Monday, May 7, 2012

ಕಥೆ: ಒಂದು ಎಲೆಯ ಮಲ್ಲಿಗೆ ಬಳ್ಳಿ

 ಕಥೆ: ಒಂದು ಎಲೆಯ ಮಲ್ಲಿಗೆ ಬಳ್ಳಿ

ಬೆಳಗ್ಗೆ ಕಾಫಿ ಇನ್ನು ಕುಡಿದಿರಲಿಲ್ಲ, ಹಾಗೆ ಮನೆ ಮುಂದಿನ ಕಾಪೋಂಡ್ ನಲ್ಲಿ ಸುಮ್ಮನೆ ಹೋದೆ, ನಿನ್ನೆಯೊ ಮೊನ್ನೆಯೊ ಸುಮ್ಮನೆ ಒಂದು ಮಲ್ಲಿಗೆಯ ಅಂಟನ್ನು (ಬಳ್ಳಿ) ನೆಟ್ಟಿದ್ದೆ, ಅದೇನಾಯ್ತೊ ಅಂತ ಕುತೂಹಲ. ಹಾಗೆ ಕುಕ್ಕುರಗಾಲಿನಲ್ಲಿ ಕುಳಿತು ನೋಡಿದೆ. 
ನಾನು ನೆಟ್ಟಿದ ಮಲ್ಲಿಗೆ ಕಡ್ಡಿಯಿಂದ ಸಣ್ಣ ಚಿಗುರೊಂದು ಟಿಸಿಲು ಒಡೆದಿತ್ತು, ಮನಸಿಗೆ ತುಂಬ ಸಂತಸ. ಖುಷಿ ಎನಿಸಿತು. ಹಾಗೆ ಸುತ್ತಲ ಹುಲ್ಲನ್ನೆಲ ಸ್ವಲ್ಪ ಕಿತ್ತು ಹಾಕಿದೆ. ನಲ್ಲಿಯ ಹತ್ತಿರ ಹೋಗಿ ಒಂದು ಪಾತ್ರೆಯಲ್ಲಿ ನೀರು ಹಿಡಿದು ತಂದು ಮಲ್ಲಿಗೆ ಬಳ್ಳಿಯ ಮೇಲೆ ಚುಮುಕಿಸಿದೆ. ನೀವು ಏನೆ ಹೇಳಿ ನೀವು ಹಾಕಿದ ಗಿಡವೊಂದು ಚಿಗುರು ಒಡೆದಾಗ ಸಿಗುವ ಸಂತಸಕ್ಕೆ ಮತ್ತಾವುದು ಸಮನಲ್ಲ.
 
ಅದು ಆಗಿತ್ತು ಹೀಗೆ ಕಳೆದ ವಾರ ತುಮಕೂರಿಗೆ ಹೋಗಿದ್ದೆ, ನನ್ನ ತಮ್ಮನ ಮನೆಯಲ್ಲಿ ಮಲ್ಲಿಗೆಯ ಬಳ್ಳಿಯೊಂದು ಪೊದೆಯಂತೆ ಬೆಳೆದು ಹರಡಿಕೊಂಡಿತ್ತು. ಅವನು ಅದನ್ನೆಲ್ಲ ಕಡಿದು ಹಸನುಗೊಳಿಸುವಾಗ ನಾನು ಕೇಳಿದೆ, 
"ಇದೇನು ಕಡ್ಡಿ ನೆಟ್ಟರೆ ಗಿಡ ಬರುತ್ತ" ಎಂದು. ಅವನು , 
"ಹೌದು, ನಿನಗೆ ಆಸೆ ಇದ್ದರೆ ಹೇಳು, ಬೆಂಗಳೂರಿಗೆ ತಗೊಂಡುಹೋಗಿ ಹಾಕು, ಎಂದು ಹೇಳಿ ಸ್ವಲ್ಪ ಬಲಿತ ಕಡ್ಡಿಯೊಂದನ್ನು ಕತ್ತರಿಸಿ ಅದರಲ್ಲಿನ ಎಲೆಯನ್ನೆಲ್ಲ ಸವರಿ, ಅದನ್ನು ಸಿಂಬಿಯಂತೆ ಸುತ್ತಿದ
"ಸ್ವಲ್ಪ ಮಣ್ಣು ಅಗೆದುಬಿಡು, ನಂತರ ಇದನ್ನು ಹೀಗೆ ಮಣ್ಣಿನಲ್ಲಿಟ್ಟು, ಮೇಲೆ ಹಗುರ ಮಣ್ಣು ಹರಡಿ, ಸ್ವಲ್ಪ ನೀರು ಹಾಕು, ಒಂದೆರಡು ದಿನ ಚಿಗರುತ್ತೆ, ಸ್ವಲ್ಪ ಕಚ್ಚಿ ಕೊಂಡರೆ ಸಾಕು ಚೆನ್ನಾಗಿ ಹರಡುತ್ತದೆ, ಮನೆ ದೇವರ ಪೂಜೆ ಹೂವಿಗೆ ಮೋಸವಿಲ್ಲ ವರ್ಷ ಪೂರ ಹೂ ಕೊಡುವ ಗಿಡ" ಎನ್ನುತ್ತ ಅವನು ಸುತ್ತಿದ ಸಿಂಬಿಯನ್ನು ಕೈಲಿಟ್ಟ. ಅದನ್ನು ತಂದು ಬೆಂಗಳೂರಿನ ನಮ್ಮ ಮನೆಯಲ್ಲಿ ನೆಟ್ಟಿದ್ದೆ.
 
