವರ ಪೂಜೆಯಲ್ಲಿ ಎಂದಿಗೂ ನಾನು ಮೋಸ ಮಾಡಲಿಲ್ಲ" ಎಂದ ಅವನು.
ಅವನ ಪ್ರಶ್ನೆಗೆ ನನ್ನಲ್ಲಿ ಉತ್ತರವಿರಲಿಲ್ಲ.
ಸರಿಯೆ ಸಕಲ ಜನರ ಪರವಾಗಿ ಅವರ ಕಷ್ಟಗಳ ಪರಿಹಾರಾರ್ತವಾಗಿ ದೇವರನ್ನು ಪೂಜಿಸುವುದು ಇವನ ಕರ್ತವ್ಯ. ಅಂತಹ ಕೆಲಸಕ್ಕೆ ಪ್ರತಿಫಲವಾಗಿ ಬರುವ ಹಣ, ಕಾಯಿ, ಎಣ್ಣೆ, ಹೂವು ಇತ್ಯಾದಿ ವಸ್ತುಗಳೆಲ್ಲ ಅವನವೆ ಎಂದಾಗ , ಅದನ್ನು ಮಾರಿದರೆ ಅದರಲ್ಲಿ ತಪ್ಪೇನು ಎನ್ನುವ ತರ್ಕ ಸರಿಯಾಗಿಯೆ ಇದೆ. ದೇವಾಲಯಗಳಲ್ಲಿ ಪ್ರತಿಯೊಬ್ಬರೂ ಪೂಜಿಸಲಾಗದು ಅಲ್ಲಿ ಒಂದು ಶಿಸ್ತಿರಬೇಕು, ಹಾಗಾಗಿ ಜನರ ಪರವಾಗಿ ಅವನು ಪೂಜಿಸುವನು , ಅಂದರೆ ಅದು ದೇವರ ಸೇವೆ ಅಷ್ಟೆ ಅಲ್ಲ, ಜನರಿಗೆ ಅವನು ಒದಗಿಸುತ್ತಿರುವ ಸೇವೆ ಅದಕ್ಕಾಗಿ ಜನರಿಂದ ಪ್ರತಿಫಲ ಬಯಸುವನು ಅದರಲ್ಲಿ ತಪ್ಪೇನು ಇಲ್ಲ.
ನಾನು ಹೇಳಿದೆ
"ಸರಿಯೆ ನಿನ್ನ ತರ್ಕ ಒಂದು ರೀತಿ ಸರಿಯಾಗಿಯೆ ಇದೆ. ಜನರ ಪರವಾಗಿ ನೀನು ದೇವರಿಗೆ ಪೂಜಿಸುವನು, ದೇವರ ಪೂಜೆ ನಿನ್ನ ಜೀವನ ಮಾರ್ಗ, ಹಾಗಾಗಿ ಜನರು ನಿನಗೆ ಕೊಡುವದನ್ನು ನೀನು ಪಡೆಯುವುದು ಸರಿಯಾಗಿಯೆ ಇದೆ. ದೇವರ ಪೂಜೆ ಒಂದು ರೀತಿಯಲ್ಲಿ ಜನರ ಮನಸಿಗೆ ಒದಗಿಸುವ ಶಾಂತಿ ಹಾಗು ಸಮಾದಾನ ನೀಡುವ ರೀತಿಯಾಗಿದೆ, ಕಷ್ಟಗಳಲ್ಲಿರುವ ಜನರಿಗೆ ಕಷ್ಟಕ್ಕೆ ಪರಿಹಾರ ಸಿಗದಿದ್ದರು, ಕಷ್ಟಗಳನ್ನು ಎದುರಿಸುವ ಮನಶಕ್ತಿಯನ್ನು ಕೊಡುವದಾಗಿದೆ, ಹಾಗೆ ನೋಡಿದರೆ ಒಂದು ರೀತಿ ಮನೋವೈಧ್ಯರೂ ಸಹ ಇಂತಹುದೆ ಕೆಲಸ ಮಾಡುವುದು, ಅಲ್ಲಿ ಕೊಡುವ ಫೀಸಿಗೂ ಇಲ್ಲಿಯ ಪೂಜೆಗೂ ಹೆಚ್ಚು ವ್ಯತ್ಯಾಸವೇನು ಇಲ್ಲ ಬಿಡು " ಎಂದೆ.
