Saturday, March 31, 2012

ಕತೆ : ನಾಮದ ಮಹಿಮೆ [ರಾಮನವಮಿಯ ಬರಹ]

 ನಮ್ಮ ರಾಷ್ಟ್ರ ಭಾರತದಲ್ಲಿ ಬಹುಷಃ ದೇಶದ ಎಲ್ಲ ಭಾಷೆಗಳಲ್ಲಿ ರಚನೆಯಾಗಿರುವ ಮಹಾಕಾವ್ಯ ರಾಮಾಯಣ. ಶ್ರೀರಾಮ ಅದರ ನಾಯಕ. ಪ್ರತಿ ಬಾರಿ ರಾಮಾಯಣ ರಚನೆಯಾದಾಗಲು     ಪ್ರಾಂತ್ಯಕ್ಕೆ ತಕ್ಕಂತೆ ಭಾವನೆಗೆ ತಕ್ಕಂತೆ ಅದರಲ್ಲಿ ಸಾಕಷ್ಟು ಉಪಕತೆಗಳು, ದೃಷ್ಟಾಂತಗಳು,ಉಪಮೇಯಗಳು ಸೇರುತ್ತಲೆ ಹೋಗಿವೆ ಅನ್ನಿಸುತ್ತೆ.ಅಂತಹ ಒಂದು ಸುಂದರ ಪ್ರಸಂಗ ಇಲ್ಲಿದೆ.