 ಒಳಗಿನಿಂದ ನನ್ನಾಕೆ ಕಾಫಿಗೆ ಕರೆಯುತ್ತಿರುವುದು ಕೇಳಿಸಿತು, ನಾನು ಹಾಗೆ ಕುಳಿತಿದ್ದು ಕಂಡು, ಕಾಫಿ ಹಿಡಿದು ಅಲ್ಲಿಗೆ ಬಂದವಳು
"ಇದೇನು ಬೆಳಗ್ಗೆಯೆ ಇಲ್ಲಿ ಕುಳಿತು ಏನು ಮಾಡುತ್ತಿರುವಿರಿ" ಎಂದಳು. ನಾನು ಖುಷಿಯಿಂದ ಮಲ್ಲಿಗೆಯ ಬಳ್ಳಿಯಲ್ಲಿ ಚಿಗುರಿದ ಸಣ್ಣ ಚಿಗುರನ್ನು ತೋರಿದೆ. ಅವಳು ಸಂತಸ ಪಡುತ್ತ 
"ಹೋಗಲಿ ಬಿಡಿ, ದಿನ ಒಂದು ಹಿಡಿ ಹೂ ಬಿಟ್ಟರು ಸಾಕು ದೇವರ ಪೂಜೆಗಾದಿತು, ಬೆಂಗಳೂರಿನಲ್ಲಿ ಹೂ ಕೊಂಡು ಬಾಳಲು ಸಾದ್ಯವಿಲ್ಲ" ಎಂದಳು.
 ಕಾಫಿ ಕುಡಿಯುತ್ತಿರುವಂತೆ, ಮನೆಯ ಒಳಗೆ ಲ್ಯಾಂಡ್ ಲೈನ್ ಪೋನ್ ರಿಂಗ್ ಆಗುತ್ತಿರುವುದು ಕೇಳಿ, ಒಳಗೆ ಹೊರಟೆ. ಬೇಗ ಬಂದು ಪೋನ್ ತೆಗೆಯುತ್ತಿರುವಂತೆ ಆ ಕಡೆಯಿಂದ ನನ್ನ ಕಸಿನ್ ಬಿಂದುಮಾಧವ, ನಾವು ಸಾಮಾನ್ಯವಾಗಿ ಮಾಧವನೆಂದು ಕರೆಯುವುದು. 
 