ಅವನು
"ಸರಿಯಾಗಿ ಹೇಳಿದೆ ಬಿಡು ಎಲ್ಲರೂ ಜೀವನವನ್ನು ವೇದಾಂತಕ್ಕೆ ತಂದರೆ , ನೀನು ವೇದಾಂತವನ್ನು ಜೀವನಕ್ಕೆ ತಂದೆ. ಆಗಲೆ ಸಮಯ ಒಂದು ಘಂಟೆ ಆಗುತ್ತ ಬಂದಿತು. ಇನ್ನು ಮಧ್ಯಾನ್ಹಃದ ಮಹಾಮಂಗಳಾರತಿ ಇರುತ್ತೆ, ನೀನು ಬಂದು ಹೋಗು, ಮತ್ತೆ ನಿನ್ನ ಕೈಲಿ ಮಾತನಾಡುವದಿದೆ " ಎನ್ನುತ್ತ ಎದ್ದು ನಿಂತ. ನಾನು ನಿಂತೆ.
ಪುನಃ ದೇವಾಲಯದತ್ತ ಹೊರಟೆವು, ತೋಟದ ಬಾಗಿಲನ್ನು ದಾಟಿ ರಸ್ತೆಗೆ ಬರುತ್ತಿರುವಾಗ ಅವನು ಕೇಳಿದ
"ಅಂದ ಹಾಗೆ, ನಿನ್ನದು ಬೆಂಗಳೂರಿನಲ್ಲಿ ಏನು ಸ್ವಂತ ಮನೆಯಾ?. ಮಕ್ಕಳೆಲ್ಲ ಏನು ಮಾಡುತ್ತಿದ್ದಾರೆ. ನಿನ್ನದು ಆಗಲೆ ರಿಟೈರ್ಡ್ ಆಯಿತು ಅಲ್ಲವ ಎಂದು ಕೇಳಿದ"
ಸಂಕೋಚದಿಂದ ನುಡಿದೆ.
"ಸ್ವಂತ ಅಲ್ಲಪ್ಪ ಬೆಂಗಳೂರಿನ ರಾಜಾಜಿನಗರದಲ್ಲಿ ಬಾಡಿಗೆ ಮನೆಯಲ್ಲಿ ಇರೋದು. ಇನ್ನೇನು ಎರಡು ತಿಂಗಳಷ್ಟೆ ಬಾಕಿ ಇದೆ ರಿಟೈರ್ಡ್ ಆಗಲು ಮುಂದೆ ಏನು ಮಾಡುವುದು ಅನ್ನುವ ಯೋಚನೆಯು ತಲೆಯಲ್ಲಿದೆ. ಸ್ವಲ್ಪ ಕಾಲ ಕೈಲಾಗುವವರೆಗೂ ಎಲ್ಲಿಯಾದರು ಕೆಲಸಮಾಡುವುದು ಅಂದುಕೊಂಡಿದ್ದೇನೆ ನೋಡಬೇಕು " ಎಂದೆ.
