[ ಸಂಪದದಲ್ಲಿ ಪ್ರಕಟಿಸಿದ್ದು ಮಾರ್ಚ್ ೮ ೨೦೧೧ ರಂದು ]
ನಿದಾನವಾಗಿ ಹಗಲು ಸಂಜೆಯಾಗಿ ಬದಲಾಗುತ್ತಿತ್ತು. ಸುತ್ತಲ ಮರಗಳಲ್ಲಿ ಅಹಾರವನ್ನರಸಿ ದೂರಹೋಗಿದ್ದ ಪಕ್ಷಿಗಳೆಲ್ಲ ಹಿಂದಿರುಗಿ ಗೂಡಿಗೆ ಬರಲು ಪ್ರಾರಂಬಿಸಿದ್ದವು.ವಿಶಾಲವಾಗಿ ಹರಡಿದ್ದ 'ಅಶೋಕವನ', ವನವಾದರು ರಕ್ಷಿತ ಪ್ರದೇಶ ಹೊರಗಿನವರಿಗೆ ಸುಲುಭವಾಗಿ ಪ್ರವೇಶವಿಲ್ಲ.ಮುಖ್ಯದ್ವಾರಕ್ಕೆ ಸದಾ ಬಿಚ್ಚುಗತ್ತಿಯ ಕಾವಲು.ವನದ ಮದ್ಯ ವಿಶಾಲವಾಗಿ ಹರಡಿದ್ದ ಮರದ ಬುಡಕ್ಕೆ ಕಲ್ಲಿನಿಂದ ಸುತ್ತುಗಟ್ಟೆಯನ್ನು ನಿರ್ಮಿಸಲಾಗಿತ್ತು. ಅದರ ಮೇಲೆಯೆ ಸದಾ ಸೀತೆ ಕುಳಿತುಕೊಳ್ಳುತ್ತಿದ್ದಳು. ಅವಳು ಕಣ್ಣಿಗೆ ಕಾಣುವಂತೆ ಕಣ್ಣಳತೆಯ ದೂರದಲ್ಲಿ ಕಾವಲು ಸ್ತ್ರೀಯರು ಇರುತ್ತಿದ್ದರು. ಅವರೆ ಹೆಮ್ಮೆಯಿಂದ ಅವರನ್ನು ರಾಕ್ಷಸಿಯರು ಎಂದು ಕರೆದುಕೊಳ್ಳುತ್ತಿದ್ದರು. ಅವರ ನಾಯಕಿ ತ್ರಿಜಟ , ಸಾಮನ್ಯವಾಗಿ ಸೀತೆಯ ಜೊತೆ ಮಾತನಾಡುತ್ತಿದುದ್ದು ಅವಳೊಬ್ಬಳೆ. ಅದಕ್ಕೆ ಕಾರಣವು ಇತ್ತು, ಅವಳಾಡುವ ಮಾತು ಮಾತ್ರ ಸೀತೆಗೆ ಸ್ವಲ್ಪವಾದರು ಅರ್ಥವಾಗುತ್ತಿತ್ತು. ಉಳಿದಂತೆ ಎಲ್ಲರದು ಆಕೆಗೆ ಅರ್ಥವಾಗದ ಕೊಲಾಹಲ. ಅವರು ಮಾತನಾಡಿದರೆ ಸುಮ್ಮನೆ ಮಂಕಾಗಿ ನೋಡುತ್ತಿದ್ದಳು.
ಮಿಥಿಲಾನಗರದ ವೈಭವದ ಅರಮನೆಯಲ್ಲಿ ಬೆಳೆದ ರಾಜಕುಮಾರಿ ಮೈಥಿಲಿ, ಇನಕುಲದ ಚಂದ್ರಮನೆಂದೆ ಹೊಗಳಲ್ಪಡುತ್ತಿದ್ದ ರಾಜಪುತ್ರ ರಾಮಚಂದ್ರನ ಮಡದಿ ಸೀತ, ತಂದೆಯ ಮಾತಿಗೆ ಶರಣಾಗಿ ಕಾಡಿಗೆ ಹೊರಟ ಪತಿಯ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಟ್ಟು ಜೊತೆಗೆ ಹೊರಟಾಗ ಅನನ್ಯ ಪರಿವ್ರತೆಯೆಂದು ಜನರೆಲ್ಲ ಉಘೇ ಉಘೇ ಎಂದು ಜಯಕಾರ ಹಾಕಿದಾಗ ಹೆಮ್ಮೆಯಿಂದ ಉಬ್ಬಿ ನಡೆದ ಜಾನಕಿ ಇಂದೇಕೊ ಮ್ಲಾನವದನಳಾಗಿ ತನ್ನೆಲ್ಲ ಆತ್ಮಬಲವನ್ನು ಕಳೆದುಕೊಂಡಂತೆ ಕುಳಿತುಕೊಂಡಿದ್ದಳು. ಪತಿಯು ಬರುವನೆಂದು ಈ ಸೆರೆಯಿಂದ ಬಿಡಿಸುವನೆಂದು ಸದಾ ತಿಳಿಹೇಳುತ್ತಿದ್ದ ಅವಳ ಮನಸೇಕೊ ಇಂದು ಬೆದರಿ, ಅವಳ ನಂಬಿಕೆಯು ಚದುರಿದೆ. ಎಲ್ಲೋ ಕಾಡಿನಲ್ಲಿರುವ ರಾಮನಿಗೆ ತನ್ನಿರುವು ಹೇಗೆ ತಿಳಿದೀತು? ಗುರುತಿಗೆಂದು ಹಾಕಿದ ಒಡವೆಗಳು ಒಮ್ಮೆ ಅವನಿಗೆ ಸಿಕ್ಕಿದರು ತನ್ನ ಗಮ್ಯವನ್ನವನಿಗೆ ತಿಳಿಸುವರಾರು? ಎಂದು ಚಿಂತಿಸುತ್ತಿದ್ದಾಳೆ.
