Thursday, December 22, 2016

ಬೆಳಕು-ಸತ್ಯ-ಕತ್ತಲೆ-ಅಜ್ಞಾನ

ಬೆಳಕು-ಸತ್ಯ-ಕತ್ತಲೆ-ಅಜ್ಞಾನ

"ಸೂರ್ಯನಂತಹ ಕೋಟಿ ಕೋಟಿ ನಕ್ಷತ್ರಗಳು ಲಕ್ಷ ಕೋಟಿ ವರ್ಷಗಳಿಂದ ಸತತ ಪ್ರಯತ್ನಪಡುತ್ತಿದ್ದರು, ಬ್ರಹ್ಮಾಂಡದ ಕತ್ತಲನು ಪೂರ್ಣವಾಗಿ ಅಳಿಸಲು ಸಾದ್ಯವಾಗಿಲ್ಲ ಎನ್ನುವ ಸತ್ಯ ಮನಸನ್ನು ಕಲಕುತ್ತದೆ "
ಕೆಲವುದಿನದ ಕೆಳಗೆ ಈ ರೀತಿ ಫೇಸ್ ಬುಕ್ಕಿನಲ್ಲಿ ಒಂದು ಸ್ಟೇಟಸ್ ಹಾಕಿದ್ದೆ,
ಅದಕ್ಕೆ ಬಹಳಷ್ಟು ಕಾಮೆಂಟ್ಸ್ ಬಂದವು, 
ನನ್ನ ಈ ಮಾತನ್ನು ಬಹುತೇಕ, ಋಣಾತ್ಮಕ ಎಂದು ಪರಿಗಣಿಸಿ,
"ಬ್ರಹ್ಮಾಂಡದ ತಿಮಿರ, ಅನಾದಿ ಕಾಲದಿಂದಲೂ ಕೋಟಿ ಕೋಟಿ ನಕ್ಷತ್ರಗಳ ಪ್ರಕಾಶವನ್ನು ಮುಸುಕಲು ಸಾಧ್ಯವಾಗಿಲ್ಲ ಎನ್ನುವ ಸತ್ಯ ಮನಸ್ಸನ್ನು ಮುದಗೊಳಿಸುತ್ತದೆ
ಎನ್ನುವ, ಮತ್ತು ಅದೇ ಅರ್ಥ ಕೊಡುವ ಧನಾತ್ಮಕ ಎನ್ನುವ ರೀತಿಯ ಕಾಮೆಂಟ್ ಗಳು ಬಂದವು,
ನನಗೂ ಆಗ ನನ್ನ ಮಾತು ಪೂರ್ಣ ಸ್ವಷ್ಟವಾಗಿರಲಿಲ್ಲ.
ಆಮೇಲೆ ನನಗೆ ಅನ್ನಿಸಿತು, ಇದಕ್ಕೆಲ್ಲ ಕಾರಣ, ಕತ್ತಲನ್ನು ನಿರಾಶವಾದವೆಂದು, ಬೆಳಕನ್ನು ಆಶಾವಾದವೆಂದು ಭ್ರಮಿಸುವ ನಮ್ಮ ಮನಸ್ಸು ಇದಕ್ಕೆ ಕಾರಣ.
ಮೊದಲಿನಿಂದಲೂ ಬೆಳಕನ್ನು ಜ್ಞಾನದ ಸಂಕೇತವನ್ನಾಗಿ ಕತ್ತಲನ್ನು ಮೂಢತೆಯ ಸಂಕೇತವಾಗಿಯು ಅನಾದಿಕಾಲದಿಂದಲೂ ಸ್ವೀಕರಿಸಿದೆ.
ಆದರೆ ತರ್ಕವನ್ನು ಸ್ವಲ್ಪ ಬಳಸಿ ನೋಡಿದರೆ, ಬೆಳಕು ಕತ್ತಲೆಯಲ್ಲಿನ ನಿಗೂಡತೆಯನ್ನು ಬೇಧಿಸಲು ಪ್ರಯತ್ನಿಸುತ್ತಿದೆ ಅನ್ನಬಹುದೇನೊ.