"ಯಾರು ಅತ್ತಿಗೇನ?" ಎಂದ. ಅದಕ್ಕೆ ನಾನು 
"ಅತ್ತಿಗೆ ಅಲ್ಲಪ್ಪ ನಾನು ಗಿರಿ" ಎಂದೆ. ನನ್ನ ಪೂರ್ಣ ಹೆಸರು ಗಿರೀಶ ಆದರು ಎಲ್ಲರಿಗೆ ಗಿರಿ.
"ಗಿರಿ, ಬೆಳಗ್ಗೆ ನಮ್ಮವಳು ಮಗುವಿಗೆ ಜನ್ಮ ಕೊಟ್ಟಳಪ್ಪ, ಗಂಡು ಮಗು , ಗೊತ್ತ ನಾನೀಗ ತಂದೆ, ಅತ್ತಿಗೆಗೆ ಹೇಳು, ಅವರನ್ನು ಕರೆದುಕೊಂಡು ಬೇಗ ಬಾ" ಎಂದ.
ನಾನು
"ವೆರಿಗುಡ್, ಬೆಳಗ್ಗೆಯೆ ಒಳ್ಳೆ ಸುದ್ದಿಯಪ್ಪ , ಎಲ್ಲಿ ಆಯಿತು, ಡೆಲಿವರಿ ಮನೆಯಲ್ಲ , ನರ್ಸಿಂಗ್ ಹೋಮನಲ್ಲ" ಎಂದೆ. ಅದಕ್ಕವನು
"ಲೋ ಅದೆಂತದು ಮನೆಯಲ್ಲಿ, ಅದೇಗೆ ಸಾದ್ಯ, ಇಲ್ಲೆ ಶಾರದ ನರ್ಸಿಂಗ್ ಹೋಮ್, ಅರ್ದ ರಾತ್ರಿಯಲ್ಲೆ ಇಲ್ಲಿ ಬಂದೆವು, ಈಗ ಸ್ವಲ್ಪಕಾಲ ಮುಂಚೆ ಡೆಲಿವರಿ ಆಯಿತು, ಇನ್ನು ಇಲ್ಲಿಯೆ ಇದ್ದೇವೆ ಬೇಗ ಬಾ" ಎಂದು ಕಾಲ್ ಕಟ್ ಮಾಡಿದ. 
 
ಅದು ಸರಿಯೆ ನನ್ನ ಬುದ್ದಿಯೆ ಮಂಕು, ಈ ಕಾಲದಲ್ಲಿ ಮನೆಯಲ್ಲಿ ಎಲ್ಲಿ ಸಾದ್ಯ. ಎಂದುಕೊಂಡು, ಮನೆಯವರಿಗೆ ಹೇಳಿ ಸ್ವಲ್ಪ ಕಾಪಿ ಮಾಡಿಸಿ ಫ್ಲಾಸ್ಕ್ ನಲ್ಲಿ ಹಾಕಿ. ಬೇರೆ ಬಟ್ಟೆ ಧರಿಸಿ ಇಬ್ಬರು ಹೊರಟು ಅಲ್ಲಿ ಸೇರಿದೆವು. ನಾವು ತೆಗೆದುಕೊಂಡು ಹೋಗಿದ್ದ ಕಾಫಿಯನ್ನು ಅವನಿಗೆ, ಮತ್ತೆ  ಚಿಕ್ಕಪ್ಪ ಚಿಕ್ಕಮ್ಮನಿಗೆ ಕೊಟ್ಟು ಮಾತನಾಡುತ್ತ ನಿಂತೆವು. ಮಾಧವ ತುಂಬಾನೆ ಸಂಭ್ರಮದಲ್ಲಿದ್ದ. ಮದುವೆಯಾಗಿ ಆರು ವರ್ಷಗಳು ಕಳೆದರು ಮಕ್ಕಳಾಗದಿದ್ದರಿಂದ ಸಾಕಷ್ಟು ತಲೆಕೆಡಸಿಕೊಂಡಿದ್ದ. ಡಾಕ್ಟರ್ ಬಳಿ ಅಲೆತವೆಲ್ಲ ಮುಗಿದಾದಮೇಲೆ ದೇವರು , ತೀರ್ಥಸ್ಥಳ ಎಂದೆಲ್ಲ ಸುತ್ತಾಡಿ ಎಲ್ಲೆಲ್ಲಿ ಸಾದ್ಯವೊ ಅಲ್ಲೆಲ್ಲ ಹರಕೆ ಹೊತ್ತು ಅಂತು ಅವನ ಆಸೆ ಪೂರೈಸಿತ್ತು. 
 