ತಾನು ಇಲ್ಲಿ ಬಂದು ಸೇರಿದ ದಿನದ ನೆನಪಾಯಿತು ಅವಳಿಗೆ , ಆದಿನ ಸಂಪೂರ್ಣ ದಿಗ್ಬ್ರಮೆಗೆ ಒಳಗಾಗಿದ್ದೆ.ಹೆದರಿ ಕಣ್ಣು ಮುಚ್ಚಿದ್ದ ತನಗೆ ಇಲ್ಲಿಗೆ ಹೇಗೆ ಬಂದೆ ಎಂದು ನೆನಪಾಗುತ್ತಿಲ್ಲ. ತ್ರಿಜಟ ಹೇಳುವಂತೆ ತಾನಿರುವ ಈ ರಾವಣರಾಜ್ಯ ಎಲ್ಲ ದಿಕ್ಕಿನಿಂದಲೂ ಸಮುದ್ರದಿಂದ ಸುತ್ತುವರೆದಿದೆಯಂತೆ. ತಾನಿಲ್ಲಿಯವರೆಗು ಸಮುದ್ರವನ್ನೆ ಒಮ್ಮೆಯು ನೋಡಿಲ್ಲ ಎಂದುಕೊಂಡಳು. ರಾವಣನು ಆಕಾಶಮಾರ್ಗದಲ್ಲಿ ಇಲ್ಲಿಗೆ ನನ್ನನ್ನು ಕರೆತಂದನೆಂದು ಅವನು ಮಾಯಾವಿಯೆಂದು ತಿಳಿಸಿದ್ದಾಳೆ ತ್ರಿಜಟ.
ಇಲ್ಲಿಯ ವಾಸಕ್ಕೆ ಹೊಂದಿಕೊಳ್ಳಲ್ಲು ಕಷ್ಟವೇನು ಆಗಲಿಲ್ಲ, ಮೊದಲಿದ್ದ ಕಾಡಿನಂತೆಯೆ ಇಲ್ಲಿಯ ವಾತವರಣವಿತ್ತು. ತನ್ನನ್ನು ವ್ಯಾಮೋಹದಿಂದ ಹೊತ್ತು ತಂದ ರಾವಣ ನೀಚನಾದರು ಅಶೋಕವನದಲ್ಲಿಟ್ಟು ನನಗೊಂದು ಉಪಕಾರ ಮಾಡಿದ ಅಂದುಕೊಂಡಳು. ಹದಿನಾಲ್ಕುವರ್ಷ ಪತಿಯಂತೆ ವನವಾಸ ಮಾಡುವ ತನ್ನ ವ್ರತಕ್ಕೆ ಭಂಗ ಬರಲಿಲ್ಲ. ಅವನು ತನ್ನನ್ನು ಅರಮನೆಯಲ್ಲೊ ಸೆರೆಮನೆಯಲ್ಲೊ ಇರಿಸಿದ್ದರೆ ತಾನೇನು ಮಾಡುವಂತಿರಲಿಲ್ಲ. ಹತ್ತು ಹದಿನೈದು ದಿನಕೊಮ್ಮೆಯಂತೆ ಬರುತ್ತಿದ್ದನಾದರು ತನ್ನನ್ನು ಯಾವುದಕ್ಕು ಬಲವಂತ ಮಾಡಿರಲಿಲ್ಲ, ಮನ ನೋಯಿಸಿರಲಿಲ್ಲ. ತಾನೆಂದು ಅವನ ಮುಖವನ್ನೆ ನೋಡಿಲ್ಲವಾದರು ಆಜಾನುಬಾಹುವೆಂದು ಎದುರಿಗೆ ಬಂದು ನಿಲ್ಲುವಾಗ ಅನ್ನಿಸುತ್ತದೆ. ಅವನ ಮಾತು ವಿನಯವಾಗೆ ಇರುತ್ತಿತ್ತು ಅಲ್ಲದೆ ನಾಗರೀಕ ಬಾಷೆಯಾಗಿದ್ದು ತನಗೆ ಸ್ವಷ್ಟವಾಗಿ ಅರ್ಥವಾಗುತ್ತಿದ್ದು ಉಳಿದ ರಾಕ್ಷಸರಂತೆ ಕಾಡು ಬಾಷೆಯಾಗಿರಲಿಲ್ಲ. ಅವನೆಂದು ಬಂದರು ತನ್ನನ್ನು ಒಲೈಸಿ ಮಾತನಾಡುತ್ತಿದ್ದ. ರಾಮನು ಎಂದಿಗೂ ಬರಲು ಸಾದ್ಯವಿಲ್ಲವೆಂದು ಅವನನ್ನು ವರಿಸದೆ ಗತ್ಯಂತರವಿಲ್ಲೆಂದು ಹೇಳುತ್ತಿದ್ದ. ಅದಕ್ಕೆ ತಕ್ಕ ಧರ್ಮಸಮರ್ಥನೆಯನ್ನು ನೀಡುತ್ತಿದ್ದ, ಈಗ ತಾನು ರಾಕ್ಷಸ ರಾಜ್ಯದಲ್ಲಿರುವದರಿಂದ ಅವರ ಧರ್ಮದಂತೆ ಪತಿಯಿಂದ ದೂರವಿರುವ ತಾನು ರಾವಣನನ್ನು ವರಿಸುವುದು ಅದರ್ಮವಾಗಿರಲಿಲ್ಲ, ಇದು ಅವನ ವ್ಯಾಖ್ಯಾನ.