ಬ್ರಹ್ಮಾಂಡದ ಅಗಾದತೆ ಎಷ್ಟು ಎನ್ನುವದನ್ನು ಯಾರು ಅರ್ಥಮಾಡಿಕೊಳ್ಳಲಾಗುವದಿಲ್ಲ. ಅದರ ಒಂದು ಕೊನೆಯಿಂದ ಮತ್ತೊಂದೆ ಕೊನೆಗೆ ಇರಬಹುದಾದ ವಿಸ್ತೀರ್ಣವನ್ನು ಅರಿಯಲು, ಅದರ ಕೊನೆ ಎಲ್ಲಿದೆ ಎಂಬುದೆ ಯಾರಿಗೂ ತಿಳಿಯದು. ಅಂತಹ ವಿಶಾಲ ಭ್ರಹ್ಮಾಂಡವನ್ನು ಆವರಿಸಿರವುದು ಅಗಾದ ಕತ್ತಲು. ಅಲ್ಲಿ ಏನಿದೆ ಎಂಬುದು ಯಾರಿಗೂ ಅರಿವಿಗೆ ಬರದ, ಯಾರ ಕಣ್ಣಿಗೂ ಬೀಳಲು ಶಕ್ಯವಿಲ್ಲದ ಖಾಲಿ ಖಾಲಿ ಪ್ರದೇಶ.
ಕತ್ತಲು ಬರೀ ಕತ್ತಲು.
ಹಗಲೆಲ್ಲ ಭೂಮಿಯಲ್ಲಿನ ಕತ್ತಲೆಯನ್ನು ದೂರಮಾಡಿದ ಸಂತೃಪ್ತಿಯಲ್ಲಿನ ಸೂರ್ಯನ ಬೆಳಕು, ಭೂಮಿ ತನ್ನ ಮುಖ ತಿರುಗಿಸಿದೊಡನೆ, ಆ ಕತ್ತಲನ್ನು ಓಡಿಸಲು ಅಶಕ್ಯ. ಸೂರ್ಯ ನಮ್ಮ ಅತೀ ಹತ್ತಿರದಲ್ಲಿರುವ ನಕ್ಷತ್ರ, ಇವನ ಶಕ್ತಿಯೆ ಇಷ್ಟು ಅನ್ನುವಾಗ, ಎಲ್ಲ ನಕ್ಷತ್ರಗಳು ಕೂಡಿದರು, ಅಗಾದ ಬ್ರಹ್ಮಾಂಡದ ಕತ್ತಲೆಯನ್ನು ಓಡಿಸಲು, ಕೋಟಿ ಕೋಟಿ ವರ್ಷಗಳಿಂದಲೂ (ವರ್ಷ ಅನ್ನುವುದು ಸಹ ನಮ್ಮ ಭ್ರಮೆ ! ) ಅಳಿಸಲಾಗಿಲ್ಲ ಅನ್ನುವುದು ಸತ್ಯ.
ಇಂತಹ ಬ್ರಹ್ಮಾಂಡದ ದುರ್ಭರ ಕತ್ತಲೆ ನಡುವೆ ಅಲ್ಲಲ್ಲಿ ಮಿನುಗುತ್ತಿರುವ ನಕ್ಷತ್ರಗಳು. ನಮ್ಮ ಎಣಿಕೆಗೆ ಅಗಾದ ಎನಿಸಬಹುದಾದ ಸೂರ್ಯನಿಗಿಂತಲೂ ನೂರು ಪಟ್ಟು ಮಿಗಿಲಾದ ದೊಡ್ಡದಾದ ನಕ್ಷತ್ರಗಳು ಕೋಟಿ ಕೋಟಿ ಇದ್ದರು ಸಹ ಬ್ರಹ್ಮಾಂಡವನ್ನು ಇಂದಿಗೂ ಆವರಿಸಿರುವುದು ಕತ್ತಲೆ ಹಾಗು ನಿಗೂಡತೆ. ಈ ಬ್ರಹ್ಮಾಂಡದ ಆಚೆಗೆ ಇಂತಹುದೇ ಅದೆಷ್ಟು ಬ್ರಹ್ಮಾಂಡಗಳಿವೆ ಯಾರು ಅರಿಯರು