 ಮಾದವ ಸಂತಸದಲ್ಲಿ ಹರಟುತ್ತಿದ್ದ, ಮಗು ಸ್ವಲ್ಪ ತೂಕ ಕಡಿಮೆ ಹಾಗಾಗಿ ಎರಡು ದಿನ ಇನ್ ಕ್ಯೂಬೇಟರ್ ನಲ್ಲಿ ಇಡುತ್ತಾರೆ, ಆದರೆ ಡಾಕ್ಟರ್ ಹೇಳಿದ್ದಾರೆ ಮಗು ಪೂರ್ಣ ಅರೋಗ್ಯವಾಗಿದೆ, ತಾಯಿ ಮಗು ಅರಾಮವಾಗಿದ್ದಾರೆ ಎಂದೆಲ್ಲ ಹೇಳಿದ. ಆಗಲೆ ಮಗುವಿಗೆ ಹೆಸರಿಡುವ ಮಾತೆಲ್ಲ ಶುರುವಾಯಿತು. ಮನೆಗೆ ಹೋಗಿ ತಾಯಿ ಮಗುವಿಗೆ ನೀರಾದ ಮೇಲೆ ತೊಟ್ಟಿಲ ಶಾಸ್ತ್ರ, ನಾಮಕರಣವೆಲ್ಲ , ಅದೇನೊ 'ಮ' ಕಾರದಲ್ಲೆ ಹೆಸರು ಪ್ರಾರಂಬವಾಗಬೇಕಂತೆ. ತಲಾ ಒಂದು ಹೆಸರು ಹೇಳಿದರು. 
 
 ಹೀಗೆ ಸಂಭ್ರಮದಲ್ಲಿದ್ದ ಅವನಿಗೆ ಬರುತ್ತೇವೆ ಎಂದು ಹೇಳಿ, ಬೇಕಿದ್ದಲ್ಲಿ ಮಧ್ಯಾನದ ಊಟ ತರುತ್ತೇನೆ ಅಂತ ತಿಳಿಸಿ, ನಾನು ನಮ್ಮವಳು ಮನೆಗೆ ಬಂದು ಮತ್ತೆ ಸಿದ್ದವಾಗಿ ಆಪೀಸ್ ಗೆ ನಾನು ಹೊರಟಾಗ ನನಗೆ ಸ್ವಲ್ಪ ತಡವೆ ಆಗಿತ್ತು. 
..
..
...
 