ತನ್ನನ್ನು ಬಲವಂತವಾಗಿ ವರಿಸುತ್ತಿಲ್ಲ ಎಂಬುದು ಅವನ ಒಳ್ಳೆಯತನವೇನಾಗಿರಲಿಲ್ಲ. ತ್ರಿಜಟ ತಿಳಿಸಿದಂತೆ ತನ್ನನ್ನು ಅಪಹರಿಸಿ ತಂದಿರುವುದು ಅವನ ಪತ್ನಿ ವರ್ಗಸಹಿತವಾಗಿ ಅವನ ರಾಜ್ಯದಲ್ಲಿ ಬಹಳ ರಾಕ್ಷಸರಿಗೆ ಇಷ್ಟವಿಲ್ಲ. . ರಾಕ್ಷಸಕುಲವೆ ಅಲ್ಲದ ತನ್ನನ್ನು ಅವನ ತಂಗಿ ಶೂರ್ಪನಖಿ ಮಾತಿಗೆ ಕಿವಿಗೊಟ್ಟು ತಂದಿರುವುದನ್ನು ಬಹಳ ಮಂದಿ ಅದರಲ್ಲು ಮುಖ್ಯವಾಗಿ ಅವನ ತಮ್ಮ ವಿಭೀಷಣ ಪ್ರಬಲವಾಗಿ ವಿರೋದಿಸಿದ್ದ. ಅಲ್ಲದೆ ರಾಜನಾದವನೆ ಒಂದು ಹೆಣ್ಣನ್ನು ಬಲವಂತ ಮಾಡುವ ವಿಷಯ ರಾಜ್ಯದಲ್ಲಿ ಹಬ್ಬಿದರೆ ಅವನ ವರ್ಚಸ್ಸು ಕುಗ್ಗುತ್ತಿತ್ತು. ಈ ಎಲ್ಲ ರಾಜಕೀಯ ಕಾರಣಗಳು ಸಹ ತನ್ನನ್ನು ರಾವಣನಿಂದ ರಕ್ಷಿಸುತ್ತಿವೆ ಅಂತ ತ್ರಿಜಟ ತಿಳಿಸಿದ್ದಳು.
ಮತ್ತೊಂದು ಕುತೂಹಲಕರ ವಿಷಯವಿತ್ತು ತ್ರಿಜಟ ಹಿಂದೊಮ್ಮೆ ತನ್ನ ರಾಜ್ಯವಾದ ಮಿಥಿಲೆಯಲ್ಲಿ ಸ್ವಲ್ಪ ಕಾಲ ರಹಸ್ಯವಾಗಿ ವಾಸವಾಗಿದ್ದವಳು. ಅವಳಿಗೆ ತಾನು ರಾಜಕುಮಾರಿಯೆಂದು ತಿಳಿದಿತ್ತು ಅಲ್ಲದೆ ಸಂಸ್ಕೃತ ಸೇರಿದಂತೆ ತನ್ನ ರಾಜ್ಯದ ಕೆಲಬಾಷೆಯ ಪರಿಚಯವಿತ್ತು. ಅವಳನ್ನು ತನ್ನ ಮೇಲ್ವಿಚಾರಣೆಗಾಗಿ ನೇಮಿಸಲು ಅದು ಪ್ರಮುಖ ಕಾರಣವಾಗಿತ್ತು. ಪ್ರಾರಂಬದಲ್ಲಿ ತನ್ನನ್ನು ಕಾಡಿಸಿದ್ದ ತ್ರಿಜಟ ದೀರ್ಘಕಾಲದ ಸಹವಾಸವೋ ಅಥವ ನಾಗರೀಕತೆಯ ಪ್ರಬಾವವೊ ಅವಳು ತನ್ನ ಬಗ್ಗೆ ಅನುಕಂಪಗೊಂಡಿದ್ದಳು. ತನ್ನೊಡನೆ ಅನೇಕ ವಿಷಯ ಚರ್ಚಿಸುತ್ತಿದ್ದಳು.