"ಬೆಂಗಳೂರಿನಲ್ಲಿ ಸ್ವಂತ ಮನೆಯೂ ಇಲ್ಲ ಅಂದ ಮೇಲೆ ಅಲ್ಲಿ ಇದ್ದು ಏನು ಮಾಡುತ್ತೀಯಾ?, ನೋಡಪ್ಪ ನನ್ನ ತಲೆಯಲ್ಲಿ ಒಂದು ಯೋಜನೆ ಇದೆ, ಅದು ಬಹುತೇಕ ಕಾರ್ಯರೂಪಕ್ಕೆ ಬರಲು ಸಿದ್ದವಾಗಿದೆ, ಆಗಲೆ ಜಾಗ ಎಲ್ಲ ನೋಡಿಯಾಗಿದೆ, ಇಲ್ಲಿಂದ ಸುಮಾರು ಎರಡು ಕಿ.ಮಿ ದೂರದಲ್ಲಿ ಒಂದು ರೆಸಿಡೆನ್ಷಿಯಲ್ ಸ್ಕೂಲ್ ಪ್ರಾರಂಭ ಮಾಡಲು ಓಡಾಡುತ್ತಿದ್ದೇನೆ. ಹಣದ ಏರ್ಪಾಟು ಆಗಿದೆ, ಸರ್ಕಾರದ ಕಾಗದ ಪತ್ರಗಳಿಗೆಲ್ಲ ಸಹಿ ಆಗಿ ಆಗಿದೆ. ಬಹುಶಃ ಇನ್ನು ಎರಡು ಮೂರು ತಿಂಗಳಲ್ಲಿ ಅದನ್ನು ಪ್ರಾರಂಭ ಮಾಡುವ ಇರಾದೆ ಇದೆ, ನಿನಗೆ ಒಂದು ಅವಕಾಶ ಕೊಡಲು ಸಿದ್ದನಿದ್ದೇನೆ, ನೀನು ನನ್ನ ಸ್ನೇಹಿತ, ಬೇರೆ ಯಾರು ಯಾರನ್ನೊ ತರುವ ಬದಲು , ನೀನೆ ಅಲ್ಲಿ ಪ್ರಿನ್ಸಿಪಾಲ್ ಆಗಿ ಕಾಲೇಜು, ಹಾಸ್ಟೆಲ್ ಎರಡರ ಜವಾಭ್ದಾರಿ ಏಕೆ ವಹಿಸಿಕೊಳ್ಳಬಾರದು. ಬೇರೆಯವರು ಇದ್ದರೆ ಏನು ಪಡೆಯುವರೋ ನೀನು ಅದೆ ಹಣವನ್ನು ತೆಗೆದುಕೋ, ಆದರೆ ನನಗೆ ಹಣಮುಖ್ಯವಲ್ಲ, ನಿನ್ನ ಪೂರ್ಣ ಶಕ್ತಿ, ಬುದ್ದಿಯನ್ನು ಆ ಸಂಸ್ಥೆ ಬೆಳೆಸಲು ಉಪಯೋಗಿಸಬೇಕು, ಆದೀತ ಯೋಚಿಸಿನೋಡು" .
ನಾನು ಸ್ವಲ್ಪ ಚಕಿತನಾಗಿದ್ದೆ, ನಾನು ಇವನನ್ನು ಒಂದು ಬೇಟಿ ಮಾಡಿ ಹೋಗಲು ಬಂದವನೆ ವಿನಃ, ಈ ರೀತಿ ಒಂದು ಅವಕಾಶದ ಕಲ್ಪನೆಯಲ್ಲಿರಲಿಲ್ಲ, ಇಷ್ಟು ದೊಡ್ಡ ಸಂಸ್ಥೆಯ ನಿರ್ವಹಣೆ ನನ್ನಿಂದ ಸಾಧ್ಯವೆ ?. ಅಲ್ಲದೆ ಹುಡುಗರಿಗೆ ಹೇಳಿಕೊಡುವ ಕೆಲಸ ನಾನು ಹೇಗೆ ಮಾಡಬಲ್ಲೆ, ನನಗೆ ಆಡಳಿತದ ಅನುಭವ ಇದೆ ಅಷ್ಟೆ . ಅವನಲ್ಲಿ ಅದನ್ನೆ ಹೇಳಿದೆ