 ಮತ್ತೆರಡು ದಿನ ಕಳೆದಿತ್ತೇನೊ
 
ಬೆಳಗ್ಗೆ ಏಳುವಾಗಲೆ ಎಂತದೊ ಬೇಸರ, ಅದೇನೊ ಕೆಲವು ದಿನ ಬೆಳಗ್ಗೆ ಎಚ್ಚರವಾಗುವಾಗಲೆ ಮನಸ್ಸು ಅದೇನೊ 'ಡಿಪ್ರೆಷನ್' ನಲ್ಲಿರುತ್ತದೆ ಏನು ಕಾರಣವೊ. ಕಾಫಿ ಕುಡಿದವನಿಗೆ ಏನೊ ಹೊರಗೆ ಹೋಗಿ ಆ ಮಲ್ಲಿಗೆ ಅಂಟನ್ನು ನೋಡಬೇಕೆನಿಸಿತು. ಹೊರಗೆ ಬಂದು ಗಿಡದ ಹತ್ತಿರ ಕುಳಿತೆ, 
ಅರೆ ! ಇದೇನು ! ಮೊನ್ನೆ ಹೊಸ ಚಿಗುರು ಮೂಡಿ ನಳನಳಿಸುತ್ತಿದ್ದ ಮಲ್ಲಿಗೆ ಏಕೊ ಸಪ್ಪಗಿದೆ, ಚಿಗುರಿದ್ದ ಒಂದೆ ಒಂದು ಎಲೆ ಬಣ್ಣ ಕಳೆದು ಮುರುಟಿ ಕೆಳಗೆ ಬಿದ್ದು ಹೋಗಿದೆ. ಮನಸಿಗೆ ಎಂತದೋ ಅಘಾತವಾಗಿತ್ತು. ಏಕೊ ಗಾಭರಿ ಪಟ್ಟವನಂತೆ ಪತ್ನಿಯನ್ನು ಕೂಗಿದೆ. ಹೊರಬಂದು ಅವಳು ಸ್ವಲ್ಪ ಗಾಭರಿಯಿಂದಲೆ 
"ಏಕೆ ಏನಾಯ್ತು" ಎನ್ನುತ್ತ ಹತ್ತಿರ ಬಂದವಳು, "ಓ ಚಿಗುರಿದ ಮಲ್ಲಿಗೆ ಮತ್ತೆ ಮುರುಟಿತ" ಎನ್ನುತ್ತ ಕುಳಿತವಳು ಮಲ್ಲಿಗೆ ಕಡ್ಡಿಯನ್ನು ಪರೀಕ್ಷಿಸಿದವಳು
"ಅಷ್ಟೇರಿ ಇದು ಬರಲ್ಲ, ಎಲ್ಲೊ ಕಡ್ಡಿಯಲ್ಲಿ ಉಳಿದಿದ್ದ ಸತ್ವ ಒಂದು ಎಲೆ ಚಿಗುರಿದೆ, ಆದರೆ ಒಳಗೆ ಬೇರೆ ಬಿಟ್ಟಿರಲ್ಲ ಹಾಗಾಗಿ ಎಲೆ ಬಾಡಿ ಹೋಗಿದೆ" ಎಂದವಳು ಮಣ್ಣನ್ನು ಕೆದಕಿ ಅ ಕಡ್ಡಿಯನ್ನು ಹೊರತೆಗೆದಳು
ನಾನು 'ಏ ಇರು ಅದನ್ನೇಕೆ ಹೊರತೆಗೆಯುತ್ತಿ ಮತ್ತೆ ಚಿಗುರಬಹುದು" ಅನ್ನುವಾಗಲೆ ಅವಳು
"ಇನ್ನೆಲ್ಲಿ ಚಿಗುರುತ್ತೆ, ನೋಡಿ ಬೇರು ಬಂದಿಲ್ಲ, ಅಲ್ಲದೆ ಕಡ್ಡಿಯೆಲ್ಲ ಕೊಳೆತು ಹೋಗಿದೆ, ನೀವು ನೀರು ಜಾಸ್ತಿ ಹಾಕಿದಿರೊ ಏನೊ " 
ಎನ್ನುತ್ತ ಮಲ್ಲಿಗೆ ಕಡ್ಡಿಯ ಸಿಂಬೆಯನ್ನು ಮಣ್ಣಿನ ಮೇಲೆ ಹಾಕಿ ಎದ್ದಳು. ನಾನು ಮುಟ್ಟಿನೋಡಿದೆ ನಿಜ ಪಿತಪಿತ ಎನ್ನುತ್ತಿದೆ ಕೊಳೆತುಹೋಗಿದೆ ಮಲ್ಲಿಗೆಕಡ್ಡಿ. ಅವಳು ಒಳಗೆ ಹೋದಳು. ನನಗೆ ಅದೇನೊ ಅದನ್ನು ನೋಡುವಾಗ ಮಲ್ಲಿಗೆ ಬಳ್ಳಿಯ ಹೆಣ ಅನ್ನಿಸಿತು. ಏಕೊ ಮನವೆಲ್ಲ ಬೇಸರ ತುಂಬಿತು. ಕಡ್ಡಿಯನ್ನು ತೆಗೆದು, ಮನೆಯ ಹಿಂಬಾಗದ ಖಾಲಿ ಸೈಟಿಗೆ ಎಸೆದು, ಕೈತೊಳೆದು ಬರುವಾಗ ಅದೆಂತದೊ, ಮನವೆಲ್ಲ ಸೂತಕ ತುಂಬಿದಂತ ಭಾವ.
ಪೇಪರ್ ಓದಿ ಸ್ನಾನಕ್ಕೆ ಹೋಗುವ ಎಂದು ಕುಳಿತೆ, ಐದು ನಿಮಿಷವಾಗಿತ್ತೇನೊ, ಹೊರಗೆ ಯಾರೊ ಬೈಕ್ ನಿಲ್ಲಿಸದಂತೆ ಶಬ್ದ.
ಎದ್ದು ಹೋಗಿ ಬಾಗಿಲು ತೆರೆದರೆ, ಮಾಧವ, ಮುಖವೆಲ್ಲ ಬಾಡಿ ಹೋಗಿದೆ, ಕಣ್ಣಿನಲ್ಲಿ ಎಂತದೊ ಸಂಕಟ. 
"ಒಳಗೆ ಬಾರೊ" ಎಂದು ಕರೆದರೆ,
"ಇಲ್ಲ ನೀನೆ ನನ್ನ ಜೊತೆ ಬಾ, ಅಸ್ಪತ್ರೆಗೆ ಹೋಗೋಣ" ಎಂದ, 
ಹೊರಗೆ ಬಂದ ನನ್ನವಳು 
"ಬನ್ನಿ ಒಳಗೆ ಕಾಫಿ ಕುಡಿದು ಹೋಗುವಿರಂತೆ" ಎನ್ನುತ್ತಲೆ,
"ಇಲ್ಲ ಅತ್ತಿಗೆ, ಗಿರಿಯನ್ನು ಕರೆದೋಯ್ಯಲು ಬಂದೆ, ಬೆಳಗ್ಗೆ ಅದೇನೊ ಆಯ್ತೊ ರಾತ್ರಿಯೆಲ್ಲ ನರಳುತ್ತಿದ್ದ ಮಗು ಮಿಸುಕಾಡುತ್ತಲೆ ಇಲ್ಲ ನರ್ಸ್ ಡಾಕ್ಟರ್ ಮನೆಗೆ ಫೋನ್ ಮಾಡಿದ್ದಾರೆ, ನೈಟ್ ಡ್ಯೂಟಿ ಡಾಕ್ಟರ್ ಏನು ಹೇಳುತ್ತಿಲ್ಲ, ನೀವು ಹಿಂದೆ ಆಟೋದಲ್ಲಿ ನಿದಾನ ಬನ್ನಿ ತಡಮಾಡಬೇಡಿ" ಎಂದ. ನಾನು ಆತುರದಲ್ಲಿ ಅವನ ಜೊತೆ ಹೊರಟು ನರ್ಸಿಂಗ್ ಹೋಮ್ ತಲುಪುವಾಗ ಡಾಕ್ಟರ್ ಬಂದಾಗಿತ್ತು. 
 
ಮದುವೆಯಾಗಿ ಆರು ವರ್ಷಗಳ ನಂತರ ಹುಟ್ಟಿದ ಮಗು. ಮೊದಲಿನಿಂದಲು,ಅದೇನೊ ಮಾದವನಿಗೆ ಮಕ್ಕಳೆಂದರೆ ಪ್ರಾಣ. ಅವನು ನಮ್ಮ ಮನೆಗೆ ಬಂದಾಗಲು, ನನ್ನ ಜೊತೆ ಮಾತನಾಡುವದಕ್ಕಿಂತ ನನ್ನ ಮಕ್ಕಳ ಜೊತೆ ಹರಟುತ್ತ ಇದ್ದಿದ್ದೆ ಜಾಸ್ತಿ. ನನ್ನ ಮಗಳಿಗಂತು ಅವನೆಂದರೆ ಅಚ್ಚುಮೆಚ್ಚು. ಈಗ ಪಾಪ ಮಗುವಿನ ಬಗ್ಗೆ ಸಹಜ ಆತಂಕದಲ್ಲಿದ್ದ. ನಾನು ಏನಾಯ್ತು ವಿವರವಾಗಿ ಹೇಳು ಎಂದರೆ
"ಎರಡು ದಿನ ಮಗು ಆರೋಗ್ಯವಾಗಿಯೆ ಇತ್ತಪ್ಪ, ಇನ್ ಕ್ಯೂಬೇಟರ್ ನಲ್ಲಿ ಸಹಜವಾಗಿ ಆರೋಗ್ಯವಾಗಿದ್ದ ಮಗು ಅದೇನೊ ನಿನ್ನೆ ರಾತ್ರಿ ನೋಡಿದರೆ ಉಸಿರಾಡಲು ಒದ್ದಾಡುತ್ತಿತ್ತು, ಡ್ಯೂಟಿ ಡಾಕ್ಟರ್ ಮುಖ್ಯ ಡಾಕ್ಟರ್ ಗೆ ರಾತ್ರಿಯೆ ಫೋನ್ ಮಾಡಿ ಕೇಳಿದರು, ಕಫ ಸೇರಿರ ಬಹುದೆಂದೆ ಎಂತದೊ ಡ್ರಾಪ್ಸ್ ಹಾಕಿದರು. ಆದರೆ ಮಗು ಸುದಾರಿಸಲೆ ಇಲ್ಲ, ಬೆಳಗಿನ ಜಾವ ಅದೇಕೊ ಇದ್ದಕ್ಕಿದಂತೆ ಅಲುಗಾಟ ನಿಲ್ಲಿಸಿದ್ದರಿಂದ ನರ್ಸ್ ಗೆ ಕರೆದು ತೋರಿಸಿದ್ದಾಳೆ, ನಾನು ಮನೆಯಿಂದ ಬರುವ ಹೊತ್ತಿಗೆ ಇಷ್ಟೆಲ್ಲ ಗಾಭರಿ" ಎಂದ. 
ಅಷ್ಟರಲ್ಲಿ ಡಾಕ್ಟರ್ ನಮ್ಮ ಹತ್ತಿರ ಬಂದರು. ಮಾದವನನ್ನು ನೋಡುತ್ತ
"ಸಾರಿ ನಮ್ಮ ಪ್ರಯತ್ನವೆಲ್ಲ ವೇಸ್ಟ್ ಆಯಿತು, ಮಗುವನ್ನು ಉಳಿಸಿಕೊಳ್ಳಲಾಗಲಿಲ್ಲ, ಮುಂದಿನ ಪ್ರೊಸಿಜರ್ಗೆ ಒಳಗೆ ಹೋಗಿ ಕೇಳಿ" 
ಎನ್ನುತ್ತ ತಲೆಬಗ್ಗಿಸಿ ಹೊರಟುಹೋದರು. ಮಾದವ ಗರಬಡಿದವನಂತೆ ನಿಂತ.
 