ಸಂಜೆಯ ಬಿಸಿಲು ಎಲ್ಲಡೆ ಚಿನ್ನದ ಲೇಪ ಮಾಡಿದಂತೆ ಕಾಣಿಸುತ್ತಿತ್ತು. ಅದನ್ನು ನೋಡುವಾಗಲೆ ನೆನೆದಳು ಸೀತ ಆದಿನವು ಇಂತದೆ ಹೊತ್ತು ರಾಮನ ಜೊತೆ ಮಾತನಾಡುತ್ತ ಕುಳಿತಂತೆ ಎದುರಿಗೆ ಸುಳಿದಿತ್ತು ಚಿನ್ನದ ವರ್ಣದ ಜಿಂಕೆ. ಅದು ಮಾಯಮೃಗವೆಂದು ರಾಕ್ಷಸ ಮಾಯೆಯೆಂದು ನೋಡುವಾಗಲೆ ನುಡಿದ ಲಕ್ಷ್ಮಣ. ಅವನು ಅಂತಹುದರಲ್ಲಿ ಅತಿ ಸೂಕ್ಷ್ಮ. ತನಗೇನು ಮಂಕು ಕವಿದ್ದಿತ್ತೊ ಅದು ಬೇಕೆಂದು ಹಟ ಮಾಡಿದೆ. ತಾನೇನು ಸುವರ್ಣ ಕಾಣದವಳಲ್ಲ. ಮಿಥಿಲೆಯಲ್ಲಾಗಲಿ ಅಯೋದ್ಯೆಯಯಲ್ಲಾಗಲಿ ಚಿನ್ನಕ್ಕೇನು ಬರವೆ. ಅಷ್ಟೆ ಏಕೆ ವನವಾಸಕ್ಕೆ ಹೊರಡುವ ಮುಂಚೆ ತನ್ನಲ್ಲಿದ್ದುದನೆಲ್ಲ ಸ್ವ ಇಚ್ಚೆಯಿಂದ ದಾನಮಾಡಿಹೊರಟವಳು ಇಲ್ಲಿ ಒಂದು ಜಿಂಕೆಯ ವ್ಯಾಮೋಹಕ್ಕೆ ಬಿದ್ದೆ. ತನ್ನನ್ನು ಆಸೆ ತೊರೆದವಳೆಂದು ಹೇಳಿದವರಾರು ?. ರಾಮನಾದರು ತನಗೆ ಬುದ್ದಿ ಹೇಳಬಹುದಿತ್ತು ತಾನು ಬೇಕು ಅನ್ನುವಾಗಲೆ ತನ್ನನ್ನು ಮೆಚ್ಚಿಸಲೋ ಎಂಬಂತೆ ಹೊರಟುಬಿಟ್ಟ ಅದರ ಹಿಂದೆ. ತ್ರಿಜಟ ಒಮ್ಮೆ ಕೇಳಿದ್ದಳು "ನೀನು ಏನು ಬೇಡ ಎಂದು ಎಲ್ಲವನ್ನು ಬಿಟ್ಟು ಕಾಡಿಗೆ ಬಂದವಳು ಆ ಮಾಯಜಿಂಕೆಯ ಆಸೆಗೆ ಏಕೆ ಬಿದ್ದೆ?" . ಏನು ಉತ್ತರ ಹೇಳಲಿ 'ಬಿಟ್ಟೆನೆಂದರು ಬಿಡದ ಮಾಯೆ!' ತಲೆತಗ್ಗಿಸಿ ಕೂತ ತನ್ನನ್ನು ಅವಳೆ ಸಂತೈಸಿದ್ದಳು. "ಹೋಗಲಿ ಬಿಡು ಹೆಣ್ಣಿನ ಮನ ನನಗೆ ಅರ್ಥವಾಗುತ್ತೆ" ಎಂದು.
ಮುಖ್ಯದ್ವಾರದ ಹತ್ತಿರ ಎಲ್ಲರ ಕಲರವ. ದೂರದಿಂದ ಓಡಿಬಂದ ಸೈನಿಕನೊಬ್ಬ ತ್ರಿಜಟಳಿಗೆ ತಿಳಿಸಿ ಕೂಗಿ ಹೇಳಿದ. ರಾಕ್ಷಸರಾಜ ರಾವಣನ ಆಗಮನವಾಗುತ್ತಿದೆ ಎಂದು . ಸೀತೆಯು ಮನದಲ್ಲಿಯೆ ಕನಲಿದಳು ಈ ರಾತ್ರಿ ನಿದ್ದೆಯಿಲ್ಲ. ಅವನ ಜೊತೆ ಮಾತೆ ಅಸಹ್ಯವೆನಿಸುತ್ತೆ ಆದರೆ ಬೇರೆ ದಾರಿಯಿಲ್ಲ. ಅವನ ಆಗಮನವಾಗುತ್ತಿರುವಂತೆ ಸೀತೆಯ ಸುತ್ತ ಅನತಿ ದೂರದಲ್ಲಿ ಎಲ್ಲ ಎಚ್ಚರಿಕೆಯಿಂದ ನಿಂತರು. ಸೀತೆ ಕೂತಲ್ಲಿಂದ ಕದಲಲಿಲ್ಲ ಅವನಿಗೆಂತ ಮಾರ್ಯಾದೆ ಕೊಡುವುದು ಎನ್ನುವ ತಿರಸ್ಕಾರ. ಸೂರ್ಯ ಮುಳುಗುವ ದಿಕ್ಕಿನಿಂದಲೆ ಅವನು ಬಂದನೇನೊ ಅವನ ಉದ್ದನೆಯ ನೆರಳು ಸರಿಯಾಗಿ ಅನ್ನುವಂತೆ ಅವಳ ಪಾದದ ಬಳಿ ನಿಂತಿತು. ಸೀತೆಗೆ ಅನ್ನಿಸಿತು ಅವನು ಬೇಕೆಂದೆ ಅವನ ನೆರಳನ್ನು ತನ್ನ ಕಾಲ ಬಳಿ ಬರುವಂತೆ ಸರಿಪಡಿಸಿಕೊಂದು ನಿಂತನೆಂದು. ರಾವಣ ಏನೊ ಕೈಸನ್ನೆ ಮಾಡಿದ. ಅವರ ಮಾತು ಕೇಳದಷ್ಟು ದೂರ ಸರಿದರು ಎಲ್ಲರು. ಸೀತೆಗೆ ಒಳಗೆ ಎಂತದೊ ನಡುಕ. ರಾವಣನು ಎತ್ತರದ ದ್ವನಿಯಲ್ಲಿ ಪ್ರಶ್ನಿಸಿದ.