 
   ವನವಾಸ ಕಾಲದಲ್ಲಿ ರಾವಣನ ಕಾರಣದಿಂದ ಸೀತ ಅಪಹರಣವಾಗಿ , ಸೀತೆಯನ್ನು ಹುಡುಕುತ್ತ ಬಂದ ರಾಮನಿಗೆ ಹನುಮನ ಬೇಟಿಯಾಗುತ್ತದೆ, ನಂತರ ಸುಗ್ರೀವನ ಗೆಳೆತನ ವಾಲಿಯ ವಧೆ ಎಲ್ಲ ನಡೆದು ಹನುಮನು ಲಂಕೆಯನ್ನು ಸೇರಿ ಸೀತೆಯ ಚೂಡಾಮಣಿಯನ್ನು ತಂದು ರಾಮನಿಗೆ ತೋರುವನು. ಸುಗ್ರೀವನ ಸೈನ್ಯದೊಡನೆ ರಾಮನು ಸಮುದ್ರದ ದಡೆಗೆ ಬಂದಿಳಿದ. ಆದರೆ ಸಮುದ್ರವನ್ನು ದಾಟುವ ಬಗೆ ಹೇಗೆ. ರಾಮನು ತಪಸ್ಸು ಮಾಡಿ ಸಮುದ್ರರಾಜನು ಅಭಯವನ್ನು ಕೊಟ್ಟಾಯ್ತು. ಕಪಿಗಳೆಲ್ಲ ಸೇತುವೆ ಕಟ್ಟಲು ಮುಂದಾದವು ನೀಲ ಎಂಬ ಕಪಿಯ ಮುಂದಾಳತ್ವದಲ್ಲಿ.
 ರಾಮನು ಸಮುದ್ರದಡದ  ಒಂದು ಬಂಡೆಯ ಮೇಲೆ ಕುಳಿತು ನೋಡುತ್ತಿದ್ದಾನೆ, ಕಪಿಗಳು ಸೇತುವೆ ಕಟ್ಟಲು ಒಂದೊಂದೆ ಬಂಡೆತಂದು ನೀರಿಗೆ ಹಾಕಿದರೆ ಅದು ಮುಳುಗಿ ಹೋಗುತ್ತಿದೆ. ಕಡೆಗೆ ಕಪಿಗಳೆಲ್ಲ ಸೇರಿ ಒಂದು ಉಪಾಯ ಮಾಡಿದವು, ಪ್ರತಿ ಬಂಡೆಯ ಮೇಲೆಯು ಬಣ್ಣದಿಂದ 'ಶ್ರೀರಾಮ' ಎಂದು ಬರೆದು , ಆ ಕಲ್ಲಿನ ಬಂಡೆಯನ್ನು ತಂದು ಸಮುದ್ರದಲ್ಲಿ ಹಾಕಿದವು, 
ಆಶ್ಚರ್ಯ !  ಬಂಡೆ ಮುಳುಗುವ ಬದಲು ತೇಲುತ್ತಿದೆ!.
ಸಂತಸಗೊಂಡ ಕಪಿಗಳು ಎಲ್ಲ ಬಂಡೆಗಳ ಮೇಲು ಶ್ರೀರಾಮ ನಾಮವನ್ನು ಬರೆದು ಒಂದರ ಪಕ್ಕ ಒಂದು ಜೋಡಿಸುತ್ತ ಹೋದಂತೆ ಸಿದ್ದವಾಗುತ್ತಿದೆ ರಾಮಸೇತು
ದಡದಲ್ಲಿ ನೋಡುತ್ತ ಕುಳಿತ ರಾಮ ಆಶ್ಚರ್ಯದಿಂದ ನೋಡುತ್ತಿದ್ದಾನೆ,   ಕಲ್ಲುಬಂಡೆ ನೀರಿನಲ್ಲಿ ಮುಳುಗುವುದು ಪ್ರಕೃತಿ ಸಹಜ ಆದರೆ ಇದೇನು ನನ್ನ ಹೆಸರನ್ನು ಬಂಡೆಯಮೇಲೆ ಬರೆದ ಮಾತ್ರಕ್ಕೆ ಅದು ಮುಳುಗದೆ ನೀರಿನಲ್ಲಿ ತೇಲುತ್ತದೆ. ಅವನಿಗೆ ಅಚ್ಚರಿ! ತಾನು ಒಮ್ಮೆ ಆ ರೀತಿ ರಾಮನಾಮ ಬರೆದು ನೀರಿನಲ್ಲಿ ಬಂಡೆಯನ್ನು ಹಾಕಿ ನೋಡುವಾಸೆ. ಆದರೆ ಸಂಕೋಚ. ಕಪಿಗಳೆಲ್ಲ ತನ್ನ ಬಗ್ಗೆ ಏನು ತಿಳಿದಾವು.
  ರಾತ್ರಿಯಾಯಿತು, ಸೇತುವೆ ಕೆಲಸವನ್ನು ಅರ್ದಕ್ಕೆ ನಿಲ್ಲಿಸಿ ಎಲ್ಲರು ವಿಶ್ರಾಂತಿಗೆ ಹೋದರು. ರಾಮನಿಗೆ ತನ್ನ ಗುಡಾರದಲ್ಲಿದ್ದರು ಏನೊ ತೀರದ ಅಧಮ್ಯ ಕುತೂಹಲ. ಎಲ್ಲರು ಮಲಗಿದ ಮೇಲೆ ನಿದಾನಕ್ಕೆ ತಾನೊಬ್ಬನೆ ಎದ್ದ. ಸುತ್ತ ಮುತ್ತ ನೋಡಿದ. ಮೆಲ್ಲಗೆ ಸಮುದ್ರ ತೀರಕ್ಕೆ ಬಂದು ನಿಂತ. ಅಲ್ಲಿಯೆ ಕಪಿಗಳೆಲ್ಲ ಬಿಟ್ಟು ಹೋದ ಬಂಡೆ ಮತ್ತು ಬಣ್ಣಗಳಿದ್ದವು. ತಾನು ಕುಳಿತು ಒಂದು ಬಂಡೆಯ ಮೇಲೆ 'ಶ್ರೀರಾಮ' ಎಂದು ಬರೆದ. ಆ ಬಂಡೆಯನ್ನು ಎತ್ತಿ ನಿದಾನಕ್ಕೆ ನೀರಿಗೆ ಬಿಟ್ಟ. ಆಗುವುದೇನು!
ಬುಳುಕ್ ಎಂದು ಆ ಬಂಡೆ ನೀರಿನಲ್ಲಿ ಮುಳುಗಿ ಹೋಯಿತು !!!
ಚಕಿತನಾಗಿ ನಿಂತ ರಾಮ. ಇದೇನು ಚೋದ್ಯ . ತನ್ನ ಹೆಸರನ್ನು ಕಪಿಗಳು ಬರೆದ ಮಾತ್ರಕ್ಕೆ ತೇಲಿದ ಬಂಡೆ ಸ್ವತಃ ತಾನೆ ತನ್ನ ಹೆಸರನ್ನು ಬರೆದು ನೀರಿನಲ್ಲಿ ಹಾಕಿದಾಗ ಮುಳುಗಿಹೋಯಿತೇಕೆ. ಚಿಂತಿಸುತ್ತಿದ್ದಾನೆ. ಹಿಂದಿನಿಂದ 'ಪಕ ಪಕ' ನಗುವ ಶಬ್ದ ಕೇಳಿಸಿತು. ಆಶ್ಚರ್ಯದಿಂದ ತಿರುಗಿ ನೋಡಿದ. ಅವನ ಭಕ್ತ ಆಂಜನೇಯ ನಿಂತಿದ್ದಾನೆ. ಸದಾ ರಾಮನ ರಕ್ಷಣೆಯ ಆತಂಕದಲ್ಲಿಯೆ ಇದ್ದ ಹನುಮ, ರಾಮನು ಒಬ್ಬನೆ ಬಂದಿದ್ದನು ಕಂಡು ಸದ್ದಿಲ್ಲದೆ ಬಂದು ಹಿಂದೆ ನಿಂತಿದ್ದ, ರಾಮನು ಮಾಡಿದ ಕೆಲಸ ಕಂಡು ನಗುತ್ತಿದ್ದಾನೆ.
ರಾಮನು ಸಂಕೋಚದ ಮುಖ ಮಾಡಿ ನಿಂತ.
ಹನುಮ ನುಡಿದ "ಇದರಲ್ಲಿ ಆಶ್ಚರ್ಯವೇನು ಇಲ್ಲ ಪ್ರಭು, ಕಪಿಗಳು ಹಾಗು ನಾನು ಎಲ್ಲರು ನಿನ್ನ ಭಕ್ತರು. ನಿನ್ನ ನಾಮದ ಬಲವೊಂದೆ ಸಾಕು ಏನನ್ನಾದರು ಸಾದಿಸಬಲ್ಲೆವು ಎಂಬ ನಂಭಿಕೆ. ಹಾಗಿರುವಾಗ ಆ ನಂಭಿಕೆಯ ಬಲ , ನಿನ್ನ ನಾಮಕ್ಕೆ ಇರುವ ಬಲ ಬಂಡೆಯನ್ನು ತೇಲಿಸಿತು. ಆದರೆ ನಿನಗೆ ಇರುವುದು ಕುತೂಹಲ ಮಾತ್ರ , ನಿನ್ನ ಬಗ್ಗೆ ನಿನಗೆ ಭಕ್ತಿ ಇರಲು ಹೇಗೆ ಸಾದ್ಯ, ಆ ಭಕ್ತಿಯ ನಂಭಿಕೆಯ ಶಕ್ತಿ ಇಲ್ಲದ್ದರಿಂದ ಬಂಡೆ ನೀರಿನಲ್ಲಿ ಮುಳುಗಿತು ಅಷ್ಟೆ' 
ರಾಮನು ನಗುತ್ತ ಒಪ್ಪಿಕೊಂಡ.
*************************************************
ಇದನ್ನು ಬರೆಯುತ್ತಿರುವಂತೆ , ಹಿಂದೆ ಬಂದಿದ್ದ  ಕನ್ನಡ ಸಿನಿಮಾ
 ರಾಮಾಂಜನೇಯ ಯುದ್ದದ ಒಂದು ಸಂಭಾಷಣೆ ನನೆಪಾಗುತ್ತೆ. ರಾಮನ ಎದುರಿಗೆ ಯುದ್ದಕ್ಕೆ ನಿಂತಿದ್ದ ಹನುಮನಿಗೆ ರಾಮ ಹೆದರಿಸುತ್ತ ಹೇಳುತ್ತಾನೆ, 
"ಹನುಮ ನನಗೆ ಬೇರೆ ದಾರಿಯಿಲ್ಲ , ನಿನ್ನ ಮೇಲೆ ರಾಮಬಾಣವನ್ನು ಪ್ರಯೋಗಿಸುತ್ತಿದ್ದೇನೆ, ನೀನು ಅಭಯ ಕೊಟ್ಟಿರುವ ಕಾಶಿರಾಜನನ್ನು ಒಪ್ಪಿಸಿಬಿಡು,ಇಲ್ಲದಿದ್ದರೆ ಪರಿಣಾಮಕ್ಕೆ ಸಿದ್ದನಾಗು" 
ಆಗ ಹನುಮ ಪಾತ್ರದಾರಿಯಾದ ಉದಯಕುಮಾರರ ಸಂಭಾಷಣೆ ನೋಡಿ
"ರಾಮ , ನನ್ನನ್ನು ಹೆದರಿಸಲಾರೆ, ನಾನು ನಂಬಿರುವ ರಾಮನಾಮ ನನ್ನನ್ನು ಕಾಯುತ್ತಿರಲು, ನೀನೊಬ್ಬನಲ್ಲ ನಿನ್ನಂತ ಕೋಟಿರಾಮರು ಬಂದು ರಾಮಬಾಣವನ್ನು ನನ್ನ ಮೇಲೆ ಪ್ರಯೋಗಿಸಿದರು ಅದು ನನ್ನನ್ನೇನು ಮಾಡಲಾರದು"
ಎಂತಹ ಅಚಲವಾದ ನಂಭಿಕೆ
 
