Friday, March 9, 2012

ನಮ್ಮ ಭಾಷೆ ಪರಿಪೂರ್ಣವಲ್ಲವೆ ?

ನಮ್ಮ ಭಾಷೆ ಪರಿಪೂರ್ಣವಲ್ಲವೆ ?
ಹೀಗೊಂದು ಪ್ರಶ್ನೆ ಇದ್ದಕ್ಕಿದ್ದಂತೆ ನನ್ನಲ್ಲಿ ಮೂಡಿತು. ಕೆಲವು ವಾರಗಳ ಹಿಂದೆ ಅದನ್ನು ಯೋಚಿಸುವ ಅಗತ್ಯವೆ ನನಗಿರಲಿಲ್ಲ, ಎಷ್ಟೋ ವರ್ಷಗಳಿಂದ ಬರೆಯುವ ಅಗತ್ಯವೆ ನನಗೆ ಬಂದಿರಲಿಲ್ಲ , ಸರಿಯಾಗಿ ಹೇಳಬೇಕೆಂದರೆ ಬ್ಯಾಂಕಿನ ಚೆಕ್‍ಗೆ ಸೈನ್ ಮಾಡುವುದು ಹೊರತಾದ ಬರವಣಿಗೆಯೆ ಇರಲಿಲ್ಲ. ATM ನಂತರ ಅದು ಕಡಿಮೆಯಾಯಿತು. ಹೀಗಿರುವಾಗ  ಸಂಪದ ಬಳಗ ಸೇರಿದ ನಂತರ ಬರೆಯುವ, ಬರೆದಿದ್ದನ್ನು ಪುನಃ ಕನ್ನಡದಲ್ಲಿ ಅದನ್ನು ಟೈಪ್ ಮಾಡಿ,ಸಂಪದದ ಮೇಲಕ್ಕೇರಿಸುವ (upload ?) ಕೆಲಸ ಪ್ರಾರಂಬವಾಯಿತು. ಆಗಷ್ಟೆ ಗಮನಿಸಲು ಪ್ರಾರಂಬಿಸಿದೆ, ನಾವು ಮಾತನಾಡುವದಕ್ಕು ಬರೆಯುವದಕ್ಕು ವ್ಯೆತ್ಯಾಸವಿರುತ್ತದೆ. 
ಎದುರಿಗೆ ಇರುವವರ ಜೊತೆ ಮಾತನಾಡುವುದೆ ಬೇರೆ ವಿಷಯ. ಆಗ ಕೆಲವು ವ್ಯೆತ್ಯಾಸವಾದರು ನಮ್ಮ ದೇಹಬಾಷೆ ಸ್ವರವ್ಯೆತ್ಯಾಸ ಅಲ್ಲದೆ ನಮ್ಮ ಎದುರಿಗಿರುವವರ ಜೊತೆಗಿರುವ ಸಂಬಂಧಗಳ ಲೆಕ್ಕಚಾರದಲ್ಲಿ ಮಾತಿನ ಸಣ್ಣ ತಪ್ಪುಗಳು ಮುಚ್ಚಿಹೋಗುತ್ತವೆ. ಆದರೆ ಬರವಣಿಗೆಯಲ್ಲಿ ಹಾಗಲ್ಲ. ಸಣ್ಣ ವೆತ್ಯಾಸಗಳು ಎದ್ದು ಕಾಣುತ್ತವೆ. ಒಮ್ಮೆ ನಾನು  ಲೇಖನವೊಂದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ, ಒಂದು ವ್ಯೆತ್ಯಾಸ ಮಾಡಿದ್ದೆ. ’ಎಂದೂ ’ ಅನ್ನುವ ಜಾಗದಲ್ಲಿ, ’ಎಂದು ’ ಅಂತ ಉಪಯೋಗಿಸಿದ್ದೆ.  ಆದರೆ ಶ್ರೀ ಸುರೇಶ್ ಹೆಗ್ಡೆಯವರು ಅದರ ಬಗ್ಗೆ ತಿಳಿಸಿದರು. ಅದು ಅವರ ಕನ್ನಡದ ಬಗೆಗಿನ ಕಾಳಜಿ !  , ನಂತರ ಅನ್ನಿಸಿತು ಸಣ್ಣ ತಪ್ಪು ವಾಕ್ಯದ ಅರ್ಥವನ್ನೆ ಬದಲಿಸಿಬಿಡುತ್ತೆ.
   ಮತ್ತೊಮ್ಮೆ ನಾನು ಹಾಸ್ಯ ಬರವಣಿಗೆಗೆ ಒಂದು ಪ್ರತಿಕ್ರಿಯೆ ವ್ಯಕ್ತಮಾಡಿದ್ದೆ ಆದರೆ ಅದು ನನ್ನ ಮನಸ್ಸಿನಲ್ಲಿರುವ ಭಾವನೆಗೆ ಸಂಪೂರ್ಣ ವಿರುದ್ದವಾದ ಭಾವನೆಯನ್ನು ಅವರಿಗೆ ತಲುಪಿಸಿತ್ತು. ಆದರೆ ಅದಕ್ಕೆ ನನ್ನ ಪ್ರತಿಕ್ರಿಯೆ ಮಾತ್ರ ಕಾರಣವಾಗಿರಲಿಲ್ಲ, ನನ್ನ ಪ್ರತಿಕ್ರಿಯೆಗೆ ಮುಂಚೆಯೆ ಅವರು ಇನ್ನೊಂದು ಪ್ರತಿಕ್ರಿಯೆಯನ್ನು ಓದಿದ್ದರು. ಹೀಗಾಗಿ ಅದೇ ಲಹರಿಯಲ್ಲಿ ನನ್ನ ಪ್ರತಿಕ್ರಿಯೆ ಓದುವಾಗ ಬೇರೆ ಅರ್ಥವೆ ಬಂದಿತ್ತು. ಅಲ್ಲಿಗೆ ನಮ್ಮ ಬರವಣಿಗೆ ನಾವು ಬರೆಯುವದನ್ನು ಸಂಬಂಧಪಟ್ಟವರು ಓದುವಾಗ ಅವರ ಮನಸಿನ ಸ್ಥಿಥಿಯನ್ನು ಸಹ ಅವಲಂಬಿಸಿದೆ. ಅಲ್ಲಿಗೆ ಬರವಣಿಗೆ ಅನ್ನುವುದು ನಾನು ಎಷ್ಟೆ ಎಚ್ಚರವಹಿಸಿದರು ಅದು ನಮ್ಮ ಮನಸಿನಲ್ಲಿರುವ ಭಾವನೆಗಳನ್ನು ಯಾವುದೇ ವ್ಯೆತ್ಯಾಸವಿಲ್ಲದೆ ಮತ್ತೊಬ್ಬರಿಗೆ ತಲುಪಿಸುವಲ್ಲಿ ವಿಫಲವಾಗುತ್ತದೆ. ಅನ್ನುವಾಗ ಭಾಷೆ ಅನ್ನುವುದು ಪರಿಪೂರ್ಣವೆ ? ಅನ್ನುವ ಪ್ರಶ್ನೆ ಸಹಜವಲ್ಲವೆ ?
ಹೀಗೆ ಸುಮ್ಮನೆ ಒಂದು ಉದಾಹರಣೆ ಗಮನಿಸಿ , ಯಾರನ್ನಾದರು ಸ್ವಾಗತಿಸುವಾಗ ’ಬನ್ನಿ ಬನ್ನಿ’ ಅನ್ನುತ್ತೇವೆ.
ಬರುವವರು ತುಂಬಾ ಆತ್ಮೀಯರಾಗಿದ್ದು ನಿಮಗೆ ಅತೀವ ಉದ್ವೇಗ ಸಂತೋಷವಾದರೆ , ಕುಳಿತಿರುವರು ಎದ್ದು ’ಬನ್ನಿ ಬನ್ನಿ’ ಎಂದು ಸ್ವಾಗತಿಸುತ್ತೇವೆ. ನಿಮ್ಮ ದೇಹ ಭಾಷೆ ಮುಖದ ಭಾವನೆ ಅವರಿಗೆ ನೇರವಾಗಿ ತಲುಪಿಬಿಡುತ್ತದೆ. ಅದರೆ ಒಂದೊಮ್ಮೆ ಅವರು ಅನಪೇಕ್ಷಿತವಾಗಿ ನಿಮ್ಮಗೆ ಅಂತಹ ನಿರೀಕ್ಷೆಇಲ್ಲದಿದ್ದರೆ ನಿರುದ್ವೇಗವಾಗಿ ’ಬನ್ನಿ ಬನ್ನಿ’ ಎನ್ನುತ್ತೀರಿ ಅದು ನೀರಸವಾಗಿ. ನೀವು ಯಾವುದೋ ದುಖಃದಲ್ಲಿದ್ದು ಬೇಸರವಾಗಿದ್ದಲ್ಲಿ ಆಗ ಸ್ವಾಗತಿಸುವ ’ಬನ್ನಿ ಬನ್ನಿ’ ಯೆ ಬೇರೆ. ಮತ್ತೆ ನೀವು ಬಾಯಲ್ಲಿ ಹೇಳದೆ ತಲೆಯಾಡಿಸಿ ಬನ್ನಿ ಅನ್ನಬಹುದು. ಮತ್ತೆ ನೀವು ಪತ್ನೀ ಮಕ್ಕಳ ಸಮೇತ ಹೊರಗೆ ಹೊರಟಿರುತ್ತೀರಿ. ಇನ್ನೇನು ಬಾಗಿಲು ಹಾಕಿ ವಾಹನ ಹೊರತೆಗೆಯಬೇಕು ಆಗ ಅನಿರೀಕ್ಷಿತವಾಗಿ ನಿಮ್ಮ ಮನೆಗೆ ಅತಿಥಿಗಳ ಆಗಮನವಾಗುತ್ತದೆ ನೀವು ಸ್ವಲ್ಪ ಪೆದ್ದು ಪೆದ್ದಾಗಿಯೆ  ’ಬನ್ನಿ ಬನ್ನಿ’ ಎನ್ನುತ್ತೀರಿ. 
ಎಷ್ಟೆಲ್ಲ ’ಬನ್ನಿ ಬನ್ನಿ’ ಗಳು ಆದರೆ ಬರೆಯಲು ಕೂಡಿ ಅದು ಬರಿ ’ಬನ್ನಿ ಬನ್ನಿ’ ಅಷ್ಟೆ.
ನಮ್ಮ ಮನಸ್ಸಿನ ಎಲ್ಲ ಭಾವನೆಗಳನ್ನು ಅಕ್ಷರಗಳಲ್ಲಿ ಮೂಡಿಸಲು ಸಾದ್ಯವೆ ಇಲ್ಲ !
ಶಿಲಾಯುಗದ ಗುಹೆಗಳ ಕಲ್ಲುಗಳ ಮೇಲಿನ ಕೆತ್ತನೆಯಿಂದ ಸಾವಿರಾರು ವರ್ಷಗಳು ನಡೆದು ಬಂದು ಈಗ ಸಂಪದ ಗೋಡೆಯ ಮೇಲೆ ಕುಳಿತು ಬರೆಯುತ್ತಿದ್ದೀವಿ, ಆದರು ಏಕೊ ಅನ್ನಿಸಿತು ಮನುಷ್ಯ ಅರಿತು ಬೆಳೆಸಿದ ಭಾಷೆ ಹಾಗು ಬರಹ ಇನ್ನೂ ಪರಿಪೂರ್ಣವಲ್ಲ.