"ಹೇಗಿದ್ದೀಯ ರಾಜಕುಮಾರಿ ಸೀತ? ನಿನ್ನಯ ಮನಸನ್ನು ಬದಲಾಯಿಸಲಿಲ್ಲ. ನೋಡು ರಾಕ್ಷಸಕುಲದ ಮುಕುಟ ದರಿಸಿರುವ ರಾವಣ ನಿನ್ನ ಪಾದದ ಬಳಿ ನಿಂತಿದ್ದಾನೆ ನಿನ್ನ ಪ್ರಣಯದ ಬಿಕ್ಷೆ ಬೇಡುತ್ತ. ನೀನು ಹೆಮ್ಮೆ ಪಡುವ ಬದಲು ಅವನ್ನನ್ನು ಸದಾ ತಿರಸ್ಕರಿಸುತ್ತ ತಪ್ಪು ಮಾಡುತ್ತಿದ್ದೀಯ. ನೀನೀಗ ರಾಕ್ಷಸ ರಾಜ್ಯದಲ್ಲಿರುವೆ ಇಲ್ಲಿಯ ಧರ್ಮಕ್ಕೆ ಅನುಸಾರವಾಗಿ ನನ್ನನ್ನು ವರಿಸು" ಎಂದ.ಅದೇ ಮಾತುಗಳು, ನನ್ನ ಮೌನ ಕಂಡು ಮತ್ತೆ ಹೇಳಿದ
"ಸೀತ ನನ್ನನ್ನು ವರಿಸಿದರೆ ನಿನಗೆ ಯಾವುದಕ್ಕು ಕೊರತೆಯಾಗದು ನಿನ್ನನ್ನು ವೈಭವದಲ್ಲಿ ಮುಳುಗಿಸಿಬಿಡುತ್ತೀನಿ ನಿನ್ನ ಯಾವ ಬಯಕೆಯನ್ನು ತಿರಸ್ಕರಿಸುವದಿಲ್ಲ ಇಲ್ಲವೆನ್ನುವದಿಲ್ಲ" ಎಂದ ಅವನೇಕೊ ನಗುತ್ತಿರುವಂತೆ ಆನಿಸಿತು.
ಅವನ ಮುಖವನೆಂದು ತಾನು ನೋಡುವದಿಲ್ಲ, ಕಾಲ ಬುಡದ್ದಲ್ಲಿದ ಪರಕೆಯ ಕಡ್ಡಿಯನ್ನು ನೋಡುತ್ತ ಮಾತನಾಡಿದಳು ಸೀತ
"ನಾಚಿಕೆಯಾಗಬೇಕು ನಿನಗೆ ಬಲವಂತದಿಂದ ನನ್ನನ್ನು ಕರೆತಂದು ಈಗ ಆಸೆ ತೋರಿಸುತ್ತೀಯಾ? ನನಗಾವ ಆಸೆಯು ಇಲ್ಲ ಚಿನ್ನಾಬರಣದ ಆಸೆ ಮೊದಲೆ ಇಲ್ಲ. ನಿನ್ನ ಹೆಣ್ಣಿನ ವ್ಯಾಮೋಹವನ್ನು ತ್ಯಜಿಸು" ಎಂದಳು.
ರಾವಣನೇಕೊ ಗಹಗಹಿಸಿ ನಕ್ಕ. " ಏನು ನಾನು ಮಾತ್ರ ಆಸೆ ಇರುವನು ನೀನು ಎಲ್ಲ ಆಸೆಯನ್ನು ತೊರೆದವಳೊ ಏಕೆ ಈ ನಾಟಕ ನೀನು ಚಿನ್ನದ ಜಿಂಕೆಯ ಆಸೆಯಿಂದಲೆ ಅಲ್ಲವೆ ನನ್ನ ವಶದಲ್ಲಿರುವುದು" ಎಂದನು. ಸೀತ ನಡುಗಿದಳು. ಕಣ್ಣಲ್ಲಿ ನೀರು ಕಾಣಿಸಿತು. ಸದಾ ತನ್ನನ್ನು ಒಲಿಸುವಂತೆ ಪ್ರೀತಿ ತೋರಿಸಿ ನುಡಿಯುತ್ತಿದ್ದವನು ರಾವಣ ಇಂದೇಕೊ ಉಗ್ರನಾಗಿ ನನ್ನ ಮನ ಚುಚ್ಚುತ್ತಿದ್ದಾನೆ. ಬೆಳಗಿನಿಂದ ನನ್ನ ಮನಕೊರೆಯುತ್ತಿದ್ದ ವಿಷಯವನ್ನೆ ಎತ್ತಿ ಆಡುತ್ತಿದ್ದಾನೆ. ಆದರು ಸಾವರಿಸಿ ನುಡಿದಳು ಸೀತ
"ಧೂ ನೀಚ ನಿನ್ನ ಜೊತೆ ಎಂತ ಮಾತು. ನನ್ನ ಪತಿ ರಾಮ ನನ್ನನ್ನು ಅರಸಿ ಹುಡುಕಿಕೊಂಡು ಇಲ್ಲಿಗೆ ಬರುತ್ತಾನೆ. ಅವನನ್ನು ನೀನು ಎದುರಿಸಲಾರೆ. ನೀನೆ ಏಕೆ ಅವನ ಬಾಣವನ್ನು ಯಾರು ಎದುರಿಸಿ ನಿಲ್ಲಲಾರರು, ಗೆಲ್ಲಲಾರರು. ಅವನಿಗೆ ಸೋಲಿಲ್ಲ. ಅವನು ಬಂದ ನಂತರ ನಿನ್ನ ಸ್ಥಿಥಿ ನೋಡುವೆಯಂತೆ ಈಗ ತೊಲಗು" ಎಂದಳು.
