Saturday, June 4, 2011

ಪಾಲು ಪಟ್ಟಿ

ಪಾಲು ಪಟ್ಟಿ

ಬಾಳಬಟ್ಟೆಯ ಅರ್ಧ ಸವೆಸುತ
ಇತ್ತ ನಿಂತು ಹಿಂದೆ ನೋಡಲು
ಕೆಲವು ಮಸುಕು ಕೆಲವು ಸ್ವಷ್ಟ
ಬಾಳ ಬಣ್ಣದ ದೃಶ್ಯಗಳು

ಸಾಧನೆಯೋ ಬಹು ದೊಡ್ಡ ಶೂನ್ಯವು
ಬಾಳ ಚಕ್ರದ ಉರುಳಲಿ
ನಾನು ಪಥಿಕನು ನನ್ನದಿಲ್ಲೇನು ಇಲ್ಲವು
ಎನುವ ಯೋಚನೆ ನನ್ನ ಅರಿವಲಿ

ಸಾಧಿಸಲು ಉಳಿದ ಸಮಯ ಸ್ವಲ್ಪ
ಬೋಧಿಸಲು ಕಲಿತುದಿಲ್ಲಿ ಅಲ್ಪ
ನೀಡಿದುದು ನೆನಪೆ ಇಲ್ಲ ಬದುಕೆ ಬರಿ ಬೊಗಳೆಯಲ್ಲ
ಬಿಚ್ಚಿ ನೋಡಲು ಬರಿ ಹರುಕು ಬಟ್ಟೆಯ ಜೀವನ

ದೈವ ಒಲಿಯಲು ಮನದಿ ಭಕ್ತಿಯಿಲ್ಲ
ಶಾಸ್ತ್ರ ಕಲಿಯಲು ನಿಜದ ಶ್ರದ್ದೆಯಿಲ್ಲ
ತಿಳಿವು ಹೇಳಲು ಗುರುವಿನ ದಯೆಯು ಇಲ್ಲ
ಏನು ಸಾಧಿಪೆ ಜಗದಲಿ ಹೇಗುಳಿವೆ ಪ್ರಿಯರ ಮನಗಳಲಿ

ಚಿಂತಿಪ ಮನವ ಸಂತೈಸಿದವಾರು?
ಬದುಕೆ ನಿನ್ನ ಸಾಧನೆಯಲ್ಲವೇನು,ಎಂದವರಾರು?
ದೈವ ನೀಡಿದ ಬದುಕು ನಿನ್ನದು ವಂಶ ನೀಡಿದ ದೇಹ ನಿನ್ನದು
ಋಣವು ತೀರಿದರದುವೆ ಸಾಧನೆ ಉಳಿದನೆಲ್ಲವ ಹಂಚಿಬಿಡು

ಅಸ್ಥಿ ನೀರಿನ ಪಾಲಿಗಾಯ್ತು ಬೂದಿ ಮಣ್ಣಿನ ಪಾಲಿಗಾಯ್ತು
ಇರುವ ಮನೆಯೋ ಮಡದಿ ಮಗಳ ಪಾಲಿಗಾಯ್ತು
ಹರಕು ಮುರುಕು ಬರಹಗಳೆಲ್ಲವು ಸಂಪದದ ಪಾಲಿಗಾಯ್ತು
ಜಗದ ಎಲ್ಲರ ಪ್ರೀತಿಯಷ್ಟೆ ನನ್ನ ಪಾಲಿಗೆ ಉಳಿಯಿತು

No comments:

Post a Comment

enter your comments please