2 comments:

  1. ಭಾವಕ್ಕೆ ತಕ್ಕಂತೆ ಬರವಣಿಗೆ ಮೂಡುವುದು ಕಷ್ಟವೇ ಸರಿ. ನಾನು ಏನು ವ್ಯಕ್ತಪಡಿಸಬೇಕೆಂದಿರುವೆನೋ ಅದು ನಿಮಗೆ ತಲುಪದೇ ಹೋಗಬಹುದು!!!!

    ReplyDelete
  2. ನಿಜ ನಾಗರಾಜ ಸರ್ ವ್ಯಕ್ತಿಯ ಪೂರ್ಣ ಪರಿಚಯವಿಲ್ಲದೆ ಅಥವ ಅವನು ಬರೆಯುತ್ತಿರುವ ಸಂದರ್ಬ ಅಥವ ಮನಸ್ಥಿಥಿಯ ಪರಿಚಯವಿಲ್ಲದ , ಬರವಣಿಗೆಯ ಪೂರ್ಣ ಪಾಠ ಮನಸಿಗೆ ಅರ್ಥವಾಗುವದರಲ್ಲಿ ಕೆಲವೊಮ್ಮೆ ತೊಡಕಾಗುತ್ತದೆ. ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ ವಂದನೆಗಳು

    ReplyDelete

enter your comments please