ಮತ್ತೊಮ್ಮೆ ಜೋರಾಗಿ ನಕ್ಕ ರಾವಣ ದೂರದಲ್ಲಿದ್ದ ರಾಕ್ಷಸಿಯರೆಲ್ಲ ಇತ್ತ ನೋಡಿದರು." ಅಹಾ ಏನು ಹೇಳುತ್ತಿದ್ದೀಯ ಸೀತ ರಾಮನ ಬಾಣವನ್ನು ಯಾರು ಎದುರಿಸಲಾರರೆ ? ಅವನನ್ನು ಗೆಲ್ಲಲಾರರೆ? ಅವನಿಗೆ ಸೋಲಿಲ್ಲವೆ? . ಆದಿನ ನಿನ್ನ ಮೈದುನ ಲಕ್ಷ್ಮಣ ಹೇಳಿದ್ದು ಇದನ್ನೆ ಅಲ್ಲವೆ ? ನೀನೇಕೆ ಅವನ ಮಾತು ನಂಬಲಿಲ್ಲ.ಅವನನ್ನು ದೂರ ಕಳಿಸಿದೆ.ರಾಮನು ಮಾಯಮೃಗದಿಂದ ಹತನಾದನೆಂದು ಆತಂಕಗೊಂಡೆ?. ನೀನು ನಂಬದೆ ಇರುವದನ್ನು ಹೇಳಿ ನನ್ನನ್ನು ಹೆದರಿಸುವೆಯ?. ನಿನಗೆ ಅಲ್ಪ ಕಾಲಾವಕಾಶ ಕೊಡುತ್ತೇನೆ ನೀನು ನನ್ನನ್ನು ಒಪ್ಪಿ ವರಿಸಲೆ ಬೇಕು" ಎಂದು ಕಾಲಪ್ಪಳಿಸಿ ಅಲ್ಲಿಂದ ಹೊರಟ.
ದೂರದಲ್ಲಿದ್ದ ರಾಕ್ಷಸಿಯರನ್ನೆಲ್ಲ ಕರೆದು ಏನನ್ನೋ ತಿಳಿಸಿದ. ಅವನು ಹೋದಂತೆ ಪುನಃ ಮುಖ್ಯದ್ವಾರ ಮುಚ್ಚಲ್ಪಟ್ಟಿತು.ದೂರನಿಂತ ರಾಕ್ಷಸಿಯರೆಲ್ಲ ಅವಳ ಸಮೀಪ ಬಂದು ಕಿರುಚುದ್ವನಿಯಲ್ಲಿ ಏನೊ ಹೇಳತೊಡಗಿದರು. ಹತ್ತಿರ ಬಂದ ತ್ರಿಜಟ ಅವರನ್ನೆಲ್ಲ ಏನೊ ಸಮಾದಾನ ಹೇಳಿ ದೂರಕಳಿಸಿ ಸೀತೆಯತ್ತ ತಿರುಗು ನುಡಿದಳು
"ಸೀತ ಅವರ ಮಾತುಗಳು ನಿನಗೆ ಅರ್ಥವಾಗದೆಂದು ಹೇಳಿ ದೂರ ಕಳಿಸಿದೆ. ಆದರೆ ಇಂದು ರಾವಣ ಎಂದಿನಂತೆ ಇರಲಿಲ್ಲ ಅವನ ದ್ವನಿಯನ್ನು ಕೇಳಿದರೆ ನಿನ್ನನ್ನು ಈರೀತಿ ಹೆಚ್ಚು ದಿನ ಇರಿಸಲಾರನು. ನೀನು ಏನಾದರು ತೀರ್ಮಾನ ಮಾಡಲೇ ಬೇಕಾಗುತ್ತದೆ" ಎಂದಳು.
ಸೀತೆ ಮೌನವಾಗಿದ್ದಳು ಅವಳಿಗೇನು ಉತ್ತರಕೊಡಲಿಲ್ಲ
"ಇನ್ನೇನು ಯೋಚನೆ ಸೀತ ಇಲ್ಲಿಂದ ತಪ್ಪಿಸಿಕೊಂಡು ಹೋಗಬಲ್ಲೆಯ? ಇಲ್ಲಿ ಕೇಳು ಹಾಗಿದ್ದಲ್ಲಿ ನಾನೆ ನಿನ್ನನ್ನು ಬಿಡಬಲ್ಲೆ ರಾವಣ ನನ್ನನ್ನೇನು ಮಾಡಲಾರನು. ಆದರೆ ನೀನು ಎಲ್ಲಿ ಹೋಗಬಲ್ಲೆ, ಹೊರಗೆ ಇರುವುದು ನಿನ್ನ ನಾಗರೀಕ ಮಿಥಿಲ ನಗರವಲ್ಲ ಅಥವ ಅಯೋದ್ಯೆಯು ಅಲ್ಲ.ಹೊರಗೆ ಎಂತಹ ರಾಕ್ಷಸರಿದ್ದಾರೆ ಎಂದು ನೀನು ಅರಿಯೆ,ಒಮ್ಮೆ ನೀನು ಹೊರಗೆ ಹೋದಲ್ಲಿ ನಿನ್ನ ರಾಮನಷ್ತೆ ಅಲ್ಲ ಪುನಃ ರಾವಣನು ನಿನ್ನನ್ನು ಹುಡುಕಲಾರನು, ಇನ್ನು ಒಂದು ವಿಷಯ ಗೊತ್ತ ಸೀತ? ಇಲ್ಲಿರುವ ಕಾವಲು ಪಡೆ ನೀನು ಓಡಿಹೋಗುತ್ತಿ ಅಂತ ತಡೆಯಲಲ್ಲ ಇರುವುದು, ಬೇರೆ ರಾಕ್ಷಸರು ನಿನ್ನನ್ನು ಅಪಹರಿಸದೆ ಇರಲಿ ಎಂದು, ಅದನ್ನು ಅರ್ಥಮಾಡಿಕೊ. ಒಳಗಿರುವಷ್ಟು ದಿನವು ನೀನು ಕ್ಷೇಮ" ಎಂದಳು.