  ಇದಕ್ಕಾಗಿಯೊ ಏನೊ ದಾಸರು ತಮ್ಮ ಭಕ್ತಿಗೀತೆಯಲ್ಲಿ ಸ್ವಷ್ಟವಾಗಿ ಸಾರಿದ್ದಾರೆ
"ನೀನ್ಯಾಕೊ ನಿನ್ನ ಹಂಗ್ಯಾಕೊ .... ನಿನ್ನ ನಾಮದ ಬಲವೊಂದೆ ಸಾಕೊ!"   
**************************************************************
 ಭಾರತೀಯರ ಮನಗಳಲ್ಲಿ ಹೃದಯದಲ್ಲಿ ಸಾವಿರಾರು ವರ್ಷಗಳಿಂದ ನೆಲಸಿರುವ ಈ ನಂಭಿಕೆ , ಈ ರಾಮನಾಮದ ಸ್ಮರಣೆಯ ಕಾಲ 'ಶ್ರೀರಾಮನವಮಿ' , ಬರುವ 'ಏಪ್ರಿಲ್  ೧  , ೨೦೧೨" ರಂದು. ನಿಮ್ಮೆಲ್ಲರಿಗೂ ನನ್ನ ಅನಂತ ಶುಭಾಶಯಗಳು.
ಶ್ರೀರಾಮ ಎಲ್ಲರಿಗು ಹರ್ಷ ತರಲಿ ಎಂದು ಬಯಸುತ್ತ ಕೋರುತ್ತ ಮುಗಿಸುತ್ತಿದ್ದೇನೆ.
-------------------------------------