"ಮಾದವ ಸಮಾದಾನ ತೆಗೆದುಕೋ, ಇಂತಹ ಸಂದರ್ಭದಲ್ಲಿ ನಾವೆಲ್ಲ ಅಸಹಾಯಕರು, ಬರುವದನ್ನು ಎದುರಿಸಬೇಕಷ್ಟೆ"
ಅಂತ ಏನೇನೊ ಸಮಾದಾನ ನನಗೆ ತೋಚಿದಂತೆ ಹೇಳಿದೆ.
ಮನೆಯಿಂದ ನನ್ನ ಪತ್ನಿಯು ಆಟೋದಲ್ಲಿ ಬಂದಳು.
"ಗಿರಿ ನಾನು ಯಾರಿಗೆ ಏನು ದ್ರೋಹ ಮಾಡಿದೆ ಅಂತ ನನಗೆ ಇಂತ ಶಿಕ್ಷೆ ಹೇಳೊ" ಅಂತ ಮಾದವ ಗೋಳಾಡುತ್ತಿದ್ದ.
ಆರುವರ್ಷಗಳ ದೀರ್ಘ ನಿರೀಕ್ಷೆ ಹೀಗೆ ಹತಾಷೆಯಲ್ಲಿ ಕೊನೆಗೊಂಡಿತ್ತು
ನನಗಂತು ಅವನನ್ನು, ಅವನ ಪತ್ನಿಯನ್ನು ಸಮಾದಾನ ಪಡಿಸುವುದೆ ಕಷ್ಟವಾಗಿ ಹೋಯಿತು. 
 
ಎಲ್ಲವನ್ನು ಮುಗಿಸಿ, ಮದ್ಯಾನ ಮನೆಗೆ ಬಂದು ಹಾಲಿನಲ್ಲಿ ಒಬ್ಬನೆ ಕುಳಿತಾಗ ಮನವನ್ನೆಲ್ಲ ಅದೇನೊ ವಿಷಾದಭಾವ ತುಂಬಿತ್ತು. ಮೂರು ನಾಲಕ್ಕು ದಿನ ನಮ್ಮ ನಡುವೆ ಇದ್ದು, ಇನ್ನು ಹೆಸರು ಇಡುವ ಮುಂಚೆಯೆ ನಮ್ಮನ್ನೆ ತೊರೆದು ಹೋದ ಆ ಪುಟ್ಟ ಮಗುವಿನ ಯೋಚನೆ ನನ್ನ ಮನವನ್ನು ತುಂಬಿತ್ತು. ಹಾಗೆ  ಮಾದವ ಹಾಗು ಅವನ ಪತ್ನಿಯ ದುಖಃ ಸಹ ನನ್ನ ಹೃದಯದಲ್ಲಿ ಅಡಗಿ ವೇದನೆ ಕೊಡುತ್ತಿತ್ತು. 
************  ****

No comments:

Post a Comment

enter your comments please