ಸೀತ ಮೊಣಕಾಲಮೇಲೆ ಮುಖವಿಟ್ಟು ಕಣ್ಣೀರು ಸುರಿಸುತ್ತ ಮೌನವಾಗಿ ರೋದಿಸಿದಳು.ಸ್ವಲ್ಪಹೊತ್ತು ಸುಮ್ಮನಿದ್ದ ತ್ರಿಜಟ ಹೇಳಿದಳು.
"ಸಮಾದಾನ ಪಟ್ಟುಕೊ ಸೀತ, ನಿನ್ನ ಪತಿ ಆದಷ್ಟು ಬೇಗ ಬರುವನೆಂದು ನಂಬು ಅದೊಂದೆ ನಿನಗಿರುವ ಆದಾರ" ಎಂದು ಮಾತು ನಿಲ್ಲಿಸಿ ತಾನು ದೂರಹೋಗಿ ಕುಳಿತಳು.
ಸೀತೆಗೆ ರಾಕ್ಷಸೀಯರ ಮಾತಾಗಲಿ ತ್ರಿಜಟಳ ನುಡಿಗಳಾಗಲಿ ಮನಸಿಗೆ ತಟ್ಟಿರಲಿಲ್ಲ.ಅವಳ ಕಿವಿಯಲ್ಲಿ ರಾವಣನು ಕಡೆಯಲ್ಲಿ ಹೇಳಿದ ಮಾತೆ ಕಿವಿಯಲ್ಲಿ ಪುನಃ ಪುನಃ ಕೇಳಿಸುತ್ತಿತ್ತು.ರಾವಣನ ಮಾತು ನಿಜ ತನ್ನಿಂದ ಎಂತಹ ಅಪರಾದವಾಗಿದೆ!ರಾಮನ ಸಾಮರ್ಥ್ಯದ ಬಗ್ಗೆ ಅನುಮಾನ ಪಟ್ಟೆ ಎಂದೆ ನನಗೆ ಈ ದುಸ್ಥಿಥಿ.ರಾಮ ನನ್ನನ್ನು ಕ್ಷಮಿಸಿಬಿಡು ಎಂದು ಮನದಲ್ಲಿ ಪದೆ ಪದೆ ಬೇಡಿಕೊಂಡಳು.ಲಕ್ಷ್ಮಣನು ನನಗಿಂತ ರಾಮನನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದ. ಅವನು ಬಿಡಿಸಿಹೇಳಿದ ಸೀತ ಇದು ರಾಕ್ಷಸಮಾಯೆ ನಂಬಬೇಡ ರಾಮಬಾಣಕ್ಕೆ ಎಂದು ಎದುರಿಲ್ಲವೆಂದು.ನಾನು ನಂಬಲಿಲ್ಲ ಮಾಯಮೃಗದಿಂದ ರಾಮನಿಗೆ ಏನೊ ಆಗಿದೆ ಎಂದು ಆತಂಕಪಟ್ಟೆ. ವನವಾಸಕ್ಕೆ ನನಗಿಂತಲೂ ಮುಂದಾಗಿ ರಾಮನ ಜೊತೆ ಹೊರಟು ನಿಂತವನು ಲಕ್ಷ್ಮಣ.ರಾಮನು ಅಷ್ಟೆ ಅವನನ್ನು ಬರಬೇಡ ಎಂದು ತಡೆದವನಲ್ಲ ಬದಲಾಗಿ ನನಗೆ ಹೇಳಿದ್ದ ನಿನಗೆ ಕಾಡು ಆಗುವದಿಲ್ಲ ಬರಬೇಡ ಎಂದು. ಲಕ್ಷ್ಮಣನ ಬಗ್ಗೆ ಅವನಿಗೆ ಅಂತ ವಿಶ್ವಾಸ. ಲಕ್ಷ್ಮಣನಿಗಾದರು ಅಷ್ಟೆ ರಾಮನನ್ನು ತಂದೆಯಂತೆ ಬಾವಿಸಿ, ನಮ್ಮಿಬ್ಬರನ್ನು ತಂದೆತಾಯಿಯಂತೆ ಸೇವಿಸಿದವನು.
ನಾನಾದರೊ ಅವನ್ನನ್ನು ಎಂತ ಮಾತುಗಳಿಂದ ನಿಂದಿಸಿದೆ, "ನೀನು ಅವನ ತಮ್ಮನಲ್ಲ ದಾಯಾದಿಯಾಗಿ ಬಂದಿರುವನು, ಅವನಿಗೆ ಏನಾದರು ಆಗಲಿ ಎಂದೆ ನಿರೀಕ್ಷಿಸುತ್ತಿದ್ದೀಯ, ನನ್ನ ಮೇಲಿನ ವ್ಯಾಮೋಹದಿಂದ ಅವನ ಜೊತೆ ಬಂದಿದ್ದೀಯ" ಎಂದು ಅಸಹ್ಯವಾಗಿ ನುಡಿದುಬಿಟ್ಟೆ.