"ಅಲ್ಲಪ್ಪ, ನಾನು ಆ ಕಾಲಕ್ಕೆ ಒಂದು ಎಂ ಎಸ್ಸಿ ಅಂತ ಮಾಡಿದ್ದು ಹೌದು, ಆದರೆ ನನಗೆ ಹುಡುಗರಿಗೆ ಪಾಠ ಹೇಳಿ ಎಲ್ಲಿ ಅಭ್ಯಾಸ ಇದೆ, ನನ್ನನ್ನು ಪ್ರಿನ್ಸಿಪಾಲ್ ಆಗು ಅನ್ನುತ್ತಿ"
"ನೋಡು ಇದೆ ನಾನು ಹೇಳುವುದು, ಇಂತಹ ಸಂಸ್ಥೆಯ ಪ್ರಿನ್ಸಿಪಾಲ್ ಆದರೆ ನಿನಗೆ ಪಾಠಮಾಡು ಅಂತ ಎಲ್ಲಿ ಹೇಳಿದೆ, ಸಾಕಷ್ಟು ಅಧ್ಯಾಪಕರು ಇರ್ತಾರಲ್ವ, ಈಗ ಪ್ರಿನ್ಸಿಪಾಲ್ ಗಳಿಗೆ ಪಾಠ ಮಾಡುವ ಕೆಲಸವೇ ಇರಲ್ಲ, ಎಲ್ಲವು ಬರೀ ಆಡಳಿತದ ವಿಷಯಗಳೆ, ಸಂಸ್ಥೆಯನ್ನು ಹೇಗೆ ನಡೆಸುವುದು ಎನ್ನುವದಷ್ಟೆ ಪ್ರಿನ್ಸಿಪಾಲ್ ತಲೆನೋವು. ನೀನು ಯೋಚಿಸಿನೋಡು, ನಾನು ಬಲವಂತ ಏನು ಮಾಡುತ್ತಿಲ್ಲ, ಬೆಂಗಳೂರಿನಲ್ಲಿ ಸ್ವಂತ ಮನೆ ಇಲ್ಲ ಅನ್ನುವದಾದರೆ ನಿನಗೆ ಎಲ್ಲಿ ಇದ್ದರೂ ಒಂದೆ. ಓದುವ ಚಿಕ್ಕ ಮಕ್ಕಳೂ ನಿನಗೇನು ಇಲ್ಲ ಎಲ್ಲವೂ ಅನುಕೂಲವಾಗಿರುತ್ತದೆ, ಅಲ್ಲದೆ ಹುಟ್ಟಿದ ಊರಿನಲ್ಲಿ ಇರುವ ಅವಕಾಶವೂ ಇರುತ್ತದೆ" ಎಂದ
ನನ್ನ ಮನವೀಗ ಚಿಂತಿಸುತ್ತಿತ್ತು, ಎಂದೋ ನಾನು ಮಾಡಿದ ಮಾಸ್ಟರ್ ಡಿಗ್ರಿ ಹೇಗೋ ಒಂದು ಸರ್ಕಾರದ ಕೆಲಸವಂತೂ ಸಿಕ್ಕಿತ್ತು, ಅಲ್ಪಸ್ವಲ್ಪ ಉಳಿತಾಯದ ಹಣ ಬಿಟ್ಟರೆ ಅಂತ ದೊಡ್ಡ ಆಸ್ತಿಯೇನು ನನಗಿರಲಿಲ್ಲ. ಮೂವತ್ತು ವರುಷ ಸರ್ಕಾರಿ ಕೆಲಸದಲ್ಲಿದ್ದು ಒಂದು ಸ್ವಂತ ಮನೆಯೂ ಇರಲಿಲ್ಲ. ನಾನು ಓದಿದೆ ಅನ್ನುವ ಹುಚ್ಚಿಗೆ ನನ್ನ ಮಗನನ್ನು ಅದೇ ಮಾಸ್ಟರ್ ಡಿಗ್ರಿ ಮಾಡಿಸಿದ್ದೆ, ಈಗವನು ಸರಿಯಾದ ಕೆಲಸವೂ ಇಲ್ಲದೆ ನೆಲೆಯೂ ಇಲ್ಲದೆ ಯಾವುದೋ ಸಣ್ಣ ಕೆಲಸದಲ್ಲಿದ್ದ, ಬಹುಶಃ ನಾನು , ದೇವರಾಜ ಹೇಳುತ್ತಿರುವ ಕೆಲಸಕ್ಕೆ ಒಪ್ಪಿಕೊಂಡು ಸೇರಿದರೆ, ನನಗಲ್ಲದೆ ನನ್ನ ಮಗನ ಜೀವನಕ್ಕು ಮುಂದೆ ದಾರಿಯಾಗಬಹುದು ಅನ್ನಿಸಿತು.