1 comment:

  1. ಪಾರ್ಥಣ್ಣ, ನಿಮ್ಮ ಲೇಖನ ಬಹಳ ಚೆನ್ನಾಗಿದೆ. " ನಾಮ" ಬಲದ ಮಹಿಮೆಯನ್ನು ಬಹಳ ಸೂಕ್ತವಾಗಿ ಚಿತ್ರಿಸಿದೀರಿ.
    ಮಜ್ಜನ್ಮನಃ ಫಲಮಿದ ಮಧುಕೈಟಬಾರೆ
    ಮತ್ಪ್ರಾರ್ಥನೀಯ ಮದನುಗ್ರಹ ಏಷ ಏವ
    ತ್ವತ್ ಭೃತ್ಯ ಭೃತ್ಯ ಪರಿಚಾರಕ ಭೃತ್ಯ ಭೃತ್ಯ
    ಭ್ರುತ್ಯಸ್ಯ ಭೃತ್ಯಇತಿ ಮಾಮ್ ಸ್ಮರಲೋಕ ನಾಥ.
    - ಮುಕುಂದಮಾಲ - ರಾಜ ಕುಲಶೇಖರ
    ರಾಮಾಯ ರಾಮ ಭದ್ರಾಯ ರಾಮಚಂದ್ರಾಯ ವೇದಸೆ
    ನಾಥಾಯ ರಘುನಾಥಾಯ ಸೀತಾಯ ಪತಯೇ ನಮಃ

    ನಮಸ್ಕಾರ.

    ReplyDelete

enter your comments please