ಆಗಿನ ಲಕ್ಷ್ಮಣನ ಮುಖಬಾವ ನೆನೆದಳು,ತಾನು ಅಂದುಕೊಂಡಿದ್ದೆ ಅವನು ಅತೀವ ಕೋಪಗೊಂಡಿದ್ದ ಎಂದು, ಆದರೆ ಇದ್ದಕ್ಕಿದ್ದಂತೆ ಅನ್ನಿಸಿತು, ಅವನ ಮುಖದಲ್ಲಿ ಆಗ ಇದ್ದಿದ್ದು ಕೋಪವಲ್ಲ ನೋವು, ಅತಿಯಾದ ನೋವು.ಛೇ ಎಂತಹ ಕೆಲಸ ಮಾಡಿದೆ ತಮ್ಮಿಬ್ಬರನ್ನು ತಂದೆತಾಯಿಯಂತೆ ಕಂಡ ಮಗನ ಸಮಾನನಾದ ಲಕ್ಷ್ಮಣನ ಮನವನ್ನು ಘಾಸಿಗೊಳಿಸಿಬಿಟ್ಟೆ.ದೇವರೆ ಎಂತಹ ತಪ್ಪು. ಬಹುಷಃ ತನ್ನ ಆ ತಪ್ಪಿಗೆ ದೇವರು ವಿದಿಸಿದ ಶಿಕ್ಷೆ ಈ ರಾವಣರಾಜ್ಯದಲ್ಲಿ ವಾಸ ಅನ್ನಿಸಿಬಿಟ್ಟಿತು.
ತನಗೆ ಈ ಶಿಕ್ಷೆ ಸಾಲದು ಅನ್ನಿಸಿತು, ಪುನಃ ಭಕ್ತಿಯಿಂದ ಕೈಮುಗಿದು ಪ್ರಾರ್ಥಿಸಿದಳು
"ರಾಮ ನನ್ನನ್ನು ಹುಡುಕಿ ಬಾ, ನಿನ್ನನ್ನು ನೋಡಬೇಕೆಂಬ ಆಸೆಯಿದೆ.ಆದರೆ ನನಗೆ ಬದುಕುವ ಇಚ್ಚೆಯಿಲ್ಲ.ನಿನ್ನ ಅತ್ಯಂತ ಪ್ರೀತಿಪಾತ್ರನನ್ನು ಭಕ್ತನನ್ನು ನಮ್ಮಿಬ್ಬರ ಪುತ್ರ ಸಮಾನನಾದ ಲಕ್ಷ್ಮಣನನ್ನು ನೋಯಿಸಿರುವ ನನಗೆ ಅಗ್ನಿಪ್ರವೇಶವೊಂದೆ ಸರಿಯಾದ ಶಿಕ್ಷೆ. ನನಗೆ ಅದನ್ನು ದಯಪಾಲಿಸು ನಾನು ಅಗ್ನಿಯಲ್ಲಿ ಬಿದ್ದು ಧಗ್ದವಾಗಿ ಹೋಗುತ್ತೇನೆ ಅದೊಂದೆ ನನಗೆ ಸರಿಯಾದ ಪ್ರಾಯಶ್ಚಿತ"
ತನಗೆ ತನ್ನ ತಪ್ಪು ಇಷ್ಟುದಿನದ ಮೇಲೆ ಅರಿವಾಯಿತು, ರಾವಣನ ಮಾತಿನಿಂದ ತನ್ನ ಕಣ್ಣು ತೆರೆಯಿತು ಅನ್ನಿಸಿ ಮನ ನಿರಾಳವಾಯಿತು.ರಾಮನನ್ನು ನೆನೆಯುತ್ತ ಕಣ್ಣುಮುಚ್ಚಿ ಕುಳಿತಳು.
ನಿದಾನವಾಗಿ ಕತ್ತಲಾವರಿಸಿತು.ಮರಗಳ ನಡುವೆ ಪಕ್ಷಿಗಳ ಕಲರವದ ನಡುವೆ ಅವಳಿಗೆ ಇನ್ನಾವುದೋ ದ್ವನಿ ಕೇಳಿಸುತ್ತಿತ್ತು. ತೀರ ಸಣ್ಣದಾಗಿ ಕಿವಿಗೊಟ್ಟು ಆಲಿಸಿದಳು, ನಿಜ
"ರಾಮ ರಾಮ ರಾಮ್ ಜಯ್ ಶ್ರೀರಾಮ ರಾಮ ರಾಮ ರಾಮ್...."
ಅವಳಿಗೆ ಎಂತದೊ ಆತಂಕ ಸಮಾದಾನ, ರಾಮನಾಮ! ರಾವಣರಾಜ್ಯದಲ್ಲಿ!.ಎಲ್ಲಿಂದ ಬರುತ್ತಿದೆ? ಅಥವ ಇದೇನು ತನ್ನ ಮನದ ದ್ವನಿಯ ಪ್ರತಿದ್ವನಿಯೊ !
ತಾನು ಕುಳಿತಿದ್ದ ಮರದ ಮೇಲಕ್ಕೆ ದೃಷ್ಟಿ ಹರಿಸಿದಳು.ಕೊಂಬೆಗಳ ಸಂದಿಯಲ್ಲಿ, ಎಲೆಗಳ ನಡುವೆ ನಸುಕತ್ತಲಲ್ಲಿ ಎಂತದೋ ಅಕೃತಿ. ಯಾವುದೋ ಸಣ್ಣ ಕೋತಿಯಂತಿದೆ ಅಂದು ಕೊಂಡಳು.
-ಮುಕ್ತಾಯ-
ಚಿತ್ರ ಇಂಟರ‍್ನೆಟ್‍ನಿಂದ ನಕಲು ಮಾಡಿದ್ದು
No comments:
Post a Comment
enter your comments please