ನನ್ನ ಮೂವತ್ತು ವರುಷಗಳ, ನೈತಿಕ, ಜೀವನ ಮಾರ್ಗಕ್ಕಿಂತ ದೇವರಾಜನ ಈ ಜೀವನ ದರ್ಶನ ಹೆಚ್ಚು ಹೋರಾಟದಿಂದ ತುಂಬಿದೆ, ಹೆಚ್ಚು ಕೆಚ್ಚನ್ನು ನಿರೀಕ್ಷಿಸುತ್ತದೆ ಅನ್ನಿಸಿತು. ಹಿಂದೊಮ್ಮೆ ನಾನು ಏನನ್ನೊ ಸಾದಿಸಲು ಊರು ಬಿಟ್ಟು ಹೋಗುತ್ತಿರುವೆ ಎಂಬ ಹೆಮ್ಮೆಯಲ್ಲಿ ಇದೇ ದೇವರಾಜ, ಡಿಗ್ರಿಮಾಡಿಯೂ ಸಣ್ಣ ದೇವಾಲಯದ ಪೂಜಾರಿಯಾಗಿ ನನ್ನ ದೃಷ್ಟಿಯಲ್ಲಿ ಕುಬ್ಜನಂತೆ ಕಾಣುತ್ತಿದ್ದ. ನಾನು ನನ್ನ ಜೀವನ ಮುಗಿಸಿ ಹಿಂದಿರುಗಿ ಬಂದು ನೋಡುವಾಗ ಅದೇ ದೇವರಾಜ ವಾಮನನಂತೆ ಬೆಳೆದು ನಿಂತಿದ್ದ, ನಾನು ಅವನ ಮುಂದೆ ಕುಬ್ಜನಂತೆ ನಿಂತಿದ್ದೆ. ಅವನ ಹೋರಾಟದ ಜೀವನದರ್ಶನದ ಮುಂದೆ ನನ್ನ ಜೀವನ ಮಂಡಿ ಊರುತ್ತಿದೆ ಅನ್ನಿಸಿತು. ಇದೆ ಚಿಂತೆಯಲ್ಲಿ ನಾನು ದೇವಾಲಯದ ಬೀದಿಗೆ ಬಂದಾಗಿತ್ತು. ಅವನು ತನ್ನ ಮಾತು ನಿಲ್ಲಿಸಿದ್ದ. ದೇವಾಲಯ ತಲುಪುತ್ತಿರುವಂತೆ ಅವನು ನನಗೆ
"ನಂತರ ನಿಧಾನವಾಗಿ ಮಾತನಾಡೋಣ, ಸಿಗು" ಎನ್ನುತ್ತ , ಒಳಗೆ ಮಹಾಮಂಗಳಾರತಿಗೆ ಸಿದ್ದವಾಗಿರುವಂತೆ ಅವನು ಗರ್ಭಗುಡಿಯ ಒಳಗೆ ಹೋದ. ನಾನು ವಿನಮ್ರತೆಯಿಂದ, ಮಂಗಳಾರತಿ ಮುಗಿಯಲಿ ಎಂದು ಕಾದು ನಿಂತೆ.