ಇಂತಹ ಅಗಾದ ಕತ್ತಲೆಯನ್ನು ಬೇದಿಸಲು ಪ್ರಯತ್ನ ಪಡುತ್ತಿರುವುದು ಇದೇ ಕೋಟಿ ಕೋಟಿ ನಕ್ಷತ್ರಗಳು, ಅವುಗಳು ಪ್ರಯತ್ನ ಪಡುತ್ತಿರುವುದು ಬ್ರಹ್ಮಾಂಡ ಎನ್ನುವ ಸತ್ಯವನ್ನು , ನಿಗೂಡತೆಯನ್ನು ಅಂದರೆ ಕತ್ತಲೆಯನ್ನು ಬಯಲಿಗೆಳೆಯಲು . ಅಲ್ಲಿಗೆ ಒಂದು ತರ್ಕಕ್ಕೆ ಹೋದರೆ, ಕತ್ತಲೆಯೆ ನಿಗೂಡ, ಅದೇ ಸತ್ಯ. ಅಂತಹ ಸತ್ಯವನ್ನು ಬೇದಿಸುವ ವಸ್ತು ಮಾತ್ರ ಬೆಳಕು ಅಲ್ಲವೆ ?
ಅಥವ ಕತ್ತಲೆ ಅನ್ನುವುದು ಸತ್ಯವನ್ನು ಮುಸುಕಿರುವ ಹೊರಗಿನ ಮುಸುಕು, ಅಥವ ಸತ್ಯಕ್ಕೆ ಸೇರಿದ ವಸ್ತು.
ಇಂತಹ ನಕ್ಷತ್ರಗಳ ಅಂದರೆ ಬೆಳಕಿನ ಆಯಸ್ಸು ಬ್ರಹ್ಮಾಂಡಕ್ಕೆ , ಕತ್ತಲೆಗೆ ಹೋಲಿಸಿದರೆ, ನಶ್ವರ, ಕಡಿಮೆ !!!
ಇಂತಹ ನಕ್ಷತ್ರಗಲು, ಅದರ ಬೆಳಕು ಹುಟ್ಟುತ್ತಲೆ ಇರುತ್ತದೆ , ಹಾಗು ಸಾಯುತ್ತಲು ಇರುತ್ತದೆ, ಸತ್ತ ನಕ್ಷತ್ರ ಪುನಃ ಇದೆ ನಿಗೂಡ ಕತ್ತಲೆಯಲ್ಲಿ ಸೇರಿ ಹೋಗುತ್ತದೆ, ಶಾಶ್ವತ ಕತ್ತಲೆಯನ್ನು !!
ಬೆಳಕು ಇಲ್ಲ ಅನ್ನುವ ಸ್ಥಿತಿಯೆ ಕತ್ತಲೆ ಎನ್ನುವದಾದರೆ ,
ಬೆಳಕು ಇಲ್ಲದಾಗಲು ಕತ್ತಲೆ ಇತ್ತು,
ಬೆಳಕು ಬಂದು ಹೋದ ನಂತರವೂ ಕತ್ತಲೆ ಇದೆ .
ಕತ್ತಲೆ (ನಿಗೂಡತೆ) ಎನ್ನುವುದೆ ಸತ್ಯ. ಬೆಳಕು ಸತ್ಯದ ಅನ್ವೇಷಣೆಯನ್ನು ನಡೆಸಿರುವ ಒಂದು ವಸ್ತು/ಸಲಕರಣೆ ಅನ್ನುವುದು ಕುತರ್ಕವಾಗುತ್ತದೆಯೆ ? .
ಆದರೆ ವಿಪರ್ಯಾಸವೆಂದರೆ, ಕತ್ತಲೆಯನ್ನು ಬೇದಿಸಲು ಬೆಳಕು ಪ್ರಯತ್ನ ಪಡುವಾಗಲೆ ಕತ್ತಲೆ ಮಾಯವಾಗುತ್ತದೆ, ಬೆಳಕು ಸೋತು ಸುಮ್ಮನಾದರೆ ಪುನಃ ಕತ್ತಲೆ ಆವರಿಸುತ್ತದೆ
ಇಂತಹ ಕತ್ತಲು , ನಿಗೂಡತೆಯು ಸಂಪೂರ್ಣ ವಿಶ್ವವನ್ನು ಆವರಿಸಿದೆ, ಅದನ್ನು ಅರ್ಥಮಾಡಿಕೊಳ್ಳಬೇಕಿದೆ , ಸತ್ಯವನ್ನು ಅರ್ಥಮಾಡಿಕೊಳ್ಳಬೇಕಿದೆ

No comments:

Post a Comment

enter your comments please