ಶುಭಂ
-----
ಸ್ವಂತ ಊರಿನ ಚಿತ್ರಣ ಉತ್ತಮವಾಗಿ ಮೂಡಿ ಬಂದಿದೆ.
ReplyDeleteನನ್ನ ಪಾಲಿಗೆ ಕಣ್ಣು ತೆರೆಸುವಂತಹ ಸಾಲುಗಳು:
"ನನ್ನ ಮೂವತ್ತು ವರುಷಗಳ, ನೈತಿಕ, ಜೀವನ ಮಾರ್ಗಕ್ಕಿಂತ ದೇವರಾಜನ ಈ ಜೀವನ ದರ್ಶನ ಹೆಚ್ಚು ಹೋರಾಟದಿಂದ ತುಂಬಿದೆ, ಹೆಚ್ಚು ಕೆಚ್ಚನ್ನು ನಿರೀಕ್ಷಿಸುತ್ತದೆ ಅನ್ನಿಸಿತು."
ವಂದನೆಗಳು ಸಾರ್
Deleteಇದು ಒಂದು ಕಲ್ಪನೆಯಲ್ಲಿ ಮೂಡಿದ ಕತೆ ಅಷ್ಟೆ
ನಮ್ಮ ಊರಿನದಲ್ಲ :-)
ದೇವರಾಜನ ಎರಡನೇ ಇನ್ನಿಂಗ್ಸ್!! ಶುರುವಾಗುತ್ತಿದ್ದಂತೆಯೇ... ಇದು ಪ್ರಸ್ತುತ ಜಾರಿಯಲ್ಲಿರುವ ಬ್ರಹ್ಮಾಂಡ ರೀತಿಯ ಗುರುಗಳ ದರ್ಶನವಾಗುತ್ತದೆ ಎಂದುಕೊಂಡೆ..
ReplyDeleteಆದರೆ!! ಪಾತ್ರದ ಆದಿ ಸಂಸ್ಕಾರಕ್ಕೆ, ಕುತ್ತು ಬರದಂತೆ.. ಅದೇ ಓಗದಲ್ಲಿ ಕಥೆ ಸಾಗುತ್ತದೆ.
ಅತ್ತಕಡೆ!! ಶ್ರೀಸಾಮಾನ್ಯನಂತೆ ಬದುಕಿದರೂ...
ಮಧ್ಯಮ ವರ್ಗದ ಹತಾಶೆಯನ್ನು ಹೆಚ್ಚಾಗಿ ತೋರಿಕೊಳ್ಳದೆ... ಸಮಸ್ಥಿತಿಯನ್ನು ಕಾಯ್ದುಕೊಳ್ಳುವ ನಿಮ್ಮ ಪಾತ್ರ ಒಂದು ಕಡೆಯಾದರೆ....
ಮೂಢಜನರ ಬಂಡವಾಳದಿಂಡಲೇ... ಮತ್ತ್ತೊಂದು ಕಡೆ ಜ್ನಾನದ ಫಸಲು ತೆಗೆಯುವ ದೇವರಾಜನ ಪಾತ್ರ ಮತ್ತೊಂದು ಕಡೆ...
ಬಹಳ ಇಷ್ಟವಾಯಿತು..
ವಂದನೆಗಳು ಚೇತನ್‍ರವರಿಗೆ
ReplyDeleteಮೂಢಜನರ ಬಂಡವಾಳವೆ ಕೆಲ ಜನರ ಜೀವನ ಮಾರ್ಗ. ಆದರೆ ಅವರು ದುಷ್ಟರು ಎಂದು ಹೇಳುವುದು ನನ್ನ ಉದ್ದೇಶವಲ್ಲ!
ಅದೇ ಅವರ ಜೀವನ ಮಾರ್ಗ ಎಂದು ಮಾತ್ರ ಹೇಳಬಲ್ಲೆ!